ಕುರುಡು ಪ್ರೀತಿ ತಂದ ಫಜೀತಿ



















ಬುಧವಾರ ಸಂಜೆ ಆಪ್ತಸಮಾಲೋಚನೆಯ ಸಮಯ. ಪ್ರಸನ್ನ ಆಪ್ತ ಸಲಹಾ ಕೇಂದ್ರಕ್ಕೆ ಹೊರಡಲು ತಯಾರಿ ಮಾಡಿಕೊಳ್ಳುತ್ತಿದ್ದೆ... ಆಗ ಬಂದದ್ದು ದೂರವಾಣಿ ಕರೆ... ಅತ್ತ ಕಡೆಯಿಂದ ನಮಸ್ಕಾರದ ನಂತರ ಕೇಳಿದ್ದು ಎಷ್ಟು ಹೊತ್ತಿಗೆ ಬರುತ್ತೀರಾ? ಮಾತಿನಿಂದ ಅರ್ಥವಾಯಿತು ಇದು ಆಪ್ತ ಸಲಹೆ ವಿಚಾರಕ್ಕಾಗಿ ಎಂದು. ಇನ್ನೇನು  ಹೊರಟಿದ್ದೇನೆ, 20 ನಿಮಿಷದಲ್ಲಿ ಅಲ್ಲಿರುತ್ತೇನೆ, ಎಂದು ಹೇಳಿ ಮಾತು ಮುಗಿಸಿದೆ.
ಪ್ರಸನ್ನ ಆಪ್ತ  ಸಲಹಾ ಕೇಂದ್ರದ ಬಾಗಿಲು ಹೊಕ್ಕಂತೆಯೇ ಎದುರಾದದ್ದು ಮಧ್ಯ ವಯಸ್ಸಿನ ಇಬ್ಬರು ಗಂಡಸರು, ನನಗಾಗಿ ಕಾಯುತ್ತಿದ್ದವರು.
ಪರಿಚಯದ ನಂತರ ಮಾತು ಪ್ರಾರಂಭ ಮಾಡುವ ಸಮಯ " ಮೀರು ಚಪ್ಪಂಡ ಸರ್..." ಎಂಬ ಮಾತು ಹೇಳಿದ್ದು ನಂತರ ತಿಳಿದಂತೆ ಹುಡುಗಿಯ ಅಪ್ಪ. ಅವರೊಂದಿಗಿನ ಮಾತಿನ ಸಾರಾಂಶ:
ಇಬ್ಬರು ಬೀಗರುಗಳು. ಮಕ್ಕಳ ಮದುವೆಯಾಗಿ ಇನ್ನೂ ವರ್ಷ ಕಳೆದಿಲ್ಲ. ಚಿಕ್ಕವಯಸ್ಸಿನ  ಮಕ್ಕಳಿಗೆ ತಮ್ಮ ಇಚ್ಛೆಗೆ ವಿರುದ್ಧ, ಆದರೆ   ಅನಿವಾರ್ಯವಾಗಿ ಮದುವೆ  ಮಾಡಿ ಮುಗಿಸಿದ್ದಾರೆ.
ಎರಡು ಕುಟುಂಬಗಳ ಹಣಕಾಸಿನ ಪರಿಸ್ಥಿತಿ ಹೊಂದಾಣಿಕೆಯಾಗದಿರುವುದೇ ದೊಡ್ಡ ವಿಚಾರ. ಹುಡುಗಿಯ ಮನೆಯವರು ಉಳ್ಳವರು, ಹುಡುಗನ ಮನೆಯವರು ಮಧ್ಯಮ ವರ್ಗದ ಕುಟುಂಬ.

ಸದ್ಯದ ಪರಿಸ್ಥಿತಿಯಲ್ಲಿ, ಮಗಳು ತವರು ಮನೆಗೆ ಬಂದಿದ್ದಾಳೆ.. ಗಂಡನ ಮನೆಗೆ ಹೋಗಲು ಮನಸ್ಸಿಲ್ಲ. ಯಾವ ವಿಷಯವನ್ನು ಮಾತನಾಡುತ್ತಿಲ್ಲ.  ಈ ಕಡೆ ಮಗನ ಮನೆಯಲ್ಲೂ ಬಿಗು ವಾತಾವರಣ, ಹುಡುಗನ ಮನಸ್ಸಿನಲ್ಲಿ ಸೋತ ಭಾವನೆ, ಅಸಹಾಯಕತೆ, ಏನು ತೋಚದ ಪರಿಸ್ಥಿತಿ. ಇದು ಮನೆತನದ ಗೌರವದ ಪ್ರಶ್ನೆ. ಹೇಗಾದರೂ ಸರಿ ಮಾಡಬೇಕು ಎನ್ನುವ ಭಾವನೆ. ಸಹಾಯ ಯಾಚನೆ. ಮಕ್ಕಳಿಬ್ಬರನ್ನು ಕಳಿಸಿ ಮಾತನಾಡೋಣ ಎಂದು ಸಮಾಧಾನ ಮಾಡಿದೆ.
ಇನ್ನೊಬ್ಬರ ಬಳಿ ಮಾತು ಮುಗಿಸುವಷ್ಟರಲ್ಲಿ ಬಂದದ್ದು, ತಾಯಿ ಹಾಗೂ ಮಗಳು ( ರಶ್ಮಿ ಎಂದು ಗುರುತಿಸೋಣ), ಅಪ್ಪನ ಆದೇಶದಂತೆ. ರಶ್ಮಿಯ ಅಪ್ಪನ ಆತುರ ಎಷ್ಟು ಎಂದು ಅವರ ಈ ಕ್ರಮದಿಂದ ಅರ್ಥವಾಯಿತು.
“ನಂಗೆ ಅಲ್ಲಿ ಹೊಂದುಕೊಳ್ಳಕ್ಕೆ ಆಗಲ್ಲ.. ನಾನು ಹೋಗಲ್ಲ” ಈ ಮಾತು ಬಿಟ್ರೆ ಏನು ಹೇಳ್ತಾ ಇಲ್ಲ, ಆ ಹುಡುಗನೂ ಇವಳು ಬಂದಾಗಿನಿಂದ ಬಂದಿಲ್ಲ... ಬೀಗಿತ್ತಿ ಹತ್ತಿರ ಮಾತಾಡಕ್ಕೆ ನಂಗೆ ಧೈರ್ಯ ಬರ್ತಾ ಇಲ್ಲ.... ಏನ್ ಮಾಡೋದು ಹೇಳಿ....  ಈ ಭಾಗ್ಯಕ್ಕಾ ಇವರು ಪ್ರೀತ್ಸಿ, ಹಠ ಮಾಡಿ ಮದುವೆ ಮಾಡ್ಕೊಂಡಿದ್ದು... ಇದು ಅಮ್ಮನ ಮೊದಲ ಮಾತುಗಳು.
ರಶ್ಮಿಯೊಡನೆ ಒಂಟಿಯಾಗಿ ಮಾತನಾಡುವ ಸಲುವಾಗಿ ಅಮ್ಮನನ್ನು ಹೊರಗೆ ಕೂರಲು ಹೇಳಿದೆ. 
" ನನ್ನ ಗಂಡ ಪುಸುಕಲ, ಅಪ್ಪ ಅಮ್ಮನ ಹತ್ರ ಮಾತಾಡಕ್ಕೆ ಹೆದರ್ತಾನೆ. ನಮ್ಮತ್ತೆ ಜೋರು. ಮನೆ ಕೆಲಸ ಏನು ಮಾಡಲ್ಲ, ಬೆಳಿಗ್ಗೆ ಬೇಗ ಏಳಲ್ಲ, ಮನೆ ಮುಂದೆ ಒಂದು ರಂಗೋಲಿ ಹಾಕಲ್ಲ, ಮಡಿ ಮೈಲಿಗೆ ಏನೂ ತಿಳಿಯಲ್ಲ ಅಂತ ಏನಾದ್ರೂ ಕಾರಣ ಹುಡುಕಿ, ಬೈಯೋ ಹಂಗೆ ಮಾತಾಡ್ತಾರೆ. ಕೆಲವು ಸಲ ಮಾವನೂ ಮಾತಾಡ್ತಾರೆ.. ಕೊನೆಗೆ ಮಾತು ಮುಗಿಯುವುದು... "ಬೇಡ ಅಂತ ಗಿಣಿಗೆ ಹೇಳಿದಂಗೆ ಹೇಳಿದೆ ನನ್ನ ಮಾತು ಕೇಳಲಿಲ್ಲ ಅನುಭವಿಸು" ಅಂತ ರಮೇಶಂಗೆ ಹೇಳ್ತಾರೆ. ಅವನು ಸುಮ್ನೆ ನಿಂತಿರ್ತಾನೆ.   ನಂಗೆ ಅವಮಾನ ಅನಿಸುತ್ತೆ.. ಅದಕ್ಕೆ, ಅವರ ಜೊತೆ ಇರಕ್ಕಾಗಲ್ಲ.... 
ಆಯ್ತಮ್ಮ ರಮೇಶನ ಜೊತೆ ಬಾ ಮುಂದಿನ ಮಾತಾಡೋಣ.. ಏನ್ ಮಾಡೋದು ಯೋಚಿಸೋಣ ಅಂತ ಹೇಳಿದಾಗ.. ಅವನು   ನನ್ನ ಫೋನ್ ರಿಸೀವೇ ಮಾಡಲ್ಲ...ಎಂಬ  ಉತ್ತರ.

ಮುಂದಿನ ವಾರ, ರಶ್ಮಿ ರಮೇಶ್ ಇಬ್ಬರೂ ಒಟ್ಟಿಗೆ ಬಂದರೂ, ಮುಖದಲ್ಲಿ ಗೆಲುವಿಲ್ಲ, ಕೂತಾಗಲು ಒಬ್ಬರ ಮುಖ ದಕ್ಷಿಣಕ್ಕೆ ಆದರೆ ಇನ್ನೊಬ್ಬರ ಮುಖ ಉತ್ತರಕ್ಕೆ ಎಂಬಂತೆ ಇತ್ತು. ಮಾತು ಮೊದಲು ಮಾಡಲು ಇಬ್ಬರಲ್ಲೂ ಆಸಕ್ತಿ ಕಾಣಲಿಲ್ಲ. ನಿಧಾನವಾಗಿ ಮಾತಿಗೆಳೆದಾಗ ತಿಳಿದದ್ದು..
ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ ಸಹಪಾಠಿಗಳು. ಬೇರೆ ಬೇರೆ ತರಗತಿಗಳಾದರೂ, ಪ್ರತಿದಿನ ಭೇಟಿಯಾಗುತ್ತಿದ್ದದ್ದು ಕಂಪ್ಯೂಟರ್ ಲ್ಯಾಬ್ ನ ಸಮಯದಲ್ಲಿ. ಪರಿಚಯ ಸ್ನೇಹಕ್ಕೆ ತಿರುಗಿ ಕಾಲಕ್ರಮೇಣ ಪ್ರೇಮಿಗಳಾಗಿದ್ದಾರೆ. ಪದವಿಯ ನಂತರ ಇಬ್ಬರು ಮಾತನಾಡಿಕೊಂಡು CA ಮಾಡಲು ತರಗತಿಗೆ ಸೇರಿಕೊಂಡಿದ್ದಾರೆ. ಎರಡು ವರ್ಷಗಳು ಕಳೆದರೂ, ಪರೀಕ್ಷೆಯ ಕಠಿಣತೆಯ ಜೊತೆಗೆ, ಇಬ್ಬರ ಸಿನಿಮಾ, ಹೋಟೆಲ್, ಐಸ್ ಕ್ರೀಮ್, ಮಾಲ್ ಹೀಗೆ ಓಡಾಟವೂ ಜಾಸ್ತಿಯಾಗಿ, ಪೇಪರ್ಗಳನ್ನು ಮುಗಿಸಲಾಗಿಲ್ಲ. 
ಇಬ್ಬರು ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದಾರೆ, ಆದರೆ ಎಂದೂ ಮುಂದಿನ ಜೀವನದ ಆಗು ಹೋಗುಗಳ ಬಗ್ಗೆ ಯೋಚನೆಯನ್ನು ಮಾಡಿಲ್ಲ. ಇದು ಹೇಗೋ ಹುಡುಗಿಯ ಮನೆಯವರಿಗೆ ತಿಳಿದು, ಈ ಸಂಬಂಧವನ್ನು ಮುರಿಯಲು ಪ್ರಯತ್ನಪಟ್ಟಿದ್ದಾರೆ. ಪ್ರೇಮ ಕುರುಡು ಎಂಬ ಹೇಳಿಕೆಯುಂಟು.. ಆದರೆ ಪ್ರೇಮ ಕಿವುಡು ಸಹ ಎಂದು ಈ ಯುವ ಪ್ರೇಮಿಗಳು ತೋರಿಸಿಕೊಟ್ಟಿದ್ದಾರೆ... ಹಿರಿಯರ ಯಾವುದೇ ಸಲಹೆ ಸೂಚನೆ ಬುದ್ಧಿವಾದವನ್ನು ಕೇಳಿಸಿಕೊಳ್ಳದೆ. ಎರಡು ಕುಟುಂಬದವರ ಪ್ರಯತ್ನಗಳು ವಿಫಲವಾದಾಗ, ಏನಾದರೂ ಅನಾಹುತ ಆಗಬಹುದೆಂಬ ಸೂಚನೆಗಳಿಂದ ಭಯಗೊಂಡು ಮದುವೆ ಮಾಡಿದ್ದಾರೆ.  

ಮುಂದಿನ ನಡೆಯೇನು ಎಂಬ ಬಗ್ಗೆ ಯೋಚಿಸಿ ಮತ್ತೆ ಬರುವಂತೆ ಅವರಿಗೆ ಸಲಹೆಯನ್ನಿತ್ತು ಕಳಿಸಿದ್ದು.

ಈ ಮಧ್ಯೆ ರಮೇಶ್ ಮತ್ತು ರಶ್ಮಿಯ ತಂದೆ ತಾಯಿಗಳು  ಪರಿಹಾರಗಳ ಬಗ್ಗೆ ಚಿಂತನೆ ನಡೆಸುವ ಉದ್ದೇಶದಿಂದ ಬಂದು ಮಾತನಾಡುತ್ತಾ.. ರಮೇಶನ ತಾಯಿಯ ಸಲಹೆ.. ಹೇಗೂ ಆ ಹುಡುಗಿ ನಮ್ಮೊಡನೆ ಹೊಂದಿಕೊಳ್ಳುವ ಮನಸ್ಸು ಮಾಡುತ್ತಿಲ್ಲ... ನನ್ನ ಮಗನೂ ಕಷ್ಟಪಡುತ್ತಿದ್ದಾನೆ, ಹಾಗಾಗಿ  "ಅವರಿಬ್ಬರನ್ನು ಬೇರೆ ಕಳಿಸೋಣ ಅವರ ಜೀವನ ಅವರು ಮಾಡಿಕೊಂಡು ಎಲ್ಲೋ ಸುಖವಾಗಿರಲಿ" ಎಂದು.  ಇದಕ್ಕೆ ರಶ್ಮಿಯ ತಾಯಿ ಒಪ್ಪಿಗೆ ಸೂಚಿಸಲಿಲ್ಲ ( ಸಾಮಾನ್ಯವಾಗಿ ಈ ಸಲಹೆಯನ್ನು ಹೆಣ್ಣಿನ ಅಪ್ಪ ಅಮ್ಮ ಸುಲಭವಾಗಿ ಒಪ್ಪುತ್ತಾರೆ).
ಮೊದಲನೆಯದಾಗಿ, ರಶ್ಮಿ ಮನೆಯನ್ನು ಸ್ವಂತವಾಗಿ ನಿಭಾಯಿಸ ಬಲ್ಲಳಾ.. ಎಂಬ ಅನುಮಾನ. ಎರಡನೆಯದಾಗಿ ಅವರಿಬ್ಬರದು ಇನ್ನೂ ಹುಡುಗು ಬುದ್ದಿ, ಹಾಗಾಗಿ ದೊಡ್ಡವರ ನೆರಳು ಬೇಕೇ ಬೇಕು.
ಇದು ನನಗೂ ಸಮಂಜಸ ಎಂದು ಅನಿಸಿತು. 
ಸವಾಲ್ ಇರುವುದು ಇದನ್ನು ಮಾಡುವುದು.
ಒಂದಷ್ಟು ವಾದ ವಿವಾದಗಳು, ಭಿನ್ನ ಅಭಿಪ್ರಾಯಗಳ ವಿನಿಮಯದ ನಂತರ, ಇದೇ ಮಾರ್ಗವನ್ನು ಅನುಸರಿಸುವುದು, ಅದಕ್ಕೆ ಬೇಕಾದ ಪೂರಕ ಬದಲಾವಣೆಗಳನ್ನು ಎರಡೂ ಕುಟುಂಬದವರು ಮಾಡಿಕೊಳ್ಳುವುದು,  ಎಂಬ ನಿರ್ಧಾರಕ್ಕೆ ಬರಲಾಯಿತು.

ಮುಂದಿನ ಹಂತದ ರಮೇಶ್ ರಶ್ಮಿಅವರ ಜೊತೆಯಲ್ಲಿ ಮಾತು ಮುಂದುವರಿಸಿ....
ಮುಂದಿನ ಯೋಜನೆಗಳೇನು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವೇ ಇಲ್ಲ.  ಒಬ್ಬರನ್ನೊಬ್ಬರು ಇಷ್ಟಪಟ್ಟು ಪ್ರೀತಿಸಿ, ಹಠ ಮಾಡಿ ಮದುವೆಯಾಗಿದ್ದೀರ.. ಈಗ ಬೇರೆ ಬೇರೆ ಇರುವುದು ನಿಮ್ಮ ಪ್ರೀತಿಗೆ ಮಾಡಿದ ಅವಮಾನವಲ್ಲವೇ ? ಮತ್ತೆ ನಿರುತ್ತರ.
ಮನಸ್ಸು ಬಿಚ್ಚಿ ಮಾತಾಡಿದರೆ ಮಾತ್ರ... ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಾರಿ ಕಾಣುವುದು. ಮಾತಾಡಬೇಕು... ಮತ್ತೆ ಮೌನ.
ನಿಮ್ಮ ಮುಂದೆ ಇರುವುದು ಈಗ ಎರಡೇ ದಾರಿ. ಮೊದಲನೆಯದು, ಬಂದ ಕಷ್ಟಗಳು / ಸವಾಲುಗಳನ್ನು ಎದುರಿಸಿ ಜೊತೆಯಲ್ಲಿ ಜೀವನ ಮಾಡುವುದು.... ಎರಡನೆಯದು ಹೇಡಿತನದ ಮಾರ್ಗ.. ನೀವಿಬ್ಬರೂ ವಿಚ್ಛೇದನ ಮಾಡಿಕೊಂಡು ನಿಮ್ಮ ದಾರಿ ನೀವು ಹಿಡಿಯೋದು.
 ನಾನು  ಇನ್ನೊಬ್ಬರೊಡನೆ ಮಾತನಾಡಿ ಮುಗಿಸುವದರೊಳಗೆ ನೀವು ಆಚೆ ಕೂತು ಯೋಚನೆ ಮಾಡಿ ಬನ್ನಿ..
ಈಗಲೂ ನೀವಿಬ್ಬರೂ ಮಾತನಾಡದಿದ್ದರೆ ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಂಡಂತೆ.. ಹೋಗಿ...
ಸುಮಾರು ಒಂದು ಗಂಟೆಯ ನಂತರ ಅವರನ್ನು ಮತ್ತೆ ಕರೆದೆ... ರಶ್ಮಿಯ ಕಣ್ಣಲ್ಲಿ ನೀರು, ರಮೇಶನ ಕಣ್ಣು ನೋವು / ಅಸಹಾಯಕತೆಯನ್ನು ಬಿಂಬಿಸುತ್ತಿದೆ. 
ಏನು ನಿರ್ಧಾರ ಮಾಡಿದಿರಿ ಎಂಬ ಪ್ರಶ್ನೆಗೆ “ಜೊತೆಯಾಗಿ ಇರ್ತೀವಿ...” ಎಂಬ ಉತ್ತರ ಒಟ್ಟಿಗೆ ಬಂತು.. ನಂತರ ರಶ್ಮಿಯ.. ಆದರೆ ಎಂಬ ಕೊಸರಿನೊಡನೆ.
“ಆದರೆ" ಪದದಿಂದ ಮಾತು ಮುಂದುವರಿಸಿದಾಗ ಹೊರ ಬಿದ್ದ ಅನಿಸಿಕೆಗಳು...

ರಮೇಶನ ಮನೆಯ ಜೀವನ ಶೈಲಿಯನ್ನು ಅನುಸರಿಸಲು ರಶ್ಮಿಗೆ ಸಾಧ್ಯವಾಗುತ್ತಿಲ್ಲ... ಶೈಲಿಯನ್ನು ಬದಲಾಯಿಸುವ ಧೈರ್ಯ ಮತ್ತು ಆರ್ಥಿಕ ಶಕ್ತಿ ಎರಡೂ ರಮೇಶನಲ್ಲಿ ಇಲ್ಲ. ಇದು ಅವನು ಬೆಳೆದು ಬಂದ ರೀತಿ. 
ರಶ್ಮಿ ತನ್ನ ತವರಿನಿಂದ ಹಣಕಾಸನ್ನು ತರಲು ಪ್ರಯತ್ನಿಸಿದಾಗ, ರಮೇಶನ ಅಪ್ಪ ಅಮ್ಮ ಅದಕ್ಕೆ ಒಪ್ಪಿಲ್ಲ. " ನಮ್ಮ ಜೀವನ ನಮ್ಮ ಸಂಪಾದನೆಯಲ್ಲಿ ನಡೆಸೋಣ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು" ಎಂದು ನಂಬಿದವರು. ತನಗಿರುವ ವರಮಾನದ ಮಿತಿಯಲ್ಲಿ, ರಶ್ಮಿಯ ಆಶೋತ್ತರಗಳನ್ನು ಪೂರೈಸಲಾಗದ ಪರಿಸ್ಥಿತಿ ರಮೇಶನನ್ನು ಅಸಹಾಯಕನನ್ನಾಗಿ ಮಾಡಿದೆ. 
ಈ ಸಮಸ್ಯೆಗೆ ಪರಿಹಾರ " ಬೇರೆ ಮನೆ ಮಾಡಿ ಜೀವನ ನಡೆಸುವುದು ಅಥವಾ ಒಂದಷ್ಟು ಬದಲಾವಣೆ ಮಾಡಿಕೊಂಡು ಹೊಂದಾಣಿಕೆಯಿಂದ ಎಲ್ಲರೂ ಒಟ್ಟಿಗೆ ಬಾಳುವುದು" ಎಂಬ ಸಲಹೆಗೆ
" ನಮ್ಮಮ್ಮನ ಮನೆಗೆ ಹೋಗಿ ಇರೋಣ" ಇದು ರಶ್ಮಿಯ ತಕ್ಷಣದ ಸಲಹೆ.  ಎಲ್ಲಾ ಆಯ್ಕೆಗಳನ್ನು ವಿವರವಾಗಿ ಯೋಚಿಸಿ ಮತ್ತೆ ಬರಲು ಸೂಚನೆ.

ರಶ್ಮಿ ಅಮ್ಮನ ಮನೆಯಲ್ಲಿ ಇರುವ ಆಯ್ಕೆಗೆ ರಮೇಶ ಒಪ್ಪಿಗೆಯನ್ನು ಕೊಟ್ಟಿಲ್ಲ. ಒಬ್ಬನೇ ಮಗನಾದ ಕಾರಣ ಅಪ್ಪ ಅಮ್ಮನ  ಜವಾಬ್ದಾರಿ ನಿರ್ವಹಿಸಬೇಕಾದ ಮಾತನಾಡಿದ್ದಾನೆ.  
ನಿನ್ನ ಆಯ್ಕೆ ನಿನ್ನ ನಿರ್ಧಾರ, ಹಾಗಾಗಿ ಜೀವನವನ್ನು ನಿಭಾಯಿಸುವುದು ನಿನ್ನ ಜವಾಬ್ದಾರಿ. ದಿನನಿತ್ಯದ ನಿಮ್ಮ ಜೀವನಕ್ಕೆ ನಾವು ಜವಾಬ್ದಾರರಲ್ಲ, ಆದರೆ ಕಷ್ಟ ಪರಿಸ್ಥಿತಿ ಬಂದಾಗ ನಾವು ನಿಮ್ಮ ಜೊತೆ ಇರಬಲ್ಲೆವು. ಇದು ರಶ್ಮಿಯ ಅಪ್ಪ ಅಮ್ಮನ ಅಭಿಪ್ರಾಯ.
ಬೇರೆ ಮನೆ ಮಾಡುವ ಸಲಹೆಯನ್ನು ರಮೇಶನ ಅಮ್ಮ ಮುಂದಿಟ್ಟಿದ್ದಾರೆ. ಇದನ್ನು ತಿಳಿದ ರಶ್ಮಿಗೆ ಸಂತೋಷವಾಗಿದೆ. ಮನೆ ನಿಭಾಯಿಸುವ ಜವಾಬ್ದಾರಿಯ ಬಗ್ಗೆ ಯೋಚಿಸಿದಾಗ ಆತಂಕವೂ ಆಗಿದೆ.  
ಏನೂ ನಿರ್ಧಾರ ಮಾಡಲಾಗದ ಸ್ಥಿತಿಯಲ್ಲಿ  ಮರಳಿ ಬಂದವರಿಗೆ ತಿಳಿ ಹೇಳಿದ್ದು, ಅವರ ಮುಂದಿರುವ ಆಯ್ಕೆಗಳಲ್ಲಿರುವ ಧನಾತ್ಮಕ (positive) ಹಾಗೂ ಋಣಾತ್ಮಕ (negative) ಅಂಶಗಳು.

ಕೂಡು ಕುಟುಂಬದಲ್ಲಿರುವುದು:
ಹಿರಿಯರ ರಕ್ಷಣಾ ಕವಚ, ಕಷ್ಟ ಸುಖದಲ್ಲಿ ಸೂಕ್ತ ಮಾರ್ಗದರ್ಶನ ಹಾಗೂ ಬೆಂಬಲ.
ಮುಂದಾಗುವ ಮಕ್ಕಳಿಗೆ ಅಜ್ಜಿ ತಾತನ ಪ್ರೀತಿ ಹಾಗೂ ರಕ್ಷಣೆ. ಅದರಲ್ಲೂ ನೀವಿಬ್ಬರೂ ಕೆಲಸ ಮಾಡುವ ಆಯ್ಕೆ ಮಾಡಿಕೊಂಡರೆ ಆಗುವ ಅನುಕೂಲ.
ಮನೆ ಕೆಲಸಗಳಲ್ಲಿ ಪರಸ್ಪರ ಸಹಾಯದಿಂದ, ಹೊರೆ ಕಡಿಮೆಯಾಗುವುದು, ಸಂಸಾರ ನಿಭಾಯಿಸುವ ಅವರ ಅನುಭವದ ಮಾರ್ಗದರ್ಶನ.
ಕೂಡು ಸಂಸಾರದಲ್ಲಿದ್ದಾಗ, ನಮ್ಮ ಇಚ್ಛೆಯಂತೆಯೇ ಎಲ್ಲವೂ ನಡೆಯುವುದಿಲ್ಲ. ಮನೆಯ ಎಲ್ಲರ ಒಮ್ಮತದ ಅಭಿಪ್ರಾಯಕ್ಕೆ ಮನ್ನಣೆ. ಆದರೆ ಒಮ್ಮತದ ಅಭಿಪ್ರಾಯ ಮೂಡಿಸುವ ಕಲೆಯನ್ನು ಗಳಿಸಿದ್ದೇ ಆದರೆ.. ನಮ್ಮ ಸ್ಥಾನ ಭದ್ರವಾಗುತ್ತದೆ.
ಇಲ್ಲಿ ಒಂದಷ್ಟು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. 

ಬೇರೆ ಮನೆಯನ್ನು ಮಾಡುವುದು:
ನಿಮಗೆ ಹೇಗೆ ಬೇಕಾದರೂ ಇರುವ ಸ್ವಾತಂತ್ರ್ಯವನ್ನು ಕೊಟ್ಟರೂ, ಜೀವನದ ಬೇರೆ ಮುಖಗಳನ್ನು ತಿಳಿಯದ ನಿಮಗೆ ಅದು ಸ್ವೇಚ್ಛೆಯಾಗಿ ಬದಲಾಗಬಹುದು. ಜೀವನಶೈಲಿಗೆ ಯಾವ ಅಂಕೆಯೂ, ಶಿಸ್ತು ಇಲ್ಲದೆ ಹೋಗಬಹುದು.
ಮನೆಯನ್ನು ನಿಭಾಯಿಸುವ ಎಲ್ಲ ಜವಾಬ್ದಾರಿಗಳು ನಿಮ್ಮ ಮೇಲೆ ಇರುತ್ತದೆ. ಅದರಲ್ಲೂ ಸೀಮಿತವಾಗಿ ಇರುವ ಹಣಕಾಸಿನ ವ್ಯವಹಾರವನ್ನು ಸರಿದೂಗಿಸುವ ಚಾಕಚಕ್ಯತೆಯನ್ನು ತಕ್ಷಣ ಗಳಿಸಬೇಕಾಗುತ್ತದೆ. ರಮೇಶ್ ಗೆ ಈ ವಿಷಯದಲ್ಲಿ ಎಷ್ಟು ವಿಶ್ವಾಸವಿದೆ? ರಶ್ಮಿ ಹೇಗೆ ಸ್ಪಂದಿಸಬಲ್ಲಳು?  ಹಣದ ಸಹಾಯಕ್ಕಾಗಿ ಬೇರೊಬ್ಬರನ್ನು ಆಶ್ರಯಿಸುವುದು ಸ್ವಾಭಿಮಾನಕ್ಕೆ ಅಡ್ಡಿ, ಕಾಲಕ್ರಮೇಣ ಅದು ಅವಮಾನದ ಪರಿಸ್ಥಿತಿಗೆ ದೂಡಬಹುದು.
ಮನೆಯವರ ಇಚ್ಛೆಯ ವಿರುದ್ಧವಾಗಿ ನೀವು ಜೀವನ ಪ್ರಾರಂಭ ಮಾಡಿರುವುದರಿಂದ, ಅವರ ಸಹಾಯವು ಸಮಯದಲ್ಲಿ ಸಿಗದೇ ಹೋಗಬಹುದು.  
ಮನೆ ಕೆಲಸ ಮಾಡಲು ಬರದ ರಶ್ಮಿ, ಅಡಿಗೆ ಮಾಡಬಲ್ಲಳೇ? ಜವಾಬ್ದಾರಿಯನ್ನು ಹೊರ ಬಲ್ಲಳೇ?
ಅದು ತಕ್ಕಮಟ್ಟಿಗೆ ಸಾಧ್ಯವಾಗಿದ್ದರೆ, ಅತ್ತೆಯಿಂದ ಬೈಗುಳದ ಮಾತುಗಳೇ ಬರುತ್ತಿರಲಿಲ್ಲವಲ್ಲ.

ರಶ್ಮಿ ಅಮ್ಮನ ಮನೆಯಲ್ಲಿರುವುದು:
ಅಪ್ಪ ಅಮ್ಮನ ಅಭಿಪ್ರಾಯ ಗಮನಿಸಿದಾಗ, ಅದರಲ್ಲೂ ನಿನ್ನ ಆಯ್ಕೆ ನಿನ್ನ ನಿರ್ಧಾರ ಎನ್ನುವ ಮಾತುಗಳು, ಇದಕ್ಕೆ ಪೂರಕವಾಗಿಲ್ಲ.
ನನ್ನ ಅಭಿಪ್ರಾಯದಲ್ಲಿ, ರಮೇಶನ ಸ್ಥಾನಮಾನವನ್ನು ಮನಸ್ಸಿನಲ್ಲಿಟ್ಟರೆ, ಇದು ಸೂಕ್ತ ಆಯ್ಕೆ ಅಲ್ಲವೇ ಅಲ್ಲ.

ಈ ಮಧ್ಯೆ ರಮೇಶನ ಅಪ್ಪ , ಅಮ್ಮನಿಗೆ ಮಕ್ಕಳ ಜೊತೆ ಸ್ನೇಹದಿಂದಿರಲು, ತಪ್ಪು ಮಾಡಿದಾಗ ಮೂದಲಿಸದೆ ಸರಿ ಮಾಡಿಕೊಳ್ಳುವ ರೀತಿಯನ್ನು, ಇದಕ್ಕಾಗಿ   ಕುಟುಂಬದ ಹಿತ ದೃಷ್ಟಿಯಿಂದ ಮಾಡಿ ಕೊಳ್ಳಬೇಕಾದ ಬದಲಾವಣೆಯನ್ನು,  ತಿಳಿ ಹೇಳಲಾಯಿತು.
ತವರು ಮನೆಯಲ್ಲಿರುವುದು ಸಮಂಜಸವಲ್ಲ.  ಎಲ್ಲ ದೃಷ್ಟಿಯಿಂದಲೂ ಅತ್ತೆಯ ಮನೆಯಲ್ಲಿ ಇರುವುದೇ ಸೂಕ್ತ, ಅದಕ್ಕೆ ಬೇಕಾದ ಮಾರ್ಗಗಳನ್ನು ಹುಡುಕಲು ನಾವು ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಆಗಾಗ್ಗೆ ಸ್ಪಷ್ಟೀಕರಿಸಲು ರಶ್ಮಿ ಅಪ್ಪ ಅಮ್ಮನಿಗೆ ತಿಳಿಸಿದ್ದು.


ಮುಂದಿನ ಸುಮಾರು ಎರಡು ತಿಂಗಳಗಳ ಕಾಲ, ಸತತವಾಗಿ ಈ ವಿಚಾರವಾಗಿ ಮಾತನಾಡಿ, ಬಂದ ಸಂದೇಹಗಳಿಗೆ ಸಮಾಧಾನ ಕೊಟ್ಟನಂತರ, ರಮೇಶ ಮತ್ತು ರಶ್ಮಿ, ಅವರ ಮನೆಯಲ್ಲಿಯೇ ಉಳಿದು ಜೀವನ ಮುಂದುವರಿಸಲು ನಿರ್ಧರಿಸಿದ್ದು.
ನಂತರದ ಸಾಕಷ್ಟು ದಿನಗಳು, ಆಗುತ್ತಿರುವ ಬದಲಾವಣೆಗಳು, ಎದುರಿಸುತ್ತಿರುವ ಅಡ್ಡಿ ಆತಂಕಗಳು, ಅದನ್ನು ಸಮಾಧಾನದಿಂದ  ಬಗೆಹರಿಸುವ ದಾರಿಯನ್ನು ಕಾಣಿಸಲಾಯಿತು.

ಬಹಳ ದಿನಗಳ ನಂತರ, ರಶ್ಮಿ ಫೋನ್ ಮಾಡಿ ತಿಳಿಸಿದ್ದು, ತಾನು ಒಬ್ಬ ಹೆಣ್ಣು ಮಗಳ ತಾಯಿಯಾಗಿದ್ದೇನೆ ಎಂದು.  ವಯಸ್ಸಿನ ಮೋಹ ಪಾಶಕ್ಕೆ ಬಿದ್ದು, ಹಿಂದೆ ಮುಂದೆ ಯೋಚಿಸದೆ, ಜೀವನದ ಆಗುಹೋಗುಗಳ ಅರಿವಿಲ್ಲದ ಒಂದು ಜೋಡಿ, ಸಧ್ಯ ನೆಮ್ಮದಿ ಯಾಗಿದ್ದಾರೆಂದು ತಿಳಿದು ಮನಸ್ಸು ಸುಖಿಸಿತು.

ಡಿ ಸಿ  ರಂಗನಾಥ ರಾವ್
9741128413
























    

Comments

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ