ಕಾಲ - ಕೆಟ್ಟಿತಾ? - ಬದಲಾಯಿತಾ?
ಕಾಲ ಕೆಟ್ಟೋಯ್ತು... ನಮ್ ಕಾಲದಲ್ಲಿ ಹೀಗಿರಲಿಲ್ಲ... ಇದು ನಾನು ಬಹಳ ಸಲ ಕೇಳಿದ ಹಿರಿಯರ ಮಾತುಗಳು.. ಆ ಹಿರಿಯರಲ್ಲಿ ನಮ್ಮಪ್ಪನೂ ಒಬ್ಬರು.
ಕಾಲ ಕೆಡುವುದು ಅನ್ನುವ ಚಿಂತನೆಯೇ ನನ್ನ ಮನಸ್ಸಿಗೆ ಒಗ್ಗದು. ಕಾಲ ಏನು ಮಾಡಿಟ್ಟ ಅಡಿಗೆಯೇ.. ಕೆಡಲು / ಹಳಸಲು. ಕಾಲ ನವನವೀನ.. ಕ್ಷಣ ಕ್ಷಣಕ್ಕೂ ಹೊಸತಾಗುವ ಕಾಲ ಕೆಡಲು ಸಾಧ್ಯವೇ?
ಕಾಲ ಬದಲಾಗುತ್ತದೆ... ಖಂಡಿತ ಹೌದು. ಅದರ ಗುಣವೇ ಬದಲಾಗುವುದು. ಕ್ಷಣ ಕ್ಷಣಕ್ಕೂ ಹೊಸದಾಗಿ ಬದಲಾಗುವುದು. ಕಾಲಕ್ಕೆ ತಕ್ಕಂತೆ ಬದಲಾಗು, ತಾಳಕ್ಕೆ ತಕ್ಕಂತೆ ಕುಣಿದಾಡು ಎನ್ನುವುದು ಗಾದೆಯ ಮಾತು. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವ ಮಾತನ್ನು ನಂಬಿ ಯೋಚಿಸಿದರೆ, ಕಾಲಕ್ಕೆ ತಕ್ಕಂತೆ ಬದಲಾಗು ಎಂಬ ನಿರ್ದೇಶನ ಇರುವುದು ಮನುಷ್ಯರಿಗೆ ಅಲ್ಲವೇ? ಹಾಗಾದರೆ ಬದಲಾಗುತ್ತಿರುವುದು ಕಾಲವೋ ? ಮನುಷ್ಯನೋ ?.... ಅಂದಮೇಲೆ ಕೆಟ್ಟಿರೋದು/ ಬದಲಾಗಿರೋದು ಮನುಷ್ಯನೇ ಹೊರತು ಕಾಲ ಅಲ್ಲ.. ಅಹುದಾದರಹುದೆನ್ನಿ.
ಬದಲಾಗಿರುವುದು ಮನುಷ್ಯನ ಚಿಂತನೆ ಹಾಗೂ ವರ್ತನೆ. ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡು ಬೇರೆಯವರನ್ನು ದೂಷಿಸುವ ಮನುಷ್ಯನ ಸಹಜ ಸ್ವಭಾವದಂತೆ, ಆರೋಪವನ್ನು ಕಾಲದ ಮೇಲೆ ಹೊರಿಸುವುದು ಅಷ್ಟೇ.
ನಮ್ಮ ಕಾಲದಲ್ಲಿ ಒಂದು ರೂಪಾಯಿಗೆ ಹತ್ತು ಸೇರು ಅಕ್ಕಿ ಸಿಗುತ್ತಿತ್ತು, ಜೊತೆಗೆ ಜೇಬಲ್ಲಿ ದುಡ್ಡು ತಗೊಂಡು ಹೋಗಿ ಮೂಟೆಯಲ್ಲಿ ಸಾಮಾನು ತರಬಹುದಿತ್ತು ಅನ್ನುವ ಮಾತು... ಅದು ಸತ್ಯ ಇರಬಹುದು.. ಆದರೆ ಆಗಿನ ಸಂಬಳ / ಸಂಪಾದನೆ ಎಷ್ಟು ರೂಪಾಯಿ ಇರುತ್ತಿತ್ತು ಎನ್ನುವುದು ಮುಖ್ಯವಾಗುತ್ತದೆ. ನನ್ನದೇ ಅನುಭವದಲ್ಲಿ ಹೇಳುವುದಾದರೆ, ನನಗೆ 600 ರೂಪಾಯಿ ಸಂಬಳ ಬರುತ್ತಿದ್ದಾಗ ಒಂದು ರೂಪಾಯಿ 57 ಪೈಸೆಗೆ 1 ಲೀಟರ್ ಪೆಟ್ರೋಲ್ ಬರುತ್ತಿತ್ತು. ಅದು ನೂರು ರೂಪಾಯಿಯನ್ನು ಮುಟ್ಟಿದೆ ಅಂದರೆ.. ಸುಮಾರು 64ಪಟ್ಟು, ಅದೇ ನನ್ನ ಸಂಪಾದನೆ 64 ಪಟ್ಟನ್ನು ಮೀರಿದೆ. ಅಲ್ಲಿಗೆ ಸಮತೋಲನವೇ ಆಯ್ತಲ್ಲ. ಇದು ಎಲ್ಲರಿಗೂ ಅನ್ವಯಿಸಲು ಸಾಧ್ಯವಾಗದಿದ್ದರೂ, ಸಾಮಾನ್ಯವಾಗಿ ಗಮನಿಸಿದಾಗ, ಜನರ ಜೀವನದ ಮಟ್ಟ ಖಂಡಿತವಾಗಿಯೂ ಹೆಚ್ಚಿದೆ. ಆ ಕಾಲದಲ್ಲಿ ಕಾಣುತ್ತಿದ್ದ ಬೆಳಗಿನಜಾವದ ಅಮ್ಮಾ.. ತಾಯಿ ಎಂದು ಕೂಗುತ್ತಾ ಬರುತ್ತಿದ್ದ ಭಿಕ್ಷುಕರು ಈಗ ಕಣ್ಮರೆಯಾಗಿದ್ದಾರೆ. ಬದಲಾಗಿರುವುದು ಮನುಷ್ಯನ ಜೀವನಮಟ್ಟ ಹಾಗೂ ದುಡಿದು ತಿನ್ನುವ ಚಿಂತನೆ. ಜನರಲ್ಲಿ ಭಿಕ್ಷುಕ ಭಾವವನ್ನು ಇನ್ನೂ ಜೀವಂತವಾಗಿ ಇರಿಸಿರುವುದು ಸರ್ಕಾರದ ಉಚಿತ ಕೊಡುಗೆಗಳು.
ಕಾಲ ಕೆಟ್ಟಿಲ್ಲ... ಆದರೆ ಕೆಟ್ಟಕಾಲ... ಕಷ್ಟದ ಕಾಲ ನಮಗೆ ಬರಬಹುದು. ಹಾಗೆ ಒಳ್ಳೆಯ ಕಾಲವು ಬರುತ್ತದಲ್ಲ. ಯಾವುದೂ ಶಾಶ್ವತವಲ್ಲ... ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದಂತೆ, ಬದಲಾವಣೆ ಜಗದ ನಿಯಮ.
ವ್ಯಾಕರಣದ ದೃಷ್ಟಿಯಿಂದ ನೋಡಿದಾಗ, ಭೂತಕಾಲ, ವರ್ತಮಾನ ಕಾಲ ಹಾಗೂ ಭವಿಷ್ಯತ್ ಕಾಲಗಳು ಇವೆ.
Trust no future,however pleasant it be,
let the dead past bury its dead
Act, act in the living present...
ಇದು ನಾನು ಹೈಸ್ಕೂಲ್ ನಲ್ಲಿ ಓದಿದ psalm of life ಎಂಬ ಪದ್ಯದ ಸಾಲುಗಳು.
ಭೂತಕಾಲ, past ಮುಗಿದು ಹೋದದ್ದು, ಅದರ ಅಂತ್ಯಕ್ರಿಯೆ ಮಾಡಬೇಕಾದದ್ದು. ಭವಿಷ್ಯತ್ಕಾಲ future, ಎಷ್ಟು ಸಂತೋಷದಾಯಕವಾಗಿರುತ್ತದೆ ಎಂದು ಬಿಂಬಿಸಿದರೂ, ನಂಬಲು ಸಾಧ್ಯವಿಲ್ಲ.. ಆದರೆ ವರ್ತಮಾನ ಕಾಲ present ಇದು ನಮ್ಮ ಕೈಯಲ್ಲಿ ಇರುವುದು, it is a present ...gift, ಉಡುಗೊರೆ, ಇದನ್ನು ಅನುಭವಿಸಬೇಕು, ಆನಂದಿಸಬೇಕು ಸಹ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ದಿನದಲ್ಲಿ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಎಂದು ಸೂಚಿಸಲಾಗಿದೆ. ಇವು ಒಂದುವರೆ ಗಂಟೆಯ ಕಾಲ ವ್ಯಾಪಿಸುತ್ತವೆ. ಇವುಗಳಲ್ಲಿ ರಾಹುಕಾಲವು ಬಹಳ ಪ್ರಚಲಿತದಲ್ಲಿ ಇದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಆರಂಭ ಮಾಡಬಾರದು ಎಂಬುದು ಬಲವಾದ ನಂಬಿಕೆ. ರಾಹುಕಾಲ ಯಾವ ಸಮಯದಲ್ಲಿ ಬರುತ್ತದೆ, ಎಂದು ತಿಳಿಯಲು ನನಗೊಂದು ಸೂತ್ರವನ್ನು ಹೇಳಿಕೊಟ್ಟದ್ದು ಪಾರ್ಥಸಾರಥಿ ಎಂಬ ಸ್ನೇಹಿತ. ಸೋಮವಾರದಿಂದ ಮೊದಲ್ಗೊಂಡು ಭಾನುವಾರದವರೆಗಿನ ರಾಹುಕಾಲವನ್ನು ನಿಗದಿಪಡಿಸಲು Edward Brought Home A Good Ford Car ಮಾರ್ಗದರ್ಶಿ ವಾಕ್ಯ . ಉದಾಹರಣೆಗೆ ಸೋಮವಾರಕ್ಕೆ ಮೊದಲ ಪದ Edward. ಮೊದಲಕ್ಷರ E ಇದು ಇಂಗ್ಲೀಷ್ ವರ್ಣಮಾಲೆಯ ಐದನೆಯ ಅಕ್ಷರ. ಐದರ ಅರ್ಧ ಎರಡುವರೆ. ಎರಡೂ ಕೂಡಿಸಿದರೆ ಏಳುವರೆ.. ಸೋಮವಾರ 7.30 ರಿಂದ ಒಂದೂವರೆ ಗಂಟೆಯ ಕಾಲ ಅಂದರೆ 9.00 ಗಂಟೆಯ ವರೆಗೆ ರಾಹುಕಾಲ. ಇದೇ ರೀತಿಯಲ್ಲಿ ಬೇರೆಯ ದಿನಗಳ ರಾಹುಕಾಲವನ್ನು ಗುಣಿಸಬಹುದು. ಇಷ್ಟೆಲ್ಲಾ ಕಷ್ಟ ಪಡಬೇಕಾ ಎಂದು ನಿಮಗನಿಸಿದರೆ ನಾನು ಹೊಣೆಯಲ್ಲ.
ಬರಗಾಲ, ಸುಭಿಕ್ಷಕಾಲಗಳು...ಆ ಕಾಲದ ವಸ್ತುಸ್ಥಿತಿಯನ್ನು ಬಣ್ಣಿಸುತ್ತವೆ.
ಅತ್ತೆಗೊಂದುಕಾಲ,ಸೊಸೆಗೊಂದು ಕಾಲ ಜೊತೆಜೊತೆಗೆ Every dog has its day ಎಂಬ ಹೇಳಿಕೆಗಳು, ಎಲ್ಲರಿಗೂ ಅವರದೇ ಆದ ಒಳ್ಳೆಯ ಸಮಯಗಳು ಬರುತ್ತವೆ ಎಂಬುದನ್ನು ಒತ್ತಿ ಹೇಳುತ್ತದೆ. ಸದಾ ತಿರುಗುತ್ತಿರುವ ಕಾಲಚಕ್ರದ ಮೇಲಿರುವ ನಾವು, ಮೇಲೇಳುವುದು ಕೆಳಗಿಳಿಯುವುದು ಸಾಮಾನ್ಯ.
ಅಕಾಲ, ಸಕಾಲಗಳು... ಯಾವುದೇ ಘಟನೆ / ಕೆಲಸ ಸರಿಯಾದ ಕಾಲದಲ್ಲಿ ಆಗಬೇಕಾದದ್ದು.... ಆದರೆ ಅದು ಸಕಾಲದಲ್ಲಿ ಆದದ್ದು ಪ್ರಕೃತಿಗೆ ಸಮೀಪದ್ದು. ಅದಾಗದಿದ್ದಾಗ ಅದು ಅಕಾಲ.. ಅಕಾಲದ ಮಳೆ ಬೆಳೆದು ನಿಂತ ಫಸಲನ್ನು ನಾಶಮಾಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಸತ್ತಾಗ ಅಕಾಲ ಮರಣ / ಅಕಾಲ ಮೃತ್ಯು ಎಂದು ಹೇಳುವುದುಂಟು.
ಪ್ರತಿದಿನ ಪೂಜೆಯ ನಂತರ, ನಮ್ಮಪ್ಪ ತೀರ್ಥ ಕೊಡುವಾಗ ಅಕಾಲ ಮೃತ್ಯು ಹರಣಂ ಸರ್ವರೋಗ ನಿವಾರಣಂ...... ಶ್ಲೋಕ ಹೇಳುತ್ತಾ ತೀರ್ಥವನ್ನು ಅಂಗೈಗೆ ಹಾಕುತ್ತಿದ್ದದ್ದು. ಅದು ಒಂದು ಗಾಢವಾದ ನಂಬಿಕೆ.
ಸುವರ್ಣ ಯುಗ, ಸುವರ್ಣ ಕಾಲ.... ಈ ಕಾಲದಲ್ಲಿ ಶಾಂತಿ ಸಮೃದ್ಧಿ, ಶೈಕ್ಷಣಿಕ ಹಾಗೂ ಬೌದ್ಧಿಕ ಏಳಿಗೆ ಹೀಗೆ ಸರ್ವತೋಮುಖ ಅಭಿವೃದ್ಧಿ ಇದ್ದ ಕಾಲ. ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯ ಇದಕ್ಕೊಂದು ಉದಾಹರಣೆ. ಆ ಕಾಲದಲ್ಲಿ ಮುತ್ತುರತ್ನ ವಜ್ರ ವೈಢೂರ್ಯ ಗಳನ್ನು ಬೀದಿಯ ಪಕ್ಕದಲ್ಲಿ ಮಾರುತ್ತಿದ್ದರು ಎಂದು ಪ್ರತೀತಿ. ಈಗಲೂ ಬೀದಿಯ ಪಕ್ಕದಲ್ಲೇ ಆದರೂ, ಅದಕ್ಕೊಂದು ಸುಸಜ್ಜಿತ ಭದ್ರ ಕವಚ ಹೊಂದಿದ ಕಟ್ಟಡ ಬೇಕು.
ತುಂಬಾ ಹಳೆಯ ಕಾಲಕ್ಕೆ ಪುರಾತನ ಕಾಲ ಎಂದು ಹೇಳುವುದುಂಟು. ಪುರಾತನ ಶಿಲಾಯುಗದಲ್ಲಿ ಅಲೆಮಾರಿ ಮನುಷ್ಯ ಬಳಸುತ್ತಿದ್ದದ್ದು ಕಲ್ಲಿನ ಆಯುಧ. ನೂತನ ಶಿಲಾಯುಗದಲ್ಲಿ, ಒಂದೆಡೆ ನಿಂತು ವ್ಯವಸಾಯ ಶುರು ಮಾಡಿದ ನಂತರ ಸುಧಾರಿತ ಆಯುಧಗಳನ್ನು ಉಪಯೋಗಿಸುತ್ತಿದ್ದದ್ದು.
ಹಳೆಯ ವಸ್ತುಗಳು ಎಷ್ಟು ಪುರಾತನ, ಅದು ಯಾವ ಕಾಲದಲ್ಲಿತ್ತು ಎಂದು ನಿರ್ಧರಿಸಲು carbon dating ಎಂಬ ವಿಧಾನವಿದೆ.
ಸಮಾಜದಲ್ಲಿ ದೊಡ್ಡ ಬದಲಾವಣೆಯ ಹಂತದಲ್ಲಿರುವ ಸಮಯವನ್ನು ಸಂಧಿಕಾಲ / ಪರ್ವ ಕಾಲ ಎನ್ನುತ್ತಾರೆ.
ಸಕಾಲ ಎಂಬ ಸರ್ಕಾರಿ ಪ್ರಾಯೋಜಿತ ವ್ಯವಸ್ಥೆಯಿದೆ. ನಾಗರೀಕರಿಗೆ ಬೇಕಾದ ಬಹಳಷ್ಟು ಸೇವೆಗಳು, ಯಾವ ತೊಂದರೆಯೂ ಇಲ್ಲದಂತೆ ಸಕಾಲದಲ್ಲಿ ದೊರೆಯಲಿ ಎಂಬ ಉದ್ದೇಶದಿಂದ ಪ್ರಾರಂಭ ಆದದ್ದು. ದುರ್ದೈವವಶಾತ್... ಪಟ್ಟಭದ್ರ ಹಿತಾಸಕ್ತಿಗಳುಳ್ಳವರೇ ವ್ಯವಸ್ಥೆಯ ಭಾಗವಾಗಿರುವಾಗ, ಅದರ ಉದ್ದೇಶವೂ ದಾರಿ ತಪ್ಪಿದಂತಿದೆ.
ಉದಯಕಾಲ, ಅರುಣೋದಯ ಕಾಲ ... ಸೂರ್ಯೋದಯದ ಸಮಯವನ್ನು ಸೂಚಿಸಿದರೆ, ಸಂಧ್ಯಾ ಕಾಲ ಸೂರ್ಯ ಮುಳುಗುವ ಹೊತ್ತು... ಬೆಳಕು ಕತ್ತಲೆಡೆಗೆ ಹೊರಳುವ ಹೊತ್ತು ಸೂಚಿಸುತ್ತದೆ. ಹಾಗಾಗಿ ಈ ಎರಡು ಕಾಲವನ್ನು ಏರುಹೊತ್ತು ಹಾಗೂ ಇಳಿಹೊತ್ತು ಎಂದು ಹೇಳುವ ಪರಿಪಾಠವುಂಟು.
ಹೊತ್ತು ಎನ್ನುವ ಪದ ಸಮಯವನ್ನು ಸೂಚಿಸುತ್ತದೆ. ಕಷ್ಟಕಾಲದಲ್ಲಿ ಹೊತ್ತೇ ಹೋಗಲ್ಲ ಎನ್ನುವ ಮಾತು ಕೇಳುತ್ತೇವೆ. ಕಷ್ಟದ ದಿನಗಳು ಯಾವಾಗಲೂ ಬಹು ದೀರ್ಘ ಎನಿಸುತ್ತದೆ. ಎಲ್ಲ ಸರಿ ಇದ್ದಾಗ ಅಬ್ಬಾ.. ಇಷ್ಟು ದಿನ ಹೇಗೆ ಕಳೀತು ಗೊತ್ತಾಗಲಿಲ್ಲ..... ಅನ್ನುವ ಉದ್ಗಾರವನ್ನು ಕೇಳುತ್ತೇವೆ.
ಹೊತ್ತು ಎನ್ನುವ ಪದವನ್ನು ಹೊತ್ತೊಯ್ಯಿ, ಎತ್ತಿಕೊಂಡು ಹೋಗು ಎಂಬ ಅರ್ಥದಲ್ಲೂ ಉಪಯೋಗಿಸುತ್ತಾರೆ. ನನ್ನೂರು ದೊಡ್ಡಜಾಲದಲ್ಲಿದ್ದಾಗ... ಬೇರೆಯವರಿಗೆ ಬೈಯುವ ಸಮಯದಲ್ಲಿ.. ಬರಬಾರದ್ದು ಬಂದು ಹೊತ್ತುಕೊಂಡು ಹೋಗ.. ಎಂತೆಂಥೋರು ಹೋದ್ರು.. ಇವನ್ನ ಹೊತ್ಕೊಂಡು ಹೋಗೋ ಕಾಲ ಬರ್ಲಿಲ್ವಲ್ಲ .... ಎಂಬುದನ್ನು ಸಾಕಷ್ಟು ಸಲ ಕೇಳಿದ್ದೇನೆ.
ವಿನಾಶಕಾಲ ಎಲ್ಲವನ್ನು ಹಾಳು ಮಾಡುತ್ತದೆ. ವಿನಾಶಕಾಲೇ ವಿಪರೀತ ಬುದ್ಧಿ... ಎಂಬ ಮಾತು, ಅತಿಯಾದ ಬುದ್ಧಿವಂತಿಕೆ ಮಾಡಿ ತನ್ನನ್ನೇ ತಾನು ವಿನಾಶದೆಡೆಗೆ ಕೊಂಡೊಯ್ಯುವುದು ಎಂಬ ಅರ್ಥ ಕೊಡುತ್ತದೆ.
ಆ ಕಾಲವೊಂದಿತ್ತು... ಧರ್ಮ ಯುಗ... ಮಾತು / ವಾಗ್ದಾನಕ್ಕೆ ತುಂಬಾ ಮಹತ್ವ ಇದ್ದ ಕಾಲ. ಮಾತು ಕೊಟ್ಟರೆ, ಪ್ರತಿಜ್ಞೆ ಮಾಡಿದರೆ.. ಜೀವನವನ್ನು ಪಣಕ್ಕಿಟ್ಟಾದರೂ ಸರಿ... ಆ ಮಾತನ್ನು ಉಳಿಸಿಕೊಳ್ಳುತ್ತಿದ್ದ ಜನ. ಕಾಲ ಬದಲಾದಂತೆ ಮಾತು ಬದಲಾಯಿಸುತ್ತಿದ್ದ ಜನಗಳು ಹೆಚ್ಚಾದಾಗ ಎಲ್ಲವನ್ನೂ ಬರವಣಿಗೆ ಮೂಲಕ ಧೃಢೀಕರಿಸುವ ಪರಿಪಾಠ ಬಂತು. ಬರೆದಾದ ಮೇಲೂ ಅದನ್ನು ಒಪ್ಪದ / ಪಾಲಿಸದ ಮನೋಭಾವ ಬಂದಮೇಲೆ ನ್ಯಾಯಾಲಯಗಳು ಹುಟ್ಟಿಕೊಂಡವು. ಬದಲಾಗಿದ್ದು ಮನುಷ್ಯನ ಯೋಚನಾ ಲಹರಿಯೇ.
Time and tide waits for none ಎಂಬ ಇಂಗ್ಲೀಷ್ ನಾಣ್ಣುಡಿಯನ್ನು ಕಾಲನಮ್ಮ ಆಳು ಎಂಬ ಕನಸು ಕಾಣುವೆಯಾ... ಹಾಗೂ ಕಾಲವನ್ನು ತಡೆಯೋರು ಯಾರೂ ಇಲ್ಲ.. ಎಂಬ ಹಾಡುಗಳು ಸಮರ್ಥಿಸುತ್ತವೆ.
ಕಾಲ ಎಲ್ಲವನ್ನು ನಿರ್ಧರಿಸುತ್ತೆ. ಯಾವಾಗ ಏನು ಆಗಬೇಕು ಅದು ಆಗೇತಿರುತ್ತೆ, ಅದು ವಿಧಿ ನಿಯಮ ಎಂದು ನಂಬುವವರು ನಾವು. ಮಾನವ ಸಮಯದ ಗೊಂಬೆ. ಕಾಲ ಆಡಿಸಿದಂತೆ ಆಡುವವರು ನಾವು.
ಕಾಲ / ಸಮಯವನ್ನು ಅಂದಾಜು ಮಾಡುತ್ತಿದ್ದದ್ದು, ಸೂರ್ಯನ ಸ್ಥಾನದಿಂದ. ನೆತ್ತಿ ಮೇಲಿನ ಸೂರ್ಯ ಮಧ್ಯಾಹ್ನದ ಸೂಚನೆ.
ಸಮಯದ ಮಾಪನ ಬಹುಶಃ ಜಾರು ಮರಳಿನ ಪಾತ್ರೆಯ ಮೂಲಕ (hourglass) ಪ್ರಾರಂಭವಾಗಿರಬಹುದು.
ಜಂತರ್ ಮಂತರ್ ಎಂದು ಕರೆಯುವ ಬೃಹತ್ ಗಾತ್ರದ ಕಟ್ಟಡಗಳು, ಸೂರ್ಯನ ಬೆಳಕಿಂದ ಮೂಡಿದ ನೆರಳಿನ ಸಹಾಯದಿಂದ ದಿನದ ಸಮಯವನ್ನು ಗುರುತಿಸುತ್ತಿದ್ದದ್ದು. ಇದರಲ್ಲೂ ಸಹ ಬಹುರೂಪಿ ಜಂತರ್ ಮಂತರ್ ಗಳು ಭಾರತದ ದೆಹಲಿ, ಜೈಪುರ, ಈಚೆಗೆ ಮೈಸೂರಿನಲ್ಲೂ ಸ್ಥಾಪಿತಗೊಂಡಿವೆ. ಇವುಗಳು ಸಮಯವಲ್ಲದೆ ಖಗೋಳಶಾಸ್ತ್ರದ ವಿವಿಧ ಲೆಕ್ಕಗಳನ್ನು ಮಾಡಲು ಪೂರಕವಾಗಿವೆ.
ಗಡಿಯಾರದ ಆವಿಷ್ಕಾರದ ನಂತರ... ಯಾಂತ್ರಿಕ ಗಡಿಯಾರದಿಂದ ಹಿಡಿದು....
digital ಗಡಿಯಾರದ ತನಕ ವಿವಿಧ ರೂಪಗಳಲ್ಲಿ ಬಂದಿದೆ. ಕಾಲಕ್ಕೆ ತಕ್ಕಂತೆ ಬದಲಾದ ವಸ್ತುಗಳಲ್ಲಿ ಗಡಿಯಾರಕ್ಕೆ ಮೊದಲ ಸ್ಥಾನ.
ಕಾಲಮಾಪನ ಕಲ್ಪ, ಮನ್ವಂತರ, ಯುಗ, ಶತಮಾನ, ದಶಮಾನ, ವರ್ಷ, ತಿಂಗಳು,ಪಕ್ಷ, ವಾರ, ದಿನ, ಗಂಟೆ, ನಿಮಿಷ, ಸೆಕೆಂಡ್, ಗಳಿಗೆಗಳು, ಕ್ಷಣಗಳು ಹೀಗೆ ವಿಶಾಲ ವ್ಯಾಪ್ತಿಯಲ್ಲಿವೆ.
ಈಗಿನ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಒಂದು ಸೆಕೆಂಡಿನ 10 ಕೋಟಿ ಭಾಗದ ಒಂದು ಭಾಗವನ್ನು (nanosecond) ಅಳೆವಷ್ಟು.
ಕಣ್ಣು ಮಿಟಕುವಷ್ಟರಲ್ಲಿ ಆಗಿ ಹೋಯಿತು ಎನ್ನುವುದು ಬಹು ಕಡಿಮೆ ಸಮಯವನ್ನು ಹೇಳುವ ಒಂದು ರೀತಿ.
ಒಂದೇ ಕಾಲದಲ್ಲಿ ಬದುಕಿದ್ದವರು / ಒಡನಾಡಿದವರನ್ನು ಸಮಕಾಲೀನರು ಎಂದು ಕರೆಯುತ್ತಾರೆ.
ಈಚಿನ ದಿನಗಳಲ್ಲಿ ರಾಜಕಾರಣಿಗಳು ತಮ್ಮಲ್ಲಿರುವ ಗುಟ್ಟನ್ನು ಕಾಲ ಬಂದಾಗ ಹೊರಗೆ ಹಾಕುತ್ತೇನೆ ಎಂದು ಹೇಳುವ ಮಾತು ಸಾಮಾನ್ಯ. ಈಚೆಗೆ ಕೇಳಿದ್ದು... ತಾಳ್ಮೆ ಇರಲಿ ಎಲ್ಲವನ್ನು ಕಾಲವೇ ಹೇಳುತ್ತೆ. ಆ ಕಾಲ ಯಾವಾಗಲೋ.... ದೇವರೇ ಬಲ್ಲ.
ಪರೀಕ್ಷೆಗೆ ಮುಂಚೆ ತುಂಬಾ ಕಷ್ಟಪಟ್ಟು ಓದುವವರನ್ನು ಕಂಡು... ಯುದ್ಧಕಾಲೇ ಶಸ್ತ್ರಾಭ್ಯಾಸಃ ಎಂದು ಅಣಕಿಸುತ್ತಿದ್ದದ್ದು.
ಹುಟ್ಟಿದ ಸಮಯವನ್ನು ಆಧಾರವಾಗಿಟ್ಟುಕೊಂಡು ಮನುಷ್ಯನ ಜೀವನ ಫಲವನ್ನು ಲೆಕ್ಕ ಹಾಕಿ ಬರೆಯುವುದೇ ಜಾತಕ.
ಯಮನಿಗೆ ಕಾಲ ಎಂಬುವ ಹೆಸರುಂಟು. ಅವನು ಕರೆದಾಗ ಹೋಗಲೇಬೇಕು ಎನ್ನುವುದು ನಿಯಮ. ಸಾವು ಖಚಿತ.
ಕಾಲನ ಕರೆಗೆ ತಲೆಬಾಗಲೇಬೇಕು... ಬೇರೆ ದಾರಿಯೇ ಇಲ್ಲ. ಅಂತಹ ಕಾಲನ ಕರೆಗೆ ಓಗೊಟ್ಟು, ನಮ್ಮನ್ನು ಬಿಟ್ಟು ಹೊರಟವನೇ ನನ್ನ ಬಾಲ್ಯದ ಗೆಳೆಯ ಮೂರ್ತಿ (ಚಡ್ಡಿ ಸ್ನೇಹಿತ ಎನ್ನಲೇ). ಮೂರ್ತಿಗೆ ಅಂತಿಮ ವಿದಾಯ ಹೇಳಲು ಹೋದಾಗ ಭೇಟಿಯಾದದ್ದು, ಅವನ ಒಡಹುಟ್ಟಿದವರನ್ನು. ಹಳೆಯ ಕಾಲದ ನೆನಪುಗಳು ಒತ್ತರಿಸಿ ಬಂದವು. ಮಧುರ ನೆನಪುಗಳ ಸಿಹಿ, ಸಾವಿನ ಕಹಿ ಎರಡನ್ನು ಹೊತ್ತು ಬಂದಾಯಿತು.
ಎಂಥ ನೋವನ್ನೂ ಗುಣಮಾಡುವ ಶಕ್ತಿ ಕಾಲಕ್ಕಿದೆ. ಕಾಲಾಯ ತಸ್ಮೈ ನಮಃ ಎಂದು ನೆನೆಯುತ್ತಾ...
ನಮಸ್ಕಾರ...
ಡಿ ಸಿ ರಂಗನಾಥ ರಾವ್
9741128413





Comments
Post a Comment