ಹುಡುಕಾಟ
ಮೊನ್ನಿನ ಒಂದು ಕಾರ್ಯಕ್ರಮಕ್ಕೆ, ನನ್ನ ಸ್ನೇಹಿತ ಬರಲು ಬಹಳ ತಡವಾಯಿತು. ಅವನಿಗಾಗಿ ಕಾಯುತ್ತಾ ಕುಳಿತ ನಮಗೆಲ್ಲ ಸ್ವಲ್ಪ ಅಸಮಾಧಾನ. ಅವನು ಕೊಟ್ಟ ಕಾರಣ “ನನ್ನ ಮಗಳು ಗಾಡಿ ತಗೊಂಡು ಹೋಗಿದ್ದೋಳು ಬೀಗದ ಕೈ ಎಲ್ಲೋ ಇಟ್ಟು ಮರೆತಿದ್ದಾಳೆ. ಅದನ್ನು ಹುಡುಕಿ ಹುಡುಕಿ, ಸಿಗದೇ ಕೋಪ ಬಂದು ಅವಳಿಗೆ ಬೈದು, ಅವಳು ಅತ್ತು , ಕಡೆಗೆ ಅದು ಸಿಕ್ಕಿದ್ದು ಫ್ರಿಜ್ಜಿನಲ್ಲಿ.. ಅಂತೂ ಬಂದೆ"
ತಕ್ಷಣ ನೆನಪಿಗೆ ಬಂದದ್ದು " ಈ ಹುಡುಗ್ರು ಸೂಳಾಮಕ್ಕಳು ಇಟ್ಟ ಸಾಮಾನು ಇಟ್ಟ ಕಡೆ ಇಡಲ್ಲ.. ಬೇಕಂದ್ರೆ ಹುಡುಕಿ ಸಾಯ್ಬೇಕು" ಎಂಬ ನನ್ನ ಪರಿಚಯದವರ ಮಾತು.
ಹುಡುಕಾಟ ಜೀವಸಂಕುಲದ ಚರಿತ್ರೆಯಲ್ಲೇ ಮೊದಲ ಯೋಜಿತ ಕ್ರಿಯೆ ಎಂದು ನನ್ನ ಅನಿಸಿಕೆ. ಎಲ್ಲಾ ಪ್ರಾಣಿ ಪಕ್ಷಿಗಳೂ.. ಮನುಷ್ಯನನ್ನೂ ಸೇರಿ, ಮೊದಲು ಮಾಡಿದ ಕೆಲಸ ಆಹಾರವನ್ನು ಹುಡುಕುವುದೇ ಅಲ್ಲವೇ?
ಗಿಡ ಮರಗಳೂ, ನೀರು ಹಾಗೂ ಪೋಷಕಾಂಶಗಳನ್ನು ಹುಡುಕುವುದು ತಮ್ಮ ಬೇರನ್ನು ಬೆಳೆಸುವ ಮೂಲಕ.
ಮನುಷ್ಯ ಒಂದೆಡೆ ನೆಲೆ ನಿಂತು ಆಹಾರವನ್ನು ತಾನೇ ಬೆಳೆಯಲು ಪ್ರಾರಂಭ ಮಾಡಿದ ನಂತರ, ಅವನ ಹುಡುಕಾಟದ ದಿಕ್ಕು ಬದಲಾಯಿತೇ ಹೊರತು ಹುಡುಕಾಟ ನಿಲ್ಲಲಿಲ್ಲ.
ನದಿ ಮೂಲ ಋಷಿಮೂಲವನ್ನು ಹುಡುಕಬಾರದು ಎಂಬ ನಾಣ್ಣುಡಿಯಿದೆ. ಎರಡೂ ಹಿಂದಕ್ಕೆ ಚಲನೆಯಾದ್ದರಿಂದ ಹಾಗೆ ಹೇಳಿರಬಹುದೇ?
ನದಿ ಸಾಗಿ ಬಂದ ಕೊರಕಲುಗಳು, ಪ್ರಪಾತಗಳು ಇವೆಲ್ಲವನ್ನು ದಾಟುವುದು ಕಷ್ಟ. ಹಾಗೆ ಋಷಿ ಮೂಲವನ್ನು ಹುಡುಕುತ್ತಾ ಹೋದಾಗ, ಮನಸ್ಸಿಗೆ ಹಿತವಲ್ಲದ ವಿಷಯಗಳು ಎದುರಾಗಬಹುದು. ಇದಕ್ಕೆ ಉದಾಹರಣೆ ಎಂದರೆ ಎಸ್ಎಲ್ ಭೈರಪ್ಪನವರ ವಂಶವೃಕ್ಷ ಕಾದಂಬರಿಯ ಶ್ರೋತ್ರಿಗಳ ಹುಟ್ಟಿನ ಹಿನ್ನೆಲೆ.
ಅವರದೇ ಅನ್ವೇಷಣೆ ಕಾದಂಬರಿಯ ಹೆಸರಲ್ಲೇ ಹುಡುಕಾಟವಿದೆ.
ರಾಮಾಯಣದ ಬಹುಭಾಗ ಇರುವುದೇ ಸೀತೆಯ ಹುಡುಕಾಟದಲ್ಲಿ. ಗೋದಾವರಿ ದೇವಿ ಮೌನವಾಂತಿಹೆ ಏಕೆ ವೈದೇಹಿ ಏನಾದಳು? ಎಂದು ಪ್ರಲಾಪಿಸುತ್ತಾ , ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುವ ಮನ ಕಲಕುವ ದೃಶ್ಯ ದಶಾವತಾರ ಸಿನಿಮಾದ್ದು. ಲಿಂಕ್ ಒತ್ತಿ ನೋಡಿ.
https://youtube.com/clip/UgkxdX1VfLuc6TUuQ3YIJyCyhf3v0IjfwMJr?si=03SmH5WvHDeqmw1k
ಹನುಮಂತನಾದರೋ... ಸೀತೆಯ ದರ್ಶನಕ್ಕಾಗಿ ಲಂಕೆಯ ಮೂಲೆ ಮೂಲೆಯನ್ನು ಹುಡುಕಿ, ಅಶೋಕ ವನದಲ್ಲಿ ಸೀತೆಯನ್ನು ಕಂಡದ್ದು.
ಅಷ್ಟೇಕೆ ಭಾರತವನ್ನು ಹುಡುಕಲು ಹೊರಟ ಕ್ರಿಸ್ಟೋಫರ್ ಕೊಲಂಬಸ್, ಅಮೆರಿಕವನ್ನು ತಲುಪಿದ್ದು, ದಾರಿ ತಪ್ಪಿದ ಪರಿಣಾಮ.. ಎಂದು ಶಾಲಾ ಕಾಲದ ಚರಿತ್ರೆಯ ಪಾಠದಲ್ಲಿ ಓದಿದ್ದು.
ಆಗಿನ ಕಾಲಕ್ಕೆ ದಿಕ್ಕು ತಿಳಿಯಲು ಇದ್ದದ್ದು ಸೂರ್ಯ ಚಂದ್ರ ಮತ್ತು ಕೆಲ ನಕ್ಷತ್ರಗಳು.. ಅದರಲ್ಲೂ ಧ್ರುವತಾರೆ.
ಕಾಲಾಂತರದಲ್ಲಿ ಉತ್ತರದಿಕ್ಕನ್ನು ತೋರಿಸುವ ದಿಕ್ಸೂಚಿ, ಸಮುದ್ರದ ದಂಡೆಯ ಪಕ್ಕದಲ್ಲಿ ಕಟ್ಟಿರುತ್ತಿದ್ದ ಲೈಟ್ ಹೌಸ್...ಹೀಗೆ.
ಈಗಂತೂ GPS ಬಂದು ನಾವಿರುವ ಜಾಗವನ್ನು ನಿಖರವಾಗಿ ತಿಳಿಯಬಹುದು ಹಾಗೂ ಇತರರಿಗೂ ತಿಳಿಸಬಹುದು. ಎಂತಹ ಅವಿಷ್ಕಾರಗಳು.
ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿ ಯವರು ಬರೆದು ಅಶ್ವಥ್ ಅವರು ಹಾಡಿರುವ ಒಂದು ಕವನದಲ್ಲಂತೂ " ಕಲ್ಲ ಹರಳನು ಹುಡುಕಿ, ಹುಡುಕೀ..ಹುಡುಕಿ... ಎಲ್ಲಿಗೋ ಎಸೆವಾಗ," ಮುಂದುವರಿದು " ಹುಡುಕುತಿದೆ ಆ ಹತ್ತು ಬೆರಳು" ಎಂದು ಮುಗಿಯುವುದು ಎಂಥ ಸುಂದರ ಕಲ್ಪನೆ. ಅದರ ವಿಡಿಯೋ ತುಣುಕು ನಿಮಗಾಗಿ.
https://youtube.com/clip/UgkxFTgAVO0leMZWnaVDfbNzhupBUybMMLbF?si=XCN5aw0fLTVUEeCU
https://youtube.com/clip/Ugkx6q6sE4wDxPVfBNJHn-WmOC60-yeNu_Vs?si=B_Gg4PrNRTCpZFiZ
ಚಿಕ್ಕಂದಿನಲ್ಲಿ ಆಡುತ್ತಿದ್ದ ಕಣ್ಣಾ ಮುಚ್ಚಾಲೆ ಆಟದಲ್ಲಿ ಹುಡುಕುವುದೇ ಮುಖ್ಯ ಅಂಗವಾಗಿತ್ತು.
ಕಳ್ಳ ಪೋಲಿಸ್ ಆಟದಲ್ಲಿ , ನಿಜ ಜೀವನದಲ್ಲಿ ಪೊಲೀಸರ ಬಹು ಮುಖ್ಯ ಕೆಲಸ, ಕಳ್ಳರನ್ನು ಹುಡುಕಿ, ಹಿಡಿಯುವುದೇ ಆಗಿದೆ.
ಇಂಗ್ಲಿಷ್ ಪದಕ್ಕೆ ಕನ್ನಡ ಅರ್ಥವನ್ನು ತಿಳಿಯಲು dictionary ಯಲ್ಲಿ alphabatical order ನಲ್ಲಿ ಹುಡುಕುವುದು ಒಂದು ಕ್ರಮ.
Atlas ಪುಸ್ತಕದಲ್ಲಿನ ಭಾರತದ Map ನಲ್ಲಿ ಒಂದು ಊರಿನ ಹೆಸರು ಹೇಳಿ, ಅದನ್ನು ಎದುರಾಳಿ ಹುಡುಕಿ ತೋರಿಸುವುದು ಒಂದು ಆಟವಾಗಿತ್ತು.
Notice Board ನಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ, ಅದರಲ್ಲಿ ನಮ್ಮ ಹೆಸರನ್ನು ಹುಡುಕುವುದು, ಪೇಪರ್ ನಲ್ಲಿ ಬರುತ್ತಿದ್ದ ಫಲಿತಾಂಶಗಳಲ್ಲಿ, ನಮ್ಮ ನಂಬರನ್ನು ಹುಡುಕುವುದು, ಮಿಶ್ರಿತ ಭಾವದಿಂದ ಕೂಡಿರುತ್ತಿತ್ತು.
ಗಿಡ ಗಂಟೆಗಳಲ್ಲಿ ಬಿಟ್ಟಿರುತ್ತಿದ್ದ ಬಗೆ ಬಗೆಯ ಹಣ್ಣುಗಳನ್ನು ಹುಡುಕಿ ತಿನ್ನುವುದರಲ್ಲಿ ಇದ್ದ ಖುಷಿಯನ್ನು ನೆನೆದರೆ ಮೈ ನವಿರೇಳುತ್ತದೆ.
ಜೀವನವೆಲ್ಲ ಒಂದಲ್ಲ ಒಂದು ಕಾರಣಕ್ಕೆ ಹುಡುಕಾಟ / ತಡಕಾಟದಲ್ಲೇ ಕಳೆಯುತ್ತದೆ.
ಈಗಂತೂ ಚಿಕ್ಕ ಮಗುವನ್ನು ಶಾಲೆಗೆ ಸೇರಿಸಲು, ಹುಡುಕಾಟ.. ಒಳ್ಳೆಯ ಶಾಲೆ, ಅದಕ್ಕೆ ತೆರಬೇಕಾದ ಹಣ, ಮನೆಯಿಂದ ಇರುವ ದೂರ ಎಲ್ಲವನ್ನು ಪರಿಗಣಿಸಬೇಕಾಗುತ್ತದೆ.
ಓದು ಮುಗಿದಾದ ನಂತರ ಕೆಲಸಕ್ಕಾಗಿ ಹುಡುಕಾಟ.
ಮದುವೆಯ ಸಮಯದ ಹೆಣ್ಣು ಗಂಡಿಗಾಗಿ ಹುಡುಕಾಟ, ನಿಜಕ್ಕೂ ಒಂದು ಸವಾಲು. ಮೊದಲ ಕಾಲದಲ್ಲಿ ಹೆಣ್ಣು ಮಗಳಿಗಾಗಿ ಗಂಡಿನ ಹುಡುಕಾಟ, ಈಗೀಗಂತೂ, ಹೆಣ್ಣು ಮಕ್ಕಳು ಸಿಗುವುದೇ ದುಸ್ತರವಾಗಿದೆ... ಹುಡುಕಿ ಹುಡುಕಿ ಸಾಕಾಗಿ, ಸುಸ್ತಾಗಿ.. ಕೈ ಚೆಲ್ಲಿದ ಅಪ್ಪ ಅಮ್ಮಂದಿರನ್ನು ನೋಡಿದ್ದೇನೆ.
ಸ್ವಂತ ಮನೆ ಮಾಡಬೇಕು ಎಂಬ ಇಚ್ಛೆ... ನಮ್ಮ ಅಭಿರುಚಿಗೆ ಹಾಗೂ ಹಣಕಾಸಿನ ಮಿತಿಗೆ ಹೊಂದುವಂತಾ ಜಾಗ / ಮನೆಯ ಹುಡುಕಾಟ ಒಂದು ಸಾಹಸವೇ ಸರಿ.
ಜೀವನ ಪಯಣದಲ್ಲಿ ಬರುವ ಏರಿಳಿತಗಳ ಹೊಡೆತದಲ್ಲಿ ನೆಮ್ಮದಿಯ ಹುಡುಕಾಟವು ಜೀವನದ ಅವಿಭಾಜ್ಯ ಅಂಗ.
ಇನ್ನು ಮೋಕ್ಷ ಪಡೆಯಲು ಇರುವ ದಾರಿಗಳಲ್ಲಿ ನಮಗೆ ಯಾವುದು ಸೂಕ್ತವೋ ಅದನ್ನು ಆರಿಸುವಲ್ಲಿಯೂ ಹುಡುಕಾಟವೇ ಸರಿ. ಕಾಡಿನ ಮಧ್ಯದಲ್ಲಿ / ಗಿರಿ ಗುಹೆಗಳಲ್ಲಿ ತಪಸ್ಸು ಮಾಡುತ್ತಾ ದೇವರನ್ನು ಕಾಣುವ ಇಚ್ಚೆಯು ಒಂದು ವಿಧವಾದ ಹುಡುಕಾಟವೇ.
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ ... ಜಿ ಎಸ್ ಶಿವರುದ್ರಪ್ಪನವರ ಈ ಕವಿತೆ ಪ್ರೀತಿ ಸ್ನೇಹಗಳಲ್ಲಿ ದೇವರನ್ನು ಕಾಣಬೇಕು ಎಂದು ಸಾರುತ್ತದೆ.
ಎಷ್ಟೋ ಸಲ ನಮ್ಮ ಹುಡುಕಾಟವು ವ್ಯರ್ಥವಾಗುತ್ತದೆ... ಹುಲ್ಲಾಮೆಯಲ್ಲಿ ಸೂಜಿಯನ್ನು ಹುಡುಕಿದಂತೆ (Search needle in a haystack ..ಒಂದು ಇಂಗ್ಲಿಷ್ ನಾಣ್ಣುಡಿ) , ಅಥವಾ ಒಬ್ಬ ಕುಡುಕ ಎಲ್ಲೋ ಕಳೆದು ಹೋದ ಹಣವನ್ನು, ಕತ್ತಲೆಯಾದ ಮೇಲೆ ಬೆಳಕಿರುವ ಜಾಗದಲ್ಲಿ ಹುಡುಕಿದಂತೆ.
ಮನೆಯಲ್ಲಿ ಬೇಕಾದ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಹುಡುಕದಂತೆ, ಸಿಗಲು ಅದಕ್ಕೊಂದು ಜಾಗ ನಿಗದಿಪಡಿಸಿ ಅಲ್ಲೇ ಇಡುವುದು ಒಂದು ಅನುಸರಿಸಬೇಕಾದ ಪದ್ಧತಿ ಇದ್ದರೆ ಚಂದ ಎನ್ನುವುದು ಸಾಮಾನ್ಯ ಅಭಿಪ್ರಾಯ A place for every thing and every thing in its place ಎನ್ನುವುದು ಎಷ್ಟು ಸೂಕ್ತ ಅಲ್ಲವೇ? ಆದರೆ ಇದು ವಾಸ್ತವವಾಗಿ ಎಷ್ಟರಮಟ್ಟಿಗೆ ರೂಢಿಸಲ್ಪಟ್ಟಿದೆ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಮನೆಗಳಲ್ಲೂ ಕೆಲವು ವಸ್ತುಗಳನ್ನು ಭದ್ರವಾಗಿಡಲು ಯೋಚಿಸಿ, ಒಂದು ಜಾಗದಲ್ಲಿ ಇಟ್ಟು ಅದನ್ನು ಮರೆತು... ಅದು ಎಷ್ಟು ಭದ್ರವಾಗಿ ಇರುತ್ತದೆ ಎಂದರೆ, ಸಮಯಕ್ಕೆ ಕೈಗೆ ಸಿಗದಷ್ಟು. ಯಾವಾಗಲೋ, ಬೇರೇನನ್ನೋ ಹುಡುಕುವಾಗ ಧುತ್ತೆಂದು ಮುಂದೆ ನಿಂತು ನಮ್ಮನ್ನೇ ನಗೆ ಪಾಟಲಿಗೆ ಈಡಾಗುವಂತೆ ಮಾಡುತ್ತದೆ.
UPS ಇರದ ಆ ಕಾಲ. ಕರೆಂಟ್ ಹೋದಾಗ ಮೊಂಬತ್ತಿ (candle) ಹಚ್ಚುವುದು ವಾಡಿಕೆ. ತಕ್ಷಣ ಮೊಂಬತ್ತಿ ಹಾಗೂ ಬೆಂಕಿ ಪಟ್ಟಣಕ್ಕೆ ಹುಡುಕಾಟ. ಅವರವರ ನೆನಪಿನಲ್ಲಿರುವಂತಹ ಜಾಗವನ್ನು ಎಲ್ಲರೂ ಹೇಳುವವರೇ.. ಒಂದಷ್ಟು ಗೊಂದಲ ಹಾಗೂ ಪರಸ್ಪರ ದೂಷಣೆ. ಇದನ್ನು ತಪ್ಪಿಸಲು ಮಾಡಿದ ಉಪಾಯವೇ... ಕತ್ತಲೆಯಲ್ಲಿ ಹೋಗಿ ಕೈಯಿಟ್ಟರೂ ಮೋಂಬತ್ತಿ ಹಾಗೂ ಬೆಂಕಿ ಪಟ್ಟಣ ಸಿಗುವಂತಹ ಜಾಗ ನಿಗದಿಪಡಿಸಿದ್ದು, ಜೊತೆಗೆ ಪಾಲಿಸಿದ್ದು ಸಹ.
ಮನಕಲಕುವ ಹುಡುಕಾಟದ ಒಂದು ಪ್ರಸಂಗ ಕೆಲ ವರ್ಷ ಗಳ ಹಿಂದೆ ನಡೆದದ್ದು. ಪತ್ರಿಕೆಯಲ್ಲಿ ಓದಿದ್ದು. ನನ್ನ ನೆನಪಿನ ಅಂಗಳದಿಂದ ಹುಡುಕಿ ತೆಗೆದಿದ್ದೇನೆ... ಆಸ್ಟ್ರೇಲಿಯಾ ಮೂಲದ ದಂಪತಿಗಳು, ಭಾರತ ದೇಶದ ಒಬ್ಬ ಚಿಕ್ಕ ಮಗುವನ್ನು ದತ್ತು ತೆಗೆದುಕೊಂಡು, ಅದನ್ನು ಎಲ್ಲ ಅನುಕೂಲಗಳೊಂದಿಗೆ ಬೆಳೆಸಿ ರೂಪಿಸಿದ್ದು. ಒಂದು ಹಂತದಲ್ಲಿ ಯುವಕನಾದ ಆ ಮಗುವಿಗೆ, ತನ್ನ ಊರು, ತನ್ನವರನ್ನು ನೋಡಬೇಕೆಂಬ ಹಂಬಲ ಅತಿಯಾಗಿ... ತನ್ನ ನೆನಪಿನ ಆಧಾರದ ಮೇಲೆ ಹುಡುಕಲು ಪ್ರಯತ್ನಿಸಿ ನಿರಾಶನಾಗಿ ಹಿಂತಿರುಗುವ ಸಮಯದಲ್ಲಿ, ಆಕಸ್ಮಿಕವಾಗಿ ಯಾರದೋ ಬಾಯಲ್ಲಿ ತನ್ನ ಊರಿನ ಹೆಸರನ್ನು ಕೇಳಿ, ಸಮಯಕ್ಕೆ ಸರಿಯಾಗಿ ಅದು ನೆನಪಿಗೆ ಬಂದು, ಆ ಊರಿಗೆ ಹೋಗಿ ಹಿಂದಿನ ಸಂಗತಿಗಳನ್ನು ಊರಿನ ಜನರೊಡನೆ ಹಂಚಿಕೊಂಡು, ಆ ಊರನ್ನೇ ಬಿಟ್ಟು ಪಕ್ಕದ ಊರಿನಲ್ಲಿ ನೆಲೆಸಿದ್ದ ತನ್ನ ಹೆತ್ತ ತಾಯಿಯನ್ನು ಭೇಟಿ ಮಾಡಿ... ತನ್ನ ಸಾಕಿದವರ ಜೊತೆಗೆ ವಾಪಸಾದ ಪ್ರಸಂಗ.
ಮಕ್ಕಳಿಲ್ಲದ ಆ ದಂಪತಿ ಮಗುವಿಗಾಗಿ ಹುಡುಕಾಟ ನಡೆಸಿ, ಭಾರತಕ್ಕೆ ಬಂದು ಒಂದು ಮಗುವನ್ನು ಪಡೆದದ್ದು, ಯಾವ ಜನ್ಮದ ಋಣವೋ.
ದಾರಿ ಯಾವುದಯ್ಯ, ವೈಕುಂಠಕೆ ದಾರಿ ತೋರಿಸಯ್ಯ ಎಂದ ಪುರಂದರ ದಾಸರು.. ವೈಕುಂಠದ ದಾರಿ ಹುಡುಕುತ್ತಿದ್ದದ್ದು ಸತ್ಯ.
ಪರ ಊರಿಗೆ ಹೋದಾಗ, ಹೊಸಬರ ಮನೆಗಳಿಗೆ ಹೋಗುವಾಗ ದಾರಿ ಹುಡುಕುವುದು ಸಹಜಕ್ರಿಯೆ. ಈಗ ದಾರಿ ಹುಡುಕಲು ಗೂಗಲ್ ಸಹಾಯ ಸುಲಭವಾಗಿ ದೊರೆಯುತ್ತದೆ. ದಾರಿ ತಪ್ಪಿಸಿದ ಸಂದರ್ಭಗಳೂ ಉಂಟು.
ಯಾವುದೇ ಕೆಲಸವನ್ನು ಮಾಡುವಾಗ, ಅದಕ್ಕೆ ಸುಲಭವಾದ ದಾರಿಯನ್ನು ಹುಡುಕುವುದು ಮಾನವನ ಸಹಜ ಚಿಂತನೆ. ಅಂತಹ ಮೊದಲ ಮಾರ್ಗಗಳನ್ನು ಹುಡುಕಿದವರು ಯಾರೋ, ಬಹಳ ಸಲ ಅವರನ್ನು ನೆನಪಿಸಿಕೊಳ್ಳುವುದೇ ಇಲ್ಲ. ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಂತೆ.. ಅಕ್ಕಿಯೊಳಗನ್ನವನ್ನು ಕಂಡವರು ಮೊದಲಾರು ಅಕ್ಕರದ ಬರಹಕ್ಕೆ ಮೊದಲಿಗನ ದಾರು.. ಇಬ್ಬರನ್ನು ಇಂದಿಗೂ ಯಾರು ನೆನೆಯುವುದೇ ಇಲ್ಲ.
ನೆನಪಿಸಿಕೊಳ್ಳುವುದೂ ಸಹ ಹಳೆಯದನ್ನು ಹುಡುಕಿ ತೆಗೆಯುವ ಪ್ರಕ್ರಿಯೆಯೇ.
ಜಾತ್ರೆಯಲ್ಲಿ ಕಳೆದುಹೋದ ಮಗುವನ್ನು ಹುಡುಕಲು ಸಾಧ್ಯವಾಗದೆ, ಅದು ಬೇರೆ ಯಾವುದೋ ಪರಿಸರ ರೂಪಿಸಿದಂತೆ ಬೆಳೆದು... ಈ ಕಥೆಯ ಎಳೆ ನಮ್ಮ ಚಿತ್ರರಂಗದಲ್ಲಿ ಬಹುವಾಗಿ ಉಪಯೋಗಿಸಲ್ಪಟ್ಟಿದ್ದು.
ನನಗೊಂದು ಅಭ್ಯಾಸವಿದೆ... ಬಹಳ ಜನರು ಇದಕ್ಕೆ ಸಂಬಂಧಿಸಿದ ಹಾಗೆ, ಸಮ್ಮತಿಸಿದ್ದಾರೆ . ಕಡಲೆಕಾಯಿಯನ್ನು ತಿಂದಾದ ಮೇಲೆ... ಎಷ್ಟು ತಿಂದಿದ್ದರು ಸರಿ, ಸಿಪ್ಪೆಯಲ್ಲಿ ಅಕಸ್ಮಾತ್ ಬಿದ್ದಿರುವ, ಬೀಜಕ್ಕಾಗಿ ನಡೆಸುವ ಹುಡುಕಾಟ ಹವ್ಯಾಸವೋ / ಆಶಾ ಭಾವನೆಯೋ ಇಲ್ಲ ರೂಡಿಸಿಕೊಂಡ ಒಂದು ಚಟವೋ... ತಿಳಿಯದು.
ಮಾನವನ ಹುಡುಕಾಟ ಎಷ್ಟು ಮುಂದುವರೆದಿದೆ ಎಂದರೆ ಚಂದ್ರ, ಮಂಗಳದಂತಹ ಅನ್ಯಗ್ರಹದಲ್ಲಿ ನೀರಿನ ಅಂಶವಿದೆಯಾ... ಜೀವಿಗಳಿದ್ದಾರಾ ಎಂಬ ಕುತೂಹಲದೊಂದಿಗೆ ಬಾಹ್ಯಾಕಾಶ ಸಂಶೋಧನೆಗಳು ನಡೆಯುತ್ತಿವೆ.
ಹುಡುಕಾಟದ / ಸಂಶೋಧನೆಯ ಕೊನೆಯ ಘಟ್ಟವೇ ಅವಿಷ್ಕಾರಗಳು.
ಕೊನೆಯದಾಗಿ...
ತಿರುಪತಿಯಲ್ಲಿ ಗೋವಿಂದ ಎಂಬ ಹೆಸರಿನ ಹುಡುಗ ಕಳೆದು ಹೋಗಿದ್ದಾನೆ. ಅಪ್ಪ ಮಗನನ್ನು ಹುಡುಕುವ ಆತಂಕದಿಂದ ಮಗನ ಹೆಸರನ್ನು " ಗೋವಿಂದಾ.. ಗೋವಿಂದಾ.." ಎಂದು ಜೋರಾಗಿ ಕೂಗುತ್ತಾನೆ. ಸುತ್ತಲಿದ್ದ ಭಕ್ತ ಸಮೂಹ ತಕ್ಷಣ ಗೋವಿಂದಾ.. ಗೋವಿಂದಾ.. ಎಂದು ಭಕ್ತಿ ಪೂರ್ವಕವಾಗಿ ಪ್ರತಿಕ್ರಿಯಿಸುತ್ತದೆ. ಪಾಪ ಅಪ್ಪನ ಕೂಗು ಮಗನನ್ನು ಮುಟ್ಟುವುದು ಹೇಗೆ..... ಗೋವಿಂದನೇ ಬಲ್ಲ.
ನಮಸ್ಕಾರ..
ಡಿ ಸಿ ರಂಗನಾಥ ರಾವ್.
9741128413

ವಿನೋದ ಭರಿತ ಲೇಖನ ಆದರೂ ಜೀವನದ
ReplyDeleteಅನೇಕ ಹುಡುಕಾಟ ದಲ್ಲಿರುವ ಕಾಟ ದಿಂದ ತಪ್ಪಿಸಿಕೊಳಲು ಸಾಧ್ಯವಿಲ್ಲ. ಬಾಲ್ಯದಲ್ಲಿ ಆಟಿಕೆಗಳ ಹುಡು (ಕಾಟ) ಓದಿಗಾಗಿ ಶಾಲಾ ಕಾಲೇಜುಗಳ ಹುಡು (ಕಾಟ) ಕೆಲಸದ ಹುಡು(ಕಾಟ ) ಸರಿಜೋಡಿಗಾಗಿ ಹುಡು(ಕಾಟ)
ಏಳಿಗೆ ಹಾಗೂ ಸಂಪತಿಗಾಗಿ ಹುಡು(ಕಾಟ)
ಅಲೆದಾಟ ಹಾಗೂ ಪ್ರವಾಸಕ್ಕಾಗಿ ಹುಡು(ಕಾಟ) ಅರೋಗ್ಯಕ್ಕಾಗಿ ಹುಡು(ಕಾಟ) ಕಡೆಗೆ ಮನಶಾಂತಿಗಾಗಿ ಹುಡು(ಕಾಟ)
ಇಷ್ಟಾದರೂ ನಮಗೆ ಯಾವುದು ಸರಿ ಅಥವಾ ಯಾವುದರಿಂದ ಸಂತಸ ಹಾಗೂ ನೆಮ್ಮದಿ ಎಂದು ತಿಳಿಯದೆ ಹುಡುಕಾಟದಲ್ಲೇ ಮುಗಿಸುವ ಜೀವನದ ಆಟ
ಸುಂದರವಾಗಿ ಸರಳವಾಗಿ ಎಲ್ಲಾ ಪ್ರಸಂಗ ಗಳನ್ನು ಹುಡುಕಿ ಬರೆದ ನಿಮಗೆ
ಧನ್ಯವಾದಗಳು
ಬಾಬು
ಜೀವನ ನಿರ್ವಹಣೆ ಗಾಗಿ ಬಹಳಷ್ಟು ಹುಡುಕಾಟದ ಬಗ್ಗೆ ನೀವು ಕೂಡ ವಿಷಯಗಳನ್ನು ಸೊಗಸಾಗಿ ಹುಡುಕಿ ಬರೆದಿದ್ದೀರಿ sir.
ReplyDelete