ಅಳುಕು ಮನಸ್ಸು
good evening sir ಎಂದು ಹೇಳುತ್ತಾ ಒಳ ಬಂದ ಆ ಹೆಣ್ಣು ಮಗಳು, sir i Know little kannada, but can't express well, i can speak in telugu or english. ( ಆಕೆ ಇಂಗ್ಲೀಷಿನಲ್ಲಿ ಹೇಳಿದ ಮಾತುಗಳ ಭಾವಾನುವಾದ, ಈ ಲೇಖನ)
ಮೊದಲ ಪರಿಚಯದ ನಂತರ, ಮಾತಿಗಾರಂಭಿಸಿದ ಪಲ್ಲವಿ, "ಮನಸ್ಸು ಗಲಿಬಿಲಿಯಿಂದ ತುಂಬಿದೆ, ಏನೂ ಮಾಡಲಾಗದ ಅಸಹಾಯಕತೆ ಕಾಡುತ್ತಿದೆ.. ಭವಿಷ್ಯದಲ್ಲಿ ಬರಿ ಕತ್ತಲೆನೋ ಅನಿಸುತ್ತಿದೆ, ಏನು ಮಾಡಲಿ ಹೇಳಿ...ಎಂದು ಪ್ರಾರಂಭಿಸಿ..
ಪಲ್ಲವಿ ಒಂದು ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಆಂಧ್ರಪ್ರದೇಶ ಮೂಲದವಳು. PG ಯಲ್ಲಿ ಇದ್ದುಕೊಂಡು ಸುಮಾರು ಎರಡು ವರ್ಷದಿಂದ ಕೆಲಸ ಮಾಡುತ್ತಿರುವವಳು. ಅಲ್ಲಿ ಪರಿಚಯವಾದದ್ದು ಪುರು (ಪುರುಷೋತ್ತಮ). ಕೆಲಸದ ವಿಚಾರವಾಗಿ ಆಗಾಗ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ, ಇಬ್ಬರಲ್ಲೂ ಸ್ನೇಹ ಬೆಳೆದಿದೆ. ಸ್ನೇಹ ಆತ್ಮೀಯತೆಗೆ... ಹಾಗಾಗಿ ತಮ್ಮ ಅಂತರ್ಯದ ವೈಯುಕ್ತಿಕ ವಿಚಾರಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಪುರುಷೋತ್ತಮ ಅಪ್ಪ ಅಮ್ಮನಿಗೆ ಎರಡನೆಯ ಮಗ. ಓದಿನಲ್ಲಿ ತುಂಬಾ ಜಾಣನೇನಲ್ಲ. ಪದವಿಯ ನಂತರ ತನ್ನ ಅಣ್ಣನ ಸ್ನೇಹಿತನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪಲ್ಲವಿಗೆ ಒಬ್ಬ ಅಣ್ಣ ಒಬ್ಬ ತಂಗಿ. ಅಣ್ಣ ಮದುವೆಯಾಗಿ ಅಮೆರಿಕದಲ್ಲಿ ಇದ್ದಾನೆ. ತಂಗಿಗೆ ಇನ್ನೂ ಮದುವೆಯಾಗಿಲ್ಲ. ಪಲ್ಲವಿಗೆ ಸಂಬಂಧದಲ್ಲೇ ಮದುವೆಯಾಗಿ ವರ್ಷದೊಳಗೇ ವಿಚ್ಛೇದನವಾಗಿದೆ.
ಜೀವನದ ವಿವಿಧ ಘಟನೆಗಳನ್ನು ಹಂಚಿಕೊಂಡ ನಂತರ ಪರಸ್ಪರ ಹತ್ತಿರವಾಗಿದ್ದಾರೆ. ಒಬ್ಬರಿಗೊಬ್ಬರು ಅನುಕಂಪ ತೋರಿಸಿ, ಸಮಾಧಾನ ಮಾಡುತ್ತಾರೆ.. ಇದರ ಮುಂದುವರಿದ ಭಾಗವೇ...ಮದುವೆಯ ಚಿಂತನೆ.
ಈ ಮಧ್ಯೆ ಪಲ್ಲವಿಯ ಅಪ್ಪ ಅಮ್ಮ, ಮಗಳಿಗೆ ಇನ್ನೊಂದು ಸಂಬಂಧ ನೋಡಿ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಗಳ ಬಳಿ ಮಾತನಾಡಿದ್ದಾರೆ, ಅವಳ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಇದರ ಪರಿಣಾಮ ಪಲ್ಲವಿ, ತನ್ನ ಮೇಲಿರುವ ಒತ್ತಡವನ್ನು ಪುರುಷೋತ್ತಮನಿಗೆ ತಿಳಿಹೇಳಿ ಮುಂದಿನ ಹೆಜ್ಜೆ ಇಡಲು ಸೂಚಿಸಿದ್ದಾಳೆ.
ಸಮಸ್ಯೆ ಶುರುವಾಗಿದ್ದು ಇಲ್ಲಿಂದಲೇ. ಅಪ್ಪ ಅಮ್ಮನೊಡನೆ ಮಾತನಾಡುವೆನೆಂದು ಹೇಳಿದ ಪುರುಷೋತ್ತಮ, ಏನೋ ಕಾರಣ ಕೊಟ್ಟು ಮುಂದೂಡುತ್ತಲೇ ಇದ್ದಾನೆ. ಈ ಮಧ್ಯೆ ಪಲ್ಲವಿಯ ಮೊದಲನೆಯ ಮದುವೆ, ಗಂಡನೊಂದಿಗಿನ ಸಂಬಂಧ, ಕಳೆದ ಸಮಯಗಳು ಇದರ ಬಗ್ಗೆ ಮಾತಾಡಿದ್ದಾನೆ. ಇದು ಪಲ್ಲವಿಗೆ ಮುಜುಗರದ ವಿಷಯವಾಗಿದೆ. ಗಂಡನೊಡನೆ ದೈಹಿಕ ಸಂಪರ್ಕದ ಬಗ್ಗೆ ಕೆಲವು ಕುತೂಹಲದ ಪ್ರಶ್ನೆಗಳನ್ನು ಕೇಳಿದಾಗ ಪಲ್ಲವಿಗೆ ತುಂಬಾ ಬೇಜಾರಾಗಿದೆ, ಸ್ವಲ್ಪಮಟ್ಟಿನ ಅಸಹ್ಯವೂ ಆಗಿದೆ.
ಪಲ್ಲವಿಯೊಂದಿಗೆ ಬಂದ ಪುರುಷೋತ್ತಮನ ಮಾತುಗಳು, ಮದುವೆಯ ವಿಷಯಕ್ಕೆ ಬಂದಾಗ ಸ್ಪಷ್ಟತೆ ಇರಲಿಲ್ಲ. ಈಗಿನ ಕೆಲಸವು ಅಣ್ಣನ ಹಂಗಿನಲ್ಲಿ ಇದ್ದಂತೆ ಎಂಬ ಭಾವನೆ ಇದೆ. ಚಿಕ್ಕಂದಿನಿಂದ ಅಪ್ಪ ಅಮ್ಮ ಹೇಳಿದಂತೆ ಕೇಳಿ ಬೆಳೆದವನು. ಯಾವಾಗಲೂ ತನಗಿಂತ ಅಣ್ಣ ಬುದ್ಧಿವಂತ ಜಾಣ ಎಂದು ಕೇಳಿ ಕೇಳಿ, ಅಣ್ಣನ ಮೇಲೆ ಪ್ರೀತಿ ಇದ್ದರೂ, ಬೇಜಾರು ಇದೆ. ಸ್ವಲ್ಪಮಟ್ಟಿನ ತಾತ್ಸಾರವೂ ಇದೆ. ತನ್ನ ಬಗ್ಗೆ ತನಗೆ ಅನುಮಾನಗಳಿವೆ, ಆತ್ಮವಿಶ್ವಾಸದ ಕೊರತೆಯೂ ಆಗಾಗ ಇಣುಕುತ್ತದೆ. ನಿರ್ಧಾರ ಮಾಡಬೇಕಾದ್ದು ನಿನ್ನದೇ ಜವಾಬ್ದಾರಿ ಎಂದು ತಿಳಿ ಹೇಳಿದಾಗ... ಹೇಗಾದರೂ ವಾರದೊಳಗೆ ಅಪ್ಪ ಅಮ್ಮನ ಜೊತೆ ಮದುವೆಯ ಪ್ರಸ್ತಾಪವನ್ನು ಮಾಡುತ್ತೇನೆ ಎಂದು ದೃಢವಾಗಿ ಹೇಳಿದ್ದು, ಪಲ್ಲವಿಗೆ ತಕ್ಕಮಟ್ಟಿನ ಸಂತೋಷವಾಗಿತ್ತು.
ತಿಂಗಳ ನಂತರ ಬಂದದ್ದು ಪುರುಷೋತ್ತಮನ ಅಪ್ಪ ಅಮ್ಮ. ಅವರ ಮಾತುಗಳು ಮಗನನ್ನು ದೂಷಿಸುವುದು, ಮನೆಯ ವಿಚಾರಗಳನ್ನು ಯಾರೋ ಹೊರಗಿನ ಮೂರನೆಯವರೊಂದಿಗೆ ಹೇಳಿಕೊಂಡು ಪರಿಹಾರ ಹುಡುಕುವ ಮೂರ್ಖನೆಂದು, ಪಲ್ಲವಿಯು ಮಗನನ್ನು ಬುಟ್ಟಿಗೆ ಹಾಕಿಕೊಂಡ ಮಾಯಾವಿ ಎಂದೂ, ಪಲ್ಲವಿಯ ಅಪ್ಪ ಅಮ್ಮನನ್ನು ಸಮಯ ಸಾಧಕರೆಂದು, ಸೂಚ್ಯವಾಗಿ ನನ್ನನ್ನು ಹೊರಗಿನವರೆಂದು ದೂಷಿಸಿದ್ದು. ಪುರುಷೋತ್ತಮನಿಗೆ ಏನು ತಿಳಿಯುವುದಿಲ್ಲವೆಂದು, ಅವನ ಶ್ರೇಯಸ್ಸನ್ನು ಬಯಸುವವರು ತಾವೇ ಎನ್ನುವ ಒಂದೇ ದೃಷ್ಟಿಯಿಂದ ಮಾತನಾಡಿದ್ದು. ಅಪ್ಪನ ಕೊನೆಯ ಮಾತು " ಒಂದು ಕೆಲಸ ಹುಡುಕೋಕೆ ಯೋಗ್ತೆ ಇಲ್ಲ... ಇನ್ನು ಇವನು ಮದುವೆ ಮಾಡಿಕೊಂಡು ಹೆಂಡತಿನ ಸಾಕ್ತಾನಾ? ಏನೋ ವಾಸು ( ದೊಡ್ಡ ಮಗನ ಸ್ನೇಹಿತ) ಮನಸು ಮಾಡಿ ಕೆಲಸ ಕೊಟ್ಟಿದ್ದಾನೆ... ಅಲ್ಲೂ ಸರಿಯಾಗಿ ಜವಾಬ್ದಾರಿ ನಿರ್ವಹಿಸ್ತಾ ಇಲ್ಲ ಅನ್ನುವ ಅಸಮಾಧಾನ ಇದೆ. ಇದರ ಮಧ್ಯೆ ಯಾವುದೋ ದೂರ ದೇಶದ ಹುಡುಗಿ, ಭಾಷೆ ಬೇರೆ, ನಮ್ ಜಾತಿ ಅಲ್ಲ.. ಜೊತೆಗೆ ಗಂಡನ್ ಬಿಟ್ಟವಳು.. ಅವಳನ್ನು ಮದುವೆಯಾಗ್ತೀನಿ ಅಂತ ಕೂತಿದಾನೆ. ನಮಗಂತೂ ಸುತರಾಮ್ ಇಷ್ಟ ಇಲ್ಲ. ಎಂದೂ ಎದುರು ನಿಂತು ಮಾತನಾಡದವನು, ಮದುವೆಯ ವಿಷಯವನ್ನು ತೆಗೆದು ಘಟ್ಟಿಸಿ ಮಾತಾಡಿದ್ದು ಆಶ್ಚರ್ಯವಾಯಿತು. ನಂತರ ತಿಳಿದದ್ದು ಇದು ನಿಮ್ಮ ಕುಮ್ಮಕ್ಕಿನಿಂದ ಆದದ್ದು ಎಂದು. ನಮಗೆ ಇಷ್ಟ ಇಲ್ದೇ ಇದ್ದರೂ ಆ ಹುಡುಗಿಯ ಅಪ್ಪ ಅಮ್ಮನನ್ನು ಕರೆಸಿ ಮಾತಾಡಿದೆವು. ಅವರಿಗೆ ದುಡ್ಡಿನ ಮದ. ಮನೆ ಕೊಡ್ತೀವಿ, ಕಾರ್ ಕೊಡ್ತೀವಿ ಅಂತ ಹೇಳಿ, ಗಂಡ ಬಿಟ್ ಮಗಳನ್ನು ನನ್ ಮಗನಿಗೆ ಕಟ್ಟಕ್ಕೆ ಆಸೆ ತೋರಿಸ್ತಾ ಇದ್ದಾರೆ. ನಮಗೊಂಚೂರು ಇಷ್ಟ ಇಲ್ಲ. ಬೇಕಾದರೆ ಅವನು ಮದುವೆ ಮಾಡಿಕೊಳ್ಳಲಿ.. ಆದರೆ ನಮ್ಮನೆಗಂತೂ ಆ ಹುಡುಗೀನ ಕರ್ಕೊಂಡ್ ಬರಕೂಡದು, ನಾವು ಸೇರಿಸಲ್ಲ. ಇದನ್ನ ಅವನಿಗೆ ಸ್ಪಷ್ಟವಾಗಿ ಹೇಳಿದ್ದೇವೆ... ನಿಮಗೂ ಹೇಳ್ತಾ ಇದ್ದೀವಿ...” ಎಂದವರು, ಬೇರೆ ಯಾವ ಮಾತಿಗೂ ಆಸ್ಪದ ಕೊಡದೆ ಹೊರಟೇ ಬಿಟ್ಟರು.
ಸಮಸ್ಯೆ ಕಗ್ಗಂಟಾಗಿದೆ ಎನಿಸಿತು. ಕೆಲವಕ್ಕೆ ಕಾಲವೇ ಉತ್ತರ ಕೊಡಬೇಕು.
“ಪುರು, ನೀನು ಬೇಗ ನಿರ್ಧಾರ ಮಾಡಬೇಕು. ನನ್ನ ಬಗ್ಗೆ ಯೋಚನೆ ಮಾಡು. ಅಪ್ಪ ಅಮ್ಮನ ವರಾತ ಹೆಚ್ಚಾಗಿದೆ. ನಿನಗಾಗಿ ನಾನು ನಮ್ಮನೆಯವರನ್ನ ಬೇಕಾದ್ರೆ ಬಿಟ್ಟು ಬರ್ತೀನಿ, ನೀನು ನನ್ನ ಜೊತೆಯಲ್ಲಿ ಇರ್ತಿಯ ಅನ್ನುವ ಭರವಸೆ ನನಗೆ ಸಿಕ್ಕರೆ...
ನಿಮ್ಮಣ್ಣ ಹೇಳಿದ ಅಂತ, ವಾಸು ಅವ್ರು ನನ್ನತ್ರ ಸೂಚ್ಯವಾಗಿ, ನಿನ್ನ ಸಹವಾಸ ಬಿಡು, ಇಲ್ದೆ ಇದ್ರೆ ಕೆಲಸ ಬಿಡು ಅಂತ ಹೇಳಿದ್ರಲ್ಲ... ಅದು ನಿಮ್ಮಣ್ಣ ಹೇಳಿಕೊಟ್ಟಿದ್ದು ಅಂತ ಗೊತ್ತು ... ಇಲ್ದೆ ಇದ್ರೆ ನಮ್ಮ personal ವಿಷಯಾನ ಆಫೀಸಿಗೆ ತರುವ ಅವಶ್ಯಕತೆ ಇರಲಿಲ್ಲ. ನಂಗೆ ಈಗ ಬೇರೆ ಕೆಲಸ ಸಿಗಲಿಲ್ವಾ... ನೀನೂ ಬಿಡು ನಿಂಗೂ ಬೇರೆ ಕೆಲಸ ಸಿಗುತ್ತೆ...
ಬೇಡ, ನನ್ನಣ್ಣ ಹೇಳಿದಂಗೆ ಅಮೆರಿಕಾಗೆ ಹೋಗೋಣ... ಅವನು ಕೆಲಸ ಕೊಡುಸ್ತೀನಿ ಅಂತ ಹೇಳಿದಾನಲ್ಲ... ಸ್ವಲ್ಪ ದಿನ ಅವರ ಮನೆಯಲ್ಲಿ ಇರಬಹುದು, ಕೆಲಸ ಸಿಕ್ಮೇಲೆ ಬೇರೆ ಹೋಗಿ ಅಂತಾನೂ ಹೇಳಿದಾನಲ್ಲ.. ನೀನ್ಯಾಕೆ ಅದಕ್ಕೂ ತಯಾರಾಗುತ್ತಾ ಇಲ್ಲ....
ಹೇಗಿದ್ದರೂ ನನಗೆ ಕೆಲಸ ಇದೆ, ಸಮಯ ಅಂದ್ರೆ ನಮ್ಮಪ್ಪ ಅಮ್ಮ ಸಹಾಯ ಮಾಡ್ತಾರೆ... ಬಾ ಇಲ್ಲೇ ಬೇರೆ ಜೀವನ ಮಾಡೋಣ, ಕೆಲಸಾನು ಹುಡುಕು... ಯಾವುದೋ ಸಿಗುತ್ತೆ..
ನನ್ನನ್ನ ನಿಮ್ಮನೆಗೆ ಸೇರಿಸಲ್ಲ ತಾನೇ... ಪರ್ವಾಗಿಲ್ಲ ಯಾವಾಗ ಬೇಕಾದರೂ ಹೋಗಿ ನಿಮ್ಮಪ್ಪ ಅಮ್ಮನ ನೋಡ್ಕೊಂಡು ಬಾ. ಅವರಿಗೆ ಗೌರವ ಕೊಡು... ಆದರೆ ಇಷ್ಟು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಮನಸಲ್ಲಿ ಆಸೆ ಹುಟ್ಟಿಸಿ, ಈಗ ಏನು ನಿರ್ಧಾರ ಮಾಡದೇ ಇದ್ರೆ ನನ್ನ ನೋವು ಏನು ಅಂತ ನೀನು ಅರ್ಥ ಮಾಡ್ಕೋಬೇಕು. ನೆನಪಿರಲಿ ಈಗಾಗಲೇ ಒಂದು ಸಲ ಜೀವನದಲ್ಲಿ ಸೋತಿದ್ದೇನೆ... ಮದುವೆ ಮಾಡಿಕೊಳ್ಳೋಣ ಅಂತ ನೀನೇ ಹೇಳಿ, ಈಗ ಹೀಗೆ ಮಾಡಿದರೆ ನಮ್ಮಪ್ಪ ಅಮ್ಮಂಗೆ ಏನ್ ಹೇಳಲಿ...
ನಮ್ಮಪ್ಪ ಅಮ್ಮ ನಿಮ್ಮ ಮನೆಗೆ ಬಂದಾಗ ಆದ ಅವಮಾನದಿಂದ ಕುಗ್ಗಿ ಹೋಗಿದ್ದಾರೆ. ನೀನು ಏನೂ ಮಾತಾಡದೆ ಸುಮ್ಮನೆ ಕೂತಿದ್ದು ನೋಡಿ, ನೀನು ದೃಢ ನಿರ್ಧಾರ ಮಾಡಬಲ್ಲೆಯ ಎಂಬ ಬಗ್ಗೆ ಈಗಾಗಲೇ ಅವರಿಗೆ ಅನುಮಾನ ಬಂದಿದೆ. ನಿರ್ಧಾರ ಮಾಡಲೇಬೇಕಾದ ಸಮಯ ಬಂದಿದೆ... ಯೋಚನೆ ಮಾಡು"
ಪಲ್ಲವಿ ಆವೇಶದಿಂದ ಮಾತನಾಡಿದಳು. ಕಣ್ಣಂಚಿನಲ್ಲಿ ನೀರು ತುಳುಕುತ್ತಿತ್ತು. ಉತ್ತರ ಕೊಡಲಾಗದ ಪುರುಷೋತ್ತಮ, ತಲೆ ಕೆಳಗೆ ಹಾಕಿ ಕೂತಿದ್ದ.
ಪುರುಷೋತ್ತಮನ ಜೊತೆ ಒಂಟಿಯಾಗಿ ಮಾತನಾಡಲು ಪ್ರಯತ್ನಿಸಿದಾಗ....
ಚಿಕ್ಕಂದಿನಿಂದಲೂ ಮನೆಯಲ್ಲಿ ನನ್ನನ್ನು ದಡ್ಡ ಎಂದೇ ಪರಿಗಣಿಸಿದವರು. ಯಾವುದಕ್ಕೂ ನನ್ನ ಸ್ವಂತ ಚಿಂತನೆಗೆ ಬೆಲೆಯಿಲ್ಲವೇನೋ.... ಎಲ್ಲಕ್ಕೂ ಅಪ್ಪ ಅಮ್ಮನ ಮೇಲೆ ಅವಲಂಬನೆ.. ಕೆಲವು ಸಲ ಹೀನಾಯ ಭಾವ, ನನ್ನ ಮೇಲೆ ನನಗೆ ಬೇಸರ ಹಾಗೂ ಕೋಪ... ಅಂತಹ ಸಮಯದಲ್ಲಿ ಹಠ ಮಾಡಿ ಕೂಗಾಡಿದಾಗ, ಅಮ್ಮ ಸ್ವಲ್ಪಮಟ್ಟಿಗೆ ಸಂತೈಸುತಿದ್ದದ್ದು ಹಾಗಾಗಿ ಸಮಾಧಾನವಾಗುತ್ತಿದ್ದದ್ದು. ನನ್ನ ಮನಸ್ಸಿನಲ್ಲಿರುವುದನ್ನು ಹೇಳಲು ಧೈರ್ಯವೂ ಬರುತ್ತಿರಲಿಲ್ಲ, ಪದಗಳು ಸಿಗುತ್ತಿರಲಿಲ್ಲ.
ಕೆಲಸಕ್ಕೆ ಸೇರಿದ ಹೊಸದರಲ್ಲಿ ಪಲ್ಲವಿಯ ಪರಿಚಯವಾಗಿ, ಆಕೆ ನನ್ನೊಡನೆ ಚೆನ್ನಾಗಿ ಮಾತನಾಡುತ್ತಿದ್ದದ್ದರಿಂದ, ನನಗೊಂದು ವಿಶೇಷ ಅನುಭವ ಆಗುತ್ತಿತ್ತು. ಹಾಗಾಗಿ ಅವಳೊಡನೆ ಮಾತನಾಡಲು ಜೊತೆಯಾಗಿರಲು ಇಷ್ಟವಾಗುತ್ತಿತ್ತು. ಯಾವುದೋ ಒಂದು ಹಂತದಲ್ಲಿ, ಪಲ್ಲವಿಯನ್ನು ಮದುವೆಯಾದರೆ, ಸಂತೋಷವಾಗಿರಬಹುದು ಎನಿಸಿದ್ದು ನಿಜ. ಬಹಳ ಕಷ್ಟಪಟ್ಟು ಅದನ್ನು ಹೇಳಿದೆ. ಯಾವಾಗ ಮುಂದುವರೆಯಲು ಬೇಡಿಕೆ ಬಂತೋ ನನಗೆ ಒಳಗೊಳಗೆ ಭಯ, ಯಾರೇನನ್ನುವರೋ ಎನ್ನುವ ಆತಂಕ. ನಿಮ್ಮನ್ನು ಭೇಟಿ ಮಾಡಿದ ನಂತರ, ಹೇಗೋ ಕಷ್ಟಪಟ್ಟು ಅಮ್ಮನಿಗೆ ಹೇಳಿದೆ... ಅದು ಅಪ್ಪ ಹಾಗೂ ಅಣ್ಣನಿಗೆ ತಿಳಿದು ಮನೆಯಲ್ಲಿ ರಾದ್ಧಾಂತವೇ ಆಯಿತು. ಅದು ಪಲ್ಲವಿಯ ಮೇಲೆ ಪರಿಣಾಮ ಬೀರಿತು.
ಪಲ್ಲವಿಯ ಅಪ್ಪ ಅಮ್ಮ ನಮ್ಮ ಮನೆಗೆ ಬಂದಾಗ, ಮಾತುಗಳು ಸೌಹಾರ್ದವಾಗಿರಲಿಲ್ಲ. ಅವಮಾನ ಮಾಡಲೆಂದೇ ಅವರನ್ನು ಕರೆಸಿದಂತಿತ್ತು. ನನ್ನ ಮಾತಾಡುವ ಶಕ್ತಿಯೇ ಉಡುಗಿ ಹೋಗಿತ್ತು.
ಈಗಿರುವ ಕೆಲಸ ಬಿಡುವುದಕ್ಕೆ ಭಯ. ಅಮೆರಿಕಾಗೆ ಹೋಗಿ ಅಲ್ಲಿನ ವಾತಾವರಣದಲ್ಲಿ ಕೆಲಸ ಮಾಡಬಲ್ಲೆನಾ ಎಂಬ ಆತಂಕ....
ಪಲ್ಲವಿಯ ಮೊದಲನೆಯ ಮದುವೆಯ ವಿಷಯದಲ್ಲೂ ಮನಸ್ಸಿನಲ್ಲಿ ಏನೋ ಮುಜುಗರ ಅನುಮಾನ, ಅದರಲ್ಲೂ ಅಪ್ಪ ಕೂಗಾಡುತ್ತಾ " ಗಂಡ ಬಿಟ್ಟವಳು, ಸೆಕೆಂಡ್ ಹ್ಯಾಂಡ್" ಅನ್ನುವ ಮಾತುಗಳನ್ನು ಕೇಳಿದ್ದಾದ ಮೇಲೆ ಗೊಂದಲ ಹೆಚ್ಚಾಗಿದೆ. ಏನು ಮಾಡಲು ತೋಚುತ್ತಿಲ್ಲ.....
ಪಲ್ಲವಿಯೊಂದಿಗೆ ಒಂಟಿಯಾಗಿ ಮಾತಾಡಿ ಕೊಟ್ಟ ಸಲಹೆ..
ಪುರುಷೋತ್ತಮನದು ಅಳುಕು ಮನಸ್ಸು, ನಿರ್ಧಾರ ಮಾಡಲು ಬೇಕಾದ ತರ್ಕ ಬದ್ದ ಯೋಚನೆಯ ಕೊರತೆ ಇದೆ. ಒಂದು ವೇಳೆ ಹೇಗೋ ನಿರ್ಧಾರ ಮಾಡಿ ಮದುವೆಯಾದರೆ, ಜೀವನದ ವಿವಿಧ ಹಂತಗಳಲ್ಲಿ ಎಲ್ಲ ಜವಾಬ್ದಾರಿಯನ್ನು ನೀನೆ ಹೊರಲು ತಯಾರಾಗಬೇಕು. ಇನ್ನೂ ಮುಖ್ಯವಾಗಿ, ಪುರುಷೋತ್ತಮನ ಮನಸ್ಥಿತಿಯನ್ನು ಗಮನಿಸಿದರೆ, ಯಾವುದೇ ಹಂತದಲ್ಲಿ, ನಿನ್ನ ಮೊದಲನೆಯ ಸಂಬಂಧದ ಬಗ್ಗೆ ಮಾತನಾಡುವ ಸಂದರ್ಭ ಬರಬಹುದು. ಆಗ ನಿಮ್ಮಿಬ್ಬರ ಮಧ್ಯದ ಸಾಮರಸ್ಯ ಕೆಡುತ್ತದೆ. ಇಷ್ಟು ಸವಾಲುಗಳನ್ನು ಎದುರಿಸಿ, ಈ ಆಯ್ಕೆಯನ್ನು ಮಾಡಬೇಕಾ? ಎಂಬುದು ಮೊದಲ ಪ್ರಶ್ನೆ. Life is a challenge - meet it ಎನ್ನುವುದು ಸತ್ಯವಾದರೂ, ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಎಷ್ಟು ಸಮಂಜಸ ಎನ್ನುವುದನ್ನೂ ಯೋಚಿಸಬೇಕು.
ಆದರೂ ಪ್ರಯತ್ನ ಮಾಡಬೇಕು ಎನ್ನುವ ಮನಸ್ಸಿದ್ದರೆ, ಒಂದು ಗಡುವು ಕೊಡು, ಆ ಗಡುವಿನಲ್ಲಿ ಯಾವುದೇ ಸಲಹೆ ಕೊಡದಿರು... ತಾನೇ ನಿರ್ಧಾರ ಮಾಡಿ ನಿನ್ನ ಬಳಿ ಬಂದರೆ ಮುಂದುವರಿಯಬಹುದು.... ಇಲ್ಲದಿದ್ದರೆ ನಿನ್ನ ಜೀವನವನ್ನು ಬೇರೆಯ ಹಾದಿಯಲ್ಲಿ ನಡೆಸುವುದು ಅನಿವಾರ್ಯ. ಇಂತಹ ಸಮಯದಲ್ಲಿ ಅಪ್ಪ ಅಮ್ಮನ ಸಲಹೆಯನ್ನು ಗೌರವಿಸುವುದು ಒಳ್ಳೆಯದು ಎಂದು ನನ್ನ ಅನಿಸಿಕೆ. ಈಗ ನೀನು ವೈಯಕ್ತಿಕವಾಗಿ ಒಂದು ನಿಲುವನ್ನು ತಾಳಬೇಕು.
ಸುಮಾರು ಐದು ತಿಂಗಳ ನಂತರ ಬಂದ ಪಲ್ಲವಿ ತನ್ನ ಮದುವೆಯ ವಿಷಯ ತಿಳಿಸಿದಳು, ಗಂಡಿನ ಹೆಸರು ಪುರುಷೋತ್ತಮ ಆಗಿರಲಿಲ್ಲ.
ಆಗ ನೆನಪಿಗೆ ಬಂದಿದ್ದು ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಕನ್ನಡ ಚಿತ್ರಗೀತೆ.
ಜೀವನ ಒಂದು ಸಾಗರವಾದರೆ.. ಅದರಲ್ಲಿ ಮೀನು ತಿಮಿಂಗಿಲ ಅಕ್ಟೋಪಸ್ ಹೀಗೆ ಹಲವಾರು ಜೀವಿಗಳು, ಮುತ್ತಿನ ಚಿಪ್ಪುಗಳು, ಅಲ್ಲೋಲಕಲ್ಲೋಲ ಮಾಡುವ ಅಲೆಗಳು, ಅದನ್ನು ಎದುರಿಸಿ ಮೀನು ಹಿಡಿಯುವವರು, ಇವೆಲ್ಲವನ್ನೂ ಮೀರಿ ಗಂಭೀರವಾಗಿ ಸಾಗುವ ಹಡಗು, ಸ್ವಲ್ಪ ಎಚ್ಚರ ತಪ್ಪಿ ಮುಳುಗುವ ಟೈಟಾನಿಕ್ ನಂತಹ ಹಡಗೂ ಉಂಟು.
ಹೇಗಿದ್ದರೂ ಜೀವನ ಸಾಗಲೇಬೇಕಲ್ಲ...
ನಮಸ್ಕಾರ.
ಡಿ ಸಿ ರಂಗನಾಥ ರಾವ್
9741128413

I pity her
ReplyDelete