ಜಾಹೀರಾತಿಗೆ ಮನಸೋತು..
ಮಾತು ಏಕಮುಖ ಸಂಚಾರಿ. ಅನುಭವಿ ಮಾತುಗಾರರನ್ನು ಒಳ್ಳೆಯ ಸಂವಹನಕಾರ (communicator) ಎಂದು ಹೇಳುವರು. communication skill (ಸಂವಹನಕಲೆ) ಎಂದಾಗ ಬರೀ ಮಾತನಾಡುವುದಲ್ಲ, ಒಳ್ಳೆಯ ಕೇಳುಗನೂ (listener) ಆಗಬೇಕು. ಆಪ್ತ ಸಮಾಲೋಚಕರ ತರಬೇತಿ ಶಿಬಿರದಲ್ಲಿ, ಸಂವಹನ ಕಲೆ ಬಗ್ಗೆ ತಿಳಿಸುವಾಗ, ಮಾತನಾಡುವ ಕಲೆಯ ಜೊತೆಗೆ, ಗಮನವಿಟ್ಟು ಕೇಳುವುದು , ಕೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ವಿಶ್ಲೇಷಣೆ ಮಾಡುವುದು, ನಂತರ ಸರಿಯಾದ ಮಾರ್ಗದರ್ಶನ ಮಾಡುವುದು, ಎಲ್ಲವೂ ಬಹು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತೇವೆ.
ಇನ್ನೊಂದು ಕ್ಷೇತ್ರವಿದೆ, ಅಲ್ಲಿ ಮಾತು, ಬರಹ, ಚಿತ್ರ, ಚಲನಚಿತ್ರದ ಮೂಲಕ ಸಂವಹನವಿರುತ್ತದೆ, ಆದರೆ ಅದೆಲ್ಲವೂ ಏಕಮುಖಿ. ಹೇಳಬೇಕಾದುದನ್ನು, ಅದು ಯಾರಿಗೆ ಮುಟ್ಟಬೇಕು, ಯಾವ ಪರಿಣಾಮ ಆಗಬೇಕು ಎನ್ನುವುದನ್ನು ನಿರ್ಧರಿಸಿ ಅವರಿಗೆ ತಲುಪುವಂತೆ ಮಾಡುವ ಕಲೆ. ಅದು ವಿಶೇಷ ಅಭಿವ್ಯಕ್ತಿ. ಅದೇ ಜಾಹೀರಾತಿನ ಪ್ರಪಂಚ.
ಇಂದಿನ ದಿನಗಳಲ್ಲಿ ಜಾಹೀರಾತಿಗೆ ವಿಶೇಷ ಸ್ಥಾನಮಾನವಿದೆ. ಹೆಜ್ಜೆ ಹೆಜ್ಜೆಗೂ, ಒಂದಲ್ಲ ಒಂದು ಜಾಹೀರಾತು ನಮ್ಮ ಕಣ್ಣ ಮುಂದೆ ಬರುತ್ತದೆ. ಅದರಲ್ಲೂ ಫೋನ್ ನಲ್ಲಿ ಏನೇ ನೋಡಲು ಮೊದಲು ಮಾಡಿದರೂ, ಜಾಹೀರಾತುಗಳ ಮಹಾಪೂರವೇ ಹರಿದು ಬರುತ್ತದೆ. ಸ್ವಲ್ಪ ಕಿರಿ ಕಿರಿ ಅನಿಸಿದರೂ ಅದನ್ನು ನೋಡುವುದು ಅನಿವಾರ್ಯವಾಗಿದೆ. ಕೆಲವನ್ನು ಸ್ಕಿಪ್ ಮಾಡಲು ಅವಕಾಶ ಇರುವುದೇ ಒಂದು ವರವಾಗಿದೆ.
ಈ ಜಾಹೀರಾತುಗಳು, ಬಹಳಷ್ಟು ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ, ಹಣ ಸಂಪಾದನೆ ಮಾಡುವ ದಾರಿ ಸಹ ಆಗಿರುವುದು ಒಂದು ಒಳ್ಳೆಯ ಬೆಳವಣಿಗೆಯೇನೋ.
ಕೆಲ ಜಾಹಿರಾತುಗಳು ಗಮನವನ್ನು ಸೆಳೆಯುತ್ತವೆ, ಕೆಲ ಜಾಹಿರಾತುಗಳನ್ನು ನಾವೇ ಹುಡುಕುತ್ತೇವೆ... ನಮ್ಮ ಅನುಕೂಲಕ್ಕಾಗಿ.
ನನ್ನ ಜೀವನದ ಜಾಹೀರಾತಿನ ಮೊದಲ ತಡಕಾಟ ಶುರುವಾಗಿದ್ದು, ನನ್ನ ಓದು ಮುಗಿದ ನಂತರ, ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದ ದಿನಗಳು. wanted ಕಣ್ಣಿಗೆ ಬಿದ್ದ ತಕ್ಷಣ ಅದನ್ನು ಓದುವುದು, ನನಗೆ ಸರಿ ಹೊಂದುತ್ತಾ ಎಂದು ಯೋಚಿಸುವುದು, ಸರಿ ಹೊಂದಿದರೆ ಅದನ್ನು ಕತ್ತರಿಸಿಟ್ಟುಕೊಂಡು, ಅರ್ಜಿ ಹಾಕುವುದು.
ಸಣ್ಣ ಕಾರ್ಖಾನೆ ಶುರು ಮಾಡಿದ ನಂತರ, tender ಪ್ರಕಟಣೆಗಳನ್ನು ನೋಡುವುದು, ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು yellow pages (ಟೆಲಿಫೋನ್ ಡೈರೆಕ್ಟರಿಯಲ್ಲಿ ಇರುತ್ತಿದ್ದ ಹಳದಿ ಪುಟಗಳು, ಅದರಲ್ಲಿ ಇರುತ್ತಿದ್ದ, ವರ್ಗಿಕೃತ ಜಾಹೀರಾತುಗಳು, ನಂತರದ ದಿನಗಳಲ್ಲಿ ಬಂದ getit yellow pages) ನಲ್ಲಿ ಹುಡುಕುವುದು, ಸತತವಾಗಿ ನಡೆಯುತ್ತಿತ್ತು. ಅನಂತರ ಬಂದದ್ದು just dial ಎಂಬ ಸುವಿಧ, ಎಲ್ಲವೂ ಫೋನ್ ಮೂಲಕವೇ ನಡೆಯುತ್ತಿದ್ದ ವ್ಯವಹಾರಗಳು. ಈ yellow pages ಗಳಲ್ಲಿ ನಮ್ಮ ಜಾಹೀರಾತನ್ನು ಪ್ರಕಟಿಸಿತ್ತು.
ಇನ್ನು ನಮ್ಮದೇ ಮನೆಯನ್ನು ಕಟ್ಟಲು ಜಾಗಕ್ಕಾಗಿ ನಡೆಸಿದ ಹುಡುಕಾಟದಲ್ಲಿ, ಜಾಹೀರಾತುಗಳನ್ನು ನೋಡುತ್ತಿದ್ದೆ.
ಈ ಜೀವನ ಪ್ರಯಾಣದಲ್ಲಿ, ಸಾಕಷ್ಟು ಜಾಹೀರಾತುಗಳನ್ನು ಕಂಡಿದ್ದರೂ, ನನ್ನ ಮೇಲೆ ಪ್ರಭಾವ ಬೀರಿದಂತಹ ಕೆಲ ಜಾಹೀರಾತುಗಳನ್ನು ನೆನೆಸಿಕೊಂಡು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಈ ಲೇಖನ. ಈ ವಿಷಯವನ್ನು ಬಹಳ ಹಿಂದೆ, ಸೂಚಿಸಿದ್ದು ಸ್ನೇಹಿತ ನಾಗೇಂದ್ರ ಬಾಬು.
ನನಗೆ ನೆನಪಿರುವಂತೆ, ನನ್ನ ಮೊದಲ ಜಾಹೀರಾತಿನ ಮುಖಾ ಮುಖಿ, ನನ್ನೂರು ದೊಡ್ಡಜಾಲದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ ಆದದ್ದು. “ಸ್ಯಾಮ್ಸನ್ ಕಸ್ತೂರಿ ಮಾತ್ರೆಗಳು.. ಬಾಯಿ ವಾಸನೆ, ಗಂಟಲು ನೋವು....” ರಾಗ ಬದ್ಧವಾಗಿ, ಹೇಳುತ್ತಾ ಕಸ್ತೂರಿ ಮಾತ್ರೆಗಳನ್ನು ಮಾರುತ್ತಿದ್ದ ಒಬ್ಬ ವ್ಯಕ್ತಿ.
ನಂತರ ಅದೇ ರೈಲಿನಲ್ಲಿ ಓಡಾಡುವಾಗ, ಯಶವಂತಪುರದ ಬಳಿಯ ಮನೆಯ ಗೋಡೆಯ ಮೇಲೆ ದೊಡ್ಡದಾಗಿ ಬರೆದಿದ್ದ "ಪರ್ಗೋಲಾಕ್ಸ್.. ಜುಲಾಬಿನ ಸಿಹಿ ಗುಳಿಗೆಗಳು”. ಜುಲಾಬು ಪದದ ಅರ್ಥ ತಿಳಿದ ನಂತರ ನನಗೆ ಆಶ್ಚರ್ಯ, ಇದಕ್ಕೂ ಮಾತ್ರೆಗಳು ಇವೆಯೆಂದು... ನನಗೆ ಗೊತ್ತಿದ್ದದ್ದು, ನಮ್ಮೂರ ರಂಗಪ್ಪ ಕೊಡುತ್ತಿದ್ದ ಅಸಹ್ಯಕರ ರುಚಿಯ ಒಂದು ಹಸರು ಔಷಧ.
ನಮ್ಮ ಮನೆಗೆ ರೇಡಿಯೋ ಬಂದ ಹೊಸದು, ರೇಡಿಯೋ ಸಿಲೋನ್ ನಿಂದ ಬುಧವಾರ ಬರುತ್ತಿದ್ದ ಬಿನಾಕಾ ಗೀತ್ ಮಾಲಾ ಕಾರ್ಯಕ್ರಮದ ಮಧ್ಯೆ ಬರುತ್ತಿದ್ದ “ಸಾಪ್ಪಡಿಂಗಳ್ ಅಸ್ಪ್ರೊ.. ಅಸ್ಪ್ರೊ..ಅಸ್ಪ್ರೊ” ತಲೆ ನೋವಿಗೆ, ಅಸ್ಪ್ರೊ ಮಾತ್ರೆಯ ಜಾಹೀರಾತು ಆಗಿತ್ತು.
ಚಲನಚಿತ್ರ ಶುರುವಾಗುವ ಮೊದಲು ತೋರಿಸುತ್ತಿದ್ದ, LUX ಸೋಪಿನ ಜಾಹೀರಾತು ಸಿನಿಮಾದ ಭಾಗವೇನೋ ಅನ್ನುವಷ್ಟು ಇರುತ್ತಿತ್ತು. ಸಿನಿಮಾ ತಾರೆಯರ ಪ್ರಖ್ಯಾತ ಸಾಬೂನು ಎಂದು ಹೆಸರಿಸಲಾಗುತ್ತಿದ್ದ, ಈ ಜಾಹಿರಾತಿನಲ್ಲಿ ಕಾಣಿಸಿಕೊಳ್ಳದಿದ್ದ ಸಿನಿಮಾ ತಾರೆಯರೇ ಇಲ್ಲವೇನೋ.
ಗುಟ್ಕಾ ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ, ಈಚೆಗೆ ತೋರಿಸುವ ಜಾಹೀರಾತು ಒಳ್ಳೆಯ ಸಂದೇಶವನ್ನು ನೀಡಿದರೂ, ಬೀಭತ್ಸ ಎನಿಸುತ್ತದೆ.
ಮಾತನ್ನು ಯಾವ ರೀತಿಯಲ್ಲಿ ಹೇಳಿದರೆ ಪ್ರಭಾವಶಾಲಿ ಎಂದು ತೋರಿಸುವ ಪಾನ್ ಪಸಂದ್ ನ ಈ ಜಾಹೀರಾತು ನನಗೆ ತುಂಬಾ ಇಷ್ಟವಾದದ್ದು. ಕಮ್ಯುನಿಕೇಷನ್ ಬಗ್ಗೆ ತರಬೇತಿ ಶಿಬಿರಗಳಲ್ಲಿ ಮಾತನಾಡುವಾಗಲೆಲ್ಲ, ಇದನ್ನು ಸಾಮಾನ್ಯವಾಗಿ ಹೇಳುತ್ತಿದ್ದೆ. ನೋಡಿ ಆ ವಿಡಿಯೋ ತುಣುಕು.
https://youtu.be/nCQlbU7Qqz8?si=DsJ8d7GoZbAv9MI_
ಬೆಂಗಳೂರು ಮೂಲದ HMT ಗಡಿಯಾರದ ಕಾರ್ಖಾನೆಯ Time keepers to the nation ಒಂದು ಒಳ್ಳೆಯ ಕಲ್ಪನೆ.
HMT makes mother machines, which makes other machines.... ಎಂಬುದು ಇಂಜಿನಿಯರಿಂಗ್ ವಿಷಯದ ಬಗ್ಗೆ ಅಮ್ಮ ನೊಡನೆ ಸಂಬಂಧ ಕಲ್ಪಿಸಿದ ರೀತಿ ನನ್ನ ದೃಷ್ಟಿಯಲ್ಲಿ ಅದ್ಭುತ ಕಲ್ಪನೆ.
ಬಹುಮಾನಕ್ಕೆ ಸಿಹಿಯ ಹಂಚಿಕೆ ಎನ್ನುವ ವಿಷಯವನ್ನು ವಿಶಿಷ್ಟ ರೀತಿಯಲ್ಲಿ ಹೇಳಿದ್ದು MTR ಜಾಮೂನಿನ ಜಾಹೀರಾತು... ನಿಮಗೂ ಇಷ್ಟವಾಗುತ್ತೆ ಎನ್ನುವ ನಂಬಿಕೆ.. ಕೆಳಗಿರುವ ವಿಡಿಯೋ ತುಣುಕನ್ನು ನೋಡಿ.
https://youtu.be/KjsN-FgWrhM?si=ywaLZ8HJnMECZqIC
ನನ್ನ ವಾಕಿಂಗ್ ಸ್ನೇಹಿತರು, ಹಿರಿಯಣ್ಣ MS ರಾಮಚಂದ್ರರಾವ್ ಅವರು. ಉಡುಗೆ ತೊಡುಗೆಯಲ್ಲಿ ಯಾವಾಗಲೂ ಶಿಸ್ತು. “ಏನ್ ಸರ್ ಪ್ಯಾಂಟ್ ಹೊಸಾದಾ" ಅಂತ ಕೇಳಿದಾಗ, ಇಲ್ಲಪ್ಪ ಹಳೆಯದು ಹತ್ತು ವರ್ಷಕ್ಕೂ ಜಾಸ್ತಿಯಾಗಿದೆ. ಇದು Raymonds ದು ಅಂತ ಉತ್ತರ. Raymonds, the complete man since 1932 ಅಂತ ನಾವು ರೇಗಿಸೋದು. ಇದಕ್ಕೆ ಸ್ಪೂರ್ತಿಯೇ Raymonds ನ ಜಾಹೀರಾತು.
ಜನನ ನಿಯಂತ್ರಣದ ಸಲುವಾಗಿ ಬರುತ್ತಿದ್ದ ಒಂದು ಹಂತದ ಜಾಹೀರಾತಿನಲ್ಲಿ " ನಾವಿಬ್ಬರು, ನಮಗಿಬ್ಬರು ಮಕ್ಕಳು " ಎಂಬುವುದು ಪರಿಚಿತ ಜಾಹೀರಾತು. ಅದನ್ನು " ನಾವಿಬ್ಬರು ನಮಗೆ ಬರೀ ಮಕ್ಕಳು" ಎಂದು ತಿದ್ದಿದ್ದನ್ನು ನೋಡಿ ನಕ್ಕಿದ್ದೇನೆ. ಇಂಥದ್ದೇ ಇನ್ನೊಂದು ವಿರೂಪವಾಗಿದ್ದು, ಬಸವನಗುಡಿಯ ರಂಗರಾವ್ ರಸ್ತೆ ಫಲಕ. ಅದು "ಠಠಠ ಠಾವ್ ಠಸ್ತೆ" ಆಗಿ ಗಮನ ಸೆಳೆದದ್ದು.
LIC ಯ ಜಾಹೀರಾತಿನಲ್ಲಿನ "zindagi ka saathbhi, zindagi ka baad bhi" ಸಾಲುಗಳು ಗಮನ ಸೆಳೆಯವಂತದ್ದು. LIC ಇಂದ ಲಾಭ ಆಗಬೇಕಾದರೆ ಸಾಯಬೇಕು. ಸತ್ತ ಮೇಲೆ ನಮಗೇನಿದೆ ಲಾಭ, ಅದು ಬೇರೆಯವರಿಗೆ. ನಾ ಸಾಯಬೇಕು, ಸುಡುಗಾಡು ಕಾಣಬೇಕು ಅನ್ನೋ ಹೇಳಿಕೆ ತರಹ, ಆಗಲ್ಲ ಹೋಗಲ್ಲ.
80ರ ದಶಕದಲ್ಲಿ ಕಪಿಲ್ ದೇವ್ ಇಂದ ಶುರುವಾದ boost is the secret of my energy ಜಾಹೀರಾತು, ನಂತರ ಕಪಿಲ್ ದೇವ್ ಹಾಗೂ ಸಚಿನ್ ತೆಂಡೂಲ್ಕರ್ ಒಳಗೊಂಡ boost is the secret of our energy ಆಗಿ ಮುಂದುವರೆದು, ಧೋನಿ, ಕೊಹ್ಲಿ... ನಂತರದ ಕ್ರಿಕೆಟರ್ ಗಳನ್ನು ಒಳಗೊಂಡುಇನ್ನೂ ಮುಂದುವರೆಯುತ್ತಿದೆ, ಆ ಸಾಲುಗಳು ಮಾತ್ರ ನಿರಂತರವಾಗಿವೆ.
ಗವಿಪುರ ಗುಟ್ಟಹಳ್ಳಿಯ ಮುಖ್ಯರಸ್ತೆಯಲ್ಲಿ ದೊಡ್ಡದಾಗಿ ಬರೆದಿದ್ದ Afghan snow ಜಾಹಿರಾತು ನೋಡಿದಾಗ, snow ಹಚ್ಚಿದರೆ ಚಳಿಯಾಗುತ್ತದೆ ಎಂಬ ಭಾವನೆ ಬರುತ್ತಿತ್ತು.
ವಾಷಿಂಗ್ ಪೌಡರ್ ನಿರ್ಮಾ ಎಂದು ಶುರುವಾಗುತ್ತಿದ್ದ ನಿರ್ಮಾ ಸೋಪಿನ ಪುಡಿಯ ಜಾಹೀರಾತು ತುಂಬಾ ಜನಪ್ರಿಯವಾಗಿತ್ತು. ಚಿಕ್ಕ ಹುಡುಗಿ ಅಪ್ಪಾಲೆ ತಿಪ್ಪಾಲೆ ಆಡುತ್ತಾ, ಚಿತ್ರವಾಗಿ ನಿಲ್ಲುತ್ತಿದ್ದದ್ದು. ಸುಧೀರ್ಘವಾದ ಹಾಡು ಕೆಲವು ಸಲ ಬೇಜಾರು ಮಾಡುತ್ತಿತ್ತು.
ಬಜಾಜ್ ಸ್ಕೂಟರ್ ನ ಹಿಂದಿನ ರೂಪ ವೆಸ್ಪಾ ನನ್ನ ಬಳಿ ಇದ್ದ ಕಾರಣವೋ ಏನೋ... ಹಮಾರ ಬಜಾಜ್ ಎನ್ನುವ ಸಾಲು ಇದ್ದ ಜಾಹೀರಾತು ಹತ್ತಿರ ಎನಿಸುತ್ತಿತ್ತು.
ಇನ್ನು ನನ್ನ ಮೊದಲನೆಯ ಕಾರು ಪ್ರೀಮಿಯರ್ ಪದ್ಮಿನಿ deluxe BE ಆಗಿದ್ದರಿಂದ ಆ ಜಾಹಿರಾತು ನನ್ನ ಮನಸ್ಸು ಸೆಳೆಯುತ್ತಿತ್ತು. ಪ್ರೀಮಿಯರ್ ಆಟೋಮೊಬೈಲ್ಸ್ ಕಾರ್ಖಾನೆಯನ್ನು educational tour ಹೋದಾಗ ನೋಡಿದ್ದು, ಅವರು ಕೊಟ್ಟ ಕೋಕಾ ಕೋಲವನ್ನು ಕುಡಿದಿದ್ದು ನೆನಪಾಯಿತು.
ನಾಲ್ಕು ತಲೆಮಾರಿನ ಅಮ್ಮಂದಿರನ್ನು ಒಳಗೊಂಡ woodwards gripe water ಜಾಹೀರಾತು. ಎಲ್ಲಾ ಅಮ್ಮಂದಿರು ಹೇಳುವುದು “ವುಡ್ ವರ್ಡ್ಸ್ ಗ್ರೈಪ್ ವಾಟರ್ ಕೊಡು... ನಾನು ನಿನಗೆ ಅದನ್ನೇ ಕೊಡುತ್ತಿದ್ದೆ...” ದೀರ್ಘಕಾಲದ ತಾಳಿಕೆಯನ್ನು ಸೂಚಿಸುತ್ತದೆ.
ಲಲಿತಾಜಿ ಯ “ಸರ್ಫ್ ಖರೀದ್ನೇಮೆ ಸಮಜಧಾರಿ ಹೈ" ಮನೆ ಮಾತಾಗಿತ್ತು.
ಅಂದಿನ ಆಗು ಹೋಗುಗಳನ್ನು ತನ್ನ ಜಾಹಿರಾತಿನಲ್ಲಿ ಬಿಂಬಿಸುವಲ್ಲಿ ಅಮುಲ್ ನ ಜಾಹೀರಾತುಗಳ ಸ್ಥಾನ ಅಪೂರ್ವ. AMUL the taste of INDIA ಸಾಲುಗಳನ್ನು ಒಳಗೊಂಡ ಜಾಹಿರಾತುಗಳು ಮನಸೆಳೆಯುತ್ತಿದ್ದವು.
ಬೆಳಗಿನ ವಾಕಿಂಗ್ ಸಮಯದಲ್ಲಿ ಒಬ್ಬ ಚಿಕ್ಕ ಹುಟ್ಟಿನ ಹೆಣ್ಣುಮಗಳನ್ನು ನೋಡುತ್ತಿದ್ದೆ. ಕಾಲಕ್ರಮೇಣ ಮುಖ ನೋಡಿ ನಗುವಷ್ಟು ಪರಿಚಯ ಆಗಿತ್ತು. ಒಂದು ದಿನ ಇನ್ನೊಂದು ಹುಡುಗಿಯ ಜೊತೆ ವಾಕ್ ಮಾಡುತ್ತಿದ್ದನ್ನು ನೋಡಿ, ಯಾರೀ ಹುಡುಗಿ ಎಂದು ಕೇಳುವಷ್ಟರಲ್ಲಿ, ನಮ್ಮಮ್ಮ ಎಂದು ಹೆಮ್ಮೆಯಿಂದ ಅಮ್ಮನನ್ನು ಅಪ್ಪಿಕೊಂಡಳು. ನನಗರಿವಿಲ್ಲದಂತೆ ನನ್ನ ಬಾಯಿಂದ ಬಂದದ್ದು ಸಂತೂರ್ ಸಂತೂರ್. ನಿಜಕ್ಕೂ ಆ ಹೆಣ್ಣು ಮಗಳು ಹುಡುಗಿಯ ಅಮ್ಮನಂತೆ ಕಾಣುತ್ತಿರಲಿಲ್ಲ. ಸ್ನೇಹಿತೆ ಎನ್ನಬಹುದೇನೋ. ತಕ್ಷಣ.. ಆಕೆ ಥ್ಯಾಂಕ್ಸ್ ಅಂಕಲ್ ಅಂದಿದ್ದು ವಾತಾವರಣದಲ್ಲಿ ನಗೆಯನ್ನು ಮೂಡಿಸಿತ್ತು. ನಂತರದ ದಿನಗಳಲ್ಲಿ ನಾಲ್ಕು ಮಾತಾಡುವಷ್ಟು ಸಲಿಗೆ ಬೆಳೆದಿದ್ದು.
ನಮ್ಮ ಪೀಣ್ಯದ ಕಾರ್ಖಾನೆಯಲ್ಲಿ, LIC ಗಾಗಿ ದೊಡ್ಡ ಜಾಹೀರಾತು ಫಲಕ ಮಾಡಿಕೊಟ್ಟ ನೆನಪು ಹಚ್ಚಹಸಿರಾಗಿದೆ.
ದಿನಪತ್ರಿಕೆಗಳಲ್ಲಿ ಹೆಚ್ಚು ಹೆಚ್ಚು ಕಾಣಿಸುವುದು, ರಾಜ ಕಾರಣಿಗಳ ಹುಟ್ಟು ಹಬ್ಬದ ಜಾಹೀರಾತುಗಳು. ಇದರಲ್ಲಿ ಅವರ ಚಿತ್ರದ ಜೊತೆಗೆ ಹೊಗಳು ಭಟ್ಟರ/ ಸಮಯ ಸಾಧಕ ಹಿಂಬಾಲಕರ ಫೋಟೋಗಳು ರಾರಾಜಿಸುತ್ತಿರುತ್ತವೆ. ಇವರನ್ನು ನೋಡಿದಾಗ ಕೆಲವು ಸಲ ಅಯ್ಯೋ ಎನಿಸಿದರೂ, ಬಹಳ ಸಲ ಅಸಹ್ಯವೇ ಆಗುತ್ತದೆ.
ಒಂದು ಕಾಲದಲ್ಲಿ ದಿನಪತ್ರಿಕೆಗಳಲ್ಲಿ ಶುಕ್ರವಾರದ ದಿನ, ಹೊಸ ಸಿನಿಮಾದ ಜಾಹೀರಾತುಗಳು ತುಂಬಿರುತ್ತಿದ್ದವು. ಕಾರಣ ತಿಳಿಯದು ಈಗೀಗ ಸಿನಿಮಾದ ಜಾಹೀರಾತುಗಳು ತುಂಬಾ ಕಡಿಮೆಯಾಗಿದೆ.
ಕಾಣೆಯಾದ ಮನುಷ್ಯರ/ ಸಾಕು ಪ್ರಾಣಿಗಳ ಪ್ರಕಟಣಾ ಜಾಹೀರಾತು, ಬಹುಮಾನದ ಆಮಿಷದೊಂದಿಗೆ ಸಾಮಾನ್ಯ.
ಸಾಲ ಮಾಡಿ, ತೀರಿಸಲಾಗದೆ ಸುಸ್ತಿದಾರರಾದವರ, ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡುವ ಬಗ್ಗೆ ಪ್ರಕಟಣೆಗಳು...
ಸರ್ಕಾರದ ಪರವಾಗಿ ಬೇಕಾದ ಜಮೀನುಗಳನ್ನು ವಶಪಡಿಸಿಕೊಳ್ಳಲು, ಆ ಭೂಮಿಯ ಸದ್ಯದ ಮಾಲೀಕರು, ಅಳತೆ ಮುಂತಾದ ವಿವರಗಳನ್ನು ಸೂಚಿಸುವ ಪ್ರಕಟಣೆ ಪುಟಗಳನ್ನು ತುಂಬಿದ್ದು, ಅದರ ಮೇಲೆ ಕಣ್ಣೋಡಿಸುವ ಅನಿವಾರ್ಯತೆ.
ಪತ್ರಿಕೆಗಳ ಜೊತೆ ಸೇರಿಸಿ ಕಳಿಸುವ ಜಾಹೀರಾತಿನ ಕರಪತ್ರಗಳ ಹಾವಳಿ ಕಡಿಮೆ ಏನಲ್ಲ.
ಸ್ಮರಣ ಸಂಚಿಕೆಗಳಲ್ಲಿ ಬರುವ ಜಾಹೀರಾತು, ಮೂಲತಃ ಹಣವನ್ನು ಕೂಡಿಸುವ ಉದ್ದೇಶವಾದ್ದರಿಂದ, ಆ ಜಾಹೀರಾತುಗಳನ್ನು ಕೊಡುವವರು ಸಾಕಷ್ಟು ಬಾರಿ ಯಾವುದೋ ಮುಲಾಜಿಗೆ ಕಟ್ಟುಬಿದ್ದು ಹಣ ಕೊಡುವುದೇ ಜಾಸ್ತಿ.
ವೈವಾಹಿಕ ಜಾಹೀರಾತುಗಳದ್ದು ಬೇರೆಯೇ ಲೋಕ. ಅಲ್ಲಿ ನಮೂದಿಸುವ ಜಾತಿ, ಬಣ್ಣ, ಎತ್ತರ, ತೂಕ, ಓದು, ಹಣಕಾಸಿನ ಪರಿಸ್ಥಿತಿ, ಮನೆಯಲ್ಲಿರುವ ಜನ, ಅವರದೇ ಆದ ಆಶೋತ್ತರಗಳು, ಸಂಗಾತಿಯ ಬಗೆಗಿನ ನಿರೀಕ್ಷೆಗಳು, ಹೀಗೆ ಹಲವು ಸಂಗತಿಗಳು ಇರುತ್ತಿತ್ತು. ಈಚೆಗೆ ಈ ಜಾಹೀರಾತುಗಳನ್ನು matrimonial ಜಾಲತಾಣಗಳು ನುಂಗಿ ಹಾಕಿವೆ.
classified ads ವರ್ಗೀಕೃತ ಜಾಹೀರಾತುಗಳು ಈಚಿನ ದಿನಪತ್ರಿಕೆಗಳಲ್ಲಿ ಕಡಿಮೆಯಾಗಿದೆ.
ಜಾಹೀರಾತುಗಳನ್ನು ನಂಬಿ ಮೋಸ ಹೋದವರು ಬಹಳಷ್ಟು ಮಂದಿ. ಅದರಲ್ಲೂ ಹಣ ಸಂಪಾದಿಸುವ ವಿಚಾರದಲ್ಲಿ ಜಾಸ್ತಿ.
ಯಾವ ರೂಪದಲ್ಲಾದರೂ ಇರಲಿ, ಜಾಹೀರಾತುಗಳು ಅದರದೇ ಆದ ರೀತಿಯಲ್ಲಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ, ನಮ್ಮನ್ನು ಮರಳು ಮಾಡುತ್ತದೆ ಎನ್ನುವಲ್ಲಿಗೆ... ಲೇಖನ ಮುಕ್ತಾಯ.
ನಮಸ್ಕಾರ
ಡಿ ಸಿ ರಂಗನಾಥ ರಾವ್
9741128413




.jpeg)






ಜಾಹೀರಾತು ಪುರಾಣ ಚೆನ್ನಾಗಿದೆ
ReplyDeleteಎಲ್ಲವನ್ನೂ ಅಚ್ಚುಕಟ್ಟಾಗಿ ಬರೆದಿದ್ದೀರಿ👌👌👌👌.. ಕಸ್ತೂರಿ ಮಾತ್ರೆಗಳ ಜಾಹೀರಾತಿನ ಬಗ್ಗೆ ಗೊತ್ತೇ ಇರಲಿಲ್ಲ ..ಜುಲಾಬು ಗುಳಿಗೆಗಳು ಕೆಲವು ಪ್ರಯಾಣಿಕರಿಗೆ ಬೇಕಾಗತಿತ್ತೇನೋ
ReplyDeleteತರಕಾರಿ, ಹೂ, ಹಣ್ಣು ಮಾರಾಟಗಾರರು, ಚಾಕು ಚೂರಿ ಚೂಪು ಮಾಡುವ, ಸ್ಟೀಲ್ ಪಾತ್ರೆ ಸಾಮಾನು ಮಾರುವ, ಕಲಾಯಿ ಮಾಡುವವರು ತಮ್ಮ ವಿಶಿಷ್ಟ ಬಗೆಯ ಜೋರು ದನಿಯ ಕೂಗಿನಿಂದ ಬಹುಷಃ ಜಾಹಿರಾತಿನ ಪರಿಕಲ್ಪನೆ ಮೂಡಿರಬಹುದು... ಇಂದು ಆಮ್ಲಜನಕದಿಂದ ಅಂತಿಮ ಸಂಸ್ಕಾರದ ತನಕ ಎಲ್ಲಕ್ಕೂ ಜಾಹಿರಾತು ಉಂಟು, ಜಾಹಿರಾತು ಸೃಜನಶೀಲತೆ (creativity) ಗೆ ಒಂದು ಉತ್ತಮ ಅವಕಾಶ ಕಲ್ಪಿಸುತದೆ. ಕೆಲವು ನವಿರು ಮತ್ತೆ ಕೆಲವು ಅತಿರೇಕ fair and lovely ಇಂದ ಬೆಳ್ಳಗದವರನ್ನು,, ಯಾವುದೇ ಸೋಪಿನಿಂದ ಜಾಹಿರಾನಂತೆ ಕಲೆ ಹೋದ ಅಥವಾ ಸಿನಿಮಾ ತಾರೆಯದ ಯಾರನ್ನು ನಾನು ನೋಡಿಲ್ಲ. ಮೀನು ಹಿಡಿಯುವ ಫೇವಿ ಕ್ವಿಕ್ ಜಾಹಿರಾತು ನನ್ನ ಅಚ್ಚುಮೆಚ್ಚು... ಒಂದೆರಡು ಬಾರಿ ಫೇಸ್ಬುಕ್ ಜಾಹಿರಾತಿನಿಂದ ಮೋಸ ಹೋದದ್ದು ಉಂಟು... ಒಟ್ಟಿನಲ್ಲಿ ನನ್ನ ಮನವಿಯನ್ನು ಪರಿಗಣಿಸಿ ಒಂದು ಉತ್ತಮ ಬರಹ ನಿಮ್ಮಿಂದ ಮೂಡಿಬಂದಿದೆ
ReplyDeleteಧನ್ಯವಾದಗಳು
ಬಾಬು
ಗ್ರಾಹಕರ ಮನಸ್ಸನ್ನು ಆಕರ್ಷಿಸುವಂತೆ ಜಾಹೀರಾತುಗಳನ್ನು ರೂಪಿಸುವುದು ಒಂದು ವಿಶಿಷ್ಟಕಲೆ. ಲೇಖನದಲ್ಲಿ ನಮೂದಿತವಾಗಿರುವ ವಿವಿಧ ಉತ್ಪನ್ನಗಳ ಜಾಹೀರಾತುಗಳನ್ನು ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತವೆ. ಅವುಗಳನ್ನು ಸಮಗ್ರವಾಗಿ ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿರುತ್ತಾರೆ.
ReplyDeleteಮುದ್ರಣ ರೀತಿಯ ಜಾಹೀರಾತುಗಿಂತ ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳೇ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬಲ್ಲದು.
ಕೊನೆ ಹನಿ
ಸೈಬೀರಿಯಾದಲ್ಲಿ ರೆಫ್ರಿಜರೇಟರ್ ಗಳನ್ನು ಹಾಗೂ ಬೊಕ್ಕ ಅಥವಾ ಬೋಡು ತಲೆ ಉಳ್ಳವರಿಗೆ ಕನಿಷ್ಠ ಅರ್ಧ ಡಜನ್ ಬಾಚಣಿಗೆಗಳನ್ನು ಖರೀದಿಸುವಂತೆ ಪ್ರಚೋದಿಸುವ ತಂತ್ರವೇ ಜಾಹೀರಾತು.
ವಂದನೆಗಳು.