ದೈವಾಧೀನನಾದ ಮೋಹನ
ಇಂದು (20.10.2025) ಸುತ್ತು ಮುತ್ತಲಿನ ಜನಕ್ಕೆಲ್ಲ ದೀಪಾವಳಿಯ ಸಡಗರ. ಎಲ್ಲಾ ಕಡೆ ಪಟಾಕಿ ಹಚ್ಚುವ ಶಬ್ದ, ನನ್ನ ಮನಸ್ಸು ಮಂಕಾಗಿದೆ. ನನ್ನ ಸ್ನೇಹಿತ ಮೋಹನನ (BS ಮೋಹನ ಕುಮಾರ್) ದೇಹವನ್ನು ಅಗ್ನಿಗರ್ಪಿಸಿ, ಸ್ನಾನ ಮಾಡಿ, ಊಟ ಮಾಡಿ ಕುಳಿತಿದ್ದೇನೆ.
ಹೋದ ಲೇಖನದಲ್ಲಿ ಅವನು ಆಸ್ಪತ್ರೆಯಲ್ಲಿದ್ದ ವಿಷಯ ಬರೆದು,ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ, ಅದಕ್ಕೆ ದೇವರ ಒಪ್ಪಿಗೆ ಸಿಗಲಿಲ್ಲ.
ನೆನ್ನೆ ಬೆಳಿಗ್ಗೆ ಅವನನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಬಾಯೊಳಗೆ ಹಾಕಿದ್ದ ನಳಿಕೆಗಳ ಕಾರಣ, ಮಾತಾಡಲಾಗದ ಮೋಹನ, ಸಂಜ್ಞೆಯ ಮೂಲಕವೇ ತಿಂಡಿ ಆಯ್ತಾ, ಆರಾಮವಾ, ಮೊಮ್ಮಗಳು ಹೇಗಿದ್ದಾಳೆ ಎಂದು ಕೇಳಿದ್ದು ಅರ್ಥವಾಯಿತು. ಈ ಪರಿಸ್ಥಿತಿಯಲ್ಲೂ ಅವನ ಕಾಳಜಿ, ಆಶ್ಚರ್ಯ ಉಂಟು ಮಾಡಿತು. ಆದರೆ ಹೆಬ್ಬೆಟ್ಟು ಮೇಲೆತ್ತಿದ ಮುಷ್ಟಿಯನ್ನು ನಾಲ್ಕಾರು ಬಾರಿ ತೋರಿಸಿದ ಮೋಹನ ಹೇಳಿದ್ದು ಏನೆಂದು ತಿಳಿಯಲಿಲ್ಲ.
ಮಾತುಗಾರ ಮೋಹನನನ್ನು ಮಾತಿಲ್ಲದ ಮೂಕನನ್ನಾಗಿ ನೋಡಲು ಕಷ್ಟ ಎನಿಸಿತು.
ಸಂಜೆ ಅವನ ಸಾವಿನ ಸುದ್ದಿ ಕೇಳಿ ಮತ್ತೆ ಆಸ್ಪತ್ರೆಗೆ ಹೋಗಿ, ಮುಂದಿನ ಕಾರ್ಯಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನಮ್ಮ ಸ್ನೇಹಿತರ ಗುಂಪು ತಯಾರಿ ನಡೆಸಿತು.
ಮೋಹನನ ನೆನಪುಗಳು ಬಲವಾಗಿ ಕಾಡಿದವು. ಅವನ ಪ್ರಭಾವ ನನ್ನ ಮೇಲೆ ಈ ಮಟ್ಟಕ್ಕಿದೆ ಎಂದು ನನಗೆ ಅನ್ನಿಸಿರಲಿಲ್ಲ.
ನನಗೆ ಮೋಹನನ ಪರಿಚಯವಾದದ್ದು... ಸುಮಾರು 20 ವರ್ಷಕ್ಕೂ ಮುಂಚೆ, ತಿಮ್ಮೇಶ ಪ್ರಭು ಉದ್ಯಾನವನದ ಬೆಳಗಿನ ವಾಕಿಂಗ್ ನಂತರ ಮಾತನಾಡುವ ಸಮಯದಲ್ಲಿ... ಅವನು ಎಂದೂ ನಮ್ಮ ಜೊತೆ ವಾಕಿಂಗ್ ಬರುತ್ತಿರಲಿಲ್ಲ... ಅವನದೇ ಆದ ವೇಗದ(?) ನಡಿಗೆ. " ಏನು ಮೋಹನಾ..ವಾಕಿಂಗ್ ಬಂದ್ಯಾ?" ಎಂದು ಕಾಲೆಳೆದಾಗ "ಏ...ಬಂದು ಎಷ್ಟೊತ್ತಾಯ್ತು...ರೌಂಡ್ ಆಯ್ತು" ಅಂತ 4 ಕೈ ಬೆರಳು ಎತ್ತಿ ತೋರಿಸೋನು. ಏ ಅನ್ನುವ ಶೈಲಿಯೇ ಬೇರೆ.
ಮತ್ತೆ ನಮ್ಮ ಭೇಟಿ ಯಾವುದಾದರೂ ಹೋಟೆಲ್ ಗೆ ಸ್ನೇಹಿತರ ಗುಂಪಿನಲ್ಲಿ ಹೋದಾಗ, ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಮಾತ್ರ. ಮೋಹನ ಯಾವಾಗಲೂ ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಅಕಸ್ಮಾತ್ ಬಂದರೆ ಅದೊಂದು ವಿಶೇಷ ಘಟನೆ.
ಬೋಂಡಾ ಬಜ್ಜಿ ಪಕೋಡದಂತಹ ಕರಿದ ತಿಂಡಿಗಳು ಮೋಹನನಿಗೆ ಪ್ರಿಯ... ತಿಂಡಿಪೋತ ಎನ್ನಲೇ... ಆದರೆ ಊಟಕ್ಕೆ ಕುಳಿತಾಗ, ಬಡಿಸುವ ವೇಗಕ್ಕೆ ಹೊಂದಿಕೊಳ್ಳಲಾಗದೆ, ಎಲೆಯಲ್ಲಿ ಬಿಟ್ಟಿದ್ದೇ ಹೆಚ್ಚು. ಸ್ಥೂಲಕಾಯದ ಮೋಹನ ನೆಲದ ಮೇಲೆ ಕೂತು ಊಟ ಮಾಡುತ್ತೇನೆ ಎಂದು ಹೇಳಿಕೊಂಡಾಗ... ತಮಾಷೆ ಮಾಡಿದವರೇ ಜಾಸ್ತಿ.
ಮೋಹನ ಕನ್ನಡಪ್ರಿಯ. ಪುಸ್ತಕಗಳನ್ನು ಓದುವ ಹವ್ಯಾಸಿಗ. ನನಗೂ ಕೆಲವು ಪುಸ್ತಕಗಳನ್ನು ತಂದು ಕೊಟ್ಟು ಓದಲು ಹೇಳಿದವ. ಅಷ್ಟೇಕೆ, Deccan Herald ನಲ್ಲಿ ಬಂದ Artificial Intelligence ಗೆ ಸಂಬಂಧಪಟ್ಟ ಲೇಖನಗಳನ್ನು, ಸುಬ್ಬಯ್ಯ ಶೆಟ್ಟರಿಗೆ ತಪ್ಪದೇ ತಂದುಕೊಡುತ್ತಿದ್ದವನು.
ಮಾತಿನ ಮಧ್ಯೆ ಅವನು ಹೇಳುತ್ತಿದ್ದ ಗಾದೆಗಳು, ನುಡಿಗಟ್ಟುಗಳು ಅವನ ಕನ್ನಡ ಭಾಷೆಯ ಪ್ರೌಢಿಮೆಯನ್ನು ಎದ್ದು ತೋರಿಸುತ್ತಿತ್ತು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಕನ್ನಡ ರಸಪ್ರಶ್ನೆ ವಿಭಾಗದಲ್ಲಿ ಬಹಳ ಸಲ ಪ್ರಥಮ ಬಹುಮಾನವನ್ನೇ ಗಿಟ್ಟಿಸಿಕೊಂಡವನು ಮೋಹನ.
ಕಾರ್ಯಕ್ರಮಗಳಲ್ಲಿ ಸಹಜವಾಗಿ ಆಗುತ್ತಿದ್ದ ಅಪಸವ್ಯಗಳನ್ನು ಗುರುತಿಸಿ ಅದರ ಬಗ್ಗೆ ಮಾತನಾಡಿ, ಖಂಡಿಸುತ್ತಿದ್ದವನು. ಅದರಲ್ಲೂ ಪ್ರತಿಭಾ ಪುರಸ್ಕಾರದಲ್ಲಿ ಕೊಡುತ್ತಿದ್ದ ಪ್ರಶಸ್ತಿ ಪತ್ರದ ಬಗ್ಗೆ ಅವನಿಗೆ ಯಾವಾಗಲೂ ಒಂದಷ್ಟು ಅಸಮಾಧಾನ.. ಹೆಸರುಗಳ ಕಾಗುಣಿತ ಸರಿ ಇರಬೇಕು ಎಂದು ಯಾವಾಗಲೂ ಗೊಣಗುತ್ತಿದ್ದವ. ವಿರೋಧ ಪಕ್ಷದ ರೀತಿಯಲ್ಲಿ ಯೋಚಿಸುತ್ತಿದ್ದವ.
ಎಲ್ಲರಿಗೂ ಒಂದೊಂದು ಹೆಸರು ಕೊಡುವುದರಲ್ಲಿ ಪರಿಣತ. ನನಗೆ ಪೂರಿ ರಂಗಣ್ಣ ಎಂದು ನಾಮಕರಣ ಮಾಡಿದ್ದ.
ಸ್ನೇಹಿತ ಬಿ ವಿ ಮುರುಳಿಧರ್ ಗೂ ಮೋಹನನಿಗೂ ವಿಶೇಷ ನಂಟು. ಪ್ರಸಕ್ತ ಸಮಯದಲ್ಲಿ ಸುದ್ದಿಯಲ್ಲಿರುವವರ ಹೆಸರನ್ನು ಮುರಳಿಗೆ ಇಡುವುದು, ಅವನನ್ನು ಛೇಡಿಸಿ ಕಾಡುವುದರಲ್ಲಿ ಮೋಹನನಿಗೆ ವಿಶೇಷ ಆಸಕ್ತಿ, ಅದಕ್ಕೆ ಎಲ್ಲರೂ ದನಿಗೂಡಿಸುವಂತೆ ಮಾಡುತ್ತಿದ್ದದ್ದು ಮೋಹನನ ವಿಶೇಷತೆ. ಆದರೆ ಎಲ್ಲ ಸಮಯಕ್ಕೂ ಮುರಳಿಯ ಜೊತೆ ಮಾತ್ರ ಬೇಕೇ ಬೇಕು. ಅವರಿಬ್ಬರೂ ಗಳಸ್ಯ ಕಂಠಸ್ಯ.
ಮೋಹನನಲ್ಲಿ ನಾನು ಮೆಚ್ಚುತ್ತಿದ್ದ ಇನ್ನೊಂದು ಅಂಶವೆಂದರೆ... ಗುಂಪಿನಲ್ಲಿ ಯಾರಾದರೂ ಅವನಿಗೆ ಕೀಟಲೆ ಮಾಡಿದರೆ ನಗು ನಗುತ್ತಾ ಸ್ವೀಕರಿಸಿ... ಅದಕ್ಕೆ ತಕ್ಕ ಉತ್ತರ ಕೊಡುತ್ತಿದ್ದ. ಕೋಪ ಮಾಡಿಕೊಂಡದ್ದು ನಾನು ಕಂಡೇ ಇಲ್ಲ.
ಇದಕ್ಕೊಂದು ದೃಷ್ಟಾಂತ... ಸ್ನೇಹಿತರೆಲ್ಲ ಒಂದು ಪ್ರವಾಸಕ್ಕೆ ಹೋಗಿದ್ದೆವು. ನದಿಯಲ್ಲಿ ಸ್ನಾನ ಮಾಡುವ ಸಮಯ, ಇದ್ದಕ್ಕಿದ್ದಂತೆ ನದಿಯ ಹರಿವು ಹೆಚ್ಚಾಯಿತು. ಎಲ್ಲರೂ ನದಿಯಿಂದ ಹೊರ ಬಂದರು ಮೋಹನ ಇದ್ದ ಜಾಗದಿಂದ ಬರಲು ಕಷ್ಟವಾಯಿತು. ಎಲ್ಲ ಸೇರಿ ಹೇಗೋ ಅವನನ್ನು ಹೊರಗೆ ಕರೆ ತಂದಾಯ್ತು. ತಮಾಷೆ ಮಾಡುತ್ತಾ ...ತಿಮಿಂಗಿಲವನ್ನು ಎಳೆದು ತಂದ ಅನುಭವ ಎಂದಾಗ... ಅವನ ಉತ್ತರ " ಏ.... ನಾನು ಅಷ್ಟು ದಪ್ಪ ಇಲ್ಲ.... ಸಣ್ಣಗಿದ್ದೇನೆ" ಎಂದು. ಇದು ಅವನ ಹಾಸ್ಯ ಪ್ರಜ್ಞೆ
ಭಯಂಕರ ಹಾಸ್ಯ ಪ್ರಜ್ಞೆ ಇದ್ದ ವ್ಯಕ್ತಿ. ಎಲ್ಲದರಲ್ಲೂ, ಎಲ್ಲರಲ್ಲೂ ಹಾಸ್ಯವನ್ನು ಕಾಣುತ್ತಿದ್ದವ. ಹಾಸ್ಯದ ಜೊತೆಗೆ ಒಂದಷ್ಟು ರಸಿಕತೆಯನ್ನು (ಪೊಲೀತನ ಎನ್ನಲೇ) ನವಿರಾಗಿ / ಸೂಚ್ಯವಾಗಿ ಬೆರೆಸುತ್ತಿದ್ದ ವ್ಯಕ್ತಿ.
ಬ್ರಹ್ಮಚಾರಿ ಮೋಹನ ಯಾವಾಗಲೂ ನಗುತ್ತಾ ಇದ್ದ ವ್ಯಕ್ತಿ. ಮೇಲ್ನೋಟಕ್ಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ವ್ಯಕ್ತಿ ಎನಿಸಿದರೂ... ಇನ್ಸೂರೆನ್ಸ್ ಏಜೆಂಟಾಗಿ ಅವನ ವೃತ್ತಿ ಜೀವನದಲ್ಲಿ ಶಿಸ್ತನ್ನು ಕಂಡಿದ್ದೇನೆ. ಇನ್ಸೂರೆನ್ಸ್ ಪಾಲಿಸಿಯ ಕವರ್ ಮೇಲೆ ಎಲ್ಲಾ ವಿವರಗಳನ್ನು ಬರೆದು ಕೊಡುತ್ತಿದ್ದ, ಅದಕ್ಕೊಂದು ಜಂ ಕ್ಲಿಪ್ ಸಹ ಹಾಕಿರುತ್ತಿದ್ದ.
ಆಹ್ವಾನಿಸಿದ್ದ ಎಲ್ಲ ಕಾರ್ಯಕ್ರಮಕ್ಕೂ ಹೋಗುವ ಉತ್ಸಾಹ ಅವನಿಗಿತ್ತು... ತಡವಾದರೂ ಬಂದು ಹೋಗುತ್ತಿದ್ದವ.
ಮೋಹನ ದೈವ ಭಕ್ತ, ಸ್ನಾನವಾದ ನಂತರ ರಾಮಾಂಜನೇಯ ಗುಡ್ಡಕ್ಕೆ ತಪ್ಪದೇ ಹೋಗುತ್ತಿದ್ದ... ನಾನು ಇದನ್ನು ನೋಡಿದ್ದೇನೆ. ಗುರುವಾರ ತಪ್ಪದೇ ಬೆಣ್ಣೆ ಗೋವಿಂದಪ್ಪ ಛತ್ರದಲ್ಲಿನ ರಾಯರ ಮಠಕ್ಕೆ ಹೋಗುತ್ತಿದ್ದ... ನಂತರ ವಿದ್ಯಾರ್ಥಿ ಭವನ್ ನಲ್ಲಿ ಸಾಗು ಮಸಾಲೆ ದೋಸೆ ತಿನ್ನುವುದನ್ನು ಅಷ್ಟೇ ಆಸ್ತೆಯಿಂದ ಮಾಡುತ್ತಿದ್ದ. ನನಗೂ ಆಹ್ವಾನವಿತ್ತು ಗುರುವಾರದ ಸಾಗು ಮಸಾಲೆ ದೋಸೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದ್ದು ಅವನಲ್ಲಿದ್ದ ಭಾಂದವ್ಯದ ದ್ಯೋತಕ.
ಶಾಸ್ತ್ರ ಸಂಪ್ರದಾಯಗಳು.. ಅದರಲ್ಲೂ ಮಧ್ವಸಂಪ್ರದಾಯದ ಬಗ್ಗೆ ಅವನಿಗೆ ಅಸಾಧಾರಣ ಜ್ಞಾನ.
ಇನ್ಸೂರೆನ್ಸ್ ಏಜೆಂಟಾಗಿ ಅವನಿಗೆ ಜನಸಂಪರ್ಕದ ಅವಶ್ಯಕತೆ ಬಹಳ ಇದ್ದರೂ ಸಹ.. ಅದು ಬರಿ ವ್ಯಾವಹಾರಿಕವಾಗಿರಲಿಲ್ಲ ಎಂದೇ ನನ್ನ ಭಾವನೆ.
ಮೋಹನನ ಅಂತಿಮ ದರ್ಶನಕ್ಕೆ ಬಂದಿದ್ದ ಒಬ್ಬ ಹೆಣ್ಣು ಮಗಳು ಹೇಳಿದ " ಅಣ್ಣ ತಮ್ಮಂದಿರ ತರಹ ಇದ್ದ... ಕಷ್ಟ ಅಂದರೆ ಯಾವಾಗಲೂ ಸಹಾಯಕ್ಕೆ ನಿಲ್ಲುತ್ತಿದ್ದ" ಎಂಬ ಮಾತು ಅವನ ವ್ಯಕ್ತಿತ್ವದ ಪರಿಚಯ.
ಯಾರಾದರೂ ಸತ್ತಾಗ ಪಾರ್ಕ್ ಬಳಿ ಹಾಕುತ್ತಿದ್ದ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದ ಭಾವಚಿತ್ರಗಳು ಹಾಗೂ ಸ್ನೇಹರಂಗದ ಸದಸ್ಯರು ಅಥವಾ ನಾಡಿನ ಗಣ್ಯರು ಸತ್ತಾಗ ಕಾಫಿ ಡೇ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸುವ ಅಂಶವನ್ನು ಅವನದೇ ರೀತಿಯಲ್ಲಿ ತಮಾಷೆಯಾಗಿ ವ್ಯಾಖ್ಯಾನಿಸುತ್ತಿದ್ದವ.
ಮೋಹನ ಭೌತಿಕವಾಗಿ ನಮ್ಮೊಂದಿಗಿಲ್ಲ.. ಅವನ ನೆನಪುಗಳು ಮಾತ್ರ ಬಹಳ ದಿನ ಕಾಡುತ್ತವೆ ಎನ್ನುವುದು ಮಾತ್ರ ಸತ್ಯ.
ಮೋಹನಾ.... ಇಗೋ ನಿನಗೆ ಇದು ನಿನ್ನದೇ ಹಾಸ್ಯರೂಪದ " ಭಾವಪೂರ್ಣ ಶ್ರದ್ಧಾಂಜಲಿ".
ಡಿ ಸಿ ರಂಗನಾಥ ರಾವ್
9741128413


Om shanthi 🙏🙏
ReplyDeleteಮೂರು ದಿನದಿಂದ ನಿಮ್ಮ ಈ ಲೇಖನಕ್ಕಾಗಿ ಕಾಯುತಿದ್ದೆ ಇದರಲ್ಲಿನ ಶೇ೫೦ ಭಾಗ
ReplyDeleteನಮ್ಮ ಗುಂಪಿನಲ್ಲಿ ಚರ್ಚೆ ಆಗಿತ್ತು ಒಬ್ಬ ಒಳ್ಳಯ ಸ್ನೇಹಮಯ ವೈಕ್ತಿಯನ್ನು ನಮ್ಮ ಸ್ನೇಹ ರಂಗ ಕಳೆದುಕೊಂಡಿದೆ
ಸವಿ ಸವಿ ನೆನಪು ಸಾವಿರ ನೆನಪು ಆದರೆ ಮೋಹನನ ಸಾವಿನ ನೆನಪು ಅತ್ಯಂತ ದುರದೃಷ್ಟಕರ. ಮೊದಮೊದಲು ಮೋಹನ ಕೆಲವು ವಿಚಾರದಿಂದ ಕೇವಲ ಸ್ನೇಹಿತ ನಾಗಿದ್ದ ನಂತರ ಅವನ ಮುಗ್ಧ, ನೇರ ನಡೆ ಇಂದ ನನಗೆ ಆಪ್ತ ಸ್ನೇಹಿತನಾಡ. ಬಹಳ ಸಹಾಯ, ಸಹಕಾರ ನನಗೆ ದೊರೆತಿದೆ. ಒಂದು ಒಳ್ಳೆಯ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡುವ ಆಸೆ ಇದೆ ನಮ್ಮ ಸ್ನೇಹರಂಗ ದಲ್ಲಿ ಎಲ್ಲರ ಸಹಕಾರದೊಂದಿಗೆ. ಮೋಹನನಿಗೆ ನನ್ನ ಆತ್ಮೀಯ ಶ್ರದ್ಧಾಂಜಲಿ. 🙏🙏🙏🙏
ReplyDeleteನಮಸ್ಕಾರ🙏
ReplyDeleteಭಗವಂತನ ಪಾದಕ್ಕೆ ಹೂವದ ನಿಮ್ಮ ಆಪ್ತಮಿತ್ರನಿಗೆ ಸದ್ಗತಿ ಸಿಗಲೆಂದು ಹಾರೈಸುತ್ತೇನೆ. ಅವರ ನೆನಪು ನಿಮ್ಮ ಮನದಲ್ಲಿರಲಿ, ಆದರೆ ಕಾಡುವ ನೋವು ಬೇಗ ಮಾಗಲಿ. ನಾವು ಕರೆದಾಗ ಹೋಗಲು ಅದೇ ಸಾಲಿನಲ್ಲಿ ನಿಂತಿದ್ದೇವಲ್ಲವೇ, ಭೂಮಿಯ ಋಣ ಮುಗಿದ ನಂತರ ಸಾಗಲೇಬೇಕು..
ರತ್ನಪ್ರಭಾ
Vishadada vishayavadaru, bidade oduvanthide. Sookta santapa samarpane. Om Shanthi
ReplyDelete