ಹೋಟೆಲ್- ತಿಂಡಿ - ಮಸಾಲೆ ದೋಸೆ



ಕೆಲವು ದಿನಗಳಿಂದ.. ದಿನಗಳೇನು ತಿಂಗಳುಗಳೇ ಕಳೆದಿವೆ... ವಿದ್ಯಾರ್ಥಿ ಭವನ್ ನಲ್ಲಿ ಮಸಾಲೆ ದೋಸೆ ತಿನ್ನಬೇಕೆಂಬುದು ನನ್ನ ಮಡದಿಯ ಆಸೆ. ಯಾಕೋ ಕಾಲವೇ ಕೂಡಿ ಬಂದಿರಲಿಲ್ಲ. ಎಲ್ಲ ಸರಿ ಇದ್ದಾಗ ಶುಕ್ರವಾರ ಹೋಟೆಲ್ ಗೆ ರಜಾ, ಶನಿವಾರ ಭಾನುವಾರ ತುಂಬಾ ಜನಸಂದಣಿ ಬೇಡ.. ಹೀಗೆ ಏನೇನೋ ಕಾರಣಗಳು.

ಇದ್ದಕ್ಕಿದ್ದಂತೆ ಇಂದು (ಬುಧವಾರ) ಬೆಳಿಗ್ಗೆ ಏನೋ ಮಾತನಾಡುತ್ತಾ ಕೂತಿದ್ದಾಗ, ದಿಡೀರ್ ಅಂತ ನಿರ್ಧಾರ ಮಾಡಿ ಹೊರಟೇ ಬಿಟ್ಟೆವು ವಿದ್ಯಾರ್ಥಿ ಭವನದ ಕಡೆಗೆ.



 ಅನಿರೀಕ್ಷಿತವಾಗಿ ನಮ್ಮ ಜೊತೆ ಸೇರಿದವರು ನಮ್ಮ ನೆಂಟರು ಅನಸೂಯ ಮತ್ತು ನಾಗಭೂಷಣ್ ದಂಪತಿಗಳು. ಹಳೆಯದನ್ನು ನೆನಪಿಸಿಕೊಳ್ಳುತ್ತಾ ಇಡ್ಲಿ ಮತ್ತು ದೋಸೆಗಳನ್ನು ಸವಿದಿದ್ದಾಯ್ತು. ಅಂತೂ ಬಹಳ ದಿನಗಳಿಂದ ಬಾಕಿ ಇದ್ದ ಒಂದು ಕಾರ್ಯಕ್ರಮ ಮುಗಿದಂತಾಯ್ತು.

ಸಾಮಾನ್ಯವಾಗಿ ಮಸಾಲೆ ದೋಸೆ ಎಂದರೆ, ಎಲ್ಲರಿಗೂ ಇಷ್ಟವೇ. ಅದರಲ್ಲೂ ವಿದ್ಯಾರ್ಥಿ ಭವನ್ ಮಸಾಲೆ ದೋಸೆಗೆ ಒಂದು ವಿಶಿಷ್ಟ ಸ್ಥಾನ. ದೋಸೆಯ ತಟ್ಟೆಗಳನ್ನು ಕೈ ಮೇಲೆ ಜೋಡಿಸಿಕೊಂಡು ಬಂದು ಕೊಡುವ ಶೈಲಿಯೇ ಚೆನ್ನ.

60 ರ ದಶಕದ  ಉತ್ತರಾರ್ಧದಲ್ಲಿ ವಿದ್ಯಾರ್ಥಿ ಭವನ್ ನಲ್ಲಿ.. ಜಾಗ ಸಿಗದಿದ್ದಾಗ ಹಿಟ್ಟು ರುಬ್ಬುವ ಒರಳು ಕಲ್ಲು ಬಳಿ ಹಾಕಿದ್ದ ಬೆಂಚಿನ ಮೇಲೆ, ತಟ್ಟೆಯನ್ನು ಕೈಯಲ್ಲಿ ಹಿಡಿದು, ಕೂತು ತಿಂದ ಮಸಾಲೆ ದೋಸೆ, ಚಟ್ನಿಯ ರುಚಿ ಈಗಿಲ್ಲದಿದ್ದರೂ... ವಿಶಾಲವಾದ ಜಾಗದಲ್ಲಿ ಕೂತು ತಿನ್ನುವ ಅನುಕೂಲ, ಕೈ ವರೆಸಿಕೊಳ್ಳಲು ಕೊಡುತ್ತಿದ್ದ ನ್ಯೂಸ್ ಪೇಪರ್ ನ ಬದಲು ಟಿಶ್ಯೂ ಪೇಪರ್ ಕೊಡುವ ತನಕ ಬದಲಾಗಿದೆ. 

ನನ್ನ ಕೆಲ ಸ್ನೇಹಿತರಿಗೆ, ವಿದ್ಯಾರ್ಥಿ ಭವನ್ ನಲ್ಲಿ ಶುಕ್ರವಾರ ಮಸಾಲೆ ದೋಸೆ ಕೊಡಿಸುತ್ತೇನೆಂದು, ಆಸೆ ತೋರಿಸುತ್ತಾ ಕೆಲವಾರು ವಾರ ಕಳೆದ ನಂತರ ಅದು ರಜಾ ದಿನ ಎಂದು  ನೆನೆಸಿಕೊಂಡು ತಮಾಷೆ ಮಾಡಿಕೊಂಡದ್ದಿದೆ.

ಇನ್ನೊಂದು ವಿಶೇಷದ ಸಂಗತಿ ಎಂದರೆ, ನನ್ನ ಸ್ನೇಹಿತ ಮೋಹನ ಕುಮಾರ್ ಗೆ, ಪ್ರತಿ ಗುರುವಾರ ಬೆಣ್ಣೆ ಗೋವಿಂದಪ್ಪ ಛತ್ರದ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿ, ನಂತರ ವಿದ್ಯಾರ್ಥಿ ಭವನ್ ನಲ್ಲಿ.. ಸಾಗು ಮಸಾಲೆ ದೋಸೆ ತಿಂದು ಬರುವುದು ಸಂಪ್ರದಾಯ. ಇಂಥ ಒಂದು ದಿವಸ ನನಗೂ ಸಾಗು ಮಸಾಲೆ ದೋಸೆ ಕೊಡಿಸಿದ ಮೋಹನ... ಇಂದು ಆಸ್ಪತ್ರೆಯಲ್ಲಿ ಮಲಗಿದ್ದಾನೆ... ದೇವರೇ ಅವನಿಗೆ ಆರೋಗ್ಯವನ್ನು ಕರುಣಿಸು.

ತಿಮ್ಮೇಶ ಪ್ರಭು ಉದ್ಯಾನವನಕ್ಕೆ ಬೆಳಿಗ್ಗೆ ವಾಯು ವಿಹಾರಕ್ಕೆ ಬರುತ್ತಿದ್ದ ಪ್ರೊಫೆಸರ್ ಎನ್ ಕೃಷ್ಣಸ್ವಾಮಿ ಅವರಿಗೆ ( ಪ್ರೀತಿಯ ಕಿಟ್ಟಿ ಮೇಷ್ಟ್ರು) ವಿದ್ಯಾರ್ಥಿ ಭವನ್ ದೋಸೆ ಅಂದರೆ ಪ್ರಿಯ. ಸಾಕಷ್ಟು ಬಾರಿ ನಮಗೆಲ್ಲಾ ಮಸಾಲೆ ದೋಸೆಯನ್ನು ಕೊಡಿಸಿದ್ದಾರೆ.

ಇನ್ನೊಂದು ಅಚ್ಚಳಿಯದೆ ನೆನಪಿರುವ ಸಂಗತಿ.. ನನ್ನ ಸ್ನೇಹಿತ HP ರಂಗನಾಥ ಹಾಗೂ ಭಾಗೂ ಅತ್ತಿಗೆ ಜೊತೆ ವಿದ್ಯಾರ್ಥಿ ಭವನ್ ನಲ್ಲಿ  ತಿಂದ ಎರಡೆರಡು  ಮಸಾಲೆ ದೋಸೆ. ಭಾಗೂ ಅತ್ತಿಗೆ, ನನ್ನ ಹೆಂಡತಿ ವಿಜಯಳ ಅಮ್ಮ. ನನಗೆ ಅತ್ತೆಯಾಗುವ ಮುನ್ನವೇ ನಮ್ಮನ್ನಗಲಿದ ಜೀವ.

ದೋಸೆ ತತ್ತಾರೇ ತಿಂಬೋಕೆ,  ಬಳ್ಳಾಪುರದ ಬಚ್ಚಪ್ಪನ ಮಗಳೇ ದೋಸೆ ತತ್ತಾರೆ ತಿಂಬೋಕೆ.... ಎಂಬುದು ನನ್ನೂರು ದೊಡ್ಡಜಾಲದಲ್ಲಿ ರಾತ್ರೋರಾತ್ರಿ ನಡೆಯುತ್ತಿದ್ದ ನಾಟಕದ ಮಧ್ಯೆ ತಮಾಷೆಗಾಗಿ ಹೇಳುತ್ತಿದ್ದ ಹಾಡು.

ತಿಂಡಿ ಬೇಕು ನಂಗೆ ತಿಂಡಿ ಬೇಕು ಹೋಟೆಲ್ ತಿಂಡಿ ಬೇಕು ಖಾರ ತಿಂಡಿ ಬೇಕು ....ಎಂಬುದು ಇನ್ನೊಂದು ಹಾಡು.

 ನಾನು ಚಿಕ್ಕಂದಿನಲ್ಲಿ ಕಂಡಿದ್ದು ಚಿಕ್ಕಜಾಲದಲ್ಲಿನ ಎರಡು ಹೋಟೆಲ್ ಮಾತ್ರ.  ಒಂದು ನಾಗೇಶ್ ನಡೆಸುತ್ತಿದ್ದ ಬ್ರಾಹ್ಮಣರ ಫಲಹಾರ ಮಂದಿರ ಹಾಗೂ ಶೆಟ್ಟರು ನಡೆಸುತ್ತಿದ್ದ ವೀರಶೈವರ ಕಾಫಿ ಕ್ಲಬ್.  ಅಲ್ಲಿನ ಖಾರಸೇವು ತಿಂದಿದ್ದೇನೆ.

ಬೆಂಗಳೂರಿಗೆ ಬಂದ ಹೊಸದರಲ್ಲಿ ಗಾಂಧಿ ಬಜಾರ್ ನ ಗೀತಾ ರೆಸ್ಟೋರೆಂಟ್ ಬಳಿ ಕ್ರಿಕೆಟ್ ಕಾಮೆಂಟರಿ ಕೇಳುತ್ತಾ ನಿಲ್ಲುತ್ತಿದ್ದ ಜನರ ಗುಂಪು, ಹಾಗೂ ಗುಡಿಬಂಡೆಯ ಸುಂದರ ಎಂಬುವರು ಕೊಡಿಸಿದ ಇಡ್ಲಿ ಚಟ್ನಿಪುಡಿ ತುಪ್ಪದ ರುಚಿ ನೆನಪಿದೆ.

ಗಾಂಧಿಬಜಾರಿನ  cafe India  ಎಂಬ ಹೋಟೆಲ್ ನಿಂದ ತಂದ ಸಾಂಬಾರ್ ಹಾಗೂ ಮನೆಯಲ್ಲಿ ಮಾಡಿದ ಅನ್ನದ ರುಚಿ ಆಗಿನ ಕಾಲಕ್ಕೆ  ಬಲು ಚೆನ್ನ.

ಲಾಲ್ ಬಾಗಿನ ಬೆಟ್ಟದ ತಪ್ಪಲಿನಲ್ಲಿದ್ದ ಲಾಲ್ ಬಾಗ್ ರೆಸ್ಟೋರೆಂಟ್ ನ ವಿಶೇಷ ಕುರ್ಚಿಗಳಲ್ಲಿ, ಗಿಡ ಮರಗಳ ಪರಿಸರದಲ್ಲಿ ಕೂತು ಸಂಭ್ರಮಿಸಿದ ಕ್ಷಣಗಳು ಮಧುರ. 

ಓದು ಮುಗಿದ ನಂತರ ಆಗಿನ ಮದರಾಸಿನ ಸದರನ್ ರೈಲ್ವೆ ಲೋಕೋ ವರ್ಕ್ಸ್ ನಲ್ಲಿ ಟ್ರೈನಿಂಗ್ ನ ಕೊನೆಯ ಹಂತದಲ್ಲಿ, ಅಲ್ಲಿಯ ವರ್ಕ್ಸ್ ಮ್ಯಾನೇಜರ್ ಶ್ರೀ ವಿಶ್ವನಾಥನ್ ಅವರು ನಮ್ಮೆಲ್ಲರ ಇಂಟರ್ವ್ಯೂ ಮಾಡಿದ್ದರು. ಅಲ್ಲಿ ನನಗೆ ಕೇಳಿದ ಪ್ರಶ್ನೆ ಬೆಂಗಳೂರಿನ ಯಾವ ಏರಿಯಾದಲ್ಲಿ ಇದ್ದೀರಿ ಎಂದು. ಮಾವಳ್ಳಿ ಎಂಬ ನನ್ನ ಉತ್ತರಕ್ಕೆ.. ಬಂದ ಪ್ರತಿಕ್ರಿಯೆ MTR    ( ಮಾವಳ್ಳಿ ಟಿಫನ್ ರೂಮ್ಸ್) ಗೊತ್ತಾ ಎಂದು. MTR ಗೊತ್ತು ಆದರೆ ನಾನು ಹೋಗಿಲ್ಲ ಎಂದು ಹೇಳಿದೆ. ಆಗಿನ ಕಾಲಕ್ಕೆ ನನಗೆ MTR ಕೈಗೆಟುಕದ ನಕ್ಷತ್ರ. ನಂತರದ ದಿನಗಳಲ್ಲಿ MTR ನಲ್ಲಿ ರವೆ ಇಡ್ಲಿ ಉಪ್ಪಿಟ್ಟು ಮಸಾಲೆ ದೋಸೆ,ಪೂರಿ, ಚಂದ್ರಹಾರ ತಿಂದು ಸಂಭ್ರಮಿಸಿದ್ದು ಉಂಟು. ನಮ್ಮ ದೊಡ್ಡ ಗುಂಪಿಗೆ ಜಾಗ ಸಿಗಲು ಬಹಳ ಹೊತ್ತು ಕಾಯಬೇಕಾದಾಗ ಅದರ ಮೇಲಿನ ವಾಂಛೆ ಕಡಿಮೆಯಾಯಿತು.

ಆದರೆ ಗಾಂಧಿ ಬಜಾರ್ ನಲ್ಲಿದ್ದ ಮಾಡ್ರನ್ ಟಿಫನ್ ರೂಮ್ಸ್ (MTR?) ನಲ್ಲಿ ಪೂರಿ ಸಾಗು ನನಗೆ ಇಷ್ಟವಾಗುತ್ತಿತ್ತು.

ಮಹಾಲಕ್ಷ್ಮಿ ಹೋಟೆಲ್ ನ ವೆಜಿಟಬಲ್ ಬೋಂಡಾ, ಖಾಲಿ ದೋಸೆಯ ರುಚಿ ನೆನಪಿದೆ.

ಮದರಾಸಿನಲ್ಲಿ ಇದ್ದಾಗ ಪ್ರತಿದಿವಸ ಎರಡು ಹೊತ್ತು ಊಟ ಮಾಡುತ್ತಿದ್ದದ್ದು ಶರವಣ ಭವನ ಎಂಬ ಚಿಕ್ಕ ಹೋಟೆಲ್ ನಲ್ಲಿ, 40 ಪೈಸೆಯ plate meal. ಅಲ್ಲಿ ಕುಡಿಯುತ್ತಿದ್ದ ಮಜ್ಜಿಗೆಯದೇ ವಿಶಿಷ್ಟ ರುಚಿ. ಯಾವಾಗಲಾದರೂ ಒಮ್ಮೆ ಪ್ಯಾರಿಸ್ ಕಾರ್ನರ್ ನಲ್ಲಿದ್ದ woodlands ಹೋಟೆಲ್ ನಲ್ಲಿ  3 ರೂಪಾಯಿ ಕೊಟ್ಟು ಬಾಳೆ ಎಲೆಯ ಭರ್ಜರಿ ಊಟ ಮಾಡುತ್ತಿದ್ದದ್ದು ಉಂಟು.

ಮೊದಲ ಬಾರಿಗೆ ಬಾಸುಂದಿಯನ್ನು ತಿಂದದ್ದು ಅದೇ ಏರಿಯಾದ ಹೋಟೆಲ್ ನಲ್ಲಿ.... ಹೆಸರು ಮರೆತಿದೆ.

ಕೆಂಪೇಗೌಡ ರಸ್ತೆಯ ವಿಷ್ಣು ಭವನ್ ನಲ್ಲಿ ತಿನ್ನುತ್ತಿದ್ದದ್ದು ಬ್ರೆಡ್ ಜಾಮ್.... ಅದು ಎನ್‌ಸಿಸಿ ಪೆರೇಡ್‌ನಲ್ಲಿ ಭಾಗವಹಿಸಿದ ನಂತರ ಕೊಡುತ್ತಿದ್ದ 40 ಪೈಸೆಯ ಟೋಕನ್  ಉಪಯೋಗಿಸಿ. 

SJ ಪಾಲಿಟೆಕ್ನಿಕ್ ನಲ್ಲಿ ಓದುತ್ತಿದ್ದಾಗ ಅಲ್ಲಿನ ರಾಮಾಂಜನೇಯ (ಯುದ್ಧ) ಕ್ಯಾಂಟೀನ್ ನಲ್ಲಿ ಹಂಚಿಕೊಂಡು ತಿನ್ನುತ್ತಿದ್ದ ವಡೆ ಸಾಂಬಾರಿನ ರುಚಿಯೇ ರುಚಿ.

ಶಹಾಬಾದಿನಲ್ಲಿದ್ದಾಗ ಭಾನುವಾರದ ದಿನ ಪೇಟೆಗೆ ಹೋಗಿ, ಕೆಲವು ಸಲ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದು  (ಬೆಂಗಳೂರಿನ ವಿದ್ಯಾರ್ಥಿ ಭವನ್ ದೋಸೆಗೆ ತುಲನೆ ಮಾಡಿ ಲೊಚಗುಟ್ಟಿಕೊಂಡು, ಸಪ್ಪೆ ಮುಖ ಮಾಡಿಕೊಂಡು) ಬಂದದ್ದುಂಟು. ಗುಲ್ಬರ್ಗಾ ಗೆ ಹೋದಾಗ ಕಾಮತ್( ಖಾವ್ ಮತ್) ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದು ಬಂದರೆ ಪ್ರಯಾಣ ಪೂರ್ತಿಯಾದಂತೆ.



ಶರಣಬಸವೇಶ್ವರ ಮೆಸ್ಸಿನ ಬದನೆಕಾಯಿ ಎಣ್ಣೆಗಾಯಿಯ ಜೊತೆ ಜೋಳದ ರೊಟ್ಟಿ ಸವಿದದ್ದು ವಾರೆ ವ್ಹಾ...

ಬೀದರ್ ನಲ್ಲಿ ತಿಂದ ಶೇಂಗಾ ಹೋಳಿಗೆ, ಬಿಡದಿಯ ತಟ್ಟೆ ಇಡ್ಲಿ, ದ್ವಾರಕಾ ಹೋಟೆಲಿನ ಖಾಲಿ ದೋಸೆ, ಏರ್  ಲೈನ್ಸ್ ಹೋಟೆಲ್ ನ ಚನ ಬಟೂರ, ನನ್ನ ಸೋದರ ಮಾವ ವಿಶ್ವೇಶ್ವರಣ್ಣಯ್ಯನ ಜೊತೆ ತಿಂದ ಪೂರಿ ಸಾಗು, ಒರಿಸ್ಸಾದ ಕಟಕ್ ನಲ್ಲಿ ಊಟ ಸಿಗದೇ ಎರಡು ಆಲೂ ಪರೋಟ ತಿಂದು ನೀರು ಕುಡಿದು ಮಲಗಿದ ನೆನಪುಗಳು ಹಸಿರಾಗಿದೆ.

ಆಗಿನ ದಿನಗಳಲ್ಲಿ ಯಾವುದೇ ವಿಷಯವನ್ನು ಸಂಭ್ರಮಿಸುವುದು SKC ಯ ಮೂಲಕ. SKC ಸಿಹಿ, ಖಾರ ಹಾಗೂ ಕಾಫಿಯ ಹ್ರಸ್ವರೂಪ. SKC ಕೊಡಿಸ್ಬೇಕಪ್ಪ ಅನ್ನುವುದು ಸಾಮಾನ್ಯ ಅಹವಾಲಾಗಿತ್ತು.

North Indian Dishes ನ ಮೊದಲ ಅನುಭವ ವಾಗಿದ್ದು ಗಾಂಧಿ ಬಜಾರ್ ನ ಅತಿಥ್ಯ ಹೋಟೆಲ್ ನಲ್ಲಿ. ವೆಜಿಟೇಬಲ್ ಹೈದರಾಬಾದಿ ಎನ್ನುವ ಹೆಸರಿನ ವ್ಯಂಜನದೊಂದಿಗೆ ತಿಂದ ರೊಟ್ಟಿಯ ಮೂಲಕ.

ಭಾನುವಾರದ ವಾಕಿಂಗ್ ಎಂದು ಲಾಲ್ ಬಾಗಿಗೆ ಹೋಗಿ, ನಂತರ ಹೋಟೆಲ್ ನಲ್ಲಿ ತಿಂಡಿ ತಿಂದು ಬರುವುದು ಸಂಪ್ರದಾಯವೇ ಆಗಿತ್ತು. ಒಂದು ಹಂತದಲ್ಲಿ ಸಜ್ಜನ್ ರಾವ್ ಸರ್ಕಲ್ ನಲ್ಲಿನ ಜನತಾ ಹೋಟೆಲ್ ನಲ್ಲಿ ಇಡ್ಲಿ ಸಾಂಬಾರ್ ತಿಂದು, ರಾಮಕೃಷ್ಣಾಶ್ರಮದ ಬಳಿಯ ಎಸ್ ಎಲ್ ವಿ ಹೋಟೆಲ್ ನಲ್ಲಿ ಖಾರಬಾತ್ ತಿಂದು ನಂತರ ದ್ವಾರಕಾ ಹೋಟೆಲ್ ನಲ್ಲಿ ಖಾಲಿ ದೋಸೆ ತಿಂದು, ಮನೆಗೆ ಬಂದು ಹೆಬ್ಬಾವಿನಂತೆ ಮಲಗಿ, ಮಡದಿಯಿಂದ ಮೂತಿ ತಿವಿಸಿಕೊಂಡಿದ್ದೂ ಉಂಟು.

ಹೋಟೆಲ್ ನಿಂದ ಮನೆಗೆ ತಿಂಡಿ ತಂದು ತಿನ್ನುವುದು, ನನಗೆ ಅಷ್ಟು ಸರಿ ಬರುತ್ತಿರಲಿಲ್ಲ. ಆದರೆ ನನ್ನ ಭಾವ ಮೈದುನ ರಘು ಮತ್ತೆ ಮತ್ತೆ ಹೋಟೆಲ್ ನಿಂದ ತಂದ ತಿಂಡಿಯನ್ನು ತಿಂದು ಮನಸ್ಸು ಒಗ್ಗಿಹೋಯಿತು. ಈಗಂತೂ ಸರಿ online ಮೂಲಕ ಎಲ್ಲಿಂದ ಬೇಕಾದರೂ ತಿಂಡಿಯನ್ನು ಮನೆಗೆ ತರಿಸಿಕೊಳ್ಳಬಹುದು. ಎಂಥ ಬದಲಾವಣೆ.

ನಾನು ಕೆಲಸ ಮಾಡುತ್ತಿದ್ದ MANTONS ಎಂಬ ಸಂಸ್ಥೆಯಲ್ಲಿ, ಸಸ್ಯಾಹಾರಿ ಅತಿಥಿಗಳು ಬಂದಾಗ ಅವರನ್ನು ಊಟಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದಾಗುತ್ತಿತ್ತು... ಆಗ ಹೋದದ್ದೇ ರೆಸಿಡೆನ್ಸಿ ರಸ್ತೆಯಲ್ಲಿದ್ದ East West ಎಂಬ ದೊಡ್ಡ ಹೋಟೆಲ್.

ತುಂಬಾ ಸಂತೋಷದ ಸಂಗತಿ ಎಂದರೆ, ಶಹಾಬಾದ್ ನಲ್ಲಿ ನಮ್ಮ ಮೆಸ್ಸಿನಲ್ಲಿ ಅಡುಗೆ ಮಾಡುತ್ತಿದ್ದ messamma (ಹೆಸರು ನೆನಪಿಲ್ಲ) ಇಲ್ಲಿ ಕಲಿತ  ಇಡ್ಲಿ ದೋಸೆ ಮಾಡುವ ಕಲೆಯನ್ನು ಉಪಯೋಗಿಸಿಕೊಂಡು, ತನ್ನದೇ ಸ್ವಂತ ಹೋಟೆಲ್ ಶುರು ಮಾಡಿದ್ದಳೆಂದು ತಿಳಿದದ್ದು.

ಅಂದಿನ ದಿನಗಳಲ್ಲಿ ಮೈಸೂರಿಗೆ ಹೋದಾಗ ದಾಸ್ ಪ್ರಕಾಶ್ ಹೋಟೆಲ್  ನಲ್ಲಿ ಊಟ ಮಾಡುತ್ತಿದ್ದದ್ದು ಸಾಮಾನ್ಯ. ಅಲ್ಲಿನ ಸಾರಿನ ರುಚಿ ನನ್ನ ಮಗಳು ಚೈತ್ರ ತುಂಬಾ ಇಷ್ಟಪಡುತ್ತಿದ್ದದ್ದು. ನನ್ನ ಹೆಂಡತಿಗೆ ಅಲ್ಲಿನ fruit salad with icecream ಪ್ರಿಯ.

ಮಾಗಡಿಯಲ್ಲಿ ನನ್ನ ಭಾವನ ಭಾವ ನಡೆಸುತ್ತಿದ್ದ ಚಂದ್ರಮೌಳೇಶ್ವರ ರೆಸ್ಟೋರೆಂಟ್ ನಲ್ಲಿ ನನ್ನ ಇಚ್ಛೆಗೆ ವಿರುದ್ಧವಾಗಿ, ಬಲವಂತಕ್ಕಾಗಿ ಒಂದು ದಿನ ತಿಂಡಿ ತಿಂದ ನೆನಪಿದೆ.

ಬರೋಡದಲ್ಲಿ ನನ್ನ ಭಾವ ಮೈದುನ MV ಶ್ರೀನಿವಾಸ್ (ಪ್ರೀತಿಯ... ಪುಟ್ಟು) ಜೊತೆ ಹೋಗಿದ್ದ ಗುಜರಾತಿ ಊಟದ ಸವಿ.. ಅಲ್ಲಿಯ ದೊಡ್ಡ ತಟ್ಟೆಗಳು, ವಾತಾವರಣ.. ಅದರಲ್ಲೂ ಮಾವಿನ ಹಣ್ಣಿನ  ಸೀಕರಣೆಯ ವಿಶೇಷ ರೂಪಾಂತರ  ಮೆಚ್ಚುಗೆ ಯಾಗಿದ್ದು.

ಎಷ್ಟೋ ಹೋಟೆಲ್ ಗಳಲ್ಲಿ, ಎಷ್ಟೆಷ್ಟೋ ಸಲ ಎಷ್ಟೊಂದು ಬಗೆಯ ತಿಂಡಿಗಳನ್ನು ತಿಂದಿದ್ದೇನೋ... ಲೆಕ್ಕ ಸಿಗದು. ಮುಂದೆಷ್ಟು ಕಾದಿದೆಯೋ ಆ ದೇವರೇ ಬಲ್ಲ.

ಎಸ್ ಎಲ್ ಭೈರಪ್ಪನವರ ಗೃಹಭಂಗ ಕಾದಂಬರಿಯ ಚನ್ನಿಗರಾಯರು ಎಲ್ಲರ ಕಣ್ಣು ತಪ್ಪಿಸಿ ಹೋಟೆಲಿಗೆ ಹೋಗಿ  ಹೊಟ್ಟೆ ತುಂಬಾ ತಿಂದು ಬರುವ ವಿವರ ಚೆನ್ನಾಗಿದ್ದರೂ, ಅವರ ಅತಿ ಸ್ವಾರ್ಥ ಜಿಗುಪ್ಸೆ ತರಿಸುತ್ತದೆ. ಇಂತಹ ಜನರು ಇರಬಹುದಾ ಎಂಬ ಪ್ರಶ್ನೆ ಕಾಡುತ್ತದೆ.

ಕೊನೆಯದಾಗಿ ...ನನ್ನ ಸ್ನೇಹಿತ ವಾಸು(NS ವಾಸುದೇವ್).... ತಿಂಡಿ ಪ್ರಿಯ. ಹೋಟೆಲ್ ಗೆ ಹೋದಾಗ ಅವರ ಜೊತೆ ಕೂತು ವಿವಿಧ ರೀತಿಯ ತಿಂಡಿಗಳನ್ನು ಹಂಚಿಕೊಂಡು ತಿನ್ನುವುದು ನನಗೆ ಅಭ್ಯಾಸ.  ಹೊಸ ಹೋಟೆಲ್ ಗಳು ಶುರುವಾದ ಸುದ್ದಿ ಅವರಿಗೆ ಬೇಗ ತಲುಪುತ್ತದೆನೋ. ಒಂದು ಹೊಸ ಹೋಟೆಲಿಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸುತ್ತೇನೆಂದು ಆಹ್ವಾನ ಕೊಟ್ಟಿದ್ದಾರೆ, ಆದರೆ ಅದಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ...

ಈಗಲಾದರೂ ಅದರ ಬಗ್ಗೆ ನಿರ್ಧಾರ ಮಾಡಬೇಕು.... ಹೋಗಿ ತಿಂಡಿ ತಿನ್ಬೇಕು...ಹೊರಡ್ತೀನಿ

ನಮಸ್ಕಾರ ...

ಡಿ ಸಿ  ರಂಗನಾಥ ರಾವ್

9741128413



    

Comments

  1. Sir namma SST group ge neeve Vidyarthi bhavan nalli dose kodisiddiri . Nija dose thinda dina hebbavinanthe nidde 😄

    ReplyDelete
  2. It will be very interesting to read your writimngs.Keep sending such memorable moments.

    ReplyDelete
  3. ನಿಮ್ಮ ದೋಸೆ ಪ್ರಯಾಣ ನೆನಪುಗಳು ತುಂಬಾ ರುಚಿಯಾಗಿದೆ. ನಿಮ್ಮ ಈ ತಿಂಡಿ ಪ್ರಯಾಣದಲ್ಲಿ ನಾನು ಒಂದು ಕಾಲದಲ್ಲಿ ಪ್ರಯಾಣಿಕನಾಗಿದ್ದೆ ಎಂಬ ನೆನಪು ತುಂಬಾ ಹಸಿರು ನನ್ನ ನೆನಪಿನಗಳದಲ್ಲಿ.

    ReplyDelete
  4. DC, ಬರೀ ಮಸಾಲ ದೋಸೆ photo ತೋರಿಸಿ ನಮ್ಮ ಬಾಯಿ ಚಪಲ ಜಾಸ್ತಿ ಮಾಡಿದಿರಾ. ಅದಕ್ಕೆ ಶಿಕ್ಷೆ ಏನು ಗೊತ್ತಾ ನಮಗೆ ವಿದ್ಯಾರ್ಥಿ ಭವನ ನಲ್ಲಿ ಬಿಸಿ ಬಿಸಿ ಮಸಾಲ ದೋಸೆ ಕೊಡಿಸಬೇಕು. ಶುಕ್ರವಾರ ಬಿಟ್ಟು ಯಾವದಿನ ಆದರೂ ಸರಿ

    ReplyDelete
  5. ಅಬ್ಬಬ್ಬಾ ಎಲ್ಲಾ
    ಹೋಟೆಲ್ ಗೂ ಹೋಗಿಬಂದಂತೆ ಆಯಿತು..
    ನಿಮ್ಮ ವಿಶ್ಲೇಷಣೆ ಅದ್ಬುತ ಸರ್..
    ವಿಧ್ಯಾರ್ಥಿ ಭವನದಲ್ಲಿ ಅಡಿಗೆ ಮನೆ ಹತ್ತಿರ ನಾವು ಸಣ್ಣವರಾಗಿದ್ದಾಗ ತಿಂಡಿ ತಿಂದದ್ದು ನೆನಪಾಯಿತು.
    ನಮ್ಮ ಗುಂಪು (ಸಭಾ)ವಿಧ್ಯಾರ್ಥಿ ಭವನಕ್ಕೆ ಹೋಗೇ ಇಲ್ಲ

    ReplyDelete
  6. ಗುರುಪ್ರಸನ್ನ, ಚಿಂತಾಮಣಿ18 October 2025 at 22:55

    ವಿವಿಧ ರೀತಿಯ ತಿಂಡಿಗಳು, ಭೋಜನದಲ್ಲಿ ಓದುಗರನ್ನು ಮುಳುಗಿಸಿ, ತೇಲಾಡಿಸಿ, ಹೊರಳಾಡಿಸಿಬಿಟ್ಟಿದ್ದೀರಿ. ಅವುಗಳು ನಮ್ಮ ನೆನಪಿನ ಬುತ್ತಿಗೆ ಕೈಹಾಕಿ ಹಿಂದೆ ತಿಂದಿರುವ ತಿಂಡಿಗಳನ್ನು ಮೇಲಕ್ಕೆ ತಂದುಬಿಟ್ಟಿದೆ.

    ಪ್ರಸ್ತುತಿಯು ಸೊಗಸಾಗಿದ್ದು ಓದಿಸಿಕೊಂಡು ಹೋಗುತ್ತದೆ.

    ಮನೆಯಲ್ಲಿ ಎಷ್ಟೇ ಸೊಗಸಾಗಿ ಅಡಿಗೆ ಮಾಡಿದರೂ ಹೊಟೇಲಿನ ತಿಂಡಿ ಊಟದ ರುಚಿಯೇ ಬೇರೆ..ಅದೇಕೋ?

    ಕೊನೆ ಹನಿ

    ಚಿಂತಾಮಣಿಯ ಕಡಲೆಬೀಜವನ್ನೊಮ್ಮೆ ನೀವು ತಿನ್ನಬೇಕು...ಅದರ ಗಮ್ಮತ್ತೇ ಬೇರೆ!

    ReplyDelete
  7. ಜಯಸಿಂಹ19 October 2025 at 09:57

    ದೋಸೆ ಪುರಾಣ ಚೆನ್ನಾಗಿದೆ ಸಾಧ್ಯವಾದಷ್ಟು ಬೇಗ ವಿದ್ಯಾರ್ಥಿ ಭವನಕ್ಕೆ ಕರೆದುಕೊಂಡು ಹೋಗಿ ಡಬಲ್ ಮಾಸಾಲೆ ದೋಸೆ ಕೊಡಿಸು ಲೇಖನವನ್ನು ಸಾರ್ಥಕಗೊಳಿಸು

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ