ಭಾವ - ಬಾಂಧವ್ಯ
ನವರಾತ್ರಿಯ ಕೊನೆಯ ದಿನ ವಿಜಯದಶಮಿ,ಮೈಸೂರಿನ ಜಂಬೂ ಸವಾರಿಯ ಸಡಗರ. ಹಿಂದಿನ ಕಾಲದ ರಾಜ ಮಹಾರಾಜರ ಜೈತ್ರ ಯಾತ್ರೆಯ ದಿನ.
ನನ್ನ ಭಾವ ಕರಲಮಂಗಲದ ರಾಮರಾವ್ ಅವರ ಅಸ್ತಿ ತುಂಬಿದ ಕುಂಡವನ್ನು ಹೊತ್ತು ತಿರುಮಕೂಡಲು ನರಸೀಪುರದ ಕಡೆಗೆ ಅಸ್ತಿ ವಿಸರ್ಜನೆ ಮಾಡಲು ಕಾರಿನಲ್ಲಿ ಸವಾರಿ ಹೊರಟಿದ್ದೇವೆ, ಭಾವನ ಮಗ,ಮೊಮ್ಮಗ, ಇಬ್ಬರು ಅಳಿಯಂದಿರೊಂದಿಗೆ ನಾನು. ಜೀವನದ ಕಷ್ಟ ಕೋಟಲೆಗಳನ್ನು ಜಯಿಸಿ, ಜೀವನ್ಮುಕ್ತರಾದ ನನ್ನ ಭಾವನ ಭೌತಿಕ ಶರೀರದ ಭಸ್ಮವಾಗದೇ ಉಳಿದ ಭಾಗಗಳ ಜೈತ್ರ ಯಾತ್ರೆ ಎನ್ನಲೇ?
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ತಿಂದು ನಿನ್ನನ್ನ ಋಣ ತೀರುತಲೇ ಪಯಣ ಹಿಂದಾಗದೊಂದು ಚಣ ಮುಂದಕುಂ ಕಾದಿರದು ಸಂದಲೆಕ್ಕವದೆಲ್ಲ ಮಂಕುತಿಮ್ಮ.
ಡಿವಿಜಿಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ಎಷ್ಟು ಸಮಂಜಸ ಅಲ್ಲವೇ? ಭೂಲೋಕದ ಅನ್ನದ ಋಣ ತೀರಿದ ಕ್ಷಣವೇ ಪರಲೋಕಕ್ಕೆ ಮುಂದಿನ ಪಯಣ. ಸ್ವಲ್ಪವೂ ಹಿಂದು ಮುಂದಾಗುವುದಿಲ್ಲ, ಅದರ ಲೆಕ್ಕವು ಈಗಾಗಲೇ ಬರೆದಾಗಿದೆ. ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಇದು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುವ ವಿಷಯ.
ರಾಮರಾಯರ ಮದುವೆ ನನ್ನ ಅಕ್ಕ ಗಿರಿಜಾಂಬನೊಡನೆ ನಡೆದದ್ದು 1962ನೇ ಇಸವಿಯಲ್ಲಿ. ನಾನಾಗ ಹೈಸ್ಕೂಲ್ ವಿದ್ಯಾರ್ಥಿ. ಯಾಕೋ ಕಾಣೆ ನನಗೆ ಮತ್ತು ನನ್ನಣ್ಣ ಸತ್ತಿಗೆ ಅವರು ಹಿಡಿಸಿರಲಿಲ್ಲ. ನಾವಿಬ್ಬರೂ ಮಾತಾಡಿಕೊಂಡಿದ್ದೆವು. ಆದರೆ ವಿಧಿ ನಿಯಮ, ಅವರು ನಮ್ಮ ಭಾವ ಆಗಿಯೇ ಹೋದರು. ಭಾಂದವ್ಯ ಬೆಳೆದು ಹತ್ತಿರವಾಗುತ್ತಿದ್ದಂತೆ, ಅವರು ತುಂಬಾ ಪ್ರಿಯರಾದರು, ಹಾಗೆಯೇ ಕೊನೆಯ ತನಕ ಉಳಿದರು.
ನನ್ನ ಅವರ ಬಾಂಧವ್ಯದ ವಿಶಿಷ್ಟ ಘಟನೆ ಎಂದರೆ... ನನ್ನಕ್ಕ ಅವರ ಮನೆಗೆ ಹೋಗಿ ಜೀವನ ಪ್ರಾರಂಭಿಸುವ ಮೊದಲೇ ನಾನು ನಮ್ಮ ಭಾವನ ಜೊತೆ ಹೋಗಿ ಒಂದು ವಾರ ಇದ್ದು ಬಂದಿದ್ದೆ. ಈಗಲೂ ನನಗೆ ಆಶ್ಚರ್ಯವಾಗುತ್ತದೆ.. ಅದು ಹೇಗೆ ನಾನು ಒಪ್ಪಿದೆನೋ, ಅಥವಾ ಅವರೇ ಒಪ್ಪಿಸಿದರೋ... ಯಕ್ಷಪ್ರಶ್ನೆ.
ನಾನು ಓದುವಷ್ಟು ದಿನವು ರಜ ಬಂದಾಗೆಲ್ಲ ಕರಲಮಂಗಲಕ್ಕೆ ಹೋಗುವುದು ಸಾಮಾನ್ಯವಾಗಿತ್ತು. ಅದರಲ್ಲೂ ಬೇಸಿಗೆಯ ರಜದಲ್ಲಿ ಹೋದಾಗ, ಅವರ ಶಾನುಭೋಗಿಕೆಯ ಲೆಕ್ಕವನ್ನು ಬರೆದುಕೊಡುವುದು ನನಗೆ ಹೆಮ್ಮೆಯ ಸಂಗತಿ.
ನಾನು ಮದರಾಸಿನಲ್ಲಿ ಇದ್ದ ಸಮಯ, ತಿಂಗಳಿಗಾಗಿ ತೆಗೆದುಕೊಂಡಿದ್ದ ಊಟದ ಚೀಟಿಗಳನ್ನು ಕಳೆದುಕೊಂಡು ಪರದಾಡುತ್ತಿದ್ದೆ, ಭಾವ ನನಗೆ 25 ರೂಪಾಯಿಗಳನ್ನು ಮನಿ ಆರ್ಡರ್ ಮಾಡಿದ್ದರು.. ಒಂದು ತಿಂಗಳ ಊಟದ ಚೀಟಿಯ ಆಗಿನ ಬೆಲೆ. ಇದು ನಾನು ಕೇಳಿ ಕೊಟ್ಟದ್ದಲ್ಲ, ಅವರೇ ಯೋಚಿಸಿ ಸ್ಪಂದಿಸಿದ್ದು... ಅದೇ ಅವರ ಅಭಿಮಾನ ಪ್ರೀತಿಯ ದ್ಯೋತಕ.
ಭಾವ ಜನಾನುರಾಗಿ, ಎಲ್ಲರ ಜೊತೆ ಹೊಂದಿಕೊಳ್ಳುವ ಸ್ವಭಾವ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದವರು. ನಾನು ವಾಕಿಂಗ್ ಹೋಗುವ ಉದ್ಯಾನವನಕ್ಕೆ ಬರುತ್ತಿದ್ದ ಭಾವ, ನನ್ನ ಸ್ನೇಹಿತರ ದೃಷ್ಟಿಯಲ್ಲಿ ಪಾರ್ಕ್ ಭಾವ. ಅವರೆಲ್ಲ ಭಾವ ಎಂದೇ ಸಂಭೋಸಿಸುತ್ತಿದ್ದದ್ದು.
ನಮ್ಮ ಕುಟುಂಬದವರು ಒಟ್ಟಾಗಿ ಸಾಕಷ್ಟು ಪ್ರವಾಸಗಳನ್ನು ಮಾಡಿದ್ದೇವೆ. ಸಾಮಾನ್ಯವಾಗಿ ಈ ಭಾವ ನಮ್ಮ ಜೊತೆಯಲ್ಲಿ ಇರುತ್ತಿದ್ದರು. ಆ ಸಮಯದ ಎಲ್ಲ ಆಗುಹೋಗುಗಳಿಗೂ ಅವರು ತೆರೆದ ಮನಸ್ಸಿನಿಂದ ಜೊತೆಯಾಗುತ್ತಿದ್ದ ರೀತಿ ನನಗೆ ಅಚ್ಚುಮೆಚ್ಚು.
ನನ್ನ ಮತ್ತು ಭಾವನದು ಅವಿನಾಭಾವ ಸಂಬಂಧ. ಬಹಳಷ್ಟು ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದೆವು, ಸಹಕಾರಿಯಾಗುತ್ತಿದ್ದೆವು.
ಕಾರ್ಯಕ್ರಮಗಳಲ್ಲಿ ಒಂದಾಗಿ ಸೇರಿದಾಗ ಹರಟೆಯಲ್ಲಿ ಸಕ್ರಿಯವಾಗಿ, ತಮಾಷೆಯಾಗಿ ಭಾಗವಹಿಸುತ್ತಿದ್ದರು, "ಏನೋ ಮೋಸ ಮಾಡಿ ನಿಮ್ಮಕ್ಕನ್ನ ನನಗೆ ಕಟ್ಟಿಬಿಟ್ಟರಿ" ಅನ್ನುತ್ತಿದ್ದ ಭಾವನಿಗೆ " ಏನು ಮಾಡೋದು ಭಾವ ನಮ್ಮ ಜವಾಬ್ದಾರಿಯನ್ನು ಕಳ್ಕೋಬೇಕಾಗಿತ್ತಲ್ಲ... ಆದರೆ ನಮ್ಮಕ್ಕನ ತರ ಹೆಂಡ್ತೀನಾ ಪಡಿಯೋಕೆ ತುಂಬಾ ಅದೃಷ್ಟ ಮಾಡಿದ್ರಿ..." ಅಂತ ಹೇಳಿ ಆದ್ಮೇಲೆ.. "ಅಯ್ಯೋ ಬಿಡಿ ಭಾವ, ಈಗಲೂ ಹೂ ಅನ್ನಿ ನಿಮಗೆ ಒಂದು ಸುಂದರವಾದ ಹುಡುಗಿನ ಹುಡುಕಿ ಮದುವೆ ಮಾಡಿಸ್ತೀನಿ... ನಮ್ಮಕ್ಕ ಗರ್ಭಗುಡಿಯ ಮೂಲ ದೇವರ ತರ ಇರಲಿ, ಹೊಸ ಹುಡುಗಿನ ಉತ್ಸವ ಮೂರ್ತಿ ತರ ಖುಷಿಯಾಗಿ ಆಚೆ ಕಡೆ ಓಡಾಡ್ಸಿ.. " ಅಂತ ತಮಾಷೆ ಮಾಡಿದ ದಿನಗಳು ಸಾಕಷ್ಟು ಉಂಟು.... ಅಮ್ಮ ತಲೆಹರಟೆ ಸಾಕು ಅಂತ ನನ್ನ ಬೈದಿದ್ದು ಉಂಟು.
ನನ್ನ ಹೆಂಡ್ತಿ ವಿಜಯಳಿಗೆ, ಭಾವ ಯಾವಾಗಲೂ ಬೆನ್ನೆಲುಬು. ಹರಟೆ ಹೊಡೆಯುವ ಕಾಲದಲ್ಲಿ, ಭಾವ ನನ್ನನ್ನು ಹೊಗಳಿದರೆ, ನನ್ ಹೆಂಡ್ತಿ ನನ್ನ ಗುಣಗಾನ (ಹೊಗಳಿಕೆ ಅಲ್ಲ.. ಮೂದಲಿಕೆ) ಮಾಡಿದಾಗ " ನೀನು ಸುಮ್ನೆ ಇರಮ್ಮ ನಾನಿದ್ದೀನಿ, ನನ್ ತಂಗಿನ ಬಿಟ್ಟುಕೊಡಕಾಗುತ್ತಾ.." ಅಂತ ತಮಾಷೆ ಮಾಡೋರು. ಕಳೆದ ಅಂತಹ ಖುಷಿಯ ಕ್ಷಣಗಳ ಬುತ್ತಿ ಸಾಕಷ್ಟು ಇದೆ.
ಈಚಿನ ದಿನಗಳಲ್ಲಿ ಅವರ ಆರೋಗ್ಯ ಕೈಕೊಡುತ್ತಿತ್ತು, ಮನಸ್ಸಿನಲ್ಲೂ ಒಂದಷ್ಟು ನೋವಿತ್ತು... ಅಸಹಾಯಕತೆ ಇತ್ತು.. ಆದರೆ ಅದೇನೂ ದೊಡ್ಡ ವಿಚಾರ ಆಗಿರಲಿಲ್ಲ. ವಯಸ್ಸು ಮಾಗುತ್ತಾ ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಮನಸ್ಥಿತಿಯಷ್ಟೇ.
ನಾಲ್ಕು ತಲೆಮಾರಿನ ಕುಟುಂಬದ ಹಿರಿಯನಾಗಿ, ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದು ನನ್ನ ಅಚಲ ನಂಬಿಕೆ.
ಕನಕಾಭಿಷೇಕ ಮಾಡಿಸಿಕೊಂಡ ಅದೃಷ್ಟ ನನ್ನಕ್ಕ ಭಾವ ದಂಪತಿಗಳದು.
ಆರೋಗ್ಯ ಹಠಾತ್ ಕುಸಿಯಿತು, ಯಾವ ಚಿಕಿತ್ಸೆಗೂ ಸ್ಪಂದಿಸದ ಭಾವ ನಮ್ಮಿಂದ ಭೌತಿಕವಾಗಿ ದೂರವಾದರು.
ಜೀವನ ನಿಂತ ನೀರಲ್ಲ.. ಅದು ಹರಿಯಲೇಬೇಕು. ಅಸ್ತಿ ವಿಸರ್ಜನೆ ಮುಗಿಸಿ ಬಂದಾಯ್ತು.. ಮುಂದಿನದೂ ನಡೆಯುತ್ತದೆ.
ಅಕ್ಕ ಒಂಟಿಯಾದಳು ಎನ್ನುವ ದುಃಖ ಒಂದು ನನ್ನನ್ನು ಕಾಡುತ್ತದೆ. ಅವಳು ನನಗೆ ತುಂಬಾ ಪ್ರಿಯಳು... ಹಾಗಾಗಿ ಭಾವನೂ ಪ್ರಿಯವಾಗಿರಬಹುದೇ?
ಮತ್ತೆ ಬನ್ನಿ ಎಂದರೆ ಜೀವನ ಚಕ್ರಕ್ಕೆ ಮತ್ತೆ ಆಹ್ವಾನಿಸಿದಂತೆ... ಮುಕ್ತಿ ಸಿಗಲಿ ಎಂದು ಆಶಿಸುವುದು ಸೂಕ್ತವೇನೋ...
ಭಾವ.. ನಿಮಗಿದೋ ನನ್ನ ಅಶ್ರುತರ್ಪಣ...
ಡಿ ಸಿ ರಂಗನಾಥ ರಾವ್
9741128413
ಅರಿಕೆ: ಈ ಲೇಖನವನ್ನು ದಯವಿಟ್ಟು ನಿಮ್ಮ ಇಷ್ಟರಿಗೆ ಕಳಿಸಿ...

DCR ಸರ್, ರಾಮರಾವ್ ಸರ್ ಅವರಿಗೆ ಬರದಂತ ನಿಮ್ಮ ಅತ್ಯುತಮ ಬರಹ ನಿಮ್ಮ ಭಾವನವರಿಗೆ ಒಂದು ಶ್ರದ್ದಾಂಪೂರ್ವ ಶ್ರದ್ಧಾಂಜಲಿ. ರಾಮರಾವ್ ನಿಮಗಷ್ಟೇ ಭಾವ ಆಗಿರಲಿಲ್ಲ, ಬಹುಷಃ ಬಹಳಷ ಸ್ನೇಹಿತರಿಗೂ ಪ್ರೀತಿಯಿಂದ ಭಾವ ಎಂದೇ ಕರೆಯಿತಿದ್ದೆವು. ತುಂಬಾ ಸ್ನೇಹ, ಸರಳ ಜೀವಿ. ಪ್ರತಿಯೊಬ್ಬರ ಜೀವನ ಶೈಲಿ, ಜೀವನ ಚಕ್ರ ಹೇಗಿರಬೇಕೆಂದರೆ, ಭಾವನವರ ನ್ನು ನೋಡಿ ಅಳವಡಿಸಿಕೊಕುವುದು ಬಹಳಷ್ಟು. ಒಂದು ರೀತಿಯ ಸಾಧಕರು. ಪ್ರತಿ ವರ್ಷಾನು ಪ್ರತಿಭಾ ಪುರಸ್ಕಾರಕ್ಕೆ ಅವರಿಗೆ ಆಮಂತ್ರಣ ಕೊಡುತೀದ್ದೆ, ಬಹಳ ಪ್ರೀತಿಯಿಂದ ಬರುತಿದ್ದರು, ಈ ಸರಿಯೂ ಬಂದು ಕಾರ್ಯಕ್ರಮ ಕ್ಕೆ ಬಂದು ಹರಸಿದ್ದರು. ಅವರ ನೆನಪು ಸದಾ ಹಸಿರು ನನ್ನಲ್ಲಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಗಲಿಕೆಯ ದಿನ ನನಗೆ ಬರುವುದಕ್ಕೆ ಆಗಲಿಲ್ಲ, ಕಾರಣ ಅಂದು ಸುಧಾಳ 60ನೇ ಹುಟ್ಟುಹಬ್ಬದ ಸಂಭ್ರಮ, ದೇವಸ್ಥಾನ ಕೇ ಓಡಾಟ, ಸಾಯಂಕಾಲ ಸಂಭ್ರಮದ ಕಾರ್ಯಕ್ರಮ. ಭಾವನವರಿಗೆ ನನ್ನ ಭಾವಪೂರ್ಣ ಶ್ರದ್ದಾಂಜಲಿ. 🙏🙏🙏🙏🙏
ReplyDeleteಭಾವ ನಮ್ಮೆಲ್ಲರಿಗೂ ಭಾವ.
Deleteಬಂದರೋ ಬಂದರೋ ಭಾವ ಬಂದರೋ ಎಂಬ ಚಿತ್ರ ಗೀತೆ ಇತೀಚಿನ ದಿನಗಳಲ್ಲಿ ಜನಪ್ರಿಯ ಆಗುತಿರುವ ಸಮಯದಲ್ಲಿ ನಿಮ್ಮ ಭಾವನವರ ಅಗಲಿಕೆ ಹಾಗೂ ಅದರಿಂದ ಮೂಡಿಬಂದ ಲೇಖನ ನಿಮ್ಮ ಆತ್ಮೀಯತೆಯ ದೋತ್ಯಕ, ನಮ್ಮ ಮತ್ತು ಹಿಂದಿನ ತಲೆಮಾರಿನ ಸಂಬಂಧಗಳಾದ ಭಾವ, ಭಾಮೈದ, ಅತ್ತಿಗೆ, ನಾದಿನಿ, ಮುಂತಾದ ಬಹಳಷ್ಟು ಸಂಬಂಧಗಳು ಆಂಟಿ ಅಂಕಲ್ ಆಗಿ ಇನ್ನೂ ಹೆಸರುಗಳ ಮೂಲಕ ಸಂಭೋದಿಸುವ ಸಂಭಾಷಿಸುವ ಕಾಲಮಾನಕ್ಕೆ ವೇಗವಾಗಿ ಪ್ರಗತಿ ಹೊಂದುತಿದ್ದೇವೆ 😀😀
ReplyDeleteಕಾಲಾಯ ತಸ್ಮೈ ನಮಃ
ಬಾಬು
ಹುಟ್ಟು ಖಚಿತ, ಸಾವು ನಿಶ್ಚಿತ. ಎಲ್ಲರೂ ಒಂದು ದಿನ ಹಿಂದಿರುಗುವುದೇ. ಆದರೆ ಒಬ್ಬ ವ್ಯಕ್ತಿ ಮೃತನಾದಾಗ ಆತ ಎಷ್ಟು ಜನರ ಮನದಲ್ಲಿ ಎಷ್ಟು ದಿನ ಜೀವಂತನಾಗಿರುವನೆಂಬುದು ಮುಖ್ಯವಾಗುತ್ತದೆ.
ReplyDeleteಬಹುಶಃ ಇತರರಿಗಾಗಿ ಬದುಕಿದ ವ್ಯಕ್ತಿ ಹೆಚ್ಚು ದಿನ ಜನರ ಮನದಲ್ಲಿ ನೆಲೆಸಿರುತ್ತಾನೆಂದು ನನ್ನ ನಂಬಿಕೆ.
ಮೃತರಿಗೆ ಸದ್ಗತಿ ದೊರೆಯಲಿ.
ಗುರುಪ್ರಸನ್ನ
ಚಿಂತಾಮಣಿ
ಅತ್ಯುತ್ತಮ ಲೇಖನ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ 🙏
ReplyDeleteBhava_Bhandavya shirshike chennagide .Rip.
ReplyDelete