ಅಂಚೆ ಪೆಟ್ಟಿಗೆಯ ಸುತ್ತ...
ಕೆಲ ದಿನಗಳ ಹಿಂದೆ ವಾಟ್ಸಪ್ ನಲ್ಲಿ " ಅಂಚೆ ಪೆಟ್ಟಿಗೆಗಳನ್ನು ಸೆಪ್ಟೆಂಬರ್ 2025ರ ಒಂದನೇ ದಿನಾಂಕದಿಂದ ತೆಗೆದು ಹಾಕಲಿದ್ದಾರೆ" ಎಂಬ ಸಂದೇಶ ಹರಿದಾಡಿತು. ಅದನ್ನು ಓದಿದಾಗ ನನಗೆ ತಿಳಿಯದಂತೆ ಸಲ್ಪ ಕಸಿವಿಸಿ ಆಯಿತು. ಸೆಪ್ಟಂಬರ್ ಒಂದನೆಯ ತಾರೀಕು ನನ್ನ ಜೀವನದ ಅತ್ಯಂತ ಪ್ರಮುಖ ದಿನ... ಅಂದು ನಾನು ಮೊದಲ ಕೆಲಸಕ್ಕೆ ಸೇರಿದ ದಿನ. ಅದೇ ಸೆಪ್ಟೆಂಬರ್ 1 ಪೋಸ್ಟ್ ಬಾಕ್ಸ್ ಇರುವುದಿಲ್ಲ ಎನ್ನುವ ವಿಷಯ ಒಪ್ಪಲು ನನ್ನ ಮನಸ್ಸು ನಿರಾಕರಿಸಿತು. ಹಾಗಾಗಿ, ಒಂದಷ್ಟು ಗೂಗಲ್ ನಲ್ಲಿ ಹುಡುಕಾಟದ ನಂತರ, ಆ ಸುದ್ದಿ ಸತ್ಯವಲ್ಲ ಎಂದು ತಿಳಿದು ಸಹಜವಾಗಿ ಸಂತೋಷವಾಯಿತು.
ಅಂಚೆ ಮತ್ತು ತಂತಿ ಇಲಾಖೆಯೊಂದಿಗೆ ನನ್ನ ಒಡನಾಟ ಬೆಳೆದದ್ದು ಐದನೇ ತರಗತಿಯಲ್ಲಿ ಓದಲು ವಿದ್ಯಾನಗರದ ಸರ್ಕಾರಿ ಶಾಲೆಗೆ ಹೋಗಲು ಪ್ರಾರಂಭ ಮಾಡಿದಾಗ. ವಿದ್ಯಾನಗರದಲ್ಲಿ ಮಾತ್ರ ಅಂಚೆ ಕಛೇರಿಯು ಇದ್ದ ಕಾರಣದಿಂದ, ನನ್ನೂರು ದೊಡ್ಡಜಾಲಕ್ಕೆ ಬರುವ ಎಲ್ಲಾ ಪತ್ರಗಳನ್ನು ತಂದು ತಲುಪಿಸುವ ಜವಾಬ್ದಾರಿ ನಮಗೆ ಕೊಡಲಾಗಿತ್ತು. ಓದಲು ಬರದ ಕೆಲವರಿಗೆ ಬಂದ ಪತ್ರಗಳನ್ನು ಓದಿ ಹೇಳುವ ಜವಾಬ್ದಾರಿಯೂ ನಮ್ಮದಾಗಿತ್ತು. ಇದಲ್ಲದೆ ನಮ್ಮ ಊರಿನವರು ಬರೆದ ಕಾಗದಗಳನ್ನು ಅಂಚೆ ಪೆಟ್ಟಿಗೆಗೆ ಹಾಕುವುದು, ಊರಲ್ಲಿದ್ದ ಪಂಪ್ಸೆಟ್ಟುಗಳ ಎಲೆಕ್ಟ್ರಿಕ್ ಬಿಲ್ಲುಗಳನ್ನು ಮನಿ ಆರ್ಡರ್ ಮಾಡುವುದು ನಮ್ಮ ಕೆಲಸವಾಗಿತ್ತು. ಇದಕ್ಕೆಲ್ಲಾ ಯಾವುದೇ ರೀತಿಯ ಸರ್ಕಾರಿ ಆದೇಶಗಳು ಇಲ್ಲವಾದರೂ, ಇದು ಪರಸ್ಪರ ಸಹಾಯ ಮಾಡುವ ಒಂದು ಸಮಾಜಮುಖಿ ಸೇವೆಯಾಗಿತ್ತು, ಅದು ನಮಗೆ ಹೆಮ್ಮೆ ಅನಿಸುತ್ತಿತ್ತು.
ಅಂಚೆ ಪೆಟ್ಟಿಗೆ ನನಗೆ ಎಟುಕದ ಕಾರಣ, ಬೇರೆಯವರ ಕೈಗೆ ಕೊಟ್ಟು ಅವರು ಹಾಕುವುದನ್ನು ಖಚಿತಪಡಿಸಿಕೊಂಡು ಹೋಗುತ್ತಿದ್ದ ನೆನಪಿದೆ. ಮನಿ ಆರ್ಡರ್ ಫಾರಂ ತುಂಬುವುದನ್ನು ಹೇಳಿಸಿಕೊಂಡು ಕಲಿತದ್ದು ಅದೇ ಸಮಯದಲ್ಲಿ.
ಪತ್ರ ಓದಿ ಹೇಳುವ ಕೆಲಸ ಶುರುವಾಗುತ್ತಿದ್ದದ್ದು ನಮ್ಮ ಮನೆಯಿಂದಲೇ. ಮೈಸೂರಿನಲ್ಲಿದ್ದ ನನ್ನ ದೊಡ್ಡ ಭಾವ ಆಗಾಗ ಬರೆಯುತ್ತಿದ್ದ ಕಾಗದವನ್ನು ಅಮ್ಮ ಮತ್ತು ಅಜ್ಜಿಗೆ ಓದಿ ಹೇಳುತ್ತಿದ್ದದ್ದು ನಾನೇ. ಕಾಗದದ ಎಡ ಬದಿಯ ಮೇಲ್ಭಾಗದಲ್ಲಿ ಕ್ಷೇಮ, ಮಧ್ಯದಲ್ಲಿ ಶ್ರೀ ಹಾಗೂ ಬಲತುದಿಯಲ್ಲಿ ದಿನಾಂಕವನ್ನು ಬರೆದದ್ದನ್ನು ಓದಿ ನಂತರದ .... ಯಾವಾಗಲೂ ಇರುತ್ತಿದ್ದ.. ತೀರ್ಥರೂಪ ಸಮಾನರಾದಂತ ಮಾವನವರ ಪಾದಪದ್ಮಗಳಿಗೆ ನಮಸ್ಕಾರಗಳು. ಉಭಯ ಕುಶಲೋಪರಿ ಸಾಂಪ್ರತ. ಇಲ್ಲಿ ಎಲ್ಲರೂ ಕ್ಷೇಮ. ನೀವೆಲ್ಲ ಅಲ್ಲಿ ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ.
ನಂತರ ಒಂದಷ್ಟು ಸಮಾಚಾರ ... ಪತ್ರ ಕೊನೆಯಾಗುತ್ತಿದ್ದದ್ದು... ಹಿರಿಯರಿಗೆಲ್ಲ ನನ್ನ ನಮಸ್ಕಾರಗಳು, ಕಿರಿಯರಿಗೆ ನನ್ನ ಆಶೀರ್ವಾದಗಳು. ಇಂತಿ ನಮಸ್ಕಾರಗಳು, ಅನಂತರಾಮಯ್ಯ. (ನನ್ನ ಭಾವನ ಹೆಸರು) ಎಂದು ಓದಿಯೇ ಮುಗಿಸುತ್ತಿದ್ದದ್ದು. ಇಂದಿಗೂ ಮಾತನಾಡುವಾಗ ಇಂತಿ ನಮಸ್ಕಾರಗಳು ಎಂದು ಬಂದರೆ ಅನಂತರಾಮಯ್ಯ ತಾನೇ ತಾನಾಗಿ ಜೊತೆಜೊತೆಗೆ ಬರುತ್ತದೆ. ಅಷ್ಟು ಬಾಯಿ ಪಾಠ ಆಗಿದೆ.
ಸಾವಿನ ಸುದ್ದಿ ತಿಳಿಸುವ ಕಾಗದದ 4 ಮೂಲೆಗೂ ಕಪ್ಪು ಮಸಿ ಹಚ್ಚುವುದು, ಶುಭ ಸಂದೇಶವಾದರೆ ಕುಂಕುಮ ಹಚ್ಚುವುದು ಒಂದು ಪದ್ಧತಿ.
ಬಂದ ಕಾಗದಗಳನ್ನು ಕೊಕ್ಕೆಯಂತಹ ಒಂದು ಕಬ್ಬಿಣದ ಕಂಬಿಗೆ ಚುಚ್ಚಿ ಗೂಟಕ್ಕೆ ನೇತು ಹಾಕುವುದೇ ಅದನ್ನು ಕಾಪಿಡುವ ಪದ್ಧತಿ.
ಹಾಸನದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದೆ ಎಂಬ ಸಮಾಚಾರವನ್ನು ತಂದದ್ದೆ ನನ್ನ ಹೆಸರಿಗೆ ಬಂದ ಮೊದಲ ಪತ್ರ... ಅದನ್ನು ಓದಿ ಓದಿ ಸಂಭ್ರಮಿಸಿದ್ದೆ. ಆದರೆ ಅದನ್ನು ಅನುಭವಿಸುವ ಭಾಗ್ಯ ನನ್ನದಾಗಿರಲಿಲ್ಲ. ಎಷ್ಟೋ ದಿನಗಳ ತನಕ ಅದನ್ನು ಜೋಪಾನವಾಗಿ ಇಟ್ಟಿದ್ದೆ...
ಶಹಾಬಾದಿನ ACC ಕಂಪನಿಯಿಂದ ಬಂದ appointment letter ಅನ್ನು ಸಹ ತುಂಬಾ ಸಂಭ್ರಮಿಸಿದ್ದೆ.
ಕಾಗದ ಬರೆಯುವಾಗ ಹಿರಿಯ ಗಂಡಸರಿಗೆ ತೀರ್ಥರೂಪು ಸಮಾನರಾದಂತಹ, ಹಿರಿಯ ಹೆಂಗಸರಿಗೆ ಮಾತೃಶ್ರೀ ಎಂದು , ಅಪ್ಪನಿಗೆ ಮಾತ್ರ ತೀರ್ಥರೂಪು ಎಂದು ಸಂಭೋಧಿಸಬೇಕು, ಎಂದು ಕಲಿತದ್ದು ನಾನು ಮಿಡ್ಲ್ ಸ್ಕೂಲ್ ನಲ್ಲಿ ಇದ್ದಾಗ. ನಾನು ಬರೆದ ಮೊದಲ ಪತ್ರ... ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ... ನೀವು ಪರೀಕ್ಷೆಯಲ್ಲಿ ತೇರ್ಗಡೆಯಾದ ವಿಷಯವನ್ನು ನಿಮ್ಮ ತಂದೆಗೆ ಪತ್ರದ ಮುಖೇನ ತಿಳಿಸಿ ಎಂಬ ಪ್ರಶ್ನೆಗೆ ಉತ್ತರಿಸುತ್ತಾ.
ನಿಜ ಅರ್ಥದಲ್ಲಿ ನಾನು ಪತ್ರ ಬರೆಯಲು ಶುರು ಮಾಡಿದ್ದು ಮದರಾಸು ಹಾಗೂ ಶಹಾಬಾದಿನಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ರಾತ್ರಿ 7 ಘಂಟೆಯೊಳಗೆ ಮದರಾಸಿನಲ್ಲಿ ಪೋಸ್ಟ್ ಮಾಡಿದ ಪತ್ರ ಮಾರನೆಯ ದಿನ ಬೆಳಿಗ್ಗೆ ಸುಮಾರು 10 ಗಂಟೆಗೆ ಬೆಂಗಳೂರಿನ ಚಿಕ್ಕ ಮಾವಳ್ಳಿಯ ನಮ್ಮ ಮನೆಗೆ ತಲುಪುತ್ತಿತ್ತು. ಮನೆಯಿಂದ ದೂರವಾಗಿದ್ದ ಕಾರಣ ಎಲ್ಲರೂ ಪತ್ರ ಬರೆಯಲು ಹೇಳುತ್ತಿದ್ದರು, ಅದನ್ನು ನಾನು ಸಹ ಮಾಡುತ್ತಿದ್ದೆ. ನನಗೆ ಚೆನ್ನಾಗಿ ನೆನಪಿರುವುದು ಮಿಲಿಟರಿಯಲ್ಲಿದ್ದ ಕರಲಮಂಗಲದ ಎಂ ಆರ್ ನಾರಾಯಣಮೂರ್ತಿ ಯೊಂದಿಗಿನ ಪತ್ರ ವ್ಯವಹಾರ.
ನನ್ನ ಚಿಕ್ಕಪ್ಪ ನಂಜಣ್ಣಯ್ಯ ಬರೆದ ಒಂದು ಪತ್ರದಲ್ಲಿ eat sumptuous food ಎಂಬ ಪದಗಳು ನನಗೆ ಮಾರ್ಗದರ್ಶಕವಾಗಿತ್ತು.
ರೈಲು ಪ್ರಯಾಣದಲ್ಲಿ ಪರಿಚಯವಾದ ಅಸ್ಸಾಂನ ರಾಮಕೃಷ್ಣ ಬೆಹಾನಿ ಜೊತೆ ಸಾಕಷ್ಟು ಕಾಲ ನಡೆಸಿದ ಕನ್ನಡವಲ್ಲದ, ಪತ್ರ ವ್ಯವಹಾರ ತುಂಬಾ ಸಂತಸ ನೀಡುತ್ತಿತ್ತು.
post card ನಲ್ಲಿ ಬರೆಯುವಾಗ, ಎಲ್ಲ ಕಡೆಯೂ ಅಕ್ಷರಗಳನ್ನು ಕೊರೆದು ತುಂಬಿಸುತ್ತಿದ್ದ ರೀತಿಯನ್ನು ನೋಡಿದ್ದೇನೆ. ಪ್ರಾಯಶಃ ಪೋಸ್ಟ್ ಕಾರ್ಡ್ ನಲ್ಲಿ ಬರೆಯಲು ಜಾಗ ಸಾಲದೆ, ಜೊತೆಗೆ ಒಂದಷ್ಟು ಗುಟ್ಟನ್ನು ಕಾಪಾಡಲು Inland letter ನ ಅವಿಷ್ಕಾರ ಆಗಿರಬಹುದು. ಒಂದು ಹಂತದಲ್ಲಿ ನಾನು Inland letter ನಲ್ಲೇ ಬರೆಯುತ್ತಿದ್ದದ್ದು. ನಮ್ಮದೇ ಕಾಗದದಲ್ಲಿ ಬರೆದು ಹಾಕಲು ಅನುಕೂಲವಾಗಲು ಪೋಸ್ಟಲ್ ಕವರ್ ಗಳು ಬಂದಿರಬಹುದು. ರಿಜಿಸ್ಟರ್ಡ್ ಪೋಸ್ಟ್ ಗೆ ಬೇರೆ ಲಕೋಟೆಗಳು ಸಿಗುತ್ತಿದ್ದವು.
ನಾವು ಕಳಿಸಿದ ಕಾಗದಗಳು ತಲುಪಿದೆಯೆಂದು ಖಾತ್ರಿ ಮಾಡಿಕೊಳ್ಳಲು Registered post with acknowledgement due ಅನ್ನುವ ವಿಧಾನ ಆವಿಷ್ಕಾರ ಆಗಿರಬಹುದು.
ಹೊಸ ಹೊಸ ತಾಂತ್ರಿಕ ಅವಿಷ್ಕಾರಗಳು ಹೊರ ಹೊಮ್ಮುತ್ತಿದ್ದಂತೆ, ಟೆಲಿಗ್ರಾಂ, ಮನಿ ಆರ್ಡರ್, ಕಾಗದಗಳು ಮರೆಯಾಗಿವೆ. ಅವೆಲ್ಲವನ್ನೂ ಈಗ ಕೈಯಲ್ಲಿ ಹಿಡಿದಿರುವ ಮೊಬೈಲ್ ಫೋನ್ ಆಕ್ರಮಿಸಿಕೊಂಡಿದೆ.
ತುರ್ತು ಸಂದೇಶ ಗಳನ್ನು ಕಳಿಸಲು ಆಗ ಇದ್ದದ್ದು ಟೆಲಿಗ್ರಾಂ. ಒಂದೊಂದು ಪದಕ್ಕೂ ಹಣ ಕೊಡಬೇಕಿತ್ತು. ಇದಕ್ಕೆ ಪರಿಹಾರವಾಗಿ ಸಾಮಾನ್ಯ ವಿಳಾಸದ ಬದಲು, ಒಂದು ಪದದ ಟೆಲಿಗ್ರಾಫಿಕ್ ಅಡ್ರೆಸ್ ಅನ್ನು ನೊಂದಾಯಿಸುವ ಮಾರ್ಗ ರೂಢಿಗೆ ಬಂತು. ಹಾಗೆ ಒಂದಷ್ಟು ಸಂದರ್ಭಗಳಲ್ಲಿ ಕಳಿಸುವ ಸಂದೇಶಗಳು ..ಉದಾಹರಣೆಗೆ ಹುಟ್ಟುಹಬ್ಬದ ಶುಭಾಶಯ, ಮದುವೆಯ ಶುಭಾಶಯ,ಹೀಗೆ ಒಂದೊಂದಕ್ಕೂ ಒಂದು ಸಂಖ್ಯೆಯನ್ನು ಕೊಟ್ಟು ಆ ಸಂಖ್ಯೆಯನ್ನು form ನಲ್ಲಿ ಬರೆದರೆ ಒಂದು ಪದದ ಖರ್ಚಿನಲ್ಲಿ ಆ ಸಂದೇಶ ತಲುಪುತ್ತಿತ್ತು.
ನಮ್ಮೂರು ದೊಡ್ಡಜಾಲದಲ್ಲಿ ಟೆಲಿಗ್ರಾಂ ಬಂತೆಂದರೆ ಅದು ಸಾವಿನ ಸುದ್ದಿಯೇ ಎಂಬಷ್ಟು ಖಚಿತವಾಗಿತ್ತು. ಟೆಲಿಗ್ರಾಂ ಬಂದಿದೆ ಎಂದು ತಿಳಿದ ತಕ್ಷಣ ಅದನ್ನು ಓದುವ ಮೊದಲೇ ಅಳುತ್ತಿದ್ದದ್ದನ್ನು ನೋಡಿದ್ದೇನೆ.
ಅಂಚೆಯ ಅಣ್ಣ ಬಂದಿಹೆ ಚಿಣ್ಣ
ಅಂಚೆಯ ಹಂಚಲು ಮನೆಮನೆಗೆ... ಎಂಬುದು ಒಂದು ಶಿಶು ಪದ್ಯ.
ರನ್ನರ್ ರನ್ನರ್ ಓ ನಾನು ರನ್ನರ್.. ಎಂದು ಸಾಗುವ ಫಣಿಯಮ್ಮ ಚಿತ್ರದ ಹಾಡು, ಅಂಚೆ ಇಲಾಖೆಯ ಅಂದಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇಷ್ಟ ವಾಗಬಹುದು ಲಿಂಕ್ ಒತ್ತಿ ಕೇಳಿ
ಕಾಗದ ಬಂದೀದೆ ನಮ್ಮ ಕಮಲನಾಭನದು ಎನ್ನುವ ಪುರಂದರ ದಾಸರ ರಚನೆ, ಸೋಮವಾರ ಬೆಳಿಗ್ಗೆ, ವಾಕಿಂಗ್ ನಂತರ ಮಾಡುವ ಭಜನೆ ಸಮಯದಲ್ಲಿ ಕೇಳಿದ ಹಾಡು.
ಅರಸಂಚೆ ನೀಡಿದ ಅಮರ ಸಂದೇಶವದು ಅನುರಾಗದ ಅಲೆಗಳನು ತೇಲಿಸುತ ಬರುತಿಹುದು... ಒಂದು ಹಳೆಯ ಹಾಡು, ನಳದಮಯಂತಿ ಚಿತ್ರದ್ದು ಇರಬೇಕು. ನಳ ದಮಯಂತಿ ಕಥೆಯಲ್ಲಿ ಓದಿದಂತೆ.. ಅವರಿಬ್ಬರ ಮಧ್ಯೆ ಪತ್ರ ವ್ಯವಹಾರವಿದ್ದು, ರಾಜಹಂಸ ಅದನ್ನು ತಲುಪಿಸುತ್ತಿತ್ತು. ರಾಜಹಂಸಕ್ಕೆ ಅರಸಂಚೆ ಎಂಬುವ ಹೆಸರೂ ಇದೆ. ಅರಸನ ಅಂಚೆ.. ಅರಸಂಚೆಯಾಗಿ ರೂಪುಗೊಂಡಿರಬಹುದೇ? ಹಾಗಾಗಿ ಅಂಚೆ ಪದ ಅಲ್ಲಿಂದಲೇ ಹುಟ್ಟಿರಬಹುದು ಎಂಬ ಅನುಮಾನ ನನಗೆ.
ಪಾರಿವಾಳದ ಕುತ್ತಿಗೆಗೆ ಕಾಗದವನ್ನು ನೇತು ಹಾಕಿ ಕಳಿಸುತ್ತಿದ್ದ ಪದ್ಧತಿ ಇತ್ತು.
ಸಮುದ್ರಯಾನದ ಸಮಯದಲ್ಲಿ ಗಾಜಿನ ಶೀಷೆ ಯಲ್ಲಿ ಪತ್ರವನ್ನಿಟ್ಟು ಸಮುದ್ರದಲ್ಲಿ ತೇಲಿ ಬಿಡುವ ಪರಿಪಾಠವಿತ್ತು ಎಂದು ನೆನಪಿದೆ.
ಪತ್ರಗಳಲ್ಲಿ ಪ್ರೇಮ ಪತ್ರಕ್ಕೆ ಅಗ್ರಸ್ಥಾನ. ಅದು ಅಂದಿನ ಪತ್ರ ಹಾಗೂ ಇಂದಿನ ಮೆಸೇಜ್ .. ಯಾವ ರೂಪದಲ್ಲೇ ಇರಲಿ.
ನನ್ನ ಯೌವ್ವನದ ದಿನಗಳಲ್ಲಿ ಸಂಗಮ್ ಹಿಂದಿ ಚಿತ್ರದ ಎ ಮೇರಾ ಪ್ರೇಮ ಪತ್ರ ಪಡಕರ್ ತುಮ್ ನಾರಾಜ್ ನಾ ಹೋನಾ ಪ್ರಚಲಿತವಿದ್ದ ಹಾಡು.
ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ, ನಿನಗೆಂದೇ ಬರೆದ ಪ್ರೇಮದ ಓಲೆ.. ಇದು ನನ್ನ ಹೆಂಡತಿಯ ಫೋನಿನ caller tune ಹಾಡು. ನಾನು ಪ್ರೇಮ ಪತ್ರ ಬರೆದೇ ಇಲ್ಲವೇನೋ ಎನ್ನುವಷ್ಟು ಕಡಿಮೆ. ಮದುವೆಗೆ ಮುಂಚೆ ಮತ್ತು ನಂತರದ 46 ವರ್ಷಗಳ ದೀರ್ಘ ಸಮಯದಲ್ಲಿ ನಾವು ಒಂದೇ ಊರಿನಲ್ಲಿ ಇದ್ದ ಕಾರಣ ಆ ಪ್ರಮೇಯವೇ ಬರಲಿಲ್ಲ.
ನಮ್ಮ ಮದುವೆಗೆ ಬರಲಾಗದ ನನ್ನ ಸ್ನೇಹಿತನ ಅಣ್ಣ, K N ಮುರುಳೀಧರ್ ನಮ್ಮ ಒಡನಾಟವನ್ನು ಉಲ್ಲೇಖಿಸಿ, ಶುಭಾಶಯ ಕೋರಿ ಬರೆದಿದ್ದ.. ಪತ್ರವನ್ನು ನಾವಿಬ್ಬರೂ ಮತ್ತೆ ಮತ್ತೆ ಓದಿದ್ದೇವೆ.
ಅಂಚೆ ಪೆಟ್ಟಿಗೆಯ ಇನ್ನೊಂದು ಮುಖ, ಮನೆಗಳ ಮುಂದೆ ಇಡುತ್ತಿದ್ದ ಕೆಂಪು ಪೆಟ್ಟಿಗೆ.. ನಮಗೆ ಬಂದ ಕಾಗದಗಳನ್ನು postman ಅದರಲ್ಲಿ ಹಾಕಲು.
ಪೋಸ್ಟ್ ಆಫೀಸ್ ನಲ್ಲಿ ನಮಗಾಗಿ ವಿಶೇಷವಾಗಿ, ಹಣ ಕೊಟ್ಟು ಕಾದಿರಿಸಬಹುದಾದ, ನಮಗಾಗಿಯೇ ಒಂದು post box number ಕೊಡುವ ಒಂದು ಅನುಕೂಲ. ನಮ್ಮೆಲ್ಲ ಕಾಗದಗಳು ಆ ಬಾಕ್ಸ್ ನಲ್ಲಿ ಹಾಕಿರುತ್ತಿದ್ದರು, ಅದನ್ನು ನಾವೇ ಹೋಗಿ ತೆಗೆದುಕೊಳ್ಳಬೇಕು.
ಶಹಾಬಾದಿನಲ್ಲಿದ್ದಾಗ ಇಸ್ಮಾಯಿಲ್ ನಮ್ಮ ಪೋಸ್ಟ್ ಮ್ಯಾನ್, ನಡೆದಾಡುವ ಪೋಸ್ಟ್ ಬಾಕ್ಸ್, ಹಾಗೂ ಅಂಚೆ ಕಚೇರಿ ಆಗಿದ್ದರು.
ಎಲ್ಲ ಕಚೇರಿಗಳಲ್ಲೂ ಒಬ್ಬ ಇಂದಾ-ಗೆ ಗುಮಾಸ್ತ ಇರುತ್ತಿದ್ದ. ಒಳಬರುವ ಕಾಗದಗಳು ಹಾಗೂ ಹೊರ ಹೋಗುವ ಕಾಗದಗಳ ವಿವರಗಳನ್ನು ಬರೆದುಕೊಳ್ಳುವ ಕೆಲಸ.
VPP ಎಂಬ ಒಂದು ಅನುಕೂಲತೆ ಇತ್ತು. Value payable Post Parcel.... ಹಣ ಕೊಟ್ಟು ಪಾರ್ಸಲ್ ತಗೊಳ್ಳುವಂಥದ್ದು. ಇಲ್ಲೊಂದು ಕೇಳಿದ ಪ್ರಸಂಗ ನೆನಪಿಗೆ ಬರುತ್ತದೆ... ಒಂದು ಜಾಹಿರಾತು ತಿಗಣೆಯನ್ನು ಕೊಲ್ಲಲು ಸುಲಭ ಮಾರ್ಗ ಕೇವಲ 50 ರೂಪಾಯಿ ಯಲ್ಲಿ. VPP ಮೂಲಕ ಪಡೆಯಿರಿ. ಹಣ ಕೊಟ್ಟು ಪಾರ್ಸಲ್ ಪಡೆದು ನೋಡಿದರೆ ಇದ್ದದ್ದು ಎರಡು ಚಪ್ಪಟೆಯಾದ ಕಲ್ಲುಗಳು. ಉಪಯೋಗಿಸುವ ವಿಧಾನ ಎಂದು ಬರೆದ ಕಾಗದ. ಅದರಲ್ಲಿದ್ದ ಒಕ್ಕಣೆ " ತಿಗಣೆಯನ್ನು ಹಿಡಿದು ಒಂದು ಕಲ್ಲಿನ ಮೇಲೆ ಇಟ್ಟು ಇನ್ನೊಂದು ಕಲ್ಲಿನಿಂದ ಹೊಸಕಿ.. ತಕ್ಷಣ ತಿಗಣೆ ಸಾಯುತ್ತದೆ" ಮೋಸ ಹೋದ ಗ್ರಾಹಕ. ಅಷ್ಟಲ್ಲದೇ ಹೇಳಿದ್ದಾರೆಯೇ.. ವ್ಯಾಪಾರಂ ದ್ರೋಹ ಚಿಂತನಂ ಎಂದು.
ಅಕ್ಟೋಬರ್ 9 ವಿಶ್ವ ಅಂಚೆಯ ದಿನ. ಅಂದು ವಿಶ್ವದಲ್ಲೆಡೆ ಹೊಸ ಸ್ಟ್ಯಾಂಪ್ ಹಾಗೂ Firstday cover ಬಿಡುಗಡೆ ಆಗುತ್ತದೆ. ಇದರ ಸಂಗ್ರಹ ಮಾಡುವ ಅಭಿರುಚಿ ಇರುವ ಸಾಕಷ್ಟು ಜನರು ಇದ್ದಾರೆ. ನಾನು ಒಂದು ಕಾಲದಲ್ಲಿ ಕಂಡ ಅಂಚೆಚೀಟಿಗಳನ್ನು ಕೂಡಿಟ್ಟಿದ್ದದ್ದು ಉಂಟು.. ಯಾವಾಗ ನಿಂತು ಹೋಯಿತೋ ನೆನಪಿಲ್ಲ.
ಬರಬಹುದಾದ ಪತ್ರಗಳಿಗೆ ಕಾಯುವ, ಕೆಲ ಪತ್ರಗಳನ್ನು ನಿರೀಕ್ಷಿಸುವ ಸಮಯದ ಆಸೆ, ಕುತೂಹಲ, ಆತಂಕ ಎಲ್ಲವನ್ನು ಅನುಭವಿಸಿದವರು ನಾವು. ಈಗ ಬರೆಯುವ ವ್ಯವಧಾನವೂ ಇಲ್ಲ, ಅವಶ್ಯಕತೆಯೂ ಇಲ್ಲ... ಕಾಲಾಯ ತಸ್ಮೈ ನಮಃ
ಅಂಚೆ ಪೆಟ್ಟಿಗೆ ನೆನಪಿನಿಂದ ಶುರುವಾದ ನನ್ನ ಈ ಪತ್ರ ವನ್ನು ಇಲ್ಲಿಗೆ ಮುಗಿಸುತ್ತೇನೆ..
ಇಂತಿ ನಮಸ್ಕಾರಗಳು...
( ಅನಂತರಾಮಯ್ಯ)😄😄
ಡಿ ಸಿ ರಂಗನಾಥ ರಾವ್
9741128413
ಅರಿಕೆ: ಈ ಲೇಖನವನ್ನು ದಯವಿಟ್ಟು ನಿಮ್ಮ ಪರಿಚಯದವರಿಗೆ ಕಳಿಸಿ...





ಕೊಕ್ಕಿಯಲ್ಲಿ ನೇತು ಹಾಕಿದ ಕಾಗದಗಳನ್ನು ಬೇರೆ ಏನೂ ಓದಲು ಸಿಗದೆ ಇದ್ದಾಗ ಇಳಿಸಿ ಓದಿದ್ದೇನೆ.ಹೊರದೇಶದಲ್ಲಿ ಇದ್ದಾಗ ಒಂದು ಬಣ್ಣದ ಹಾಳೆಯ ಮೇಲೆ ಬರೆದು ಮನೆಗೆ ಪೋಸ್ಟ್ ಮಾಡಿದ್ದು ನೆನಪಿಗೆ ಬಂತು
ReplyDeleteನಿಮ್ಮ ಲೇಖನ ಓದಿದ ನಂತರ ನಾನು ನಮ್ಮನೆಯವರಿಗೆ ಬರೆದ ಪ್ರೇಮ ಪತ್ರಗಳು ನೆನಪಾಯ್ತು. ಇಂಗ್ಲೆಂಡ್ ಕವರಿನಲ್ಲಿ ಮಾರ್ಜಿನ್ ಗೂ ಜಾಗ ಬಿಡದಂತೆ ಅಕ್ಷರಗಳ ಸರಮಾಲೆ ತುಂಬಿರುತ್ತಿತ್ತು. ನನ್ನ ಮಗಳು ನನ್ನ ಬರವಣಿಗೆಯ ವಿವರಣೆ ರಚನೆಯನ್ನು ನೋಡಿ ಸಂತೋಷ ಪಟ್ಟು ಹೊಗಳಿದ್ದಳು. ಈಗ ನೆನಪಿಗಾಗಿ ಇದ್ದಿದ್ದರೆ ಚೆನ್ನಾಗಿತ್ತು ಅನಿಸುತ್ತಿದೆ. ಕೊನೆಯಲ್ಲಿ *ನೀವು ಬರುವ ದಿನವನ್ನು ಶಬರಿಯಂತೆ ಕಾಯುತ್ತಿದ್ದೇನೆ* ಈ ಸಾಲು ನಮ್ಮನೆಯವರಿಗೆ ತುಂಬಾ ಇಷ್ಟ ಆಗಿತ್ತು.
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರಾ, ಕಣ್ಣಿಗೆ ಕಟ್ಟಿದಂತೆ ಬರವಣಿಗೆ ಸುಂದರವಾಗಿದೆ. ನನ್ನನ್ನು flash back ಗೆ ಕರೆದುಕೊಂಡು ಹೋದ ಮಧುರ. ಅನುಭವ ಖುಷಿ ಕೊಟ್ಟಿತು, ಧನ್ಯವಾದಗಳು🙏
ಎಸ್.ಜೆ. ರತ್ನಪ್ರಭಾ
ಅಂಚೆ ಎಂದೊಡನೆ ನಮ್ಮ ಪ್ರಾಥಮಿಕ ಶಾಲೆಯಲ್ಲಿದ್ದ ಪಾಠದ ಅಂಚೆಯ ಅಣ್ಣ ಎಂಬುದೇ ಜ್ಞಾಪಕಕ್ಕೆ ಬರುತ್ತದೆ.
ReplyDeleteಎಂದಿನಂತೆ ಲೇಖಕರು ಅಂಚೆಯ ಕುರಿತು 360°ಎಲ್ಲಿ ಲೇಖಕರು ನಮ್ಮನ್ನು ಗತಕಾಲದ ವೈಭವಕ್ಕೆ ಕರೆದೊಯ್ಯದಿದ್ದಾರೆ.
ಹೈ ಸ್ಕೂಲ್ ಹಾಗೂ ಕಾಲೇಜಿನಲ್ಲಿ ನಾವು ಗ್ರೀಟಿಂಗ್ಸ್ ಗಳನ್ನು ಹಬ್ಬದ ಅಥವಾ ಹೊಸ ವರ್ಷದ ಸಮಯದಲ್ಲಿ ಕಳುಹಿಸುತ್ತಿದ್ದ ನೆನಪಿಗೆ ಬರುತ್ತಿದೆ.
ಈಗಿನ ಎಸ್ಎಂಎಸ್ ವಾಟ್ಸಪ್ ಇನ್ಸ್ಟಾಗ್ರಾಂ ಫೇಸ್ಬುಕ್ ಇದ್ಯಾವುದೂ ಅಂದಿನ ಕಾಲದ ಇನಲ್ಯಾಂಡ್ ಲೆಟರ್ ಅಥವಾ ಪೋಸ್ಟ್ ಕಾರ್ಡ್ ಗಳಿಗೆ ಸಮವಾಗುವುದಿಲ್ಲ.
ಕೊನೆ ಹನಿ:
ಪತ್ರದ ಲಕೋಟೆಯ ಮೇಲೆ ಅಗತ್ಯಕ್ಕಿಂತ ಸ್ವಲ್ಪ ಕಡಿಮೆ ಸ್ಟ್ಯಾಂಪ್ ಹಾಕಿ ಕಳುಹಿಸಿದರೆ ಅದು ಯಾವುದೇ ರಿಜಿಸ್ಟರ್ಡ್ ಪೋಸ್ಟ್ ಗಿಂತ ಹೆಚ್ಚು ಸುರಕ್ಷಿತವಾಗಿ ತಲುಪುತ್ತಿತ್ತು. ಕಾರಣ ಪತ್ರ ಪಡೆದವರಿಂದ ಕಡಿಮೆ ಲಗತ್ತಿಸಿರುವ ಸ್ಟ್ಯಾಂಪ್ ನ ಮೊತ್ತದ ಹಣವನ್ನು ಪಡೆಯಲಾಗುತ್ತಿತ್ತು.!
ಗುರುಪ್ರಸನ್ನ
ಚಿಂತಾಮಣಿ
ತುರ್ತಾಗಿ ತಲುಪಲು express delivery sticker ಅಂಟಿಸಬೇಕಿತ್ತು!!!
ReplyDelete