ವಿದ್ಯಾರ್ಥಿ ಜೀವನದ ಪ್ರಸಂಗಗಳು

















ಲಾರೆಲ್ ಅಂಡ್ ಹಾರ್ಡಿ:

ಡಿಪ್ಲೋಮಾ ಓದುವ ಕಾಲ. ಸಿನಿಮಾ ನೋಡುವ ಹುಚ್ಚು. ನನ್ನ ಸ್ನೇಹಿತ ಶಂಕರನ ತಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಅಡ್ವರ್ಟೈಸ್ಮೆಂಟ್ ಮ್ಯಾನೇಜರ್. ಅವರಿಗೆ ಸಿನಿಮಾ ಗೆ ಫ್ರೀ ಪಾಸ್ ಸಿಗುತ್ತಿತ್ತು... ಅದನ್ನು ನಾವುಗಳು ಉಪಯೋಗಿಸುತ್ತಿದ್ದೆವು. ಜೊತೆಗೆ ವಿಜಯಲಕ್ಷ್ಮಿ ಟಾಕೀಸ್ ನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ. ಅಲ್ಲಿ ಬರುತ್ತಿದ್ದದ್ದು ಬರೀ ಇಂಗ್ಲಿಷ್ ಚಿತ್ರಗಳು. 
ಲಾರೆಲ್ ಅಂಡ್ ಹಾರ್ಡಿ ಚಿತ್ರಗಳು ನಮಗೆ ಬಲು ಪ್ರಿಯ. ಅರ್ಥವಾಗದ ಮಾತು.. ಆದರೆ ನಟನೆ ಮಾತ್ರ ನಗೆ ಹೆಚ್ಚಿಸುತ್ತಿತ್ತು. ಹೀಗೊಂದು ದಿನ ಲಾರೆಲ್ ಅಂಡ್ ಹಾರ್ಡಿ ಯ ಚಿತ್ರವನ್ನು ನೋಡಿ ನಾನು ಮತ್ತು ನನ್ನ ಸ್ನೇಹಿತ ಶಿವ ( ಕೆ ಎನ್ ಶಿವಶಂಕರ್) ನಮ್ಮ ಮನೆಗೆ ಬಂದೆವು.  ನಮ್ಮ ಮನೆಯಲ್ಲೊಂದು ಆರಾಮ ಕುರ್ಚಿ ಇತ್ತು. ಕೂರಲು ಬಟ್ಟೆಯ ಆಸನ. ಬಟ್ಟೆಯ ಮೇಲೆ ಏನೋ ಕಸ ಇದ್ದು, ಅದನ್ನು ತೆಗೆಯಲು, ಬಟ್ಟೆಯನ್ನು ಒದರಿದೆ. ಪಕ್ಕದ ಕುರ್ಚಿಯ ಮೇಲೆ ಕೂತಿದ್ದ ಶಿವನ ಬಟ್ಟೆಯ ಮೇಲೆ ಬಿದ್ದಿರಬಹುದು.. ನಾನು ಕೂರುವ ತನಕ ಕಾದಿದ್ದ ಶಿವ ಎದ್ದು ನಿಂತು, ಒಂದು ಮಾತಿಲ್ಲದೆ, ತನ್ನ ಶರಟನ್ನು ನನ್ನ ಮೇಲೆ ನಿಧಾನವಾಗಿ ಒದರಿ, ತನ್ನ ಕುರ್ಚಿಯ ಮೇಲೆ ಕೂತ. ಇಬ್ಬರು ಜೋರಾಗಿ ನಕ್ಕೆವು... ಇದು ಲಾರೆಲ್ ಅಂಡ್ ಹಾರ್ಡಿ ಚಿತ್ರದ ಪ್ರಭಾವ. ಆ ಕ್ಷಣದ ಶಿವನ ನಟನೆ ಇಂದಿಗೂ ನೆನಪಿದೆ.

ಹೆಸರು ಹನುಮಂತರಾಯ:

ಅದೇ ಕಾಲಘಟ್ಟದಲ್ಲಿ ಓದುತ್ತಿದ್ದದ್ದು ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ. ನಮ್ಮದೇ ಒಂದು ಸಣ್ಣ ಗುಂಪು. ವಯೋ ಸಹಜವಾಗಿ ಹುಡುಗಾಟ, ತರಲೇ ಎಲ್ಲ ಇದ್ದವು. ಹೊಸದಾಗಿ ಉಪಾಧ್ಯಾಯರುಗಳು ಬಂದರೆ ಅವರ ಹೆಸರು ಕೇಳುವುದು ಒಂದು ಪದ್ಧತಿ. ಅಂತಹ ಒಂದು ಸಂದರ್ಭ. ಸ್ವಲ್ಪ ಹೆಚ್ಚೇ ಎನ್ನುವಷ್ಟು ಕಪ್ಪಾಗಿದ್ದ ಕುಳ್ಳಗಿದ್ದ, ಕೋಟು ಹಾಕಿಕೊಂಡ ವ್ಯಕ್ತಿ ನಮ್ಮ ತರಗತಿಗೆ ಬಂದಾಗ, ನಾವೆಲ್ಲ ಎದ್ದು ನಿಂತು ಗೌರವವನ್ನು ಸೂಚಿಸಿ, ಅವರ ಸೂಚನೆಯಂತೆ ಕುಳಿತೆವು. ಅವರು ಪಾಠ ಮಾಡುವ ವಿಷಯವನ್ನು ಹೇಳಿ ಪ್ರಾರಂಭ ಮಾಡಬೇಕು.. ಅಷ್ಟರಲ್ಲಿ ಯಾರೋ ಕೇಳಿದ್ದು " ನಿಮ್ಮ ಹೆಸರೇನು ಸರ್?".
ಅದಕ್ಕೆ ತಕ್ಷಣದ ಉತ್ತರವಾಗಿ ಮೆಲ್ಲನೆಯ ಸ್ವರದಲ್ಲಿ ನಾನು ಹೇಳಿದ್ದು " ಮುಖ ನೋಡಿದರೆ ಗೊತ್ತಾಗಲ್ವಾ ಹನುಮಂತರಾಯ ಅಂತ" ... ಅದು ನಮ್ಮ ಗುಂಪಿಗೆ / ಹತ್ತಿರ ಇರುವವರಿಗೆ ಮಾತ್ರ ಕೇಳಿಸುವಷ್ಟು. ಅಷ್ಟರಲ್ಲಿ ಬೋರ್ಡಿನ ಮೇಲೆ ಅವರು ಬರೆದದ್ದು ಎಸ್ ಎಸ್ ಹನುಮಂತರಾಯ ಎಂದು. ನಮ್ಮ ಗುಂಪಿನ ಖುಷಿ ಕೇಳಬೇಕೆ... ನಗುವಿನ ಅಲೆ ಎದ್ದಿತು. ನಗು ಯಾಕೆಂದು ಕೇಳಿದಾಗ ಕಾರಣ ಹೇಳಲಾಗದ ಪರಿಸ್ಥಿತಿ. ಹೇಗೋ ನಿಭಾಯಿಸಿದ್ದಾಯಿತು. ಆ ದಿನ ಇದನ್ನು ಮತ್ತೆ ಮತ್ತೆ ನೆನೆಸಿಕೊಂಡು ನಕ್ಕಿದ್ದೇ  ನಕ್ಕಿದ್ದು.

ಚುನಾವಣಾ ರಾಜಕೀಯ:

ಮೇಲಿನದೇ ದಿನಗಳು... ವಿದ್ಯಾರ್ಥಿ ಸಂಘದ ಅಧ್ಯಕ್ಷನ ಆಯ್ಕೆ ಮಾಡಬೇಕಿತ್ತು. ನಮ್ಮ ಗುಂಪು   ಜನಾನುರಾಗಿಯಾಗಿದ್ದ ಕಾರಣ ನಮ್ಮ ಗುಂಪಿನವರನ್ನು ಆ ಸ್ಥಾನದಲ್ಲಿ ಕೂಡಿಸಬೇಕೆಂಬುದು ನಮ್ಮ ಅಭಿಲಾಷೆ.  ಆದರೆ ಸಾಕಷ್ಟು ಮಂದಿ ಅನ್ಯ ಭಾಷಿಕರು ಇದ್ದ ಕಾರಣ, ಅವರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು  ಪ್ರಯತ್ನಿಸುತ್ತಿದ್ದರು.. ಇದು ಸಹಜವಾಗಿತ್ತು ಸಹ. ಆದರೆ ಕನ್ನಡ ರಾಜ್ಯದ ರಾಜಧಾನಿಯ ಪ್ರತಿಷ್ಠಿತ ಜಯಚಾಮ ರಾಜೇಂದ್ರ  ಪಾಲಿಟೆಕ್ನಿಕ್ ನಲ್ಲಿ, ಇದಕ್ಕೆ ಆಸ್ಪದ ಕೊಡಬಾರದೆಂದು ನಿರ್ಧರಿಸಿದ್ದು ನಮ್ಮ ಸ್ನೇಹಿತರ ಗುಂಪು. 
ಏನು ಕಾರಣವೋ ನೆನಪಿಲ್ಲ, ಎಲ್ಲ ವಿದ್ಯಾರ್ಥಿಗಳು1st preference ಮತ್ತು  2nd preference ಮತ ಚಲಾಯಿಸಬೇಕೆಂದು ಆದೇಶವಿತ್ತು. 
ಚುನಾವಣೆಯ ಸಮಯ ಹತ್ತಿರ ಬರುತ್ತಿದ್ದಂತೆ ಒಂದು ಉಪಾಯ ಮಾಡಿದೆವು. ಇನ್ನೊಬ್ಬ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ ಎಂದು ಅನುಮಾನ ಇದ್ದವರನ್ನು, ಪುಸಲಾಯಿಸಿ, 2nd preference ಮತವನ್ನು ನಮ್ಮ ಅಭ್ಯರ್ಥಿಗೆ ಕೊಡಲು ವಿನಂತಿಸಿದವು... ತಮಿಳರನ್ನು ಬಿಟ್ಟು ಬಹುಪಾಲು ಅನ್ಯಭಾಷಿಕರು ಒಪ್ಪಿದ್ದು ನಮಗೆ ಖಚಿತವಾಯಿತು. ನಮ್ಮ ಅಭ್ಯರ್ಥಿಗೆ ಮತ ಹಾಕುವರೆಂದು ಖಚಿತವಾದ ವಿದ್ಯಾರ್ಥಿಗಳಿಗೆ 2nd preference ಮತವನ್ನು ಯಾರಿಗೂ ಹಾಕಲೇಬಾರದೆಂದು ವಿನಂತಿಸಿ,  ನಮ್ಮ ಕನ್ನಡದ ಅಭ್ಯರ್ಥಿಯನ್ನು ಗೆಲ್ಲಿಸಲು ಇದು ಅವಶ್ಯವೆಂದೂ, ಹಾಗಾಗಿ ಇದನ್ನು ಗುಟ್ಟಾಗಿ ಇಡಬೇಕೆಂದು ಮನವಿ ಮಾಡಿಕೊಂಡೆವು.
ಚುನಾವಣೆ ಒಂದಷ್ಟು ರಭಸ, ಆವೇಶದಿಂದ ಕೂಡಿದ್ದು, ಅಚ್ಚು ಕಟ್ಟಾಗಿ ನಡೆಯಿತು.
ನಾವು ಮಾಡಿದ ಉಪಾಯದಂತೆ   2nd preference ಮತಗಳು ನಮ್ಮ ಅಭ್ಯರ್ಥಿಗೆ ಮಾತ್ರ ಬಿದ್ದಿದ್ದು, ಗೆಲುವು ಸುಗಮವಾಗಿ ನಿಲುಕಿತು. ಅಂದು ನಮ್ಮ ಅಭ್ಯರ್ಥಿಯಾಗಿದ್ದದ್ದು R. ರಮೇಶ್... ಇಂದಿನ ರಮೇಶ್ ಭಟ್  ಎಂದು ಹೆಸರು ಮಾಡಿರುವ ಕನ್ನಡ ಚಲನಚಿತ್ರ ಹಾಗೂ ದೂರದರ್ಶನದ ನಟ. 
ನಮ್ಮ ಈ ವ್ಯೂಹ ರಚನೆಯ ವಿಷಯವನ್ನು ತಿಳಿದ ನಂತರ, ಕೆಲವು ದಿನ ಬಿಗು ವಾತಾವರಣವಿತ್ತು. ಕ್ರಮೇಣ ಎಲ್ಲವೂ ಸರಿಯಾಯ್ತು.

ಹದಿ ಹರೆಯದ ಸಂಕೋಚ :

SSLC ಮುಗಿಸಿ, ನ್ಯಾಷನಲ್ ಕಾಲೇಜಿಗೆ ಸೇರಿದೆ. ಅಲ್ಲಿ ಕೋ ಎಜುಕೇಶನ್.... ಸಾಕಷ್ಟು ಹೆಣ್ಣು ಮಕ್ಕಳು ನಮ್ಮ ತರಗತಿಯಲ್ಲಿ ಇದ್ದರು. ನಿಸ್ಸಂಕೋಚವಾಗಿ ಹಳ್ಳಿಯ ಶಾಲೆಯಲ್ಲಿ ಹೆಣ್ಣು ಮಕ್ಕಳೊಡನೆ ಮಾತನಾಡುತ್ತಿದ್ದ ನನಗೆ.... ಈಗ ಬಹಳ ಸಂಕೋಚವಾಗುತ್ತಿತ್ತು. ಹೈಸ್ಕೂಲ್ ನಲ್ಲಿ ಬರೀ ಹುಡುಗರು.... ಈ ಸಮಯದಲ್ಲಿ ನಾನು ಹದಿಹರೆಯಕ್ಕೆ ಕಾಲಿಟ್ಟಿದ್ದದ್ದು....ಬಹುಶಃ ಅದರ ಪರಿಣಾಮ ಇರಬಹುದು. 
ಸುದೈವವೋ ದುರ್ದೈವವೋ ತಿಳಿಯದು, physics  ಮತ್ತು chemistry  lab ನಲ್ಲಿ ಹುಡುಗಿಯರ ಜೊತೆ ಗೂಡಿ experiment ಮಾಡಬೇಕಿತ್ತು. lab ನಲ್ಲಿ  ಉಪಾಧ್ಯಾಯರೂ ಸಹ ಹೆಣ್ಣೆ... LGS ಮೇಡಂ. (ಉದ್ದನೆಯ ಜಡೆಯಿದ್ದ ಕಾರಣ ನಾವು ಲಾಂಗ್ ಜಡೆ ಸುಬ್ಬಲಕ್ಷ್ಮಿ ಎಂದು ಗುಟ್ಟಾಗಿ ಕರೆಯುತ್ತಿದ್ದೆವು.)

ಮೊದಮೊದಲು ತುಂಬಾ ಕಷ್ಟವಾದರೂ, ಅಭ್ಯಾಸವಾಗಿ, ಎಷ್ಟು ಬೇಕೋ ಅಷ್ಟೇ ಮಾತು ಆಡುತ್ತಾ ... ಓದು ಸಾಗುತ್ತಿತ್ತು.
ಇಂಥ ಒಂದು ಸಮಯದಲ್ಲಿ, ನನ್ನ lab ಪುಸ್ತಕ ಒಂದು ಹುಡುಗಿಯ ಬಳಿ ಸೇರಿ ಹೋಗಿತ್ತು. ಅದನ್ನು ತರಗತಿಯಲ್ಲಿ, lecturer ಗೆ ಹೇಳಿ ಹಿಂತಿರುಗಿಸಿದ್ದು, ಬಹುಶಃ ಆ ಹೆಸರಿನ ವ್ಯಕ್ತಿ ನಾನೇ ಎಂದು ಗುರುತಿಸಲಾಗದೆಯೋ / ಗುರುತಿಸಬಾರದೆಂದೋ ಇಂದೂ ತಿಳಿದಿಲ್ಲ. ಪುಸ್ತಕ ಕೊಟ್ಟಾಗ ಹುಡುಗರೆಲ್ಲ ಹೋ ಎಂದು ಕೂಗಿದ್ದು ನನಗೆ ಖುಷಿ ಕೊಟ್ಟಿತ್ತು. ನನ್ನ ಪಕ್ಕದಲ್ಲಿ ಕೂತಿದ್ದ ಪ್ರಕಾಶ, ಪುಸ್ತಕವನ್ನು ಕೂಲಂಕುಶವಾಗಿ ಹುಡುಕಿದ... ಏನಾದರೂ ಚೀಟಿ ಬರೆದು ಇಟ್ಟಿರಬಹುದಾ ಎಂದು? ಏನೂ ಸಿಗಲಿಲ್ಲ.
ಈ ಘಟನೆಯ ನಂತರ, ಹುಡುಗಿಯ ಬಗ್ಗೆ ಒಂದು ಬಗೆಯ ಅಭಿಮಾನ ಇದ್ದರೂ, ಮಾತನಾಡುವ ಧೈರ್ಯ ಬರಲೇ ಇಲ್ಲ. ಪಿಯುಸಿ ಮುಗಿದ ನಂತರ ನಾನು ಆ ಹುಡುಗಿಯನ್ನು ಕಂಡದ್ದು ಒಂದೇ ಬಾರಿ.
ಜೀವನ ಮುಂದುವರಿದಂತೆ,   ಹೆಣ್ಣು ಮಕ್ಕಳೊಡನೆ ಮಾತನಾಡುವ / ಒಡನಾಡುವ ವಿಷಯದಲ್ಲಿ ಸಂಕೋಚವೆಲ್ಲ ಮರೆಯಾಗಿದೆ. ಆಪ್ತ ಸಮಾಲೋಚಕನಾಗಿ ಕೆಲಸ ಮಾಡಲು ಪ್ರಾರಂಭ ಮಾಡಿದ ನಂತರ, ಆ ಭಾವ ಸಂಪೂರ್ಣ ಮರೆಯಾಗಿ, ಮುಕ್ತವಾಗಿ ನಿರ್ಭಿಡೆಯಿಂದ ಮಾತನಾಡುವ ಶಕ್ತಿ ಬಂದಿದೆ.
ಈಗ ಏನಾದರೂ ಆ ಹುಡುಗಿಯನ್ನು ( ?) ಭೇಟಿಯಾದರೆ, ಅಂದಿನ ಪ್ರಸಂಗದ ಬಗ್ಗೆ ಮಾತನಾಡಿ ತಮಾಷೆ ಮಾಡುವ ಮನಸ್ಥಿತಿ ಇದೆ.
ಕೆಲವು ಚಿಂತನೆಗಳು, ಕಾಲ ಹೋದಂತೆ, ಮನಸ್ಸು ಮಾಗಿದಂತೆ, ಬದಲಾವಣೆಯಾಗುತ್ತದೆ ಅಲ್ಲವೇ?

ಪದ್ಯಕ್ಕೆ ಪ್ರತಿ ಪದಾರ್ಥ:


ಮಿಡ್ಲ್ ಸ್ಕೂಲ್ ಸಮಯ. ನಳ ಚರಿತ್ರೆ ಕಾವ್ಯ ನಮ್ಮ ಪಠ್ಯದ ಭಾಗ. ಪದ್ಯದ ಪದಗಳನ್ನು ಬಿಡಿಸಿ ಅರ್ಥ ಹೇಳುವುದು ಒಂದು ಕ್ರಮ. ಇದಕ್ಕೆ ಜಾಸ್ತಿ ಅಂಕ ಸಿಗುತ್ತಿದ್ದ ಕಾರಣ, ಕಲಿಯಬೇಕಾದ್ದು ಕಡ್ಡಾಯ. ಅಂತಹ ಒಂದು ಹಂತದಲ್ಲಿ, ತರಗತಿಯಲ್ಲಿ ಹೇಳಬೇಕಾದ ಪರಿಸ್ಥಿತಿ ನನಗೆ ಬಂತು. ನನ್ನ ಪ್ರಯತ್ನ ಹೀಗಿತ್ತು...

ಕೇಳು = ಕೇಳು
ಕುಂತಿ ತನಯ = ಕುಂತಿ ತನಯನೇ
 ನಳನೃಪ = ನಳ ನೃಪನು
ಬೀಳುಕೊಂಡನು = ಹೊರಟನು
ಪುರವನಲ್ಲಿಂ = ಪುರವನು ಅಲ್ಲಿಂ
ಮೇಲೆ ನಡೆದರು = ಮೇಲಕ್ಕೆ ನಡೆದರು
ಪಯಣ ಗತಿಯಲಿ = ಪಯಣದ ದಿಕ್ಕಿನಲ್ಲಿ
ಹಲವು = ಕೆಲವು
ಯೋಜನವ = ಯೋಜನೆಗಳ....
ತಕ್ಷಣ ಪುಟ್ಟರಾಜು ಮೇಷ್ಟ್ರು ಹೇಳಿದ್ದು... ಲೋ ರಂಗ.. ಏನೋ ನಿಂದು.. ಎಲ್ಲೂ ನಿಲ್ಲಿಸದೆ ಹೇಳಿದೆ ಅನ್ನೋದು ಬಿಟ್ಟರೆ... ಇಷ್ಟ ಬಂದಂಗೆಲ್ಲ ಹೇಳ್ತಿಯ.... ಹಿಂಗಾದ್ರೆ ಅಷ್ಟೇ... ಕೂತ್ಕೋ...
ಎಲ್ಲರೂ ನಕ್ಕರು... ಅವಮಾನ ಅನ್ನಿಸಲಿಲ್ಲ.

ಹದಿಹರಯದ / ಯೌವನದ ಎಷ್ಟೋ ಪಿಸು ಮಾತುಗಳು, ಸ್ನೇಹಿತರೊಡನೆ ಕಳೆದ ಕ್ಷಣಗಳು ನೆನಪಿಸಿಕೊಳ್ಳಲು ಮಧುರ, ಹೇಳಲು / ಬರೆಯಲು ಮುಜುಗರ.  ಇದು ಬಹುಪಾಲು ಎಲ್ಲರೂ ಸವೆಸಿದ ದಾರಿಯಾದರೂ, ಅನುಭವಿಸಿದ ಕ್ಷಣಗಳಾದರೂ, ನಮ್ಮ ಸಮಾಜದಲ್ಲಿರುವ   ಶಿಷ್ಟಾಚಾರದ ಇತಿಮಿತಿಯಿಂದ, ಬೆಳೆದ ಪರಿಸರದ ಪ್ರಭಾವದಿಂದ ನನಗೆ  ನಾನು ಹಾಕಿಕೊಂಡಿರುವ ಚೌಕಟ್ಟು.

ನಮಸ್ಕಾರ....
ಡಿ ಸಿ  ರಂಗನಾಥ ರಾವ್
9741128413


    
    

Comments

  1. ಸರ್ ನಿಮ್ಮ ನೆನಪಿನ ಶಕ್ತಿ ಅಗಾಧ.....ಹಾಗೇ ಸುಮ್ಮನೆ ಕೇಳ್ತೀನಿ... ನಿಮ್ಮ ಬಾಲ್ಯ, ಯೌವನ, ಇದೆಲ್ಲವೂ ಹೇಗೆ ನೆನಪಿದೆ ಏನಾದರೂ ದಿನಚರಿ ಬರೆಯುತ್ತಿದ್ದರಾ..

    ReplyDelete
  2. ಮೋತಿ, ಪ್ರೇಮ್,ರಂಗ ತೀರ್ಥಹಳ್ಳಿ ಇಂದ ಬಿದರಗೂಡಿಗೆ ಹೋಗಿ ಬಂದ ದಿನಗಳು ನೆನಪಿಗೆ ಬರುತ್ತದೆ ಗೆಳೆಯ, ನಿನ್ನ ಬರಹ ಓದಿ ನನಗೆ ನಮ್ಮ ಬಾಲ್ಯ, ತುಂಟತನ ನೆನಪಿಗೆ ಬಂತು


    ReplyDelete
  3. ತು೦ಬಾ ಚೆನ್ನಾಗಿ ಬಾಲ್ಯದ ನೆನಪುಗಳು ಮೂಡಿಬಂದಿದೆ. ಈ ನೆನಪುಗಳು ಒಂದು ಸುಮಧುರ ಲೋಕಕ್ಕೆ ಕರೆದೊಯ್ಯುವ ಮೂಲಕ ಸಂತೋಷ ಕೊಡುತ್ತದೆ. ಧನ್ಯವಾದಗಳು ಸರ್

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ