ಕಸದ ರಾಶಿ ಕರಗುವುದಿಲ್ಲ ಏಕೆ?
ಬೆಂಗಳೂರಿನ ಕೆಲವು ನಾಗರೀಕರಿಗೆ ಹಾಗೂ ನಗರ ಪಾಲಿಕೆಯ ಆಡಳಿತ ನಡೆಸುವವರ ಮುಂದೆ ಧುತ್ತೆಂದು ನಿಲ್ಲುವ ಪ್ರಶ್ನೆ. ಈ ಪ್ರಶ್ನೆ ನನ್ನನ್ನೂ ಸತತವಾಗಿ ಕಾಡಿದೆ.. ಕಾಡುತ್ತಿದೆ. ನನ್ನದೇ ಆದ ರೀತಿಯಲ್ಲಿ ಇದಕ್ಕೆ ಕಾರಣ ಹುಡುಕುವಾಗ ನನ್ನ ಗಮನಕ್ಕೆ ಬಂದ ಅಂಶಗಳು... ಸಾಧ್ಯವಾಗ ಬಹುದಾದ ಪರಿಹಾರದ ದಾರಿಗಳ ಒಂದು ಅವಲೋಕನ ಈ ಲೇಖನದ ಉದ್ದೇಶ.
ಈ ಹುಡುಕಾಟದಲ್ಲಿ ನಾನು ಮಾತನಾಡಿದ್ದು...
1. ಲಿಂಗ ಭೇದವಿಲ್ಲದೆ ಕಸ ಎಸೆಯಲು ಬಂದ ಚಿಕ್ಕ ಮಕ್ಕಳಿಂದ ಮೊದಲಗೊಂಡು ಹಿರಿಯ ನಾಗರಿಕರ ತನಕ.
2. ಮನೆ ಕೆಲಸ ಮಾಡುವ ಹೆಂಗಸರು.
3. ಗಂಡ ಹೆಂಡತಿ ಇಬ್ಬರೇ ಇರುವ / ಒಬ್ಬರೇ ಇರುವ ಹಿರಿಯ ನಾಗರಿಕರು.
4. ಕಷ್ಟವಾದರೂ, ಹೇಗೋ ಕಸವನ್ನು ಗಾಡಿಗೆ ಮುಟ್ಟಿಸುವ ಶಿಸ್ತು ಬದ್ಧ ನಾಗರಿಕರು.
5. ಒಂದಷ್ಟು ಹಣ ಕೊಟ್ಟು (ಲಂಚ ಎನ್ನಲೇ ಅಥವಾ TIPS - To Improve Personalised Service ಎನ್ನಲೇ) ಕೆಲಸ ಸುಗಮ ಮಾಡಿಕೊಳ್ಳುವ ಮನಸ್ಸುಳ್ಳವರು.
6. ಹಣ ಕೊಡಲಾಗದೆ / ಮನಸ್ಸಿಲ್ಲದೆ ಹೇಗೋ ಕಸವನ್ನು ಮನೆಯಿಂದ ಆಚೆಗೆ ತಳ್ಳುವವರು.
7. ಪೌರಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಕಸದ ಗಾಡಿಯವರು
8. ಕಸದ ರಾಶಿಯನ್ನು ತಡೆಯಲು ನಿಯೋಜಿಸಲಾದ ಮಾರ್ಷಲ್ ಗಳು
9. ಎಲ್ಲಾ ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾ, ವಿಧವಿಧವಾದ ಸಲಹೆಗಳನ್ನು ಕೊಡುವ ವಿಶೇಷ ಜನರು
10. ಯಾವ ವಿಭಾಗದಲ್ಲೂ ಗುರುತಿಸಿಕೊಳ್ಳದ, ಆದರೆ ಸಮಸ್ಯೆಯ ಬಿಸಿ ತಟ್ಟಿದವರು.
ಎಲ್ಲರು ಹೇಳುವುದೂ ಅವರವರ ದೃಷ್ಟಿಯಲ್ಲಿ ಸರಿಯಾಗಿಯೇ ಇದೆ. ಸೂಕ್ಷ್ಮವಾಗಿ ಗಮನಿಸಿದಾಗ, ಕಸವನ್ನು ಗಾಡಿಗೆ ಹಾಕುವವರು ಹಾಗೂ ಕಸದ ಗಾಡಿಯವರ ಮಧ್ಯೆ ಒಂದು ಕಂದಕವಿದೆ. ಈ ಕಂದಕವನ್ನು ಸರಿಪಡಿಸಲು ಯಾವುದೇ ಕಾನೂನು, ದೇವರ ಭಯ, ದಂಡ ಹಾಕುವುದರಿಂದ ಪರಿಹರಿಸಲಾಗದು. ಇದು ಮಾನಸಿಕತೆಗೆ ಹಾಗೂ ವಾಸ್ತವಿಕತೆಗೆ ಸಂಬಂಧಪಟ್ಟ ವಿಷಯ.
ಈಗಿನ ವ್ಯವಸ್ಥೆಯಲ್ಲಿ, ಮನೆಗಳಿಂದ ಕಸವನ್ನು ಗಾಡಿಗೆ ತಲುಪಿಸುವ ಜವಾಬ್ದಾರಿಯು ಮನೆಯವರ ಮೇಲಿದೆ. ಗಾಡಿಗೆ ತಲುಪದ ಕಸ ಸೇರುವುದೇ ಕಸದ ರಾಶಿಗೆ.
ಇದನ್ನು ತಡೆಯಲು ಪೌರ ಕಾರ್ಮಿಕರ ಪ್ರಯತ್ನಗಳು ಬಹುತೇಕ ವಿಫಲವಾಗಿದೆ. ಕಸ ಹಾಕುವ ಜಾಗದಲ್ಲಿ ದೇವರ ಪಟಗಳನ್ನಿಟ್ಟು... ಆ ಮೂಲಕ ತಪ್ಪಿಸುವ ಪ್ರಯತ್ನ... ಅದಕ್ಕೆ ಸಾರ್ವಜನಿಕರು ಆ ಜಾಗದಲ್ಲಿ ತಮ್ಮ ಹಳೆಯ ಫೋಟೋಗಳನ್ನು ಎಸೆದು.... ಕಸದ ರಾಶಿಯಂತೆ ಕಂಡು ಬೇರೆಯವರು ಕಸ ಎಸೆಯಲು ಸ್ಪೂರ್ತಿ. ಕೆಲ ಜಾಣರು ದೇವರ ಚಿತ್ರವನ್ನು ಕಾಣದಂತೆ ಇಟ್ಟು ಕಸ ಹಾಕಿದರು. ಶನಿ ದೇವರ ಭಯವನ್ನು ಮೀರಿ, ಅಲ್ಲಿಯೇ ಕಸ ಸುರಿದರು.
ನಿಂದನೆ (ಬೈಗುಳ) ಮಾತುಗಳನ್ನು ಬರೆದು ಹಾಕಿದ ಪೋಸ್ಟರ್ಗಳಿಗೆ ಬೆಲೆಯೇ ಕೊಡಲಿಲ್ಲ. ನಿಂದನೆ ನನಗಲ್ಲ ಎಂಬ ಮನೋಭಾವ.
ನೂರು ರೂಪಾಯಿ ದಂಡ ಹಾಕಲಾಗುವುದು ಎಂಬ ಬರಹಕ್ಕಂತು ಯಾರೂ ಹೆದರಲಿಲ್ಲ. ದಂಡ ಹಾಕುವವರು ಯಾವಾಗಲೂ ಇರಲು ಸಾಧ್ಯವಿಲ್ಲ.
ಕಸವನ್ನು ಬೀದಿಗೆ ಎಸೆದವರ ಮನೆಯ ಮುಂದೆ, ಕಸವನ್ನು ಸುರಿಯುವ ಒಂದು ಪ್ರತೀಕಾರ ಮನೋಭಾವದ ಸಲಹೆಯೂ ಮುಂದೆ ಬಂದು, ಅದು ಮುಂದುವರಿಯದೆ ನಿಂತಿದ್ದು ಒಂದು ಒಳ್ಳೆಯ ಬೆಳವಣಿಗೆ.
CCTV ಕ್ಯಾಮರಾದ ಭಯವು ಜನರನ್ನು ತಲುಪಲಿಲ್ಲ. ಅದರಲ್ಲಿನ ಜನರನ್ನು ಗುರುತಿಸಿ ಅವರಿಗೆ ದಂಡ ಹಾಕುವುದು ಅಸಾಧ್ಯವಾದ ಕೆಲಸ ಎಂದು ಜನರಿಗೆ ಗೊತ್ತು.
ಮಾರ್ಷಲ್ ಗಳು 24 ಗಂಟೆಯೂ, ನಗರದ ಎಲ್ಲ ಭಾಗಗಳಲ್ಲೂ ಇರುವುದು ಸಾಧ್ಯವೇ?
ಈಚೆಗೆ ನಮ್ಮ ಬಡಾವಣೆಯಲ್ಲಿನ ಕಸದ ತಾಣವಾಗಿರುವ ರಸ್ತೆಗೆ, ಅಡ್ಡವಾಗಿ ಕಟ್ಟಿರುವ sheet ನೋಡಿ, ನನಗೆ ಆಶ್ಚರ್ಯ ಎನಿಸಿತು. ಈ ಜಾಗದ ಬದಲು, ಜನ ರಸ್ತೆಯ ಇನ್ನೊಂದು ಜಾಗವನ್ನು ಹುಡುಕದೆ ಇರುತ್ತಾರೆಯೇ?
ಮನೆಯಲ್ಲಿನ ಕಸವನ್ನು ಗಾಡಿಗೆ ತಲುಪಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ....
ಈಗಿನ ವ್ಯವಸ್ಥೆಯಲ್ಲಿ ಕಸದ ಗಾಡಿ ರಸ್ತೆಯಲ್ಲಿಹಾದು ಹೋಗುತ್ತಾ, ಅಲ್ಲಲ್ಲಿ ಗಾಡಿಯನ್ನು ನಿಲ್ಲಿಸಿ ( ಇದಕ್ಕೆ ಯಾವ ಮಾನದಂಡವು ಇಲ್ಲ. ಎಲ್ಲಿ ನಿಲ್ಲಿಸಬೇಕು ಎಷ್ಟು ಹೊತ್ತು ನಿಲ್ಲಿಸಬೇಕು ಎಂಬುದು ಕಸದ ಗಾಡಿಯವರ ನಿರ್ಧಾರ ) ಕಸ ಹಾಕುವವರಿಗೆ ಅನುವು ಮಾಡಿಕೊಡುತ್ತದೆ. ಕಸದ ಗಾಡಿ ಬರುತ್ತಿರುವ ವಿಷಯ ಮನೆಯಲ್ಲಿರುವವರ ಕಿವಿಗೆ ಬೀಳುವುದು, ಒಂದು... ಗಾಡಿಯ ಶಬ್ದದಿಂದ, ಕೆಲವರು ಪೀಪಿ (whistle) ಊದುವ ಶಬ್ದದಿಂದ, ಕೆಲವು ಸಲ ಧ್ವನಿ ವರ್ಧಕದ ಮೂಲಕ ಸಾರುವುದರಿಂದ, ಕೆಲವು ದಿನ ನಮ್ಮ ರಸ್ತೆಯಲ್ಲಿ ಓಡಾಡಿದ ಒಂದು ವಾಹನದಲ್ಲಿ ಜನಜನಿತವಾದ ಹಾಡುಗಳ ಧಾಟಿಯಲ್ಲಿ ಕಸ ಕೊಡುವ ಬಗ್ಗೆ ತಿಳಿಸುತ್ತಿದ್ದ ವಿಶಿಷ್ಟ ಶೈಲಿಯ ಮೂಲಕ. ಈ ಗಾಡಿ ಬಂದಿರುವ ಶಬ್ದವನ್ನು ಕೇಳಿದ್ದಾದ ಮೇಲೆ ಕಸದ ಡಬ್ಬ ತೆಗೆದುಕೊಂಡು ಗಾಡಿಯ ಬಳಿ ಹೋಗುವಷ್ಟರಲ್ಲಿ ಗಾಡಿ ಅಲ್ಲಿಂದ ಮುಂದೆ ಹೋಗಿ ಆಗಿರುತ್ತದೆ.. ಇದು ಬಹುತೇಕ ಹಿರಿಯ ನಾಗರಿಕರ ಅನುಭವ.
ಮನೆಯ ಕೆಲಸಕ್ಕಾಗಿ ಬರುವ ಹೆಂಗಸರಿಗೆ ಈ ಜವಾಬ್ದಾರಿಯನ್ನು ಕೊಟ್ಟಾಗ, ಅವರು ಕೆಲಸಕ್ಕೆ ಬರುವ ಸಮಯ, ಗಾಡಿ ಬರುವ ಸಮಯ ಒಂದಾದರೆ ಸರಿ, ಇಲ್ಲವಾದರೆ ಕಸವನ್ನು ಹೇಗೋ ಹೊರ ಹಾಕುವ ದಾರಿ ಹುಡುಕಲೇಬೇಕು, ಅದೇ ರಸ್ತೆಯ ಬದಿ.
ಕೆಲಸಕ್ಕೆ ಹೋಗುವ ದಂಪತಿಗಳ ಪಾಡಂತೂ ಹೇಳತೀರದು. ಬೆಳಗಿನ ಅವರ ಅವಸರದ ತಯಾರಿಯ ಮಧ್ಯೆ, ಸ್ವಲ್ಪ ಮೈಮರೆತರೂ, ಕಸದ ಗಾಡಿಯನ್ನು ತಲುಪಲು ಅಸಾಧ್ಯ.
ಸರ್ಕಾರಕ್ಕೆ ಕಸ ತೆಗೆಯಲೇ... ಬೇರೆ ತೆರಿಗೆ ಕೊಟ್ಟು, ಮತ್ತೆ ಪ್ರತ್ಯೇಕವಾಗಿ ಕಸದ ಗಾಡಿಯವರಿಗೆ ಹಣ ಕೊಡಲು ಕೆಲವರಿಗೆ ಇಷ್ಟವಿಲ್ಲ / ಕಷ್ಟವೂ ಸಹ. ಹಣ ಕೊಟ್ಟ ಮೇಲೂ, ಸಿಬ್ಬಂದಿ ಆಗಾಗ್ಗೆ ಬದಲಾಗುವ ಕಾರಣ, ಹೊಸಬರಿಗೆ ಮತ್ತೆ ಹಣ ಕೊಡಬೇಕು.
ಮನೆಗಳಲ್ಲಿ ಏನಾದರೂ ಕಾರ್ಯಕ್ರಮ ಆಗಿ ಒಂದಷ್ಟು ಜನ ಊಟ ಮಾಡಿದರೆ, ಆ ಊಟದ ಎಲೆಯನ್ನು ಕಸದ ಗಾಡಿಗೆ ಹಾಕುವುದು ಸುಲಭದ ಮಾತಲ್ಲ. ಅದಕ್ಕೆ ಕೇಳುವ ಹಣ ಬಹಳಷ್ಟು ಸಲ ಭಾರಿ ಎನಿಸುತ್ತದೆ, ಅದರ ಬದಲು , ಕಸ ಬೀದಿಗೆ ಎಸೆಯುವ ಅಡ್ಡ ದಾರಿಗೆ ಪ್ರೇರೇಪಣೆ ನೀಡುತ್ತದೆ.
ಕಸದ ಗಾಡಿಯವರ ದೃಷ್ಟಿಯಲ್ಲಿ... ಅವರು ಕೆಲಸ ಮಾಡುವುದು ಕೊಳಕು ಮತ್ತು ವಾಸನೆಯಿಂದ ಕೂಡಿದ ವಸ್ತುಗಳ ಜೊತೆ. ನಿಜಕ್ಕೂ ಕಷ್ಟದ ಕೆಲಸ. ಕೊಡುವ ಸಂಬಳ ಸಾಲದು ಎನ್ನುವ ಭಾವನೆ.
ಕೆಲವು ಕನಿಕರ ತುಂಬಿದ ವ್ಯಕ್ತಿಗಳು, ಕಾಫಿಗೆಂದು ಕೊಡುವ ಹಣ... ಕಾಲಕ್ರಮೇಣ ಹಕ್ಕಾಗಿ ಪರಿವರ್ತನೆಯಾಗುತ್ತದೆ, ಅದರೊಂದಿಗೆ ಬೇರೆಯವರ ಕಡೆಯಿಂದಲೂ ಸಿಗಲಿ ಎನ್ನುವ ಆಸೆ ಬಲಿತು... ಹಣ ಕೊಡದಿದ್ದವರನ್ನು ಅಸಡ್ಡೆಯಿಂದ ಕಾಣುವ ಪ್ರವೃತ್ತಿಯು ಕಂಡು ಬಂದಿದೆ.
ಒಂದು ಕಾಲವಿತ್ತು, ಪ್ರತಿ ರಸ್ತೆಯ ಒಂದು ಜಾಗದಲ್ಲಿ ಕಸ ಹಾಕಲು BCC ತೊಟ್ಟಿಯೆಂದೇ ಖ್ಯಾತಿ ಪಡೆದ ಜಾಗವಿತ್ತು. ಅದರಲ್ಲಿ ಕಸ ತುಂಬಿ ತುಳುಕುತ್ತಿತ್ತು. ಆ ತೊಟ್ಟಿಯನ್ನು ಯಾರ ಮನೆಯ ಬಳಿಯೂ ಇರಿಸಿಕೊಳ್ಳಲು ಒಪ್ಪಿಗೆ ಇರುತ್ತಿರಲಿಲ್ಲ. ಕಾಲಕ್ರಮೇಣ ಅದು ಕಣ್ಮರೆಯಾಯಿತು.
ಸಾಮಾನ್ಯವಾಗಿ ಗಮನಿಸಿದರೆ ಕಸ ಬೀಳುವುದು, ವೈಯುಕ್ತಿಕವಾಗಿ ಯಾರದೂ ಅಲ್ಲದ ಜಾಗದಲ್ಲಿ. ನನ್ನ ಮನೆ / ಜಾಗ ಶುಚಿಯಾಗಿದ್ದರೆ ಸಾಕು, ಅಲ್ಲಿಂದ ಹೊರಗಿನದು ಸರ್ಕಾರದ ಜವಾಬ್ದಾರಿ.. ಇದು ನಮ್ಮಗಳ ಸಹಜ ಮನಸ್ಥಿತಿ.
90 ರ ದಶಕದಲ್ಲಿ, ದೆಹಲಿಯಲ್ಲಿದ್ದ ನನ್ನಣ್ಣ ಸತ್ತಿ ಸರ್ ಮನೆಯಲ್ಲಿ ಕೆಲವು ದಿನ ಇದ್ದೆವು. ಕೂಡಾ ಎಂದು ಕೂಗುತ್ತಾ, ಮನೆ ಮನೆಗೆ ಬಂದು (ಮಹಡಿ ಮನೆಗಳು) ಕಸದ ಬುಟ್ಟಿಯನ್ನು ತೆಗೆದುಕೊಂಡು ಹೋಗುವ ಪದ್ಧತಿಯಿತ್ತು. ಇದು ಇಂದಿನ ಸಮಯದಲ್ಲಿ ಕಾರ್ಯಗತ ಮಾಡುವುದು ಕಷ್ಟ. ಹಾಗಾಗಿ ಒಂದು ಮಧ್ಯ ಮಾರ್ಗ ಹಿಡಿಯಬಹುದಾ?
ಹಸಿ ಕಸ ಹಾಗೂ ಒಣ ಕಸ ಎಂದು ವಿಭಾಗ ಮಾಡಿದ ಕಸದ ಚೀಲಗಳನ್ನು/ ಬುಟ್ಟಿಗಳನ್ನು ಅವರವರ ಮನೆಯ ಮುಂದೆ ಇಡುವುದು ಮನೆಯವರ ಜವಾಬ್ದಾರಿ. ಅಲ್ಲಿಂದ ಕಸವನ್ನು ಹೊತ್ತೊಯ್ಯುವುದು ಪೌರಕಾರ್ಮಿಕರ ಜವಾಬ್ದಾರಿ. ಮನೆಯ ಮುಂದೆ ಇಟ್ಟ ಕಸವನ್ನು ಅಂದದೇ ತೆಗೆದುಕೊಂಡು ಹೋಗುವ ಕೆಲಸವಾದರೆ, ಬಹುಮಟ್ಟಿಗೆ ಯಶಸ್ವಿಯಾಗಬಹುದು... ಇಲ್ಲದಿರೆ..? ಛೆ..ಛೆ ಆರಂಭದಲ್ಲೇ ಅಡ್ಡ ಮಾತೆ. ಪ್ರಯತ್ನ ಪಟ್ಟರೆ ತಾನೇ ಫಲಿತಾಂಶ ತಿಳಿಯುವುದು...
ಬೆಳಿಗ್ಗೆ ಯಾವಾಗಿನಂತೆ ವಾಕಿಂಗ್ ಹೊರಟೆ. ಅಕ್ಕಪಕ್ಕದ ಮನೆಗಳ ಮುಂದೆ ಕಸದ ಬುಟ್ಟಿಗಳನ್ನು ಇಟ್ಟಿದ್ದಾರೆ. ನನಗೆ ನಾಚಿಕೆಯಾಯಿತು.. ನಾನೇ ಹೇಳಿದ ಪರಿಹಾರವನ್ನು ನಾನೇ ಮಾಡದಿದ್ದರೆ.. ಬೇರೆ ಯಾರಿಗಾದರೂ ಹೇಳುವ ನೈತಿಕತೆ ನನಗೆಲ್ಲಿ. ತಕ್ಷಣ ಮನೆಯೊಳಗೆ ಹೋಗಿ ಹಸಿ ಕಸ, ಒಣ ಕಸ ತುಂಬಿದ ಡಬ್ಬಗಳನ್ನು ಮನೆಯ ಮುಂದೆ ತಂದಿಟ್ಟು ಮುಂದೆ ನಡೆದೆ. ದಾರಿ ಯುದ್ಧಕ್ಕೂ ಗಮನಿಸುತ್ತ ಹೋದೆ.. ಬಹಳ ಮನೆಗಳ ಮುಂದೆ ಕಸದ ಡಬ್ಬಗಳು. ಖುಷಿಯಾಯಿತು. ವಾಕಿಂಗ್ ಮುಗಿಸಿ, ಸ್ನೇಹಿತರೊಡನೆ ಹರಟೆ ಹೊಡೆದು ಮನೆಗೆ ಮರಳುತ್ತಾ ಗಮನಿಸಿದಾಗ ಕಸದ ಬುಟ್ಟಿಗಳು ಇಟ್ಟ ಜಾಗದಲ್ಲೇ ಇದ್ದವು. ಇದು ನನ್ನ ಮನೆಯ ಬಳಿಯೂ ಸಹ. ನಿರಾಶೆಯಾಯಿತು... ಕಾದು ನೋಡೋಣ ಎಂದು ಮನಸ್ಸಿಗೆ ಸಮಾಧಾನ ಮಾಡಿಕೊಂಡೆ. ಸ್ನಾನ ಮಾಡಿ ದೇವರ ಮುಂದೆ ಕಣ್ಮುಚ್ಚಿ ಕುಳಿತಿದ್ದೆ, ಆಗ ಕಿವಿಗೆ ಬಿದ್ದದ್ದು ಕಸದ ಗಾಡಿಯವರ whistle ನ ಶಬ್ದ. ಅಬ್ಬಾ ಕಡೆಗೂ ಬಂದರಲ್ಲ.. ನಾನಂದುಕೊಂಡಂತೆ ಕಸ ವಿಲೇವಾರಿಯಾಗುತ್ತೆ ಎನಿಸಿ ಕಣ್ಣು ಬಿಟ್ಟೆ..
ನನ್ನ ಮುಂದೆ ದೇವರಿಲ್ಲ, ಕಣ್ಣಿಗೆ ಬಿದ್ದದ್ದು ಮೇಲೆ ತಿರುಗುತ್ತಿದ್ದ ಫ್ಯಾನ್. ಓ... ಇದು ಬರೀ ಕನಸಷ್ಟೇ.... ನೆನಪಿಗೆ ಬಂದದ್ದೇ ಬಾಲ್ಯದಲ್ಲಿ ಓದಿದ್ದ ತಿರುಕನ ಕನಸು ಪದ್ಯದ ಕೊನೆಯ ಸಾಲು..
ಮೆರೆಯುತ್ತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆಂದು ತಿರುಕ, ಮರಳಿ ನಾಚಿ ಹೋಗುತ್ತಿದ್ದ ಮುನ್ನಿನಂತೆಯೇ.
ಕನಸು ನನಸಾಗಬೇಕಾದರೆ, ಬರೀ ಕಸದ ಬುಟ್ಟಿ ತೆಗೆದುಕೊಂಡು ಹೋಗುವುದು ಅಷ್ಟೇ ಅಲ್ಲ... ಅದಕ್ಕೂ ಮುಖ್ಯವಾಗಿ ಬದಲಾಗಬೇಕಾಗಿರುವುದು ನಮ್ಮೆಲ್ಲರ ಮನಸ್ಥಿತಿ ಮತ್ತು ಧೋರಣೆ.
ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಅಧಿಕಾರ ಚಲಾಯಿಸುವ ವ್ಯಕ್ತಿಗಳಾಗುತ್ತಾರೆಯೇ ಹೊರತು, ಜನಸೇವಕರಾಗಿ ಕೆಲಸ ಮಾಡುವುದಿಲ್ಲ. ಇದರ ಜೊತೆಗೆ ಸಂಬಳವಲ್ಲದ ಹಣ ಸಂಪಾದಿಸುವ ಮನಸ್ಥಿತಿ. ಹೇಗಾದರೂ ಸರಿ, ಯಾವ ದಾರಿಯಾದರೂ ಸರಿ, ಅದರಿಂದ ಯಾರಿಗೆ ನೋವಾದರೂ ಸರಿ... ಹಣ ಮಾತ್ರ ಬೇಕು. ಈ ಮನೋ ಭಾವ, ಹರಿದು ಬಂದಿರುವುದು ಮೇಲಿನಿಂದ. ಯಥಾ ರಾಜಾ ತಥಾ ಪ್ರಜಾ. ಪ್ರಜಾ ರಾಜ್ಯದಲ್ಲಿ ಪ್ರಜಾ ಪ್ರತಿನಿಧಿಯೇ ರಾಜ. ರಾಜನೇ ಅಡ್ಡದಾರಿಗೆ ಬಿದ್ದಾಗ, ಪ್ರಜೆಗಳು ಸುಮ್ಮನಿದ್ದಾರೆಯೇ? ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ.
ಜೇನು ಕಿತ್ತವನು, ಜೇನನ್ನು ಪಾತ್ರೆಗೆ ಹಾಕಿದ ನಂತರ, ಕೈಗೆ ಮೆತ್ತಿದ ಜೇನನ್ನು ಪಾತ್ರೆಗೆ ಒರಸಿ, ಕೈ ತೊಳೆಯುವ ಮುಂಚೆ ನೆಕ್ಕಿದರೆ ಅದು ಮನುಷ್ಯತ್ವ. ಕಿತ್ತ ಜೇನನ್ನು ಪಾತ್ರೆಗೆ ಹಾಕಿದಂತೆ ಮಾಡಿ, ಕೈ ನೆಕ್ಕುವುದು ರಾಕ್ಷಸತ್ವ. ಈ ರಾಕ್ಷಸತ್ವವನ್ನು ನಮ್ಮ ಬಹುತೇಕ ರಾಜಕಾರಣಿಗಳು ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರೆ ಅತಿಶಯವಾಗಲಾರದು.
ಇವರಿಂದ ಆಳ್ವಿಕೆ ಮಾಡಿಸಿಕೊಳ್ಳುವ ಸಾಮಾನ್ಯ ಜನರ ಮನಸ್ಥಿತಿಯು, ಇವರಿಗಿಂತ ಭಿನ್ನವಾಗಿರಲು ಸಾಧ್ಯವೇ.
ನಮ್ಮಗಳ ಮನಸ್ಥಿತಿ .... ಕಾನೂನುಗಳನ್ನು ಮುರಿಯುವುದೇ ಹಕ್ಕು ಎಂದು ಭಾವಿಸಿ, ಹೆಮ್ಮೆಪಡುವುದು. ನಮ್ಮ ಕಾನೂನುಗಳು ಸಹ ಬಹಳಷ್ಟು ಸಲ ನಾಗರಿಕ ಸ್ನೇಹಿಯಾಗಿ ಇಲ್ಲ. ಅದನ್ನು ಅಕ್ಷರಶಃ ಪಾಲಿಸುವುದು, ವ್ಯಾವಹಾರಿಕವಾಗಿ ಸಾಧ್ಯವಿಲ್ಲ / ಅನುಕೂಲವಲ್ಲ / ವೈಯಕ್ತಿಕವಾಗಿ ನಷ್ಟವಾಗುವಂಥದ್ದು.
ಯಾವುದೇ ಕೆಲಸಕ್ಕೂ ಸುಲಭದ ಅಡ್ಡ ದಾರಿಯನ್ನು ಹಿಡಿಯುವುದು, ಈ ದಾರಿಯಲ್ಲಿ ಸಾಗುವಾಗ ಅಡೆತಡೆ ಉಂಟಾದಲ್ಲಿ, ವೈಯುಕ್ತಿಕ ಲಾಭಕ್ಕಾಗಿ, ಪ್ರಭಾವ ಉಪಯೋಗಿಸಿ/ ಲಂಚದ ರೂಪದಲ್ಲಿ ಹಣ ಕೊಟ್ಟು ಸರಿ ಮಾಡಿಕೊಳ್ಳುವುದು.
ನಾನು ಮಾತನಾಡಿದ ವಿಶೇಷ ಜನರು ಹೇಳುವಂತೆ... ನಮ್ಮ ವ್ಯವಸ್ಥೆಯಲ್ಲಿನ ಅವ್ಯವಸ್ಥೆ. ಸರ್ಕಾರದ ಯಾವುದೇ ಕೆಲಸವಾಗಲಿ, ಅದಕ್ಕೊಂದು ವ್ಯವಸ್ಥಿತವಾದ ಮಾರ್ಗ ಸೂಚಿ ಇದೆ. ಎಲ್ಲ ಮಾನದಂಡಗಳು ಸಮನಾಗಿದ್ದು, ಕಡಿಮೆ ಬೆಲೆಯಲ್ಲಿ ಕೊಡುವವರಿಗೆ ಆದ್ಯತೆ. ಮೇಲ್ನೋಟಕ್ಕೆ ಇದು ಅತ್ಯಂತ ಸಮಂಜಸ. ಕಡಿಮೆ ಬೆಲೆಯಲ್ಲಿ ಕೆಲಸ ತೆಗೆದುಕೊಂಡ ವ್ಯಕ್ತಿ, ವ್ಯವಸ್ಥೆಯಲ್ಲಿನ ಅವ್ಯವಸ್ಥೆಗೆ ಕೊಡಬೇಕಾದ ಕಾಣಿಕೆಗಳನ್ನು ಕೊಟ್ಟ ನಂತರ, ಉಳಿದ ಹಣದಲ್ಲಿ ಕೆಲಸ ಮಾಡಬೇಕು, ತನ್ನ ಲಾಭವನ್ನು ಉಳಿಸಿಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿ ಲಭ್ಯ ಇರುವ ಮಾರ್ಗವೆಂದರೆ ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡುವುದು ಹಾಗೂ ಕೆಲಸದವರಿಗೆ ಕೊಡುವ ಸಂಬಳದಲ್ಲಿ ಹಿಡಿತ ಮಾಡುವುದು. ಇದರ ಪರಿಣಾಮವೇ ಕಣ್ಣಿಗೆ ರಾಚುವ ರಸ್ತೆಯ ಗುಂಡಿಗಳು ಹಾಗೂ ಕಸದ ರಾಶಿಗಳು.
ಮಾಸ್ಟರ್ ಹಿರಣ್ಣಯ್ಯನವರು ಲಂಚಾವತಾರ ನಾಟಕದಲ್ಲಿ ಹೇಳಿದಂತೆ, ಲಂಚವೆಂಬ ರಾಕ್ಷಸನನ್ನು ಕೊಲ್ಲಲು.. ತಲೆ ಕತ್ತರಿಸುವುದು ಒಂದೇ ಸರಿಯಾದ ಮಾರ್ಗ. ಆದರೆ ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?
ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ
" ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ....
..
..
ಸಂಭವಾಮಿ ಯುಗೇ ಯುಗೇ" ಕೃಷ್ಣನ ಆಗಮನಕ್ಕಾಗಿ ಕಾಯುವುದೇ ಉಳಿದಿರುವ ಮಾರ್ಗವೇ?
ಬಾರೋ.... ಕೃಷ್ಣಯ್ಯ... ಎಂದು ಪ್ರಾರ್ಥಿಸುತ್ತಾ
ನಮಸ್ಕಾರ
ಡಿ ಸಿ ರಂಗನಾಥ ರಾವ್
9741128413



ಬಹಳ ಸಮಂಜಸವಾದ ವಿಷಯ ಅಷ್ಟೇ ಕಠಿಣ ಕೂಡ ನಿಮ್ಮ ಎಲ್ಲಾ ಅನಿಸಿಕೆಗಳೂ ನನಗೂ ಸಹ ಹಲವಾರು ಬಾರಿ ಯೋಚನೆ ಮಾಡಲು ಪ್ರೆರೇಪಿಸಿದೆ ಆದರೆ ಬದ್ಧತೆ ಇಲ್ಲದ ಜನ ಹಾಗೂ ಸರ್ಕಾರದಿಂದ ಈ ಸಮಸ್ಯೆಗೆ ಮುಕ್ತಿ ಇಲ್ಲಾ... ಇತೀಚೆಗೆ ಪಾರ್ಸೆಲ್ಗಳ ಹಾವಳಿ ಇಂದ ಮತ್ತಷ್ಟು ಕಸದ ರಾಶಿ ಸೇರುತಿದೆ... ಆದರೂ ಪಾಪ ಬೀದಿ ಗುಡಿಸುವ ಹಾಗೂ ಆಟೋ ಗಳಲ್ಲಿ ಕಸ ತುಂಬಿಸಿಕೊಂಡು ಹೋಗುವ ಸಿಬ್ಬಂದಿಗಳಿಗೆ ಒಂದು ಸಲಾಂ ಹೇಳಲೇಬೇಕು
ReplyDeleteಹೊಸ ಆವಿಷ್ಕಾರ ಆಗಬೇಕು ಪ್ರತಿ ರಸ್ತೆಯಲ್ಲಿ ಕಸವನ್ನು ಗೊಬ್ಬರವಾಗಿ ಪರಿವರ್ತಸುವ ಯಂತ್ರ ಇಡಬೇಕು ಮತ್ತು ಒಂದನೇ ತರಗತಿ ಇಂದ ಕಸ ನಿರ್ವಹಣೆ ಬಗ್ಗೆ ಗಂಭೀರ ತಿಳುವಳಿಕೆ ನೀಡಬೇಕು... ಹಾಗಾದರೆ ನಮ್ಮ ಮುಂದಿನ ಜನಾಂಗ ಸ್ವಲ್ಪ ಸ್ವಚ್ಛತೆ ಕಾಣಬಹುದು....
ಬಾಬು