ತೋಚಿದ್ದು - ಗೀ(ಬೀ)ಚಿದ್ದು

 


ನಾಲ್ಕಾರು ವಾರಗಳಿಂದ ಯಾವ ಲೇಖನವನ್ನೂ ಬರೆಯದೆ ಇದ್ದದ್ದು, ಸೋಮಾರಿತನದ ಭಾಗವೋ, ಸ್ಫೂರ್ತಿಯ ಒರತೆಯ ಕೊರತೆಯೋ ತಿಳಿಯದು. ವಿಷಯದ ಕೊರತೆಯಂತೂ ಅಲ್ಲ. ಕಾರ್ಯರೂಪಕ್ಕಂತೂ ಇಳಿಸಲಿಲ್ಲ. ಆತ್ಮೀಯ ಸ್ನೇಹಿತ ಕೃಪನ ಅಗಲಿಕೆ, ಎಲ್ಲ ಅಡ್ಡಿಯನ್ನು ತೊಡೆದು ಹಾಕಿ, ಜಡತ್ವವನ್ನು ಮೀರಿ,  ಬರೆಯುವ ಸ್ಫೂರ್ತಿ ಎಲ್ಲಿಂದ ಬಂತೋ, ಆ ದೇವರೇ ಬಲ್ಲ. ಅದಕ್ಕಾಗಿ ಕೃಪನಿಗೆ ಧನ್ಯವಾದಗಳನ್ನು ಸಲ್ಲಿಸುವುದು ಸಮಂಜಸ.

ಆಗ ನೆನಪಿಗೆ ಬಂದದ್ದೇ ನಾನು ಬಹುವಾಗಿ ಮೆಚ್ಚಿದ ಸಾಹಿತಿ ಬೀಚಿಯವರ ಪದಪುಂಜ ತೋಚಿದ್ದು - ಗೀಚಿದ್ದು.  ಸುಧಾ ವಾರಪತ್ರಿಕೆಯಲ್ಲಿ ಬರುತ್ತಿದ್ದ ನೀವು ಕೇಳಿದಿರಿ ವಿಭಾಗದ ಪ್ರಶ್ನೋತ್ತರ, ಬೀಚಿಯವರ ಸಮಯೋಚಿತ, ಸಾಂದರ್ಭಿಕ, ಹಾಸ್ಯಭರಿತ ಉತ್ತರಗಳು, ಇಂದಿಗೂ ತನ್ನ ಸೊಗಡನ್ನು ಉಳಿಸಿಕೊಂಡಿವೆ. ಅದರ ಸಂಕಲನ ಉತ್ತರಭೂಪ ಪುಸ್ತಕವನ್ನು ಆಗಾಗ್ಗೆ ತಿರುವಿ ಹಾಕುವ ಚಪಲ ನನ್ನದು.

S J Plytechnic ನಲ್ಲಿ ಓದುತ್ತಿದ್ದ ಸಮಯ. ಒಂದು ಕಾರ್ಯಕ್ರಮಕ್ಕೆ ಬೀchi ಯವರು ಮುಖ್ಯ ಅತಿಥಿ. ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲು ಅವರೊಡನೆ ಕೆಲ ನಿಮಿಷ ಮಾತನಾಡುವ ಅವಕಾಶ ದೊರೆತಿತ್ತು. ಅಲ್ಪ ಸಮಯದಲ್ಲೇ ಅವರ ಹಾಸ್ಯ ಚಟಾಕಿಗಳನ್ನು ಕೇಳುವ ಸೌಭಾಗ್ಯ ನನ್ನದಾಗಿತ್ತು. ಅವರ ಬರವಣಿಗೆಗೆ ಸ್ಫೂರ್ತಿಯೇನು ಎಂಬ ಪ್ರಶ್ನೆಗೆ ತೋಚಿದ್ದನ್ನು ಗೀಚುವುದು ಅಷ್ಟೇ ಎಂಬ ಚುಟುಕಾದ ಉತ್ತರ. 

ತೋಚಿದ್ದನ್ನು ಗೀಚಿದ್ದು ಬೀಚಿ

ಹಾಗಾಗಿ ಆ ಗೀಚುಗಳು ಬೀಚಿದು

ಅಪ್ರತಿಮ ಪ್ರತಿಭೆ ಬೀಚಿ ಗೀಚಿದ್ದೇ

ತೋಚಿದ್ದು - ಬೀಚಿದ್ದು

ನಾನು ಸದ್ದಿಲ್ಲದೆ ಅದನ್ನು ಕದ್ದಿದ್ದು.

ಗೀಚುವುದು ಎಂದು ಸಾಮಾನ್ಯವಾಗಿ ಹೇಳುವುದು... ಏನೂ ಬರೆಯಲು ಬರದ ಮಕ್ಕಳ ಕೈಗೆ ಬರೆಯಲು ಸಿಕ್ಕಾಗ, ಕೈ ಹೋದಂತೆ ಬರೆಯುತ್ತಾ ಸುತ್ತುವ ಸುತ್ತುಗಳಿಗೆ. ಯಾವ ಗೊತ್ತು ಗುರಿಯೂ ಇಲ್ಲದ, ಅರ್ಥವನ್ನು ಊಹಿಸಿಕೊಳ್ಳಬೇಕಾದ / ಆಗದ ಬರವಣಿಗೆ... ಏನೋ ಗೀಚ್ಕೊಂಡಿದೆ ಮಗು.

ಗೀಚು ಎಂಬ ಪದಕ್ಕೆ ನಿಘಂಟಿನಲ್ಲಿ ಅವಸರವಸರವಾಗಿ,  ಅಡ್ಡಾದಿಡ್ಡಿಯಾಗಿ ಬರೆಯುವುದು ಎಂಬ ಅರ್ಥ ಉಂಟು.

ಒಂದು ಹಂತದಲ್ಲಿ ಕವನಗಳನ್ನು ಬರೆಯುವ ಪ್ರಯತ್ನವನ್ನು ಮಾಡಿದ್ದೆ. ದಿನಕರ ದೇಸಾಯಿಯವರ ನಾಲ್ಕು ಸಾಲಿನ ಚುಟುಕುಗಳು ನನಗೆ ತುಂಬಾ ಇಷ್ಟವಾಗುತ್ತಿದ್ದವು. ಅವುಗಳಲ್ಲಿನ ಪ್ರಾಸ ನನಗೆ ಅಚ್ಚು ಮೆಚ್ಚು.  ಪ್ರಾಸಕ್ಕಾಗಿ ಬರೆದ  "ತಲೆ ತುಂಬಾ ಹೇನು"  ಎಂಬ ಸಾಲು ಎಷ್ಟು ಬಾಲಿಶವಾಗಿತ್ತು ಎಂದು ಈಗ ಅನಿಸುತ್ತದೆ. ಇಂದಿಗೂ ಆ ಪ್ರಾಸದ ಪ್ರಭಾವ ನನ್ನ ಮೇಲಿದೆ. ಅದರಿಂದ ಸ್ಪೂರ್ತಿ ಪಡೆದು ಬಹು ಹಿಂದೆ ಬರೆದದ್ದೇ...

ಕೇಳಿದೊಡನೆ ಕವನ ಬರೆಯಲು                           ನಾನೇನು ಆಶು ಕವಿಯೇ?                                 ಬಲವಾಗಿ ಒತ್ತಿದೊಡೆ ಸರಸರನೆ ಹೊರಬರಲು    ಕವನವೇನು ಚಕ್ಕುಲಿಯೇ?

ಕನ್ನಡಕೆ ಕೈ ಎತ್ತು ಕನ್ನಡದ ಕಂದ                                 ಅದು ಆದೀತು ಕಲ್ಪವೃಕ್ಷ                                          ಕಂದ ಕೈಚಾಚಿ ಎತ್ತಿದಾ ಚಂದಾ                                  ಅದು ಆಯಿತು ಲಕ್ಷ ಲಕ್ಷ.

ನನ್ನೂರು ದೊಡ್ಡಜಾಲದಲ್ಲಿ ಓದುತ್ತಿದ್ದ ಸಮಯ... ನಮ್ಮೂರಿನವರೇ ಆದ ಮುನಿಶಾಮಯ್ಯ ಮೇಷ್ಟ್ರು , ನಮ್ಮ ಶಾಲೇಲಿ. ಹಾಗಾಗಿ 24 ಗಂಟೆಯೂ ಅವರು ನಮಗೆ ಮೇಷ್ಟ್ರು.  ಸಂಜೆ ಕತ್ತಲಾಗುತ್ತಾ ಬಂದರೂ ನಾವು ಆಟ ಆಡ್ತಾ ಇದ್ರೆ... ಮುನಿಶಾಮಯ್ಯ ಮೇಷ್ಟ್ರು ಕಂಡಾಗ ನಾವೆಲ್ಲ ಪರಾರಿ ಯಾಗುತ್ತಿದ್ದೆವು. ಮುನಿಶಾಮಯ್ಯ ಮೇಷ್ಟ್ರು  ತುಂಬಾ ಕಟ್ಟುನಿಟ್ಟು. ಕೋಪ ಬಹುಬೇಗ ಬರುತ್ತಿತ್ತೋ ಅಥವಾ ಆಗಿನ ಅಪ್ಪ ಅಮ್ಮಂದಿರು ಹೇಳಿ ಹೋಗುತ್ತಿದ್ದ " ನಾಲ್ಕು ಕೊಟ್ಟು ಕಲ್ಸಿ ಮೇಷ್ಟ್ರೇ" ಎಂಬ ಮಾತುಗಳ ಪ್ರಭಾವವೋ.. ಸಣ್ಣ ತಪ್ಪಿಗೂ ಒದೆ ಬೀಳುತ್ತಿದ್ದದ್ದು / ಶಿಕ್ಷೆ ಕೊಡುತ್ತಿದ್ದದ್ದು ಸಾಮಾನ್ಯ.  ಒದೆ ತಿಂದ ನಮಗೆ ಅವಮಾನ, ಕೋಪ.... ಅದನ್ನು ಹೊರಹಾಕುವ ಸಾಮರ್ಥ್ಯ ಇರದ ಕಾರಣ,   ನಮಗೆ ಅವರ ಮೇಲೆ ಬೇಜಾರಿತ್ತು.

ಸಮಯ ಜಾರಿದಂತೆ  ಅವರಿಗೆ ಬೇರೆ ಶಾಲೆಗೆ ವರ್ಗವಾಗಿದ್ದು...ಸಹಜವಾಗಿಯೇ ನಮಗೆ ಸಂತೋಷವಾಗಿತ್ತು. ಅದನ್ನು ಹೊರಹಾಕಿದ್ದು, ಕೆಳಗಿನ ಸಾಲುಗಳ ಮೂಲಕ .. 

ಇವತ್ತು ತೊಲಗಿದರು - ಗುಂಡು ನಾಯ್ಕ.            ನಾಳೆಯಿಂದ ಏಟು ತಪ್ತು - ಗುಂಡು ನಾಯ್ಕ.           ನಮಗೆಲ್ಲ ಸಂತೋಷ - ಗುಂಡು ನಾಯ್ಕ.          ನಿನಗೊಂದು ನಮಸ್ಕಾರ - ಗುಂಡು ನಾಯ್ಕ.

ಬರೆದು ಸುಮ್ಮನಾಗಿದ್ದರೆ ಸರಿಯಾಗುತ್ತಿತ್ತೇನೋ... ಹಾಗಾಗಲಿಲ್ಲ. ಕಾರಣ ನಾವೆಲ್ಲ ಒಟ್ಟು ಸೇರಿ ಅದನ್ನು ರಾಗವಾಗಿ ಹಾಡಿಕೊಂಡದ್ದು. ನಾನು  ಸಾಲುಗಳನ್ನು ಓದುವುದು ಉಳಿದವರು ಗುಂಡು ನಾಯ್ಕ ಎಂದು ಹೇಳುವುದು. (ಶರಣು ಶರಣುವಯ್ಯ ಗಣನಾಯಕ ದಿಂದ ಸ್ಫೂರ್ತಿ ಪಡೆದು). ಇದು ಮುನಿಶಾಮಯ್ಯ ಮೆಷ್ಟ್ರ ತನಕ ಹೋಗಿ, ನನ್ನಪ್ಪನ ಮುಂದೆ ವಿಚಾರ ಬಂದು ಮತ್ತದೇ ಒದೆ ತಿನ್ನುವುದರೊಂದಿಗೆ ಮುಕ್ತಾಯವಾಯಿತು ಎನ್ನುವಲ್ಲಿಗೆ..

ಹಲವಾರು ವರ್ಷಗಳ ನಂತರ, ನಾನು ದೊಡ್ಡಜಾಲಕ್ಕೆ ಹೋದಾಗ, ಕಂಡವರು ವಯಸ್ಸಾಗಿ ಕೃಶವಾಗಿದ್ದ ಮುನಿಶಾಮಯ್ಯ ಮೇಷ್ಟ್ರು. ನಿಜವಾಗಲೂ ನನಗೆ ತುಂಬಾ ಪ್ರೀತಿ ಬಂತು. ನಮಸ್ಕಾರ ಮಾಡಿದೆ. ಅವರಿಗೆ ಗುರುತು ಹತ್ತಲಿಲ್ಲ... ಪಕ್ಕದಲ್ಲಿದ್ದವರು ಶಾಮಣ್ಣೋರ ಮಗ ರಂಗಣ್ಣ... ಅಂತ ಪರಿಚಯಿಸಿದರು. ಅವರ ಮುಖ ಅರಳಿತು. ನನ್ನ ಬಗ್ಗೆ ವಿಚಾರಿಸಿ, " ಅವಾಗಿಂದನು ಬುದ್ಧಿವಂತನಪ್ಪ  ರಂಗಣ್ಣ"  ಅಂತ ಹೇಳಿಕೊಂಡು... ಹಾಡು ಬರೆದು ಒದೆ ತಿಂದಿದ್ದನ್ನು ನೆನಸಿಕೊಂಡು ನಕ್ಕಾಗ, ದಪ್ಪ ಕನ್ನಡಕವನ್ನು ಹಾಕಿದ್ದ ಆ ಮುಖದಲ್ಲಿನ ಸಂತೋಷವನ್ನು ನೋಡಿ, ನನಗಾದ ಸಂತೋಷ ಹೇಳತೀರದು.

ಶಹಾಬಾದ್ ಗೆಳೆಯರ ಬಳಗದ ಕಾರ್ಯಕ್ರಮದಲ್ಲಿ, ನನ್ನ ಕವನ ಹಾಡಿದ್ದುಂಟು. ಅದೂ ಸಹ " ಆವ್ ಬಚ್ಚೋ ತುಮೇ ದಿಖಾದೂ ಝಾಂಕಿ ಹಿಂದೂಸ್ಥಾನ್ ಕೀ... " ಹಾಡಿನ ರಾಗದ ಅನುಕರಣೆ.

ಹಿಂತಿರುಗಿ ನೋಡಿದಾಗ ನನ್ನ ಬಹಳಷ್ಟು ಬರವಣಿಗೆಗಳು ನಕಲುಗಳಾ ಎಂಬ ಅನುಮಾನ ಬಂದಿದ್ದುಂಟು. ನಕಲು ಎಂದಾಗ ಯಥಾವತ್ತಾಗಿ ಮೂಲ ಬರವಣಿಗೆಯನ್ನೇ ಕದ್ದು (?) ಬರೆಯುವುದು ಎಂದಾಗುತ್ತದೆ. ಹಾಗೆ ಮಾಡಿಲ್ಲ ಎಂದು ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಮೊರೆ ಹೋಗಿದ್ದು ಸೋಮೇಶ್ವರ ಶತಕದ ಈ ಪದ್ಯ.

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ 

ಕಲಿಕೆಯ ಮೂಲ ಅನುಕರಣೆಯೇ... ಮಗುವಿನ ಹಂತದಲ್ಲಿಯೂ ಸಹ ಅದು ಕಲಿಯುವುದು ಸುತ್ತಮುತ್ತಲಿನ ಆಗು ಹೋಗುಗಳ ಅನುಕರಣೆಯ ಮೂಲಕ.

ಅಕ್ಕಿಯೊಳಗನ್ನವನು ಕಂಡವರು ಮೊದಲಾರು ಅಕ್ಕರದ ಬರಹಕ್ಕೆ ಮೊದಲಿಗನ ದಾರು...

ಡಿವಿಜಿಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ಬಹು ಪ್ರಸ್ತುತ. ಸತತವಾಗಿ ಅಕ್ಕಿಯಲ್ಲಿನ ಅನ್ನವನ್ನು, ಅಕ್ಷರಗಳನ್ನು ನಾವು ಇಂದಿಗೂ ಅನುಕರಣೆಯನ್ನು ಮಾಡುತ್ತಿದ್ದೇವೆ. ಕಾಲಮಾನಕ್ಕೆ ತಕ್ಕಂತೆ, ಕ್ಷಮತೆಗೆ ತಕ್ಕಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಉದಾಹರಣೆಗೆ ಅನ್ನ... ಚಿತ್ರಾನ್ನ, ಹುಳಿಯನ್ನ, ಮೊಸರನ್ನ, ಪಲಾವ್, ಬಿಸಿಬೇಳೆ ಹುಳಿಯನ್ನ, ಅನ್ನ ವನ್ನು ಭಿನ್ನ ರೂಪ ಮಾಡಿದ ಉಪ್ಪಿಟ್ಟು, ಅಕ್ಕಿಯನ್ನು ಹಿಟ್ಟು ಮಾಡಿ ರೊಟ್ಟಿ, ರುಬ್ಬಿ ಮಾಡಿದ ದೋಸೆ... ಹೀಗೆ ಹಲವಾರು ಮುಖ ಆದರೆ ಮೂಲ ಅಕ್ಕಿಯೇ.

ಶನಿವಾರ ಸಂಜೆ ಎರಡು ಹಿರಿಯಕ್ಕಗಳನ್ನು,  ಭೇಟಿ ಮಾಡಿದ ಭಾಗ್ಯ ನನ್ನದು.... ವಾಕಿಂಗ್ನಲ್ಲಿ ಸಿಗುವ ಸ್ನೇಹಜೀವಿ ಉಮಾ - ರಮಾ ಅವರ ಮನೆಯಲ್ಲಿ. ಬಹಳ ದಿನಗಳಿಂದಲೂ, ಅವಕಾಶ ಇದ್ದಾಗಲೂ, ಕಾರಣಾಂತರಗಳಿಂದ ಸಮಯ ಕೂಡಿ ಬಂದಿರಲಿಲ್ಲ. ಇಬ್ಬರು ಹಿರಿಯಕ್ಕಗಳು ಉಮಾ ಅವರ ಅಕ್ಕಂದಿರು. ನನ್ನೂರು ದೊಡ್ಡಜಾಲದ ಅರಿವಿರುವವರು.  ಅದಕ್ಕೂ ಮಿಗಿಲಾಗಿ ನನ್ನ ಲೇಖನವನ್ನು ತಪ್ಪದೇ ಓದುವವರು. ಸುಮಾರು 100 ನಿಮಿಷಗಳ ಕಾಲದ ಆ ಭೇಟಿಯಲ್ಲಿ, ಮಾತೇ ಮಾತು... ಅವರು ಒಂದು ಹೆಸರು ಹೇಳುವುದು...  ಅವರ ಬಗೆಗಿನ ಹಳೆಯ ನೆನಪುಗಳು... ಒಂದೇ ಎರಡೇ....  ಶ್ಯಾಮಲಾ ಅವರು ನೆನಪಿಸಿದ ವೆಂಕಮ್ಮ (ದೊಡ್ಡಿ ಎಂದು ನಮಗೆ ಪರಿಚಿತ), ಅವರ ಮಗ ನರಸಿಂಹಮೂರ್ತಿ, ರಾಜಣ್ಣ, ರಾಮಣ್ಣ, ಕೊನೆ ಮನೆ ಕಾಫಿ ಪುಡಿ ಶಂಕ್ರಣ್ಣನ ಮಗ ನಾಗರಾಜ... ಪಂಚಾಂಗದವರ  ರಾಮಚಂದ್ರ ಶಾಸ್ತ್ರಿಗಳು, ಅವರ ತಮ್ಮ ನರಸಿಂಹಮೂರ್ತಿ, ಅವರ  ಮಕ್ಕಳುಗಳು ಸೀತಾರಾಮು, ಸುಬ್ರಮಣಿ, ಶೇಷಗಿರಿ...   ಸಾವಿತ್ರಮ್ಮ ...

ಮಾಯಾ ಅವರು ನಮ್ಮೂರಿನ ನರಹರಿ ಶಾಸ್ತ್ರಿಗಳವರ ಸೊಸೆಯಾದ ಕಾರಣ.. ಇನ್ನೂ ಹತ್ತಿರ ಎನಿಸಿದರು. ನರಹರಿ ಶಾಸ್ತ್ರಿಗಳವರನ್ನು ನಾನು ವೈಯಕ್ತಿಕವಾಗಿ ಕಂಡವನು, ಮಾತನಾಡಿದವನು. ಅವರ ಬಗ್ಗೆ ನನ್ನ ಹಿಂದಿನ ಲೇಖನದಲ್ಲಿ ಬರೆದಿದ್ದೇನೆ ಸಹ. ಅವರ ಹಾಗೂ ಅವರ ಅಣ್ಣ ವಿಶ್ವೇಶ್ವರ ಶಾಸ್ತ್ರಿಗಳ ಕುಟುಂಬದ ಬಹು ಜನರನ್ನು ನೆನೆಸಿಕೊಂಡಿದ್ದಾಯ್ತು.

ಜೊತೆಗೆ ನಾನು ಓದಿದ ರಾಷ್ಟ್ರೀಯ ವಿದ್ಯಾಲಯದ ನಂಟು ಅವರಿಬ್ಬರಿಗೂ ಉಂಟು. ಮಾಯಾ ಅವರು ಅಲ್ಲಿಯೇ ಕೆಲಸ ಮಾಡಿದ ಕಾರಣ, ಹಳೆಯ ಉಪಾಧ್ಯಾಯರ ನೆನಪುಗಳು,  ಮತ್ತಷ್ಟು ಹೊರಬಂದವು. 

 ಒಟ್ಟಾರೆ ಎಲ್ಲವೂ ಸಿಹಿ ನೆನಪುಗಳೊಂದಿಗೆ ಕಳೆದ ಸುಂದರ ಕ್ಷಣಗಳು. ನಾನು ಈ ಸಂಭ್ರಮದಲ್ಲಿ ಮುಳುಗಿ ಹೋಗಿದ್ದಾಗ... ನನ್ನ ಜೊತೆಯಲ್ಲಿ ಬಂದಿದ್ದ ಮೊಮ್ಮಗಳು ವಿಸ್ಮಯಳಿಗೆ ಬೇಜಾರಾಗದಂತೆ ನೋಡಿಕೊಂಡವರು ಉಮಾ ಅವರ ಗಂಡ ಕೃಷ್ಣಮೂರ್ತಿಯವರು.  ಹಣ್ಣು ಐಸ್ ಕ್ರೀಮ್ ತಿಂದು ಅಲ್ಲಿಂದ ಹೊರಟಿದ್ದು.

ಸಂತೆ ಸಮಯಕ್ಕೆ ಮೊಳ ನೆಯ್ದು.. ಮಾರಿ ಜೀವನ ಸಾಗಿಸಬೇಕು ಎಂಬ ಅನಿವಾರ್ಯತೆ ಇಲ್ಲವಾದರೂ.... ಒಂದಷ್ಟು ಶಿಸ್ತು ಜೀವನದಲ್ಲಿ ಇರಲೇಬೇಕು ಎಂಬ ಅವಶ್ಯಕತೆಯಂತೂ ನನಗೆ ಇದ್ದೇ ಇದೆ.  ಅದಕ್ಕಾಗಿ ಈ ಪ್ರಯತ್ನ. ಗೀಚಿದ್ದಂತೂ ಆಯ್ತು... ಇನ್ನು ಓದುವ ಜವಾಬ್ದಾರಿ ನಿಮ್ಮದು.....

ಡಿವಿಜಿಯವರ ಅಕ್ಕಿಯೊಳಗನ್ನವನು ಪದ್ಯದ ಮುಂದುವರಿದ ಭಾಗ.. " ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ, ದಕ್ಕುವುದೇ ನಿನಗೆ ಜಸ ಮಂಕುತಿಮ್ಮ" . ಎಷ್ಟು ಸಹಜ ಸತ್ಯ ಅಲ್ಲವೇ?

ನನಗೆ ಸಿಕ್ಕಿರುವ ಒಂದಷ್ಟು ಜ್ಞಾನವು ಬಂದದ್ದು ಎಷ್ಟು ಕಡೆಯಿಂದಲೋ...  ಮೊದಲ ಹಂತದ ಅಮ್ಮ ಅಪ್ಪನಿಂದ ಕಲಿಕೆ, ನಂತರದ ದಿನಗಳಲ್ಲಿ ಅಚರ ವಸ್ತುಗಳು, ಪ್ರಾಣಿಗಳಿಂದ ಹಿಡಿದು,   ಗುರುಗಳು, ಸ್ನೇಹಿತರು, ಜೀವನದ ಸಹ ಪ್ರಯಾಣಿಕರು, ಕೆಲ ಅಪರಿಚಿತರು, ಅಕ್ಕಂದಿರು, ಅಣ್ಣಂದಿರು, ಎಷ್ಟೋ ಸಲ ಮಕ್ಕಳು, ಮೊಮ್ಮಕ್ಕಳು, ಆಪ್ತ ಸಮಾಲೋಚನೆಗಾಗಿ ಬಂದ ಜನರುಗಳು... ಹೀಗೆ ಲೆಕ್ಕವಿಲ್ಲದಷ್ಟು ಜನರಿಂದ ಅಷ್ಟಿಷ್ಟು ಕಲಿತದ್ದು. 

ಸರ್ವಜ್ಞನೆಂಬುವನು ಗರ್ವದಿಂದಾದವನೇ ಸರ್ವರೊಳಗೊಂದೊಂದು  ನುಡಿ ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ..

ಎಂಬ ಸರ್ವಜ್ಞನ ವಚನದಂತೆ ಕಲಿತು ಪರ್ವತವಲ್ಲದಿದ್ದರೂ... ನಮ್ಮೂರ ಬಳಿ ಇರುವ ಅಕ್ಕಯ್ಯಮ್ಮನ ಬೆಟ್ಟದ ಮೇಲಿನ ಭೀಮೇಶ್ವರನ ಗುಡಿಯ ಗುಂಡುಕಲ್ಲಿನಷ್ಟಾದರೂ ಆಗಿರಬಹುದೆಂಬ ನಂಬಿಕೆ ನನ್ನದು.

ಇವರೆಲ್ಲರ ಋಣ ಭಾರ ನನ್ನ ಮೇಲಿದೆ... ಈ ತೀರಿಸಲಾಗದ ಋಣಕ್ಕೆ ನನ್ನ ಕಾಣಿಕೆ ... ಶಿರ ಸಾಷ್ಟಾಂಗ ನಮಸ್ಕಾರದಿಂದ ಮಾತ್ರ ಸಾಧ್ಯವೇನೋ...

ಆ ನಮಸ್ಕಾರವನ್ನು ಮಾಡುತ್ತಾ.....


ಡಿ ಸಿ  ರಂಗನಾಥ ರಾವ್

9741128413






    

    

    

Comments

  1. ಅದ್ಭುತ ಲೇಖನ. ಅದರಲ್ಲೂ ನಿಮ್ಮ ಅಪೂರ್ವ ಜ್ಞಾಪಕ ಶಕ್ತಿ, ಇದರೊಂದಿಗೆ ಲೇಖನಿಯಿಂದ ಇವೆಲ್ಲವನ್ನೂ ಗೀಚುವಿಕೆ - ಎಲ್ಲವು ಅದ್ಭುತ. ಈ ಎಲ್ಲಾ ವಿಶೇಷತೆಗೆ ನನ್ನ ದೊಡ್ಡ ಸಲಾಂ. 🙏🙏🙏🙏

    ReplyDelete
  2. ಗುರುಪ್ರಸನ್ನ, ಚಿಂತಾಮಣಿ22 April 2026 at 16:03

    ಪ್ರಪ್ರಥಮವಾಗಿ ಈ ಲೇಖನವನ್ನು ಗೀಚಲು ಸಾಧ್ಯವಿಲ್ಲ ಏಕೆಂದರೆ ಮೊಬೈಲ್ನಲ್ಲಿ ಬರೆದಿದ್ದಾರೆ.

    ಗೀಚುವುದು ಎಂದರೆ ಲಂಗುಲಗಾಮಿಲ್ಲದೆ ತೋಚಿದನ್ನೆಲ್ಲಾ ಬರೆಯುವುದು ಎಂದು. ಆದರೆ ನಾವು ಬರೆಯುವಾಗ ಅದಕ್ಕೆ ಸ್ಪಷ್ಟವಾದ ಅಕ್ಷರ ರೂಪ ಕೊಟ್ಟು ಓದುಗರಿಗೆ ಅರ್ಥವಾಗುವಂತೆ ಇತಿಮಿತಿಯೊಳಗೆ ಇದ್ದು ಲೇಖನವನ್ನು ಬರೆಯುತ್ತೇವೆ.

    ಲೇಖಕರು ತಮ್ಮ ಮನದ ಬುತ್ತಿಯೊಳಗಿದ್ದ ಹರಳುಗಳನ್ನೆಲ್ಲ ಸರಿಯಾದ ರೀತಿಯಲ್ಲಿ ಪೋಣಿಸಿ ಸುಂದರ
    ಮಾಲೆಯನ್ನೇ ತಯಾರಿಸಿ ಕೊಟ್ಟಿದ್ದಾರೆ. ಅದಕ್ಕಾಗಿ ಧನ್ಯವಾದಗಳು.

    ಸುಮ್ಮನೆ ಹಾಗೆ:

    ಬೆಂಗಳೂರು ಪ್ರೌಢಶಾಲೆಯ ರಾಘವೇಂದ್ರರಾವ್ ಎಂಬ ಡ್ರಾಯಿಂಗ್ ಟೀಚರ್ ಬೋರ್ಡಿನ ಮೇಲೆ ನಮ್ಮ ಮನ ಬಂದಂತೆ ಗೀಚಲು ಹೇಳುತ್ತಿದ್ದರು.ನಾವು ಗೀಚಿದ ಅಡ್ಡ ದಿಡ್ಡಿ ಗೆರೆಗಳನ್ನೇ ಉಪಯೋಗಿಸಿಕೊಂಡು ಒಂದು ಸುಂದರವಾದ ಚಿತ್ರವನ್ನು ಮೂಡಿಸುತ್ತಿದ್ದರು ಅವರ ಕಲೆಯೇ ಕಲೆ. ಈಗ ಅದು ಜ್ಞಾಪಕಕ್ಕೆ ಬರುತ್ತಿದೆ.

    ವಂದನೆಗಳೊಂದಿಗೆ,

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಕಣ್ಮರೆಯಾದ ಕೃಪ