ಭಗವದ್ಗೀತೆ - ಗೀತೋತ್ಸವ
ಭಗವದ್ಗೀತೆಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಗೀತಾ ಅಭಿಯಾನಗಳು ನಿರಂತರವಾಗಿ ಎಲ್ಲೆಲ್ಲೂ ನಡೆಯುತ್ತಿವೆ.
ಭಗವದ್ಗೀತಾ ಅಭಿಯಾನ- 2025 ಇನ್ನೇನು ಸಂಪನ್ನಗೊಳ್ಳಲಿದೆ.
ಉಡುಪಿಯಲ್ಲಿ ನಡೆದ ಒಂದು ಲಕ್ಷ ಜನರ ಭಗವದ್ಗೀತಾ ಸಾಮೂಹಿಕ ಕಂಠಪಾಠ, ವಿಶಿಷ್ಟವಾಗಿತ್ತು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವತಃ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು .
ಈ ವರ್ಷದ ಭಗವದ್ಗೀತಾ ಅಭಿಯಾನದಲ್ಲಿ.. ವಿಶೇಷವಾಗಿ ಶಾಲಾ ಮಕ್ಕಳಿಗೆ ಭಗವದ್ಗೀತೆಯನ್ನು ಪರಿಚಯಿಸಿ, ಅದರ ಬಗ್ಗೆ ಆಸ್ತೆ ಮೂಡಿಸಲು ಒತ್ತುಕೊಡಲಾಗಿತ್ತು.
ಇದರ ಅಂಗವಾಗಿ, ನಾನು ಒಡನಾಟ ಇಟ್ಟುಕೊಂಡಿರುವ "ಸ್ನೇಹ ಸೇವಾ ಟ್ರಸ್ಟ್" ಈ ವರ್ಷ ಪ್ರೌಢಶಾಲೆಯ ಮಕ್ಕಳಿಗೆ ಭಗವದ್ಗೀತೆ ಸ್ಪರ್ಧೆ “ಗೀತೋತ್ಸವ” ಹೆಸರಿನಲ್ಲಿ ನಡೆಸಿ 19.12.2025 ರಂದು ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಾಸವಿ ಕನ್ವೆನ್ಷನ್ ಹಾಲಿನಲ್ಲಿ , ಮಧ್ಯಾಹ್ನ ಸುಮಾರು 3 ಘಂಟೆಗೆ ಸೇರಿದ ಕಾರ್ಯಕರ್ತರು, ಸಮರೋಪಾದಿಯಲ್ಲಿ ಮಾಡಿದ, ಪ್ರಾಂಗಣದ ಅಲಂಕಾರ, ಮುಖ್ಯ ವೇದಿಕೆ, ಬಹುಮಾನ ವಿತರಣೆಗಾಗಿ ಮತ್ತೆ ಮೂರು ವೇದಿಕೆಗಳು, ಅತಿಥಿಗಳಿಗೆ ಗೌರವ ಸಮರ್ಪಣೆಗೆ ಬೇಕಾದ ಸಲಕರಣೆಗಳು ಹಾಗೂ ಬಹುಮಾನಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಕೆಲಸಗಳು, ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿದ ಸಂಭ್ರಮವನ್ನು ನೋಡುತ್ತಾ ನಾನೂ ಸಂಭ್ರಮಿಸಿದ್ದು.
ಸಮಯವಾಗುತ್ತಿದ್ದಂತೆ, ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಆಹ್ವಾನಿತರು, ತಂಡೋಪ ತಂಡವಾಗಿ ಬಂದು, ಎಲ್ಲಾ ಆಸನಗಳು ಭರ್ತಿಯಾಗಿ, ಅಲ್ಲಲ್ಲಿ ನಿಂತ ಜನ ಕೊನೆಯ ಹಂತದಲ್ಲಿ, ಮಹಡಿಗೆ ಹೋಗುವ ಮೆಟ್ಟಿಲಿನ ಮೇಲೆ ಕುಳಿತದ್ದು, ಸಭಾಂಗಣ ಕಿಕ್ಕಿರಿದು ತುಂಬಿದ್ದನ್ನು ಸಾದೃಶ ಪಡಿಸುತ್ತಿತ್ತು.
ಭಗವದ್ಗೀತೆಯ ಸಾಮೂಹಿಕ ಪಠನದಿಂದ ಪ್ರಾರಂಭವಾದ ಕಾರ್ಯಕ್ರಮ, ಈ ಗೀತೋತ್ಸವದ ವಿವಿಧ ಮಜಲುಗಳನ್ನು ತೋರಿಸುವ ಚಿತ್ರಗಳ ಸಂಕಲನದಿಂದ ಮುಂದುವರಿದು, ವೇದಿಕೆಯ ಕಾರ್ಯಕ್ರಮಕ್ಕೆ ದಾರಿ ಮಾಡಿ ಕೊಟ್ಟಿದ್ದು.
ಪ್ರಾರ್ಥನೆ, ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಅತಿಥಿ ಗಣ್ಯರು ಭಗವದ್ಗೀತೆಯ ಬಗ್ಗೆ, ಅದರಲ್ಲೂ ಮಕ್ಕಳಿಗೆ ತಲುಪುವ ರೀತಿಯಲ್ಲಿ ಹೇಳಿದ್ದು ಪ್ರಭಾವಯುತವಾಗಿತ್ತು.
ಬಹುಮಾನಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಮಕ್ಕಳಿಗೆ, ಬಹುಮಾನವನ್ನು ಕೊಡುವಾಗಿನ ಮಕ್ಕಳ, ಅವರ ತಂದೆ ತಾಯಿಯರ ಉತ್ಸಾಹ ಮೇರೆ ಮೀರಿತ್ತು, ಅದು ಚಪ್ಪಾಳೆಯ ಮೂಲಕ ವ್ಯಕ್ತವಾಗುತ್ತಿತ್ತು.
ದಾನಿಗಳಿಗೆ ಹಾಗೂ ಬಂದ ಅತಿಥಿಗಳಿಗೆ ಗೌರವಾರ್ಪಣೆ, ಕಾರ್ಯಕ್ರಮಕ್ಕೆ ಕೈಜೋಡಿಸಿದ ಎಲ್ಲರಿಗೂ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಮುಗಿದು, ಎಲ್ಲರೂ ಊಟ ಮಾಡಿಕೊಂಡು ಹೋಗಿದ್ದು, ತೃಪ್ತಿ ಕೊಟ್ಟಿತು.
ಈ ಗೀತೋತ್ಸವದ ಪಯಣದಲ್ಲಿ ನಾನು ನನ್ನ ಪಾಲಿನ ಅಳಿಲಸೇವೆಯನ್ನು ಮಾಡಿದ್ದರಿಂದ, ಏನೋ ಧನ್ಯತೆ. ಹಾಗೆ ಮನಸ್ಸು ಈ ಪಯಣವನ್ನು ಅವಲೋಕಿಸಿತು.
ಸ್ನೇಹ ಸೇವಾ ಟ್ರಸ್ಟ್ ನ ಟ್ರಸ್ಟಿಗಳ ಮನಸ್ಸಿನಲ್ಲಿ ಬಿಜಾಂಕುರ ವಾಗಿದ್ದ ಈ ಅಭಿಯಾನಕ್ಕೆ ಮೂರ್ತ ರೂಪ ಕೊಡಲು 11.09.2025 ರಂದು ನಡೆದ ಸಭೆಯಲ್ಲಿ ಚರ್ಚಿಸಿ ಕೆಳ ಕಂಡಂತೆ ತೀರ್ಮಾನಿಸಲಾಯಿತು.
* ಕನಿಷ್ಠ ನೂರು ಶಾಲೆಯನ್ನು ಮುಟ್ಟುವ ಗುರಿ.
* ಮೊದಲ ಹಂತದಲ್ಲಿ ಪ್ರತಿ ಶಾಲೆಯಿಂದ ಗರಿಷ್ಟ 50 ಮಕ್ಕಳಿಗೆ ಲಿಖಿತ ಪರೀಕ್ಷೆ.
* ಪ್ರತಿ ಶಾಲೆಯ ಆಯ್ದ ಎರಡು ಮಕ್ಕಳಿಗೆ ಬಹುಮಾನ. ಹಾಗೆ ಅವರಿಗೆ ಮುಂದಿನ ಹಂತದ ಶ್ಲೋಕ ಪಠಣ, ಹಾಗೂ ಒಂದು ಶ್ಲೋಕಕ್ಕೆ ಅರ್ಥ ಹೇಳುವ ಸ್ಪರ್ಧೆ. ಈ ಹಂತದಲ್ಲಿ ಮೂರು ಬಹುಮಾನಗಳು ಹಾಗೂ 10 ಸಮಾಧಾನಕರ ಬಹುಮಾನಗಳು.
* ಸುಂದರವಾದ ಸಮಾರೋಪ ಸಮಾರಂಭ ಆಯೋಜಿಸುವುದು.
ವಿವಿಧ ಹಂತದ ಕೆಲಸಗಳು ನಡೆದದ್ದರ ಸಂಕ್ಷಿಪ್ತ ಮಾಹಿತಿ, ಇಗೋ ನಿಮಗಾಗಿ.
ಶಾಲೆಗಳನ್ನು ಗುರುತಿಸುವ ನಿಟ್ಟಿನಲ್ಲಿ 148 ಶಾಲೆಗಳ ಪಟ್ಟಿಯನ್ನು ತಯಾರಿಸಿ, ಸಂಪರ್ಕಿಸಿ, ಗೀತೋತ್ಸವದ ಸ್ಪರ್ಧೆಯ ವಿವರಗಳನ್ನು ಕೊಟ್ಟು.... ಕೊನೆಗೆ ಗಟ್ಟಿಯಾದದ್ದು 101 ಶಾಲೆಗಳು... ಅವರಿಂದ ಭಾಗವಹಿಸುವ ವಿದ್ಯಾರ್ಥಿಗಳ ಪಟ್ಟಿಯನ್ನು ಪಡೆಯಲಾಯಿತು. ನಮ್ಮ ಗುರಿಯನ್ನು ದಾಟಿಯಾಗಿತ್ತು.
101 ಶಾಲೆಯ4059 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿದ್ದು, 1077 ಮಕ್ಕಳು 40 ರಲ್ಲಿ 15 ಅಂಕಗಳನ್ನು ಪಡೆದರು. ಅವರಲ್ಲಿ ಆಯ್ದ 200 ಮಕ್ಕಳ ಪೈಕಿ152 ಜನ ಕಂಠಪಾಠ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆಯಲು ಅರ್ಹರಾದರು.
ಈ ಸ್ಪರ್ಧೆಗೆ, ಭಗವದ್ಗೀತೆಯ ಪ್ರತಿ ಅಧ್ಯಾಯದಿಂದ ಒಂದು ಶ್ಲೋಕದಂತೆ, ಒಟ್ಟು 18 ಶ್ಲೋಕ ಹಾಗೂ ಅದರ ಅರ್ಥವನ್ನು, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ತಯಾರು ಮಾಡಿ, ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ತಲುಪಿಸಿ, ಅವರ ತಯಾರಿಕೆಗೆ ಕಾಲಾವಕಾಶವನ್ನು ಕೊಟ್ಟು, ಆಯಾ ಶಾಲೆಯ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಿದ್ದು.
ಲಿಖಿತ ಪರೀಕ್ಷೆಗೆ, ಉತ್ತರವನ್ನು, ಪ್ರಶ್ನೆ ಪತ್ರಿಕೆಯಲ್ಲೇ ಬರೆಯುವಂತೆ ರೂಪಿಸಿತ್ತು.
ಆಯಾ ಶಾಲೆಗೆ ಬೇಕಾದಷ್ಟು ಪ್ರಶ್ನೆ ಪತ್ರಿಕೆ, ಭಗವದ್ಗೀತೆಯ ಪುಸ್ತಕ, ಹಾಗೂ ಶಾಲೆಯ ಗ್ರಂಥಾಲಯಕ್ಕೆ ಕೊಟ್ಟ ಪುಸ್ತಕಗಳನ್ನು ಜೋಡಿಸಿದ್ದು ಒಂದು ಸಾಹಸಮಯ ಕಾರ್ಯವಾಗಿತ್ತು.
ನಿಗದಿಪಡಿಸಿದ್ದ ಸಮಯಕ್ಕೆ ಶಾಲೆಗಳನ್ನು ತಲುಪಿ, ಪರೀಕ್ಷೆಯನ್ನು ಮುಗಿಸಿ, ಎಲ್ಲ ಮಕ್ಕಳಿಗೂ ಭಗವದ್ಗೀತೆಯ ಪುಸ್ತಕವನ್ನು ಕೊಟ್ಟು, ಶಾಲೆಗೂ ಪುಸ್ತಕಗಳನ್ನು ಕೊಟ್ಟು, ಉತ್ತರ ಪತ್ರಿಕೆಗಳನ್ನು ಟ್ರಸ್ಟಿಗೆ ಮರಳಿ ತಂದಿದ್ದು ಇನ್ನೊಂದು ಘಟ್ಟ.
ಇದೇ ಸಮಯಕ್ಕೆ, ಪ್ರಶ್ನೆಗಳಿಗೆ ಮಾದರಿ ಸರಿ ಉತ್ತರಗಳನ್ನು ತಯಾರು ಮಾಡಿ, ಅದನ್ನು ಉತ್ತರ ಪತ್ರಿಕೆಗಳ ಜೊತೆಗೆ ಮೌಲ್ಯಮಾಪನ ಮಾಡಲು ತಯಾರಿದ್ದವರಿಗೆ ಕೊಟ್ಟದ್ದು.
ಮೌಲ್ಯಮಾಪನದ ನಂತರ ಪ್ರತಿ ಶಾಲೆಯ ಮೊದಲೆರಡು ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಕಂಠಪಾಠ ಸ್ಪರ್ಧೆಗೆ ಭಾಗವಹಿಸಲು ತಿಳಿಸಿದ್ದು.
25 ಶಾಲೆಗಳ 50 ವಿದ್ಯಾರ್ಥಿಗಳ ಗುಂಪಿನಂತೆ, 4 ಗುಂಪು ಮಾಡಿ ಅವರಿಗೆ, online ಮೂಲಕ ಶ್ಲೋಕಗಳನ್ನು ಪಠಿಸುವ ವಿಧಾನ ಹಾಗೂ ಅರ್ಥವನ್ನು ಹೇಳಿಕೊಟ್ಟಿದ್ದು ಮತ್ತೊಂದು ತಂಡ.
ನಾಲ್ಕು ಹಂತಗಳಲ್ಲಿ ಕಂಠಪಾಠ ಸ್ಪರ್ಧೆ ಏರ್ಪಡಿಸಿ, ನಾಲ್ಕೂ ದಿನ ಅದೇ ತೀರ್ಪುಗಾರರು ಇರುವಂತೆ ಆಯೋಜಿಸಿದ್ದು... ಮೌಲ್ಯಮಾಪನ ಒಂದೇ ಹದದಲ್ಲಿ ಇರಬೇಕೆಂಬ ಆಲೋಚನೆಯಿಂದ.
ನಾಲ್ಕೂ ಹಂತದ ಸ್ಪರ್ಧೆಯ ನಂತರ, ಮೂರೂ ತೀರ್ಪುಗಾರರು ಕೊಟ್ಟ ಅಂಕಗಳನ್ನು ಕ್ರೋಢೀಕರಿಸಿ ಬಹುಮಾನಿತರನ್ನು ಆಯ್ಕೆ ಮಾಡಿದ್ದು.
ಬಹುಮಾನಿತರೆಲ್ಲರಿಗೂ, ಪಾರಿತೋಷಕ, ಅವರ ಹೆಸರಲ್ಲಿ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ಲಕೋಟೆಯಲ್ಲಿ ಹಾಕಿ ಸಿದ್ಧಪಡಿಸಿದ್ದು.
ಬೇಕಾದ ಎಲ್ಲ ವಸ್ತುಗಳನ್ನು ಒಟ್ಟುಗೂಡಿಸಿ ವಾಸವಿ ಕನ್ವೆನ್ಷನ್ ಹಾಲ್ ತಲುಪಿಸಿದ್ದು.
ಈ ಕಾರ್ಯಕ್ರಮದ ಸಂಯೋಜನೆಯಲ್ಲಿ ಮೊದಲ ದಿನದಿಂದ, ಸಮಾರೋಪದ ದಿನದವರೆಗೂ, ಅವರವರಿಗೆ ವಹಿಸಿದ ಜವಾಬ್ದಾರಿಯನ್ನು ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ, ಪರಸ್ಪರ ಪೂರಕವಾಗಿ ಕೆಲಸ ಮಾಡಿದ್ದು ಸಂಘಟನೆಯ ಶಕ್ತಿಯನ್ನು ಎತ್ತಿ ತೋರಿಸುತ್ತಿತ್ತು.
ಈ ಎಲ್ಲ ಕೆಲಸಗಳಲ್ಲದೆ, ತೆರೆಮರೆಯ ಕೆಲಸಗಳಾದ ಹಣ ಸಂಗ್ರಹಣೆ, ಜಾಗದ ಗುರುತುಸುವಿಕೆ, ಅತಿಥಿಗಳು, ಬಹುಮಾನಗಳು, ಊಟೋಪಚಾರ, ಎಲ್ಲ ಕೆಲಸಗಳ ಸಮಗ್ರ ನಿಗಾವಹಿಸುವ ಬೃಹತ್ ಕಾರ್ಯವನ್ನು ನಿರ್ವಹಿಸಿದವರು ಟ್ರಸ್ಟ್ ನ ಪದಾಧಿಕಾರಿಗಳು. ಅವರೆಲ್ಲರೂ ಅಭಿನಂದನಾರ್ಹರು.
ಕಾರ್ಯಕ್ರಮ ಮುಗಿದ ನಂತರ, ಅಳಿದುಳಿದ ವಸ್ತುಗಳನ್ನು ಕಲೆ ಹಾಕಿ ಟ್ರಸ್ಟ್ ಗೆ ಮರಳಿ ತರಲು, ವರದರಾಜ್ ದಂಪತಿಯ ಜೊತೆಗೆ ಉಳಿದದ್ದು ಟ್ರಸ್ಟ್ ನ ಕೆಲವೇ ಕೆಲವು ವಿದ್ಯಾರ್ಥಿ/ ಸ್ವಯಂಸೇವಕರು ಮಾತ್ರ, ಎನ್ನುವುದು ವಿಪರ್ಯಾಸವೇ ಸರಿ.
ಮೇಲಿನದು ಕಾರ್ಯಕ್ರಮದ ಹೊರನೋಟವಾದರೆ, ನನ್ನ ವಾರೆನೋಟಕ್ಕೆ ಕಂಡದ್ದು ಆಸಕ್ತಿದಾಯಕವಾಗಿತ್ತು.
ಮಕ್ಕಳು ಲಿಖಿತ ಪರೀಕ್ಷೆಯಲ್ಲಿ ಬರೆದ ಉತ್ತರಗಳನ್ನು ಗಮನಿಸಿದಾಗ, ಮೂರು ರೀತಿಯ ಮಕ್ಕಳು ಕಂಡರು. ಮೊದಲನೆಯವರು ವಿಧೇಯ ವಿದ್ಯಾರ್ಥಿಗಳು, ತಮಗೆ ಕೊಟ್ಟ ವಿಷಯವನ್ನು ಮನನ ಮಾಡಿಕೊಂಡು, ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಬರೆದವರು. ಎರಡನೆಯವರು, ಸರಿಯಾಗಿ ಓದಿರದ ಕಾರಣ, ತಮ್ಮದೇ ಆದ ಅನುಭವದ ಆಧಾರದ ಮೇಲೆ, ತಮ್ಮದೇ ಧಾಟಿಯಲ್ಲಿ ಉತ್ತರಿಸಿದವರು. ಮೂರನೆಯವರು ಪ್ರಶ್ನೆಯನ್ನೇ ಮತ್ತೆ ಬರೆದು ನಿಲ್ಲಿಸಿದವರು / ಉತ್ತರವನ್ನೇ ಬರೆಯದವರು.
ನನ್ನ ಗಮನ ಸೆಳೆದವರು ಎರಡನೇ ಗುಂಪಿನ ಮಕ್ಕಳು. ಇವರ ಚಿಂತನಾ ಲಹರಿ, ಜೀವನಕ್ಕೆ ತುಂಬಾ ಹತ್ತಿರವಾಗಿತ್ತು ಎನ್ನುವುದು ನನ್ನ ಅನಿಸಿಕೆ.
ಮಹಾಭಾರತವನ್ನು ಬರೆದವರು ಯಾರು ಎಂಬ ಮೊದಲ ಪ್ರಶ್ನೆಗೆ ಬಂದ ಉತ್ತರಗಳು, ವ್ಯಾಸ ಮಹರ್ಷಿಗಳು, ವ್ಯಾಸರಾಯರು, ವೇದವ್ಯಾಸರು ಎಂಬುದು ಒಂದು ಮುಖವಾದರೆ... ಜಾಣನ ಉತ್ತರ... ವೇದವ್ಯಾಸರು ಹೇಳಿ ಗಣೇಶ ಬರೆದದ್ದು. ಗಣೇಶ ಬರೆದದ್ದು ಸತ್ಯ ತಾನೇ?
ಕರ್ಮ ಮಾಡುವುದಕ್ಕೆ ಸಂಬಂಧಪಟ್ಟ ಪ್ರಶ್ನೆಗೆ...
ಒಳ್ಳೆಯ ಕರ್ಮ ಮಾಡಿದರೆ ಒಳ್ಳೆಯ ಫಲ, ಕೆಟ್ಟದ್ದು ಮಾಡಿದರೆ ಕೆಟ್ಟ ಫಲ...
ಕೆಟ್ಟದ್ದು ಮಾಡಿದರೆ ಅದು ಒಂದಲ್ಲ ಒಂದು ದಿವಸ ನಮ್ಮ ಕಾಲಿಗೆ ಬಂದು ಸುತ್ತಿಕೊಳ್ಳುತ್ತದೆ...
ಕೆಟ್ಟದ್ದು ಮಾಡಿದರೆ ದೇವರು ಕಣ್ಣು ಕಿತ್ತುಕೊಳ್ಳುತ್ತಾನೆ...
ಒಳ್ಳೆಯದನ್ನೇ ಮಾಡಬೇಕು...
ಯಾರ ಯೋಗಕ್ಷಮವನ್ನು ನೋಡಿಕೊಳ್ಳುತ್ತಾನೆ ಎಂಬ ಪ್ರಶ್ನೆಗೆ... ಒಳ್ಳೆಯವರು ಮತ್ತು ಭಕ್ತರನ್ನು ನೋಡಿಕೊಳ್ಳುತ್ತಾನೆ ಎಂಬುದು ಉತ್ತರ.
ಹೀಗೆ ಒಳ್ಳೆಯದು ಕೆಟ್ಟದ್ದನ್ನು ವಿಶ್ಲೇಷಿಸಿದ ರೀತಿ, ಮನ ಮುಟ್ಟಿತು.
ಗುಣ ತ್ರಯ ವಿಭಾಗದಲ್ಲಿ ಸದ್ಗುಣ ದುರ್ಗುಣ ಹಾಗೂ ಸುಗುಣ ಎಂದು ಉತ್ತರಿಸಿದ ವಿದ್ಯಾರ್ಥಿಯ ಚಿಂತನೆ ತಪ್ಪು ಎನ್ನಲಾದೀತೆ.
ಇನ್ನು ನಗೆ ತರಿಸಿದ್ದು ನಿಜವಾದ ಜ್ಞಾನಿ ಯಾರು ಎಂಬ ಪ್ರಶ್ನೆಗೆ ... ನಿಜವಾದ ಜ್ಞಾನಿ ಒಬ್ಬ ಮೂರ್ಖ ಎಂಬ ಉತ್ತರ.
ಮಹಾಭಾರತವನ್ನು ಬರೆದವರು ಯಾರು ಎಂಬ ಪ್ರಶ್ನೆಗೆ ನಂಗೊತ್ತಿಲ್ಲ ಗುರು ಎಂಬ ಉತ್ತರ ಬರೆದ ವಿದ್ಯಾರ್ಥಿಯ ತರಲೆ ಗುಣವನ್ನು ಉಲ್ಲೇಖಿಸದೆ ಬಿಡಲಾರೆ.
ಭಗವದ್ಗೀತೆ ಎಂದೊಡನೆ ನನಗೆ ಗೋಚರಿಸುವುದು ಕನ್ನಡದ ಭಗವದ್ಗೀತೆ ಎಂದು ಕರೆಯಲಾದ ಡಿವಿಜಿಯವರ ಮಂಕುತಿಮ್ಮನ ಕಗ್ಗ . ವೈಯುಕ್ತಿಕವಾಗಿ ನನಗೆ ಇಷ್ಟವಾಗುವ, ಆಗಾಗ್ಗೆ ನನಗೆ ಬೇಕಾದ ವಿಷಯಗಳಿಗಾಗಿ ಮೊರೆ ಹೋಗುವ ಪುಸ್ತಕ.
ಶಂಕರಾಚಾರ್ಯರ ಮೋಹ ಮುದ್ಗರ ಎಂದು ಕರೆಯಲ್ಪಡುವ ಭಜಗೋವಿಂದಂ ಕಾವ್ಯದ ಒಂದು ಪದ್ಯ
ಭಗವದ್ಗೀತಾ ಕಿಂಚಿದದೀತಾ
ಗಂಗಾಜಲಲವ ಕಣಿಕಾ ಪಿತಾ
ಸುಕೃದಪಿ ಯೇನ ಮುರಾರಿ ಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ
ಭಗವದ್ಗೀತೆಯನ್ನು ಸ್ವಲ್ಪವೇ ಅಧ್ಯಯನ ಮಾಡಿದರೆ, ಒಂದು ಹನಿ ಗಂಗಾಜಲವನ್ನು ಕುಡಿದರೆ, ಒಂದು ಬಾರಿ ಮುರಾರಿಯನ್ನು( ಕೃಷ್ಣ) ಮನಸಾರೆ ಪೂಜಿಸಿದರೆ ಸಾಕು... ಯಮ ಆ ವ್ಯಕ್ತಿಯ ಪಾಪ ಪುಣ್ಯದ ಲೆಕ್ಕದ ಚರ್ಚೆಯನ್ನೇ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದು ಭಗವದ್ಗೀತೆಯ ಶಕ್ತಿ.
ಒಂದು ಕಾಲವಿತ್ತು.. ನ್ಯಾಯಾಲಯಗಳಲ್ಲಿ ಭಗವದ್ಗೀತೆಯ ಮೇಲೆ ಕೈಯಿಟ್ಟು ಸತ್ಯವನ್ನೇ ಹೇಳುತ್ತೇನೆ.... ಸತ್ಯವಲ್ಲದೆ ಬೇರೇನು ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ ಸಾಕ್ಷಿ ಹೇಳುತ್ತಿದ್ದದ್ದು. ಸಾಕ್ಷಿ ಹೇಳುವವರೆಗೂ ಪಾಪು ಪುಣ್ಯದ ಅರಿವಿತ್ತು. ಯಾವಾಗ secular ಪದ ಸಂವಿಧಾನದಲ್ಲಿ ಸೇರಿತೋ, ಈ ಪದ್ಧತಿಯು ನಿಂತೇ ಹೋಯಿತು.
ಚಿಕ್ಕಂದಿನಲ್ಲಿದ್ದಾಗ ಚಿನ್ಮಯ ಮಿಶನ್ನಿನ ಸ್ವಾಮಿ ಚಿನ್ಮಯಾನಂದರು ನಡೆಸಿಕೊಡುತ್ತಿದ್ದ ಗೀತಾ ಜ್ಞಾನ ಯಜ್ಞ ಎಂಬ ಕಾರ್ಯಕ್ರಮದ ಭಿತ್ತಿ ಪತ್ರಗಳು ಕಣ್ಣಿಗೆ ಬೀಳುತ್ತಿದ್ದವು. ಎಂದೂ ಅದರಲ್ಲಿ ಭಾಗವಹಿಸಲಿಲ್ಲ ಎನ್ನುವುದು ಕಟು ಸತ್ಯ.
ಅದೇ ಸಮಯದಲ್ಲಿ ನನಗೆ ಯಾರೋ ಕೊಟ್ಟಿದ್ದು, ಮುಷ್ಟಿಯಲ್ಲಿ ಮುಚ್ಚಿಟ್ಟುಕೊಳ್ಳಬಹುದಷ್ಟು ಚಿಕ್ಕದಾದ, ಸುಮಾರು ಬೆಂಕಿ ಪೊಟ್ಟಣದ ಗಾತ್ರದ ಭಗವದ್ಗೀತೆಯ ಪುಸ್ತಕ. ಅದನ್ನು ಓದುವುದಕ್ಕಿಂತ ಜೇಬಿನಲ್ಲಿ ಇಟ್ಟುಕೊಂಡು ಮೆರೆದದ್ದೆ ಜಾಸ್ತಿ.
ಮಾತಿನ ಮಧ್ಯೆ ಒಂದೆರಡು ಶ್ಲೋಕಗಳ ಒಂದು ಸಾಲನ್ನು ಹೇಳುವ ರೂಢಿಯಿದ್ದರೂ, ಅವುಗಳ ಪೂರ್ಣ ರೂಪ ತಿಳಿಯದು.
ಈ ಕಾರ್ಯಕ್ರಮದ ನಂತರ, ನನ್ನನ್ನು ಭಗವದ್ಗೀತೆಯ ತಕ್ಕ ಮಟ್ಟಿನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂಬ ಮನಸ್ಸು ಬಂದಿದೆ.. ಇನ್ನಷ್ಟೇ ಕಾರ್ಯಗತ ಗೊಳಿಸಬೇಕು. ಈ ಕೆಲಸ (ಕರ್ಮ) ಮಾಡಲು ಬೇಕಾದ ಮನಸ್ಸಿನ ನಿರ್ಧಾರವನ್ನು ಗಟ್ಟಿಗೊಳಿಸು ಎಂದು ಪ್ರಾರ್ಥಿಸುತ್ತಾ....
ಕೃಷ್ಣಾರ್ಪಣಮಸ್ತು.
ನಮಸ್ಕಾರ
ಡಿ ಸಿ ರಂಗನಾಥ ರಾವ್







ಬಹಳ ಉತ್ತಮವಾದ ಕಾರ್ಯಕ್ರಮ. ನಮ್ಮ ಸನಾತನ ಧರ್ಮ ಇನ್ನೂ ಗಟ್ಟಿಯಾಗಿ ಬೇರುರಲು ಇಂತಹ ಕೆಲಸ ಸ್ಲಾಘನಿಯ. ಧನ್ಯವಾದಗಳು ಮತ್ತು ಅಭಿನಂದನೆಗಳು ಎಲ್ಲರಿಗೂ. 🙏🙏🙏🙏
ReplyDeleteಧನ್ಯವಾದಗಳು. ತುಂಬಾ ಉತ್ತಮ ಪ್ರಯತ್ನ ಯಶಸ್ವಿಯಾಗಲಿ.
ReplyDeleteವಾಹ್ ತುಂಬಾ ಅದ್ಭುತ ಹಾಗೂ ಅನುಕರಣಿಯ ಕಾರ್ಯಕ್ರಮ.... ಇನ್ನೆನು ರಾಮಾಯಣ, ಮಹಾಭಾರತ ದಂತ ಮಹಾನ್ ಕೃತಿಗಳು ಹೊಸ ತಲೆಮಾರಿನ ಮಕ್ಕಳಿಂದ ದೂರ ಆಗುವಂತೆ ಭಾಸವಾಗುವ ಸಮಯದಲ್ಲಿ ಇಂಥ ಕಾರ್ಯಕ್ರಮಗಳು ಇಷ್ಟೊಂದು ಯಶಸ್ವಿ ಯಾಗಲು ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು... ಮುಂದಿನ ಇಂಥ ಕಾರ್ಯಕ್ರಮಕ್ಕೆ ಅಳಿಲು ಸೇವೆಗಾಗಿ ನನನ್ನು ಸಂಪರ್ಕಿಸಿ
ReplyDeleteಧನ್ಯವಾದಗಳು
ಬಾಬು
ತಡವಾಗಿಯಾದರೂ ಇಂತಹ ಕಾರ್ಯಕ್ರಮಗಳು ಇತ್ತೀಚೆಗೆ ಹಲವಾರು ಕಡೆ ನಡೆಯುತ್ತಿರುವುದು ಸ್ವಾಗತಾರ್ಹ. ಈ ತರಹದ ಕಾರ್ಯಕ್ರಮಗಳು ಅಕ್ಷಯವಾಗಲಿ.
ReplyDeleteಇನ್ನು ಮಕ್ಕಳಲ್ಲಿನ ವಿವಿಧ ಮನೋಭಾವನೆಗಳ ಚಿತ್ರಣ ತಮಾಷೆಯಾಗಿದೆ.
ಮಕ್ಕಳಲ್ಲಿ ಹಾಗೂ ಪ್ರಾಯೋಜಕರಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಮಾಡಬೇಕೆಂಬ ಕಿಚ್ಚು ಇದೆ ಆದರೆ ಅದಕ್ಕೆ ಒಂದು ಚಾಲನೆ ಸಿಗಬೇಕಷ್ಟೇ. ಆಗ ತನಗೆ ತಾನೆ ಮುಂದುವರೆದು ಕೊಂಡು ಹೋಗುತ್ತದೆ.
ಕೊನೆ ಹನಿ
ಇದೇ ರೀತಿ ಮಕ್ಕಳಿಗೆ ಕ್ಷಾತ್ರ ವಿದ್ಯೆಯನ್ನು
ಕಲಿಸುವ ಪ್ರಯತ್ನಗಳು ಆಗಬೇಕು ಏಕೆಂದರೆ ಅದು ಮುಂದಿನ ದಿನಗಳಿಗೆ ಅತ್ಯವಶ್ಯಕವಾಗಿರುತ್ತದೆ ಎಂದು ನನ್ನ ಅನಿಸಿಕೆ
ವಂದನೆಗಳು
ಶ್ಲಾಘನೀಯ. ತಾವು ಕಂಠಪಾಠ ಮಾಡಿ ಅರ್ಥ ಉರು ಹೊಡೆದಿದ್ಸರೂ ಈಗ ಏನೂ ಅರ್ಥವಾಗದಿದ್ದರೂ ಮುಂದೊಂದು ದಿನ ಮಕ್ಕಳ ಬದುಕಿಗೆ ಉಪಯೋಗಕ್ಕೆ ಬರುತ್ದೆ .ಗೀತೆಯ ಉಪಕಾರ ಜಗತ್ತಿಗೇ ಗೊತ್ತಿರುವ ಸತ್ಯ.ಮಕ್ಕಳಿಗೆ ಇದನ್ನು ಮುಟ್ಟಿಸಿ ಮುಂದಿನ ಪೀಳಿಗೆಯನ್ನು ಸಂಸ್ಕಾರವಂತರನ್ನಾಗಿ ಮಾಡುವ ನಿಮ್ಮೆಲ್ಲರ ಪ್ರಯತ್ನಕ್ಕೆ ಅಭಿನಂದನೆಗಳು
ReplyDelete*ಮಕ್ಕಳಿಗೆ ಸದ್ಬುದ್ಧಿಯನ್ನು ಕಲಿಸುವ ಭಗವದ್ಗೀತೆ* ಕಾರ್ಯಕ್ರಮದ ವಿವರಣೆ ಅದ್ಭುತ ವಾಗಿದೆ , ಅರ್ಥವತ್ತಾಗಿ ಬರೆದಿದ್ದೀರಾ, ಚೆನ್ನಾಗಿದೆ🙏💐
ReplyDeleteರತ್ನಪ್ರಭಾ