ವರ - ಶಾಪವಾಯಿತೇ?



ಅಂದು ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ನನ್ನನ್ನು ಭೇಟಿಯಾಗಲು ಬಂದವರು ಗಿರೀಶ್. ಪರಿಚಯದ ನಂತರ ಅವರು ಹೇಳಿದ್ದು..." ನನ್ನ ಆತ್ಮೀಯ ಗೆಳೆಯನ ಬಗ್ಗೆ ಒಂದಷ್ಟು ಮಾತಾಡುವುದಿದೆ, ಅವನ ಸಮಸ್ಯೆಗೆ ಪರಿಹಾರ ಬೇಕಾಗಿದೆ... ಮಾತಾಡಬಹುದೇ?"

ತನ್ನ ಸ್ನೇಹಿತನ  ಸಮಸ್ಯೆಗೆ ಪರಿಹಾರ ಹುಡುಕಲು ಬಂದ ಗಿರೀಶ್ ಬಗ್ಗೆ ನನಗೆ ಅಭಿಮಾನವೆನಿಸಿತು, ಮಾತು ಮುಂದುವರೆಯಿತು.

ನನ್ನ ಬಾಲ್ಯ ಸ್ನೇಹಿತ ತುಷಾರ್... ನಮ್ಮ ಒಡನಾಟ ಶುರುವಾಗಿದ್ದು ಬಹುಶಃ ಎರಡನೇ ತರಗತಿಯಿಂದ.. ಸುಮಾರು 45 ವರ್ಷಗಳಿಂದ ನಮ್ಮ ಒಡನಾಟ ಸತತವಾಗಿ ನಡೆದಿದೆ. ಚಿಕ್ಕಂದಿನ ಠೂ ಬಿಡುವ ಕಾರ್ಯಕ್ರಮಗಳು, ದೊಡ್ಡವರಾದ ಮೇಲೂ ಆಗಾಗ್ಯೆ ನಡೆದರೂ, ಅದು ಬಹಳ ಬೇಗ ಸೇ ಮಾಡುವುದರೊಂದಿಗೆ  ಮುಕ್ತಾಯವಾಗುತ್ತದೆ. ಅವನು ಹೇಳಿದ್ದನ್ನು ನಾನು ಒಪ್ಪದೇ ವಿರೋಧಿಸಿದಾಗ, ಬಹುಬೇಗ ಅಸಹನೆ ತೋರುತ್ತಾನೆ, ಮೌನಕ್ಕೆ ಜಾರುತ್ತಾನೆ... ಅವನ ಒಡನಾಟ ನನಗೆ ಇಷ್ಟವಾದ್ದರಿಂದ, ನಾನು ಯಾವ ಸಂಕೋಚವಿಲ್ಲದೆ ಮಾತನಾಡಿಸುತ್ತೇನೆ, ಅವನು ಸಹ ಸಹಜವಾಗಿ ಬಿಡುತ್ತಾನೆ.

ಅವನಿಂದ ಎಲ್ಲರೂ ದೂರವಾಗುತ್ತಿದ್ದಾರೆ ಹಾಗೂ ಅವನನ್ನು ತಿರಸ್ಕರಿಸುತ್ತಿದ್ದಾರೆ ಎನ್ನುವ ಭಾವನೆ ಬಲವಾಗಿ ಬೇರೂರುತ್ತಿದೆ.

ತುಂಬಾ ಪ್ರೀತಿಯಿಂದ ಒಡನಾಡಿದ ಹಳೆಯ ಸ್ನೇಹಿತರೆಲ್ಲರಲ್ಲೂ ಅವನಿಗೆ ಕುಂದು ಕಾಣುತ್ತಿದೆ. ಈಗೀಗ ಅವರೊಡನೆ ಒಡನಾಟವನ್ನು ಕಳಚಿಕೊಂಡು ತಾನೇ ಒಂಟಿಯಾಗುತ್ತಿದ್ದಾನೆ ಹಾಗೂ ಒಳಗೊಳಗೆ ಕೊರಗುತ್ತಿದ್ದಾನೆ ಎಂದು ನನಗನ್ನಿಸುತ್ತೆ.

ಈ ಕೊರತೆಯನ್ನು ತುಂಬಿಕೊಳ್ಳಲೋ ಎನ್ನುವಂತೆ ಹೊಸ ಹೊಸ ಪರಿಚಯಗಳನ್ನು ಮಾಡಿಕೊಳ್ಳುತ್ತಾನೆ. ಗುಂಪಿನಲ್ಲಿದ್ದಾಗ ಹಳೆಯವರ ಜೊತೆ ಬಿಟ್ಟು ಹೊಸಬರೊಡನೆ ಆತ್ಮೀಯತೆ ತೋರಿಸುತ್ತಾನೆ. ಹಳಬರನ್ನು ಕಳೆದುಕೊಂಡರೂ ಹೊಸಬರು ನನ್ನೊಡನೆ ಇದ್ದಾರೆ ಎಂದು ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತಾನೆ. ಆದರೂ ಹಳಬರ ಗುಂಪಿನಲ್ಲಿ ಸಿಗುತ್ತಿದ್ದ ಒಂದಷ್ಟು ಪ್ರಾಮುಖ್ಯತೆ ಕಳೆದುಕೊಂಡಿರುವ ಬಗ್ಗೆ ನೋವಿದೆ... ಹಳಹಳಿಸುತ್ತಾನೆ, ಜೊತೆ ಜೊತೆಗೆ ನಾನೇನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬ ಮಾತನ್ನು ಮತ್ತೆ ಮತ್ತೆ ಎತ್ತಿ ಆಡುತ್ತಾನೆ. 

ಮನೆಯಲ್ಲಿಯೂ ಸಹ, ಹೆಂಡತಿ, ಮಗ, ಮಗಳ ಜೊತೆ ಸಣ್ಣಪುಟ್ಟ ಕಾರಣಗಳಿಗೆ ತಿಕ್ಕಾಟವಿರುತ್ತದೆ. ತನಗೆ ಗೌರವ ತೋರಿಸುವುದಿಲ್ಲ, ಅವರ ಇಷ್ಟ ಬಂದ ಹಾಗೆ ಮಾಡುತ್ತಾರೆ ಎನ್ನುವುದು ಅವನ ದೂರು. ಇದು ಅತಿರೇಕಕ್ಕೆ  ಹೋಗಿದ್ದು ಎರಡು ದಿನದ ಮುಂಚೆ, ಯಾವುದೋ ವಿಚಾರಕ್ಕೆ ಮಗನ ಮೇಲಿನ ಸಿಟ್ಟು ತೋರಿಸಲು " ನಾನು ಹೇಳಿದಂಗೆ ಕೇಳ್ಕೊಂಡು ಬಿದ್ದಿರೋದಾದರೆ ಮನೇಲಿರು ಇಲ್ದೆ ಇದ್ರೆ ಹೊರಡ್ತಾ ಇರು" ಎಂಬ ಮಾತಿಗೆ ಮಗ ಮನೆ ಬಿಟ್ಟು ಹೋಗಿದ್ದಾನೆ, ಇನ್ನೂ ಸಿಕ್ಕಿಲ್ಲ. ಅಮ್ಮನ ( ಕಮಲಮ್ಮ) ದುಃಖ ಹೇಳತೀರದು.

ಕಮಲಮ್ಮನೊಡನೆ ಮಾತಾಡುವ ಸಮಯದಲ್ಲಿ " ಅದೇನೋ ಒಂದು ಟ್ರೈನಿಂಗ್ ಪ್ರೋಗ್ರಾಮ್ ಅಂತ ಆಫೀಸ್ ಇಂದ  ಹೋಗಿದ್ದರು... ಅಲ್ಲಿಂದ ಬಂದ್ಮೇಲೆ ಲೀಡರು, ಲೀಡರ್ ಶಿಪ್ಪು ಅನ್ನೋದರ ಬಗ್ಗೆ ಬಹಳ ಹೆಮ್ಮೆಯಿಂದ ಮಾತಾಡ್ತಾ ಇದ್ರು... ತಾನು ಒಳ್ಳೆ ಲೀಡರ್ ಆಗಬಹುದು ಅಂತ ಹೇಳಿದಾರೆ ಎಂದು ಸಂಭ್ರಮಿಸಿದರು" ಎಂದು ಹೇಳಿದ ಮಾತಿಗೆ ಗಿರೀಶ್ ದನಿಗೂಡಿಸಿ ಹೌದು ಸರ್ ಈ ವಿಷಯದ ಬಗ್ಗೆ ತುಂಬಾ ಸಲ ನನ್ನತ್ರ ಹೆಮ್ಮೆಯಿಂದ ಹೇಳ್ಕೊಂಡಿದ್ದಾನೆ, ನನ್ನ ಜೀವನದಲ್ಲಿ ಅಳವಡಿಸಿಕೊಳ್ತೀನಿ ನೋಡ್ತಾ ಇರು ಅನ್ನುವ ಹೆಮ್ಮೆಯ ಮಾತುಗಳು ಕೇಳಿದ್ದೇನೆ.

ಮೊದಲಿಗೆ ಸಮಾಲೋಚನೆಗೆ ಬರಲೊಪ್ಪದ ತುಷಾರ್, ಹೆಂಡತಿಯ ವರಾತ ಹಾಗೂ ಸ್ನೇಹಿತನ ಮಾತಿಗೆ ಕಟ್ಟು ಬಿದ್ದು ಬಂದರು. ಅವರೊಡನೆ ಮಾತುಕತೆಯ ಸಾರಾಂಶ....

ಚಿಕ್ಕಂದಿನಿಂದಲೂ ಅಪ್ಪನ ಅತಿಯೆನ್ನಬಹುದಾದ ಶಿಸ್ತಿನ ಜೀವನಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ತೊಡಗಿಸಿಕೊಂಡಿದ್ದರೂ, ಎದುರಾಡುವ ಧೈರ್ಯ ಇಲ್ಲದಿದ್ದರೂ, ಮನಸ್ಸಿನೊಳಗೆ ಒಂದಷ್ಟು ಅಸಹನೆ ಇತ್ತು. ಹಾಗಾಗಿ ಕ್ಲಿಷ್ಟ ಸಂದರ್ಭಗಳಲ್ಲಿ ಯಾರೊಡನೆಯೂ ತನ್ನ ಅಭಿಪ್ರಾಯ ಹೇಳಲಾಗದೆ ಮೌನಿಯಾಗಿ ಒಳಗೊಳಗೆ ಕಷ್ಟ ಪಡುತ್ತಾ ಇದ್ದದ್ದು.

ಕೆಲಸದ ವಿಚಾರದಲ್ಲಿ ಚುರುಕಾಗಿದ್ದು, ಆಫೀಸಿನಲ್ಲಿ ಒಳ್ಳೆಯ ಹೆಸರಿದ್ದರೂ, ಸಾಮಾನ್ಯವಾಗಿ ಆಫೀಸುಗಳಲ್ಲಿ ನಡೆಯುವ ಒಳ ರಾಜಕೀಯದ  ಸಂದರ್ಭದಲ್ಲಿ,  ತನ್ನನ್ನು ಸಮರ್ಥಿಸಿಕೊಳ್ಳಲಾಗದೆ ಬೇಜಾರು ಪಟ್ಟ ಪ್ರಸಂಗಗಳು ಸಾಕಷ್ಟು.

ಇಂಥ ಒಂದು  ಸಮಯದಲ್ಲಿ, ಅವರ ಮೇಲಧಿಕಾರಿ ತುಷಾರ್ ಅವರನ್ನು ತಮ್ಮ ಕಂಪನಿಯ skill development program ಅಡಿಯಲ್ಲಿ ಹತ್ತು ದಿನದ ಒಂದು ವರ್ಕ್ ಶಾಪಿಗೆ ಕಳಿಸಿದರು.

ಈ ವರ್ಕ್ ಶಾಪ್ ಬಗ್ಗೆ ಮಾತನಾಡುವಾಗ ತುಷಾರ್ ಅವರ ಉತ್ಸಾಹ ಹೇಳತೀರದು. ಜನಗಳೊಂದಿಗೆ ಮಾತನಾಡುವ ಕಲೆ, ಕೊಟ್ಟ ವಿಷಯದ ಬಗ್ಗೆ ಮಾತನಾಡುವ (ಭಾಷಣ ಮಾಡುವ?) ಹಾಗೂ ಲೀಡರ್ ಆಗುವುದು ಹೇಗೆ? ಎಂಬ ವಿಚಾರಗಳು ಇವರ ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದೆ. ತುಂಬಾ ಶ್ರದ್ದೆಯಿಂದ ವಿಷಯಗಳನ್ನು ಮನನ ಮಾಡಿ ಕೊಂಡು, ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಕಾರ್ಯಕ್ರಮದ ಕೊನೆಯ ಹಂತವಾಗಿ, ಸರ್ಟಿಫಿಕೇಟ್ ಕೊಡುವ ಸಮಯದಲ್ಲಿ, ಇವರನ್ನು ಹೊಗಳಿ ಒಳ್ಳೆಯ ಲೀಡರ್ ಆಗುವ ಎಲ್ಲ ಲಕ್ಷಣಗಳು ಇವೆ, ಒಳ್ಳೆಯದಾಗಲಿ ಎಂದು ಹರಸಿದ್ದಾರೆ. ತಾನು ಲೀಡರ್ ಆಗಬೇಕೆಂಬ ಆಸೆ ಪ್ರಖರವಾಗಿದೆ.

ನಂತರದ ದಿನಗಳಲ್ಲಿ ಆಫೀಸಿನಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ, retire ಆದವರ ಬೀಳ್ಕೊಡುಗೆ ಸಮಾರಂಭ, ವಾರ್ಷಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಆ ಕಾರಣದಿಂದ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿಯನ್ನು ಇವರು ಹೊತ್ತುಕೊಂಡಿದ್ದಾರೆ. ಮೈಕ್ ಹಿಡಿದು ಮಾತನಾಡುವ ರುಚಿ ಹತ್ತಿದೆ.

ಆಫೀಸಿನ ಹೊರಗಡೆಯೂ, ಸಂದರ್ಭ ಸಿಕ್ಕಾಗೆಲ್ಲ, ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಂಡಿದ್ದಾರೆ, ಅಲ್ಲೂ ಸಹ ಇವರಿಗೆ ಮನ್ನಣೆ ಸಿಕ್ಕಿದೆ. ಚೆನ್ನಾಗಿ ನಡೆಸಿಕೊಡ್ತಿಯಾ ಅನ್ನುವ ಮಾತನ್ನು ಸಾಕಷ್ಟು ಸಲ ಕೇಳಿದ್ದಾರೆ. ಖುಷಿಪಟ್ಟಿದ್ದಾರೆ. ಮತ್ತಷ್ಟು ಕೇಳುವ ಆಸೆ ಗರಿಗೆದರಿದೆ.

ಮನ್ನಣೆಯ ದಾಹವದು ಎಲ್ಲದಕು  ತೀಕ್ಷ್ಣತಮ ಕೊಲ್ಲುವುದದಾತ್ಮವನೇ ಮಂಕುತಿಮ್ಮ.. ಎಂಬ ಡಿವಿಜಿಯವರ ಕಗ್ಗದ ಸಾಲಿನಂತೆ ತುಷಾರ್ ಮನಸ್ಥಿತಿ ಆಗಿದೆ.

ಬೇರೆಯವರ ಸಲಹೆ ಸೂಚನೆಗಳನ್ನು ಒಪ್ಪಿಕೊಳ್ಳುತ್ತಿದ್ದ ತುಷಾರ್... ಈಗ ಕೇಳಿಸಿಕೊಳ್ಳಲು ತಯಾರಿಲ್ಲದಷ್ಟು ಬದಲಾಗಿದ್ದಾರೆ. ಕಾಲಕ್ರಮೇಣ ಸಲಹೆ ಸೂಚನೆ ಕೊಟ್ಟವರನ್ನು  ನನಗೆ ಅಷ್ಟು ತಿಳಿಯಲ್ವಾ ಸುಮ್ಮನಿರಿ ಎಂದು ಖಂಡಿಸುವಷ್ಟು ಬದಲಾಗಿದೆ. ಅವರನ್ನು ದೂರ ಇಡುವ ಹಾಗೂ ಬೇರೆಯವರೊಂದಿಗೆ ಅವರನ್ನು ದೂರುವಂತೆಯೂ ಆಗಿದೆ. ಮಾತಿನಲ್ಲೂ ನಾನು, ನಾನು ಮಾಡಿದೆ, ನಾನು ಹೇಳಿದೆ, ನಾನು ಹೇಳಿದಂತೆ ಕೇಳಬೇಕು, ನಡೆಯಬೇಕು ಎಂಬ ಭಾವ..... ಹೀಗೆ ನಾನತ್ವ ಶುರುವಾಗಿದೆ. 

ಇದು ಸಹಜವಾಗಿ ಸ್ನೇಹಿತರಿಗೆ ತುಷಾರ್ ನ ಬಗ್ಗೆ ಇದ್ದ ಅಭಿಮಾನ ಅಸಡ್ಡೆಯಾಗಿ ಪರಿವರ್ತಿತವಾಗಿದೆ.

ಇದರ ಅಂತಿಮ ಘಟ್ಟವೋ ಎನ್ನುವಂತೆ, ಅಣ್ಣ ತಮ್ಮಂದಿರೆಲ್ಲ ಸೇರಿ ಮಾಡಿದ ಕುಟುಂಬದ ಕಾರ್ಯಕ್ರಮದಲ್ಲಿ, ಮುಂದಾಳತ್ವ ವಹಿಸಿ, ಕೆಲಸ ಮಾಡಿದ್ದು ನಿಜವಾದರೂ, ಬೇರೆಯವರು ನಿರ್ವಹಿಸಿದ ಕೆಲಸಗಳನ್ನು ಒಂದು ಸಾರಿಯೂ ಹೇಳದ ಪ್ರಶಂಸಿಸದ ತುಷಾರ್ ಎಲ್ಲವೂ ತಾನೇ ಮಾಡಿದ್ದು ಎನ್ನುವಂತೆ ಬಿಂಬಿಸಿದ್ದಾರೆ... ಅದೂ ಸಭಿಕರೆಲ್ಲರನ್ನೂ ಸಂಭೋಧಿಸಿ  ಮೈಕ್  ಹಿಡಿದು ಮಾತಾಡಿದ್ದಾರೆ. ಜೊತೆಗೆ ಆಹ್ವಾನ ರೂಪದ ವಾಟ್ಸಪ್ ಮೆಸೇಜ್ ನಲ್ಲಿ ಕಾರ್ಯಕ್ರಮವನ್ನು ತಾನೇ ಆಯೋಜಿಸಿದಂತೆ ಬರೆದಿದ್ದಾರೆ. ಇದು ಅಣ್ಣ ತಮ್ಮಂದಿರಿಗೆ ಹಾಗೂ ಅವರ ಮನೆಯವರಿಗೆ ಬೇಸರ ತಂದಿದೆ. ಅಲ್ಪಸ್ವಲ್ಪ ಮಾತುಕತೆಗಳು ನಡೆದಿವೆ, ಜೊತೆಗೆ ಖಂಡನೆಯೂ ಆಗಿದೆ.

ಲೀಡರ್ ಆಗ ಹೊರಟ ತುಷಾರ್... ಲೀಡರ್ ಆಗಿ ಯಶಸ್ವಿಯಾಗಿ, ಕ್ರಮೇಣ ಕಮಾಂಡರ್ ಆಗಿದ್ದಾರೆ... ಮುಂದೆ ಹೋಗಿ ಡಿಕ್ಟೇಟರ್ ಆಗಿದ್ದಾರೆ... ಇದು ಅವರಿಗೆ ಮೇಲೇರಿದಂತೆ ಕಂಡರೂ, ಅದೇ ಗುಣಗಳು ಬೇರೆಯವರ ದೃಷ್ಟಿಯಲ್ಲಿ ಅವಗುಣಗಳಾಗಿವೆ. ಅದರ ಪ್ರಭಾವವೇ ಈಗಿನ ಪರಿಸ್ಥಿತಿ.

ತುಷಾರ್ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡರೂ, ಒಪ್ಪಿಕೊಳ್ಳಲು ಅಹಮಿಕೆ ಅಡ್ಡ ಬಂದಿದೆ. 

ಒಳ್ಳೆಯ ನಾಯಕತ್ವದ ಗುಣಗಳನ್ನು ರೂಢಿಸಿಕೊಂಡಿದ್ದೀರ, ಬೇರೆಲ್ಲರ ಅಭಿಪ್ರಾಯಗಳನ್ನು ತಿಳಿದು, ಅವರು ಗಳಲ್ಲಿರುವ, ಶಕ್ತಿ ಹಾಗೂ ಕುಂದು ಕೊರತೆಗಳನ್ನು ಗಮನಿಸಿ ಜೊತೆಯಲ್ಲಿ ಕರೆದುಕೊಂಡು ಹೋಗುವುದೇ ನಾಯಕತ್ವದ ಲಕ್ಷಣ. ನನ್ನತನವನ್ನು ಸಾಧಿಸಲು ಹೋದಾಗ ಸೋಲು ಒಂದು ಹಂತದಲ್ಲಿ ಕಟ್ಟಿಟ್ಟ ಬುತ್ತಿ, ಬದಲಾವಣೆಗೆ ಪ್ರಯತ್ನಿಸಿ.  ಇದು ಮನೆಯಲ್ಲಿನ ಆಗುಹೋಗುಗಳಿಗೂ ಅನ್ವಯಿಸುತ್ತದೆ.

ವರವಾಗಿ ಸಿಕ್ಕಿರುವ ನಿಮ್ಮ ನಾಯಕತ್ವದ ಕೌಶಲ್ಯವನ್ನು, ಹಿತಮಿತವಾಗಿ ಬಳಸಲು ಪ್ರಯತ್ನಿಸಿ.  ಸಾಧನೆ ಮಾಡುವ ನಿಮ್ಮ ಮನಃ ಶಕ್ತಿಗೆ ಸುಲಭವಾಗಿ ಯಶಸ್ಸು ದೊರಕುತ್ತದೆ ಎಂದು ಹೊಗಳಿ ಮುಕ್ತಾಯಗೊಳಿಸಿದ್ದು.

ಮತ್ತೆ ತುಷಾರ್ ಬಂದಿಲ್ಲ.

ಪಂಜೆ ಮಂಗೇಶರಾಯರು ಬರೆದ ಮೂಡುವನು ರವಿ ಮೂಡುವನು, ಕತ್ತಲೊಡನೆ ಜಗಳಾಡುವನು ಪದ್ಯದ..ಏರಿದವನು ಚಿಕ್ಕವನಿರಬೇಕಲೇ ಎಂಬಾ ಮಾತನು ಸಾರಿದನು....ಎಷ್ಟು ಸಮಂಜಸ ಅಲ್ಲವೇ?  ಉನ್ನತ ಸ್ಥಾನದಲ್ಲಿರ ಬೇಕಾದರೆ,  ವಿನಯ ಸೌಜನ್ಯಗಳು ನಡತೆಯ ಭಾಗವಾದರೆ, ಆ ಸ್ಥಾನಕ್ಕೆ ಸಲ್ಲಬೇಕಾದ ಗೌರವಾದರಗಳು ತಾನೇ ತಾನಾಗಿ ಸಲ್ಲುತ್ತವೆ. ಅಹಂಕಾರ ಇಣುಕಿದರೆ ಗೌರವಕ್ಕೆ ಧಕ್ಕೆ ನಿಶ್ಚಿತ.

ಆಪ್ತ ಸಮಾಲೋಚನೆಯ ಹಾದಿಯಲ್ಲಿ, ಬಂದ ಇಂಥ ಪ್ರಸಂಗಗಳು, ನನ್ನಲ್ಲಿ ನಾನೇ ಇಣುಕಿ ನೋಡುವ, ವಿಮರ್ಶಿಸಿಕೊಳ್ಳುವ, ಹಾಗೂ ಬದಲಾಯಿಸಿಕೊಳ್ಳುವ ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ. ಹಾಗಾಗಿ ಕೊಟ್ಟಿದ್ದಷ್ಟೇ ಅಲ್ಲದೆ ಪಡೆದದ್ದೂ ಉಂಟು.

ನಮಸ್ಕಾರ


ಡಿ ಸಿ  ರಂಗನಾಥ ರಾವ್

974112841


Comments

  1. ಚಿಕ್ಕಂದಿನಲ್ಲಿ ಅಪ್ಪನ ಅತಿಯಾದ ಶಿಸ್ತು ನಿಯಮಗಳಿಂದ ತುಷಾರ್ ಬೇಸತ್ತಿರುವುದು ಸ್ಪಷ್ಟವಾಗುತ್ತದೆ. ಬಹುಶಃ ಆತನ ಸುಪ್ತ ಮನಸ್ಸು ಇದೇ ಶಿಸ್ತು ನಿಯಮಗಳನ್ನು ಬೇರೆಯವರ ಮೇಲೆ ಹೇರಿ ಒಂದು ರೀತಿಯ ವಿಲಕ್ಷಣ ಆನಂದವನ್ನು ಅನುಭವಿಸುತ್ತಿರಬಹುದು ಎಂದು ಎನಿಸುತ್ತದೆ. ಇದರ ಜೊತೆಗೆ ತಾನು ಮಹಾ ಬುದ್ದಿವಂತ ಹಾಗೂ ಉತ್ತಮ ನಾಯಕತ್ವ ಗುಣವಳ್ಳವನು ಎಂದು ತೋರಿಸಲು ಪ್ರಯತ್ನಿಸುತ್ತಿರಬಹುದು.
    ಇದು ನನ್ನ ಅನಿಸಿಕೆ ಅಷ್ಟೇ. ತಜ್ಞರೇ ಇದಕ್ಕೆ ಸರಿಯಾದ ವಿಶ್ಲೇಷಣೆ ಮಾಡಬಹುದು.

    ಗುರು ಪ್ರಸನ್ನ
    ಚಿಂತಾಮಣಿ

    ReplyDelete
  2. ಮನಸ್ಸು ನಿಯಂತ್ರಣ ತಪ್ಪಿದರೆ
    ತಪ್ಪಿನ ಅರಿವಾದರೂ ಅಹಂ aa ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಮನುಷ್ಯನ ಸಾಧನೆ ಹೇಗೆ ಕುಂಠಿತ ವಾಗುತ್ತದೆ ಎಂಬುದನ್ನು ತಿಳಿಸಿದ್ದೀರಿ.
    ಇಂದಿನ ಯುವಜನಾಂಗಕ್ಕೆ ಈ ವಿಷಯ ಬಹಳ ಅವಶ್ಯಕತೆ ಇದೆ.sir.

    ReplyDelete
  3. ಇದು ಸಹಜವಾಗಿ ಗಂಡು ಹೆಣ್ಣು ಎನ್ನುವ ಬೇಧವಿಲ್ಲದೆ ಎಲ್ಲರಲ್ಲೂ ಇರುವಂತಹ ಗುಣ, ಕೆಲವರು ಅದನ್ನು ಅತಿಯಾಗಿ ಪೋಷಿಸಿಕೊಂಡು ಬಂದಿರುತ್ತಾರೆ, ಅದಕ್ಕೆ ಅನುಕೂಲಕರವಾಗಿ ತಮ್ಮ ಸುತ್ತಲಿನ ವಾತಾವರಣವನ್ನು ಸೃಷ್ಟಿಸಿಕೊಳ್ಳುವ ಶಕ್ತಿಯು ಸಹ ಅವರಿಗೆ ಇರುತ್ತದೆ, ಆದರೆ ದಿನಗಳು ಕಳೆದಂತೆ ಪರಿಸ್ಥಿತಿಗೆ ಹೊಂದಿಕೊಳ್ಳುವ, ಅದನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ, ಹೊಸಬರಿಗೆ ಜಾಗ ಮಾಡಿಕೊಡುವ ಔದಾರ್ಯ ಸಹ ಇರುವುದಿಲ್ಲ, ಆದರೆ ಹೆಣ್ಣುಮಕ್ಕಳ ಜೀವನದಲ್ಲಿ, ಅವರಿಗೆ ತಿಳಿಯದಂತೆಯೇ ನಾಯಕತ್ವದ ಬದಲಾವಣೆ ಯುವಪೀಳಿಗೆಗೆ ಸಹಜವಾಗಿ ಆಗಿ ಹೋಗುತ್ತದೆ, ಬೇಕೋ ಬೇಡವೋ ಅನಿವಾರ್ಯವಾಗಿ ಅದನ್ನು ಹೆಣ್ಣು ಒಪ್ಪಿಕೊಂಡು ಬಿಡುತ್ತಾಳೆ. ಇದು ಯಾವಾಗಲೂ ಗಂಡಿಗೆ ಸಮಸ್ಯೆಯೇ. ಇದು ನನ್ನ ಅಭಿಪ್ರಾಯ. - ಅನುರಾಧ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು