ಗೌರಿ ಹಬ್ಬ- ಬಾಂಧವ್ಯ ಬೆಸುಗೆ



ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನ, ಭಾರತದಲ್ಲೆಲ್ಲಾ ಅದರದೇ ಸಂಭ್ರಮ. ಈ ಸಂಭ್ರಮದ ಜೊತೆಗೆ ನಾನು ಪಾಲ್ಗೊಂಡದ್ದು ಇನ್ನೊಂದು ಸಂಭ್ರಮ. ಅದು “ಹೂವಿನ ಕಟ್ಟೆ ಹೆಣ್ಣು ಮಕ್ಕಳ ಸಂಭ್ರಮ”  ಎನ್ನುವ ಹೆಸರಿನಲ್ಲಿ ಸಂಭ್ರಮಿಸಿದ್ದು. ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂದು ನಿಮಗೆ ಅನಿಸಿದ್ದರೆ ತಪ್ಪೇನಿಲ್ಲ... ಕಾರಣ ಆ ಹೆಣ್ಣು ಮಕ್ಕಳ ಸಂಭ್ರಮದಲ್ಲಿ ಸಂಬಂಧಪಟ್ಟ ಗಂಡಸರಿಗೂ ಭಾಗವಹಿಸಲು ಆಹ್ವಾನವಿತ್ತು. ನಾನು ಹೂವಿನ ಕಟ್ಟೆ ಮನೆತನಕ್ಕೆ ದೊಡ್ಡ ಅಳಿಯ ಆದ ಕಾರಣದಿಂದ ನಾನೂ ಅರ್ಹನೇ.  ಈ ಕಾರ್ಯಕ್ರಮ ಸುಮಾರು 18 ವರ್ಷಗಳಿಂದ ನಡೆಯುತ್ತಿದ್ದರೂ, ನನ್ನ ಸ್ಪಷ್ಟ ನೆನಪಿನಂತೆ  ನಾನು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದ್ದು ಇದೇ ಮೊದಲು. 

ಈ ಕಾರ್ಯಕ್ರಮಕ್ಕೆ ಮೂಲ ಸ್ರೋತವೇ ಎಚ್ ಪಿ ರಂಗನಾಥ್ ಮತ್ತು ಜಿ ವಿಜಯ ದಂಪತಿ.( #ಬಲು ಅಪರೂಪ ನಂಜೋಡಿ) ಈ ಕಾರ್ಯಕ್ರಮ ಅವರು 25 ವರ್ಷದಿಂದ ವಾಸವಾಗಿದ್ದ ಮನೆಯಲ್ಲಿ ಸದ್ಯದ ಮಟ್ಟಿಗೆ ಕೊನೆಯ ಕಾರ್ಯಕ್ರಮ... ಅವರು ಬೇರೊಂದು ಹೊಸ ಮನೆಗೆ ವಾಸ್ತವ್ಯವನ್ನು ಬದಲಾಯಿಸುತ್ತಿದ್ದಾರೆ. ಇದೂ  ನಾನು ಭಾಗವಹಿಸಲು ಮುಖ್ಯ ಕಾರಣವಾಗಿತ್ತು.

 ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಕೊಡುವ ಸಂಪ್ರದಾಯವನ್ನು, ಭಿನ್ನವಾಗಿ ಆಚರಿಸಲು ಸಂಬಂಧಪಟ್ಟ ಎಲ್ಲ ಹೆಣ್ಣು ಮಕ್ಕಳನ್ನು (ಬಹುಶಃ ಅಕ್ಕತಂಗಿಯರಿಂದ ಪ್ರಾರಂಭವಾದ  ಈ ಚಿಂತನೆ ಕ್ರಮೇಣ ವಿಸ್ತಾರಗೊಂಡು, ಅವರಿಬ್ಬರ ಅಕ್ಕ ತಂಗಿ ಅಣ್ಣ ತಮ್ಮಂದಿರ ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳೂ,  ಸೇರಿದ್ದಾರೆ)  ಮನೆಗೆ ಕರೆದು ಊಟ ಹಾಕಿ ಅರಿಶಿನ ಕುಂಕುಮ ಇತ್ಯಾದಿಗಳನ್ನು ಪೂಜೆಗಾಗಿ ಕೊಟ್ಟು ಕಳಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದು ರಂಗನಾಥ್. ಅವನೇ ಮನಸ್ಸು ಬಿಚ್ಚಿ ಹೇಳಿದಂತೆ ಇದಕ್ಕೆ ಸಂಪೂರ್ಣ ಸಹಮತಿ, ಸಹಕಾರ ಕೊಟ್ಟು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತು ನಡೆಸಿಕೊಂಡು ಬಂದವಳು ವಿಜಯ, ನನ್ನ ಚಿಕ್ಕತ್ತೆ.

ಸುಮಾರು 40 ಜನ ಸೇರಿದ್ದ ಈ ಸಮಾರಂಭಕ್ಕೆ 11 ಘಂಟೆಯಿಂದ ಜನ ಬಂದು ಸೇರಿ ಸುಮಾರು 12:30 ಗಂಟೆಯ ಹೊತ್ತಿಗೆ  ಕಳೆಕಟ್ಟಿತ್ತು. ಬಂದವರ ಪರಸ್ಪರ ಮಾತುಗಳು, ನಗು, ಅಲ್ಲಲ್ಲಿ ಗುಂಪುಗಳು ಹೀಗೆ. ಎರಡು ವರ್ಷದ ಮಗುವಿನಿಂದ ಹಿಡಿದು 88 ವರ್ಷದ ವಯೋಮಾನದ ಅಜ್ಜಿಯತನಕ ಸೇರಿದ್ದು ವಾತಾವರಣ ಕಳೆಗಟ್ಟುವಂತೆ ಮಾಡಿತ್ತು.

ನಂತರ ಶುರುವಾಗಿದ್ದು ಊಟದ ಸಂಭ್ರಮ.. ಮೊದಲೇ ನಿಗದಿಯಾಗಿ ಫಲಕದ ಮೇಲೆ ಬರೆದಿದ್ದಂತೆ, ಒಂದಾದ ಮೇಲೆ ಒಂದರಂತೆ ತಿನಿಸುಗಳು ಬಂದವು. ತಿನ್ನುವಷ್ಟೇ ಜನರು ಬಡಿಸಲು ಮುಂದಾದಾಗ, ಉತ್ಸಾಹ ಮೇರೆ  ಮೀರಿದ್ದು, ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯದೆ ಪಾರಾಗಿದ್ದೇ ಹೆಚ್ಚು. ಸಿಹಿಯಾದ ಹಾಲುಬಾಯಿ.... ಸವಿದಿದ್ದೇ ಸವಿದದ್ದು. ಎಲ್ಲರ ಊಟ ಆದಮೇಲೆ ಪೂರಿ ಸಾಗುವನ್ನು... ಪೂರಿ ಸಾಕು ಎಂದು ಬದಲಾಯಿಸಿದ್ದು ನಾನೇ.



ನಂತರದ್ದು, ಅಂದಿನ ಮೂಲೋದ್ದೇಶದ ಕಾರ್ಯಕ್ರಮ. ಗೌರಿ ಹಬ್ಬಕ್ಕೆ ಅರಿಶಿಣ ಕುಂಕುಮ, ಜೊತೆಗೆ ಅವರವರಿಗೆ ಇಷ್ಟ ಬಂದಂತೆ ಪರಸ್ಪರರಿಗೆ ಉಡುಗೊರೆ- ಹಣವು ಸಹ ಉಡುಗೊರೆಯೇ- ಕೊಡುವುದು. ಈ ಕೊಡುಕೊಳ್ಳುವಿಕೆ ನಡೆದಿದ್ದಾಗ ನನಗೆ ನೆನಪಾಗಿದ್ದು ನನ್ನ ಚಿಕ್ಕಂದಿನ ದಿನಗಳು.  "ಪುಟ್ಟಗೌರಿ ಪುಟ್ಟಗೌರಿ ಬಾಗ್ನ ತಗೋ... ಚಿಕ್ಕ ಗೌರಿ ಚಿಕ್ಕ ಗೌರಿ ಬಾಗ್ನ ಕೊಡು... ಚಿಕ್ಕಗೌರಿ ಚಿಕ್ಕಗೌರಿ ಬಾಗ್ನಾ ತಗೋ ಪುಟ್ಟಗೌರಿ ಪುಟ್ಟಗೌರಿ ಬಾಗ್ನ ಕೊಡು" ಎಂದು ಮರದ ಜೊತೆಯನ್ನು ಪರಸ್ಪರ ಕೊಡುತ್ತಿದ್ದ ಕ್ಷಣಗಳು. ಗೌರಿಗಳು ಸೀರೆ ಉಟ್ಟಿಲ್ಲದ ಕಾರಣ ಸೆರಗಿಲ್ಲ, ಹಾಗಾಗಿ ತಮ್ಮ ಲಂಗದ ಕೊನೆಯನ್ನು ಸೆರಗಿನಂತೆ ಉಪಯೋಗಿಸಿ ಮರದ ಜೊತೆಯನ್ನು ಹಿಡಿದು ಅಕ್ಕ ಪಕ್ಕ, ಹಿಂದೆ ಮುಂದೆ ಅಲ್ಲಾಡಿಸಿ  ಕೊಡುವುದು. ಅದೆಲ್ಲ ನೋಡಲು ಎಷ್ಟು ಚಂದವಿತ್ತು.

ಇಲ್ಲಿಂದ ಕಾರ್ಯಕ್ರಮದ ದಿಕ್ಕು ಬದಲಿಸಿ ಮನರಂಜನೆಯ ಕಡೆಗೆ ತಿರುಗಿತು. 

ಮೊದಲಿಗೆ ಆಶುಭಾಷಣ ಸ್ಪರ್ಧೆ... ಮೊದಲೇ ನಿರ್ಧರಿಸಿ ಚೀಟಿಯಲ್ಲಿ ಬರೆದಿಟ್ಟಿದ್ದ ವಿಷಯಗಳ ಬಗ್ಗೆ ಬಂದು ಮಾತನಾಡಿದ್ದು. ಸಂತೋಷದ ವಿಷಯವೆಂದರೆ ಬಹಳ ಜನ ಭಾಗವಹಿಸಿದ್ದು. ಆಶುಭಾಷಣ ಸುಲಭವಲ್ಲ, ಹಾಗಾಗಿ ಮಾತನಾಡಲು ಮುಂದೆ ಬಂದು ಮಾತನಾಡಿದ್ದೇ ಒಂದು ಸಾಧನೆ. ನಗದು ಬಹುಮಾನವೂ ಇತ್ತು. 

ನಂತರ ಹಾಡುಗಳ ಸಂಭ್ರಮ. ಮೊದಲು ನಾನು ರಂಗನಾಥ್ ಬಹಳ ಕಾಲದಿಂದ ಹಾಡುತ್ತಲೇ ಬರುತ್ತಿರುವ ಲಗ್ನಪತ್ರಿಕೆ ಚಿತ್ರದ #ಸೀನು ಸುಬ್ಬು ಹಾಡು (ಸೀನು ಸುಬ್ಬು ಒತ್ತಿ  ಕೇಳಿ) ನಂತರ  ತರಹೇವಾರಿ ಹಾಡುಗಳು ಒಂಟಿಯಾಗಿ, ಜೋಡಿಯಾಗಿ ಗುಂಪಾಗಿ ಓತಪ್ರೋತವಾಗಿ ಹರಿದವು.

ಕತ್ತಲು ಇಣುಕುತ್ತಿದ್ದಂತೆ.. ಒಂದೊಂದೇ ಹಕ್ಕಿಗಳು ಅವರವರ ಗೂಡಿಗೆ ಹಾರಿದವು.

ಕೊನೆಗೆ ಉಳಿದವರ ಊಟ, ಕೈತುತ್ತಿನೊಂದಿಗೆ ಮುಕ್ತಾಯವಾಯಿತು. 










ಕೈ ತುತ್ತು ಹಾಕಿದ ಖುಷಿ ನನಗೆ ಸಿಕ್ಕಿತು. 

ಆರಂಭವಾದದ್ದು ಅಂತ್ಯವಾಗಲೇಬೇಕು.. ಸವಿ ನೆನಪುಗಳೊಂದಿಗೆ ಮನೆಗೆ ಬಂದಾಯ್ತು.

ಹಿಂತಿರುಗಿ ನೋಡಿದಾಗ ಇಂಥ ಸಂಭ್ರಮದ ಕ್ಷಣಗಳು ಬಾಂಧವ್ಯಗಳನ್ನು ಬೆಸೆಯುತ್ತವೆ ಎನ್ನುವುದು ಸತ್ಯ ಸಂಗತಿ. ನಮ್ಮ ಹಿಂದಿನವರು ಅದಕ್ಕಾಗಿ ಕೆಲವು ಸಂಪ್ರದಾಯಗಳನ್ನು ಹಬ್ಬಗಳನ್ನಾಗಿ ಮಾಡಿ ಸಂಬಂಧಗಳನ್ನು ಜೀವಿತವಾಗಿ ಇಟ್ಟುಕೊಳ್ಳಲು ಯೋಚಿಸಿದ್ದರು ಎಂದೆ ನನ್ನ ಭಾವನೆ. 



ಭೀಮನ ಅಮಾವಾಸ್ಯೆಯ ದಿನ, ತಮ್ಮಂದಿರು ಹೊಸಿಲ ಮೇಲಿಟ್ಟ ಕಡುಬಿನ ಭಂಡಾರವನ್ನು ಮೊಣಕೈಯಿಂದ ಕುಟ್ಟುವುದು, ಅದರಲ್ಲಿರುವ ಹಣವನ್ನು ತೆಗೆದುಕೊಳ್ಳುವುದು ಸುಂದರ ಕ್ಷಣ.

ಇನ್ನು ನಾಗರ ಪಂಚಮಿಯ ದಿನ ಅಣ್ಣತಮ್ಮಂದಿರ ಬೆನ್ನು ತೊಳೆಯುವ ಶಾಸ್ತ್ರ (ನಾಗಪ್ಪನಿಗೆ / ನಾಗರಕಲ್ಲಿಗೆ   ಅಭಿಷೇಕ ಮಾಡಿ ಉಳಿದ  ಹಾಲಿನ ಭಾಗವನ್ನು  ಬೆನ್ನಿಗೆ ಹಚ್ಚುವುದು). ನನ್ನ ಅಕ್ಕಂದಿರ  ಮನೆಗೆ ಹಣ್ಣು, ಹೂ ತೆಗೆದುಕೊಂಡು ಹೋಗಿ, ಊಟ ಮಾಡಿ ಬೆನ್ನು ತೊಳಿಸಿಕೊಂಡು ಉಡುಗೊರೆ ತೆಗೆದುಕೊಂಡು ಬರುವುದೇ ಒಂದು ಸಡಗರ. ಒಂದು ಹಂತದಲ್ಲಿ ಮೂವರು  ಅಕ್ಕಂದಿರ ಮನೆಗೂ ಹೋಗುತ್ತಿದ್ದೆವು.

ರಾಖೀ ಕಟ್ಟುವುದು ಸಹ, ಇದೇ ಬಾಂಧವ್ಯದ ಇನ್ನೊಂದು ಮುಖ. 



ಗೌರಿ ಹಬ್ಬಕ್ಕೆ  ಮುನ್ನವೇ ಅಕ್ಕಂದಿರ ಮನೆಗೆ ಹೋಗಿ ಅರಿಶಿನ ಕುಂಕುಮ ಹೂವು ಹಣ್ಣು ಕಾಯಿ ದಕ್ಷಿಣೆ ಎಲ್ಲ ಕೊಟ್ಟು ಬರುವುದು ಸಂಭ್ರಮದ ಜೊತೆಗೆ ಒಂದು ಜವಾಬ್ದಾರಿಯು ಸಹ. ತವರು ಮನೆಯ ಅರಿಶಿನ ಕುಂಕುಮಕ್ಕೆ ಕಾತರದಿಂದ ಕಾಯುವುದು ಹೆಣ್ಣು ಮಕ್ಕಳ ಒಂದು ಗುಣ.

ಅದರಲ್ಲೂ ಹೆಣ್ಣು ಮಕ್ಕಳಿಗೆ ಮದುವೆಯಾದ ಮೊದಲ ವರ್ಷ, ಮಗಳಿಗೆ ಗೌರಿಯ ಪೂಜೆಯ ಸಾಮಾನುಗಳು, ಅಳಿಯನಿಗೆ ಗಣೇಶನ ವಿಗ್ರಹ ಕೊಡುವುದು ಒಂದು ಸಂಪ್ರದಾಯ. ಮೊದಲ ವರ್ಷದ ಗೌರಿ ಗಣೇಶನ ಹಬ್ಬಕ್ಕೆ, ಮಾವನ ಮನೆಗೆ ಅಳಿಯ ಬರುವುದು ಯಾಕೋ ಒಪ್ಪಿಗೆ ಇಲ್ಲ. ಅದಕ್ಕೆ ಇರಬೇಕು " ಗತಿ ಕೆಟ್ಟ ಅಳಿಯ ಗೌರಿ ಹಬ್ಬಕ್ಕೆ ಬಂದ" ಎಂಬ ನುಡಿಗಟ್ಟು ಚಾಲ್ತಿಗೆ ಬಂದಿರಬೇಕು.

ನಾನು ಹಳ್ಳಿಯಲ್ಲಿದ್ದಾಗ, ಗೌರಿ ಹಬ್ಬಕ್ಕಾಗಿ ಅಕ್ಕಂದಿರಿಗೆ ಐದು ರೂಪಾಯಿ ಮನಿ ಆರ್ಡರ್( ಗೌರಿ ಹಬ್ಬದ ಅರಿಶಿನ ಕುಂಕುಮದ ಖರ್ಚಿಗಾಗಿ ಉಪಯೋಗ ಮಾಡತಕ್ಕದ್ದು... ಎಂಬ ಒಕ್ಕಣೆಯೊಂದಿಗೆ) ಮಾಡಿದ್ದು ನೆನಪಿದೆ. ಐದು ರೂಪಾಯಿಗೆ ಆಗ ಮೌಲ್ಯ ಇತ್ತಾದರೂ, ಮೌಲ್ಯಕ್ಕಿಂತ ಅದರ ಹಿಂದಿರುವ ಪ್ರೀತಿ ಅಭಿಮಾನಕ್ಕೆ ಹೆಚ್ಚು ಬೆಲೆ.

ಇದು ಅಕ್ಕತಂಗಿಯರು ಅಣ್ಣ ತಮ್ಮಂದಿರ ಮಧ್ಯೆ ಇರುವ ಭಾಂದವ್ಯಕ್ಕೆ ಮಾತ್ರ ಸೀಮಿತ. ಆದರೆ ವಿಸ್ತೃತ ಕುಟುಂಬದ ಸೋದರತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ ದೊಡ್ಡಮ್ಮ, ಅಕ್ಕ ಭಾವ, ಅಣ್ಣ ಅತ್ತಿಗೆ... ಎಲ್ಲರ ಭಾಂದವ್ಯ ಗಟ್ಟಿಯಾಗಲು ಮನೆಯಲ್ಲಿ ನಡೆಯುತ್ತಿದ್ದ ಇತರ ಕಾರ್ಯಕ್ರಮಗಳು ಕಾರಣವಾಗುತ್ತಿದ್ದವು. ಈ ಕಾರ್ಯಕ್ರಮಗಳಲ್ಲಿ ದೇವರ ಪೂಜೆಗೆ ಅಗ್ರಸ್ಥಾನ. ಹೋಮ ಹವನ ಇತ್ಯಾದಿ ಕಾರ್ಯಕ್ರಮದ ಭಾಗಗಳು ಇಡೀ ದಿನ ಆವರಿಸುತ್ತಿದ್ದವು. ಆಗಿನ ಸಂದರ್ಭದಲ್ಲಿ ಅದು ಎಲ್ಲರಿಗೂ ಒಪ್ಪಿಗೆಯಾಗಿತ್ತು. ಸ್ವಲ್ಪ ಕಷ್ಟವಾದರೂ, ಭಾಗವಹಿಸಲೇಬೇಕು ಎಂಬ ಭಾವವಿತ್ತು. ಕಾಲ ಸರಿದಂತೆ ಯುವ ಮನಸ್ಸುಗಳಿಗೆ, ದೇವರ ಮೇಲೆ ಭಕ್ತಿ ಇದ್ದರೂ, ಬರೀ ಪೂಜೆ ಎಂಬ ಕಾರ್ಯಕ್ರಮ ಅಷ್ಟೊಂದು ಇಷ್ಟವಾಗದೆ, ಅವರುಗಳು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದೆ ಹೆಚ್ಚು. ಯುವ ಮನಸ್ಸುಗಳಿಗೆ ಬೇಕಾದಂತಹ, ದೇವರ ಪೂಜೆಯಲ್ಲದ ಬೇರೆ ಯಾವ ಆಕರ್ಷಣೆಗಳು ಇಲ್ಲದಾಗಿದ್ದು ಇದಕ್ಕೆ ಕಾರಣ. ಜೊತೆಗೆ ಸಾಂಪ್ರದಾಯಿಕ ಊಟವೂ ಸಹ ಅವರ ವಿಕರ್ಷಣೆಗೆ ಕಾರಣವಾಗಿರಬಹುದು. ಇದು ಈಗ ಸುಲಭವಾಗಿ ಹೊರಗೆ ಸಿಗುತ್ತಿರುವ  ಅಸಾಂಪ್ರದಾಯಿಕ ತಿಂಡಿಗಳ  ಪ್ರಭಾವ.

ಇಂಥ ಕಾರ್ಯಕ್ರಮಗಳ ರೂಪರೇಷೆಯನ್ನು ಬದಲಾವಣೆ ಮಾಡಿ, ಯುವಜನರು ಇಷ್ಟಪಟ್ಟು ಭಾಗವಹಿಸುವ ಒಂದಷ್ಟು ಅಂಶಗಳನ್ನು ಸೇರಿಸಿ, ಅವರನ್ನು ಈ ಕಾರ್ಯಕ್ರಮದ ಭಾಗವನ್ನಾಗಿ ಮಾಡುವ ಹೊಣೆ ನಮ್ಮೆಲ್ಲ ಹಿರಿಯರದು. 



ಅದರಲ್ಲೂ ಉಣಬಡಿಸಿದ ಪದಾರ್ಥಗಳನ್ನು ಬಿಸಾಡದೆ ಊಟ ಮಾಡುವ ವಿಧಾನವನ್ನು ಕಲಿಸಲೇಬೇಕಾದ ಅವಶ್ಯಕತೆ ಇದೆ. ಮಾರ್ಗೋಪಾಯಗಳನ್ನು, ಆವಿಷ್ಕಾರ ಮಾಡಬೇಕಾದ ಹೊಣೆ ನಮ್ಮದು.

ಈ ಹೊಣೆಯನ್ನು ನಿಭಾಯಿಸುವ ಸಲುವಾಗಿ ಮಾಡಬಹುದಾದ ಬದಲಾವಣೆಗಳ ಬಗ್ಗೆ ನನ್ನ ಚಿಂತನೆ:

ದೇವರ ಪೂಜೆಯೇ ಕಾರ್ಯಕ್ರಮವಾಗದೇ, ಅದು ಒಂದು ಭಾಗವಾಗುವಂತೆ ಮಾಡುವ ಸಾಧ್ಯಾಸಾಧ್ಯತೆಯ ಪರಿಶೀಲನೆ.

ಕಾರ್ಯಕ್ರಮ ರೂಪಿಸುವಾಗ, ಊಟ ತಿಂಡಿಯನ್ನು ನಿರ್ಧರಿಸುವಾಗ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ, ಅವರ ಜವಾಬ್ದಾರಿಯು ತಾನೇ ತಾನಾಗಿ ಹೆಚ್ಚಾಗುತ್ತದೆ.

ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು, ಅವರು ಇಷ್ಟಪಟ್ಟು ಭಾಗವಹಿಸುವ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ, ಒಂದಷ್ಟು ಮನರಂಜನಾ ಅಂಶಗಳನ್ನು ಸೇರಿಸುವುದು. ಮಕ್ಕಳೊಡನೆ ಹಿರಿಯರು ಆಟಗಳಲ್ಲಿ ಜೊತೆಯಾಗುವುದು.

ಮೇಲಿನ ಕೆಲಸಗಳನ್ನು ಮಕ್ಕಳ ಜವಾಬ್ದಾರಿಗೆ ಬಿಟ್ಟು, ಅದರ ಜೊತೆಗೆ ಒಂದಷ್ಟು  ಕಾರ್ಯಕ್ರಮದ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಲು ಅವರ ಮನಸ್ಸನ್ನು ಅಣಿಗೊಳಿಸುವುದು.



ಎಲೆಯಲ್ಲಿ ಏನನ್ನೂ ಬಿಡದೆ ಊಟಮಾಡಿದವರಿಗೆ, ಬಹುಮಾನ ಕೊಡುವುದು ( ಅನಿರೀಕ್ಷಿತವಾಗಿ ಅಥವಾ ಮೊದಲೇ ಪ್ರಕಟಿಸಿ ) ಪ್ರಶಂಸೆ ಮಾಡುವುದು.

ಈಗಾಗಲೇ ಬಲು ಪುಟ್ಟದಾಗಿರುವ ಸಂಸಾರಗಳ ಕಾರಣ ಅಕ್ಕತಂಗಿಯರ ಅಣ್ಣ ತಮ್ಮಂದಿರ ಬಾಂಧವ್ಯವೂ ಸಿಗದಂತಾಗಿದೆ. ಮಕ್ಕಳು ಹಿತವಾದ ಸಂಬಂಧಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ನಾಲ್ಕಾರು ನೆಂಟರು,ಇಷ್ಟರ   ಕುಟುಂಬಗಳಾದರೂ ಸರಿ,  ಆಗಾಗ ಮಕ್ಕಳನ್ನು ಸೇರಿಸಿಕೊಂಡು ಇಂಥ ಕಾರ್ಯಕ್ರಮಗಳನ್ನು ಆಯೋಜಿಸ ಬಹುದಾದರೆ ಬಾಂಧವ್ಯಗಳು ಬೆಳೆದಾವು. ನಮ್ಮ ಸಂಸ್ಕೃತಿಯೂ ಉಳಿದೀತು. ಇದಾಗಲು, ಮಕ್ಕಳಿಗೆ ನಾವು ಹೇಳುವುದಕ್ಕಿಂತ ಹೆಚ್ಚಾಗಿ, ಹೇಳಿದಂತೆ ನಾವು ಬಾಳಿ ಮಕ್ಕಳಿಗೆ ಮಾದರಿ ಆದರೆ ಮಾತ್ರ, ಸಫಲತೆ ಕಾಣಬಹುದು.

ಸಂಪ್ರದಾಯಗಳು, ಸಂಬಂಧಗಳು, ಬಾಂಧವ್ಯಗಳು ಉಳಿದು ಬೆಳೆಯಬೇಕು, ಹಾಗಾಗಿ ನಾವೆಲ್ಲ ಪ್ರಯತ್ನ ಮಾಡೋಣವೇ??

ನಿಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ತಿಳಿಸಿ, ಅಳವಡಿಸಿಕೊಳ್ಳಲು ಪ್ರಯತ್ನಿಸೋಣ..ಶುಭವಾಗಲಿ

ನಮಸ್ಕಾರ ...

ಡಿ ಸಿ  ರಂಗನಾಥ ರಾವ್

9741128413


ಅರಿಕೆ: ಈ ಲೇಖನವನ್ನು ನಿಮ್ಮ ಪರಿಚಯದವರಿಗೆ ಕಳಿಸಿ...ದಯವಿಟ್ಟು









    

    

Comments

  1. ಜಯಸಿಂಹ19 August 2025 at 10:11

    ಸಂಪ್ರದಾಯಗಳು ಸಂಬಂಧದ ಕೊಂಡಿಗಳು. ನಮ್ಮಮ್ಮನಿಗೆ ಒಡಹುಟ್ಟಿದ ಅಣ್ಣ ತಮ್ಮಂದಿರು ಇರಲಿಲ್ಲ ಆದರೆ ಅದರ ಕೊರತೆಯಾಗದಂತೆ ನೋಡಿಕೊಂಡವರು ಅವರ ದೊಡ್ಡಮ್ಮನ ಮಗ ಅವರು ಕಳಿಸುವ ಮನಿ ಆರ್ಡರ್ ಬಂದ ನಂತರ ನಮ್ಮ ಮನೆಯ ಗೌರಿ ಗಣೇಶ ಹಬ್ಬದ ಸಂಭ್ರಮ ಶುರುವಾಗುತ್ತಿತ್ತು ಲೇಖನ ಆಪ್ತವಾಗಿದೆ

    ReplyDelete
  2. Atyamogha chikkappa

    ReplyDelete
  3. ನಾಗೇಂದ್ರ ಬಾಬು20 August 2025 at 21:04

    ಅದೇನು ಕಾಕತಾಳಿಯವೋ ಎರಡು ದಿನದ ಹಿಂದೆ ನಮ್ಮ ಸಂಜೆಯ ಹರಟೆಯ ವಿಷಯ ಇದೆ ಆಗಿತ್ತು... ಸಗಣಿ ಇಂದ ಮಾಡಿದ ಬಲಿ ಚಕ್ರವರ್ತಿ.... ಚೆಂಡು ಹೂ ಮನೆಯ ಮುಂದಿನ ಕಣದಲ್ಲಿ ಬೆಳೆದ ರಾಗಿಯ ಹಾಲುತೆನೆ, ಸಕ್ಕರೆ ಕೊಬ್ಬರಿ ಇಂದ ತಯಾರಿಸುತಿದ್ದ ಕಡುಬು,ಕೊಬ್ಬರಿ ಮಿಠಾಯಿ,... ಈಗ ಬರಿ ನೆನಪು... ಖಂಡಿತ ನಿಮ್ಮ ಹೊಸ ರೀತಿಯ ಆಚರಣೆಗೆ ನನ್ನ ಸಹಮತ... ಹಲವಾರು ಬಾರಿ ಚರ್ಚೆ ಆಗಿದ್ದರು ಇನ್ನೂ ಕಾರ್ಯರೂಪಕ್ಕೆ ತರದ ಬಗ್ಗೆ ಸ್ವಲ್ಪ ಬೇಸರ ಇದೆ... ನಿಮ್ಮ ಬರವಣಿಗೆಗೆ ಹಾಗೂ ನಿಮ್ಮ ಕುಟುಂಭಕ್ಕೆ ನನ್ನ ಸಲಾಂ
    ಬಾಬು

    ReplyDelete
  4. ನಮ್ಮ ಪೂರ್ವಜರು ಹಬ್ಬಗಳನ್ನು ಸೊಗಸಾಗಿ ಆಚರಿಸುವ ಸಂಪ್ರದಾಯಗಳನ್ನು ರೂಡಿಸಿಕೊಂಡು ಬಂದಿದ್ದರು. ಆ ಸೊಬಗು, ಆ ಸಂಭ್ರಮ, ಆ ಸಡಗರ, ಆ ಸೊಗಡು ಅರ್ಥಗರ್ಭಿತವಾಗಿಯೂ ಇರುತ್ತಿತ್ತು.
    ಈ ಲೇಖನದಲ್ಲಿನ ಸಾಂದರ್ಭಿಕ ಚಿತ್ರಗಳು ಚೆನ್ನಾಗಿ ಮೂಡಿಬಂದಿವೆ.

    ನಮ್ಮ ಪೂರ್ವಜರಿಗೆ ಹಬ್ಬ ಮಾಡಬೇಕೆಂಬ ಬಯಕೆ ಹಾಗೂ ಆಸಕ್ತಿ ಇರುತ್ತಿತ್ತು. ಆದರೆ ಇಂದಿನ ಪೀಳಿಗೆಯವರಿಗೆ ಆಸಕ್ತಿಯು ಇಲ್ಲ, ಸಮಯವೂ ಇಲ್ಲ.

    ಬಹುಶಃ ಅವರ ಹಿರಿಯರು ಕಲಿಸಿರಲಿಕ್ಕಿಲ್ಲ. ಹಿರಿಯರಾದವರು ಹಬ್ಬಗಳನ್ನು ಮಾಡಿ ಸಂಪ್ರದಾಯ ರೀತಿ ನೀತಿ ಹಾಕಿಕೊಟ್ಟರೆ ಅದನ್ನು ಈಗಿನ ಜನಾಂಗದವರು ಸ್ವಲ್ಪವಾದರೂ ಪಾಲಿಸಿಯಾರು? ಹಿರಿಯರೇ ಮಾಡದಿದ್ದರ ಮಕ್ಕಳು ಕಲಿತು ಆಚರಿಸುವುದು ಇನ್ನೆಲ್ಲಿಂದ ಬರುತ್ತದೆ.

    ಈ ಹಬ್ಬಗಳು ನಮ್ಮ ಹಿಂದೂ ಸಂಸ್ಕೃತಿಯ ಬೇರುಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಅದನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನ ಮಾಡೋಣ.

    ಕೊನೆಯ ಹನಿ:
    ಹೆಣ್ಣು ಮಕ್ಕಳಿಗೆ ಗಂಡ ಎಷ್ಟೇ ಸೀರೆ ಒಡವೆ, ಇತ್ಯಾದಿಗಳನ್ನು ತೆಗೆದುಕೊಡಲಿ, ತವರು ಮನೆಯಿಂದ ಬಾಗಿನವಾಗಿ ಕೊಡುವ ಅಲ್ಪಮೊತ್ತ ಅಥವಾ ಸೀರೆಯ ಮೇಲೆಯೇ ಮಮಕಾರ, ಮಮತೆ ಹೆಚ್ಚು.

    ಗುರು ಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ