ಪದ್ಮಶ್ರೀ Dr. CRC


60 ವರ್ಷದ ಹಿಂದೆ ನಾನು ಓದಿದ ಬಸವನಗುಡಿ ನ್ಯಾಷನಲ್ ಕಾಲೇಜ್ ಅಂಗಳದೊಳಗೆ - ಹೋದ ಭಾನುವಾರ, ಕಾಲಿಟ್ಟ ಕ್ಷಣ ಮನಸ್ಸು ಪುಳಕಗೊಂಡಿತು... ಹಳೆಯ ನೆನಪುಗಳಿಂದ.
ಹೋದ ಸಂದರ್ಭವೂ ಅಷ್ಟೇ ಮುಖ್ಯವಾಗಿತ್ತು. ಡಾಕ್ಟರ್ ಸಿಆರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವ ಸಮಾಧಾನ ಆಪ್ತ ಸಲಹಾ ಕೇಂದ್ರದ 17ನೆಯ ವಾರ್ಷಿಕೋತ್ಸವ ಹಾಗೂ ಡಾಕ್ಟರ್ ಅವರ ಮಡದಿ ರಾಜೇಶ್ವರಿಯವರ ಒಂಬತ್ತನೇ ವರ್ಷದ  ಸ್ಮರಣೆ ಕಾರ್ಯಕ್ರಮ.... ಈ ವರ್ಷ ಇದರ ಜೊತೆಗೆ ಒಂದು ವಿಶೇಷ ಸೇರ್ಪಡೆ... ಅದು... Dr.CRC  ಅವರು ಪದ್ಮಶ್ರೀ ಪ್ರಶಸ್ತಿ ಪಡೆದದ್ದಕ್ಕಾಗಿ  ಅಭಿನಂದನೆ ಸಲ್ಲಿಕೆಯ ಸಡಗರ.
ಒಳಗೆ ಹೋಗುತ್ತಿದ್ದಂತೆ ಕಂಡದ್ದು ಹಬ್ಬದ ವಾತಾವರಣ... ಬಹಳ ಜನ ಪರಿಚಯದವರ ಭೇಟಿ... ಉಭಯ ಕುಶಲೊಪರಿ... ಹಾಗೆ ಕೆಲ ಹೊಸಬರ ಪರಿಚಯ ಸಹ.
Dr.CRC  ಅವರನ್ನು ಭೇಟಿ ಮಾಡಿ... ಅಭಿನಂದಿಸಿ ಒಂದೆರಡು ಮಾತಾಡಿ.... ಮತ್ತೆ ಬೇರೆಯವರೊಡನೆ ಮಾತಾಡುತ್ತಿದ್ದೆ.... ಆ ಸಮಯದಲ್ಲಿ ನನ್ನ ಕಣ್ಣಿಗೆ ಬಿದ್ದದ್ದು.. ಒಳಗೆ ಹೆಜ್ಜೆ ಹಾಕುತ್ತಿದ್ದ ಹಿರಿಯರು ಡಾಕ್ಟರ್. G. ನಾರಾಯಣ ರೆಡ್ಡಿ ಅವರು. ಇವರನ್ನು ಬಹುತೇಕ ಸಮಾಧಾನ ಕೇಂದ್ರದ ಕಾರ್ಯಕ್ರಮಗಳಲ್ಲಿ.. ಹಾಗೂ ರಾಮನಗರದ ನೆಮ್ಮದಿ ಆಶ್ರಮದ ಕಾರ್ಯಕ್ರಮಗಳಲ್ಲಿ ಕಂಡಿದ್ದೆ... ಅವರ ಪರಿಚಯ ನನಗಿದೆ... Dr.CRC   ಹೇಳಿದಂತೆ.... ಅವರು ಮನೋವೈದ್ಯರಾಗಲು ಕಾರಣರಾದವರು ಹಾಗೂ ಗುರು ಸ್ಥಾನದಲ್ಲಿರುವವರು ಡಾಕ್ಟರ್  ಜಿ ನಾರಾಯಣ ರೆಡ್ಡಿ ಅವರು. ತಕ್ಷಣ ಹೋಗಿ ಅವರಿಗೆ ನಮಸ್ಕರಿಸಿ... ಒಳಗೆ ಕರೆ ತರುತ್ತಿದ್ದಾಗ ಬಂದವರು Dr.CRC  ... ಕೈ ಮುಗಿಯುತ್ತಾ ಅವರು ಹೇಳಿದ ಮೊದಲ ಮಾತು " ದೇವರು ಬಂದ್ಹಾಗೇ ಆಯ್ತು"... ಇದು Dr.CRC ಅವರ ವಿನೀತ ಭಾವವನ್ನು  ತೋರಿಸುತ್ತದೆ. ಆ ಸಮಯದ ಫೋಟೋಗೆ, ನನ್ನನ್ನೂ ಕರೆದು ಜೊತೆಗೂಡಿಸಿದ ಆ ಇಬ್ಬರ  ಔದಾರ್ಯಕ್ಕೆ ನಾನು ಋಣಿ. 
Dr.CRC  ಆಪ್ತ ಸಮಾಲೋಚನೆ ಕ್ಷೇತ್ರದಲ್ಲಿ ನನ್ನ ಗುರು, ಹಾಗಾಗಿ...ಗುರು,  ಗುರುವಿನ ಗುರು ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳುವ ಅವಕಾಶ ನನ್ನದಾಯಿತು.  (ಅವರ ಸ್ನೇಹಿತರಿಂದ ಬಂದ ಈ ಫೋಟೋವನ್ನು ಅಂದೇ ನನಗೆ ಕಳಿಸಿದ್ದು...ವ್ಯಕ್ತಿಗತವಾಗಿ ನೆನೆದು ಸ್ಪಂದಿಸುವುದು...ಸಂತೋಷ ಹಂಚಿಕೊಳ್ಳುವುದು ಅವರ ಗುಣ).


ಆಹ್ವಾನ ಪತ್ರಿಕೆಯಲ್ಲಿ ತಿಳಿಸಿದ್ದಂತೆ ಹಾರ ತುರಾಯಿಗಳ ಭರಾಟೆ ಇರಬಾರದು... ಆದರೆ "ಬರಹಾಭಿನಂದನೆ" ಎನ್ನುವ ಅವಕಾಶವನ್ನು ಕಲ್ಪಿಸಲಾಗಿತ್ತು. ಅದಕ್ಕೆ ಬೇಕಾದ ಅಚ್ಚುಕಟ್ಟಾಗಿ ಕತ್ತರಿಸಿದ ಬಣ್ಣ ಬಣ್ಣದ ಕಾಗದ ಹಾಗೂ ವಿವಿಧ ಬಣ್ಣದ ಲೇಖನಿಗಳು ಅಲ್ಲಿದ್ದವು. ನಾನು ನನಗೆ ತೋಚಿದ್ದನ್ನು (ಬೀಚಿಯವರು ಹೇಳಿದಂತೆ ... ತೋಚಿದ್ದು.. ಬೀಚಿದ್ದು) ಬರೆದು Dr.CRC  ಗೆ ಕೊಟ್ಟೆ ಅನ್ನುವ ಸಮಾಧಾನ.

ಕಾರ್ಯಕ್ರಮದ ಭಾಗವಾಗಿ ಮಾತನಾಡಿದ ಪಾವಗಡ ಪ್ರಕಾಶ್ ರಾವ್ ಅವರು.... 
ಚಂದ್ರಗ್ರಹ ಮನಸ್ಸಿನ ಒಡೆಯ... ಚಂದ್ರಶೇಖರ್ ಹೆಸರಿನಲ್ಲೇ ಚಂದ್ರ ಇರುವುದರಿಂದ ಮನಸ್ಸುಗಳ ಮೇಲೆ ಪ್ರಭಾವ ಬೀರುವ ಶಕ್ತಿ ಅಲ್ಲೇ ಅಡಗಿದೆ.. ಹಾಗೆ ಅವರು ಹುಟ್ಟಿನಿಂದಲೇ ಪದ್ಮಶ್ರೀ... ತಾಯಿ ಸರೋಜಮ್ಮ(ಪದ್ಮ) ಆದ ಕಾರಣ.. ಈಗ ಮಾತೃಭೂಮಿಯಿಂದ ಪದ್ಮಶ್ರೀ ಪ್ರಶಸ್ತಿ.

ಗುರುರಾಜ ಕರ್ಜಗಿ ಅವರು ಮಾತನಾಡುತ್ತಾ... ದೀಪ ತಾನೊಂದೇ ಬೆಳಗಿದರೆ ಸಾಲದು.... ದೀಪದಿಂದ ದೀಪವ ಹಚ್ಚಬೇಕು ಮಾನವ... ಎನ್ನುವಂತೆ ಡಾ ಸಿ ಆರ್ ಸಿ ಅವರು ಆಪ್ತ ಸಮಾಲೋಚಕರ ಒಂದು ಸೈನ್ಯವನ್ನೇ ತಯಾರು ಮಾಡಿದ್ದಾರೆ... ತಮ್ಮ ಸೇವಾ ಕಾರ್ಯ ಮತ್ತಷ್ಟು ವಿಸ್ತಾರಗೊಳ್ಳಲು.

ಮುಂದುವರಿದ ಮನರಂಜನೆ ಭಾಗವಾಗಿ ಯಕ್ಷಸಂಭ್ರಮ ತಂಡ ...ಅದರಲ್ಲೂ ಮಕ್ಕಳು ಪ್ರದರ್ಶಿಸಿದ ಲವಕುಶರ ಯಕ್ಷಗಾನ ಪ್ರಸಂಗವಂತೂ ನಗೆಯಲೆಯನ್ನು ಎಬ್ಬಿಸಿತ್ತು ಹಾಗೂ ಬಹುಜನರ ಪ್ರಶಂಸೆಗೆ ಪಾತ್ರವಾಯಿತು.


ಮನಸ್ಸು ತುಂಬಿದ್ದಾಯ್ತು... ಇನ್ನು ಹೊಟ್ಟೆಯ ಚೀಲ ತುಂಬುವ ಸಮಯ... ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿಯ ಸವಿ ಹಾಗೂ ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿ ಕೂತು ಹರಟೆ ಹೊಡೆಯುತ್ತಿದ್ದ ಕಟ್ಟೆಯ ಮೇಲೆ... ಈಗ ಕೂತು ಹರಟೆ ಹೊಡೆಯುತ್ತಾ ಊಟ ಮಾಡಿದ ಸಮಯ ಅವಿಸ್ಮರಣೀಯ.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸಮಾಧಾನ ಬಳಗದ ಎಲ್ಲ ಸದಸ್ಯರು ಅಭಿನಂದನೆಗೆ ಅರ್ಹರು.

Dr.CRC ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ತಿಳಿದು... ಒಂದು ರೀತಿಯ ಸಂಭ್ರಮ ಪಟ್ಟವ ನಾನು (ನೆರೆಮನೆಯ ಹೋಳಿಗೆಗೆ.... ಕಾಯಿ ಹಾಲು ಕಾಯಿಸುವ ಸಂಭ್ರಮದಂತೆ). ಜೊತೆ ಜೊತೆಗೆ ಒಂದಷ್ಟು ಹೆಮ್ಮೆ ಸಹ.. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ Dr.CRC  ನನಗೂ ಹತ್ತಿರದವರೆಂದು.. ಹೂವಿನ ಜೊತೆ ನಾರೂ ದೇವರ ಪಾದ ಸೇರಿದಂತೆ.
Dr.CRC  ಯವರನ್ನು ಮೊದಲು ನೋಡಿದ್ದು  1992 ರಲ್ಲಿ... ಪ್ರಸನ್ನ ಆಪ್ತ ಸಲಹಾ ಕೇಂದ್ರದ ತರಬೇತಿ ಶಿಬಿರದಲ್ಲಿ. ಅವರು ಪಾಠ ಮಾಡುವವರು... ನಾನು ವಿದ್ಯಾರ್ಥಿ ಹಾಗಾಗಿ ಒಂದು ಗೌರವಯುತ ದೂರವನ್ನು ಕಾಪಾಡಿದ್ದೆ. ನಂತರದ ದಿನಗಳಲ್ಲಿ ಅವರ ಜೊತೆ ಕೂತು ಆಪ್ತ ಸಮಾಲೋಚನೆ ಮಾಡುವ ರೀತಿ ನೀತಿಗಳನ್ನು ಕಲಿಯಲು ಹೊರಟಾಗ.. ನನ್ನ ಮನಸ್ಸಿನಲ್ಲಿದ್ದ ದೂರ ಕರಗಿ ಹೋಯಿತು... ನನ್ನ ಪ್ರಶ್ನೆಗಳಿಗೆ... ಅನುಮಾನಗಳಿಗೆ ಅವರು ಕೊಡುತ್ತಿದ್ದ ಸಮಾಜಯಿಷಿ... ಕೊಡುವಾಗ ತೋರುತ್ತಿದ್ದ ಕಾಳಜಿ ಇದಕ್ಕೆ ಕಾರಣ.
ಎಲ್ಲ ಹಂತಗಳಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿ... ವಿದ್ಯಾರ್ಥಿಯಾಗಿ ಶುರುವಾದ ಒಡನಾಟ... ಆಪ್ತ ಸಮಾಲೋಚಕನಾಗಿ ಬೆಳೆಯುವಾಗ... ಹಾಗೂ ನಾವು ಓದಿದ ಶಾಲೆಯಲ್ಲೇ ಪಾಠ ಮಾಡುವ ಅವಕಾಶ ಕೊಟ್ಟು ಬೆಳೆಸಿದ ಗರಿಮೆ Dr.CRC  ಹಾಗೂ ಪಂಕಜ ಮೇಡಂಗೆ ಸಲ್ಲುತ್ತದೆ.
ಮುಂದುವರಿದಂತೆ.. ಸಮಾಧಾನ ಆಪ್ತ ಸಲಹಾ ಕೇಂದ್ರದ ತರಬೇತಿ ಶಿಬಿರಗಳಲ್ಲೂ ಪಾಠ ಮಾಡುವ ಅವಕಾಶವನ್ನು ಕೊಟ್ಟವರು Dr.CRC.  ಹೀಗೊಂದು ದಿನ ನಾನು ಪಾಠ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಂದಿನ ಸಾಲಿನಲ್ಲಿ.. ಕಣ್ಣಿಗೆ ಬಿದ್ದವರು......  ಒಂದು ಕ್ಷಣ ನನಗೆ ಗಾಬರಿ...( ಪರೀಕ್ಷೆ ಎದುರಿಸಿದಂತೆ) ನಂತರ ಬೆನ್ನು ತಟ್ಟಿದಾಗ ಆಗಿದ್ದು ಖುಷಿ.  ಇದಲ್ಲದೆ ಬೇರೆ ಬೇರೆ ಸಂಸ್ಥೆಗಳಲ್ಲಿ ನಡೆದ ತರಬೇತಿ ಶಿಬಿರಗಳಿಗೆ... ಅದರಲ್ಲೂ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಕೆಲ ತಾಲ್ಲೂಕು ಕೇಂದ್ರಗಳಲ್ಲಿ ನಡೆದ ಐವತ್ತಕ್ಕೂ ಹೆಚ್ಚು ಆಪ್ತ ಸಮಾಲೋಚಕರ ತರಬೇತಿ ಶಿಬಿರಗಳಿಗೆ ನನ್ನನ್ನು ಹಾಗೂ AS ಆನಂದ್ ಅವರನ್ನು ಆಯ್ಕೆ ಮಾಡಿ ಅವಕಾಶಕೊಟ್ಟು ಪ್ರೋತ್ಸಾಹಿಸಿದವರು Dr.CRC.  ಹೀಗೆ ಅನೇಕ ವಿಧದ ಪ್ರೋತ್ಸಾಹವನ್ನು ಪಡೆದವರು ನನ್ನಂತೆ ಬಹಳಷ್ಟು ಮಂದಿ ಇದ್ದಾರೆ.
ವೈಯುಕ್ತಿಕವಾಗಿಯೂ Dr.CRC ನನಗೆ ಮತ್ತು ನನ್ನ  ಮಡದಿ ವಿಜಯಳಿಗೆ ಆತ್ಮೀಯರು....NIMHANS quarters ನಲ್ಲಿ ಇರುವವರೆಗೂ ಗಣೇಶನ ಹಬ್ಬಕ್ಕೆ ಕರೆಯುತ್ತಿದ್ದರು.... ನಮ್ಮ ಮನೆಯ ಸಮಾರಂಭಗಳಿಗೆ ಬಂದು ಭಾಗವಹಿಸಿ ಹರಸಿ ಹೋದವರು.  
Dr.CRC  ಸ್ನೇಹಜೀವಿ. ಸಾಮಾನ್ಯವಾಗಿ  ಮಿತ ಭಾಷಿ... ಆದರೆ ವಿಷಯದ ಬಗ್ಗೆ ಮಾತಾಡುವಾಗ ನಿರರ್ಗಳ ಮಾತುಗಾರ.
Dr.CRC  ಬರವಣಿಗೆಯ ಬಗ್ಗೆ ಮಾತನಾಡುವಷ್ಟು ಶಕ್ತ ನಾನಲ್ಲ..( ನನಗೆ ನೆನಪಾಗುವುದು ಕುಮಾರವ್ಯಾಸನ  "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ತಿಂತಿಣಿಯ ಭಾರದಲಿ... ರಘುವರನ ಚರಿತೆಯಲಿ" ಈ ಸಾಲು.) ಮನೋ ವೈಜ್ಞಾನಿಕ ಕ್ಷೇತ್ರದ ಬಹು ಆಯಾಮಗಳ ಇವರ ಲೇಖನಗಳು, ಪುಸ್ತಕಗಳು ಅಷ್ಟೊಂದು ಇದೆ...  ಆದರೆ ಅವರು ತಮಗೆ ಬಂದ ಪತ್ರಗಳಿಗೆ ಉತ್ತರಿಸುತ್ತಿದ್ದ ಬದ್ಧತೆ ಮಾತ್ರ ಅತಿಶಯ.   ಅವರು ಬರೆದ ಪತ್ರದೊಡನೆ ಆಪ್ತ ಸಮಾಲೋಚನೆಗೆ ಬಂದವರನ್ನು ನಾನು ಕಂಡಿದ್ದೇನೆ. ಅವರ ಹೊಸ ಮನೆಯಲ್ಲಿ ಈ ಕೆಲಸಕ್ಕಾಗಿಯೇ ಒಂದು ಜಾಗವನ್ನು ಮೀಸಲು ಮಾಡಿದ್ದು ನೋಡಿದ್ದೇನೆ.
ಅವರ ಮನೋವೈದ್ಯನ ಆತ್ಮಕಥನ ಪುಸ್ತಕದ "ನಾ ಕಂಡಂತೆ ಸಿ ಆರ್ ಸಿ" ವಿಭಾಗದಲ್ಲಿ ನನ್ನ ಒಂದು ಲೇಖನ ಪ್ರಕಟವಾಗಿದೆ ಎನ್ನುವ ಖುಷಿಯೂ ಇದೆ.
ಅವರ 60ನೇ ವರ್ಷದ ಹುಟ್ಟು ಹಬ್ಬದ ಆಚರಣೆ.... ತಜ್ಞರಿಂದ ವಿವಿಧ ವಿಚಾರಗಳ ವಿಷಯ ಮಂಡನೆ.. ಚರ್ಚೆ ಗಳಿಂದ ಕೂಡಿ ವಿಶಿಷ್ಟವಾಗಿತ್ತು.
Dr.CRC  ಅವರದು ಆರಕ್ಕೆ ಹತ್ತದ ಮೂರಕ್ಕೆ ಇಳಿಯದ,  ನಿರ್ಲಿಪ್ತತೆ ಎಂದು ನನ್ನ ಅನಿಸಿಕೆ.... ಆದರೆ ಜೊತೆಯಲ್ಲಿರುವಷ್ಟು ಹೊತ್ತು ಆತ್ಮೀಯವಾಗಿರುವ ಸ್ನೇಹಜೀವಿ.

ತನ್ನನ್ನು ಬೆಳೆಸಿದ ಸಂಸ್ಥೆಗೆ... ಋಣ ಸಂದಾಯ ಮಾಡಲು... ಅದರ ಮೂಲಕ ಸಾಮಾನ್ಯ ಜನಕ್ಕೆ ಮನೋವೈದ್ಯಕೀಯ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ ಅನುಕೂಲವಾಗುವ ಕಾರ್ಯಗಳಿಗೆ ಉದಾರವಾಗಿ ಹಣ ಕೊಟ್ಟ ನಿರ್ಮೋಹಿ.   ಇದು ಕುರುಡ ಆನೆಯನ್ನು  ಕಂಡಂತೆ ... ಸೀಮಿತ ಜ್ಞಾನದ ನಾನು....Dr.CRC  ಅವರನ್ನು ಕಂಡ ಮುಖ.... ಅಸಂಖ್ಯಾತ ಅಭಿಮಾನಿಗಳ ಹಾಗೂ ಅವರಿಂದ ಮಾರ್ಗದರ್ಶನ ಪಡೆದ ವ್ಯಕ್ತಿಗಳ ದೃಷ್ಟಿಯಲ್ಲಿ ಇನ್ನೆಷ್ಟು ಮುಖವೋ...

ಕಾರ್ಯಕ್ರಮದ ಬಗ್ಗೆ ಮಡದಿಯೊಡನೆ ಮೆಲುಕು ಹಾಕುತ್ತಾ ಕೂತಾಗ ಅನ್ನಿಸಿದ್ದು...... Dr.CRC  ಅವರ ಎಲ್ಲ ಕೆಲಸಗಳಲ್ಲಿ.... ಅವರ ಏಳಿಗೆಯಲ್ಲಿ... ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ ಅವರ ಪತ್ನಿ ಶ್ರೀಮತಿ ರಾಜೇಶ್ವರಿ ಹಾಗೂ ಅಮ್ಮ ಸರೋಜಮ್ಮನವರು ಇಂದು ಇದ್ದಿದ್ದರೆ ಎಷ್ಟು ಸಂಭ್ರಮ ಸಂತೋಷ ಪಡುತ್ತಿದ್ದರೋ..... ಎಲ್ಲಿದ್ದರೂ ಅವರುಗಳ ಹಾರೈಕೆ ಹಾಗೂ ಆಶೀರ್ವಾದ Dr.CRC  ಅವರ ಮೇಲೆ ಸದಾ ಇರುತ್ತದೆ ಎನ್ನುವ ಅನಿಸಿಕೆ.
Dr.CRC   ಅವರಿಗೆ.... ದೇವರು ಆರೋಗ್ಯ ಆಯಸ್ಸು ಅತಿಶಯವಾಗಿ ಕೊಡಲೆಂದು ಪ್ರಾರ್ಥಿಸುತ್ತಾ... ಅವರ ಒಡನಾಟ ನಮಗೆ ಹಾಗೂ  ಸೇವೆಯು ಎಲ್ಲರಿಗೂ ಸಿಗಲೆಂದು ಆಶಿಸುತ್ತಾ...

ಸರ್.... ನಮಸ್ಕಾರ ಪೂರ್ವಕವಾಗಿ ಈ ಲೇಖನ ನಿಮಗೆ ಅರ್ಪಣೆ.
    DC Ranganatha Rao 
     9741128413

Comments

  1. ಲೇಖನ ತುಂಬಾ ಚೆನ್ನಾಗಿದೆ, ಸಮಾರಂಭದಲ್ಲಿ
    ನಾವೇ ಭಾಗವಹಿಸಿ Dr. CRC ಅವರ ಒಡನಾಟದಲ್ಲಿ ನಾವೂ ಪ್ರತ್ಯಕ್ಷ ಇದ್ದಂತೆ ನಿಮ್ಮ ಲೇಖನ ಮೂಡಿಬಂದಿದೆ.

    ಧನ್ಯವಾದಗಳು 🙏🙏👏💐💐

    ReplyDelete
  2. ಅದ್ಭುತ ಬರವಣಿಗೆ.. ಓದಿದ್ದು ಖುಷಿಕೊಟ್ಟಿದೆ. ಮಣಿಕಂಠ. 🙏

    ReplyDelete
  3. ಅಚ್ಚುಕಟ್ಟಾದ ಗುರುವಂದನೆ... ಕೃತಜ್ಞತಾ ಸಮರ್ಪಣೆ ಏತನ್ಮಧ್ಯೆ ತಮ್ಮ ವಿನಮ್ರ ಪರಿಚಯ..ಮನ ತುಂಬಿ ಬಂತು...CRC ನನ್ನ ಗುರುಗಳು ಕೂಡ ಬಂಜಾರ ಅಕಾಡೆಮಿಯಲ್ಲಿ 2003 ರಲ್ಲಿ DCS ತರಪೇತಿ ಒಂದು ವರ್ಷ ಪಡೆಯುತ್ತಿದ್ದಾಗ.....ನನ್ನೊಟ್ಟಿಗೆ ನಿಮ್ಮ ಈ ಜೀವನ ಸಾಕಾರ ಬರಹ ಹಂಚಿಕೊಂಡ ದ್ದಕ್ಕಾಗಿ ವಂದನೆಗಳು

    ReplyDelete
  4. Very well articulated. Ranganath' s expression of gratitude and respect towards elders is remarkable. His writing and narrative skills are great. Keep it up. Best wishes to you.
    Guruprasad.

    ReplyDelete
  5. ಶ್ರೀನಿವಾಸಮೂರ್ತಿ23 March 2024 at 08:47

    ಯಥಾವತ್ ವರದಿ ನಿರೂಪಣೆ.
    ಅದೇ ಸಂಸ್ಥೆಯಲ್ಲಿ ಓದಿ 6 ದಶಕಗಳ ನಂತರ ಈ ರೀತಿಯ ಅನುಭವ ಪಡೆಯುವುದು ಅನನ್ಯ. ಅಭಿನಂದನೆಗಳು.

    ReplyDelete
  6. ಉತ್ತಮ ವ್ಯಕ್ತಿಯ ಓಡನಾಟದಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬ ವಿವರಣೆ ಲೇಖನ ಅದ್ಭುತವಾಗಿದೆ.

    ReplyDelete
  7. ಗುರುಗಳ ಜೊತೆ ನಿಮ್ಮ ಫೋಟೋ .ತುಂಬಾ ಸಂತೋಷ ವಾಯಿತು.sir.
    ನಿಮ್ಮ ಅವರ ಒಡನಾಟ ಹೀಗೇ or ಇನ್ನೂ ಉತ್ತಮವಾಗಿ ಆಗಲಿ.

    ReplyDelete
  8. ನನಗೆ ಗುರುವಾದ ನೀವು ಆಪ್ತಸಮಾಲೋಚಕಿ ಆಗಲು ಸಾಕಷ್ಟು ಪ್ರೇರಣೆ ಕೊಟ್ಟಿದ್ದೀರಿ. ಅಂದಿನಿಂದ ಇಂದಿನವರೆಗೂ ದಿನದಿನವೂ ಮೆಟ್ಟಿಲು ಏರುತ್ತಿದ್ದೇನೆ. ನಾನೂ ಸಹ ಈ ಸಮಾರಂಭದಲ್ಲಿ ಭಾಗಿಯಾಗಿದ್ದೆ ಎಂಬುದೆ ಸಂಯೋಷದ ವಿಷಯ. ಧನ್ಯವಾದಗಳು🙏

    ಎಸ್.ಜೆ. ರತ್ನಪ್ರಭಾ
    ಆಪ್ತಸಮಾಲೋಚಕರು

    ReplyDelete
  9. ಗುರುಭ್ಯೋನಮ:

    ಡಾ| ಸಿ.ಆರ್.ಸಿ. ರವರು ನನ್ನ ವೈದ್ಯರು. ಚಿಕ್ಕಂದಿನಿಂದಲೂ ಅವರ ಪುಸ್ತಕಗಳನ್ನು ಓದಿ ಬೆಳೆದಿದ್ದೇನೆ.

    ಇನ್ನು ತಾವು ನನ್ನ ಸಮಾಲೋಚಕರು ಹಾಗೂ ಮಾರ್ಗದರ್ಶಿಗಳು.

    ನಿಮ್ಮಿಬ್ಬರಿಂದಲೂ ಸಲಹೆ-ಸೂಚನೆಗಳನ್ನು ಪಡೆಯುತ್ತಿರುವ ನಾನೇ ಧನ್ಯ.

    ಹೇಳಬೇಕಾದುದೇನಿಲ್ಲ.ಅಷ್ಟು ಅರ್ಹತೆಯೂ ನನಗಿಲ್ಲ. ಗೌರವ ಸಮರ್ಪಣೆಯಷ್ಟೇ ಸಾಕು.

    ಕೊನೆಯದಾಗಿ.....ನನಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇದ್ದಿದ್ದರೆ ವೀಕ್ಷಿಸುವ ಸೌಭಾಗ್ಯ ಸಿಗುತ್ತಿತ್ತು. ಆದರೂ ಈ ಲೇಖನ ಓದಿದಾಗ ಆ ಕೊರತೆಯನ್ನು ತಕ್ಕಮಟ್ಟಿಗೆ ನೀಗಿದಂತಾಯಿತು.

    ವಂದನಾಪೂರ್ವಕವಾಗಿ

    ಗುರುಪ್ರಸನ್ನ,
    ಚಿಂತಾಮಣಿ

    ReplyDelete
  10. ಪದ್ಮಶ್ರೀ ಡಾ!CRC ಶೀರ್ಷಿಕೆಯು ಉತ್ತಮವಾಗಿ ಮೂಡಿ ಬಂದಿದೆ.ತಮಗೆ ಧನ್ಯವಾದಗಳು.ಡಾ! ಸಿ.ಆರ್.ಚಂದ್ರಶೇಖರ ರವರ ವ್ಯಕ್ತಿತ್ವದ ಬಗ್ಗೆ, ಅವರ ಪುಸ್ತಕಗಳು ಬಗ್ಗೆ,ಕೆಲಸದಲ್ಲಿ ಅವರ ಬದ್ಧತೆ ಬಗ್ಗೆ ಹಾಗೂ ಅವರೊಡನೆ ತಮ್ಮ ಒಡನಾಟದ ಬಗ್ಗೆ ಹೆಚ್ಚಿನ ವಿಷಯಗಳ ಮಾಹಿತಿ ನಮಗೆ ಸಿಕ್ಕಿರುತ್ತದೆ.ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ನಮ್ಮ ಮಗನ ಚಿಕಿತ್ಸೆಗೆ ಬಂದಾಗ ಅವರು ಪರಿಚಯವಾಯಿತು.ಅವ ರು ಬಹಳ ಸೌಮ್ಯ ಸ್ವಭಾವದ ವ್ಯಕ್ತಿಗಳು.ಅವರು ಬರೆದ ಕೆಲವು ಪುಸ್ತಕಗಳನ್ನು ನನ್ನ ಶ್ರೀಮತಿ ಖರೀದಿ ಮಾಡಿರುತ್ತಾರೆ.ಡಾ! ಸಿ.ಆರ್.ಚಂದ್ರಶೇಖರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವ ವಿಷಯ ತಿಳಿದು ಬಹಳ ಸಂತೋಷವಾಯಿತು.Dr.CRC ರವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಅವರಿಗೆ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಶ್ರೀಮತಿ ರಾಜೇಶ್ವರಿ ಚಂದ್ರಶೇಖರ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ದೇವೇಂದ್ರಪ್ಪ

    ReplyDelete
  11. Excellent writing

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ