ಇಬ್ಬರ ಜಗಳ ಮೂರನೆಯವನಿಗೆ ಲಾಭ
ನೆನ್ನೆ ಭಾನುವಾರ ನನಗೊಂದು ವಿಶಿಷ್ಟ ಅನುಭವವಾಯಿತು ಅದಕ್ಕಾಗಿ ಈ ಕಥೆ ಹಾಗೂ ನುಡಿಗಟ್ಟು ನೆನಪಿಗೆ ಬಂತು.
ಬಹು ಅಪರೂಪವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದ ಪ್ರಸಂಗ ನಡೆಯಿತು. ಮೂಲ ಕಾರಣ ನನ್ನ ಕಾರಿನ ಚಕ್ರದ ಗಾಳಿಯನ್ನು ನಾನು ನಿಲ್ಲಿಸಿದ್ದ ಜಾಗದಲ್ಲಿ ಯಾರೋ ತೆಗೆದಿದ್ದು.. ಅದೂ ನಾನು ಹೋದ ನಮ್ಮ ಇಷ್ಟರ ಮನೆಯ ಬಳಿ. ನನ್ನ ಕಾರಿನ ಜೊತೆಗೆ ಮತ್ತೆರಡು ಕಾರುಗಳ ಗಾಳಿಯನ್ನು ತೆಗೆಯಲಾಗಿತ್ತು. ಈ ವಿಚಾರವಾಗಿ ನನ್ನ ಇಷ್ಟರ ಮನೆಯ ಮಕ್ಕಳು ಹಾಗೂ ಅವರ ನೆರೆಯವರು (ನೆರೆ ಹೊರೆ ಎನ್ನಲೇ?) ಮತ್ತು ಇತರ ಕಾರಿನವರ ಮಧ್ಯೆ ವಾದ ವಿವಾದಗಳಾಯ್ತು.. ಅದು ನಮ್ಮನ್ನು ಪೊಲೀಸ್ ಠಾಣೆಯವರೆಗೂ ಕರೆದು ಕೊಂಡು ಹೋಯಿತು. ಜಗಳ ಎಂದ ಮೇಲೆ ಎಲ್ಲರೂ ಅವರವರನ್ನು ಸಮರ್ಥಿಸಿಕೊಳ್ಳುವುದು ಸಹಜ.. ಇಲ್ಲೂ ಅದೇ ನಡೆಯಿತು.. ಪೊಲೀಸ್ ಠಾಣೆಯಲ್ಲೂ ಮುಂದುವರೆಯಿತು. ಠಾಣೆಗೆ ಹೋದ ಎರಡು ಬಣಗಳು ಯಾವುದಕ್ಕೂ ಜಗ್ಗದೆ ತಮ್ಮದೇ ವಾದಗಳನ್ನು ಮುಂದಿಟ್ಟು ಮಾತನಾಡಿದ್ದಾಯ್ತು. ನಾನು ಅರ್ಧಪ್ರೇಕ್ಷಕ ಮತ್ತು ಅರ್ಧ ಭಾಗಿದಾರ. ಆ ಸಂದರ್ಭದಲ್ಲಿ ಬಾಯೊಣಗಿ ಮಾತಾಡಲಾಗದ ಪರಿಸ್ಥಿತಿ.. ಸ್ವಲ್ಪ ನೀರು ಕುಡಿದು ಚೇತರಿಸಿಕೊಂಡೆ. ಠಾಣಾಧಿಕಾರಿಯ ನಿರ್ಧಾರ.. ಇಬ್ಬರ ಮೇಲು ಕೇಸ್ ಹಾಕಿ ಫೈನ್ ಕಟ್ಟಿಸಿಕೊಳ್ಳಿ ಎಂಬ ತೀರ್ಮಾನ. ನಿರ್ವಾಹವಿಲ್ಲದೆ ಒಪ್ಪಿದ್ದಾಯ್ತು. 300 ರೂಪಾಯಿ ದಂಡ ತೆತ್ತಿದ್ದೂ ಆಯ್ತು. ನನಗೆ ಸದ್ಯ ಮುಗಿಯಿತಲ್ಲಪ್ಪ ಎಂಬ ಮನಸ್ಸು. ಆಚೆ ಬಂದಾಗ ದಂಡ ಕಟ್ಟಿದ್ದಕ್ಕೆ ರಸೀತಿ ತೆಗೆದುಕೊಂಡಿಲ್ಲ ಎಂಬ ನೆನಪು ಬಂದು ರಸೀತಿ ಎಂಬ ಕಾಗದವನ್ನು ತೆಗೆದು ಜೋಬಿನಲ್ಲಿಟ್ಟಾಯ್ತು. ಮನೆಗೆ ಬಂದು ನೋಡಿದಾಗ.. ರಸೀತಿ ಎಂಬ ಕಾಗದದಲ್ಲಿ ಮುನ್ನೂರು ರೂಪಾಯಿಯ ಸುಳಿವೇ ಕಾಣದಿದೆ.. ಅದು ಒಂದು ನೋಟಿಸ್ ರೂಪದಲ್ಲಿದೆ. ಅಲ್ಲಿಗೆ ನಾವು ಕೊಟ್ಟ 300 ರೂಪಾಯಿ ಯಾವ ಖಜಾನೆಗೆ ಹೊಯ್ತು? ಇದು ಮಿಲಿಯನ್ ಡಾಲರ್ ಪ್ರಶ್ನೆ.. ಯಕ್ಷ ಪ್ರಶ್ನೆ ಸಹ ಅನ್ನಬಹುದು.
ಎಂಥ ವಿಪರ್ಯಾಸ.... ಅಲ್ಲವೇ?
ಇದು ನಮ್ಮ ಸಮಾಜದ ಮನಸ್ಥಿತಿಯ ಮತ್ತು ಆಡಳಿತ ವರ್ಗದ ಅಧೋಗತಿಯ ಸಂಕೇತ. ಇದೆಲ್ಲವನ್ನು ಸರಿ ಮಾಡಲು ಭಗವಂತನೇ ಬರಬೇಕೇನೋ?.. ಅದೂ ಆ ಭಗವಂತನೇ ಬಲ್ಲ...
ಅಡಿ ಬರಹ: ಇಷ್ಟೆಲ್ಲಾ ಆದಮೇಲೆ ಕಾರನ್ನು ಸರಿ ಮಾಡಿಕೊಳ್ಳುವ ಹೊಣೆ ನಮ್ಮದೇ....ಪಾಪ ಮಕ್ಕಳು ಅದನ್ನೂ ಮಾಡಿದರು....ಅವರಿಗೆ ಧನ್ಯವಾದ ...
Sir, I am so glad that reading your article.. it's connected past one of my incident & literally I felt the same.. !! Our systems are non-questionable.. since many of senior govt. Servants are on similar practice.. both way lose of money, energy and social connectivity. At the makes us teribleby experiencing our system😴
ReplyDeleteKeep continue by writing your experiences sir with happiness 😊
Manikanta
Delete