ಪದವಿ - ಜ್ಞಾನ - ಸ್ಥಾನಮಾನ

 









ಹಳ್ಳಿಯಿಂದ ಬೆಂಗಳೂರಿಗೆ ಹೈಸ್ಕೂಲ್ ಸೇರಲು ಬಂದ ಸಮಯ. ಹಳ್ಳಿಯಲ್ಲಿ ಓದಿದ್ದು ಕನ್ನಡ ಮೀಡಿಯಂ... ಇಲ್ಲಿ ಬಂದು ಸೇರಿದ್ದು ಇಂಗ್ಲಿಷ್ ಮೀಡಿಯಂ. ಉಪಾಧ್ಯಾಯರುಗಳೆಲ್ಲ ಕನ್ನಡದಲ್ಲಿ ಮಾತನಾಡುತ್ತಿದ್ದರೂ... ಪುಸ್ತಕಗಳು, ಅವರು ಕೊಡುತ್ತಿದ್ದ ನೋಟ್ಸ್, ಹಾಗೂ ವಿಷಯ ಇಂಗ್ಲೀಷಿನಲ್ಲಿ ಇರುತ್ತಿತ್ತು.  ಇದರ ಜೊತೆಗೆ ನಾನು ಹಾಕುತ್ತಿದ್ದ ಲಾಡಿಯಿಂದ ಕಟ್ಟುವ ಚಡ್ಡಿ, ಹಳ್ಳಿಯಲ್ಲಿ ಹೊಲಿದ ಶರಟು ಬಟ್ಟೆಗಳು,  ನನ್ನ ಸಹಪಾಠಿಗಳೊಂದಿಗೆ ಹೋಲಿಸಿ ನೋಡಿದಾಗ ನನ್ನಲ್ಲಿದ್ದ ಹಿಂಜರಿಕೆ ಜಾಸ್ತಿಯಾಗಿ ಒಂದು ವಿಧವಾದ ಕೀಳರಿಮೆ ಬಂದಿದ್ದು ಸತ್ಯ. ಕಾಲಕ್ರಮೇಣ ಇದನ್ನು ಹೋಗಲಾಡಿಸಿಕೊಂಡೆನಾದರೂ, ಗಣಿತದ ಫಾರ್ಮುಲಾಗಳು, ಪೈಥಾಗರಸ್ ಥಿಯರಂ, ಆರ್ಕಿಮಿಡಿಸ್ ಪ್ರಿನ್ಸಿಪಲ್, ನ್ಯೂಟನ್ ಲಾಸ್ ಆಫ್ ಮೋಶನ್ ಎಲ್ಲವನ್ನು ಅರ್ಥೈಸಿಕೊಳ್ಳುವುದು ಕಷ್ಟವೆನಿಸುತ್ತಿತ್ತು.  ಇದೆಲ್ಲಾ ಕಲಿತು ಆಗಬೇಕಾದುದೇನು ಎಂದು ಅನಿಸಿದ್ದೂ ಉಂಟು. ಆ ಸಮಯದಲ್ಲೇ ಯಾರೋ ಹೇಳಿದ..... ನ್ಯೂಟನ್ ಮೇಲಿನ ವ್ಯಂಗ್ಯ ಚಿತ್ರಣ. 

ಕೆಲಸವಿಲ್ಲದ ಸೋಮಾರಿಯೊಬ್ಬ ಸೇಬು ಹಣ್ಣಿನ ಮರದ ಕೆಳಗೆ, ಏನೋ ಯೋಚಿಸುತ್ತಾ ಮಲಗಿದ್ದಾಗ, ಆತನ ಮೇಲೆ ಬಿದ್ದ ಸೇಬು ಹಣ್ಣಿನಿಂದ, ಆತನಿಗೆ ಹೊಳೆದದ್ದು ಭೂಮಿಯ ಗುರುತ್ವಾಕರ್ಷಣೆ ಶಕ್ತಿಯ ( gravitational force ) ಬಗ್ಗೆ. ಈ ವಿಷಯ ಈಗ ನಮ್ಮ ತಲೆಯನ್ನು ವೃಥಾ ತಿನ್ನುತ್ತಿದೆ... ಅನ್ನುವ ಕಥೆ ಸತ್ಯಕ್ಕೆ ಹತ್ತಿರವೇನೋ ಎನಿಸುತ್ತಿತ್ತು. 

gravitational force ಎನ್ನುವ ವಿಷಯವನ್ನು ಜೀವಮಾನದಲ್ಲಿ ಉಪಯೋಗಿಸಿದ್ದು ಒಂದೆರಡು ಬಾರಿ ಮಾತ್ರ. ಆಕಾಶದ ಕಡೆ ಉಗುಳಿದರೆ ಅದು ನಮ್ಮ ಮೇಲೆಯೇ ಬಂದು ಬೀಳುತ್ತದೆ ಎನ್ನುವುದು ಗುರುತ್ವಾಕರ್ಷಣೆಯ ನಿಯಮ ಎಂದು ವ್ಯಾಖ್ಯಾನಿಸಿದ್ದು, ತರಲೆ ಮಾತಿನ ಭಾಗವಾದರೂ, ವೈಜ್ಞಾನಿಕವಾಗಿ ಸರಿಯಿತ್ತು ಎನ್ನಲೇ...

ಹೀಗೆ ಎಷ್ಟೋ ವಿಷಯಗಳನ್ನು ಕಲಿತದ್ದು ಓದಿ ಅಂಕಗಳನ್ನು ತೆಗೆಯಲು ಉಪಯೋಗವಾಗಿದೆಯೇ ವಿನಃ, ನನ್ನ  ಜೀವನದಲ್ಲಿ ಉಪಯೋಗಕ್ಕೆ ಬಂದದ್ದು ಬಲು ಕಡಿಮೆ. 

ಇನ್ನೊಂದು ವಿಪರ್ಯಾಸವೆಂದರೆ... ಓದಿ ಪದವಿ ಪಡೆದಿರುವ ವಿಷಯ ಒಂದಾದರೆ... ಕೆಲಸ ಮಾಡಲು ಆಯ್ಕೆ ಮಾಡುವ ವಿಷಯ ಬೇರೆಯೇ ಇರುತ್ತದೆ. ಈ ಓದಿಗಾಗಿ ಖರ್ಚು ಮಾಡಿದ ಹಣ, ಸಮಯ ಎಲ್ಲವೂ ತಂದೆ ತಾಯಿಗಳಿಗೆ ಹಾಗೂ ದೇಶಕ್ಕೂ ನಷ್ಟವೇ. ಜೊತೆಗೆ ಒಬ್ಬ ನಿಜವಾದ ವಿದ್ಯಾರ್ಥಿಗೆ ಅವಕಾಶ ತಪ್ಪಿದಂತೆ.

ಇಲ್ಲಿ ಅಪ್ಪ ಅಮ್ಮನ ಪಾತ್ರವು ಬಹು ಮುಖ್ಯ. ತಮ್ಮ ಕನಸುಗಳನ್ನು ಮಕ್ಕಳ ಮೂಲಕ ನನಸು ಮಾಡಿಕೊಳ್ಳುವ ಅವರ ಆಸೆಗೆ ಮಕ್ಕಳು ಬಲಿಯಾಗುತ್ತಾರೆ. ನನ್ನ ಪರಿಚಯದ ಒಬ್ಬ ಹುಡುಗ ಅಪ್ಪ ಅಮ್ಮನ ಆಸೆಗಾಗಿ ಇಂಜಿನಿಯರಿಂಗ್ ಮಾಡಿ... ಜೀವನ ಮುಂದುವರೆಸುತ್ತಿರುವುದು ಅವನಿಗಿಷ್ಟವಾದ ಚಲನಚಿತ್ರರಂಗದಲ್ಲಿ..... 

ಒಂದಷ್ಟು ಮಟ್ಟಿಗೆ ನಾನು ಅದೃಷ್ಟವಂತ, ನನ್ನ ವೃತ್ತಿಜೀವನದಲ್ಲಿ ನಾನು ಇಂಜಿನಿಯರಿಂಗ್ ನಲ್ಲಿ ಓದಿದ್ದನ್ನು ಅಳವಡಿಸಿಕೊಳ್ಳುವ ಅವಕಾಶ ನನಗೆ ದೊರೆತದ್ದು, ಹಾಗಾಗಿ ಆ ಕೆಲಸ ನನಗೆ ತೃಪ್ತಿ ಕೊಟ್ಟದ್ದು.

ವಾಸ್ತವಿಕವಾಗಿ ಯೋಚಿಸುವುದಾದರೆ ನಾನು ಪ್ರೈಮರಿ ಶಾಲೆಯಲ್ಲಿ ಕಲಿತ, ಕೂಡುವುದು ಕಳೆಯುವುದು, ಗುಣಾಕಾರ ತಕ್ಕಮಟ್ಟಿಗಿನ ಭಾಗಾಕಾರ ಹಾಗೂ ಶೇಕಡ ಲೆಕ್ಕ ಮಾಡುವುದು ದೈನಂದಿನ ಜೀವನದಲ್ಲಿ ಉಪಯೋಗಿಸಿದ್ದು.

ರೂಢಿ ಗಣಿತ ಎಂಬುವ ಅಂದಿನ ಕಾಲದ ರೂಪಾಯಿ, ಆಣೆ, ಪೈ ನಗದನ್ನು.. ಮಣ, ವೀಸೆ, ಸೇರು ಎಂಬ ತೂಕದ ಅಳತೆಯ ವಸ್ತುಗಳನ್ನು ಕೊಂಡಾಗ, ಹಣ ಎಷ್ಟೆಂದು ಲೆಕ್ಕ ಮಾಡುವ ವಿಧಾನ, ಕೆಲದಿನಗಳ ಕಾಲ ಉಪಯೋಗಿಸಿದ್ದಿದೆ.

ನಮ್ಮ ಶೈಕ್ಷಣಿಕ ಪದ್ಧತಿ.... ಯಾವುದೇ ವಿಭಾಗದಲ್ಲಿ ಓದಲಿ, ಅದು ಪಠ್ಯಕ್ರಮ ನಿರ್ಧಾರಿತ - syllabus based. ಓದಿನ ನಂತರದ  ಜೀವನಕ್ಕೆ, ಅದು ಪೂರಕವಾ?, ಎಂದು ಯೋಚಿಸಿದವರಿಲ್ಲ. ಯಾವುದೋ ಓಬೀರಾಯನ ಕಾಲದಲ್ಲಿ ನಿರ್ಧಾರ ಮಾಡಿದ ಪಠ್ಯಕ್ರಮವನ್ನು... ಒಂದಷ್ಟು ಸಣ್ಣಪುಟ್ಟ ಬದಲಾವಣೆಯೊಂದಿಗೆ ಇನ್ನೂ ಅನುಸರಿಸುತ್ತಿರುವುದು.  

ಪಡೆದ ಪದವಿ ಕೆಲಸಕ್ಕೆ ಸೇರಲು ಬೇಕಾದ ಮೊದಲನೆಯ ಮೆಟ್ಟಿಲು ಮಾತ್ರ. ಕೆಲಸ ಮಾಡಲು ಬೇಕಾದ ಕೌಶಲ್ಯವನ್ನು ನಂತರವೇ ಪಡೆದುಕೊಳ್ಳಬೇಕು. ಹಾಗಾಗಿ ಓದಿನ ಗುರಿ ಪದವಿಯ ಪ್ರಮಾಣ ಪತ್ರವನ್ನು ಪಡೆಯುವುದು ಮಾತ್ರ.

ನೋವಿನ ಸಂಗತಿ ಎಂದರೆ, ಈಗ ಪ್ರಮಾಣ ಪತ್ರಗಳಿಂದ ಮಾತ್ರ, ಎಲ್ಲವೂ ನಿರ್ಧಾರವಾಗುತ್ತದೆ. ಪ್ರಮಾಣ ಪತ್ರ ಪಡೆದ ದಾರಿ ಮಾತ್ರ ಗೌಣ ಆಗುವುದೇ ಇಲ್ಲ.

 ಒಂದು ಘಟನೆಯನ್ನು ನೆನೆಯಲೇಬೇಕು. ಹೊಗೆ ಕಾರುತ್ತಿದ್ದ ಒಂದು ವಾಹನವನ್ನು ನಿಲ್ಲಿಸಿದ ಪೊಲೀಸರು ಕೇಳಿದ್ದು, emission test certificate. ವಾಹನದ ಚಾಲಕನ ಹತ್ತಿರ ಇದ್ದ ಪ್ರಮಾಣ ಪತ್ರದ ಪ್ರಕಾರ, ಅದು ಮಾಲಿನ್ಯ ಮುಕ್ತವಾಗಿತ್ತು. ಅಲ್ಲಿಗೆ ಕಾನೂನು ಉಲ್ಲಂಘಿಸಿದಂತೆ ಆಗಲಿಲ್ಲ. ಪೊಲೀಸರು ಅಸಹಾಯಕರು... ವಾಹನ ದುರಸ್ತಿ ಮಾಡಿಸಿಕೊಳ್ಳಲು ಸಲಹೆ ಮಾಡಬಲ್ಲವರಾದರು ಮಾತ್ರ.

ನಾನು HN ಎಂದು ಅಭಿಮಾನದಿಂದ ಕರೆಯುತ್ತಿದ್ದ ನ್ಯಾಷನಲ್ ಕಾಲೇಜಿನ ಡಾಕ್ಟರ್. ಎಚ್ ನರಸಿಂಹಯ್ಯನವರು ಹೇಳುತ್ತಿದ್ದ  ಬರೀ  honours degree  ಸಾಲ್ದಪ್ಪ...  manner ಸೂ ಇರಬೇಕು ಎನ್ನುವ ಮಾತು ನಮ್ಮ ಕಲಿಕೆ, ಪದವಿ ಪಡೆಯಲು ಮಾತ್ರ ಸೀಮಿತವಾಗಿರಬಾರದು ಎನ್ನುವುದನ್ನು ಒತ್ತಿ ಹೇಳುತ್ತದೆ.

ಕಲಿಕೆ ಜೀವನದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು... ಹೊಟ್ಟೆ, ಬಟ್ಟೆ ಹಾಗೂ ಸೂರಿಗೆ ಮಾತ್ರ ಸೀಮಿತವಾಗಿರಬಾರದು. 

ಖ್ಯಾತ ಕಾನೂನು ತಜ್ಞ N A ಪಾಲ್ಕಿವಾಲಾ (ಇವರು ನಾನು  ACC ಯಲ್ಲಿ   ಕೆಲಸ ಮಾಡುತ್ತಿದ್ದ ಕಾಲದಲ್ಲಿ  ಆ ಕಂಪೆನಿ ಅಧ್ಯಕ್ಷರಾಗಿದ್ದವರು) ಹೇಳಿದ ಮಾತು ಉಲ್ಲೇಖನೀಯ.....  "A degree from university will not do much harm, provided you start learning there after ....."  ವ್ಯಂಗ್ಯವಾದರೂ ಸತ್ಯ.  ಪದವಿ ಗಳಿಸಿದ   ನಂತರ ಕಲಿಕೆ ಪ್ರಾರಂಭ ಮಾಡಿದ್ದೇ ಆದರೆ,  ವಿಶ್ವವಿದ್ಯಾನಿಲಯದ ಪದವಿಯಿಂದ ಹೆಚ್ಚು ಹಾನಿ ಆಗುವುದಿಲ್ಲ... ( ಉಪಯೋಗವಿಲ್ಲ ಎಂದು ಹೇಳುವ ಪರ್ಯಾಯ) 

ನಮ್ಮ ಶಿಕ್ಷಣದ ಗುಣಮಟ್ಟ ಹಾಗೂ ಉದ್ದೇಶ ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆಯೆಂದರೆ... ಒಂದು ಸಮೀಕ್ಷೆಯ ಪ್ರಕಾರ ಬಹಳಷ್ಟು ಜನ ಪದವೀಧರರು ಆ ಪದವಿಗೆ ಅನರ್ಹರು. ಹೇಗೋ ಪರೀಕ್ಷೆಗೆ ಮುನ್ನ  ಒಂದಷ್ಟು ಓದಿ ( ಒಂದಷ್ಟು ಅಡ್ಡ ದಾರಿ ಹಿಡಿದು)  ಆ ಸಮಯದಲ್ಲಿ ತೋಚ್ಚಿದ್ದನ್ನು ಬರೆದು       ( ಕಕ್ಕಿದ್ದು- vomit ಎನ್ನಲೇ) ಪಡೆದ ಪದವಿ.....  ಪತ್ರ ಮಾತ್ರ. 

ನಮ್ಮ ವ್ಯವಸ್ಥೆ ಎಷ್ಟು ರಾಜಿಯಾಗಿದೆ ಎಂದರೆ, ಗುಣವಿಲ್ಲದಿದ್ದರೂ ಪ್ರಮಾಣ ಪತ್ರ ಇದ್ದರೆ... ಆ ಗುಣವಿದ್ದಂತೆ. 

ಈ ಅವ್ಯವಸ್ಥೆಗೆ ಕಾರಣಕರ್ತರಲ್ಲಿ ಪಾಠ ಹೇಳಿ ಕೊಡುವವರ ಪಾತ್ರವೂ ದೊಡ್ಡದು. ಗುರುಗಳು/ ಮಾರ್ಗದರ್ಶಕರು ಆಗಬೇಕಾಗಿದ್ದವರು lecturers ಆಗಿದ್ದಾರೆ. ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಪಾಠ ಹೇಳುತ್ತಿದ್ದ ಪೀಳಿಗೆ ನಶಿಸಿ ಹೋಗುತ್ತಿದೆ. ಇಲ್ಲಿಯೂ ಪದವಿ ಪತ್ರ ಹಿಡಿದು ಕೆಲಸಕ್ಕೆ ಸೇರಿದವರೇ. ಎಲ್ಲಿಯೂ ಸಲ್ಲದವರು, ಇಲ್ಲಿಗೆ ಬಂದು ಸೇರಿದ ನಿದರ್ಶನಗಳು ಉಂಟು. ಹೇಗೋ ಪದವಿ ಪಡೆದ ವ್ಯಕ್ತಿ, ಮುಂದಿನ ಪೀಳಿಗೆಗೆ ಏನನ್ನು ತಾನೆ ಕಲಿಸಬಲ್ಲ, ಆದರ್ಶವಾಗಬಲ್ಲ ?

ಇಲ್ಲಿ ನಾನು ನಮಸ್ಕಾರ ಪೂರ್ವಕವಾಗಿ ನೆನೆಯಲೇ ಬೇಕಾದದ್ದು, ನನ್ನ ಪ್ರೈಮರಿ ಶಾಲೆಯ ಸಮಯದಲ್ಲಿ ಪಾಠ ಮಾಡಿದ ಶಂಕರನಾರಾಯಣರಾವ್ ಮೇಷ್ಟ್ರು. ಪ್ರಾತಃಸ್ಮರಣೀಯರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದವರು. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯಲು ತಯಾರು ಮಾಡುವ ದಾರಿಯಲ್ಲಿ... ಐದನೇ ತರಗತಿಯಿಂದಲೇ ಪ್ರಶ್ನೆ ಪತ್ರಿಕೆ ಕೊಟ್ಟು ಉತ್ತರಿಸಲು  ಹೇಳಿಕೊಟ್ಟವರು. ಸುಮಾರು 18 ಜನರಿದ್ದ ನಮ್ಮ ತರಗತಿಯಲ್ಲಿ, ಎಲ್ಲರಿಗೂ, ಎಲ್ಲ ವಿಷಯಕ್ಕೂ ಪ್ರಶ್ನೆ ಪತ್ರಿಕೆಯನ್ನು , ಸ್ವತಃ ಕೈಯಿಂದ ಬರೆದು ಕೊಟ್ಟು, ನಮ್ಮ ಬರೆಯುವ ಕೌಶಲ್ಯವನ್ನು ರೂಪಿಸಿದವರು.

ಶಿಕ್ಷಣದ ಗುರಿ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು, ಕಲಿಸುವುದಾಗಬೇಕು. ಗುರುಕುಲ ಪದ್ಧತಿಯಲ್ಲಿ, ಶಿಕ್ಷಣವು ವಿದ್ಯಾರ್ಥಿ ಕೇಂದ್ರಿತವಾಗಿತ್ತು. ವಿದ್ಯಾರ್ಥಿಯ ಕಲಿಕೆಯ ಮಟ್ಟ, ಆಸಕ್ತಿ  ಆಧರಿಸಿ.. ಮುಂದಿನ ಜೀವನ ರೂಪಿಸಿಕೊಳ್ಳಲು ಬೇಕಾದ ಕೌಶಲ್ಯಗಳನ್ನು ತುಂಬುತ್ತಿದ್ದರು. ಸಮಾಜದ ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಜನವೇ ಇರುತ್ತಿದ್ದರು. ಆ ಕೆಲಸಗಳ ಮೂಲಕ ಅವರನ್ನು ಗುರುತಿಸುತ್ತಿದ್ದು... ಕಾಲಕ್ರಮೇಣ ಅದನ್ನೇ ಜಾತಿಯನ್ನಾಗಿ ಪರಿವರ್ತಿಸಿರಬೇಕು.  ಕೆಲ ವೃತ್ತಿಗಳು ವಂಶಪಾರಂಪರ್ಯವಾಗಿ ರೂಪುಗೊಂಡವೂ ಆಗಿರುತ್ತಿದ್ದವು. ಎಲ್ಲ ವೃತ್ತಿಗಳಿಗೂ ಸಮಾಜದಲ್ಲಿ ಅದರದೇ ಆದ ಗೌರವ ಹಾಗೂ ಸ್ಥಾನಮಾನಗಳು ಇರುತ್ತಿದ್ದವು. ಸಾಮಾಜಿಕ ಕಾರ್ಯಕ್ರಮಗಳಲ್ಲಂತೂ ಎಲ್ಲರೂ ಒಳಗೊಳ್ಳುವಂತೆ ರೂಪಿತವಾಗಿರುತ್ತಿತ್ತು. 

ನನ್ನೂರು ದೊಡ್ಡಜಾಲದ ದೇವರ ಮೆರವಣಿಗೆಯನ್ನು ನೆನೆಯುವುದಾದರೆ.... ಸಾಮಾನ್ಯವಾಗಿ ಆ ಕಾಲಕ್ಕೆ ಅಸ್ಪೃಶ್ಯರು ಎಂದು ಗುರುತಿಸುತ್ತಿದ್ದ ಪರಿಶಿಷ್ಟ ಜಾತಿಯ ಜನರು, ತಮಟೆ,   ರಮ್ಢೋಲ್ ಬಾರಿಸುತ್ತಾ ದೇವರ ಮೆರವಣಿಗೆಯ ಮುಂಭಾಗದಲ್ಲಿರುತ್ತಿದ್ದರು. ಕ್ಷೌರಿಕ ಮನೆತನದವರು, ಓಲಗ, ಡೋಲು, ತಾಳ ಹಾಕುತ್ತಾ ಎರಡನೆಯ ಸ್ಥಾನದಲ್ಲಿರುತ್ತಿದ್ದರು. ಇನ್ನು ಅಗಸರದಂತೂ ದೇವರ ಮುಂದೆ ಪಂಜು ಹಿಡಿಯುವ ಪ್ರಮುಖವಾದ ಕೆಲಸ, ಜೊತೆಗೆ ದೇವರಿಗೆ ನಡೆಮುಡಿ, ಹಾಸುವ ಅಗ್ರಸ್ಥಾನ. ಎಂತಹ ಸುಂದರವಾದ.. ಹೊಂದಾಣಿಕೆಯಿಂದ ಕೂಡಿದ ಪ್ರಪಂಚವಾಗಿತ್ತು. ಚುನಾವಣಾ ರಾಜಕೀಯ ಪ್ರಾರಂಭವಾದ ನಂತರ, ಇದೆಲ್ಲಾ ಬದಲಾವಣೆಯಾಯಿತು ಎಂದು ನನ್ನ ಅಚಲ ನಂಬಿಕೆ.

ಅದೊಂದು ಕಾಲವಿತ್ತು... 60% ಅಂಕ ತೆಗೆದುಕೊಂಡು, first class ನಲ್ಲಿ ತೇರ್ಗಡೆ ಆದರೆ ಅದೊಂದು ದೊಡ್ಡ ಸಾಧನೆ. ಅದೂ, ಕೇವಲ ಬೆರಣಿಕೆಯಷ್ಟು ಜನ ಒಂದು ತರಗತಿಯಲ್ಲಿ ಇರುತ್ತಿದ್ದರು. ಈಗ ನೂರಕ್ಕೆ ನೂರು ಅಂಕ ತೆಗೆದುಕೊಳ್ಳುವುದು ಅತಿಶಯವೇನಲ್ಲ. ಅಂಕಗಳನ್ನು ಕೊಡುವ ವಿಧಾನವನ್ನು ಹಾಸ್ಯಮಯವಾಗಿ  ಗುರುರಾಜ ಕರ್ಜಗಿ ಯವರು ಹೇಳಿದ ಒಂದು ಪ್ರಸಂಗ.

ಉತ್ತರ ಪತ್ರಿಕೆ ಗಳನ್ನು   ಮೌಲ್ಯಮಾಪನ ಮಾಡುತ್ತಿದ್ದ ಒಬ್ಬ ಉಪಾಧ್ಯಾಯರಿಗೆ, ಬಂದ ಅನುಮಾನ... ಹಸುವಿಗೆ ಎಷ್ಟು ಕಾಲು ಎಂಬ ಪ್ರಶ್ನೆಗೆ ವಿದ್ಯಾರ್ಥಿ ಬರೆದದ್ದು ಮೂರು... ಎಷ್ಟು ಅಂಕ ಕೊಡಬೇಕೆಂದು ತನ್ನ ಹಿರಿಯ ಸಹೋದ್ಯೋಗಿಗೆ ಕೇಳಿದಾಗ ಅವರಿಂದ ಬಂದ ಸಲಹೆ, ಸರಿಯಾದ ಉತ್ತರಕ್ಕೆ ನಾಲ್ಕು ಅಂಕ, ವಿದ್ಯಾರ್ಥಿ ಮೂರು ಬರೆದಿರುವುದರಿಂದ ಅವನಿಗೆ ಮೂರು ಅಂಕ ಕೊಡಬೇಕು. ಇದು ಈಗಿನ ಮೌಲ್ಯಮಾಪನದ ಉದಾರವಾದಿ ಮನೋಭಾವವನ್ನು ಎತ್ತಿ ಹಿಡಿಯುತ್ತದೆ.

ಯಾವ ವಿಶ್ವವಿದ್ಯಾನಿಲಯದ ಪದವಿಯನ್ನೂ ಪಡೆಯದ ನಿರಕ್ಷರ ಕುಕ್ಷಿಗಳು, ಸ್ವಲ್ಪ ಮಟ್ಟಿಗೆ ಓದು ಬರಹ ಕಲಿತ ಹಿಂದಿನವರು, ಜೀವನವನ್ನು ನೆಮ್ಮದಿಯಾಗಿ, ನಿಸ್ಪ್ರಹತೆಯಿಂದ ನಡೆಸಿದ ಬಹಳಷ್ಟು ಉದಾಹರಣೆಗಳು ನಮ್ಮ ಮುಂದುಂಟು.

ಕೂಡು ಕುಟುಂಬದಲ್ಲಿ, 30/ 40 ಜನ ಇರುತ್ತಿದ್ದಾಗ ಹೊಂದಾಣಿಕೆಯ ಜೀವನ ಸಾಗಿಸಲು, ಮಾರ್ಗದರ್ಶನ ಮಾಡುತ್ತಿದ್ದ ಹಿರಿಯರು  ಪದವಿ ಪಡೆದವರೇನಲ್ಲ. ಲೋಕಜ್ಞಾನದಿಂದ ಮಾರ್ಗದರ್ಶನ ಮಾಡುತ್ತಿದ್ದವರು. ಈಗ ಕೂಡುಕುಟುಂಬವೂ ಇಲ್ಲ.. ಹಿರಿಯರಿಗೆ ಆ ಸ್ಥಾನಮಾನವು ಇಲ್ಲ. ಸಂಸಾರ ಗುಟ್ಟು ವ್ಯಾಧಿ ರಟ್ಟು ಎನ್ನುವ ಗಾದೆಯನ್ನು ಪಕ್ಕಕ್ಕಿಟ್ಟು... ಈಗ ಮಾರ್ಗದರ್ಶನಕ್ಕಾಗಿ ಓಡುವುದು ಆಪ್ತ ಸಲಹಾ ಕೇಂದ್ರಗಳಿಗೆ/ ಮಾನಸಿಕ ತಜ್ಞರೆಡೆಗೆ.

ಜೀವನ ಕಲಿಸಿದ ಪಾಠದಿಂದ, ಉತ್ತೇಜನಗೊಂಡು, ಸಾಕಷ್ಟು ಶೋಧನೆಗಳನ್ನು ಮಾಡಿದ, ಲೋಕಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾ ಚೇತನಗಳು ನಮ್ಮ ಚರಿತ್ರೆಯ ಭಾಗವಾಗಿದ್ದಾರೆ. 

ಸ್ನಾನದ ತೊಟ್ಟಿಯಲ್ಲಿ  ಮೀಯುತ್ತಿದ್ದಾಗಲೂ ತನ್ನ ಸಮಸ್ಯೆಯ ಬಗ್ಗೆ ಚಿಂತಿಸುತ್ತಿದ್ದ ಆರ್ಕಿಮಿಡಿಸನಿಗೆ, ಹೇಗೋ ಹೊಳೆದದ್ದು ಪರಿಹಾರ.. ಉತ್ಸಾಹದಲ್ಲಿ ಯುರೇಕಾ ಎಂದು ಕೂಗುತ್ತಾ ಬೆತ್ತಲೆಯಾಗಿ ಓಡಿಬಂದನೆಂದು ಪ್ರತೀತಿ. ಇಂತಹ ಅನಿರೀಕ್ಷಿತವಾಗಿ ಸಮಸ್ಯೆಗೆ ಉತ್ತರಗಳನ್ನು ಕಾಣುವ ಸಮಯಗಳನ್ನು eureka moments ಎಂದು ಕರೆಯುತ್ತಾರೆ.

ನಾನು ಶಹಾಬಾದಿನಲ್ಲಿದ್ದ ಸಮಯ, AMIE ಪರೀಕ್ಷೆಗಾಗಿ ಓದಿಕೊಳ್ಳುತ್ತಿದ್ದೆ.  solid geometry ಯ ಮೂರು ಸಮತಲಗಳು ಕೂಡುವ ಮೂಲೆಯನ್ನು ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದೆ.  Toilet ನಲ್ಲಿ ಕೂತಾಗಲು ಅದೇ ಯೋಚನೆ. ಇದ್ದಕ್ಕಿದ್ದಂತೆ ಗಮನ.. ನೆಲದ ಹಾಗೂ ಎರಡು ಗೋಡೆಗಳು ಸೇರುವ ಮೂಲೆಯ ಮೇಲೆ ಹೋಯಿತು. ತಕ್ಷಣ ನನ್ನ ಸಮಸ್ಯೆಗೆ ಉತ್ತರ ಹೊಳೆಯಿತು.  ಇದು ಒಂದು eureka moment ಎನ್ನಲೇ?

ಪದವಿ ಪತ್ರವಿದ್ದಲ್ಲಿ ಜ್ಞಾನ ಇದ್ದೇ ಇರಲೇಬೇಕೆಂಬ ನಿಯಮವೇನಿಲ್ಲ. ಆದರೆ ಜ್ಞಾನಕ್ಕೆ ತಕ್ಕ ಪದವಿ (position), ಸ್ಥಾನಮಾನಗಳು ದೊರೆಯುವುದು ಖಚಿತ. 

ಓದಿ ಪದವಿ ಗಳಿಸಿದವರಿಗೆ... ಜೊತೆ ಜೊತೆಯಲ್ಲಿ ಜ್ಞಾನವು ಬೆಳೆಯಲಿ ಎಂದು ಆಶಿಸುತ್ತಾ...

ನಮಸ್ಕಾರ. .


ಡಿ ಸಿ  ರಂಗನಾಥ ರಾವ್

9741128413

Comments

  1. ಓದು ಒಕ್ಕಾಲು ಬುದ್ಧಿ ಮಕ್ಕಾಲು ಎನ್ನುವ ಗಾದೆ ಮಾತು ಸಾರ್ವಕಾಲಿಕ ಸತ್ಯವೆಂಬುದನ್ನು ನಿಮ್ಮ ಲೇಖನ ತಿಳಿಸುತ್ತಿದೆ.

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ