ಸಮಯಾ ಸಮಯ - ಕಾಲಾನುಕಾಲ


1988 ರ ಸಮಯ, ಭಾನುವಾರ ಬೆಳಿಗ್ಗೆ  10 ಘಂಟೆಗೆ, ದೂರದರ್ಶನದಲ್ಲಿ BR Chopra ಅವರು ತಯಾರಿಸಿದ ಮಹಾಭಾರತ ಧಾರಾವಾಹಿ  ಪ್ರಸಾರವಾಗುತ್ತಿತ್ತು. ಭಾರತದ ಬಹು ಮನೆಗಳಲ್ಲಿ ಟಿವಿಗೆ ಪೂಜೆಮಾಡಿ, ಮನೆಮಂದಿಯೆಲ್ಲಾ ಕುಳಿತು ನೋಡುತ್ತಿದ್ದ ಸಮಯ. 





ಮೈ ಸಮಯ್ ಹೂ ಎಂದು ಪ್ರಾರಂಭವಾದ ಮೊದಲ ಸಂಚಿಕೆ... ಕಥೆಯ ಸೂತ್ರಧಾರ  ಸಮಯ. ಸಂಚಿಕೆಯ ಪ್ರಾರಂಭದಲ್ಲಿ ಕಥೆಯ ಕೊಂಡಿಯನ್ನು ಜೋಡಿಸುತ್ತಿದ್ದದ್ದು. ಸಮಯ ಎಲ್ಲ ಆಗುಹೋಗುಗಳಿಗೆ ಸಾಕ್ಷಿಯಾಗಿದ್ದಂತೆ ಅದನ್ನು ನಿರೂಪಿಸಿದ್ದು. ಸಂಚಿಕೆಗಳಲ್ಲಿ ಎಷ್ಟು ಲೀನವಾಗಿರುತ್ತಿದ್ದೆವೆಂದರೆ, ಸಮಯ ಕಳೆದದ್ದು ಗೊತ್ತಾಗುತ್ತಿರಲಿಲ್ಲ.

ಹಾಗೇ ಅಲ್ಲವೇ..ಸಂತೋಷದಲ್ಲಿದ್ದಾಗ ಸಮಯದ ಪರಿವೆಯೇ ಇಲ್ಲ. ಅದೇ ದುಃಖ, ಆತಂಕ ಹಾಗೂ ಕಾಯುವ ಸಮಯದಲ್ಲಿ , ಗಡಿಯಾರ ಮುಂದಕ್ಕೇ ಹೋಗುವುದಿಲ್ಲವೇನೋ ಎನಿಸುತ್ತದೆ. 

ಈ ವಿಚಾರದಲ್ಲಿ ನಂದೊಂದು  ಅನುಭವ. ಕರೆಂಟೇ ಇಲ್ಲದ,    ಗಡಿಯಾರವೂ ಇಲ್ಲದ  ದೊಡ್ಡಜಾಲದ ಮನೆಯಲ್ಲಿ ಬೆಳೆದ ನಾನು, ಸೂರ್ಯ ಮುಳುಗಿ, ಕತ್ತಲಾದ ನಂತರ, ಸ್ವಲ್ಪ ಹೊತ್ತು ದೀಪದ ಬೆಳಕಿನಲ್ಲಿ ಓದಿದಂತೆ ಮಾಡಿ (ಅದು ಅಪ್ಪನ ಭಯದಿಂದ)  ಊಟ , ನಿದ್ದೆ ... ದಿನ ಮುಗಿದಂತೆ. ಬೆಂಗಳೂರಿಗೆ ಬಂದ ಹೊಸತು, ಹೈಸ್ಕೂಲು, ಹಾಗಾಗಿ ಓದು ಜಾಸ್ತಿ ಇರಬೇಕು ಎಂಬುದು ಮನೆಯವರ ಅನಿಸಿಕೆ. ನನ್ನ ಅಭ್ಯಾಸದಂತೆ, ಕತ್ತಲಾಗಿ ಸ್ವಲ್ಪ ಹೊತ್ತು ಓದಿದರೆ, ಸಮಯ 7 ಘಂಟೆಯೂ ಆಗುತ್ತಿರಲಿಲ್ಲ. ನನಗೆ ನಿದ್ದೆ. ಇದನ್ನು ಸಹಿಸದ ಅಕ್ಕ, ಅಣ್ಣಂದಿರು ಅಪ್ಪನಿಗೆ ದೂರು ಹೇಳಿ 7.30 ರ ತನಕ ಓದಲೇ ಬೇಕಾದ ಕಟ್ಟುನಿಟ್ಟಿನ ಆಜ್ಞೆಯಾಯಿತು. ಮಲಗಲು ಭಯ, ಓದಲು ಆಗದಷ್ಟು ನಿದ್ದೆಯ ಸೆಳೆತ. ಎಷ್ಟು ಸಲ ಗಡಿಯಾರದ ಕಡೆ ನೋಡಿದರೂ 7.30 ಆಗದು....ಗಡಿಯಾರ ನಿಂತೇ ಹೋಗಿದೆಯೇನೋ ಎಂಬ ಅನುಮಾನ... ಯುಗಗಳು ಕಳೆದಷ್ಟು ದೀರ್ಘ ಸಮಯ.

ಮುಸ್ಸಂಜೆಯ ಹೊತ್ತು ಊಟ ನಿಷಿದ್ಧ..                        ಅದು ಮಂಡರು- ಮುಕ್ಕರು ತಿನ್ನುವ ಹೊತ್ತು. ಅವರು ತಿನ್ನಬಹುದಾದರೆ ನಾವೇಕೆ ತಿನ್ನಬಾರದು ಎಂಬ ಪ್ರಶ್ನೆ ಆಗ...

ಕಳೆದು ಹೋದ ಕಾಲ, ಸಮಯ, ಕ್ಷಣಗಳ ಸಮಯದಲ್ಲಿ ಆಗಿ ಹೋದ ಘಟನೆಗಳ/ ವಿಷಯಗಳನ್ನು ಮೆಲುಕು ಹಾಕುವುದೇ ಸಿಹಿ ಕಹಿ ನೆನಪಿನ ಹೂರಣ. ನೆನಪಿನ ನಾಗಾಲೋಟಕ್ಕೆ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲದಿದ್ದರೂ, ಒಂದಷ್ಟು ಸಮಯ ಪ್ರಜ್ಞೆ ಹಾಗೂ ಸಂಯಮ ತುಂಬಾ ಪ್ರಮುಖವಾಗುತ್ತದೆ, ಎಂದು ನನ್ನ ಅನಿಸಿಕೆ.

ಸಮಯ ಪ್ರಜ್ಞೆ ಎಂದಾಗ.. ಪ್ರಸ್ತುತ ಸಮಯ ಹಾಗೂ ಸಂದರ್ಭದಲ್ಲಿ ತಕ್ಕಂತೆ ವರ್ತಿಸುವುದು.  ಅದರಲ್ಲೂ ನಮ್ಮ ಮಾತು ಸಮಯಕ್ಕೆ ಪೂರಕವಾಗಿ ಇರಬೇಕಾಗುತ್ತದೆ. ಎಷ್ಟೋ ಸಮಯದಲ್ಲಿ ಸಾವಿರ ಪದಗಳಿಗಿಂತ, ಮೌನ ಹಾಗೂ ಸಾಂತ್ವನದ ಒಂದು ಸ್ಪರ್ಶ ಪ್ರಸ್ತುತವೆನಿಸುತ್ತದೆ.

Reflex action ಎನ್ನುವುದು ನಮ್ಮ ಪ್ರಜ್ಞೆಯ ಹೊರತಾಗಿ, ದೇಹದಿಂದ ಆಗುವ ಕ್ರಿಯೆ. ಆದರೆ ಅದು ಆ ಸಮಯ/ ಸಂದರ್ಭಕ್ಕೆ ಬಹುಸೂಕ್ತವಾಗಿರುತ್ತದೆ. ಉದಾಹರಣೆಗೆ ಬಿಸಿ ಮುಟ್ಟಿದ ತಕ್ಷಣ ಕೈಯನ್ನು ಹಿಂದಕ್ಕೆ ಎಳೆಯುವುದು, ಧೂಳಿನ ಕಣ ಬಂದ ತಕ್ಷಣ ಕಣ್ಣಿನ ರೆಪ್ಪೆ ಮುಚ್ಚುವುದು.... ವಾಹನ ಚಲಾಯಿಸುವಾಗ ಮಾಡುವ ಕೆಲಕ್ರಿಯೆಗಳು. ಇವು ಮೆದುಳಿನ ಸಂದೇಶಕ್ಕಾಗಿ ಕಾಯದೆ, ನರಮಂಡಲದಿಂದಲೇ ಪ್ರಚೋದಿತ ವಾಗುವಂತವು.

ನಮ್ಮ ಪ್ರಜ್ಞೆಯನ್ನು ಉಪಯೋಗಿಸದೆ, ಮಾಡುವ ಕ್ರಿಯೆಗೆ Reaction - ಪ್ರತಿಕ್ರಿಯೆ ಎನ್ನುತ್ತಾರೆ. ಇದು ಬಹಳ ಸಲ ವಾದ ವಿವಾದಕ್ಕೆ / ಹಿಂಸೆಗೆ ಅನುವು ಮಾಡಿಕೊಡುತ್ತದೆ. ಅದೇ ಒಂದರೆಕ್ಷಣ ಸಮಯ ಕೊಟ್ಟು, ಪ್ರಜ್ಞಾಪೂರ್ವಕವಾಗಿ ಯೋಚಿಸಿ ಪ್ರತಿಕ್ರಿಯೆ ನೀಡುವುದು Response, ಸಾಮಾನ್ಯವಾಗಿ ಸಂಯಮದಿಂದ ಕೂಡಿರುತ್ತದೆ. ಇದು  ಸಮಯ ಪ್ರಜ್ಞೆಯ ಧನಾತ್ಮಕ ಮುಖ. ಅದಕ್ಕೇ ಇರಬೇಕು, ನಮ್ಮ ಹಿರಿಯರು ಹೇಳಿರುವುದು.. ಕೋಪ ಬಂದಾಗ ಹತ್ತರವರೆಗೆ ನಿಧಾನವಾಗಿ ಎಣಿಸಿ ಅನಂತರ ಮಾತನಾಡು ಎಂದು. 

ಸಮಯ ಕ್ಕೊಂದು ಸುಳ್ಳು ಹೇಳುವುದು ಕೆಲವರಿಗೆ ಸಿದ್ದಿಸಿದ ಸಮಯಪ್ರಜ್ಞೆ. ಆ ಕ್ಷಣದ ಸಂಕಟದಿಂದ ಪಾರಾಗಲು ಕಂಡುಕೊಂಡ ಉಪಾಯ. ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂಬ ಗಾದೆಯಂತೆ.

ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ಎಂಬುದು ಮಹಾಕವಿ ಕಾಳಿದಾಸ ಚಿತ್ರದ ಒಂದು ಮಾತು. ಸಂದಿಗ್ಧದ ಸಂದರ್ಭದಿಂದ ತಪ್ಪಿಸಿಕೊಳ್ಳಲು ಮೌನಕ್ಕೆ ಮೊರೆ ಹೋಗುವುದು.

ಸಮಯ ಸ್ಪೂರ್ತಿ ಎನ್ನುವುದು ಪ್ರಸ್ತುತ ಸಮಯದಿಂದ ಪ್ರೇರೇಪಣೆ ಪಡೆದು, ಕ್ರಿಯಾತ್ಮಕ ನಿರ್ಧಾರಗಳನ್ನು ಮಾಡುವ/ ಸಾಹಿತ್ಯ ಕೃಷಿಯನ್ನು ಮಾಡುವ ವಿಧಾನ.

ಸಾಹಿತ್ಯ / ಕಾವ್ಯ ರಚನೆಯಲ್ಲಿ, ಕವಿಯ ಕಲ್ಪನೆ  ಗರಿಗೆದರಲು, ಇರುವ ಸ್ವಾತಂತ್ರ್ಯವನ್ನು ಕವಿ ಸಮಯ ಎಂದು ಕರೆಯುತ್ತಾರೆ. ಈ ಕಲ್ಪನೆಗಳು ವಾಸ್ತವದಿಂದ ದೂರವಿದ್ದರೂ, ಓದುಗರಿಗೆ ಅರ್ಥಮಾಡಿಕೊಳ್ಳಲು ಸುಲಭವೇನೋ.  ವಿರಹ ವೇದನೆಯಲ್ಲಿ ತಪಿಸುತ್ತಿರುವ ಪ್ರೇಮಿಗೆ ಬೆಳದಿಂಗಳೂ ಬಿಸಿಲಾಗಿ ಕಾಡುವ ( ವಿರಹಾಗ್ನಿ ನನ್ನೆದೆ ಸುಡಲು ಬೆಳದಿಂಗಳಾಯಿತು ಬಿಸಿಲು... ಎಂಬ ಹಾಡನ್ನು ನೆನೆಸಿಕೊಳ್ಳಿ) ಮೈಗೆ ಹಚ್ಚಿದ ಶ್ರೀಗಂಧವೂ, ಉರಿಯಾಗಿ ಹಿಂಸಿಸುವ ಕಲ್ಪನೆ.

ನನಗೆ ತುಂಬಾ ಮೆಚ್ಚುಗೆಯಾದದ್ದು ಪುರಂದರ ದಾಸರ ಸುಳ್ಳೇ ನಮ್ಮನೆ ದ್ಯಾವ್ರು ಹಾಡಿನ

ಗೊದ್ದ ಗೋಡೆ ಹಾಕಿದ್ ಕಂಡೆ                                       ಇಲಿ ಬೆಕ್ಕಿನ್ ತಿನ್ನೋದ್ ಕಂಡೆ                             ಕಂಡೆನಕ್ಕ ಮುಂಗ್ಸಿಯಾ ಕಡಾಯಿ ಗಾತ್ರವಾ... ಎಂಬ ಕಲ್ಪನೆ

ಸಮಯ ಸಂಜೀವಿನಿ ಎನ್ನುವುದು, ಬಹುಶಃ ಸಮಸ್ಯೆಗಳಿಗೆ, ಸಮಯಕ್ಕೆ ಸರಿಯಾದ ಪರಿಹಾರವನ್ನು ಕೊಡುವುದು... ಎಂದಿರಬಹುದು. ಔಷಧ ಸಸ್ಯವನ್ನು ಗುರುತಿಸಲಾಗದ ಹನುಮಂತ, ಸಂಜೀವಿನಿ ಪರ್ವತವನ್ನೇ ಎತ್ತು ತಂದ ಸಮಯೋಚಿತ ನಿರ್ಧಾರ ಇದಕ್ಕೆ ಪ್ರೇರಣೆ ಇರಬಹುದೇ... ಅಹುದಾದರಹುದೆನ್ನಿ.

ಕನಕ ದಾಸರಂತೂ ಸಮಯದಲ್ಲಿ ಆಜಾಮಿಳನ ಪೊರದೆ,  ಸಮಯಾ ಸಮಯ ಉಂಟೇ ಭಕ್ತ ವತ್ಸಲ ನಿನಗೆ ಎಂದು ಹಾಡಿಹೊಗಳಿದ್ದಾರೆ. ಹಾಲು ಸಮುದ್ರದಲ್ಲಿ, ಲಕ್ಷ್ಮಿಯೊಂದಿಗೆ ಕಾಂತಾ ಸಮ್ಮಿತಿಯಲ್ಲಿದ್ದ ವಿಷ್ಣುವು, ಕರಿ ರಾಜ ಆನೆ, ಮುಗ್ಧ ಮನಸ್ಸಿನ ಪ್ರಹ್ಲಾದ ಹಾಗೇ ವಸ್ತ್ರಾಪಹರಣದ ಅವಮಾನವನ್ನು ಎದುರಿಸುತ್ತಿದ್ದ ದ್ರೌಪದಿಗೆ, ಸಮಯದಲ್ಲಿ ರಕ್ಷಣೆ  ಕೊಟ್ಟದ್ದನ್ನು  ನೆನೆದಿದ್ದಾರೆ.  ಕಷ್ಟದಲ್ಲಿರುವವರು ದೇವರನ್ನು ನಂಬಿ ಕರೆದರೆ, ಬಂದು ಜೊತೆ ನಿಂತು ಪರಿಹಾರ ಮಾಡುವನು ಎಂಬ ನಂಬಿಕೆ.

ಕಾಲ, ವೇಳೆ, ಹೊತ್ತು, ಸಂದರ್ಭ, ಅವಧಿ ಇವೆಲ್ಲವೂ -ಸಮಯದ ಬೇರೆ ಬೇರೆ ಮುಖಗಳು.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಮಾತು... ತಯಾರಿಸಲು ಮಾಡಬೇಕಾದ ಪ್ರಯತ್ನ ಹಾಗೂ ತೆಗೆದುಕೊಂಡ ಸಮಯ, ಅದನ್ನು ಹಾಳು ಮಾಡಲು ಬೇಕಾದ ಅಲ್ಪ ಸಮಯವನ್ನು ಸೂಚಿಸುತ್ತದೆ. ಹಾಳು ಗೆಡವುವುದು ತುಂಬಾ ಸುಲಭದ ಕೆಲಸ.

ಮನೆಗೆ ಬೆಂಕಿ ಬಿದ್ದಾಗ ನೀರಿಗಾಗಿ ಭಾವಿ ತೊಡುವುದು, ಯುದ್ಧಕಾಲೇ ಶಸ್ತ್ರಾಭ್ಯಾಸಃ ಎನ್ನುವುದು, ಮುಂದಾಲೋಚನೆ, ಪೂರ್ವ ತಯಾರಿ ಇಲ್ಲದೆ ಕೆಲಸ ಮಾಡಲು ಹೊರಟಂತೆ. ಅದರಿಂದ ಹಾನಿಯೇ ಹೆಚ್ಚು.

ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎಂಬುವ ಮಾತು... ಜೀವನದಲ್ಲಿ ಸೂಕ್ತ ಸಮಯದಲ್ಲಿ ಆಗಬೇಕಾದ ಕೆಲಸಗಳು/ ಘಟನೆಗಳು ಆಗದೆ, ಯಾವಾಗಲೋ ಆದಾಗ ಅದು ಉಪಯೋಗಕ್ಕೆ ಬಾರದು ಎಂದು.

ನಾಳೆ ಮಾಡುವುದನ್ನು ಇಂದು ಮಾಡು, ಇಂದು ಮಾಡುವುದನ್ನು ಈಗ ಮಾಡು ಎಂದು ಹೇಳುವುದು ಸಮಯಕ್ಕಾಗಿ / ಮುಹೂರ್ತಕ್ಕಾಗಿ ಕಾದು ಕುಳಿತುಕೊಳ್ಳುವ ಬದಲು, ಮುಂಚೆಯೇ ಮಾಡಿ ಮುಗಿಸುವುದು ಸೂಕ್ತ ಎಂದು ಸೂಚಿಸುತ್ತದೆ.

ಮುಹೂರ್ತ ಎನ್ನುವುದು ಒಂದು ಕಾಲಾವಧಿಯನ್ನು ಸೂಚಿಸುತ್ತದೆ. ಯಾವುದೇ ಕೆಲಸವನ್ನು ಮಾಡಲು ಸರಿಯಾದ ಸಮಯವನ್ನು ಆಯ್ಕೆ ಮಾಡುವುದು, ಕೆಲ ಶುಭ ಕಾರ್ಯಗಳಿಗೆ ಆದಕ್ಕೇ ಆದ ಸಮಯವನ್ನು ಪಂಚಾಂಗದ ಮೂಲಕ ನೋಡಿ ನಿರ್ಧಾರ ಮಾಡಿದ್ದನ್ನು ಮುಹೂರ್ತ ಎಂದು ನಮ್ಮ ಹಿಂದಿನವರು ಕರೆದರು. ಮುಹೂರ್ತ ಇಡಿಸಲು ಬಂದಿದ್ದೇವೆ / ಮುಹೂರ್ತ ಇಡಿಸಿದ್ದಾಯಿತು ಎಂಬ ಮಾತನ್ನು ನಾನು ನನ್ನ ಬಾಲ್ಯದ ದಿನಗಳಲ್ಲಿ ಕೇಳಿದ್ದೇನೆ. 

ಇದರ ಇನ್ನೊಂದು ಮುಖವೂ ಇದೆ... 

ಇಂದಿನ ದಿನವೇ ಶುಭದಿನವು, ಇಂದಿನ ವಾರ ಶುಭವಾರ, ಈಗಿನ ಘಳಿಗೆ ಶುಭ ಘಳಿಗೆ..

ತದೇವ ಲಗ್ನಂ ಸುದಿನಂ ತದೇವ.                        ತಾರಾಬಲಂ ಚಂದ್ರಬಲಂ ತದೇವ                     ವಿದ್ಯಾಬಲಂ ದೈವಬಲಂ ತದೇವ 

ಎಂದು ನಂಬಿ ಮುನ್ನಡೆಯುವುದು.

ಯಾವ ಕೆಲಸಕ್ಕಾದರೂ ಒಂದು ಕಾಲಾವಧಿಯ ಮಿತಿ ಇರಬೇಕಾದದ್ದು, ಶಿಸ್ತಿನ ಒಂದು ಮುಖ. 

Work expands to fill the time allotted ಎಂಬುದು ಇಂಗ್ಲಿಷಿನ ಒಂದು ಹೇಳಿಕೆ. ಅದರಲ್ಲೂ ಕೆಲಸ ಚಿಕ್ಕದಾದರಂತೂ ಕೊನೆಘಳಿಗೆವರೆಗೂ ಮುಂದೂಡುವುದು ಒಂದು ಧೋರಣೆ ಆಗಿದೆ. ಇದು ಸೋಮಾರಿತನದ ಲಕ್ಷಣವು ಹೌದು.

ನಮ್ಮ ಕೆಲಸ ಸಮಯಕ್ಕೆ ಸರಿಯಾಗಿ, ಚೆನ್ನಾಗಿ ಆಗಬೇಕಾದರೆ, ಕೈ ತುಂಬಾ ಕೆಲಸವಿರುವವರ ಬಳಿ ಹೋಗಬೇಕಂತೆ... ಆತ ತನ್ನ ಸಮಯವನ್ನು ಹೇಗೋ ಹೊಂದಿಸಿಕೊಂಡು ಮಾಡಬಲ್ಲ. ಅದೇ ಕೆಲಸವಿಲ್ಲದೆ ಕೂತಿರುವ ಸೋಮಾರಿ ಬಳಿ ಹೋದಾಗ ಕೆಲಸ ಆಗುವುದು ಕಷ್ಟ.

ಇಷ್ಟೆಲ್ಲಾ ಆದರೂ ಮಾನವ ಸಮಯದ ಗೊಂಬೆಯೇ... ಯಾವಾಗ ಯಾವಾಗ ಏನೇನು ಆಗಬೇಕೋ ಅದು ಆಗಿಯೇ ತೀರುತ್ತೆ ಎನ್ನುವುದು ಸಹ, ಸಾರ್ವಕಾಲಿಕ ಸತ್ಯ. 

ಯಾವುದಕ್ಕೂ  ಕಾಲ ಕೂಡಿ ಬರಬೇಕು ಎಂದು ಹೇಳುವುದನ್ನು ಕೇಳಿದ್ದೇನೆ. ಅದರಲ್ಲೂ ಮದುವೆಗೆ ಸಂಭಂದ ಪಟ್ಟಂತೆ... ಮಾಂಗಲ್ಯ ಭಾಗ್ಯ  / ಕಂಕಣಭಾಗ್ಯ ಕೂಡಿಬರಬೇಕು ಎಂಬ ಮಾತು ಸಾಮಾನ್ಯ. 

ಕಾಲ ಎಲ್ಲವನ್ನೂ ಮಾಗಿಸುತ್ತದೆ..time heals everything ಎನ್ನುವುದು ಅಕ್ಷರಶಃ ಸತ್ಯ. 

ದೈವದೊಲುಮೆ ಇರಲಾ ಕಾಲಾನು ಕಾಲಕ್ಕೆ ಬಡವಂ ಬಲ್ಲಿದನಾಗನೇ ಎಳೆಗರುಂ ಎತ್ತಾಗದೆ ಲೋಕದೋಳ್  ಎನ್ನುವ ಸೋಮೇಶ್ವರ ಶತಕದ ಸಾಲುಗಳು ಪ್ರಸ್ತುತ ಅಲ್ಲವೇ? 

ಈ ಸಮಯದಲ್ಲಿ ನನಗೆ ನೆನಪಾಗುವುದು ಅಜ್ಜಿ (ನಮ್ಮಮ್ಮನ ಅಮ್ಮ)  ಕಷ್ಟಕಾಲದಲ್ಲಿದ್ದ ನನ್ನ ಅಮ್ಮನಿಗೆ ಹೇಳುತ್ತಿದ್ದ ಸಮಾಧಾನದ ಮಾತುಗಳು.. " ಅಚ್ಚಾ.... ಇಂದಿಗೆ ಅನ್ನದ ಮಕ್ಕಳು.. ನಾಳೆಗೆ ಅವೇ ಚಿನ್ನದ ಮಕ್ಕಳು..." ಅಚ್ಚಾ ನನ್ನಮ್ಮ ಲಕ್ಷ್ಮಿದೇವಿಯ ಅಡ್ಡ ಹೆಸರು. 

ಕಾಲೋಚಿತಕ್ಕೈದಿದಾ ತೃಣವೇ ಪರ್ವತವಲ್ಲವೇ?  

ಇದು ಸಹ ಸೋಮೇಶ್ವರ ಶತಕದ ಸಾಲು. ಉಚಿತ ಕಾಲದಲ್ಲಿ ಮಾಡಿದ ಸಹಾಯವು ಹುಲ್ಲು ಕಡ್ಡಿಯಷ್ಟೇ ಆದರೂ ಅದು ಪರ್ವತಕ್ಕೆ ಸಮಾನ. ಸರಿಯಾದ ಸಮಯದಲ್ಲಿ ಮಾಡಿದ ಸಹಾಯದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಕಾಲ ಹೋದರೂ ಮಾತು ನಿಲ್ಲತ್ತೆ... ಎನ್ನುವುದು ಒಂದು ನುಡಿಗಟ್ಟು... ಬೇರೆಯವರ ಮನಸ್ಸನ್ನು ನೋಯಿಸುವಂತಹ ಮಾತುಗಳು ಮನಸ್ಸಿನಿಂದ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಆದರೆ ಕಾಲ ಜಾರಿ ಹೋಗಿರುತ್ತೆ.

ಕಾಲಾತೀತ... ಎನ್ನುವುದು ಎಲ್ಲಾ ಕಾಲಘಟ್ಟದಲ್ಲೂ ಅನ್ವಯ ವಾಗುವಂತಹ ವಿಷಯ. ಉದಾಹರಣೆಗೆ ಸಾವು ನಿಶ್ಚಿತ ಎನ್ನುವುದು ಸಾರ್ವಕಾಲಿಕ ಸತ್ಯ. ಇದು ಎಲ್ಲ ಕಾಲಕ್ಕೂ ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ. 

ನಮಗೆ ತುಂಬಾ ಒಳ್ಳೆಯದನ್ನು ಬಯಸಿದವರು/ ಸಹಾಯ ಮಾಡಿದವರನ್ನು ತಂಪು ಹೊತ್ತಿನಲ್ಲಿ ನೆನೆಸಿಕೊಳ್ಳಬೇಕು ಎಂಬ ಮಾತಿದೆ. ಇವರೆಲ್ಲ ಪ್ರಾತಃಸ್ಮರಣೀಯರು.

ಇತ್ತೀಚೆಗೆ ನಿಧನರಾದ ವಿಠ್ಠಲ್ ಕುಮಾರ್ ಅವರು ಅಂತಹ ಸ್ಮರಣೀಯರಲ್ಲಿ ಒಬ್ಬರು. ವಿಠ್ಠಲ್ ಅವರು ಒಂದು ಅಡಿಗೆಯ ತಂಡದ ಮುಖ್ಯಸ್ಥರು. ನಮ್ಮ ಮನೆಯ  ಕಾರ್ಯಕ್ರಮಗಳಿಗೆ.... ಅದು ಸಣ್ಣದಿರಲಿ ದೊಡ್ಡದಿರಲಿ, ಅಡುಗೆಗೆ ಸಂಬಂಧಪಟ್ಟ ಎಲ್ಲ ಜವಾಬ್ದಾರಿಯನ್ನು, ನಮಗೆ ಸ್ವಲ್ಪವೂ ಆತಂಕ / ಕಷ್ಟವಾಗದಂತೆ  ನಿಭಾಯಿಸುತ್ತಿದ್ದ ವ್ಯಕ್ತಿ. ನಮ್ಮ ಮನೆಯ ಶುಚಿ-ರುಚಿ, ಸಮಯ ಪ್ರಜ್ಞೆ, ನಮ್ಮ ರೀತಿ ರಿವಾಜುಗಳು ಎಲ್ಲವನ್ನು ತಿಳಿದಿದ್ದ ವ್ಯಕ್ತಿ. 

ನಮ್ಮ ಕಾರ್ಖಾನೆಯ ಆಯುಧ ಪೂಜೆಯ ದಿನ, ತಮ್ಮ ತಂಡದೊಂದಿಗೆ  ಬಂದು, ಬಂದ ಅತಿಥಿಗಳಿಗೆ ಬಿಸಿಬಿಸಿಯಾದ ಮಸಾಲೆ ದೋಸೆ, ಪೂರಿ ಹೀಗೆ ನಮ್ಮ ಇಷ್ಟದ ಊಟವನ್ನು ಉಣಬಡಿಸುತ್ತಿದ್ದರು. ಇದು ನಮ್ಮ ಸ್ನೇಹಿತರು ಬಹುವಾಗಿ ಮೆಚ್ಚುತ್ತಿದ್ದ ವಿಷಯ. ವಿಠ್ಠಲ್ ಅವರಿಗೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥನೆ.

ಆಗ ಬಾರದ ಸಮಯದಲ್ಲಿ ಆದ ಘಟನೆಗಳು.... ಅಕಾಲದ ಮಳೆ, ಅಕಾಲ ಮೃತ್ಯು,  ಅಕಾಲ ಹೆರಿಗೆ ಇಂತಹವು ನೋವನ್ನು ಕೊಡುತ್ತದೆ. ಇಂತಹ ಘಟನೆಗಳನ್ನು ಹೇಳುವಾಗ  ಒರಟು ಎನ್ನಬಹುದಾದ ಭಾಷೆಯಲ್ಲಿ ಇರುವ ಹೊತ್ತಲ್ಲದ ಹೊತ್ತಲ್ಲಿ ತೊತ್ತು ಮೈ ನೆರೆದಳು ಎನ್ನುವ ಕನ್ನಡದ ಗಾದೆಯನ್ನು ಹೇಳುವುದುಂಟು.

ತಕ್ಷಣ ಮಾಡು ಎನ್ನುವುದು ಆಜ್ಞೆ, ಬೇಗ ಮಾಡಿಕೊಡುವೆಯಾ ಎನ್ನುವುದು ವಿನಂತಿ, ಬೇಗ ಮಾಡಿಕೊಡಲೇಬೇಕು ಎನ್ನುವುದು ಒತ್ತಾಯ, ಆದಷ್ಟು ಬೇಗ ಮಾಡಿಕೊಡು ಎನ್ನುವುದು ಸೂಚನೆ / ಸಲಹೆ. ಸಮಯದ ಪರಿಮಾಣ ಒಂದೇ ಆದರೂ ಹೇಳುವ ರೀತಿ ಬೇರೆ ಬೇರೆ.

ಕಾಲ ನಮ್ಮ ಆಳು ಎಂಬ ಕನಸು ಕಾಣುವೆಯ ಇದು ಹೆತ್ತ ಮಗನು ಹಗೆಯ ಸಾಧಿಪ ಕಾಲವಿದುವಯ್ಯ

ಈ ಸಮಯ ಆನಂದಮಯ, ನೂತನ ಬಾಳಿನ ಶುಭೋದಯ

ಹಗಲೇನು ಇರುಳೇನು  ದುಡಿಯುವ ಜೀವಕ್ಕೆ ಹೊತ್ತೇನು

ಕಾಲವನ್ನು ತಡೆಯೋರು ಯಾರು ಇಲ್ಲ ಗಾಳಿಯನ್ನು ಹಿಡಿಯೋರು ಯಾರು ಇಲ್ಲ .... ಇವು ನನ್ನ ನೆನಪಿಗೆ ಬಂದ ಸಿನಿಮಾ ಹಾಡುಗಳು

ಕಾಲಕಾಲಕೆ ತಿಂದು ತೇಗಿ ಕಾಲ ಕಳೆಯುತ್ತಲಿದ್ದ ಪ್ರಾಣಿಗೆ... ಎಂದು ನಕ್ಷತ್ರಿಕ ಪಾತ್ರಧಾರಿ, ಹಾಸ್ಯ ನಟ  ನರಸಿಂಹ ರಾಜುರವರು ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ನಟಿಸಿರುವ ದೃಶ್ಯ ನಗೆ ತರಿಸುತ್ತಿತ್ತು.

ಯಾವ ಕಾಲ ತಪ್ಪಿದರೂ... ಸಾವಿನ ಕಾಲ ತಪ್ಪುವುದಿಲ್ಲ ಎಂಬುವುದು ಖಚಿತ....

ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ಎಂಬ ಸ್ಥಿತಿ ನಮ್ಮ ಕೊನೆಗಾಲದಲ್ಲಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತಾ... ನಮಸ್ಕಾರ


ಡಿ ಸಿ  ರಂಗನಾಥ ರಾವ್

9741128413












 

    

Comments

  1. ಎಲ್ಲರೂ ಕಾಲಕ್ಕೆ ತಕ್ಕಂತೆ ನಡೆಯಬೇಕು ತಾಳಕ್ಕೆ ತಕ್ಕಂತೆ ಕುಣಿಯಬೇಕು. ಕಾಲಾಯ ತಸ್ಮೈ ನಮಃ

    ReplyDelete
  2. ನಾಗೇಂದ್ರ ಬಾಬು16 May 2026 at 10:04

    ಜನನ ಕಾಲದಿಂದ... ಕಾಲಾವಗುವ ತನಕ ಸಮಯದ ಬಗ್ಗೆ ನಿಮ್ಮ ಸಮಾಯೋಚಿತ ಲೇಖನ ಓದುಗರನ್ನು ಅವರ ಕಾಲದ ನೆನನಪಿನಲ್ಲಿ ತೇಲಿಸುತ್ತದೆ
    ಧನ್ಯವಾದಗಳು
    ಬಾಬು

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ