ಮಳೆ ಬಂತು ಮಳೆ

 


ಬಿಸಿಲ ಬೇಗೆಯಿಂದ ಬಳಲುತ್ತಿದ್ದ, ಜಾತಕ ಪಕ್ಷಿಯಂತೆ ಮಳೆಗಾಗಿ ಕಾಯುತ್ತಿದ್ದ ಬೆಂಗಳೂರಿಗರಿಗೆ 29 ನೇ ತಾರೀಕಿನ ಸಂಜೆಯ ಮಳೆ ಒಂದಷ್ಟು ನೆಮ್ಮದಿಯನ್ನು ತಂದಿತು. ಸೆಕೆ, ಬಿಸಿಲ ಬೇಗೆ, ಏರಿದ ಉಷ್ಣಾಂಶದ ಬಗ್ಗೆಯೇ ಸುತ್ತುತ್ತಿದ್ದ ಮಾತುಕತೆ, ಸಂಪೂರ್ಣ ಬದಲಾವಣೆಯಾಗಿ ಮಳೆ ತಂದ ತಂಪು, ಆಲಿಕಲ್ಲು ಬಿದ್ದದ್ದು, ಮರಗಳು ಉರುಳಿದ್ದು, ಕೆಳ ಸೇತುವೆಗಳಲ್ಲಿ ನೀರು ತುಂಬಿದ್ದರ ಬಗ್ಗೆ ಹೊರಳಿತು. ಪ್ರಕೃತಿಯ ಬದಲಾವಣೆಯೊಂದಿಗೆ ಹೊಂದಿಕೊಂಡು ಹೋಗಬೇಕಾದದ್ದು ಅನಿವಾರ್ಯ.

ಸಾಮಾನ್ಯವಾಗಿ 32 ಡಿಗ್ರಿ ಮುಟ್ಟಿದಾಗ, ಬೆಂಗಳೂರಿಗೆ ಮಳೆ ಖಾತ್ರಿ ಎಂಬ ನಂಬಿಕೆಯು ಈ ಬಾರಿ ಹುಸಿಯಾಯಿತು. 36 ಡಿಗ್ರಿ ಮುಟ್ಟಿದರೂ ಮಳೆಯ ಲಕ್ಷಣವೇ ಕಾಣದೆ ಪರದಾಡಿದ್ದಾಯ್ತು.  ಇದಕ್ಕೆ   EL NINO  (ಎಲ್ ನೀನೋ) ... ದೂರದ ಪೆಸಿಫಿಕ್ ಸಾಗರದಲ್ಲಿ ಆಗುವ ಬಿಸಿ ಏರಿಕೆ, ಕಾರಣ ಎಂದು, ತಜ್ಞರ ಹೇಳಿಕೆ.  

ಅದಕ್ಕೆ ಕಾರಣ, ಮಾನವ ಕುಲ ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರ. ತನ್ನ ಸ್ವಾರ್ಥಕ್ಕಾಗಿ, ದುರಾಸೆಗಾಗಿ, ಪ್ರಕೃತಿಯಲ್ಲಿನ ಸಂಪನ್ಮೂಲವನ್ನು ದುರ್ಬಳಕೆ ಮಾಡಿದ್ದು.

(EL)ಎಲ್ ನೀನೇನೋ ಮಾಡಿದೆ ಅದಕ್ಕೆ (EL)ಇಲ್ ನಾನು ಕಷ್ಟಪಡಬೇಕು ಅನ್ನುವುದು, (EL)ಎಲ್ ಎಲ್ಲೂ ಇರುವ ಜನಾಂಗಕ್ಕೆ ಅರಿವಾಗಬೇಕು.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ 29ರ ಮಳೆ..  ಬಂದೇ ಬಂತು...

ಮಳೆ ಬಂತು ಮಳೆ, ತೊಳೆಯಿತು ಜಗದ ಕೊಳೆ    ತಂಪಾಯಿತು ಇಳೆ, ಮೂಡಿತು ಎಲ್ಲೆಲ್ಲೂ ಕಳೆ

ಕಳೆ ಎಂಬ ಪದಕ್ಕೆ ನಾನಾ ಅರ್ಥವಿದ್ದರೂ, ಇಲ್ಲಿ .. ಹೊಳೆಯುವುದು / ಸೊಗಸು ...ಎಂಬುದು  ಪ್ರಸ್ತುತ. ಮರಗಳ ಎಲೆಗಳು ಥಳಥಳ ಹೊಳೆಯುತ್ತವೆ, ಹಾಗೇ ಮಳೆಯ ಕಾರಣದಿಂದ ರೈತ ಬೆಳೆಯುವ ಬೆಳೆಗಳ ಮಧ್ಯೆ ಬೇಡದ ಹುಲ್ಲು ಸಹ ಬೆಳೆಯುತ್ತದೆ, ಅದೂ ಕಳೆ.

ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ..   ಇದು ನಾವು ಚಿಕ್ಕಂದಿನಲ್ಲಿ ಹಾಡುತ್ತಿದ್ದದ್ದು. ಮಳೆಯನ್ನು ಸ್ವಾಗತಿಸುವ ಪರಿ, ಎಲ್ಲರ ಅನುಕೂಲಕ್ಕಾಗಿ.  

ಅದೇ ಇಂಗ್ಲೀಷ್ ಭಾಷೆಯ ಪದ್ಯ

Rain rain go away,                                     come again  another day,                      daddy wants to Play.                            ಮಳೆಯನ್ನ ಹೋಗು ಎನ್ನುತ್ತದೆ... ಕಾರಣ ಅಪ್ಪ ಆಡಲು ಬಯಸುತ್ತಾನೆ. ಎಲ್ಲೋ ಸ್ವಾರ್ಥ ತುಂಬಿದೆ ಎನಿಸುವುದಿಲ್ಲವೇ...

ಹೌದು ಸ್ವಾರ್ಥವೇ. ನಮ್ಮ ಕೆಲಸಕ್ಕೆ, ಕಾರ್ಯಕ್ರಮಗಳಿಗೆ, ಪ್ರಯಾಣಕ್ಕೆ ತೊಂದರೆಯಾಗುತ್ತದೆ ಎನ್ನುವಾಗ ಮಳೆ ಬೇಡ ಎಂದು ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯ. 

ಮಳೆ ಬಂತು ಮಳೆ ಒಂದು ಚಲನಚಿತ್ರ. ಇದರಲ್ಲಿನ ನನ್ನ ಭಾಗವಹಿಸುವಿಕೆ ಸ್ಮರಣೀಯ. ಈ ಚಲನಚಿತ್ರದ ತಯಾರಿಕೆಯ ವೇಳೆ ಉಪಯೋಗಿಸಿದ ಕೃತಕ ಮೊಸಳೆಯನ್ನು ಮಾಡುವಾಗಿನ ಸವಾಲುಗಳು, ಅದನ್ನು ಎದುರಿಸಿ ಬಹುಮಟ್ಟಿಗೆ ಸಫಲತೆ ಪಡೆದದ್ದು ಹೆಮ್ಮೆ ಎನಿಸುತ್ತದೆ.  ಒಂದು ವಾರದ ಕಾಲ shooting  ನಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆಯಲ್ಲಿ ಕಳೆದ ಸಮಯ ತುಂಬಾ ತ್ರಾಸದಾಯಕವಾಗಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಕರೆದೊಯ್ಯುತ್ತಿದ್ದ, ಸಮಯ ಸಮಯಕ್ಕೆ ಊಟ ತಿಂಡಿ ಪಾನೀಯಗಳನ್ನು ಕೊಡುತ್ತಿದ್ದ, ಆದರೆ ಮಾಡಲು ಏನೂ ಕೆಲಸವಿಲ್ಲದೆ ಕಾಲಹರಣ ಮಾಡುವುದು ಒಂದು ಶಿಕ್ಷೆ ಎನಿಸಿದ್ದು ಆಗಲೇ. ಹತ್ತು ನಿಮಿಷ ಕಾಲದ ಶೂಟಿಂಗಿಗೆ ತಯಾರಿ ಮಾಡಲು ಗಂಟೆಗಳು ತೆಗೆದುಕೊಳ್ಳುತ್ತಿದ್ದ ಅವರ ಕಾರ್ಯ ವೈಖರಿಯನ್ನು ನೋಡುವ ಕುತೂಹಲ ಒಂದೆರಡು ದಿನ ಇದ್ದರೂ ನಂತರ ನಿರಾಸಕ್ತಿ. ಸಿನಿಮಾದವರ ಆ ಜೀವನಶೈಲಿಯೇ ವಿಶಿಷ್ಟ. ಬಹಳಷ್ಟು ಸಿನಿಮಾ ಕಲಾವಿದರನ್ನು ನೋಡುವ ಅವಕಾಶ ಸಿಕ್ಕಿತ್ತು. ಕೃತಕವಾಗಿ ಮಳೆ ತರಿಸಲು, ನೀರನ್ನು ಪಂಪ್ ಮೂಲಕ ಮೇಲಕ್ಕೆ ಹಾರಿಸಿ ಮಳೆಯ ಅನುಭವವನ್ನು ಚಿತ್ರೀಕರಿಸಿದ್ದು, ಚಲನಚಿತ್ರ ತಯಾರಿಕೆಯಲ್ಲಿ ಇರುವ ಸವಾಲುಗಳು, ಅದಕ್ಕೆ ಅವರು ಕಂಡುಕೊಂಡ  ಪರಿಹಾರಗಳು, ಸಿನಿಮಾ ನೋಡುವ ಸುಮಾರು 100 ರಿಂದ150 ನಿಮಿಷಗಳ ಕಾಲದಲ್ಲಿ ನಮ್ಮ ಅರಿವಿಗೆ ಬರಲು ಸಾಧ್ಯವೇ ಇಲ್ಲ.  

ಮಳೆಗೂ ಸಿನಿಮಾಗು ವಿಶೇಷ ನಂಟು. ಹೇಗೋ ಮಾಡಿ ಒಂದು ಮಳೆಯ ದೃಶ್ಯವನ್ನು ಸೃಷ್ಟಿ ಮಾಡಿ, ನಾಯಕ ನಾಯಕಿಯರನ್ನು.. ಕೆಲವು ಸಲ ಸಹ ನಟಿಯರನ್ನು, ಮಳೆಯಲ್ಲಿ ಒದ್ದೆ ಮಾಡಿ ರೋಚಕವಾಗಿ ತೋರಿಸುವುದು ಒಂದು ಪರಿಪಾಠ.

ಚಿಕ್ಕಂದಿನಲ್ಲಿ ತುಂಬಾ ಇಷ್ಟವಾಗಿದ್ದು, ಮಕ್ಕಳ ರಾಜ್ಯ ಚಿತ್ರದ ಮಳೆಯೇ ಸುರಿದು ಬಾ ಎಂದು ಒಂದು ಮಗು ರಾಜನ ಆಸ್ಥಾನದಲ್ಲಿ ಹಾಡಿ ಮಳೆ ತರಿಸುವ ದೃಶ್ಯ.

ಹದಿ ವಯಸ್ಸಿನಲ್ಲಿ ನೋಡಿದ ಶ್ರೀ 420 ಹಿಂದಿ ಚಿತ್ರದ ಮಳೆಯ ದೃಶ್ಯ. ನಾಯಕ ನಾಯಕಿಯರ ನವಿರಾದ ಪ್ರೇಮ ಪ್ರದರ್ಶನ. ನಂತರದ ಕೊನೆಯ ಸಾಲುಗಳು ಮೈ ರಹೂಂಗಿ, ತುಮ್ ನ  ರಹೋಗೆ , ಫಿರ್ ಭಿ ರಹೇಂಗೆ ನಿಶಾನಿಯಾ... ಎಂದು ಹೇಳುವಾಗ ಮೂವರು ಮಕ್ಕಳು ಮಳೆಯಲ್ಲಿ ನಡೆಯುತ್ತಾ ಹೋಗುತ್ತಿರುವ ದೃಶ್ಯ ನನಗೆ ತುಂಬಾ ಇಷ್ಟವಾದದ್ದು.

ಮಳೆಯಲ್ಲಿ ನೆನೆಯುತ್ತಾ ಹಾಡುವ ಛಳಿ ಛಳಿ ತಾಳೆನು ಈ  ಛಳಿಯಾ ಹಾಡು ಸಮುದಾಯವನ್ನು ಹುಚ್ಚೆಬ್ಬಿಸಿತ್ತು ಎಂದರೂ ಸರಿಯೇ.

ಮಳೆ ಬಂತೂ.. ಮಳೆ... ಮಳೆ ಬಂತೂ...      ಸ್ವಾತಿಮುತ್ತಿನ ಮಳೆ ಹನಿಯೇ ಮೆಲ್ಲಾ ಮೆಲ್ಲನೆ ಧರೆಗಿಳಿಯೇ...                                                     ಮಳೆ ನಿಂತು ಹೋದ ಮೇಲೆ.....                     ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...   ಇವೆಲ್ಲ ನಾನು ಕೇಳಿದ  ಕೆಲ ಹಾಡುಗಳು.

ಮುಂಗಾರು ಮಳೆ ಆಗಿನ ಕಾಲಘಟ್ಟದಲ್ಲಿ ಭರ್ಜರಿ ಸದ್ದು ಮಾಡಿದ ಯಶಸ್ವಿ ಚಿತ್ರ.

ಜಾನಪದರಂತೂ ಮಳೆಯನ್ನು ಕೊಂಡಾಡಿದ್ದಾರೆ. ಮಾಯದಂತ ಮಳೆ ಬಂತಣ್ಣಾ....ಮದಗಾದ ಕೆರೆಗೆ... ಬಹುಜನಪ್ರಿಯ ಹಾಡು.

ಇರಬೇಕು ಇರುವಂತೆ ಮರೆತು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ..

ಹೆಚ್. ಎಸ್ ವೆಂಕಟೇಶಮೂರ್ತಿಯವರ ಈ ಸಾಲುಗಳು ಜೀವನ ಹೇಗೆ ಇರಬೇಕು ಎಂದು ಸೂಚಿಸಿದ... ನನಗೆ ತುಂಬಾ ಇಷ್ಟವಾದ ಕವನ.

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ..  ಈ ಕವನವೂ ಇಷ್ಟವೇ.

ಒಂದೊಂದು ಮಳೆ ನಕ್ಷತ್ರದ ಹೆಸರಿಗೂ, ಆ ಮಳೆಯ ಗುಣವನ್ನು ತೋರಿಸುವ ಕನ್ನಡದ ಸಾಲುಗಳುಂಟು. ನನಗೆ ನೆನಪಿರುವುದು: ಆರಿದ್ರ ಮಳೆ ಆಗದಿದ್ದರೆ ದರಿದ್ರ.      ಸ್ವಾತಿ ಮಳೆ  ಹೇತೇನಂದ್ರು ಬಿಡದು..

ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಎನ್ನುವುದು ಒಂದು ನುಡಿಗಟ್ಟು, ಎಷ್ಟು ಸತ್ಯ ಅಲ್ವಾ? ಇದು ಆಗಿಹೋದ ವಿಷಯಗಳ ಬಗ್ಗೆ ಕೊರಗುವ ಮನಸ್ಥಿತಿಯನ್ನು ತೋರಿಸುತ್ತದೆ.

ಮಳೆ ಬರುವಾಗ ಮರದ ಕೆಳಗೆ ನಿಲ್ಲಬೇಡ ಎನ್ನುವುದು ಸಹ ಸರಿಯಾದ ಚಿಂತನೆಯೇ. ಮರದ ಕೊಂಬೆ ಬಿದ್ದು ಗಾಯಗೊಂಡವರಿದ್ದಾರೆ, ಸಿಡಿಲು ಬಡಿದು ಸತ್ತವರೂ ಇದ್ದಾರೆ.

ಮೂಢನಂಬಿಕೆಗಳನ್ನು ಬದಿಗಿಟ್ಟು ತಾರ್ಕಿಕವಾಗಿ, ವೈಜ್ಞಾನಿಕವಾಗಿ ಚಿಂತನೆ ಮಾಡಲು ಪ್ರೋತ್ಸಾಹಿಸಬೇಕು ಎಂಬ ಸಲಹೆ ನಮ್ಮ ಸಂವಿಧಾನದಲ್ಲಿ ಇದ್ದರೂ ಸಹ, ಮಳೆಯ ಅಭಾವ ಹೆಚ್ಚಾದಾಗ, ಸರ್ಕಾರದ ವತಿಯಿಂದ ಮಾಡಿಸಿದ ಪರ್ಜನ್ಯ ಜಪ ಮತ್ತು ಯಾಗಗಳು, ದೇವರ ಮೇಲಿನ ನಂಬಿಕೆಯನ್ನು ದೃಢೀಕರಿಸುತ್ತವೆ. ಇಲ್ಲಿ ಸರಿ ತಪ್ಪಿನ ಪ್ರಶ್ನೆ ಇಲ್ಲ.

ಇದರ ಜೊತೆ ಜೊತೆಗೆ ಮೋಡಬಿತ್ತನೆ ಎಂಬ ಕೃತಕ ಮಳೆ ಸುರಿಸುವ ಪ್ರಯೋಗವನ್ನೂ ಸಹ ಮಾಡಲಾಯಿತು ಎನ್ನುವುದು ಅಷ್ಟೇ ಸತ್ಯ. ಅಂತಿಮ ಗುರಿ ನೀರಿಗಾಗಿನ ಹಾಹಾಕಾರವನ್ನು ತಪ್ಪಿಸುವುದು ಮಾತ್ರ.

ಅತಿವೃಷ್ಟಿ, ಅನಾವೃಷ್ಟಿ ಎರಡು ವೈಪರೀತ್ಯಗಳು. ಅತಿಯಾಗಿ ಮಳೆ ಬಂದು, ಪ್ರವಾಹ ರೂಪದ ಅನಾಹುತಗಳು ಒಂದು ಕಡೆಯಾದರೆ... ಮಳೆಯೇ ಇಲ್ಲದೆ ನೀರಿಗೆ ಪರದಾಡುವುದು ಮತ್ತೊಂದು ಕಡೆ. ಇದು ಪ್ರಕೃತಿಯ ವಿಕೋಪ.

ಬರಗಾಲದ ಕ್ರೂರ ಮುಖವನ್ನು ನೋಡಿದ್ದು, ಸ್ವಲ್ಪಮಟ್ಟಿಗೆ ಅನುಭವಿಸಿದ್ದು, ನಾನು ಶಹಾಬಾದಿನಲ್ಲಿದ್ದ 70ರ ದಶಕದ ಮೊದಲಲ್ಲಿ.

ಚಿಕ್ಕಂದಿನ ಮಳೆ ಹನಿಯನ್ನು ಕೈಯಲ್ಲಿ    ಹಿಡಿಯುವ ಆಟ, ಹರಿವ ನೀರನ್ನೇ ನೋಡುತ್ತಾ ಕಳೆದ ಕ್ಷಣಗಳು, ಕೊಚ್ಚಿ ಹೋಗುತ್ತಿದ್ದ ಕಟ್ಟಿರುವೆಯನ್ನು ರಕ್ಷಿಸಲು ಹೋಗಿ, ಕೈ ಕಚ್ಚಿಸಿಕೊಂಡಿದ್ದು, ಕಾಗದದ ದೋಣಿ ಮಾಡಿಬಿಟ್ಟಿದ್ದು, ಆಟಕ್ಕಾಗಿ ಕಟ್ಟಿದ ಮನೆ ಮಳೆಯಲ್ಲಿ ಕೊಚ್ಚಿ ಹೋದಾಗ ಅತ್ತಿದ್ದು ಎಲ್ಲವೂ ಸವಿನೆನಪುಗಳೇ.

ಭೂಗೋಳ ಪಾಠದಲ್ಲಿ, ನಾನು ಕಲಿತದ್ದು... ಭಾರತದಲ್ಲಿ ಅತ್ಯಧಿಕವಾಗಿ ಮಳೆಯಾಗುವ ಜಾಗ ಅಂದಿನ ಅಸ್ಸಾಂನ ಚಿರಾಪುಂಜಿ. ಇದು ಈಗ ಮೇಘಾಲಯ ರಾಜ್ಯದ ಭಾಗ. ಆಗುಂಬೆ ನಮ್ಮ ರಾಜ್ಯದ ಚಿರಾಪುಂಜಿ ಎಂದು ಹೆಸರು ಪಡೆದಿತ್ತು.

ಗುಡುಗು ಮಿಂಚು, ಭಯ ಮೂಡಿಸುತ್ತಿದ್ದವು... ಅದರಲ್ಲೂ ನಡುರಾತ್ರಿಯ ಸಿಡಿಲ ಶಬ್ದದ ಪರಿಣಾಮ ಹೇಳತಿರದು. ಅಮ್ಮನ ಅಪ್ಪುಗೆಯೇ ಆ ಸಮಯದ ಶ್ರೀರಕ್ಷೆ.

ಇಷ್ಟು ಇಂಚು/ ಮಿಲಿ ಮೀಟರ್ ಮಳೆಯಾಗಿದೆ ಎಂದು ಹೇಳಿ ಮಳೆಯ ಪ್ರಮಾಣವನ್ನು ಸೂಚಿಸಲಾಗುತ್ತದೆ. ನನಗೆ ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಮಳೆಯ ಸಮಯದಲ್ಲಿ ಒಂದು ಅಗಲವಾದ ತಟ್ಟೆಯನ್ನು ಇಟ್ಟು, ಅದರಲ್ಲಿ ತುಂಬಿದ ಮಳೆಯ ನೀರನ್ನು ಅಳತೆ ಮಾಡುವ ಸಣ್ಣ ಪ್ರಯೋಗದಿಂದ ಅರ್ಥವಾಯಿತು... ಇದನ್ನು ಯಾರು ಮಾಡಿ ನನಗೆ ತೋರಿಸಿದರೋ ನೆನಪಿಲ್ಲ.

ಚಾರಣಕ್ಕೆ ಹೋದ ಸಮಯದಲ್ಲಿ, ಮಡಿಕೇರಿ ಬಳಿಯ ನಾಪೋಕ್ಲು ಎಂಬಲ್ಲಿ ನೋಡಿದ ಮಳೆಯನ್ನು ಅಳೆಯುವ ಕೇಂದ್ರ ಖುಷಿ ಕೊಟ್ಟಿತ್ತು.

ಬಹು ಜೋರಾಗಿ ಆಲಿಕಲ್ಲು ಮಳೆ ಬಿದ್ದು, ಮೈಸೂರು ರಸ್ತೆಯ BHEL ಕಾರ್ಖಾನೆಯ ಚಾವಣಿಯಲ್ಲಿ ಆಗಿದ್ದ ತೂತುಗಳು, ಮುರಿದು ಬಿದ್ದ Asbestos sheet ಗಳು, ಆಗಿದ್ದ ಅನಾಹುತಗಳನ್ನು ನೋಡಿದಾಗ ಮಳೆಯ ಶಕ್ತಿಯನ್ನು ಊಹಿಸದಾಗಿದ್ದೆ.

ಮಳೆಗಾಲದಲ್ಲಿ ಮೂಡುವ ಕಾಮನಬಿಲ್ಲನ್ನು ನೋಡುವ ಆಸೆ, ನನ್ನಲ್ಲಿ ಈಗಲೂ ತುಂಬಾ ಜೀವಂತವಾಗಿದೆ.

ಮಳೆ ಹಾಗೂ ಬಿಸಿಲು ಎರಡು ಒಟ್ಟಿಗೆ ಬಂದಾಗ, ನಾಯಿಗೂ ನರಿಗೂ ಮದುವೆ ಎಂದು ಚಿಕ್ಕಂದಿನಲ್ಲಿ ಮಾತಾಡಿಕೊಳ್ಳುತ್ತಿದ್ದದ್ದು ನೆನಪಿದೆ... ಆದರೆ ಅದರ ಹಿಂದಿನ ಕಾರಣ ಏನೆಂದು ತಿಳಿಯದು.

ಸ್ವಂತ ಮನೆ ವಿಶೇಷ ಆಸ್ಥೆಯಿಂದ ಕಟ್ಟಿಸಿ,  ಮೊದಲ ಮಳೆಗಾಲದಲ್ಲಿ ಮನೆಗೆ ಬಂದವರೊಡನೆ ಬಿಸಿ ಬಿಸಿ ಪಕೋಡವನ್ನು ತಿನ್ನುತ್ತಾ ಹರಟೆ ಹೊಡೆಯುತ್ತಾ ಕುಳಿತಿದ್ದ ಸಮಯದಲ್ಲಿ, ಮನೆಯೊಳಗೆ ಬಂದಿದ್ದೇ ಮಳೆ ನೀರಿನ ಪುಟ್ಟ ಪ್ರವಾಹ. ಮಳೆ ನೀರು ಮನೆಯೊಳಗೆ ಬರುವುದನ್ನು ತಡೆಯುವ ಕಾಯಕ ಒಂದಾದರೆ, ಬಂದಿರುವ ನೀರನ್ನು ಹೊರ ಹಾಕುವುದು ದೊಡ್ಡ ಸಾಹಸವೇ ಆಯಿತು. ಮನೆ ಕಟ್ಟುವಾಗ ಯೋಚಿಸದಿದ್ದ / ಮನಸ್ಸಿಗೆ ಬರದಿದ್ದ ಒಂದು ವಿಷಯದಿಂದ ಆದ ಪರಿಪಾಟಲಿಗೆ ಸೂಕ್ತ ಪರಿಹಾರವನ್ನು ಕಾಣಲೇ ಬೇಕಾಯಿತು.

ಆಹಾ ಮಳೆ, ಎಷ್ಟೊಂದು ಸಿಹಿ ಕಹಿ ನೆನಪುಗಳನ್ನು ಮುಂದೆ ತಂದೆ.

ನಿನಗಿದೋ ನನ್ನ ನಮಸ್ಕಾರ. 

ಡಿ ಸಿ  ರಂಗನಾಥ ರಾವ್

9741128413


ಅಡಿ ಬರಹ:

ಯಾಕೋ ಕಾಣೆ, ಹಳೆಯ ಸ್ನೇಹಿತರ  ಅಗಲಿಕೆಯ ಸುದ್ದಿ, ಹಳೆಯದಾದ ಮೇಲೆ ಸಿಗುತ್ತಿದೆ. ಹೈಸ್ಕೂಲ್ ಗೆಳೆಯ ಟಿ ಆರ್ ಶ್ರೀನಿವಾಸ ರಾವ್, ಬಗ್ಗೆ ವಿಚಾರಿಸದಾಗ ಆತ ಸತ್ತು ದಶಕಗಳೇ ಕಳೆದಿತ್ತು. ಕೆಲವು ದಿನಗಳ ಹಿಂದೆ ಶಹಾಬಾದಿನ ಸ್ನೇಹಿತ ಹನುಮಂತರಾವ್ ಫೋನ್ ಮಾಡಿದಾಗ, ವಿಚಾರಿಸಿದ್ದು ಗೆಳೆಯ ಶಂಕರ್ ಲಿಂಗ ಪ್ರಭು ಬಗ್ಗೆ. ಆತ ಸತ್ತು ವರ್ಷವೇ ಕಳೆದಿತ್ತು. ಮೊನ್ನೆ ನನ್ನ ದೊಡ್ಡಜಾಲದ ಬಾಲ್ಯದ ಗೆಳೆಯ SL ಕಾಂತನ್ ನ ಜೊತೆ ಮಾತನಾಡಲೆಂದು ಕರೆ ಮಾಡಿದೆ, ದುರ್ದೈವ ವಶಾತ್ ಆತ ಸತ್ತು 10 ತಿಂಗಳಾಗಿದೆ. ಯಾಕೆ ಹೀಗೆ? ಬಹುಶಃ, ಸುದ್ದಿ ನಮಗೆ ತಿಳಿಸಲು, ಮನೆಯವರಿಗೆ ಹೊಳೆದೇ ಇಲ್ಲದಿರಬಹುದು. ನಮ್ಮದು ಸೀಮಿತ ಒಡನಾಟದ ಕಾರಣವೋ ಏನೋ.

ಪ್ರಾಯಶಃ, ಸತ್ತ ವ್ಯಕ್ತಿಯ  ಫೋನ್ ನಲ್ಲಿ ಇರುವ ಎಲ್ಲ ನಂಬರಿಗೂ ವಿಷಯ ತಿಳಿಸುವ ಪರಿಪಾಠವನ್ನು ನಾವು ಬೆಳೆಸಿಕೊಂಡರೆ ಒಳ್ಳೆಯದೇನೋ.

Comments

  1. ನಿಮ್ಮ ಜೀವನದ ನೆನಪಿನ ಮಳೆಯ ಸಿಂಚನ ಓದಲು ತುಂಬಾ ತಂಪಾಗಿದೆ.

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ