ಹೌದು ಸ್ವಾಮಿ ನಾವಿರೋದೆ ಹೀಗೆ

 


"ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಈ ಮಾತು ಕಿವಿಗೆ ಬಿದ್ದಾಗ, ಆರ್ತನಾದ ಅನಿಸಿತು. ತಿರುಗಿ ನೋಡಿದಾಗ ಕಂಡದ್ದು, ಕೃಶ ದೇಹದ 75 ವರ್ಷದ ಆಸುಪಾಸಿನ ಒಬ್ಬ ಹಿರಿಯರು. ಉದ್ಯಾನವನದಲ್ಲಿ ನಿಧಾನವಾಗಿ ನಡೆಯುತ್ತಿದ್ದರು, ಕಿವಿಯ ಹತ್ತಿರ ಹಿಡಿದ ಕೈಯಲ್ಲಿ ಮೊಬೈಲ್ ಫೋನ್, ಬಿಳಿ ಪಂಚೆ ಶರ್ಟು, ಕಾಲಲ್ಲಿ ಶೂ. ಏನೋ ನೋವಿರಬೇಕು ಅಂತ ಭಾವಿಸಿದೆ. ಮತ್ತೆರಡು ದಿನದ ನಂತರ ಆ  ಹಿರಿಯರು ಕಂಡರು. ಏರು ದಾರಿಯಲ್ಲಿ ನಡೆಯುತ್ತಿದ್ದೆವು. ಸ್ವಲ್ಪ ದೂರ ಸಾಗಿದ ನಂತರ, ಸುಧಾರಿಸಿಕೊಳ್ಳುವ ರೀತಿ ನಿಂತು "ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಎಂದು ಹೇಳಿದ್ದು ಗಮನಿಸಿದೆ. ಅದರ ಹಿಂದೆ ನೋವಿತ್ತು. ವಯೋಸಹಜ ಸುಸ್ತೂ ಇತ್ತು.

ಸಂಕಟ ಬಂದಾಗ ವೆಂಕಟರಮಣ ಎನ್ನುವ ನಾಣ್ಣುಡಿ ಅಕ್ಷರಶಃ ಸತ್ಯಒಬ್ಬೊಬ್ಬರ ಸಂಕಟ ಒಂದೊಂದು, ಅದಕ್ಕೆ ತಕ್ಕ ಹಾಗೆ ದೇವರಲ್ಲಿ ಬೇಡಿಕೆ... ದೇವರು ಬೇಡಿಕೆ ಈಡೇರಿಸ್ತಾನೋ ಇಲ್ಲವೋ... ಅವನಿಗೇ ಗೊತ್ತು... ನಾವ್ ಮಾತ್ರ ಬೇಡಿಕೊಳ್ಳುವುದು ಬಿಡಲ್ಲ.

ದೇವರನ್ನು ನಂಬುವ ಆಸ್ತಿಕರದು ಈ ಬಗೆಯಾದರೆ, ದೇವರನ್ನೇ ನಂಬದ ನಾಸ್ತಿಕರೂ ಇದ್ದಾರೆ. ತಮ್ಮ ಹತ್ತು ಜನ್ಮದಲ್ಲಿ ದೇವರನ್ನು ದ್ವೇಷಿಸುತ್ತಿದ್ದ ಜಯ ವಿಜಯರು ಇದ್ದರೆಂಬುದು ದಶಾವತಾರದ ಕಥೆ.

ನನ್ನೂರು ದೊಡ್ಡಜಾಲದಲ್ಲಿ, ಚಿಕ್ಕಂದಿನಲ್ಲಿ ನೋಡಿದ್ದು...  ಮುನೀರಣ್ಣ ಒಬ್ಬ ಕೆಳ ಜಾತಿಯವರು, ಜೊತೆಗೆ ಕುಷ್ಟರೋಗಿ. ಕೈಬೆರಳುಗಳೆಲ್ಲ ಮುರುಟಿ ಹೋಗಿದ್ದವು. ಸಾಮಾನ್ಯವಾಗಿ ಮುನೀರಣ್ಣ ಮೌನೀರಣ್ಣನೇ.. ಮಾತು ಕಡಿಮೆ, ಬೇರೆಯವರನ್ನು ಕಂಡರೆ ಗೌರವ, ಮೃದು ಸ್ವಭಾವದ ಮನುಷ್ಯ.  ಹೆಂಡ ಕುಡಿಯುವ ಅಭ್ಯಾಸ. ಕೆಲವೊಮ್ಮೆ ಸ್ವಲ್ಪ ಜಾಸ್ತಿಯೇ ಆಗಿರುತ್ತಿತ್ತು.. ಆಗ ನೋಡಬೇಕು ಮುನೀರಣ್ಣನ ಪ್ರತಾಪ. ಜೋರಾಗಿ ಹಾಡು ಹೇಳುವುದು, ಏನು ಬೇಕಾದರೂ ಮಾತಾಡುವುದು, ಯಾರಿಗೂ ಕ್ಯಾರೇ ಎನ್ನದ ಗತ್ತು. ಹೀಗೊಂದು ದಿನ, ನಮ್ಮ ಮನೆ ಬಳಿಯ ಬೀದಿಯ ಮಧ್ಯದಲ್ಲಿ  ಬಂದು ಕೂತ ಮುನೀರಣ್ಣ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ. ಅದೇ ದಾರಿಯಲ್ಲಿ ಬಂದ ಎತ್ತಿನಗಾಡಿಗೆ ಜಾಗ ಬಿಡಲಿಲ್ಲ. ಒಳ್ಳೆಯ ಮಾತಿಗೆ ಬಗ್ಗದ ಮುನೀರಣ್ಣ, ಘಟ್ಟಿಸಿ ಮಾತನಾಡಿದಾಗ ಕೊಟ್ಟ ಉತ್ತರ. " ನೇನು ಹೈ ರೋಡ್ಲಾ ಕೂಚೋನುಂಡಾನು ಪೋವಯ್ಯ.. ನೋವೇನಡುಗೇದಿ" ಅಂದರೆ ನಾನು high road ( ರಾಜಬೀದಿ... ಸರ್ಕಾರದ ರಸ್ತೆ) ನಲ್ಲಿ ಕೂತಿದ್ದೀನಿ..... ನೀನೇನ್ ಕೇಳೋದು.. ಮತ್ತಿನಲ್ಲಿದ್ದಾಗ ಇರೋದು ಹೀಗೆ ಅಲ್ವೇ?

ಇನ್ನೊಬ್ಬ ವ್ಯಕ್ತಿ, ಹೆಸರು ನೆನಪಿಗೆ ಬರದು... ಏನೂ ಕೆಲಸ ಮಾಡದ ಸೋಮಾರಿ, ಆದರೆ ಶೋಕಿಲಾಲ. ಪರಾವಲಂಬಿ. ಮಾತನಾಡುವ ಗತ್ತು ಮಾತ್ರ ಯಾವುದೇ ಬುದ್ಧಿವಂತನಿಗೆ, ಹಣವಂತನಿಗೆ ಕಿಂಚಿತ್ತು ಕಡಿಮೆ ಇಲ್ಲ. ಯಾವುದೋ ವಾಗ್ವಾದ, ಹಣದ ಖರ್ಚಿನ ಬಾಬತ್ತು.. ಈತನ ಮಾತಿನ ಬಾಣ ಹೊರಬಿತ್ತು " ಲಚ್ಚ (ಕ್ಷ) ಖರ್ಚಾಗಲಿ ಬಿಡು ನಾನು ಮಾಡ್ತೀನಿ..." ಜಂಭಕ್ಕೆ ಕೊರತೆ ಇಲ್ಲ. ವಾಸ್ತವವಾಗಿ  ಕೆಲವೇ ಕ್ಷಣಗಳ ನಂತರ ಎದುರಿನವರ ಬಳಿ ಕೇಳಿದ್ದು " ಒಂದು ಬೀಡಿ ಕೊಡು".  ಆತ ಕೊಟ್ಟ ಅರ್ಧ ಸೇದಿ ಆರಿಸಿ, ಕಿವಿಯ ಬಳಿ ಇಟ್ಟಿದ್ದ ಬೀಡಿಯನ್ನು ಪ್ರಸಾದಂತೆ ಸ್ವೀಕರಿಸಿ ಬೆಂಕಿ ಪಟ್ಟಣಕ್ಕಾಗಿ ಬೇರೆಯವರ ಕೈಯೊಡ್ಡಿದ್ದು. ಅವರೇ ಹಾಗೆ.

ಜಯಸಿಂಹ, ಚಾರಣದ ಸಮಯದಲ್ಲಿ ಪರಿಚಿತನಾದವ. ಒಳ್ಳೆಯ ಮಾತುಗಾರ, ಹಾಸ್ಯ ಪ್ರವೃತ್ತಿ ಉಳ್ಳವ.  ನಮ್ಮಿಬ್ಬರ ಮಾತುಕತೆ ಸಾಧಾರಣ ಹರಟೆಯಿಂದ ಹಿಡಿದು ಸಾಹಿತ್ಯದವರೆಗೂ ಪಸರಿಸಿದರೂ, ಘನ ಗಂಭೀರ ವಿಷಯದಲ್ಲೂ ಒಂದಷ್ಟು ಹಾಸ್ಯ ಕಂಡು ನಗುವ ಮನೋಭಾವ. ಸತ್ತಾಗ ಕೊಡುವ ಧರ್ಮೋದಕದ ವಿಚಾರವಾಗಿ ಮಾತಾಡಿದಾಗಲೂ ಹಾಸ್ಯ ಇಣುಕಿದ್ದು ಉಂಟು. ನಮ್ಮ ಒಡನಾಟ ಇರೋದೆ ಹಾಗೆ.

ಜಯಸಿಂಹ ಇಷ್ಟರಲ್ಲೇ ತಾತನಾಗುವ ಖುಷಿಯಲ್ಲಿದ್ದಾನೆ. ಮುಂದಿನ ಆಗುಹೋಗುಗಳ ವಿಷಯ ಮಾತನಾಡುತ್ತಾ, ಅವನ ಅಮ್ಮ ಬಂದಿರುವ ವಿಷಯ ಹೇಳಿದ. ಅಮ್ಮನಿಗೆ ಮಗಳ ಮಗಳ ಬಾಣಂತನ, ಹಾಗೂ ಮಗನ ಸೊಸೆಯ ಬಾಣಂತನದಲ್ಲಿ ಭಾಗಿಯಾಗುವ, ಮರಿಮಗನನ್ನು ನೋಡುವ ಸಡಗರ ಸಂಭ್ರಮ.  ಸೊಸೆ ಬಾಣಂತನಕ್ಕಾಗಿ ತವರಿಗೆ ಹೋಗುವ ವಿಚಾರಕ್ಕೆ ಹೇಳಿದ್ದು.." ಅವರ (ಸೊಸೆಯ) ಅಮ್ಮನ ತವರಿಗೆ ಬಂದಿದ್ದಾಳೆ"....ವಾಸ್ತವದಲ್ಲಿ ತನ್ನ ಮನೆಯಲ್ಲೇ (ಗಂಡನ ಜೊತೆ) ಇದ್ದಾಳೆ.                  (ಗಲಿಬಿಲಿ ಆಗಿದ್ರೆ ಕ್ಷಮಿಸಿ) 

ತಂಗಿಯ ಮಗಳನ್ನೇ ಸೊಸೆಯಾಗಿ ಮಾಡಿಕೊಂಡ ಕಾರಣ, ಅನುಕೂಲಕ್ಕಾಗಿ, ತಂಗಿಯೂ (ಬೀಗಿತ್ತಿ ಸಹ) ಇವರ ಮನೆಗೆ ಬಂದಿದ್ದಾಳೆ, ಅದು ಅವಳ ತವರು ಮನೆಯೂ ಹೌದು. ಇದು ನಮ್ಮ ಕೂಡು ಕುಟುಂಬದ ವಿಶೇಷತೆ.

ಬಹು ಹಿಂದೆ, ಚಿತ್ರದುರ್ಗದಲ್ಲಿ ಒಂದು ಮದುವೆಗೆ ಹೆಣ್ಣಿನ ಕಡೆಯವನಾಗಿ ಹೋಗಿದ್ದೆ. ಅಂದಿನ ಕಾಲಕ್ಕೆ ಹೆಣ್ಣಿನ ಕಡೆಯವರಿಗೆ ಕೆಲಸ ಜಾಸ್ತಿ, ಹಾಗೇ ಸಹಾಯದ ಅವಶ್ಯಕತೆಯೂ. 8 ಯುವಕರ ಒಂದು ಗುಂಪು, ಛತ್ರಕ್ಕೆ ಸಾಮಾನು ಸಾಗಿಸುವ ಸಮಯಕ್ಕೆ ಹಾಜರಾಗಿ, ಅಲ್ಲಿಗೆ ಹೋಗಿ ಬೇಕಾದ ಸ್ಥಳಕ್ಕೆ ಅದನ್ನು ಸೇರಿಸಿ, ಕಾಫಿ ಕುಡಿದು, ಎಲ್ಲರೊಂದಿಗೆ ತಮಾಷೆಯಾಗಿ ಮಾತಾಡುತ್ತಾ, ಇದ್ದವರು ಊಟದ ಸಮಯದಲ್ಲಿ  ನಾಪತ್ತೆ. ಮಾರನೆಯ ಬೆಳಿಗ್ಗೆ ಎಲ್ಲರೂ ಕೆಲಸಕ್ಕೆ ಹಾಜರ್ ಅದೇ ಉತ್ಸಾಹದಿಂದ. ಹಿಂದಿನ ದಿನದ ಊಟದ ವಿಚಾರ ಮಾಡಿದಾಗ, ಇವತ್ತು ಒಟ್ಟಿಗೆ ಮಾಡೋಣ ಅನ್ನುವ ಸಮಜಾಯಿಷಿ. ನಂತರದ ಮಾತಿನಲ್ಲಿ ತಿಳಿದದ್ದು... ಪರಿಚಯದವರ ಯಾವುದೇ ಮದುವೆಯಾದರೂ,ಈ ಗುಂಪು ಎಲ್ಲ ಕೆಲಸಗಳನ್ನು ಮಾಡುವುದು, ಒಂದು ಊಟ,ಒಂದು ತಿಂಡಿ ಮಾತ್ರ ತಿನ್ನುವುದು. ಒಬ್ಬರು ಸೇರಿಸಿದ ಮಾತು...ಕಾಫಿಗೆ ಮಾತ್ರ ಯಾವ ಮಿತಿಯೂ ಇಲ್ಲ. ಅನುಕರಣೆ ಮಾಡಬೇಕಾದಂತದ್ದು.

ಈಗಂತೂ, ಕೈಯಲ್ಲಿ ಫೋನ್ ಇದ್ದರೆ ಕ್ಯಾಮರಾ ಇದ್ದಂತೆ... ಕೆಲವರಿಗೆ ಫೋಟೋ ತೆಗೆಯುವ ಹುಚ್ಚು. ಅಪಘಾತವಾಗಿದ್ದಾಗ ಸಹ, ಅವರ ಸಹಾಯಕ್ಕೆ ಹೋಗದೆ, ಆ ದೃಶ್ಯದ ಫೋಟೋ ತೆಗೆಯುವ ಅಗ್ಗದ ಮನಸ್ಸು... ಯಾಕೋ ಹಾಗೆ ಅವರು.... ನಾಕಾಣೆ.

ಕಲ್ಲ ನಾಗರ ಕಂಡರೆ ಹಾಲನೆರೆಯುವರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಇದು ವಸ್ತು ಸ್ಥಿತಿ.  ನೈವೇದ್ಯಕ್ಕಿಟ್ಟ ಹಣ್ಣು, ಕಾಯಿ, ಭಕ್ಷ್ಯ ಭೋಜ್ಯಗಳನ್ನು, ದೇವರೇನಾದರೂ ತಿಂದು ಖಾಲಿ ಮಾಡಿದರೆ,  ಮುಂದೆ ದೇವರಿಗೆ ನೈವೇದ್ಯವೇ ಇಡುವುದಿಲ್ಲ... ಇದು ವಾಸ್ತವ.

ಸ್ನೇಹಿತರ ಗುಂಪು, ಹರಟೆಯ ಸಮಯ.. ವಿಷಯ ರಸಿಕತೆ, ಕಾಮದ ಕಡೆಗೆ ಹೊರಳಿದೆ... ಯಾವ ಅಡೆತಡೆಯೂ ಇಲ್ಲದೆ ಮುಕ್ತವಾಗಿ  ಮಾತನಾಡುವ ಒಬ್ಬ, ಸಭ್ಯತೆಯ ಸೋಗಿನ ಹೊದಿಕೆ ಹೊದ್ದಿಸಿ, ವಿಷಯವನ್ನು ಮಾತನಾಡುವ ಇನ್ನೊಬ್ಬ, ಸಂಕೋಚದಿಂದ ಸುಮ್ಮನಿರುವಾತ ಮತ್ತೊಬ್ಬ, ಆನಂದಿಸಿ, ಮುಕ್ತವಾಗಿ ನಗುವ ಸಾಕಷ್ಟು ಜನ... ಇದೆಲ್ಲದರ ಮಧ್ಯೆ ಮನಸ್ಸಿನಲ್ಲಿ ಮಂಡಿಗೆ ತಿಂದು, ಹೊರನೋಟಕ್ಕೆ ಸಭ್ಯನಂತೆ ಕಾಣುವ ಮತ್ತೊಬ್ಬ... ನಾವಿರೋದೆ ಹೀಗೆ.

ನನ್ನ ಅಪ್ಪನ ಜೊತೆಯಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ, ರೈಲಿನಲ್ಲಿ ಬಂದು, ಪ್ಲಾಟ್ ಫಾರಂ ಮೆಟ್ಟಿಲುಗಳನ್ನು ಹತ್ತಿ ಇಳಿಯಲಾಗದ   ನನ್ನನ್ನು ಹೆಗಲ ಮೇಲೆ ಕೂಡಿಸಿಕೊಂಡ ಅಪ್ಪ. ಬಾಗಿಲ ಬಳಿ ಟಿಕೆಟ್ ಕೇಳಿದ TC ಗೆ  ಕೊಟ್ಟಿದ್ದು ಒಂದು ಟಿಕೆಟ್ ಮಾತ್ರ. ಮಾತಿನ ಮಧ್ಯೆ  ಜೈಲುಶಿಕ್ಷೆ ಪದ ಕೇಳಿದ ನನಗೆ ಭಯ. " ಕೊಟ್ಟು ಬಿಡು ಶಾಮಣ್ಣ...   " ಜೊತೆಗೆ ಇನ್ನೇನೇನು ಹೇಳಿದನೋ...

" ಇಷ್ಟು ಮಾತಾಡ್ತಾನೆ.. ನಾಲ್ಕು ವರ್ಷ ಅಂತೀರಲ್ರೀ..." ಅಂದಿದ್ದು ನೆನಪಿದೆ. ಕೊನೆ ಹೇಗಾಯ್ತೋ ನೆನಪಿಲ್ಲ...

ಟಿಕೆಟ್ ತೆಗೆದುಕೊಳ್ಳಲಾರದೆ ಸುಳ್ಳು ಹೇಳಿದ್ದಾ... ಅಥವಾ ನನ್ನ ವಯಸ್ಸು ಅಷ್ಟೇ ಇತ್ತಾ...??  ಸಮಯ ಸಂದರ್ಭ ತಿಳಿಯದೆ ಏನೋ ಮಾತಾಡುವ (ನನ್ನ ಅಂದಿನ ಮಾತು)  ಮುಗ್ಧತನವೋ / ಪೆದ್ದುತನವೋ.. ಹೀಗೂ ಉಂಟು.

ತಾವು ಯೋಚನೆ / ಯೋಜನೆ ಮಾಡಿದ್ದು ಸರಿ ಇತ್ತು.... ತಪ್ಪಾಗಲು / ಸೋಲಾಗಲು ಕಾರಣ ಬೇರೆಯವರು, ಎಂದು ಪ್ರತಿಪಾದಿಸುವವರು.. ಕುಣಿಯಲಾಗದವಳು ನೆಲ ಡೊಂಕು ಎಂದಂತೆ.

ಹೊಸ ವರ್ಷದಲ್ಲಿ, ಹೊಸ ನಿರ್ಧಾರ ಮಾಡಿ, ಹೊಸದನ್ನು ಕಲಿಯುವ, ಮಾಡುವ ಉತ್ಸಾಹ ಹಲವರಿಗೆ... ಅದನ್ನು ಮುಂದುವರಿಸಲಾಗದೆ ಕುಗ್ಗುವ ಕೆಲವರು...

ಬೇರೆಯವರ ಬಗ್ಗೆ ಗುಸು ಗುಸು ಪಿಸು ಪಿಸು ಮಾತನಾಡಿ ಮುಗಿದ ನಂತರ " ನಮಗ್ಯಾಕೆ ಬಿಡಿ... ಮಾಡಿದವರ ಪಾಪ ಆಡಿದವರ ಬಾಯಲ್ಲಿ.."  ಎಂದು ಹೇಳುವ ಜನರೂ ಉಂಟು. 

ಊಟ ಮಾಡುವಾಗ, ಅದನ್ನು ಗೌರವಭಾವದಿಂದ, ದೇವರ ಪ್ರಸಾದ ಎಂದು ಏನನ್ನೂ ಬಿಡದೆ ತಿನ್ನುವರು ಕೆಲಮಂದಿ. ಯಾವ ಪರಿವೆಯೂ ಇಲ್ಲದೆ, ಎಲೆಯಲ್ಲಿ ತುಂಬಿಸಿಕೊಂಡು, ತಿನ್ನಲಾಗದೆ ಬಿಡುವವರು ಬಹಳ ಮಂದಿ. ಹೀಗೂ ಉಂಟು.

ಯಾವ ಪ್ರಲೋಭನೆಯೂ ಇಲ್ಲದೆ, ಯಾರ ಅಭಿಪ್ರಾಯಕ್ಕೂ ತಲೆ ಕೊಡದೆ, ತಮ್ಮ ಮನಸ್ಸಿಗೊಪ್ಪುವ ರೀತಿ ಕೆಲಸ ಮಾಡುವ  ಸೇವಾ ಮನೋಭಾವವುಳ್ಳ ಕೆಲವರು.



 ತಿಮ್ಮೇಶ ಪ್ರಭು  ಉದ್ಯಾನವನದಲ್ಲಿ, ಚೆಲ್ಲಾಡಿದ್ದ  plastic ವಸ್ತುಗಳನ್ನು ಒಂದೆಡೆ ತಂದು ಹಾಕುವ ಹಿರಿಯ ಶ್ರೀಕಂಠಯ್ಯ ನವರು, 



ಹಾಗೇ ನಮ್ಮ ಮನೆಯ ಹತ್ತಿರದ ಉದ್ಯಾನವನದ ದೇವಸ್ಥಾನದ ಸುತ್ತ ಮುತ್ತ, ಕಸ ಗುಡಿಸಿ ಸ್ವಚ್ಛ ಮಾಡುವ ಹಿರಿಯರು ಒಬ್ಬರು... ನಾನು ಮೆಚ್ಚಿದವರು.

ರಾವಣನಿಗೆ 10 ತಲೆ ಇತ್ತು ಎಂಬುದು ಅವನಿಗಿದ್ದ  4 ವೇದಗಳ ಜ್ಞಾನ ಹಾಗೂ 6 ಶಾಸ್ತ್ರಗಳ ಪಾಂಡಿತ್ಯದ ಸೂಚಕ, ಹಾಗೂ ಅವನ ಅವನತಿಗೆ ಕಾರಣವಾದ 10 ದುರ್ಗುಣಗಳ ಸೂಚಕ ಎಂದು ಹೇಳುತ್ತಾರೆ. 

ಮೊಗ ನಾಲ್ಕು ನರನಿಗಂತೆಯೇ ನಾರಿಗಂ ಬಗೆಯ          ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು          ಬಗೆಯೆಷ್ಟೊ ಮೊಗವಷ್ಟು ಮಂಕುತಿಮ್ಮ...

ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಂತೆ, ನರನಿಗೂ, ನಾರಿಗೂ ನಾಲ್ಕು ಮುಖಗಳು. ಹೊರಜಗತ್ತಿಗೆ ಒಂದು ಮುಖ, ಮನೆಯ ಜನಗಳೊಂದಿಗೆ ಮತ್ತೊಂದು ಮುಖ, ಸಂತಸದ ಕ್ಷಣಗಳನ್ನು ಕಳೆಯುವಾಗ ಒಂದಾದರೆ, ತನ್ನ ಅಂತ ರಂಗದಲ್ಲಿ ಬೇರೆಯೇ ಮುಖ, ಹೀಗೆ ನಾಲ್ಕು ವಿವಿಧ ವ್ಯಕ್ತಿತ್ವಗಳು... ಬೇರೆ ಬೇರೆ ಸಮಯ ಸಂದರ್ಭಗಳಲ್ಲಿ, ಬೇರೆಯೇ ಮುಖಗಳು ಕಾಣಬಹುದು.

ಮನುಷ್ಯನ ಸಂಬಂಧಗಳು, ಮಾತುಕತೆಗಳು ಬಹು ಸಂಕೀರ್ಣ. ಹೊರ ನೋಟಕ್ಕೆ ಕಾಣುವುದೇ ಒಂದು, ತಾನಿರುವುದೇ ಒಂದು. ತನ್ನೆಲ್ಲ ಭಾವನೆಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಲಾರ. ಹಾಗೆ ಒಂದು ವಿಷಯವನ್ನು  ಬೇರೆ ಬೇರೆ ವ್ಯಕ್ತಿಗಳಿಗೆ ಹೇಳುವಾಗ, ಅವರಿಗೆ ಬೇಕಾದ ಮುಖವನ್ನು ಮಾತ್ರ ತೋರಿಸುವುದು. ಬೇರೆಯವರಿಗೆ ಏನೇ ಹೇಳಿದರೂ, ತನಗೆ ಮಾತ್ರ ಸತ್ಯದ ಅರಿವು...ಸುಳ್ಳು ಸಾಧ್ಯವಾಗದು. ಮನುಷ್ಯನ ಮನಸ್ಸು ಇರುವುದೇ ಹೀಗೆ.

ಕೊನೆಯದಾಗಿ, ಹೆಣ್ಣು ತನ್ನ ಮಗುವಿಗಾಗಿ, 9 ತಿಂಗಳ ಕಾಲ ತನ್ನೆಲ್ಲ ಶಕ್ತಿಯನ್ನು ವಿನಿಯೋಗಿಸುತ್ತಾಳೆ, ಕೆಲ ಸುಖವನ್ನು ತ್ಯಾಗಮಾಡುತ್ತಾಳೆ. ತನ್ನ ರಕ್ತವನ್ನು ಬಸಿಯುತ್ತಾಳೆ. ಕೆಲವು ಸಲ ತನ್ನ ಪ್ರಾಣವನ್ನೇ ಪಣಕ್ಕೊಡ್ಡುತ್ತಾಳೆ. 

ತನ್ನ ಒಡಹುಟ್ಟಿದವರ ಏಳ್ಗೆ ಬಯಸುತ್ತಾಳೆ, ಅವರಿಗಾಗಿ ಸಾಕಷ್ಟು ತ್ಯಾಗಮಾಡುತ್ತಾಳೆ. ಅವಳೇ ಹಾಗೆ....

ತನ್ನ ಅಣ್ಣನ ಮುಂದಿನ ಜೀವನದ ಒಳಿತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ತಂಗಿಯನ್ನು ಇತ್ತೀಚೆಗೆ ತುಂಬಾ ಹತ್ತಿರದಿಂದ ಕಂಡೆ. ಹೌದು ಹೆಣ್ಣಿನ ಮನಸ್ಸು ಇರೋದೇ ಹಾಗೆ. ಓ ತ್ಯಾಗಮಯಿ ತಂಗಿಯೇ ನಿನಗೆ ನನ್ನ ಅನಂತ ನಮಸ್ಕಾರಗಳು.


ಡಿ ಸಿ  ರಂಗನಾಥ ರಾವ್

9741128413

    

Comments

  1. ನಾಗೇಂದ್ರ ಬಾಬು8 January 2026 at 12:57

    ಹೌದು ಸ್ವಾಮಿ... ನಮ್ಮೆಲ್ಲರ ಅನುಭವವನ್ನು ನಿಮ್ಮ ಲೇಖನದ ಮೂಲಕ ಸೊಗಸಾಗಿ ಮೂಡಿಸಿದ್ದೀರಿ... ಕೆಲವೊಮ್ಮೆ ಅನಿಸುತ್ತೆ ಮಾನವನಿಗೂ ಸಹ ಮಾತು ಬರದ್ದಿದ್ದರೆ ಜಗತ್ತು
    ಹೇಗಿರುತ್ತೆ ಅಂತ... ಇತೀಚೆಗೆ ಕೇವಲ ಒಂದು ಪದ ಹೆಚ್ಚು ಕಮ್ಮಿ ಅಥವಾ ಏರೀಳಿತ ಆದಾಗ ಆಗುತ್ತಿರುವ ಅನಾಹುತಗಳು ಯಾರೇನೇ ಹೇಳಲಿ ನಾವಿರೋದೇ ಹೀಗೆ ಎಂಬ ವರ್ತನೆ ಮುಂದಿನ ಜನಾಂಗದ ಜೀವನದ ಬಗ್ಗೆ ಯೋಚಿಸುವಂತೆ ಆಗುತ್ತೆ... ನಮ್ಮ ಕಾಲನೇ ಚೆಂದ ಅಲ್ವಾ!!! ಹಾ ಹೀಗೆ ನಮ್ಮ ಹಿಂದಿನವರು
    ಹೇಳುತಿದ್ದರು.... ಕಾಲಾಯ ತಸ್ಮೈ ನಮಃ
    ಬಾಬು

    ReplyDelete
  2. ಗುರುಪ್ರಸನ್ನ, ಚಿಂತಾಮಣಿ12 January 2026 at 15:53

    ಜೀವನದ ಪಯಣದಲ್ಲಿ ಸಾಗುವಾಗ ಕಂಡುಬರುವ ಹಲವಾರು ವ್ಯಕ್ತಿತ್ವಗಳು ,ಮುಖಗಳು, ಒಳ ಮುಖಗಳು, ಸಂದರ್ಭಗಳು ಇತ್ಯಾದಿಗಳನ್ನು ಸವಿವರವಾಗಿ ನೀಡಿದ್ದಾರೆ ಲೇಖಕರು.
    ಇದನ್ನು ಓದಿ ಲೋಕದಲ್ಲಿ ವಿವಿಧ ರೀತಿಯ ಜನರು ಇರುತ್ತಾರೆ. ಅವೆಲ್ಲದರ ಮಧ್ಯೆ ಒಳ್ಳೆಯ ಗುಣ ಮತ್ತು ನಡತೆಗಳನ್ನು ಮಾತ್ರ ಅಳವಡಿಸಿಕೊಂಡು ನಮ್ಮ ಜೀವನವನ್ನು ಸಾಗಿಸಿ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು..
    ಕೊನೆ ಹನಿ
    ಅನುಭವ ಇರುವಲ್ಲಿ ಅಮೃತ ಇರುತ್ತದೆ.

    ಗುರು ಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು