ಕೋಳಿ ಕೂಗು - ಬೆಳ್ಳಿ ಬೆಳಗು
ಭಾನುವಾರ ಬೆಳಿಗ್ಗೆ ಸಾಮಾನ್ಯವಾಗಿ ಎಚ್ಚರ ಆಗುವುದು, ಮೇಕೆಯ ಆರ್ತನಾದದಿಂದ. ಸ್ವಲ್ಪ ಹೊತ್ತಿಗೆ ಆ ಆರ್ತನಾದ ಸಂಪೂರ್ಣ ನಿಂತು ಹೋಗುತ್ತದೆ... ಮೇಕೆ ಆಹಾರ ರೂಪವಾಗಿ ಬದಲಾಗಿರುತ್ತದೆ. ಮೊದಮೊದಲು ಮನಸ್ಸಿಗೆ ಕಸಿವಿಸಿ ಆಗುತ್ತಿತ್ತು. ಆದರೆ ಮಾಡುವುದೇನು... ಅದು ಅವರ ಊಟ, ಹಾಗಾಗಿ ಮೇಕೆಯ ಹನನ ಅವರಿಗೆ ಅನಿವಾರ್ಯ.
ಮೊನ್ನೆ ಭಾನುವಾರ ದೂರದಲ್ಲೆಲ್ಲೋ ನನಗೆ ಕೇಳಿಸಿದ್ದು ಕೋಳಿಯ ಕೂಗು. ಪಾಪ ಅದಕ್ಕೆ ತನ್ನ ಹನನದ ಸಮಯ ಬಂದಿದೆ ಎಂದು ತಿಳಿದಿರಲಾರದು. ಆಗ ಮನಸ್ಸಿನಲ್ಲಿ ಮೂಡಿದ್ದು...
ಕೊಕ್ಕೋ... ಕೊಕ್ಕೋ... ಎಂದು ಕೋಳಿಯೊಂದು ಕೂಗಿತು, ಅದರ ಕೂಗು ಕೇಳಿ ನನ್ನ ಮನಸ್ಸು ಮುದುಡಿ ಹೋಯಿತು ಎಂಬ ಸಾಲುಗಳು ( ಕುವೆಂಪುರವರ ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಕ್ಕಿ ಹಾಡಿತು ಪದ್ಯದ ಸ್ಪೂರ್ತಿ).
ಈ ಕೋಳಿಯದು ಏನೋ ಶಿಸ್ತು. ಬೆಳಿಗ್ಗೆ ಬೇಗ ಏಳುವುದು, ಕೂಗಿ ಎಲ್ಲರನ್ನೂ ಎಬ್ಬಿಸುವುದು. ಬೆಳಗಿನ ಆ ಸಮಯಕ್ಕೂ ಒಂದು ನಂಟುಂಟು... ಅದೇ ಬೆಳ್ಳಿ ಚುಕ್ಕಿಯ (ಶುಕ್ರ ಗ್ರಹದ) ದರ್ಶನ. ಬೆಳಗಿನ ನಕ್ಷತ್ರ / ಮುಸ್ಸಂಜೆಯ ನಕ್ಷತ್ರ ಎಂದು ಕರೆಯಲ್ಪಡುವ ಶುಕ್ರ ಗ್ರಹ, ಚೆನ್ನಾಗಿ ಕಾಣುವುದು ಆ ಸಮಯದಲ್ಲಿ.
ಕೋಳಿ ಕೂಗಿತಕ್ಕ ನಂದನ ವನಾಕ... ಬೆಳಗಾಗಿ ಬೆಳ್ಳಿಯ ಚುಕ್ಕಿ ಉದಯಾದ ಬಳಿಕ.. ಮತ್ತು
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ... ಬಾನಾಗಿ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ.... ಎರಡು ಹಾಡುಗಳು ಬೆಳ್ಳಿಯ ಚುಕ್ಕಿ ಮತ್ತು ಕೋಳಿಗಿರುವ ಅವಿನಾಭಾವ ಸಂಬಂಧವನ್ನು ಎತ್ತಿ ತೋರಿಸುತ್ತದೆ.
ಸೂರ್ಯೋದಯ ಆಗುವುದು ಕೋಳಿ ಕೂಗಿದ ಮೇಲೆ. ಪಾಪ ಕೋಳಿಗೆ ಗೊತ್ತಾಗಿಲ್ಲವೋ... ಏನೋ, ತಾನು ಕೂಗಿದ ಮೇಲೆ ಸೂರ್ಯ ಹುಟ್ಟುವುದು ಎಂದು. ಗೊತ್ತಾಗಿದ್ದರೆ ಇನ್ನೆಷ್ಟು ಹೆಮ್ಮೆಪಡುತ್ತಿತ್ತು. ಏನೂ ಹೆಮ್ಮೆ ಪಡದೆ ತನ್ನಷ್ಟಕ್ಕೆ ತಾನು ಆ ಸಮಯಕ್ಕೆ ಕೂಗುವ ಕೋಳಿಯನ್ನು ಜಂಭದ ಕೋಳಿ ಎಂದು ಕರೆದು ಅವಮಾನ ಮಾಡುತ್ತಾರೆ ಈ ಮನುಷ್ಯರು.
ಬಹುಶಃ ಕೋಳಿ / ಹುಂಜ ಗತ್ತಿನಿಂದ ನಡೆಯುವುದನ್ನು ನೋಡಿ ಹೇಳಿರಬೇಕೇನೋ.
ಚಿಕ್ಕಂದಿನಲ್ಲಿ ಓದಿದ ಜಂಭದ ಮುದುಕಿ, ಕಥೆ...ಆಕೆಯ ಬಳಿ ಇದ್ದ ಕೋಳಿ ಹಾಗೂ ಅಗ್ಗಿಷ್ಟಿಕೆ. ಅದರಿಂದಲೇ ತನ್ನ ಊರಿನ ಜನ ಬದುಕಿದ್ದಾರೆ ಎಂಬ ಜಂಭವನ್ನು ಹೊತ್ತಿದ್ದ ಮುದುಕಿ, ಒಂದು ದಿನ ಊರು ಬಿಟ್ಟು ತನ್ನ ಇರವನ್ನು ಬಿಂಬಿಸಲು ಪ್ರಯತ್ನಿಸಿ, ಮರಳಿ ಬಂದಾಗ ಜನಜೀವನ ಎಂದಿನಂತೆ ಇದ್ದು ಮುಖಭಂಗವಾದದ್ದು.
ಹುಲ್ಲನ್ನು ಮಡಿಚಿ, ಸೌಟಿನಂತೆ ಮಾಡಿ, ಅದರಲ್ಲಿ ನಮ್ಮ ಮನೆಯ ಒಲೆಯ ಒಂದೆರಡು ಕೆಂಡವನ್ನು ತೆಗೆದುಕೊಂಡು ಹೋಗಿ, ಅವರ ಮನೆ ಒಲೆಯನ್ನು ಹಚ್ಚುತ್ತಿದ್ದ ಒಂದೆರಡು ಮನೆಯವರನ್ನು ನನ್ನ ಚಿಕ್ಕಂದಿನಲ್ಲಿ ಕಂಡಿದ್ದೇನೆ.
“ನಿನ್ನ ಕೋಳಿ ಕೂಗಿದ್ರೆನಾ ಬೆಳಗಾಗೋದು” ಎಂದು ಮೂದಲಿಸುವುದು ತಾವು ಅನಿವಾರ್ಯ ಎಂದು ಬಿಂಬಿಸುವ ಜನರನ್ನು.
ಕೋಳಿ ಕೂಗುವ ಹೊತ್ತಿಗೆ ಎದ್ದು ರಾಗಿಯನ್ನು ಬೀಸುವಾಗ ಹೇಳುತ್ತಿದ್ದ ರಾಗಭರಿತ ಹಾಡುಗಳು, ಅದು ನಿಲ್ಲಿಸಿದಾಗ ರಾಗಿ ಕಲ್ಲು ತಿರುಗುವ ಶಬ್ದ, ಮಧ್ಯೆ ಕೆಲ ಮಾತುಗಳು, ನನ್ನ ಅರೆ ನಿದ್ರಾವಸ್ಥೆಯಲ್ಲಿ ಕೇಳಿದ್ದು ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.
ಹಾಗೆ ಪಕ್ಷಿಗಳ ಚಿಲಿಪಿಲಿ, ಸಂಭಾಷಣೆ ಮಾಡುತ್ತಿವೆಯೇನೋ ಎನ್ನುವಂತಿರುತ್ತಿದ್ದ ಪಕ್ಷಿಗಳ ಕೂಗು ಹಾಗೂ ಪ್ರತಿ ಕೂಗು ಕೇಳಲು ಚೆನ್ನ. ಅದಕ್ಕೆ ನನ್ನ ದನಿ ಸೇರಿಸುತ್ತಿದ್ದದ್ದು ಒಂದು ಅನುಭವ.
ಕೋಳಿ ಕೂಗಿದ ನಂತರ ಎದ್ದು ವ್ಯವಸಾಯದ ಕೆಲಸಗಳ ಕಡೆ ಗಮನ ಕೊಡುವ ರೈತರು, ಎತ್ತು ಹೇರುಗಳನ್ನು ಹೊತ್ತು, ಹೊಲ ಗದ್ದೆಗಳ ಕಡೆ ಹೊರಡುತ್ತಿದ್ದದ್ದು.
ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಿ, ದನಗಳಿಗೆ ಮೇವು ಹಾಕಿ, ಕರುವನ್ನು ಹಾಲು ಕುಡಿಯಲು ಬಿಟ್ಟು, ನಂತರ ಹಾಲು ಕರೆಯುತ್ತಿದ್ದ , ಮನೆಯ ಸುತ್ತ ಕಸಗುಡಿಸುತ್ತಿದ್ದ ಹೆಂಗಸರ ದೃಶ್ಯ ನನ್ನೂರಿನಲ್ಲಿ ಸಾಮಾನ್ಯವಾಗಿತ್ತು.
ಈ ಮಧ್ಯೆ, ನಮ್ಮ ಮುಂದಿನ ಮನೆಯ ರಾಮಲಿಂಗಣ್ಣಯ್ಯ ಹೇಳುತ್ತಿದ್ದ ಉದಯರಾಗಗಳು ಕೇಳುವುದು ಒಂದು ಸೊಗಸು.
ಬೆಳಿಗ್ಗೆ ಬೇಗ ಎದ್ದು, ಅಮ್ಮನ ಜೊತೆ ಕಾಡಿಗೆ ಹೋಗಿ ಸೌದೆ ತರುವುದು, ಅವರೆಕಾಯಿ ಕಾಲದಲ್ಲಿ ಹೊಲಕ್ಕೆ ಹೋಗಿ ಅವರೇ ಕಾಯಿ ಕಿತ್ತು ತರುವುದು, ಹಿಪ್ಪೆ ಬೀಜವನ್ನು ಆಯ್ದು ತರುವುದು, ನಮ್ಮ ಮುಂಜಾನೆಯ ಕೆಲಸವಾಗಿತ್ತು.
ಚಳಿಗಾಲದ ಬೆಳಗಿನ ಸಮಯ, ಬಚ್ಚಲು ಮನೆಯ ಒಲೆಯ ಮುಂದೆ ಕೂತು, ಬಿಸಿ ಕಾಯಿಸುವುದು ಒಂದು ಖುಷಿಯ ಕಾಯಕ. ಜೊತೆ ಜೊತೆಯಲ್ಲೇ ಆ ಬೆಂಕಿಗೆ ಆಲೂಗಡ್ಡೆ, ಈರುಳ್ಳಿ, ಅವರೇ ಕಾಯಿ, ಕಡಲೆಕಾಯಿ, ಹಲಸಿನ ಬೀಜ ಹಾಕಿ ಬೇಯಿಸಿ ತಿನ್ನುವುದು ಸಾಮಾನ್ಯವಾಗಿತ್ತು.
“ಕರಾಗ್ರೇ ವಸತೇ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರಮೂಲೆ ಸ್ಥಿತೇಗೌರಿ ಪ್ರಭಾತೇ ಕರ ದರ್ಶನಂ” ಎಂದು ಹೇಳಿಕೊಂಡು ಎರಡು ಕೈ ಬಲವಾಗಿ ಉಜ್ಜಿ, ಕಣ್ಣಿಗೆ ಒತ್ತುಕೊಂಡು ಬಲ ಮಗ್ಗುಲಲ್ಲಿ ಏಳುತ್ತಾ ನಾರಾಯಣ ಕೃಷ್ಣ ಗೋವಿಂದ ವಾಸುದೇವ ಜಗದ್ರಕ್ಷಕ ಕಾಪಾಡಪ್ಪ ಎಂದು ಹೇಳಿಕೊಳ್ಳುವುದನ್ನು ಚಿಕ್ಕಂದಿನಲ್ಲೇ ಕಲಿಸಿದ್ದು ಅಮ್ಮ.
ಬೆಳಗಿನ ಜಾವದ ಓದು ಬುದ್ಧಿಗೆ ಹಿಡಿಯುತ್ತದೆ ಎನ್ನುವುದು ಬಹುಜನ ಒಪ್ಪಿದ ಮಾತು. ರಾತ್ರಿ ತಡವಾಗಿ ಎದ್ದಿರಲಾಗದ ನಾನು ಬೇಗ ಎದ್ದು ಓದುವ ಅಭ್ಯಾಸವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ವೆಂಕಟೇಶ್ವರ ಸುಪ್ರಭಾತವನ್ನು ಹೇಳಿ, ಓದು ಮುಂದುವರಿಸಬೇಕು, ಎಂಬ ಸಲಹೆ ಮೇರೆಗೆ... ಅದನ್ನು ಹೇಳಿ ಓದು ಮುಂದುವರಿಸುವಷ್ಟರಲ್ಲಿ ನಿದ್ದೆ ಬಂದು ತೂಕಡಿಸಿ ಬೈಸಿಕೊಂಡಿದ್ದೇನೆ.
ಎಲ್ಲ ಕೆಲಸ ಕಾರ್ಯಗಳಿಗೆ ಬೆಳಗಿನ ಜಾವದ ಸಮಯ ಶುಭಕರ ಎಂದು ಹೇಳುತ್ತಾರೆ. ಅದು ಬ್ರಹ್ಮ / ಬ್ರಾಹ್ಮೀ ಮುಹೂರ್ತ.
ಬೆಳಗಿನಜಾವದ ಕನಸು ನಿಜವಾಗುತ್ತದೆ ಎನ್ನುವುದು ಒಂದು ನಂಬಿಕೆ. ಒಳ್ಳೆಯ ಕನಸು ಬಿದ್ದರೆ ಸಂತೋಷ. ಅದೇ ಕನಸಲ್ಲಿ ಏನಾದರೂ ನೋವಿನ ಅಂಶ ಇದ್ದರೆ... ಕೆಟ್ಟದ್ದಾಗುವುದೇನೋ ಎನ್ನುವ ಭಯ ಆತಂಕ.
ಕೆಲವು ಜನರಿಗೆ ( ಸೂರ್ಯವಂಶಜರು) ಬೆಳಗಿನ ಜಾವದ ನಿದ್ದೆ ಬಲು ಸವಿ. ಅದನ್ನು ಸಕ್ಕರೆ ನಿದ್ದೆ ಎಂದು ಕರೆಯುತ್ತಿದ್ದದ್ದು ನನ್ನ ಮಡದಿ ವಿಜಯ.
ನಿದ್ದೆಯಿಂದ ಸಂಪೂರ್ಣ ಎಚ್ಚರವಾದಾಗ ಬೆಳ್ಳಂ ಬೆಳಗಾಯಿತು ಎಂದು ಹೇಳುವುದುಂಟು.
ನರಕ ಚತುರ್ದಶಿಯಂದು ಬೆಳಗಿನ ಜಾವ ನಾಲ್ಕು ಗಂಟೆಗೆ, ಆಕಾಶವಾಣಿಯಲ್ಲಿ ಮೊಳಗುತ್ತಿದ್ದ ಮಂಗಳವಾದ್ಯಗಳು (ಓಲಗ) ಪಟಾಕಿ ಹೊಡೆಯುವ ನಮ್ಮ ಸಂಭ್ರಮಕ್ಕೆ ಉತ್ಸಾಹ ಕೊಡುತ್ತಿತ್ತು.
ಚಳಿಗಾಲದಲ್ಲಿ, ಬಿಸಿಲು ಕಾಯಿಸುವುದೇ ಒಂದು ಸಂಭ್ರಮವಾಗಿತ್ತು. ಯಾರಾದರೂ ಅಡ್ಡ ಬಂದು ನಮಗೆ ನೆರಳು ಮಾಡಿದರೆ " ನಂಗ್ ನೆರಳು ಕಟ್ಟೋರ್ ಯಾರ್ ನನ್ನ ಗೊದ್ದೆ ತಿನ್ನೋರ್ ಯಾರ್...." ಎಂದು ಹೇಳಿ ಅವರನ್ನು ಪಕ್ಕಕ್ಕೆ ಹೋಗುವಂತೆ ಮಾಡುತ್ತಿದ್ದದ್ದು.
ಮಾಘಮಾಸದಲ್ಲಿ ಸೂರ್ಯೋದಯಕ್ಕೆ ಮುಂಚೆ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಎಂಬ ನಂಬಿಕೆ. ಹವಾಮಾನದ ದೃಷ್ಟಿಯಿಂದ ಅದು ಆರೋಗ್ಯದಾಯಕ ಎಂದು ಹೇಳುತ್ತಾರೆ.
ಸೂರ್ಯೋದಯಕ್ಕೆ ಸರಿಯಾಗಿ ಸೂರ್ಯನಿಗೆ ಅರ್ಘ್ಯ ಕೊಡುವುದು ಒಂದು ನೇಮ.
ಈ ಸಮಯದಲ್ಲಿ, ತನ್ನ ಕಾರ್ಯ ಸಾಧನೆಗಾಗಿ, ಮಹಾಭಾರತದ ಕರ್ಣನನ್ನು ಭೇಟಿ ಯಾಗಲು, ಕುಂತಿಗೆ ಸಲಹೆ ನೀಡಿದ ಕೃಷ್ಣ.
Early bird catches the worm ಎಂಬುದು ಇಂಗ್ಲೀಷ್ ನಾಣ್ಣುಡಿ. ಹುಳು ಹುಪ್ಪಟೆಗಳು ಆಹಾರ ಹುಡುಕಲು ಹೊರ ಬಂದಾಗ, ಅವು ಪಕ್ಷಿಗಳಿಗೆ ಆಹಾರವಾಗುತ್ತವೆ. ಆ ಸಮಯದಲ್ಲಿ, ಪಕ್ಷಿಯನ್ನು ಬೇಟೆಯಾಡಿ ತಿನ್ನುವ ಪ್ರಾಣಿಯು ಕಾಯುತ್ತಿರುತ್ತದೆ. ಇದು ಆಹಾರ ಚಕ್ರ. ಎಲ್ಲ ಜೀವಿಗಳಿಗೂ (ಮನುಷ್ಯನೊಬ್ಬನನ್ನು ಬಿಟ್ಟು) ಆಹಾರ ಹುಡುಕುವುದೇ ಮುಖ್ಯ ಕಾಯಕ.
ಕೋಳಿಯೂ ಸಹ, ಆಹಾರ ಹುಡುಕುವ ಕಾಯಕವನ್ನು ಮಾಡುತ್ತಲೇ ಇರುತ್ತದೆ.
ಕೋಪ ಬಂದಾಗ, ಕೋಳಿ ಕುಕ್ಕುತ್ತದೆ.. ಅದಕ್ಕೆ ಇರಬೇಕು ಅದನ್ನು ಕುಕ್ಕುಟ ಎಂದು ಕರೆಯುವುದು.
ಕೋಳಿಯ ಮೊಟ್ಟೆ ಒಳ್ಳೆಯ ಆಹಾರ ಕೆಲವರಿಗೆ. ಶಾಲಾ ಮಕ್ಕಳಿಗೆ ಊಟದ ಸಮಯದಲ್ಲಿ ಮೊಟ್ಟೆ ಕೊಡುವ ಯೋಜನೆ ಉಂಟು. ಮೊಟ್ಟೆಯನ್ನು ಮಾಂಸಾಹಾರ ಎಂದು ಎಲ್ಲರೂ ಒಪ್ಪುವುದಿಲ್ಲ.
Sunday ho ya monday roz khavo ande.. ಎಂದು ಟಿವಿಯಲ್ಲಿ ಹೇಳುತ್ತಿದ್ದ ಜಾಹೀರಾತು ಎಲ್ಲ ದಿನವೂ ಮೊಟ್ಟೆ ತಿನ್ನಲು ಪ್ರೇರೇಪಿಸುತ್ತಿತ್ತು.
ಮೊಟ್ಟೆ ಮೊದಲೋ... ಕೋಳಿ ಮೊದಲೋ ಎಂಬ ಇನ್ನೊಂದು ಜಿಜ್ಞಾಸೆ ಇದೆ... ಇದಕ್ಕಿನ್ನೂ ಸಮಂಜಸ ಉತ್ತರ ಸಿಕ್ಕಿಲ್ಲ.
ಕೋಳಿ ಜಗಳ ಎನ್ನುವುದು, ಏನೂ ಕಾರಣವಿಲ್ಲದೆ ಜಗಳವಾಡುವ ವಿಧಾನ. ಕೋಳಿ ಕಾಳಗ ಎಂದು ಕರೆಯುವ ಕೋಳಿ ಜಗಳದ ಪಂದ್ಯ ಒಂದು ಜೂಜು.
ಕೋಳಿಯ ಕಾಲಿಗೆ ಚೂಪಾದ ಕತ್ತಿಯನ್ನು ಕಟ್ಟಿ, ಕೋಳಿ ಕಾಳಗಕ್ಕೆ ಬಿಡುವುದನ್ನು ನೋಡಿದ್ದೇನೆ. ಅವು ಕಾದಾಡುವಾಗ ಅವುಗಳ ರೆಕ್ಕೆಗಳು ಕಿತ್ತು ಹೊರಬಂದು, ರಕ್ತ ಸೋರುವುದನ್ನು ನೋಡಲು, ಪಂದ್ಯ ಆಡಿಸುವವರು ಹಾಗೂ ನೋಡುವರ ಉತ್ಸಾಹವನ್ನು ಕಂಡಾಗ ನನಗೆ ಏನೋ ಜಿಗುಪ್ಸೆ.
ಸಕ್ಕರೆಯಲ್ಲಿ ಮಾಡಿದ ಕೋಳಿಯ ಬಣ್ಣ ಬಣ್ಣದ ಬೊಂಬೆ ನಮಗೆಲ್ಲಾ ಅಚ್ಚು ಮೆಚ್ಚು.
ಕೋಳಿಪುರ ಎಂಬ ಊರಿನಿಂದ ವಿದ್ಯಾನಗರ ಶಾಲೆಗೆ ಮಕ್ಕಳು ಬರುತ್ತಿದ್ದರು.
ಕೋಳಿ ಸಾರು ಮಾಡಿದ್ದೀವಿ ಬಾಪ್ಪ ರಂಗಣ್ಣ ನಮ್ಮನೇಗೆ.. ಕೊಡ್ತೀನಿ ಎಂದು ಕಿಚಾಯಿಸುತ್ತಿದ್ದದ್ದು ನಮ್ಮೂರಿನ ಕೆಲವರು.
ಅಂದದಿಂದ ಸಾಕಿದ್ನಲ್ಲ ಚಂದ ಕೋಳಿಯ, ಅದರ ಮೊಟ್ಟೆ ತಿಂದೋರ್ ಹೊಟ್ಟೆ ಸಿಗಳ ಮುದ್ದು ಕೋಳಿಯ... ಇದು ಕೋಳಿ ಮೊಟ್ಟೆಯನ್ನು ಕದ್ದವರನ್ನು ಬಯ್ಯುವ ಹಾಡು.
ನಾ ಕೋಳಿಕೆ ರಂಗ... ಉಪ್ಪಾರಹಳ್ಳಿ ಭಾವುನ್ ತಮ್ಮನ್ ಮಾವನ್ ಮೊಮ್ಮಗ" ಇದು ಕೈಲಾಸಂರ ಬಹುಪರಿಚಿತ ಹಾಡು.
ಜೀವನದ ಅನಿಶ್ಚಿತತೆಯನ್ನು ಪುರಂದರದಾಸರು ತಮ್ಮ ಊರ ದೇವರು ಮಾಡಬೇಕಣ್ಣ ಕೃತಿಯಲ್ಲಿ “ಕೋಳಿ ಪಿಳ್ಳೆ ಯಾಡುವಾಗ ಹಾಳು ಹದ್ದು ಒಯ್ಯುವಂತೆ” ಎಂದು ನಿರೂಪಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಚಿತ್ರದ ಲತಾ ಮಂಗೇಶ್ಕರ್ ಕನ್ನಡ ಚಿತ್ರದಲ್ಲಿ ಹಾಡಿದ " ಬೆಳ್ಳನೆ ಬೆಳಗಾಯಿತು...." ಹಾಡಿನ ಚಿತ್ರಣ ಬೆಳಗಿನ ಹಳ್ಳಿಯ ವಾತಾವರಣವನ್ನು ಚಿತ್ರಿಸುತ್ತದೆ.
ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಣ್ಣ.... ಜನಪದರು ಹಾಡಿದ ಈ ಹಾಡು ಮುಂಜಾನೆಗೂ ಕಾಯಕಕ್ಕೂ ಇರುವ ಸಂಬಂಧವನ್ನು ಹೇಳುತ್ತದೆ.
ನನ್ನ ಹೈಸ್ಕೂಲಿನ ಸಮಯದಲ್ಲಿ, ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ತಿಂಗಳ ಹಾಡು ಕಾರ್ಯಕ್ರಮದಲ್ಲಿ ಕೇಳಿದ ವರ ಕವಿ ಬೇಂದ್ರೆಯವರ ಬೆಳಗು ಎಂಬ ಹೆಸರಿನ... ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ, ನುಣ್ಣನ್ ಎರಕಾವ ಹೊಯ್ದ... ಹಾಡು, ಅದರ ಶೈಲಿ ನನಗೆ ತುಂಬಾ ಅಚ್ಚು ಮೆಚ್ಚು.
ಆ ಪದ್ಯದ ಕೊನೆಯ ಸಾಲುಗಳು...
ಶಾಂತಿರಸವೇ ಪ್ರೀತಿಯಿಂದ ಮೈದೋರಿತಣ್ಣಾ.. ಇದು ಬರೀ ಬೆಳಗಲ್ಲೋ ಅಣ್ಣಾ ನನಗೆ ರೋಮಾಂಚನವನ್ನು ಉಂಟು ಮಾಡುತ್ತಿತ್ತು, ನನಗರಿವಿಲ್ಲದೆ ನನ್ನ ಕಣ್ಣು ತುಂಬುತ್ತಿತ್ತು. ಪ್ರಾಯಶಃ ಅದು ಸಂತೋಷದಿಂದ ಮನತುಂಬಿ ಬಂದಿದ್ದು ಎಂದೇ ನನ್ನ ಅನಿಸಿಕೆ.
ಬೆಳಗಲ್ಲೋ ಅಣ್ಣ ಎಂದು ಬೇಂದ್ರೆಯವರು ಹೇಳಿದಾಗ ಅದು ಬೆಳಗೊಂದೇ ಅಲ್ಲ, ಬೆಡಗೂ ಸಹ ಎಂದು ಸೂಚ್ಯವಾಗಿ ಹೇಳಿದ್ದಾರೇನೋ ಎಂದೆನಿಸುತ್ತದೆ.
ಸೂರ್ಯೋದಯ... ಬೆಳಗು, ಬೆಳಕು ಇವೆಲ್ಲ ಏಳ್ಗೆಯ ಧನಾತ್ಮಕ ಸಂಕೇತಗಳು... ಸ್ಪೂರ್ತಿದಾಯಕ ಅಂಶಗಳು.
ಇವೆಲ್ಲ ನಮಗೆ ಮಾರ್ಗದರ್ಶಕ ಅಂಶಗಳಾಗಲಿ ಎಂದು ಆಶಿಸುತ್ತಾ..
ನಮಸ್ಕಾರ..
ಡಿ ಸಿ ರಂಗನಾಥ ರಾವ್
9741128413







ನಮಸ್ಕಾರ🙏
ReplyDeleteಹಳ್ಳಿಯ ಸೊಗಡು ನಿಮ್ಮ ಬರವಣಿಗೆಯ ಶೈಲಿಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮತ್ತಷ್ಟು ಓದಲು ಮನಸ್ಸು ಪ್ರೇರೇಪಿಸುತ್ತದೆ. ಕೋಳಿಯ ವಿಷಯದಿಂದ ಪ್ರಾರಂಭಿಸಿ ಹಳ್ಳಿಯ ವಾತಾವರಣ ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದೀರಾ. *ಕೋಳಿ ಕೂಗು ಬೆಳ್ಳಿ ಬೆಡಗು ಸ್ವಾರಸ್ಯಕರವಾಗಿದೆ*
ಧನ್ಯವಾದಗಳು🙏
ರತ್ನಪ್ರಭಾ
ಕೋಳಿಯ ವಿಷಯದೊಂದಿಗೆ ಜಾನಪದ ಸೊಗಡು
ReplyDeleteಕೋಳಿಯೊಂದಿನ ಹಳ್ಳಿಯವರ avinas ಭಾವ ಸಂಬಂಧ .ಕವಿಗಳ ಕವಿತೆ .ಬಹಳ ಸೊಗಸಾಗಿ ಬರೆದಿದ್ದೀರಿ sir.
ನಮ್ಮ ಬಾಲ್ಯದಲ್ಲಿ ಕೋಳಿಪುರದ ಮೋಟಪ್ಪ ಮತ್ತು ಅಪ್ಪಣ್ಣ ಅವರುಗಳ ತೋಟದ ಬಾವಿಗಳು ಅಕ್ಕ ಪಕ್ಕದ ಊರಿನ ಹುಡುಗರು, ವಯಸ್ಕರ ಸ್ವಿಮ್ಮಿಂಗ್ ಪೂಲ್ ಆಗಿತ್ತು. ಅದರಲ್ಲೂ ಅಪ್ಪಣ್ಣನವರ ಬಾವಿ ದೊಡ್ದದಾಗಿ ಸ್ಪಟಿಕ ಶುದ್ಧ ನೀರು ತುಂಬಿರುತ್ತಿತ್ತು.
ReplyDeleteYes sir they were the morning alarms to us .missing them now .my brother in law has put ಕೋಳಿ ಕೂಗು in his alaram to wake him up
ReplyDeleteಯಾವುದಾದರೂ ಒಂದು ವಿಷಯವನ್ನು ಆಯ್ದುಕೊಂಡಾಗ ಆ ವಿಷಯದ ಬಗ್ಗೆ ಸಂಪೂರ್ಣವಾಗಿ, ಸ್ವಾರಸ್ಯಕರವಾಗಿ ಓದುಗರಿಗೆ ಉಣಬಡಿಸುವ ಲೇಖಕರ ಕೌಶಲ್ಯ ಮಾತೆ ಸರಸ್ವತಿ ಅವರಿಗೆ ನೀಡಿರುವ ವರ ಎಂದರೆ ಅತಿಶಯೋಕ್ತಿ ಏನಲ್ಲ.
ReplyDeleteಇಲ್ಲಿ ಒಂದು ಅಂಶವನ್ನು ಗಮನಿಸಬೇಕು ನಗರ ಜನಗಳ ಬೆಳಗಿಗಿಂತ ಗ್ರಾಮೀಣ ಭಾಗದ ಜನರ ಮುಂಜಾನೆಯೇ ಬಲುಚಂದ ಹಾಗೂ ಅರ್ಥಪೂರ್ಣ. ನಗರ ಜನರ ಬೆಳಗು ಯಾಂತ್ರಿಕ ಹಾಗೂ ಹಳ್ಳಿಯ ಜನರ ಮುಂಜಾನೆ ಚಟುವಟಿಕೆಗಳ ಆಗರ.
ತಲೆಹರಟೆ
1)ಅಂದಹಾಗೆ ಹೊತ್ತಿಗೆ ಮುಂಚೆ ಎದ್ದು ಕೂಗುವುದು ಹುಂಜವೆ ಹೊರತು ಕೋಳಿಯಲ್ಲ.
2) ಬೆಳಿಗ್ಗೆ ಬೇಗನೆ ಎದ್ದರೆ ಆಯಸ್ಸು ವೃದ್ಧಿಸುವುದಂತೆ - ನಾಣ್ಣುಡಿ
ಆದರೆ ಮುಂಜಾನೆ ಐದಕ್ಕೆ ಎದ್ದ ಹುಂಜ ಮಧ್ಯಾಹ್ನ 12ಕ್ಕೆ ಕುಕ್ಕರಿನ ಒಳಗೆ ಇತ್ತಂತೆ.
ವಂದನೆಗಳು
ಅತ್ಯುತ್ತಮ ಲೇಖನ. ಹಳ್ಳಿ ಜೀವನ ಮತ್ತು ದಿನಚರಿ ಸೊಗಸಾಗಿ ಬಿಂಬಿಸಿದ್ದೀರ. 🙏🙏🙏👌👌👌
Deleteಸೊಗಸಾಗಿದೆ ..ಓದುಗರನ್ನು ಹಿಡಿದಿಟ್ಟು ಕೊಳ್ಳುವ ಶೈಲಿಗೆ 👌👌👌👌👌
ReplyDelete