ಎರಡೆರಡು ಸಂಭ್ರಮ




ಭಗವದ್ಗೀತೆಯ ಗೀತೋತ್ಸವದ ಸಂಭ್ರಮ ಮುಗಿಯುತ್ತಿಂದಂತೆಯೇ ಮತ್ತೊಂದು ಸಂಭ್ರಮಕ್ಕೆ ಅಣಿಯಾದೆ. ಅದು ರುದ್ರಪಟ್ಟಣದಲ್ಲಿ ನಡೆದ ಧಾತ್ರಿ ಹವನ.  ರುದ್ರಪಟ್ಟಣದ ನಂಟು ಮತ್ತಷ್ಟು ಗಟ್ಟಿಯಾದ ಸಮಯ

Dhatri homa video

ಕಾವೇರಿ ನದಿ ತೀರದ ಮರದ ತೋಪಿನ ಮಧ್ಯದಲ್ಲಿ ಸುಂದರವಾಗಿ ಅಣಿಗೊಳಿಸಿದ್ದ ಯಜ್ಞ ಕುಂಡದಲ್ಲಿ ಸುಧೀರ್ಘವಾಗಿ ನಡೆದ ಹೋಮ. ರುದ್ರಪಟ್ಟಣದ ಶ್ರೀರಾಮ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದ ರೂವಾರಿ, ಸಂಗೀತಜ್ಞ RK ಪದ್ಮನಾಭ ಅವರ ಮಾತಿನಂತೆ, ಈ ಕಾರ್ಯಕ್ರಮಕ್ಕೆ ಸ್ಪೂರ್ತಿಯೇ1961 ರಲ್ಲಿ ನಡೆದ ಅತಿರುದ್ರ ಮಹಾಯಾಗ. 



20.12.1961 ರಂದು ಪ್ರಾರಂಭವಾಗಿ 31.12.1961ರ ವರೆಗೆ ನಡೆದ ಈ ವಿಶೇಷ ಯಾಗವು ಶೃಂಗೇರಿ ಪೀಠದ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಸನ್ನಿಧಿಯಲ್ಲಿ, ಅವರ ಮಾರ್ಗದರ್ಶನದಲ್ಲಿ ನೆರವೇರಿದ್ದು. ಇದರಲ್ಲಿ ಮೈಸೂರು ರಾಜ ಮನೆತನದ ಜಯ ಚಾಮರಾಜೇಂದ್ರ ಒಡೆಯರ್ ರವರು, ಅಂದಿನ ಮುಖ್ಯಮಂತ್ರಿ  ಬಿ ಡಿ ಜತ್ತಿಯವರು ಹಾಗೂ ಇತರ ಗಣ್ಯಾತಿ ಗಣ್ಯರು ಭಾಗವಹಿಸಿದ್ದರೆಂಬುದು ಚರಿತ್ರೆಯ ಭಾಗ. 

ನಂತರದ ದಿನಗಳಲ್ಲೂ, ಧಾತ್ರಿ ಹವನ ನಡೆಯುತ್ತಿದ್ದು, ಕಾರಣಾಂತರಗಳಿಂದ ಮುಂದುವರೆದಿರಲಿಲ್ಲ.

ಈ ಕಾರ್ಯವನ್ನು  ರುದ್ರಪಟ್ಟಣದ ವಾಸಿಗಳ ಹಾಗೂ ರುದ್ರಪಟ್ಟಣದ ಬೇರುಗಳನ್ನು ಹೊಂದಿರುವ, ಎಲ್ಲ ಕಡೆ ಪಸರಿಸಿರುವ ಜನಗಳ ಸರ್ವತೋಮುಖ ಬೆಳವಣಿಗೆ ಹಾಗೂ ಶುಭಕ್ಕಾಗಿ ಮುಂದುವರಿಸಿ ಕೊಂಡು ಹೋಗಬೇಕೆಂದು ನಿಶ್ಚಯಿಸಿ, ಮಾಡಿದ ಎರಡನೆಯ ವರ್ಷದ ಕಾರ್ಯಕ್ರಮವೇ ಈ ಧಾತ್ರಿ ಹವನ.

ರುದ್ರಪಟ್ಟಣದ ಕಣಕಣದಲ್ಲೂ ಸಂಗೀತ ಹಾಸು ಹೊಕ್ಕಾಗಿದೆ. ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಸಂಗೀತಕ್ಕೆ ಒಂದು ಪ್ರಮುಖ ಸ್ಥಾನ. ಹಾಗಾಗಿ  ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರ ಕುಟುಂಬದ ಶ್ರೀ ಆಕಾಶದತ್ತ ಅವರಿಂದ  ಕೊಳಲು ವಾದನ ಕಾರ್ಯಕ್ರಮ ಇತ್ತು.



ನದಿಯ ಮೇಲೆ ಹಾದು ಬಂದ ತಂಗಾಳಿ, ಸುತ್ತಲೂ ಹಸಿರು ವನ, ಮಧ್ಯೆ ಹಾಕಿದ್ದ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ಅಚ್ಚುಕಟ್ಟಾಗಿತ್ತು. ಎಲ್ಲರೂ ಸಂಗೀತ ರಸಿಕರೆ ಆದ್ದರಿಂದ, ತಲೆದೂಗುತ್ತಾ ಮೆಚ್ಚುಗೆ ಸೂಚಿಸುತ್ತಾ ಸಂಗೀತವನ್ನು ಆಸ್ವಾದಿಸುತ್ತಿದ್ದ ಜನಗಳ ನೋಟ, ಸ್ಪೂರ್ತಿಯನ್ನು ಕೊಡುತ್ತಿತ್ತು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದುಡಿದ ಯುವ ಪಡೆಯನ್ನು, ಗೌರವಿಸುವಾಗ ಮೂಡಿ ಬಂದ ಒಕ್ಕೊರಲಿನ ಮೆಚ್ಚುಗೆ, ಯುವ ಪೀಳಿಗೆಯು ಇಂತಹ ಕಾರ್ಯಕ್ರಮಗಳನ್ನು ಮುನ್ನಡೆಸುವ ಆಸ್ತೆ ಅಕ್ಕರೆ ಹೊಂದಿದ್ದಾರೆ ಎಂಬ ಶುಭ ಸಂದೇಶವನ್ನು ಸಾರಿತು.

ಸಂಗೀತ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ RKP ಅವರು..." ಮನಿ (ಹಣ - ಸಂಭಾವನೆ) ಇಲ್ಲದ ಕಾರ್ಯಕ್ರಮದಲ್ಲಿ, ರಾಗದಲ್ಲಿನ ಮಧ್ಯಮವನ್ನೇ ವರ್ಜ್ಯ ಮಾಡಿದ ಸಂಗೀತಗಾರ" ಅಲ್ಲವೆಂದು ಆಕಾಶದತ್ತ ಅವರನ್ನು ಹೊಗಳಿದ ಪ್ರಸಂಗ ಹಾಸ್ಯಮಯವಾಗಿತ್ತು.

ಹೋಮದ ಮೂಲಕ ವೇದ, ಸಂಗೀತದ ಮೂಲಕ ನಾದ ಎರಡು ಮಿಳಿತವಾಯಿತು ಎಂದು ಹೇಳಿದ ಮಾತಿನ ಮುಂದುವರಿದ ಭಾಗವಾಗಿ, ವೇದ ನಾದದ ಜೊತೆಗೆ, ರಸಭರಿತ ಊಟದ ಸ್ವಾದವೂ ಸೇರಿತ್ತು ಎಂದು ನನಗನಿಸಿತು.

ಸಂಕೇತಿ ಸಮಾಜದ ಗಟ್ಟಿತನ ಎದ್ದು ಕಾಣುವುದು, ರಸಭರಿತ ಭೋಜನದಲ್ಲಿ. ವೈವಿಧ್ಯ ತಿನಿಸುಗಳು, ಪ್ರೀತಿಪೂರ್ವಕ ಬಡಿಸುವ ರೀತಿ, ಎಂತಹವರಿಗೂ ಹೊಟ್ಟೆ ಬಿರಿಯುವಂತೆ ಊಟ ಮಾಡಲು ಪ್ರೇರೇಪಿಸುತ್ತದೆ. ನಾನೂ ಹೊರತಾಗಲಿಲ್ಲ.

ಧಾತ್ರಿ ಪದಕ್ಕೆ ಭೂಮಿ, ತಾಯಿ,  ನೆಲ್ಲಿಕಾಯಿ ಎಂಬ ಅರ್ಥವಿದೆ. ಧಾತ್ರಿ ಹವನವನ್ನು ನೆಲ್ಲಿಕಾಯಿ ಮರದ ಬಳಿ ಮಾಡುವುದು ಸಂಪ್ರದಾಯ. ಧಾತ್ರಿ ಮರ ವಿಷ್ಣುವಿನ ರೂಪವೆಂದು ಒಂದು ನಂಬಿಕೆ. ಹಾಗಾಗಿ ಉತ್ಥಾನ ದ್ವಾದಶಿಯಂದು ತುಳಸಿ ಪೂಜೆಯ ಸಮಯದಲ್ಲಿ,  ನೆಲ್ಲಿ ಕಾಯಿ ಇರುವ, ಕೊಂಬೆಯನ್ನು, ತುಳಸಿ ಗಿಡದ ಪಕ್ಕದಲ್ಲಿ ನೆಡುವ ಒಂದು ಸಂಪ್ರದಾಯ. ನನಗೆ ತಿಳಿದಿರುವಂತೆ, ಈ ಕಾರ್ಯಕ್ರಮದ ದಿನ, ತೋಟದಲ್ಲಿ / ನೆಲ್ಲಿಕಾಯಿ ಮರದ ಸಮೀಪದಲ್ಲಿ ಪೂಜೆ, ಹೋಮಗಳನ್ನು ಮಾಡಿ, ಅಲ್ಲಿಯೇ ಅಡಿಗೆಯನ್ನು ಮಾಡಿ,  ಬೇರೆಯವರಿಗೂ    ಹಂಚಿ, ಎಲ್ಲ ಸೇರಿ ಊಟ ಮಾಡಿ, ಪಾತ್ರೆಗಳನ್ನು ತೊಳೆದುಕೊಂಡು ಮನೆಗೆ ಹೋಗುವುದು. ಇದನ್ನು ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಮಾಡುವುದು ಪದ್ಧತಿ. 

ನನ್ನ ಕೊನೆಯ ಭಾವನ ಊರು ಕರಲಮಂಗಲದಲ್ಲಿ ಕಾರ್ತೀಕ ಸೋಮವಾರದಂದು, ತೋಟದಲ್ಲಿ ಮುನಿಯಪ್ಪನ ಪೂಜೆ ಮಾಡಿ, ಅಲ್ಲಿಯೇ ಅಡಿಗೆ ಮಾಡಿ ಊಟ ಮಾಡಿ ಬರುವುದು ಪದ್ಧತಿಯಾಗಿದ್ದು, ನಾನು ಅದರಲ್ಲಿ ಸಾಕಷ್ಟು ಸಮಯ ಭಾಗವಹಿಸಿದ್ದೇನೆ.    ಇದನ್ನು ವನಭೋಜನವೆಂತಲೂ ಕರೆಯುವುದುಂಟು.

ವನ ಭೋಜನ ಎಂದಾಗ, ನೆನಪಿಗೆ ಬರುವುದು... ನಾನು ವಿದ್ಯಾನಗರದ ಮಿಡ್ಲ್ ಸ್ಕೂಲ್ ನಲ್ಲಿ ಓದುತ್ತಿದ್ದ ಸಮಯ.. ಎಲ್ಲ ಉಪಾಧ್ಯಾಯರುಗಳು, ಮಕ್ಕಳು ಅಲ್ಲಿನ ತೋಟಕ್ಕೆ ಹೋಗಿ ಊಟ ಮಾಡಿ ಬರುತ್ತಿದ್ದ ಕಾರ್ಯಕ್ರಮ. ತುಂಬಾ ಖುಷಿ ಕೊಡುತ್ತಿತ್ತು.

ಹೀಗೆ ಪ್ರಕೃತಿಯೊಂದಿಗೆ ಬೆರೆತು, ಅಲ್ಲಿರುವ ಸೌಲಭ್ಯಗಳೊಡನೆ ಹೊಂದಿಕೊಂಡು ಬಾಳುವ ಹಿಂದಿನ ದಿನಗಳ ಜೀವನ ಶೈಲಿ, ತೃಪ್ತಿಗೆ ಕಾರಣವಾಗಿತ್ತು ಎಂದು ನನ್ನ ನಂಬಿಕೆ.

ಕಾಲ ಬದಲಾದಂತೆ, ಅನುಕೂಲಗಳು ವೃದ್ಧಿಯಾಗಿ, ತೋಟದಲ್ಲಿ ಅಡಿಗೆ ಮಾಡಿದರೂ, ಅಲ್ಲಿಯೇ ಆರಿಸಿದ ಸೌದೆಯನ್ನು ಬಿಟ್ಟು... ಈಗಿನ gas ಒಲೆಯನ್ನು ಉಪಯೋಗಿಸಿಯೇ ಅಡಿಗೆ ಮಾಡುವುದು ಸಾಮಾನ್ಯ ವಾಗಿದೆ. ಹೇಗಾದರೂ ಸರಿ ಹಳೆ ಬೇರಿನೊಂದಿಗೆ ಹೊಸ ಚಿಗುರು ಬೆರೆತು ಗಿಡಮರಗಳು ನಳನಳಿಸುವಂತೆ, ನಮ್ಮ ಸಂಪ್ರದಾಯಗಳು ಮುಂದುವರೆಯಲಿ ಎಂಬ ಆಶಯ.

ಎರಡನೆಯ ಸಂಭ್ರಮ ಬೆಂಗಳೂರಿನಲ್ಲಿ. ಸುಮಾರು ಹತ್ತು ವರ್ಷಗಳಿಂದ, ನಮ್ಮ ಒಂದು ತಂಡ ಸೋಮವಾರದಿಂದ ಶನಿವಾರದವರೆಗೆ, ಅಶಕ್ತ ಪೋಷಕ ಸಭಾದ ಹಿರಿಯ ನಾಗರೀಕ ನಿವಾಸಿಗಳ ಜೊತೆ, ಒಡನಾಡುತ್ತೇವೆ. ಪ್ರತಿ ಶನಿವಾರದಂದು ಹೊರಗಿನವರನ್ನು ಆಹ್ವಾನಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟಗಳು, ವಿಶೇಷ ಅತಿಥಿಗಳ ಜೊತೆ ಸಂವಹನ ಏರ್ಪಡಿಸುತ್ತೇವೆ. ಶನಿವಾರದ ಕಾರ್ಯಕ್ರಮವನ್ನು ಸಂಯೋಜಿಸುವವರು ಶ್ರೀಮತಿ ರತ್ನಪ್ರಭಾ ಹಾಗೂ ಶ್ರೀಮತಿ ಶಕುಂತಲಾ. ಪದ್ಮಶ್ರೀ ಪುರಸ್ಕೃತ ಡಾಕ್ಟರ್. ಸಿ ಆರ್ ಚಂದ್ರಶೇಖರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಸಂಕಲ್ಪ ಮಾಡಿದವರು ರತ್ನಪ್ರಭಾ. ಒಂದು ಬಾರಿ ಎಲ್ಲ ನಿಶ್ಚಯವಾಗಿದ್ದರೂ ಕಾರಣಾಂತರಗಳಿಂದ ಕೊನೆಯ ಘಳಿಗೆಯಲ್ಲಿ, ಕಾರ್ಯಕ್ರಮವನ್ನು ರದ್ದು ಮಾಡಬೇಕಾಯಿತು. ಹೋದ ವಾರ ಆಕಸ್ಮಿಕವಾಗಿ ಈ ಕಾರ್ಯಕ್ರಮ ಒಂದೇ ದಿನದಲ್ಲಿ ನಿಶ್ಚಯವಾಗಿ, ಬುಧವಾರದಂದು ನಡೆದುಹೋಯಿತು.

ಅಂದು ಸಂಜೆ ಸುಮಾರು ನಾಲ್ಕು ಗಂಟೆಗೆ, ನಾವು ಸಭಾಗೆ ಹೋದಾಗ, ನಿವಾಸಿಗಳು, ಸಂಜೆಯ ಬಿಸಿ ಪಕೋಡ ತಿಂದು, ಕಾಫಿಯನ್ನು ಕುಡಿದು, ಸಂಭ್ರಮದಿಂದ ಅಲಂಕಾರ ಮಾಡಿಕೊಂಡು ತಯಾರಾಗಿದ್ದರು /  ತಯಾರಾಗುತ್ತಿದ್ದರು.   ಡಾ ಸಿ ಆರ್ ಚಂದ್ರಶೇಖರ್  ಅವರು ಬಂದಾಗ ಸ್ವಲ್ಪ ಸಂಕೋಚದಿಂದಲೇ ಸ್ವಾಗತಿಸಿದರು. ನಾವುಗಳು ಉಪಹಾರ ಮುಗಿಸಿ ಸಭಾಂಗಣಕ್ಕೆ ಹೋದಾಗ, ಎಲ್ಲರೂ ಶಿಸ್ತಿನಿಂದ ಕುಳಿತಿದ್ದು, ಡಾಕ್ಟರ್ ಗೆ ವಿಶೇಷ ಚಪ್ಪಾಳೆಯೊಂದಿಗೆ ಸ್ವಾಗತ ಕೋರಿದರು. ನಿವಾಸಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮೊದಲಾಯಿತು. 

ಡಾಕ್ಟರ್ ಅವರ ಪರಿಚಯದ ಜೊತೆಗೆ, ಅವರಿಗೆ ಕೊಟ್ಟಿದ್ದ ಪದ್ಮಶ್ರೀ ಪದಕವನ್ನು, ಹಾಗೂ ಆ ಕ್ಷಣದ ಚಿತ್ರವನ್ನು ನೋಡಿ ನಿವಾಸಿಗಳು ಸಂಭ್ರಮಿಸಿದರು.



ಡಾಕ್ಟರ್ ನಡೆಸಿಕೊಟ್ಟ ರಾಮಾಯಣ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರುಗಳು ಉತ್ಸಾಹದಿಂದ ಪಾಲ್ಗೊಂಡು ಬಹುಮಾನ ಗಳಿಸಿದ್ದು ನನಗೆ ಖುಷಿಯಾಯಿತು.

ಸುಮಾರು 10 ಜನಕ್ಕೆ ಬಹುಮಾನದ ರೂಪವಾಗಿ ಪೇಟ ತೊಡಿಸಿ, ಹಾರ ಹಾಕಿ, ಶಾಲುಹೊದಿಸಿ ಗೌರವಿಸಿದ್ದು ಕಾರ್ಯಕ್ರಮದ ವಿಶೇಷ ಕ್ಷಣ.



ಕೆಲವರು ಡಾಕ್ಟರ್ ಜೊತೆ ತಮ್ಮ ಅನಿಸಿಕೆ / ಅನುಮಾನ ಗಳನ್ನು ಹಂಚಿಕೊಂಡು ಸಂತೋಷ ಪಟ್ಟರು.  ಅಷ್ಟರಲ್ಲಿ 6 ಘಂಟೆಯಾಗಲಿತ್ತು.ಇನ್ನೂ ಬಹಳ ಸಮಯ ಅವರ ಜೊತೆ ಕಳೆಯಲು ತಯಾರಿದ್ದರೂ, ಸಮಯಾಭಾವ ಅಡ್ಡಿಯಾಯಿತು.

ಎಲ್ಲಕ್ಕೂ ಕೊನೆ ಇರಲೇ ಬೇಕಲ್ಲ, ಮತ್ತೊಮ್ಮೆ  ಬನ್ನಿ ಎಂದು ವಿನಂತಿಸಿ ಡಾಕ್ಟರ್ ನ ಬೀಳ್ಕೊಟ್ಟಿದ್ದು ಭಾವಪೂರ್ಣ ವಾಗಿತ್ತು.

ನಂತರ ನಿವಾಸಿಗಳ ಮಾತು, ನನ್ನ ಕಿವಿಗೆ ಬಿದ್ದದ್ದು " ಅಷ್ಟು ದೊಡ್ಡವರು ನಮ್ಮ ಜೊತೆ ಎಷ್ಟು ಸುಲಭವಾಗಿ ಬೆರೆತು ಮಾತಾಡಿದರಲ್ಲಾ....ತುಂಬಿದ ಕೊಡ..."

ಅಷ್ಟಲ್ಲದೇ ಅವರನ್ನು Peoples psychiatrist.   (ಜನಸಾಮಾನ್ಯರ ಮನೋವೈದ್ಯ)  ಎಂದು   ಕರೆಯುತ್ತಾರಾ?

ಧನ್ಯವಾದಗಳು ಸರ್... ನಮ್ಮೊಂದಿಗೆ ಕಳೆದ ಆ ಕ್ಷಣಗಳಿಗಾಗಿ.

ಬಾಲಂಗೋಚಿ....

ಹೋದ ವಾರ ಆಕಸ್ಮಿಕವಾಗಿ ಪಾಲ್ಗೊಂಡದ್ದು ಇನ್ನೊಂದು ತೋಟದ ಭೇಟಿಯಲ್ಲಿ. ನನ್ನ ಅಕ್ಕನ ಮಗಳು ರಾಧಾ ಹಾಗೂ ಪ್ರಕಾಶ್ ದಂಪತಿಗಳು ಬಹು ಆಸೆಯಿಂದ ಕಷ್ಟಪಟ್ಟು ಸಾಧಿಸಿದ ತೋಟದ ಬೆಳವಣಿಗೆಯನ್ನು ನೋಡಲು ಸಾಕಷ್ಟು ದಿನಗಳಿಂದ ( ವರ್ಷಗಳೇ ಎನ್ನಲೇ) ಮುಂದೂಡಿದ್ದ ಭೇಟಿ ಇದ್ದಕ್ಕಿದ್ದಂತೆ ಹೋದ ಭಾನುವಾರ ನೆರವೇರಿತು.

ಬೆಂಗಳೂರಿನಿಂದ ಸುಮಾರು  40 ಕಿಲೋಮೀಟರ್ ದೂರವಿರುವ ತೋಟವನ್ನು ಮುಟ್ಟಿದಾಗ 11  ಘಂಟೆ ದಾಟಿತ್ತು. ಮೊದಲಿಗೆ ಎಳನೀರಿನ ಸಮಾರಾಧನೆ... ನಂತರ ತೋಟವನ್ನು ನೋಡಲು ಹೊರಟಿದ್ದು. 

ನಮ್ಮ ಜೊತೆ ಉತ್ಸಾಹದಿಂದ ಹೊರಟವನು ಎರಡು ವರ್ಷದ ಪೋರ ಪ್ರಭಾಸ್. ಇವನು ಅಲ್ಲಿ ಕೆಲಸ ಮಾಡುವ ಕುಟುಂಬದ ಕುವರ. ಅವನ ಉತ್ಸಾಹಕ್ಕೆ, ನಾವೆಲ್ಲ ಮಾರುಹೋದೆವು. ಎಷ್ಟು ಬೇಗ ಗೆಳೆತನ ಸಾಧಿಸಿದ ಎಂದರೆ... ಗಿಡದ ಹಣ್ಣನ್ನು ಹುಡುಕಿ ನಮಗೆ ತಂದು ಕೊಡುವಷ್ಟು. ಕೈಯಲ್ಲಿ ಒಂದು ಕುಡುಗೋಲು ಹಿಡಿದು, ಅವನಪ್ಪನನ್ನೇ ಅನುಕರಣೆ ಮಾಡುವಂತೆ, ಎಲ್ಲ ಕೆಲಸಕ್ಕೂ ಮುನ್ನುಗುತ್ತಿದ್ದ. 



ತೆಂಗಿನಕಾಯಿಯನ್ನು ಸುಲಿದದ್ದು, ಅದನ್ನು ಚೀಲಕ್ಕೆ ತುಂಬಿದ್ದು, ಸಿಪ್ಪೆಯನ್ನು ಗಾಡಿಯಲ್ಲಿ ಹಾಕಿ ತಳ್ಳಿದ್ದು ನೋಡಿ... ಒಬ್ಬ ಒಳ್ಳೆಯ ಕೆಲಸಗಾರನಾಗುವ ಮುನ್ಸೂಚನೆ ಕಂಡಿತು. ಅತಿ ಉತ್ಸಾಹದಲ್ಲಿ ಬಿದ್ದು ಗಾಯ ಮಾಡಿಕೊಂಡು ಅತ್ತು ಮಲಗಿ ನಿದ್ದೆ ಮಾಡಿದ್ದು... ಸ್ವಲ್ಪ ಪಿಚ್ಛೆನಿಸಿತು.  



ತೋಟದ ವಿಷಯಕ್ಕೆ ಬಂದರೆ... ಅದನ್ನು ರೂಪುಗೊಳಿಸಲು ಪ್ರೇರಣೆ ಕೊಟ್ಟಿದ್ದು, ಪ್ರಕಾಶ್ ಅವರ ವ್ಯವಸಾಯದ ಬಗೆಗಿನ ಆಸ್ಥೆ, ಅದಕ್ಕೆ ಪೂರಕವಾಗಿ ಮಗ ದೀಪುವಿನ ಸಹಯೋಗ. ಬರಡಾಗಿದ್ದ ಭೂಮಿಯನ್ನು, ಸತತವಾಗಿ ಹತ್ತು ವರ್ಷಗಳ ಕಾಲ, ಕಾಯಾ ವಾಚಾ ಮನಸಾ ದುಡಿದು, ಹೂ, ಹಣ್ಣುಗಳು,ತರಕಾರಿ ಬೆಳೆಯುವ, ಎಲ್ಲ ಕಡೆಯೂ ಹಸಿರು ಕಾಣುವ, ಈ ಮಟ್ಟಕ್ಕೆ ತಂದಿರುವುದು ಹರ ಸಾಹಸವೇ ಸರಿ. ದೈವ ಬಲದಿಂದ, ಒಳ್ಳೆಯ ನೀರಿನ ಸೆಲೆ ದೊರೆತದ್ದು, ಎಲ್ಲಕ್ಕೂ ಉತ್ಸಾಹ ತುಂಬಿತ್ತು.        ಬಂಗಾರದ ಮನುಷ್ಯ ಚಿತ್ರದ    "ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದ ಕೆಲಸವು ಮುಂದು...." ಹಾಡನ್ನು ಸಾಕ್ಷಿಕರಿಸಿದ್ದರೇನೋ ಎನ್ನುವಂತಿತ್ತು. ಎಲ್ಲ ಕೆಲಸಗಳಲ್ಲೂ, ರಾಧಾಳ ಸಹಯೋಗದ ಪ್ರಾಮುಖ್ಯತೆಯನ್ನು ಪ್ರಕಾಶ್ ಮನ ಬಿಚ್ಚಿ ಹೊಗಳಿದರು. ಅವರ ಈ ಸಾಧನೆ ಮೆಚ್ಚುವಂಥದ್ದು.

ನಮ್ಮ ಪೀಳಿಗೆಯ ಜನ ಹೊಟ್ಟೆ ಪಾಡಿಗಾಗಿ ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಿದ್ದು. ಆದರೆ ಇಂದಿನ ಪೀಳಿಗೆಯ ಕೆಲವರಾದರೂ, ತಮ್ಮ ಜೀವನಕ್ಕೆ ಬೇಕಾದ ಅನುಕೂಲತೆಯನ್ನು ಮಾಡಿಕೊಂಡು, ತಮ್ಮ ಗಮನವನ್ನು ಕೃಷಿಯ ಕಡೆ ಹರಿಸುತ್ತಿದ್ದಾರೆ ಎನ್ನುವುದೇ ಭರವಸೆಯ ಕುರುಹು. ಇಂತಹ ಮನಸ್ಸಿನ ಯುವಪೀಳಿಗೆ ಹೆಚ್ಚಲಿ ಎಂದು ಆಶಿಸುತ್ತಾ. ..

ನಮಸ್ಕಾರ 


ಡಿ ಸಿ  ರಂಗನಾಥ ರಾವ್

9741128413

    

Comments

  1. ಗುರುಪ್ರಸನ್ನ, ಚಿಂತಾಮಣಿ1 January 2026 at 16:44

    ರುದ್ರಪಟ್ಟಣಂ ಹಾಗೂ ತೋಟದ ಭೇಟಿ ಪ್ರವಾಸದ ಕಥನ ಓದಿದಂತಿತ್ತು. ಇನ್ನು ಕಾರ್ಯಕ್ರಮದ ನಿರ್ವಹಣೆ ಎಂದು ರಸವತ್ತಾಗಿ ಮಾಡುವ ಲೇಖಕರ ಪರಿ ಮೆಚ್ಚುವಂತದ್ದು. ನಾವೇ ಅಲ್ಲಿ ಖುದ್ದಾಗಿ ನೋಡುವಂತೆ ಚಿತ್ರಿಸುವ ಕಲೆಯಲ್ಲಿ ಅವರಿಗೆ ಅವರೇ ಸಾಟಿ.
    ಇನ್ನು ಆಸಕ್ತ ಪೋಷಕ ಸಭಾದ ಕಾರ್ಯಕ್ರಮ ಪ್ರೇಕ್ಷಕರ ಮನಮುಟ್ಟಿದ್ದು ಸಂತೋಷದ ವಿಷಯ ಮತ್ತು ಆ ಕಾರ್ಯಕ್ರಮದಲ್ಲಿ ಮೆಚ್ಚಿನ ವೈದ್ಯರಾದ ಡಾ. ಸಿಆರ್ ಚಂದ್ರಶೇಖರ್ ರವರು ಭಾಗವಹಿಸಿದ್ದು ಸಂತಸದ ವಿಷಯ.
    ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಲೇಖಕರು ಕ್ರಿಯಾಶೀಲರಾಗಿ, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದು.
    ವಂದನೆಗಳು.

    ReplyDelete
  2. ಜಯಸಿಂಹ2 January 2026 at 08:37

    ನಿಮ್ಮ ಚಟುವಟಿಕೆಗಳನ್ನು ನೋಡಿ ಹೆಮ್ಮೆಯೆನಿಸುತ್ತದೆ ಸ್ವಲ್ಪ ಅಸೂಯೆ ಕೂಡ ಹೀಗೆಯೇ ಇದ್ದು ನಮ್ಮಂತಹ ಸೋಮಾರಿಗಳಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಲೇ ಇರಿ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು