ದಾಂಪತ್ಯ - ಸಾಂಗತ್ಯ

 



ಮನೆಯ ಹತ್ತಿರದ ಉದ್ಯಾನವನಕ್ಕೆ ಬೆಳಗಿನ ವಾಯು ವಿಹಾರಕ್ಕೆ ಹೋಗಲು ಪ್ರಾರಂಭ ಮಾಡಿ ಸುಮಾರು ಒಂದುವರೆ ವರ್ಷ ಆಗಿರಬಹುದು. ಎಲ್ಲ ಹೊಸಮುಖಗಳು, ಮಾತನಾಡಲು ಯಾರು ಜೊತೆ ಇಲ್ಲ.. ಹಾಗಾಗಿ ನನ್ನ ಗಮನ ಸುತ್ತಮುತ್ತ ನಡೆದಾಡುತ್ತಿರುವ ಜನಗಳ ಕಡೆಗೆ. ನಿಧಾನವಾಗಿ ಜನಗಳನ್ನು ಪರಿಚಯ ಮಾಡಿಕೊಳ್ಳುತ್ತಾ ಬಂದೆ.  ಹೀಗಿರುವಾಗ ಕಂಡದ್ದೆ ಒಂದು ಜೋಡಿ..( ಕ್ರೌಂಚ ಪಕ್ಷಿಗಳು ಎನ್ನಲೇ?) ಸಾಮಾನ್ಯವಾಗಿ ಇವರಿಬ್ಬರೂ ಮಾತನಾಡಿಕೊಂಡು ಸುತ್ತು ಹಾಕುತ್ತಿದ್ದದ್ದು... ಬೇರೆಯವರ ಜೊತೆ ಬೆರೆಯುವುದಿಲ್ಲವಾ? ಎಂಬ ಅನುಮಾನ ಕಾಡಿದ್ದು ಉಂಟು. ಆದರೆ ಅದು ಸತ್ಯವಲ್ಲ... ಯಾರಾದರೂ ಸಿಕ್ಕಾಗ ಅವರ ಜೊತೆಯೂ ನಾಲ್ಕು ಹೆಜ್ಜೆ ಹಾಕಿ.. ಮತ್ತೆ ಇಬ್ಬರು ಒಂದಾಗಿ ನಡೆದಾಡುವುದನ್ನು ಗಮನಿಸಿದೆ. ಕಾಲಕ್ರಮೇಣ ಅವರ ಪರಿಚಯವೂ ಆಯಿತು. ಅವರೇ ಲಕ್ಷ್ಮೀನಾರಾಯಣ ಮತ್ತು ಜಯಶ್ರೀ  ದಂಪತಿ. 



ಮಾತಿನ ಮಧ್ಯೆ ಒಂದು ದಿನ ಲಕ್ಷ್ಮೀನಾರಾಯಣ ಅವರು  "ನಮ್ಮತ್ತೆಗೆ ಮಾತು ಕೊಟ್ಟಿದ್ದೇನೆ... ನಿಮ್ಮ ಮಗಳ ಜೊತೆ ಯಾವಾಗಲೂ ಇರುತ್ತೇನೆ" ಎಂದು ಹೇಳಿದರು.. ಸ್ವಲ್ಪ ತಮಾಷೆ ಮಾಡಿ ಸುಮ್ಮನಾದೆ. ಅವರ ಆ ಮಾತು ನನಗೆ ಹಿಡಿಸಿತು.  

ಸಾಕಷ್ಟು ನನ್ನ ಪರಿಚಯದ ದಂಪತಿಗಳೊಡನೆ ಸಾಮಾನ್ಯವಾಗಿ ಹಾಗೂ ನನ್ನ ಆಪ್ತ ಸಮಾಲೋಚನೆಯ ಭಾಗವಾಗಿ ಮಾತನಾಡಿದ್ದೇನೆ. ದಾಂಪತ್ಯದ ವಿವಿಧ ಮುಖಗಳ ಪ್ರಸ್ತಾಪ ಮಾಡಿ  ಚರ್ಚಿಸಿದ್ದೇನೆ.

ಹಾಗಾಗಿ ಇವರ ಬಳಿಯೂ ಮಾತನಾಡಲು ಬಯಸಿ ಅವರಲ್ಲಿ ಪ್ರಸ್ತಾಪ ಮಾಡಿದೆ.. ಅದಕ್ಕೆ ಅವರು ಒಪ್ಪಿಗೆಯನ್ನು ಸೂಚಿಸಿದರು.

ಹೀಗೊಂದು ದಿನ ಅವರ ಜೊತೆಯಲ್ಲೇ ನಡೆದಾಡುತ್ತ ಮಾತಿಗೆಳದೆ. ಎರಡು ಪ್ರಶ್ನೆಗೆ ಉತ್ತರ ಬೇಕೆಂದೆ.. ಮೊದಲನೆಯ ಪ್ರಶ್ನೆ..    " ನಿಮ್ಮಿಬ್ಬರ  ಒಮ್ಮ- ಸಮ್ಮತದ ಗುಟ್ಟೇನು?"

ಅದಕ್ಕೆ ಜಯಶ್ರೀ ಅವರು ಕೊಟ್ಟ ಉತ್ತರ...." ಇವರ ಕೆಲಸವು ಹೊರದೇಶಗಳಲ್ಲಿ ಇದ್ದುದರಿಂದ... ನಮ್ಮ ಮೊದಲ ಹಂತದ ಜೀವನ ವಿದೇಶಗಳಲ್ಲೇ ಕಳೆಯಿತು.  ಮಕ್ಕಳ ಓದಿಗಾಗಿ ಹಾಗೂ ನನ್ನಮ್ಮನಿಗೆ ನಾನು ಒಬ್ಬಳೇ ಮಗಳಾಗಿ.. ಆಕೆಯ ಜವಾಬ್ದಾರಿಯೂ ನನ್ನ ಮೇಲಿದ್ದುದರಿಂದ ಅನಿವಾರ್ಯವಾಗಿ ನಾನು ಬೆಂಗಳೂರಿನಲ್ಲಿ ಉಳಿಯಬೇಕಾಯಿತು. ಅವರು ಸುಮಾರು ವರ್ಷಗಳ ಕಾಲ ಅಲ್ಲಿಯೇ ಇದ್ದರು. ಹಾಗಾಗಿ ಅವರು ನಮ್ಮ ಜೊತೆಗೆ ಬಂದ ನಂತರ ಇನ್ನುಳಿದ ಭಾಗದ ಜೀವನವನ್ನು ಒಟ್ಟಿಗೆ ಕಳೆಯಬೇಕೆಂದು ನಿರ್ಧರಿಸಿ.. ಜೊತೆಯಾಗಿ ಜೀವನ ನಡೆಸುತ್ತಿದ್ದೇವೆ"

ಅದೇ ಪ್ರಶ್ನೆಗೆ ಲಕ್ಷ್ಮೀನಾರಾಯಣ ಅವರ ಉತ್ತರ.." ನಮ್ಮತ್ತೆ ಜೀವನದ ಕೊನೆಯ ಘಟ್ಟದಲ್ಲಿದ್ದಾಗ, ನನ್ನೊಡನೆ ಫೋನ್ ಮೂಲಕ ಮಾತಾಡಬೇಕೆಂದು ಬಯಸಿದರು... ಅದು ಸಾಧ್ಯವಾಗದೆ ಅವರು ಕೊನೆಯುಸಿರೆಳೆದರು... ಅವರ ದೊಡ್ಡ ಆಸೆ ನಾವೆಲ್ಲ ಜೊತೆಯಲ್ಲಿ ಇರಬೇಕೆಂದು... ಮನಸಲ್ಲೇ ಅವರಿಗೆ ಮಾತು ಕೊಟ್ಟೆ... ಮುಂದಿನ ಹಂತದ ಜೀವನದಲ್ಲಿ, ನಿಮ್ಮ ಮಗಳ  ಜೊತೆಯಲ್ಲಿ  ಯಾವಾಗಲೂ ಇರುತ್ತೇನೆಂದು... ಹಾಗಾಗಿ ಗಟ್ಟಿ ನಿರ್ಧಾರ ಮಾಡಿ, ಅಲ್ಲಿನ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ... ಅಂದಿನಿಂದ ಜೊತೆಯಲ್ಲೇ ಜೀವಿಸುತ್ತಿದ್ದೇವೆ"

ಜೀವನ ಎಷ್ಟು ಸಂಕೀರ್ಣ  ಅಲ್ಲವೇ ?

ನನ್ನ ಎರಡನೇ ಪ್ರಶ್ನೆ.." ನೀವು ಜಗಳವಾಡುತ್ತೀರಾ?" 

ಉತ್ತರ " ಜಗಳ ಅಲ್ಲ....."

ನನ್ನ ಕೊಸರು ಪ್ರಶ್ನೆ " ಭಿನ್ನಾಭಿಪ್ರಾಯ?"

ಇಬ್ಬರ ಉತ್ತರವೂ ಒಂದೇ ಆಗಿತ್ತು..  "ಭಿನ್ನಾಭಿಪ್ರಾಯಗಳು ಸಾಕಷ್ಟು ಕಾರಣಗಳಿಂದ ಬರುತ್ತಲೇ ಇರುತ್ತವೆ... ಅದನ್ನು ಆಗಿಂದಾಗಲೇ ಸರಿಪಡಿಸಿಕೊಳ್ಳುತ್ತೇವೆ..."

ಇದೆ ದಾಂಪತ್ಯದ ಗುಟ್ಟಲ್ಲವೇ?

ಜಗಳವಾಡದ/ ಭಿನ್ನಾಭಿಪ್ರಾಯಗಳಿಲ್ಲದ ಗಂಡ ಹೆಂಡರು ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲವೇನೋ ಎಂದು ಅನಿಸುತ್ತದೆ. ನನ್ನ ಆಪ್ತ ಸಮಾಲೋಚನೆಯ ಸಮಯದಲ್ಲಿ.. ಗಂಡ ಹೆಂಡಿರ ಮಧ್ಯೆ ಜಗಳ ಇದೆ ಎಂದಾಗ... ನಾನು ಹೇಳುವುದು ಜಗಳವಾಡದಿದ್ದರೆ ಅವರು ಗಂಡ ಹೆಂಡಿರೇ ಅಲ್ಲ... ಹಾಗೇನಾದರೂ ಇದ್ದರೆ, ಅವರಲ್ಲಿ ಒಬ್ಬರು ಇನ್ನೊಬ್ಬರಿಗೆ ಗುಲಾಮರಾಗಿದ್ದರೆ ಮಾತ್ರ ಸಾಧ್ಯ. 

ಹಾಗಾದರೆ ಗಂಡ ಹೆಂಡಿರು  ಜಗಳ ಮಾಡಬೇಕಾ? ಎಂಬ ಪ್ರಶ್ನೆ   ಏಳುತ್ತದೆ .  ಖಂಡಿತ  ಜಗಳ /  ಭಿನ್ನಾಭಿಪ್ರಾಯ ಇರಲಿ.. ಸಿಹಿ ಕಾರ ಉಪ್ಪು ಹುಳಿ ಎಲ್ಲ ಇದ್ದರೆ ಊಟ ಸವಿಯಲ್ಲವೇ?  ಆದರೆ ಜೀವನದ ಕೆಲವು ಹೆಜ್ಜೆಯ ನಂತರ, ಇಬ್ಬರ ಕೈಗಳು ಕೂಡಿ ಪಯಣಸಾಗಲಿ... ಇದು ಎಲ್ಲಿಯ ತನಕ?... ಮತ್ತೊಂದು ಜಗಳ/ ಭಿನ್ನಾಭಿಪ್ರಾಯ ಬರುವ ತನಕ.. ಇದು ಜೀವನಚಕ್ರ.

ಇನ್ನೊಂದು ಹೇಳಿಕೆ ಇದೆ ಗಂಡ ಹೆಂಡಿರು ಬೇಕಾದರೆ ಜಗಳವಾಡಲಿ.. ಯಾಕಂದರೆ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಗಾದೆಯೇ ಇದೆ... ಆದರೆ ಅಪ್ಪ ಅಮ್ಮ ಎಂದಿಗೂ ಜಗಳ ಮಾಡಬಾರದು.

ಇದರರ್ಥ ಇಷ್ಟೇ... ಅಪ್ಪ ಅಮ್ಮ , ಮಕ್ಕಳ ಮುಂದೆ ಜಗಳವಾಡಬಾರದು... ಅದು ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ದಾಂಪತ್ಯದಲ್ಲಿ ಹೆಚ್ಚಿನ ಸಾಂಗತ್ಯ ಇರುವುದು ಪ್ರೀತಿಸಿ ಮದುವೆಯಾದವರಲ್ಲಾ ಅಥವಾ ಹಿರಿಯರು ನೋಡಿ ಮದುವೆಯಾದವರಲ್ಲಾ ಎನ್ನುವ ಪ್ರಶ್ನೆಯನ್ನು ನಾನು ಎದುರಿಸಿದ್ದೇನೆ ನನ್ನ ಅನುಭವದಲ್ಲಿ ಇದಕ್ಕೆ ಸ್ಪಷ್ಟ ಉತ್ತರವಿಲ್ಲ. ಗಂಡ ಹೆಂಡಿರ ಮಧ್ಯದ ಹೊಂದಾಣಿಕೆಯೇ ಇದಕ್ಕೆ ಕಾರಣ ಎಂದು ನನ್ನ ಅಭಿಪ್ರಾಯ. ಪ್ರೀತಿಸಿದವರ ಪರಿಚಯ ಮದುವೆಗೆ ಮೊದಲು, ಹಿರಿಯರು ನೋಡಿದಾಗ ಪೂರ್ಣ ಪ್ರಮಾಣದ ಪರಿಚಯ ಮದುವೆಯ ನಂತರ. ಅದರಲ್ಲೂ ವ್ಯಕ್ತಿಗಳಲ್ಲಿ ಅಡಗಿರುವ ತಿಕ್ಕಲುತನಗಳು ಹೊರಬರುವುದು, ಒಟ್ಟಿಗೆ ಜೀವಿಸಲು ಪ್ರಾರಂಭ ಮಾಡಿದ ನಂತರವೇ. ಮೊದಲು ಸ್ವಲ್ಪಸಮಯ ಜೊತೆಯಲ್ಲಿ  ಇರುವುದರಿಂದ ಮುಖವಾಡ ಹಾಕಬಹುದು. 

ಇಲ್ಲೊಂದು ವಿಶೇಷ, ತಮಾಷೆಯ, ನಿಜ ಸಂಗತಿ, ನಿಮ್ಮೊಡನೆ ಹಂಚಿಕೊಳ್ಳಬೇಕು... ನಾವು ನಾಲ್ಕು ಜನ ಅಣ್ಣ ತಮ್ಮಂದಿರು. ದೊಡ್ಡಣ್ಣ ನ ಅನುಭವ.... ಟೀಚರ್‌ನ ಮದುವೆಯಾದರೆ, ಅವರದು ಯಾವಾಗಲೂ ಅಜ್ಞೆ, ಸಲಹೆ ಸೂಚನೆಗಳೇ.

ಎರಡನೇ ಅಣ್ಣನ ಅನುಭವ ಪ್ರೀತಿಸಿ ಮದುವೆಯಾದರೆ ಅಲ್ಲಿ ಸದರ ಜಾಸ್ತಿ.. ಹಾಗಾಗಿ ಅಲ್ಲಿ ಹೆಚ್ಚೇ ಎನಿಸುವಷ್ಟು ಪ್ರಾಬಲ್ಯ. 

ನನ್ನದಾದರೋ ಪ್ರೀತಿಸಿ ಟೀಚರನ್ನು ಮದುವೆಯಾದ ಪರಿಸ್ಥಿತಿ.. ಹೇಗಿರಬೇಡ ಎಂದು.... ಪ್ರೀತಿಸದ, ಟೀಚರಲ್ಲದವರನ್ನು ಮದುವೆಯಾದ ಮೂರನೇ ಅಣ್ಣನೊಂದಿಗೆ ಪ್ರಸ್ತಾಪ ಮಾಡಿದೆ... ಉತ್ತರ ದೊಡ್ಡ ನಗು.  ಆ ನಗುವಿನ ಹಿಂದೆ ಏನಿತ್ತೋ ಆ ದೇವರಿಗೇ ಗೊತ್ತು.

ನಮ್ಮ ಸಮಾಜದ ಸಂಸ್ಕೃತಿಯಲ್ಲಿ.. ಅನಿವಾರ್ಯ ಕಾರಣಗಳನ್ನು ಬಿಟ್ಟರೆ.. ಮದುವೆ ಜೀವನದಲ್ಲಿ ಒಂದು ಬಾರಿ... ಅದು ಜೀವನಪರ್ಯಂತ ಉಳಿಸಿ ಕಾಪಾಡಬೇಕಾದ ಸಂಬಂಧ. ಹೇಗಾದರೂ ಇರಲಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಒಪ್ಪಿ.. ಜೀವನವನ್ನು ಅಪ್ಪಿಕೊಂಡರೆ ಅದರ ಸೊಗಸೇ ಸೊಗಸು.

ಈ ವಿಚಾರದಲ್ಲಿ ನಮ್ಮ ತಲೆಮಾರಿನ ಹೆಣ್ಣುಗಳ ಸಹನಶೀಲತೆ ಮೆಚ್ಚತಕ್ಕದ್ದೆ. ಬೇರೆಯೇ ಪರಿಸರದಲ್ಲಿ ಹುಟ್ಟಿ ಬೆಳೆದು, ತನ್ನ ಗುಣಗಳು ಚಿಂತನೆಗಳನ್ನು ರೂಪಿಸಿಕೊಂಡಿದ್ದ ಹೆಣ್ಣು.. ಇನ್ನೊಂದು ಪರಿಸರಕ್ಕೆ ಬಂದು.. ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು, ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಳ್ಳುವ ಚಾಕಚಕ್ಯತೆಯನ್ನು ಮೆಚ್ಚತಕ್ಕದ್ದೆ. ಸಾಮ್ರಾಜ್ಯ ಸ್ಥಾಪನೆಗೆ ಒಂದಷ್ಟು ಯುದ್ಧ ಅನಿವಾರ್ಯವೇ... ಅದೇ ಅತ್ತೆ ಸೊಸೆಯರ ಮಧ್ಯೆ ಲೋಕಾ ರೂಢಿಯಾಗಿ ಇರುವ ಸಂಬಂಧ. ಇದನ್ನು ಸರಿ ತೂಗಿಸುವ ಹಗ್ಗದ ಮೇಲಿನ ನಡಿಗೆ ಪಾಪ ಗಂಡಸಿನದು. ಹೆತ್ತು ಹೊತ್ತು ಸಾಕಿ ಸಲಹಿದ ಅಮ್ಮ ಒಂದು ಕಡೆ... ತನ್ನನ್ನೇ ನಂಬಿ, ತವರಿನ ಎಲ್ಲರನ್ನೂ ಬಿಟ್ಟು ಬಂದ ಹೆಂಡತಿ ಒಂದು ಕಡೆ... ಸಂದಿಗ್ಧ. ಅದಕ್ಕೆ ಅಲ್ಲವೇ ತುತ್ತಾ ಇಲ್ಲ ಮುತ್ತಾ... ಮಧ್ಯೆ ಒಂದು ಆಯ್ಕೆ ಅತಿ ಕಷ್ಟ. ಗಂಡ(ಸಿ)ನ ಪಾತ್ರ ಶೋಚನೀಯ.

ಆಪ್ತ ಸಮಾಲೋಚಕನಾಗಿ ಇಂಥ ಸಂದರ್ಭಗಳಲ್ಲಿ ನಾನು ಗಂಡಸಿಗೆ ಕೊಡುವ ಸಲಹೆ.... " ಹೆಂಡತಿಯೊಂದಿಗಿನ ಏಕಾಂತದಲ್ಲಿ, ನಿಮ್ಮದೇ ರೀತಿಯಲ್ಲಿ ಆಕೆಯನ್ನು ಮುದ್ದಿಸಿ, ಹೊಗಳಿ, ಪೂಸಿ ಹೊಡೆದು... ಅಮ್ಮನ ಬಗ್ಗೆ ಒಳ್ಳೆಯ ಅಭಿಪ್ರಾಯ... ಜೊತೆ ಜೊತೆಗೆ.. ಅವಳು ಹಿರಿಯಳು, ಎಷ್ಟು ದಿನ ಇದ್ದಾಳು.. ಇರುವಷ್ಟು ದಿನ ಒಂದಷ್ಟು ನೆಮ್ಮದಿ ಕೊಡೋಣ.. ನಂತರ ನೀನೆ ಈ ಮನೆಗೆ ರಾಣಿ... ನಾವು ಚಿಕ್ಕವರು.. ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳೋಣ..." ಎನ್ನುವಂಥದ್ದು... ಜೊತೆಗೆ ಆ ಹೆಣ್ಣಿನ ದೊಡ್ಡ ಸಮಸ್ಯೆಯನ್ನು ಹೇಗೆ ಪರಿಹಾರ/ ಸಮಾಧಾನ ಕೊಡಬಹುದು ಎಂಬ ಚರ್ಚೆ.

ಇನ್ನು ಅಮ್ಮನೊಡನೆ ಒಂಟಿಯಾಗಿ ಮಾತನಾಡಿ... "ಯಾಕಮ್ಮ ಯೋಚನೆ ಮಾಡ್ತೀಯಾ ನಾನಿದ್ದೀನಲ್ಲ ನಿನ್ನ ಜೊತೆಗೆ" ಅನ್ನುವ ವಿಶ್ವಾಸ ಕೊಟ್ಟು " ಅವ್ಳೇನೋ ಚಿಕ್ಕವಳು, ತಿಳುವಳಿಕೆ ಕಡಿಮೆ, ಹಾಗಾಡ್ತಾಳೆ, ದೊಡ್ಡವಳಾಗಿ ಅವಳಿಗೊಂಚೂರು ಸಮಾಧಾನವಾಗಿ ಮಾತಾಡಿ, ಸರಿ ಮಾಡ್ಕೊ... ನಿನಗೆ ಹೇಳಿಕೊಡಬೇಕಾ, ನೀನೂ ಸೊಸೆಯಾಗಿದ್ದವಳೆ ತಾನೆ". 

ಎಲ್ಲಿಯ ತನಕ ಇದು ಅತ್ತೆ ಸೊಸೆಯ ಮಧ್ಯೆ ಮಾತಿನಲ್ಲಿ ತೇಲಿ ಬರುವುದಿಲ್ಲವೋ ಅಲ್ಲಿಯತನಕ ಯಶಸ್ಸು.. ಇಲ್ಲವಾದರೆ ಗಂಡಸಿಗೆ ತಿರುಗುಬಾಣ ಶತಃಸಿದ್ಧ. 

ಸಾಮಾನ್ಯವಾಗಿ  ಹೆಂಡತಿ... ತನ್ನ ಗಂಡನನ್ನು ಹೊರಗಡೆ ಎಲ್ಲೂ ಕೀಳಾಗಿ ಕಾಣುವಂತೆ ಮಾಡುವುದಿಲ್ಲ.... ಆಂತರ್ಯದಲ್ಲಿ ಎಷ್ಟೇ ಅವಗುಣಗಳು ಕಂಡರೂ, ಭರ್ತ್ಸನೆ ಯನ್ನು  ಮಾಡಿದರೂ. ಜನಪದರು ಹಾಡಿದ ಈ ಸಾಲುಗಳನ್ನು ಗಮನಿಸಿ

ದೇವರದೆಂತಾ ದೊಡ್ಡಸ್ತಿಕೆ ಬಿಡು ನನ್ನ ದೊರೆಯ ಮ್ಯಾಲ. ನನ್ನ ಹೊರತು ಬೇರೊಂದು ಹೆಣ್ಣಮ್ಯಾಲಿಲ್ಲ ಅವಗ ಖ್ಯಾಲಾ.. ಇಲ್ಲ ಅವಗ ಖ್ಯಾಲಾ.

ಅದೇ ಗಂಡನ್ನ... ಕಟುಕ, ರಾಕ್ಷಸ, ಗಿಡುಗ... (ಗಿಳಿಯನ್ನು ಸಾಕಿ ಗಿಡುಕನ ಕೈಗೆ ಕೊಟ್ಟಂತೆ) ಎಂದವರು ಇದ್ದಾರೆ. ಹೆಂಡತಿಯ ಮಾತಿಗೆ ಎದುರಾಡದವನನ್ನು ಅಮ್ಮಾವ್ರ ಗಂಡ.. ಎಂದು ಕರೆದರು ನಮ್ ಕೈಲಾಸಂ.

ಕೃಷ್ಣನಂಥ ಗಂಡಬೇಕು ಎಂದು ಕೇಳಿದ ಹೆಣ್ಣನ್ನು ನಾ  ಕಾಣೆ, ಆದರೆ ರಾಮನಂಥ ಗಂಡಬೇಕು ಎಂದು ಕೇಳುವ ಹೆಣ್ಣುಗಳು ತಾವು ಸೀತೆಯಂತೆ ಇದ್ದಾರಾ ಎಂದು ಯೋಚಿಸುವುದೇ ಇಲ್ಲ. ಮತ್ತದೇ ಜನಪದ ಹಾಡಿನ ಮುಂದಿನ ಸಾಲು, 

ರಾಮ ರಾಮನಂತ ಹೊಗಳೆ ಹೊಗಳುತಾರೆ

ರಾಮನೆಂಥ ಶುದ್ಧ

ಯಾರೋ ಮಾತು ಕೇಳಿ,   ತನ್ನ  ಹೆಂಡಿರ ವನಕೆ ಅಟ್ಟಿಬಿಟ್ಟ

ಆದರೆ ಗಂಡಸಿನದು ವಿರುದ್ಧ ಯೋಚನೆ...    ಇದ್ದಾಗ ಮನ ಬಿಚ್ಚಿ ಹೊಗಳದೆ, ನಂತರ ಹಳಹಳಿಸುವುದು... ಜಿಪಿ ರಾಜರತ್ನಂ ಅವರ ಹೆಂಡ ಕುಡುಕ ರತ್ನನಂತೆ...

ನೀ ನನ್ನಟ್ಟಿ ಬೆಳಕಂಗಿದ್ದೆ ನಂಜು

ಮಾಗಿ ಉಲ್ಮೆಲ್ ಮಲಗಿದ್ದಂಗೆ ಮಂಜು 

ಮಾಗಿ ಕುಗ್ತು ಬೇಸಿಗೆ ನುಗ್ತು ಇದ್ಕಿದ್ದಂಗೆ 

ಮಾಯ್ವಾಗೋಯ್ತು ಮಂಜು           

ನಂಗೂ ನಿಂಗೂ ಎಂಗಗಲೋಯ್ತು ನಂಜು.

ದಾಂಪತ್ಯದ ಮೆರುಗನ್ನು ಕವನದ ರೂಪದಲ್ಲಿ ಬಿಂಬಿಸಿದವರು... ಹಿರಿಯ ಕವಿ ಕೆ ಎಸ್ ನರಸಿಂಹ ಸ್ವಾಮಿಯವರು. ನವದಂಪತಿಗಳ ವಿರಹವನ್ನು ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಕವನದಲ್ಲಿ ಅಪ್ಯಾಯಮಾನವಾಗಿ ವರ್ಣಿಸಿದ್ದಾರೆ. ಅದರಲ್ಲೂ ಕೊನೆಯ ಸಾಲುಗಳಾದ 

ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ

ಯಾರಿಗೆ ಎನ್ನಲು ಹರುಷದಲಿ

ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ..

ಒಂದು ಅದ್ಭುತ ಕಲ್ಪನೆ.

ಆದರ್ಶ ದಂಪತಿಗಳು.. ಅನ್ನುವ ಕಲ್ಪನೆಯು ಚೆನ್ನ. ಈ ಹೆಸರಿನ ಒಂದು ಕಾರ್ಯಕ್ರಮ ಟಿವಿಯಲ್ಲಿ ಬರುತ್ತಿತ್ತು.... ದಂಪತಿಗಳು ಕಾರ್ಯಕ್ರಮಕ್ಕೆ ಒಟ್ಟಾಗಿ ಬಂದಿದ್ದಾರೆ ಎನ್ನುವುದೇ ಮೊದಲ ಹಂತದ ಆದರ್ಶ... ಆನಂತರದ  ಪ್ರಶ್ನೆಗಳು   ವ್ಯಾವಹಾರಿಕ ಮಾತ್ರ .

ಚರಿತ್ರೆಯಲ್ಲಿ, ಪುರಾಣಗಳಲ್ಲಿ.. ಸತಿ ಸಾವಿತ್ರಿ, ಸುಕನ್ಯಾ,  ಮೊದಲಾದ ಹೆಸರಾಂತ , ಗಟ್ಟಿಗಿತ್ತಿ ಹೆಂಡತಿಯರು ಕಾಣ ಸಿಗುತ್ತಾರೆ.

ಪುರಂದರದಾಸರು ಹೇಳಿದಂತೆ.. ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ... ಎನ್ನುವಲ್ಲಿ ಹೆಂಡತಿಯ ಪಾತ್ರ ಎದ್ದು ಕಾಣುತ್ತದೆ.

ಇಂಥದೇ ಭಾವವನ್ನು ತ್ಯಾಗರಾಜರು ತಮ್ಮ

ಎಂತ ನೇರ್ಚಿನಾ ಎಂತ ಚೇಸಿನಾ 

ಎಂತವಾರು ಲೈನಾ..  ಕಾಂತ ದಾಸುಲೇ.. 

ಎಂಬ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ. ಇದರ ಭಾವಾರ್ಥ-  ಎಷ್ಟೇ ಕಲಿತಿರಲಿ ಎಷ್ಟೇ ಸಾಧನೆ ಮಾಡಿರಲಿ, ಎಷ್ಟೇ ಬೆಳೆದಿರಲಿ ಹೆಂಡತಿಯ ದಾಸರೇ..

ಈಗಿನ ಸಿನಿಮಾದವರು ಹೇಳಿರುವುದು ಹೆಣ್ಮಕ್ಳೆ ಸ್ಟ್ರಾಂಗು ಗುರು.

ಇಷ್ಟಾದರೂ... ಘಟವಾಣಿ, ಬಜಾರಿ, ಚಂಡಿ ಎಂಬುವ ವರ್ಣನೆಯೂ ಉಂಟು.

ಕೆಲ ಸಂಪ್ರದಾಯದ ಮದುವೆಗಳಲ್ಲಿ ಉರುಟಣೆ ಎಂಬ ತಮಾಷೆಯೊಂದಿಗೆ ಜೀವನ ದರ್ಶನ ಮಾಡಿಸುವ ಒಂದು ಭಾಗ ಉಂಟು. ಅದು ಪರಸ್ಪರ ಹೆಣ್ಣು ಗಂಡಿನ ಮಧ್ಯೆ ಅನುರಾಗ / ಭಾಂದವ್ಯ ಬೆಳೆಯಲು ಸಹಾಯಕವಾಗಿರುತ್ತದೆ.

ನಿಜ ಜೀವನದಲ್ಲಿ ಗಂಡ ಹೆಂಡತಿಯ ಮಧ್ಯೆ ಮೊದಲಿರುವ ಆಕರ್ಷಣೆ ದೈಹಿಕ ಸುಖ. ಇದು ಕಾಲಕ್ರಮೇಣ ಕಡಿಮೆಯಾಗುವಂತದ್ದು. ಹಾಗಾಗಿ ಪ್ರಕೃತಿ ನಮಗರಿವಿಲ್ಲದಂತೆ, ಸಂಬಂಧವನ್ನು ಗಟ್ಟಿಗೊಳಿಸುವ ಸೂತ್ರವನ್ನು ಹೆಣೆದಿದೆ... ಅದೇ ಅಪ್ಪ ಅಮ್ಮನಾಗುವ ಒಂದು ಘಟ್ಟ - promotion. ಒಂದು ಮಗುವಾಗುತ್ತಿದ್ದಂತೆ ಗಂಡ ಹೆಂಡತಿಯ ಗಮನ ತಮ್ಮಿಬ್ಬರ ಮಧ್ಯದಿಂದ ಮಗುವಿನ ಕಡೆ ಹೋಗುತ್ತದೆ... ಅದು ತ್ರಿಕೋನ ಸಂಬಂಧ... ಬಲುಗಟ್ಟಿ.    ಇದೂ ಒಂದು ದಾಂಪತ್ಯದ ಗುಟ್ಟು. 

ಇಂದಿನ ದಾಂಪತ್ಯದಲ್ಲಿ  ಸಾಮರಸ್ಯದ ಜಾಗವನ್ನು ವೈಯುಕ್ತಿಕ ಪ್ರತಿಷ್ಟೆ   ಆವರಿಸಿದೆ..ಹಾಗಾಗಿ ವಿಚ್ಛೇದನದಲ್ಲಿ ಕೊನೆಯಾಗುತ್ತಿದೆ. ಇದರಿಂದ ಹೊರಬಂದು ಸುಖೀ ಜೀವನ ನಡೆಸುವ ಮನ ಪರಿವರ್ತನೆ ಯುವ ಪೀಳಿಗೆಯಲ್ಲಿ ಮೂಡಲೆಂದು ಆಶಿಸುತ್ತಾ....

ನಮಸ್ಕಾರ....

ಡಿ ಸಿ  ರಂಗನಾಥ ರಾವ್

9741128413

Comments

  1. ದಾಂಪತ್ಯ ದಲ್ಲಿ ಸಾಮರಸ್ಯ ಬಹು ಮುಖ್ಯ. ಸೋತು ಗೆಲ್ಲಬೇಕು.
    ಸರಳ ವಾಗಿ ಅರ್ಥೈಸಿದ್ದೀರಿ sir.

    ReplyDelete
  2. ಬಹಳ ಸುಂದರ ಲೇಖನ ಸರ್.

    ReplyDelete
  3. ಸರಳ ನಿರೂಪಣೆ.ದಾಂಪತ್ಯ ಸಿಹಿಯೋ ಕಹಿಯೋ ನಡೆಯಲೇಬೇಕು .ಸೋಮಶೇಖರ ಇಮ್ರಾಪೂರರ ಗಂಡ ಹೆಂಡತಿ ಜಗಳ ಅಂದರ ಗಂಧ ತೀಡಿದ್ಹಾಂಗ ನೆನಪಿಗೆ ಬಂತು

    ReplyDelete
  4. Nicely expressed about relationships.

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು