ದೀಪಾವಳಿ - ಬಲಿ ಚಕ್ರವರ್ತಿ
Time and tide waits for none - ಸಮಯ ನಿಂತ ನೀರಲ್ಲ... ಅದು ಯಾರಿಗೂ, ಯಾವುದಕ್ಕೂ ಕಾಯುವುದಿಲ್ಲ... ಇದು ಪ್ರಕೃತಿಗೂ ಹೊರತಲ್ಲ. ಚಲನೆಯು ಸಮಯದ ಗುಣ. ಆಗಬೇಕಾಗಿರುವ ಘಟನೆಗಳೆಲ್ಲ ಆಯಾ ಸಮಯಕ್ಕೆ ತಾನೇ ತಾನಾಗಿ ಘಟಿಸುತ್ತಿರುತ್ತವೆ. " ಜಬ್ ಜಬ್ ಜೋ ಜೋ ಹೋನಾ ಹೈ..ತಬ್ ತಬ್ ಸೋ ಸೋ ಹೋತಾ ಹೈ" ಎನ್ನುವುದು ಒಂದು ಹಿಂದಿಯ ಹೇಳಿಕೆ. ಅದೇ ರೀತಿ , ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ಜನರಿಂದ ಪೂಜಿಸಿಕೊಳ್ಳುವ ವರವನ್ನು, ವಿಷ್ಣುವಿನಿಂದ ಪಡೆದ ಬಲಿಚಕ್ರವರ್ತಿ, ಬರಬೇಕಾದ ದೀಪಾವಳಿಯ ಪಾಡ್ಯವೂ ಬಂತು... ಬಲಿಪಾಡ್ಯಮಿಯ ಬಲೀಂದ್ರನ ಪೂಜೆಯ ದಿನವೂ ಮುಗಿದೇ ಹೋಯಿತು.
ಬಲಿ ಚಕ್ರವರ್ತಿಯ ಕಥೆ.. ಚಿಕ್ಕಂದಿನಲ್ಲಿ ಕೇಳಿದಾಗ, ನನಗೆ ಮೂಡಿದ ಪ್ರಶ್ನೆಗೆ ಇದುವರೆಗೂ ಸಮಂಜಸವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಾಮನನ ಅವತಾರಿ ವಿಷ್ಣು ತ್ರಿವಿಕ್ರಮನಾಗಿ ಬೆಳೆದದ್ದು ಒಪ್ಪಲು ಕಷ್ಟವಾದರೂ, ಸಾಧ್ಯ ಉಂಟು ಎಂದು ನಂಬಿದೆ. (ಆಂಜನೇಯ ಆಕಾಶದೆತ್ತರಕ್ಕೆ ಬೆಳೆದು ಲಂಕೆಗೆ ಹಾರಿದ್ದ ಉದಾಹರಣೆ ಇತ್ತಲ್ಲ ) ಆದರೆ ತ್ರಿವಿಕ್ರಮ ಇಟ್ಟ ಮೊದಲನೆಯ ಹೆಜ್ಜೆ ಭೂಮಿಯನ್ನಾವರಿಸಿದ್ದು ಒಪ್ಪಿದರೂ.. ಭೂಮಿಯ ಮೇಲಿದ್ದ ಜನರ ಪರಿಸ್ಥಿತಿ ಏನು, ಅದು ಬಿಡಿ ಬಲಿ ಚಕ್ರವರ್ತಿ ಆಗ ಎಲ್ಲಿದ್ದ ಎನ್ನುವುದು ನಿಗೂಢ. ಇಂಥ ಪ್ರಶ್ನೆ ಕೇಳಿದಾಗ, ತಲೆಹರಟೆ ಮಾಡಬೇಡ... ದೇವರ ಕಥೆ ಒಪ್ಪಿಕೋ ಬೇಕು ಅಷ್ಟೇ... ಎಂಬ ಉತ್ತರ ಸಮಾಧಾನ ತಂದಿಲ್ಲ. ಯಾರೋ ಹೇಳಿದ ಮಾತು ತ್ರಿವಿಕ್ರಮ ಎಷ್ಟು ಎತ್ತರ ಇದ್ದ ಎಂದರೆ ಬಲಿ ಚಕ್ರವರ್ತಿ ಅವನ ಕಾಲಿನ ಹೆಬ್ಬೆರಳ ಸಂದಿಯಲ್ಲಿ ಇರಬಹುದಾ ಎಂಬ ಮಾತು ಒಪ್ಪಬಹುದೇನೋ. ಪಾಪ ಹೆಬ್ಬೆರಳ ಸಂದಿಯಲ್ಲಿ ಇದ್ದ ಬಲಿ ಚಕ್ರವರ್ತಿಯನ್ನು ಹುಡುಕಿ ಇನ್ನೊಂದು ಪಾದ ಅವನ ತಲೆಯ ಮೇಲಿಟ್ಟು ಪಾತಾಳಕ್ಕೆ ತಳ್ಳಿದ ತ್ರಿವಿಕ್ರಮನ ಕಾರ್ಯದ ನ್ಯಾಯಾನ್ಯಾಯ ಆ ದೇವರಿಗೇ ಗೊತ್ತು.
ಈ ಪಾತಾಳ ಅನ್ನೋದು ಎಷ್ಟು ಕೆಳಗಿದೆ ಅಂದ್ರೆ ಅಲ್ಲಿಗೆ ಹೋಗುವ ಮುನ್ನ ದಾಟಬೇಕಾದ್ದು ಅತಳ, ವಿತಳ, ಸುತಳ, ರಸಾತಳ, ತಲಾತಳ, ಮಹಾತಳ ನಂತರ ಪಾತಾಳ... ಅಬ್ಬಬ್ಬಾ ತ್ರಿವಿಕ್ರಮ ಬಲಿ ಚಕ್ರವರ್ತಿಯನ್ನ ಎಷ್ಟು ಜೋರಾಗಿ ಕಾಲಲ್ಲಿ ತುಳಿದಿರಬಹುದು ಪಾತಾಳ ಮುಟ್ಟಕ್ಕೆ...? ಆ ಬಲ ಬರಲು, ಇನ್ನೊಂದು ಕಾಲಿನ ಪಾತ್ರ ಎಷ್ಟಿರಬಹುದು? ಹಾಗೆ ಆ ಕಾಲು ಎಲ್ಲಿತ್ತು ಎನ್ನುವ ನನ್ನ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ.
ಪಾತಾಳ ಎನ್ನುವುದು ಎಷ್ಟೊಂದು ಆಳದಲ್ಲಿರುವ ಜಾಗ ಅಲ್ಲವೇ?
ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ, ಕಡಿಮೆ ಬಿದ್ದಾಗ, ಬೆಲೆಗಳು ಪಾತಾಳಕ್ಕೆ ಇಳಿದಿವೆ ಎಂದು ಮಾತನಾಡಿಕೊಂಡಿದ್ದನ್ನು ನಾನು ಕೇಳಿದ್ದೇನೆ.
ಒಬ್ಬ ವ್ಯಕ್ತಿಯು ತನ್ನ ದುಷ್ಟ ಚಟಗಳಿಂದ / ಕೆಟ್ಟ ಕೆಲಸಗಳಿಂದ ಹಾಳಾದಾಗ ಅವನ ಅಧಃ ಪತನವನ್ನು, " ಪಾತಾಳಕ್ಕೆ ಬಿದ್ದೋಗಿದ್ದಾನೆ.. ಮೇಲೆ ಏಳುವುದು ಕಷ್ಟ" ಎಂದು ವರ್ಣಿಸುವುದು ಉಂಟು.
ಹಾಗಾದರೆ ಬಲಿ ಚಕ್ರವರ್ತಿಯದು ಅಧಃಪತನವೇ? ಬಲಿಚಕ್ರವರ್ತಿಯ ಅಹಂಕಾರ, ಉದ್ಧಟತನದಂತಹ ದುಷ್ಟ ಗುಣಗಳ ಅಧಃಪತನವನ್ನು ಸೂಚ್ಯವಾಗಿ ಪ್ರಕಟ ಪಡಿಸಿರಬೇಕು ಎಂದು ನನ್ನ ಅನಿಸಿಕೆ. ವ್ಯಕ್ತಿಯಾಗಿ ವರ್ಷಕ್ಕೊಮ್ಮೆ ಬಂದು ಪೂಜೆಗೊಳ್ಳಲು ವರ ಕೊಟ್ಟು ಅನುಗ್ರಹಿಸಿದ್ದು ಇದರ ಪ್ರತೀಕವಾಗಿ. Hate the habits not the person ಎಂಬುದು ಸರಿಯೇನೋ.
ಪಾತಾಳ ಅಂದಾಗ, ನೆನಪಿಗೆ ಬರುವುದು ಪಾತಾಳ ಗರಡಿ. ನನ್ನೂರು ದೊಡ್ಡಜಾಲದಲ್ಲಿ , ನಮಗೆ ಕುಡಿಯುವ ನೀರಿನ ಆಸರೆಗೆ ಇದ್ದದ್ದು ಭಾವಿ.
ಭಾವಿಯಿಂದ ನೀರನ್ನು ಮೇಲಕ್ಕೆತ್ತಲು (ಸೇದಲು), ಆಗಿನ ಕಾಲಕ್ಕೆ ಉಪಯೋಗಿಸುತ್ತಿದ್ದದ್ದು ಹಿತ್ತಾಳೆ/ ತಾಮ್ರದ ಬಿಂದಿಗೆಗಳು. ಬೇರೆ ಬೇರೆ ಕಾರಣಗಳಿಂದ ಈ ಬಿಂದಿಗೆಗಳು ಹಗ್ಗದಿಂದ ಕಳಚಿ ನೀರಿನಲ್ಲಿ ಮುಳುಗುತ್ತಿದ್ದವು. ಇದನ್ನು ತೆಗೆಯಲು ಯಾರಾದರೂ ನೀರಲ್ಲಿ ಮುಳುಗಿ ಮೇಲೆತ್ತಬೇಕು.. ಅಥವಾ ಪಾತಾಳ ಗರಡಿಯನ್ನು ಉಪಯೋಗಿಸಿ, ಅದರ ಕೊಕ್ಕೆಗಳ ಮೂಲಕ ಮುಳುಗಿದ ಬಿಂದಿಗೆಗಳನ್ನು ಮೇಲೆತ್ತ ಬೇಕು. ಹೀಗೆ ಮೇಲಕ್ಕೆತ್ತಿದ ಬಿಂದಿಗೆಗಳನ್ನು ಅದರ ವಾರಸುದಾರರು ಸ್ವಲ್ಪ ಹಣ ಕೊಟ್ಟು ತೆಗೆದುಕೊಂಡು ಹೋಗಬೇಕು. ಇದು ಆತ ಮಾಡಿದ ಕೆಲಸಕ್ಕೆ ಕೊಡುವ ಸಂಭಾವನೆ.
ಎಸ್ ಎಲ್ ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ ನಂಜಮ್ಮನ ಅಣ್ಣ ಕಲ್ಲೇಶ, ಬಾವಿಯಲ್ಲಿ ಬಿದ್ದಿದ್ದ ತಂಗಿಯ ಮನೆಯ ಬಿಂದಿಗೆಯನ್ನು ತೆಗೆದುಕೊಟ್ಟು, ಜೊತೆಗೆ ತೆಗೆದಿದ್ದ ಬೇರೆಯವರ ಬಿಂದಿಗೆಗಳಿಗೆ ಹಣ ಪಡೆದಿದ್ದನ್ನು ಚಿತ್ರಿಸಿದ್ದಾರೆ.
ಬಲಿಪಾಡ್ಯಮಿಯ ಹಬ್ಬದ ಸಡಗರವನ್ನು ಅನುಭವಿಸಿದ್ದು ನನ್ನೂರು ದೊಡ್ಡಜಾಲದಲ್ಲಿ ಇದ್ದಷ್ಟು ದಿನ. ಬೆಂಗಳೂರಿಗೆ ಬಂದಮೇಲೆ ಆ ಮಟ್ಟದ ಸಡಗರ ಪಟ್ಟಿದ್ದಿಲ್ಲ.
ಅಂದಿನ ಮುಖ್ಯ ಕೆಲಸ, ಬೆಳಿಗ್ಗೆ ಹಸುವಿನ ಸಗಣಿಯನ್ನು ಹುಡುಕಿ ತರುವುದು. ಅದು ಪಿಳ್ಳಾರಿಗಳನ್ನು ಮಾಡಲು ಅನುಕೂಲ ವಾಗುವ ಮಟ್ಟಿಗೆ ಗಟ್ಟಿಯಾಗಿರಬೇಕು.
ಅಂದಿನ ಕಾಲಕ್ಕೆ ಸಗಣಿಗೆ ಒಂದು ವಿಶಿಷ್ಟ ಸ್ಥಾನವಿದ್ದು, ನೆಲವನ್ನು ಸಾರಿಸಲು ಸಗಣಿ ಮುಖ್ಯವಾದ ವಸ್ತುವಾಗಿತ್ತು.
ಪ್ರಾಯಶಃ ಈಗಿನ ನಗರಗಳ ಹಸುಗಳು ಹಾಕುವ ಸಗಣಿಯನ್ನು, ಅದರ ವಾಸನೆಯನ್ನು ಸಹಿಸದ ಜನರು ಸಗಣಿ ಎಂದರೆ ಅಸಹ್ಯ ಪಡುವುದು ಸಹಜ. ಆದರೆ ಹಳ್ಳಿಯಲ್ಲಿನ ದನ ಕರುಗಳು, ಹುಲ್ಲು ಹಾಗೂ ಕುರುಚಲ ಕಾಡಿನಲ್ಲಿ ಸಿಗುತ್ತಿದ್ದ ಎಲ್ಲ ತರದ ಸೊಪ್ಪು ಸದೆಗಳನ್ನು ತಿನ್ನುತ್ತಿದ್ದ ಕಾರಣ ಸಗಣಿ / ಗಂಜಲದ ವಾಸನೆ ತುಂಬ ಸಹ್ಯವಾಗಿತ್ತು... ಜನಜೀವನದ ಅವಿಭಾಜ್ಯ ಅಂಗವಾಗಿತ್ತು.
ಅಂತಹ ಸಗಣಿಯನ್ನು ಉಪಯೋಗಿಸಿ ಬಲಿಚಕ್ರವರ್ತಿಯ/ ಬಲಿಯೇಂದ್ರನ ಪೂಜೆಗಾಗಿ ಒಂದು ಮರದ ಮಣೆಯ ಮೇಲೆ ಸಿದ್ಧಪಡಿಸುತ್ತಿದ್ದ ಕೋಟೆ, ಅರಮನೆ, ಕಾವಲುಗಾರರು ಮುಂತಾದ ಪ್ರತಿ ಕೃತಿಗಳನ್ನು, ಹುಚ್ಚೆಳ್ಳು ಹೂವು, ಸಿಹಿ ಕುಂಬಳದ ಹೂವು ಹಾಗೂ ಕಾಸ್ಮಾಸ್ ಹೂವು ( ಕಾಸ್ಮಾಸ್ ಹಾಗೂ ಡೇರೆ ಹೂವುಗಳು ನಮ್ಮೂರಿಗೆ ಬಂದ ಹೊಸತು, ಅದನ್ನು ಬೆಳೆಸಿದ್ದೆ ಒಂದು ಹೆಮ್ಮೆ) ಬಳಸಿ ಅಲಂಕಾರ ಮಾಡುವುದು. ಎಲ್ಲ ಹೂಗಳು ಹಳದಿ ಮಿಶ್ರಿತ ಕೇಸರಿಯ ಬಣ್ಣದ್ದಾಗಿರುತ್ತಿತ್ತು. ಈ ಹೂವುಗಳನ್ನೇ ಆಯ್ಕೆ ಮಾಡಲು ಕಾರಣವೇನೋ ತಿಳಿಯದು. ಸಗಣಿಯ ಪಿಳ್ಳಾರಿಗೆ, ಒಂದಕ್ಕೆ ರಂಗೋಲಿಯ ಬಿಳಿಯ ಬಣ್ಣ, ಇನ್ನೊಂದಕ್ಕೆ ಕೆಮ್ಮಣ್ಣಿನ ಕೆಂಪು ಬಣ್ಣ ಬಳಿದು, ಮೇಲೆ ಒಂದೊಂದು ಹುಚ್ಚೆಳ್ಳು ಹೂವನ್ನು ಸಿಕ್ಕಿಸಿದರೆ ಅದು ಜೋಡಿ ಕಾವಲುಗಾರರ ಸಂಕೇತ. ಈ ಪಿಳ್ಳಾರಿಗಳು ಬಲೀಂದ್ರನ ಮಣೆಯ ಮೇಲೆ ಅಲ್ಲದೆ ಮನೆಯ ಎಲ್ಲ ಬಾಗಿಲಿನ ಹೊಸಿಲಿನ ಎರಡೂ ಕಡೆ ಇಡುತ್ತಿದ್ದದ್ದು, ನಮ್ಮ ಮನೆಯನ್ನೂ ರಕ್ಷಿಸಲಿ ಎಂಬ ಭಾವದಿಂದ.
ಸಂಜೆ ಪೂಜೆಯ ವೇಳೆ ಬಲಿಂದ್ರನ ಮೇಲೆ ಹಾಲನ್ನು ಅಭಿಷೇಕ ಮಾಡಿ ಅದು ಮಣೆಯಿಂದ ಆಚೆ ಹರಿಯುವಂತಾಗಬೇಕು. ಬಹುಶಃ ಅದು ಸಮೃದ್ಧಿಯ ಸಂಕೇತ ಆಗಿತ್ತೇನೋ.
ಬಲೀಂದ್ರನಿಗೆ ಒಂದು ದಿನದ ಮಟ್ಟಿಗೆ ಭೂಮಿಯ ಮೇಲೆ ಇರಲು ವರವಿದ್ದ ಕಾರಣವೋ ಏನೋ, ಬೆಳಿಗ್ಗೆ ನಾವು ಏಳುವ ಹೊತ್ತಿಗೆ, ಅಮ್ಮ ತಯಾರು ಮಾಡಿದ್ದ ಎಲ್ಲವನ್ನೂ ಅದರ ಜಾಗದಿಂದ ತೆಗೆದು (ತಿಪ್ಪೆಗೆ ?) ಎಸೆಯುತ್ತಿದ್ದ ನೆನಪು. ಬೆಳಿಗ್ಗೆ ಎದ್ದು ಮನೆಯ ಗಂಡಸರು ಅದನ್ನು ನೋಡಬಾರದು ಎನ್ನುವುದು ಒಂದು ಪದ್ಧತಿ. ಅವನತಿಯ ಸಂಕೇತವನ್ನು ನೋಡಬೇಕು ಏಕೆ?
ಪಾಡ್ಯಮಿಯ ರಾತ್ರಿ, ಬಲಿಯೇಂದ್ರನ ಮೇಲಿನ ಹೂವನ್ನು ಮನೆಯ ಮೇಲೆ ಎಸೆಯುವುದು ಒಂದು ಸಂಪ್ರದಾಯ. ಇದರಿಂದ ಮನೆಯಲ್ಲಿನ ಹೊನ್ನು( ಚಿನ್ನ.. ಐಶ್ವರ್ಯ) ಹೆಚ್ಚುತ್ತದೆ ಎಂಬ ನಂಬಿಕೆ. ನಮ್ಮ ಮನೆಯವರೆಲ್ಲ "ಚಂದ್ರಶೇಖರಯ್ಯನವರ ಮನೆಯ ಹೊನ್ನು ಹೆಚ್ಚಲಿ" ಎಂದು ಹೇಳಿ ಹೂವನ್ನು ಮನೆಯ ಮೇಲೆ ಎಸೆಯುತ್ತಿದ್ದದ್ದು. ನಮ್ಮಪ್ಪನ ಹೆಸರು ಚಂದ್ರಶೇಖರಯ್ಯ... ನಮ್ಮ ಮನೆಯ ಯಜಮಾನರು.
ಗಮನವೆಲ್ಲ ಪಟಾಕಿಯ ಮೇಲೆ ಇರುತ್ತಿದ್ದ ಕಾರಣ..ಈ ಹಬ್ಬಕ್ಕೆ ಏನು ವಿಶೇಷ ಅಡಿಗೆ ಮಾಡುತ್ತಿದ್ದರು ಎಂಬ ನೆನಪೇ ಇಲ್ಲ.
ವ್ಯಾಪಾರಸ್ಥರಿಗೆ ಅಮಾವಾಸ್ಯೆಯ ಲಕ್ಷ್ಮಿ ಪೂಜೆ ನಂತರದ ದಿನ, ಪಾಡ್ಯದಿಂದ ಹೊಸ ವರ್ಷ ಪ್ರಾರಂಭ.
ಸರ್ಕಾರಕ್ಕೆ ಕೊಡಬೇಕಾದ ಲೆಕ್ಕಗಳನ್ನು ಏಪ್ರಿಲ್ ಒಂದರಿಂದ ಗಣನೆಗೆ ತೆಗೆದುಕೊಳ್ಳಬೇಕಾದರೂ ಸಹ... ಕೆಲವರು ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ, ಹೊಸ ಲೆಕ್ಕದ ಪುಸ್ತಕವನ್ನು ಪೂಜೆ ಮಾಡುತ್ತಾರೆ, ಲೆಕ್ಕ ಬರೆಯುವುದು ಕಂಪ್ಯೂಟರ್ ಮೂಲಕವಾದರೂ ಸಹ.
ನೆನಪುಗಳು ಯಾವಾಗಲೂ ಮಧುರವೇ. ಕಷ್ಟದ ದಿನಗಳನ್ನು ನೆನೆಸಿಕೊಂಡಾಗ... ಅಬ್ಬಾ, ಆ ದಿನಗಳು ಮುಗಿದವು, ದೇವರು ದಯಾಮಯ ಇಂದು ಸುಖವಾಗಿಟ್ಟಿದ್ದಾನೆ ಎಂಬ ಸ್ವ ಸಾಂತ್ವನ ಚಿಂತನೆ. ಇನ್ನು ಸುಖದಿಂದಂತೂ ಸರಿಯೇ ಸರಿ.. ಕೆಲವು ನೆನಪುಗಳು, ಕಚಗುಳಿ ಇಡುವಷ್ಟು ಖುಷಿಯನ್ನು ಕೊಡುತ್ತವೆ ಅಲ್ಲವೇ?
ನನ್ನ ಇಂದಿನ ನೆನಪಿನ ಓಟ ಇಲ್ಲಿಗೆ ನಿಲ್ಲಿಸುತ್ತೇನೆ... ನಮಸ್ಕಾರ.
ಡಿ ಸಿ ರಂಗನಾಥ ರಾವ್
9741128413





👌👌
ReplyDeleteಹೌದು ನನ್ನ ಮನಸ್ಸಿನ ಎಲ್ಲಾ ಭಾವನೆಗಳನ್ನು
ReplyDeleteನಿಮ್ಮ ಲೇಖನದಲ್ಲಿ ಮೂಡಿಸಿದ್ದೀರಿ.... ವರಾಹ ರೂಪದಲ್ಲಿ ಭೂಮಿಯನ್ನು ಮೇಲಕ್ಕೆ ಎತ್ತಿದ್ದು, ಚಂದ್ರನ ಹೊಟ್ಟೆ ಒಡೆದಿದ್ದು ಇವೆಲ್ಲಾ ಈಗ
ಬಾಲಿಷಾ ಅನ್ನಿಸಿದರೂ ಇಂತಹ ಕಥೆಗಳ ಮೂಲಕ ಅಂದಿನ ದಿನಗಳಲ್ಲಿ ಯಾವುದೋ ಸಂದೇಶ ಇರಬಹುದು... ನಮ್ಮ ಪೂರ್ವಿಕರಿಂದ ಸರಿಯಾಗಿ (knowledge transfer) ಆಗದೆ ಇತ್ತ ಪೂರ್ತಿ ನಂಬಲು ಆಗದೆ... ವಿರೋಧಿಸಲು ಆಗದೆ ಇಬ್ಬಂದಿ ಸ್ಥಿತಿ ಆಗಿದೆ... ಇರಲಿ ಬಿಡಿ... ಈ ಹಬ್ಬ ಗಳ ಆಚರಣೆ
ಮೂಲಕ ನಮ್ಮ ಹಿಂದಿನ ಸವಿ ನೆನಪುಗಳನ್ನು
ಮೆಲುಕು ಹಾಕುತ್ತಾ ಹೊಸ ಬದಲಾವಣೆಗೆ ಒಗ್ಗಿ ಕೊಂಡು ಸಮರದ ಹಾದಿ ಬಿಟ್ಟು ಸಮರಸದ
ಜೀವನ ಸಾಗಲಿ.... ಏನಂತೀರಾ!!
ಧನ್ಯವಾದಗಳು
ಬಾಬು
Beautiful
ReplyDeleteಬಲಿಚಕ್ರವರ್ತಿಯ ಒಳ್ಳೆಯತನ ಅಂದರೆ ದಾನದ ಬುದ್ಧಿಯ ಬಗ್ಗೆ ಕೇಳಿದ್ದೇನೆ ,ಓದಿದ್ದೇನೆ ಆದರೆ ಅವನ ಬಗ್ಗೆ ಕೆಟ್ಟದ್ದನ್ನು ಎಲ್ಲಿಯೂ ಓದಿದ ನೆನಪೇ ಇಲ್ಲ.!
ReplyDeleteವಾಮನ ಮೂರ್ತಿಯು ಅಳತೆಗಾಗಿ ತನ್ನ ಪಾದವನ್ನು ಬಲಿಚಕ್ರವರ್ತಿಯ ಮೇಲಾಗಲಿ ಅಥವಾ ಭೂಮಿಯ ಮೇಲೆ ಇಡದೆ ಕೇವಲ ಗಾಳಿಯಲ್ಲಿ ಇಟ್ಟುಕೊಂಡಿದ್ವ ಎಂದು ಊಹಿಸೋಣವೇ?
ಬಲಿಪಾಡ್ಯಮೆಯ ಆಚರಣೆಯ ವಿವರ ಸೊಗಸಾಗಿದೆ.
ನನಗೆ ತಿಳಿದಂತೆ ಮಾರ್ವಾಡಿಗಳು ಅಂದರೆ ಜೈನರು, ಧನಲಕ್ಷ್ಮಿ ಪೂಜೆಯಿಂದ ಹೊಸದಾದ ಲೆಕ್ಕವನ್ನು ಪ್ರಾರಂಭಿಸುತ್ತಾರೆ.
ನೆನಪಿನ ಬುತ್ತಿಯಿಂದ:
ನಮ್ಮ ಊರಿನಲ್ಲಿ ಹಿಂದೊಮ್ಮೆ ನಾನು ಖರೀದಿಸಿದ ಹೊಸದಾದ ಟಿ-ಶರ್ಟ್ ಬಾವಿಗೆ ಬಿದ್ದು ಮುಳುಗಿ ಹೋಗಿದ್ದು ಅದನ್ನು ಪಾತಾಳ ಗರಡಿಯಿಂದ ಮೇಲಕ್ಕೆತ್ತಿದ್ದು ನೆನಪಿಗೆ ಬರುತ್ತಿದೆ.