ಜೀವನದರ್ಶನ - ಅವರವರ ದೃಷ್ಟಿಯಲ್ಲಿ.





ನನ್ನ ಇಬ್ಬರು ಸ್ನೇಹಿತರ ಮಧ್ಯೆ ಒಂದು ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ ಅವರಿಬ್ಬರಿಗೂ ತಿಳಿದ ವ್ಯಕ್ತಿಯ ಬಗ್ಗೆ. ಒಬ್ಬರ ಅಭಿಪ್ರಾಯ ಅವರು ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ ಅದರಲ್ಲಿ ನಾನು ಒಬ್ಬ... ಇನ್ನೊಬ್ಬರ ಅಭಿಪ್ರಾಯ.. ಅವರು ಹಾಗೇನು ಮಾಡಿಲ್ಲ ನನಗೆ ಗೊತ್ತು. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಹೇಳುವುದು ಸಾಧ್ಯವೇ? ಇಬ್ಬರಿಗೂ ಅವರದೇ ಆದ ಅಭಿಪ್ರಾಯ ಆ ಮೂರನೆಯ ವ್ಯಕ್ತಿಯ ಬಗ್ಗೆ... ಅವರವರು ಕಂಡಂತೆ.

ಜೀವನವೇ ಹಾಗಲ್ಲವೇ?. ಯಾವುದೇ ವಿಷಯವಾಗಲಿ ಅದರ ಬಗ್ಗೆ ನಮ್ಮ ಅಭಿಪ್ರಾಯ ಮೂಡುವುದು, ಆ ವಿಷಯದ ಬಗ್ಗೆ ನಮಗಿರುವ ತಿಳುವಳಿಕೆ, ಅನುಭವ ದಿಂದ ಮಾತ್ರ ನಿಲುಕುವಂಥದ್ದು. ಅಂದರೆ ನನ್ನ ಸೀಮಿತ ಜ್ಞಾನಕ್ಕೆ ನಿಲುಕುವಷ್ಟು. ಸಮುದ್ರದ ತುಂಬಾ ನೀರಿದ್ದರೂ , ಎಷ್ಟು ಬೇಕಾದರೂ ತೆಗೆದುಕೊಳ್ಳಲು ಅಡ್ಡಿ ಇಲ್ಲದಿದ್ದರೂ.. ನನಗೆ ದಕ್ಕುವುದು ಮೊದಲ ಹಂತದಲ್ಲಿ ನನ್ನ ಬೊಗಸೆಗೆ ನಿಲುಕುವಷ್ಟು ಮಾತ್ರ.. ಜಿಎಸ್ ಶಿವರುದ್ರಪ್ಪನವರ ಈ ಹಾಡು  ಮಣ್ಣಿನ ಬಗ್ಗೆ ಇಬ್ಬರಿಗಿರುವ ಇಬ್ಬಗೆಯ ದೃಷ್ಟಿಕೋನ.

ನನಗೆ ತುಂಬಾ ಪರಿಚಿತ ಹಿರಿಯರೊಬ್ಬರ ಅಳಿಯ ಸರ್ಕಾರದ ಮುಖ್ಯ ಇಲಾಖೆಯಲ್ಲಿ  ಗುಮಾಸ್ತ. ಚೆನ್ನಾಗಿ ಸಂಪಾದಿಸುತ್ತಿದ್ದ (ಲಂಚ ಎಂದು ಬೇರೆ ಹೇಳಬೇಕೆ?) ವ್ಯಕ್ತಿ. ತಮ್ಮ ಅಳಿಯನಿಗೆ ಸಂಪಾದನೆ ಚೆನ್ನಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು. ಮುಂದೊಂದು ದಿನ ತನ್ನ ಮಗ ಅದೇ  ಇಲಾಖೆಗೆ ತನ್ನ ಕೆಲಸ ಆಗಲು ದೊಡ್ಡ ಮೊತ್ತದ ಲಂಚ ಕೊಡಬೇಕಾಗಿ ಬರಲು, ತನ್ನ ನೋವು / ಕಷ್ಟವನ್ನು ಮನೆಯವರೊಂದಿಗೆ ಹಂಚಿಕೊಂಡಿದ್ದಾನೆ.  ಹಿರಿಯರಿಗೆ ತಮ್ಮ ಮಗನ ಕಷ್ಟ ತಿಳಿದು ನೋವಾಗಿದೆ... ಲಂಚ ಕೇಳುವವರಿಗೆ ಹಿಡಿ ಶಾಪ ಹಾಕಿದ್ದಾರೆ. ಹೇಗಿದೆ ಈ ದೃಷ್ಟಿಕೋನ. ನಮ್ಮವರಿಗೆ ಅನುಕೂಲವಾದ ಕೃತ್ಯ ಸರಿ, ಅದೇ ಕೃತ್ಯ ನಮ್ಮವರಿಗೆ ಅನಾನುಕೂಲವಾದಾಗ ತಪ್ಪು, ಇಬ್ಬಂದಿತನ .

ಹೆಣ್ಣು ತಾಯಿಯಾಗಿ, ಅತ್ತೆಯಾಗಿ ತನ್ನ ಮಗಳು ಮತ್ತು ಸೊಸೆಯನ್ನು ನೋಡುವ ದೃಷ್ಟಿಯೇ ಬೇರೆ. ತನ್ನ ಮಗಳಿಗೆ ಹೇಳಿದಂತೆ ಕೇಳುವ ಗಂಡ ಬೇಕು, ಆದರೆ ಅದೇ ಪರಿಸ್ಥಿತಿಯಲ್ಲಿ ತನ್ನ  ಮಗ ಮಾತ್ರ ಹೆಂಡತಿಯ ಗುಲಾಮನಾಗಿಬಿಡುತ್ತಾನೆ.

ಇಲ್ಲೆಲ್ಲಾ ಎದ್ದು ಕಾಣುವುದು ತಾನು ಮತ್ತು ತನ್ನ ಹತ್ತಿರದವರ ವಿಷಯ ಬಂದಾಗ ತೆಗೆದುಕೊಳ್ಳುವ  ವೈರುಧ್ಯ  ನಿಲುವುಗಳು. ತಾನು ಎನ್ನುವುದು ಸ್ಥಿರವಾದರೂ ತನ್ನ ಹತ್ತಿರದವರು ಬದಲಾಗುತ್ತಿರಬಹುದು. ಉದಾಹರಣೆಗೆ ಮಗಳು ಸೊಸೆಯ ವಿಷಯಕ್ಕೆ ಬಂದಾಗ ಮಗಳು ಹತ್ತಿರದವಳು.. ಅದೇ ಸೊಸೆ ಮತ್ತು ಪಕ್ಕದ ಮನೆಯವರ ವಿಷಯಕ್ಕೆ ಬಂದಾಗ ಸೊಸೆ ಹತ್ತಿರದವಳು. ಇದು ಆ ಸಂದರ್ಭಕ್ಕೆ ತಕ್ಕಂತೆ ಮಾರ್ಪಾಡುಗೊಳ್ಳುತ್ತದೆ.

ದೇವರದು ಪಾಪ ಬಲು ಕಷ್ಟದ ಪರಿಸ್ಥಿತಿ. ಒಂದೇ ವಿಷಯಕ್ಕೆ ಇಬ್ಬರು ಭಕ್ತರು ಕೇಳುವ ಒಂದೇ ತರದ ವರ... ರಾಮ ರಾವಣರ ಯುದ್ಧದಲ್ಲಿ ಸೀತೆ ಮತ್ತು ಮಂಡೋದರಿ ಇಬ್ಬರೂ ಶಿವನನ್ನು ಪೂಜಿಸಿ ಬೇಡಿಕೊಳ್ಳುತ್ತಾರೆ.. ತಮ್ಮ ಮಾಂಗಲ್ಯ ಭಾಗ್ಯ ಭದ್ರವಾಗಿರಲೆಂದು. ಶಿವನಿಗೆ ಇಬ್ಬರೂ ಅವಿಚ್ಛಿನ್ನ ಭಕ್ತರು, ಪಾಪ ಶಿವ ನಿರ್ಧಾರ ಮಾಡಲು ಎಷ್ಟು ಕಷ್ಟಪಟ್ಟಿರಬೇಡ.



ಒಂದೇ ವ್ಯಕ್ತಿ ಅಥವಾ ವಿಷಯದ ಬಗ್ಗೆ ಹಲವಾರು ಜನರ ಅಭಿಪ್ರಾಯ.. ಇದು ಇನ್ನೊಂದಷ್ಟು ಸಂಕೀರ್ಣ.  ಕುರುಡರು ಆನೆಯನ್ನು ಮುಟ್ಟಿ ನೋಡಿ   ಕಿವಿ ಮೊರದಂತಿದೆ, ಬಾಲ ಹಗ್ಗದಂತಿದೆ, ಕಾಲು ಕಂಬದಂತಿದೆ ಎಂದು   ವಿವರಿಸಿದಂತೆ... ಸರಿಯಾದ ಜಾಗದಲ್ಲಿ ಜೋಡಿಸಿದಾಗ ಬಹುಶಃ ಆ ವ್ಯಕ್ತಿ ಅಥವಾ ವಿಷಯದ ಬಗ್ಗೆ ಒಂದು ಸ್ಥೂಲ ರೂಪ ಸಿಗಬಹುದು. ಅಭಿನಂದನಾ ಗ್ರಂಥ ಇದಕ್ಕೊಂದು ಸರಿಯಾದ ಉದಾಹರಣೆ. ಆದರೆ ಇಲ್ಲೊಂದು ಕೊರತೆ ಇದೆ... ಯಾರೂ ವ್ಯಕ್ತಿಯ ಅವಗುಣಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಹೊಗಳು ಭಟ್ಟಂಗಿತನವೇ ತುಂಬಿರುತ್ತೆ. 

ಅದೇ ಒಬ್ಬ ರಾಜಕೀಯ ವ್ಯಕ್ತಿಯ ಚಿತ್ರಣ ಬೇಕಾದರೆ ಹೊಗಳಿಕೆ ತೆಗಳಿಕೆ ಎರಡೂ ಅತಿರೇಕದ ಮಟ್ಟದಲ್ಲಿ ಇರುತ್ತದೆ... ಪರವಾಗಿರುವವರು ಹಾಗೂ ವಿರೋಧವಾಗಿರುವವರು ಇಬ್ಬರದೂ ಉತ್ಪ್ರೇಕ್ಷೆಯೇ.

ಈ ನೋಡುವ ದೃಷ್ಟಿಯಲ್ಲಿ ಎದ್ದು ಕಾಣುವುದೇ ಜಾತಿಯಲ್ಲಿ ಮೇಲು ಕೀಳು, ಹಣದಲ್ಲಿ ಉಳ್ಳವರು, ಇಲ್ಲದವರು, ಸಾಮಾಜಿಕ ಸ್ಥಾನಮಾನದಲ್ಲಿ ಗೌರವಾನ್ವಿತರು ಎನಿಸಿಕೊಳ್ಳುವವರು ಹಾಗೂ ಸಾಮಾನ್ಯರು. ಈ ವಿಧದ ತಾರತಮ್ಯ ಸಮಾಜದಲ್ಲಿ ಇದ್ದದ್ದೇ. ಇದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಈ ತಾರತಮ್ಯ ಇದ್ದರೇನೇ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ, ಏಕೆಂದರೆ ಎಲ್ಲ ಸ್ತರದ ಜನರು ಅವರವರ ಜವಾಬ್ದಾರಿಯನ್ನು ನಿರ್ವಹಿಸಿದರೇನೇ ಒಟ್ಟು ಸಮಾಜದ ಉಳಿವಿಗೆ ಪೂರಕ.

ನಾನೊಂದು ಲಾವಣಿಯನ್ನು ಚಿಕ್ಕಂದಿನಲ್ಲಿ ಕೇಳಿದ್ದೆ.. "ಬೀದಿ ಕಸ ಗುಡಿಸೋರ್ ಯಾರ್, ಕತ್ತೆ ಲದ್ದಿ ಎತ್ತೋರ್ ಯಾರ್, ನಾವಲ್ಲವೇ ನಮ್ಮ ಜನರಲ್ಲವೇ". ಬೀದಿ ಕಸ ಗುಡಿಸುವವರು ನಮ್ಮ ಜನರೇ ಆದರೂ, ನಮ್ಮವರು ಎಂದು ಬಾಯಿ ಮಾತಿನಲ್ಲಿ ಹೇಳಿದರೂ, ಅವರ ಸ್ಥಾನಮಾನವೇ ಬೇರೆ. ಹಾಗೆ ರಾಜನಿಂದ ಹಿಡಿದು... ಕೆಳಮಟ್ಟದ ಕೆಲಸ ಮಾಡುವವರವರೆಗೂ.. ಎಲ್ಲರೂ ಸಮಾಜದ ಅವಿಭಾಜ್ಯ ಅಂಗ. ಅವರವರ ಕೆಲಸಗಳನ್ನು ಸರಿಯಾಗಿ ಮಾಡದಿದ್ದರೆ.. ಸಮಾಜದ ಸ್ವಾಸ್ಥ್ಯವೂ ಕೆಡುತ್ತದೆ. ಯೋಚಿಸಿ, ಬೀದಿ ಕಸಗುಡಿಸುವವರು, ಕೆಲವು ದಿನ ಕೆಲಸ ಮಾಡದೆ... ಸಂಪು ಹೂಡಿದರೆ, ನಮ್ಮ ಸುತ್ತಮುತ್ತ ಕಸದ ರಾಶಿ ಬಿದ್ದು,  ಕೊಳೆತು ನಾರುತ್ತದೆ. ಎಲ್ಲರದೂ ಎಲ್ಲರಿಗೂ ಅವರವರದೇ ಆದ ಪ್ರಾಮುಖ್ಯತೆ ಇರುತ್ತದೆ... ಎಲ್ಲರನ್ನೂ ಗೌರವಪೂರ್ವಕವಾಗಿ ಕಾಣುವುದು ನಮ್ಮೆಲ್ಲರ ಜೀವನಶೈಲಿ ಆಗಬೇಕು. ಯಾವುದೇ ಕಾರಣದಿಂದಲೂ ಅಗೌರವದಿಂದ, ಕೀಳಾಗಿ ಕಾಣಬಾರದು.

ನನ್ನ ಊರು ದೊಡ್ಡಜಾಲದಲ್ಲಿ.. ಯುಗಾದಿ, ಗೌರಿ ಗಣೇಶ ಹಾಗೂ ವರಮಹಾಲಕ್ಷ್ಮಿ ಹಬ್ಬಗಳ ದಿನದಂದು ನಮ್ಮ ಮನೆಗೆ ಓಲಗ ಊದುವವರು, ಅಗಸರು, ತೋಟಿ ತಳವಾರರು ಬಂದು ಅಂದಿನ ವಿಶೇಷ ಅಡಿಗೆಯನ್ನು ಊಟ ಮಾಡಿ, ವಿಳ್ಳೇದೆಲೆ ಅಡಿಕೆ ಹಾಗೂ ಸುಣ್ಣವನ್ನು ತೆಗೆದು ಕೊಂಡು ಅದನ್ನು ಸವಿದು ಹೋಗುತ್ತಿದ್ದರು. ಪ್ರಾಯಶಃ ಅದು ಅವರಿಗೆ ಸಲ್ಲಬೇಕಾದ ಗೌರವ. ಎಲ್ಲರನ್ನೂ ಮನೆಯ ಒಳಗಡೆ ಕರೆದುಕೊಳ್ಳದಿದ್ದರೂ,( ನನಗೆ ತಿಳಿದ ಮಟ್ಟಿಗೆ ಅವರು ಅದನ್ನು ಎಂದೂ ಅವಮಾನ ಎಂದು ಭಾವಿಸಲಿಲ್ಲ) ಅವರಿಗೆ ಸಂದ ಜಾಗದಲ್ಲಿ ಕೂತು ಊಟಮಾಡಿ, ಅವರೇ ಎಲೆಯನ್ನು ತಿಪ್ಪೆಗೆ ಬಿಸಾಡಿ ಗೋಮ ಹಚ್ಚುತ್ತಿದ್ದರು. ಊಟ ಬಡಿಸುವಾಗ ತೋರಿಸುತ್ತಿದ್ದ ಪ್ರೀತಿಯನ್ನು  ಸವಿಯುತ್ತಿದ್ದರು.

ದೇವರ ಉತ್ಸವಗಳು ನಡೆಯುವಾಗ ತೋಟಿ ತಳವಾರ ಮನೆತನದವರು ತಮ್ಮ ರಂಢೋಲು, ತಮಟೆಗಳೊಂದಿಗೆ ಮೆರವಣಿಗೆಯ ಮುಂದೆ, ಓಲಗದವರಿಗೆ ನಂತರದ ಸ್ಥಾನ. ನಡೆಮುಡಿ ( ಒಗೆದ ಶುಭ್ರವಾದ ಸೀರೆ / ಪಂಚೆಗಳನ್ನು ನೆಲದ ಮೇಲೆ ಹಾಸಿ,ದೇವರನ್ನು ಹೊತ್ತವರು ಅದರ ಮೇಲೆ ನಡೆಯುವುದು) ಹಾಸುವುದು,ಹಾಗೂ ಪಂಜು ಹಿಡಿಯುವುದು ಅಗಸರ ಕೆಲಸ. ಹೀಗೆ ಒಂದೊಂದು ಕಡೆ ಒಂದೊಂದು ರೀತಿಯ ನಡಾವಳಿಗಳು ಆ..ಆ ಸಮುದಾಯಕ್ಕೆ  ಮೀಸಲು. ಇಲ್ಲಿ ಜಾತಿ ಪರಿಗಣನೆಗೆ ಬರುವುದಿಲ್ಲ. ಅವರವರ ವೃತ್ತಿ / ಕಸುಬಿನ  ಮೂಲಕ ಗುರುತಿಸುವುದು. ಕಾಲಕ್ರಮೇಣ ಅದನ್ನೇ ಜಾತಿಯಾಗಿ ಗುರುತಿಸಿದ್ದು ಒಂದು ವಿಪರ್ಯಾಸ ಅಲ್ಲವೇ? 

ಮಾಡುವ ಕೆಲಸಗಳು ಬದಲಾದರೂ ಜಾತಿ ಎಂಬ ಹಣೆಪಟ್ಟಿ ಮಾತ್ರ ಬದಲಾಗಲಿಲ್ಲ. ಜಾತಿಯ ಹೆಸರಲ್ಲಿ ರಾಜಕೀಯ, ಜನರ ಚಿಂತನೆಗಳು, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ.

ವಾಲ್ಮೀಕಿಯ ವಿಷಯಕ್ಕೆ  ಬಂದರೆ, ಮೂಲತಃ ಬೇಟೆಯಾಡುವ ವೃತ್ತಿ ಮಾಡುತ್ತಿದ್ದ ಕಾರಣ 'ಬೇಡ' ಎಂದು ಗುರುತಿಸಿದ್ದು. ಆದರೆ ರಾಮಾಯಣ ಮಹಾಕಾವ್ಯ ಬರೆದು,ಆದಿಕವಿ ಎನಿಸಿಕೊಂಡನಂತರ ಬ್ರಾಹ್ಮಣ ಎಂದು ಗುರುತಿಸಿದ್ದು. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ವಾಲ್ಮೀಕಿಯ ಜಾತಿಯನ್ನು  ಹಿಂದುಳಿದ ಜಾತಿಯೆಂದು ಪರಿಗಣಿಸಿ, ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪೈಪೋಟಿ ಇದೆ. ಮಹಾಚೇತನವನ್ನು ಈ ಮಟ್ಟಕ್ಕೆ  ಇಳಿಸಿದ್ದೇವೆ. ಇದು ಸ್ವಾರ್ಥ ರಾಜಕೀಯದ ದೃಷ್ಟಿ. 

ದೃಷ್ಟಿಯಂತೆ ಸೃಷ್ಟಿ, ಯದ್ಭಾವಂ ತದ್ಭವತಿ ಎನ್ನುವುದು  ನಾಣ್ಣುಡಿ.  ನಮ್ಮ ಜೀವನ ರೂಪುಗೊಳ್ಳುವುದು ನಾವು ನೋಡುವ/ ಭಾವಿಸುವ ದೃಷ್ಟಿಯಿಂದಲೇ.... 

ಬಿಳಿ ಪರದೆಯ ಮೇಲೆ ಒಂದು ಕಪ್ಪು ಚುಕ್ಕೆ ಇದ್ದರೆ... ಬಹು ಮಂದಿ ನೋಡಿದವರು ಕಪ್ಪು ಚುಕ್ಕೆಯನ್ನು ಗುರುತಿಸುತ್ತಾರೆ... ಆದರೆ ವಿಶಾಲವಾದ ಬಿಳಿಯ ಭಾಗವನ್ನು ಗಮನಿಸುವುದೇ ಇಲ್ಲ.    

 ಹಾಗೆಯೇ ಬಹಳಷ್ಟು ಸಲ  ಇನ್ನೊಬ್ಬರಲ್ಲಿ ಇರುವ ಒಳ್ಳೆಯತನವನ್ನು ಗಮನಿಸದೇ, ಸಣ್ಣಪುಟ್ಟ ನ್ಯೂನತೆಗಳನ್ನೇ ಗುರುತಿಸುವ ಚಾಳಿ. ಇದಕ್ಕೂ ಹೆಚ್ಚಿನದು ತನ್ನ ಎಲೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಗುರುತಿಸದೆ ಬೇರೆಯವರ ಎಲೆಯಲ್ಲಿ ಬಿದ್ದಿರುವ ನೊಣವನ್ನು ಗುರುತಿಸುವುದು.



ವೈಯೆನ್ಕೆ ಎಂಬ ಅಂಕಿತದಲ್ಲಿ, ವೈ ಎನ್ ಕೃಷ್ಣಮೂರ್ತಿ ಅವರು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ Wonder ಕಣ್ಣು ಎಂಬ ಅಂಕಣ ತಮಾಷೆಯಿಂದ ಕೂಡಿರುತ್ತಿತ್ತು. ವಂಡರ್ ಕಣ್ಣು/ ಮೆಳ್ಳೆಗಣ್ಣು ಅನ್ನುವುದು ಕಣ್ಣಿನ ಒಂದು ದೋಷವಾದರೂ... ಮೆಳ್ಳೆಗಣ್ಣಿನ ನೋಟ ಎಲ್ಲಿದೆ ಎಂದು ಗುರುತಿಸಲು ಕಷ್ಟ.  ವಿಷಯವನ್ನು ಅವರು ಮೆಳ್ಳೆಗಣ್ಣಿನಿಂದ  ನೋಡುತ್ತಿದ್ದ ರೀತಿ wonderful ಆಗಿರುತ್ತಿತ್ತು.

ಜಾತಕ ಫಲದಲ್ಲಿ ಗ್ರಹಗಳ ಮುನ್ನೋಟಕ್ಕೆ ತುಂಬಾ ಪ್ರಾಮುಖ್ಯವಿದೆ. ಗುರು ಶುಕ್ರರ ದೃಷ್ಟಿ ನಮ್ಮ ಮೇಲಿದ್ದರೆ ಆ ದೆಸೆ ಬೇರೆ. ಅದೇ ಶನಿಯ ದೃಷ್ಟಿ ನಮ್ಮ ಮೇಲೆ ಬಿದ್ದರೆ ಕಷ್ಟಕೋಟಲೆ ಶುರು ಎಂಬ ನಂಬಿಕೆ.

ವಾರೆನೋಟ, ಕ್ರೂರ ನೋಟ, ವಕ್ರ ದೃಷ್ಟಿ, ಕಾಕ ದೃಷ್ಟಿ ಇವೆಲ್ಲ ತೊಂದರೆ ದಾಯಕ ದೃಷ್ಟಿಕೋನಗಳು.

ಕಾಕ ದೃಷ್ಟಿ ಎನ್ನುವುದು ಒಂದು  ಕೆಟ್ಟ  ಪರಿಣಾಮ ಬೀರುವುದು ಎನ್ನುವುದು ನಂಬಿಕೆ. 

ಹದ್ದಿನ ಕಣ್ಣು ಎನ್ನುವುದು ತೀಕ್ಷ್ಣ ದೃಷ್ಟಿಯ ಸಂಕೇತ. ಹದ್ದು ಅತಿ ಎತ್ತರದಿಂದ ಭೂಮಿಯ ಮೇಲಿನ ಸಣ್ಣ  ಚಲನೆಯನ್ನು ಗಮನಿಸುವ ಶಕ್ತಿಯನ್ನು ಹೊಂದಿದೆ.

ಕವಿಯ ದೃಷ್ಟಿಯಲ್ಲಿ, ಪ್ರೇಮಿಗೆ/ ನಲ್ಲನಿಗೆ....ನಲ್ಲೆ ಚಂದ್ರಮುಖಿ, ಚಂದ್ರವದನೆ ಚಂದ್ರಬಿಂಬ, ಶಶಿಮುಖಿ ಹೀಗೆ ಚಂದ್ರನ ಹೋಲಿಕೆ, ಅದೇ ಮಗುವಿಗೆ ಚಂದಕ್ಕಿ ಮಾಮ, ಇನ್ನು ಕೆಲವರು ಚಂದ್ರನಲ್ಲಿ ಮೊಲದ ಬಿಂಬವನ್ನು ಕಾಣುತ್ತಾರೆ.

ಉಟ್ಟ ಬಟ್ಟೆಯನ್ನು ನೋಡಿ ಅಂತಸ್ತನ್ನು ನಿರ್ಧರಿಸುವ ಜನರೂ ಇದ್ದಾರೆ. ಇದು ಅನಾದಿಕಾಲದಿಂದಲೂ ಬಂದಿದೆ.

ಕಿಂ ವಾಸಸೆ ತ್ಯತ್ರ ವಿಚಾರಣೀಯಂ                   ವಾಸಃ ಪ್ರಧಾನಂ ಖಲು ಯೋಗ್ಯತಾಃ         ಪೀತಾಂಬರಂ ವೀಕ್ಷ್ಯ ದಧೌ ಸ್ವಕನ್ಯಾಂ  ಚರ್ಮಾಂಬರಂ ವೀಕ್ಷ್ಯ ವಿಷಃ ಸಮುದ್ರಃ

ಈ ಸಂಸ್ಕೃತದ ಸುಭಾಷಿತದಂತೆ ಪಿತಾಂಬರವನ್ನು ಉಟ್ಟಿದ್ದ ವಿಷ್ಣುವಿಗೆ ತನ್ನ ಮಗಳನ್ನೂ,  ಚರ್ಮಾಂಬರಧರನಾದ ಈಶ್ವರನಿಗೆ ವಿಷವನ್ನೂ, ಸಮುದ್ರರಾಜ ಕೊಟ್ಟನೆಂಬುದು ಸಮುದ್ರ ಮಥನದ ಸಂದರ್ಭದ ಚಿತ್ರಣ.

ಎತ್ತರದಲ್ಲಿ ಕಟ್ಟಿದ ಹಗ್ಗದ ಮೇಲೆ ಮಕ್ಕಳನ್ನು ಆಡಿಸುವ ದೊಂಬರಾಟದ ಮನುಷ್ಯನಿಗೆ ಅದು ಅನ್ನ ಸಂಪಾದಿಸುವ ಗುರಿ, ಅದನ್ನು ನೋಡುವ ಸಾಮಾನ್ಯ ಜನರಿಗೆ ಮನೋರಂಜನೆ..

ಹೊಟ್ಟೆ ತುಂಬಿದ್ದಾಗ ಸಿಂಹ ತನ್ನ ಎದುರು ಬಂದ ಪ್ರಾಣಿಗಳಲ್ಲಿ ಆಹಾರವನ್ನು ಕಾಣುವುದಿಲ್ಲ, ಹಸಿವಾದಾಗ ಮಾತ್ರ ಅವು ಆಹಾರ, ಆದರೆ ಮನುಷ್ಯ ಎಲ್ಲ ಸಮಯದಲ್ಲೂ, ಅವನಿಗೆ ಎಲ್ಲವೂ ಬೇಕು... ದುರಾಸೆಯ ದೃಷ್ಟಿಕೋನ.

ಭಯ ಬಿದ್ದವನಿಗೆ ಹಗ್ಗವು ಹಾವಿನಂತೆ ಕಾಣುತ್ತದೆ.

ಮಾಂಸಾಹಾರಿಗಳಿಗೆ ಜೀವಿಸಿರುವ ಪ್ರಾಣಿಗಳ ಹರಣ ಆಹಾರದ ಮಾರ್ಗ, ಸಸ್ಯಹಾರಿಗಳಿಗೆ/ ಅಹಿಂಸಾ ಪ್ರತಿಪಾದಕರಿಗೆ ಅದು ಹಿಂಸೆಯ ಮಾರ್ಗ.

ಸುಖೇ ದುಃಖೇ ಸಮೇ ಕೃತ್ವಾ ಲಾಭಾ  ಲಾಭೌ ಜಯಾ ಜಯೌ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಕೇಳಲು ಚಂದ... ಸುಖ ದುಃಖವನ್ನು ಒಂದೇ ರೀತಿ ನೋಡಲು ಬೇಕಾದ ಮಾನಸಿಕ  ಸ್ಥಿರತೆ ಪಡೆಯಲು ಕಷ್ಟ.

ನಮ್ಮಪ್ಪನ ನೂರನೆಯ ವರ್ಷದ ಸಮಾರಂಭದ ಸಂದರ್ಭದಲ್ಲಿ, ಮಕ್ಕಳು ಮೊಮ್ಮಕ್ಕಳು, ಸೊಸೆ ಅಳಿಯಂದಿರು ಹಾಗೂ ಹತ್ತಿರದವರು ನಮ್ಮಪ್ಪನ ಬಗ್ಗೆ ಅವರ ಅಭಿಪ್ರಾಯಗಳನ್ನು ಬರೆದಿದ್ದ ಒಂದು ಪುಸ್ತಿಕೆಯನ್ನು ಮಾಡಿದ್ದೆವು. ಅದರಲ್ಲಿ ಶಿಸ್ತಿನ ಜೊತೆ ಕೋಪದ ಮುಖದ ಅಪ್ಪ, ಕೋಪ ಹಾಗೂ ಪ್ರೀತಿಯನ್ನು ಕಂಡ ಮಕ್ಕಳು, ಬರೀ ಪ್ರೀತಿಯನ್ನೇ ಕಂಡುಂಡ ಮೊಮ್ಮಕ್ಕಳು, ಮರಿ ಮಕ್ಕಳು, ಇನ್ನು ಬೇರೆಯವರ ದೃಷ್ಟಿಯಲ್ಲಿ ನಮ್ಮಪ್ಪ...ಹೀಗೆ ಲೇಖನಗಳು ನಮ್ಮಪ್ಪನ ವಿವಿಧ ಮುಖಗಳನ್ನು ಅನಾವರಣ ಗೊಳಿಸಿತ್ತು.

ಮುಗಿಸುವ ಮುನ್ನ..

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲ ರಂತೆ ಒಂದು ಹೆಣ್ಣು

ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ...

H S  ವೆಂಕಟೇಶ ಮೂರ್ತಿಯವರ ಈ ಕವನ ದೃಷ್ಟಿಕೋನಕ್ಕೆ ಒಂದು ಸ್ಪಷ್ಟ ದೃಷ್ಟಾಂತ.

ನಿಮ್ಮ ದೃಷ್ಟಿಯಲ್ಲಿ ನನ್ನ ಲೇಖನ ಹೇಗಿತ್ತು?ಸಾಧ್ಯವಾದರೆ ತಿಳಿಸಿ.

ನಮಸ್ಕಾರ..

ಡಿ ಸಿ  ರಂಗನಾಥ ರಾವ್

9741128413

    

    

    

    

Comments

  1. ಜಗತ್ತು ಚೇತನ- ಅಚೇತನ, ಗುಣ -ದೋಷಗಳಿಂದ ಕೂಡಿದ್ದು ಹಂಸ ಪಕ್ಷಿಯ ರೀತಿ ಹಾಲನ್ನು ನೀರನ್ನು ಒಂದು ಬಟ್ಟಲಿನಲ್ಲಿ ಇಟ್ಟರೆ ಅದು ಹಾಲನ್ನು ಸೇವಿಸಿ ನೀರನ್ನು ಉಳಿಸುತ್ತದೆ ಎಂದು ತುಳಸಿದಾಸರು ತಮ್ಮ ದ್ದಿಪದಿ(ದೋಹ) ತಿಳಿಸಿರುವಂತೆ ನಾವು ಒಳ್ಳೆದಕ್ಕೆ ಮನ್ನಣೆಯನ್ನು ನೀಡಬೇಕು . ಕೆಟ್ಟದರ ಪರಿವೆಯನ್ನೂ ಹೊಂದಿರಬೇಕು.

    ReplyDelete
  2. ನಾಗೇಂದ್ರ ಬಾಬು17 September 2025 at 10:42

    ನಿಮ್ಮ ಲೇಖನದ ಮೊದಲ ಚಿತ್ರ ನನ್ನ ಮೆಚ್ಚಿನ ಚಿತ್ರ 2000 ಇಸವಿಯಲ್ಲಿ ಮನೆ ಕಟ್ಟಿದಾಗ ಮಹಡಿಯ ಮೇಲೆ ದೊಡ್ಡದಾಗಿ 9 ಅನ್ನು ನಾನೇ ಬರೆದು ಪೈಂಟ್ ಮಾಡ್ದಿದ್ದೆ, ಹಲವಾರು ವರ್ಷಗಳ ಕಾಲ ಮನೆಗೆ ಬಂದ ಅತಿಥಿ ಗಳಿಗೆ ವಿವರಣೆ ನೀಡಿದ್ದು ನನಗೆ ನೆನಪಿದೆ...
    ನಾವು ಪ್ರತಿ ವ್ಯಕ್ತಿ ಅಥವಾ ವಿಷಯದ ಬಗ್ಗೆ ನಮ್ಮ ಜ್ಞಾನ ಅಥವಾ ಅಜ್ಞಾನ ದಿಂದ ಸರಿ ತಪ್ಪು ವಿಶ್ಲೇಷಣೆ ಮಾಡಿ ಅದನ್ನು ಇತರರಿಗೂ ನಂಬಿಸುವ ಪ್ರಯತ್ನ ಮಾಡುತೇವೆ.. ನಮ್ಮ ಸಂಸ್ಕೃತಿ ಆಚಾರ ವಿಚಾರ, ದೇವರು, ದೆವ್ವ ಮಾಟ ಮಂತ್ರ, ಜ್ಯೋತಿಷ್ಯ ಎಲ್ಲವೂ ಕೂಡ ದ್ವಂದ್ವ ದಿಂದ ಕೂಡಿದೆ ಹಾಗಾಗಿ 9 ಅಥವಾ 6
    ಎನ್ನುವುದು ಅವರವರ ತಿಳುವಳಿಕೆಗೆ ಬಿಟ್ಟ ವಿಚಾರ ಆದರೂ ಎರಡೂ ಕಡೆ ಯೋಚಿಸಿ ಸೂಕ್ತ ನಿರ್ಣಯ ತೆಗೆದುಕೊಂಡರೆ ನೆಮ್ಮದಿಯ ಬದುಕು ನಮ್ಮದಾಗುತದೆ.
    ಬಾಬು

    ReplyDelete
  3. ದೃಷ್ಟಿ ಎಂಬುದನ್ನು ಭೌತಿಕವಾಗಿ ನೋಡುವಿಕೆ ಅಥವಾ ಮನಸ್ಸಿನಿಂದ ಆಲೋಚಿಸುವಿಕೆ ಎಂಬುದನ್ನು ಲೇಖಕರು ಬಿಡಿಬಿಡಿಯಾಗಿ ಚಿತ್ರಿಸಿ ಲೇಖನವನ್ನು ನಿರೂಪಿಸಿದ್ದಾರೆ.
    ಎಂದಿನಂತೆ ಅವರು ಲೇಖನಕ್ಕೆ ಬೇಕಾದ ವಸ್ತುಗಳನ್ನು ವಿವಿಧ ರೀತಿಯಲ್ಲಿ ಸಂಗ್ರಹಿಸಿ ನೀಡಿದ್ದಾರೆ.

    ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಲವಾರು ಅನುಭವ, ಉದಾಹರಣೆ ಹಾಗೂ ಸಂಗತಿಗಳಿಂದ ಹೆಕ್ಕಿ ತರುವ ವಿಧಾನವೇ ಚೆಂದ. ಒಂದು ರೀತಿ ಜೇನುನೊಣವು ಮಕರಂದವನ್ನು ವಿವಿಧ ಹೂಗಳಿಂದ ಹರಸಿ ತರುವಂತೆ.

    ಕೊನೆ ಹನಿ:
    ಆನೆಯ ಆಕಾರವನ್ನು ಕಲ್ಪಿಸಿಕೊಳ್ಳಲು ಕುರುಡರು ಅದರ ಸೊಂಡಿಲು, ಬಾಲ, ಕಾಲು ಇತ್ಯಾದಿಗಳನ್ನು ಮುಟ್ಟಿದಾಗ ಅದು ಸುಮ್ಮನೆ ಇದ್ದುದು ಒಂದು ಪವಾಡ ಅಲ್ಲವೇ?!

    ಗುರು ಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು