ಗಣೇಶ- ಗೀತೆ- ಗುಣಗಾನ
ಗಣೇಶನ ಹಬ್ಬ ಮನೆಯಲ್ಲಿ ಮುಗಿದಿದೆ, ಆದರೆ ಮನೆಯ ಸುತ್ತು ಮುತ್ತಿನ ರಸ್ತೆಯಲ್ಲಿ ಸಡಗರ ಮುಂದುವರೆದಿದೆ. ಮಕ್ಕಳ ಉತ್ಸಾಹಕ್ಕೆ ಮೇರೆ ಇಲ್ಲ, ಗಣೇಶನಿಗೆ ಜೈಕಾರ, ಹಾಡು, ಕುಣಿತ ಜೋರಿದೆ.
ಗಣೇಶ ಬಂದ ಕಾಯಿ ಕಡಬು ತಿಂದ, ಹೊಟ್ಟೆ ಮೇಲೆ ಗಂಧ, ಚಿಕ್ಕೆರೇಲ್ ಬಿದ್ದ ದೊಡ್ ಕೆರೇಲಿ ಎದ್ದ ..ಇದು ನಾವು ಚಿಕ್ಕಂದಿನಲ್ಲಿ ಹೇಳುತ್ತಿದ್ದ ಗಣೇಶನ ಮೊದಲ ಹಾಡು. ನಂತರ ಕೋಲಾಟಕ್ಕಾಗಿ ಕಲಿತದ್ದು ಶರಣು ಶರಣುವಯ್ಯ ಗಣನಾಯಕ ನಮ್ಮ ಕರುಣದಿಂದಲಿ ಕಾಯೋ ಗಣನಾಯಕ.
ಕೋಲಾಟ ಆಡುತ್ತಾ ಹಾಡುವುದು ಕಷ್ಟ ಆದಕಾರಣ, ನಾವು ಗಣನಾಯಕ ಭಾಗ ಮಾತ್ರ ಹೇಳುತ್ತಿದ್ದೆವು, ಮೂಲ ಹಾಡು ಬೇರೆ ಯಾರಾದರೂ ಹಾಡುತ್ತಿದ್ದರು. ಬೇರೆ ಬೇರೆ ವೇಗದಲ್ಲಿ ಕುಣಿಯುತ್ತ ಹಾಡುವಾಗ ನಮ್ಮ ಉತ್ಸಾಹ ಮುಗಿಲು ಮುಟ್ಟುತ್ತಿತ್ತು.
ಪ್ರತಿದಿನ ಸಂಜೆ, ದೀಪ ಹೊತ್ತಿಸಿದ ತಕ್ಷಣ, ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ... ಗಣೇಶ ಸ್ತುತಿಯೊಂದಿಗೆ ಪ್ರಾರಂಭ ಮಾಡಿ ಗುರು ಬ್ರಹ್ಮ ಗುರು ವಿಷ್ಣು.. ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ... ಶ್ಲೋಕಗಳನ್ನು ಹೇಳಿ ಓದುತ್ತಿದ್ದದ್ದು. ಗಣೇಶನಿಗೆ ಮೊದಲ ಪೂಜೆ ಎಂದು ತಲೆಯಲ್ಲಿ ಅಚ್ಚಾಗಿತ್ತು.
ಅಗಜಾನನ ಪದ್ಮಾರ್ಕಮ್, ಗಜಾನನ ಮಹರ್ನಿಶಂ.. ಸ್ತೋತ್ರದ ಅನೇಕದಂತಂ ಹಾಗೂ ಏಕದಂತಂ ಬಗ್ಗೆ ನನಗೆ ಒಂದಷ್ಟು ಅನುಮಾನವಿತ್ತು. ಏಕದಂತಂ ಗಣೇಶನ ಒಂದು ಹೆಸರು ಅನೇಕದಂತಮ್ ಏನು? ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿನ ಸಂಸ್ಕೃತ ಉಪಾಧ್ಯಾಯರಾದ ಪಂಡಿತ್ ವೆಂಕಟದಾಸ ಶರ್ಮಾ ಅವರು ಪದವಿಭಾಗ ಮಾಡಿ ಅನೇಕದಂ ತಂ ಭಕ್ತಾನಾಂ.. ತನ್ನ ಭಕ್ತರಿಗೆ ಅನೇಕ ವರಗಳನ್ನು ಕೊಡುವ... ಎಂಬ ಅರ್ಥವನ್ನು ತಿಳಿಸಿಕೊಟ್ಟದ್ದು ಇಷ್ಟವಾಯಿತು.
ನಮ್ಮೂರು ದೊಡ್ಡಜಾಲದಲ್ಲಿ, ನಾಟಕದ ಪ್ರಾರಂಭದ ಪ್ರಾರ್ಥನೆ ಶ್ರೀ ಕರಿ ಮುಖ ಸೌಖ್ಯದಾತ ಲೋಕಾಧೀಶ ಪಾಲಿಪ ನಮಿಪೆವು ಶ್ರೀ... ಹಾರ್ಮೋನಿಯಂ ಹಾಗೂ ತಬಲಾ ಸಮೇತ ಹೇಳುವಾಗ ಮೈ ನವಿರೇಳುತ್ತಿತ್ತು.
ಶನಿವಾರದ ಭಜನಾ ಸಮಯದಲ್ಲಿ ಕೇಳುತ್ತಿದ್ದದ್ದು ... ರಾಮಾಂಜನಪ್ಪ ಹೇಳುತ್ತಿದ್ದ, ವಿನಾಯಕ ನಿನುವಿನ ಬ್ರೋಚುಟಕು ವೇರೆವರುರಾ.. ವಿಘ್ನ ರಾಜ, ಹಾಗೂ ಲಂಬೋದರ ಲಕುಮಿಕರ ಅಂಬಾ ಸುತ ಅಮರವಿನುತ... ಹಾಡು. ಅಂದಿನ ದಿನಗಳಲ್ಲಿ ಅದೊಂದು ಹಾಡು ಅಷ್ಟೇ... ಮುಂದೆ ತಿಳಿದದ್ದು ಅದು ಕರ್ನಾಟಕ ಸಂಗೀತ ಕಲಿಯುವವರಿಗೆ ಮೊದಲನೆಯ ಮೆಟ್ಟಿಲು ಎಂದು. ಇದು ಪುರಂದರದಾಸರು ಬರೆದ ಪಿಳ್ಳಾರಿ ಗೀತೆ ಎಂದೇ ಪ್ರಸಿದ್ಧಿ... ನಾನು ನನ್ನ ಕೀಬೋರ್ಡ್ ಕಲಿಕೆಯ ಸಮಯದಲ್ಲಿ ನುಡಿಸಿದ್ದು ಇದೇ.
ಪಿಳ್ಳಾರಿ ಎಂದಾಗ ನೆನಪಿಗೆ ಬರುವುದು ಗಣೇಶನ ಪೂಜೆಯ ಸಮಯದಲ್ಲಿ ಹಸುವಿನ ಸಗಣಿ ಉಪಯೋಗಿಸಿ ಬೆಲ್ಲದಚ್ಚಿನಂತೆ ಅದನ್ನು ರೂಪಿಸಿ, ಮೇಲೆ ಗರಿಕೆ ಹುಲ್ಲನ್ನು ಸಿಕ್ಕಿಸಿ, ಅರಿಶಿನ ಕುಂಕುಮ ಹಚ್ಚಿದರೆ ಅದು ಗಣೇಶನ ರೂಪ ಎಂದು ನಂಬಿಕೆ.
ಕರಿಮುಖ, ಗಜವದನ ಗಣೇಶನಿಗೆ ಮೋದಕದಷ್ಟೇ ಗರಿಕೆಯೂ ಪ್ರಿಯವಂತೆ. ಇದಕ್ಕೆ ಇನ್ನೊಂದು ಕಾರಣವೂ ಉಂಟೆಂದು ಕೇಳಿದ್ದೇನೆ. ಪ್ರಾಣಿಗಳು ಹೊಟ್ಟೆಯಲ್ಲಿ ಹಿಂಸೆಯಾದಾಗ, ಗರಿಕೆ ಹುಲ್ಲನ್ನು ತಿಂದು, ವಾಂತಿ ಮಾಡಿ ಹೊಟ್ಟೆ ಸರಿ ಮಾಡಿಕೊಳ್ಳುವ ಒಂದು ಪರಿ ಇದೆ. ನಮ್ಮ ಗಣೇಶ, ಭಕ್ತರು ಕೊಟ್ಟ ಎಲ್ಲ ಭಕ್ಷ್ಯಗಳನ್ನು ತಿಂದು, ಹೊಟ್ಟೆ ಉಬ್ಬರವಾದರೆ ಅದಕ್ಕೆ ಪರಿಹಾರವಾಗಿ ಇರಲೆಂದು ಗರಿಕೆಯನ್ನು ಅರ್ಪಿಸುತ್ತೇವೆ ಎಂದರೆ ಸರಿ ಏನೋ.
ಕೆಲವು ಸಲ ಬಟ್ಟಲು ಅಡಿಕೆಯನ್ನು ಗಣೇಶನ ರೂಪದಲ್ಲಿ ಇಟ್ಟು ಮೊದಲ ಪೂಜೆ ಸಲ್ಲಿಸಿದ್ದು ನೆನಪಿದೆ.
ಬೆಂಗಳೂರಿಗೆ ಬಂದ ನಂತರ ನೋಡಿದ ನಾಟಕಗಳಲ್ಲಿ ಗಣಪತಿ ನಿನ್ನ ಸ್ತುತಿ ಮಾಡುತೇನೆ ಸಭಾದಾಗ ಮತಿ ಕೊಡು ವಿದ್ಯೆಯ ದಯಾಘನ... ಹಾಗೂ B.ಜಯಶ್ರೀಯವರು ( ಅಂತ ಮಸಕು ನೆನಪು) ಮತ್ತು ತಂಡದವರು ನೃತ್ಯ ಮಾಡುತ್ತಾ ಹೇಳಿದ ಗಜವದನ ಹೇ ರಂಭ ವಿಜಯಧ್ವಜ ಶತರವಿ ಪ್ರತಿಭಾ... ಅದರಲ್ಲೂ ಗಣೇಶ.. ಣೇಶ...ಶ ಶಶಶಶ ಭಾಗವನ್ನು ನೆನೆದರೆ ಈಗಲೂ ಮೈ ಪುಳಕವಾಗುತ್ತದೆ. ಅವರದೇ ತಂಡ ಹಾಡಿದ ಇನ್ನೊಂದು ನಾಟಕದ ಹಾಡು ಶ್ರೀ ಗಣರಾಯ ಪಾರ್ವತಿ ತನಯ ಶರಣು ಶರಣು ನಿನಗಾ.. ಸದಾಶಿವನ ಮಗ ಕಂಟಕ ಹರಣನೆ ಕೈಯ ಮುಗಿವೆ ನಿನಗಾ... ತುಂಬಾ ಮೆಚ್ಚುಗೆ.
ಬೆಂಗಳೂರಿಗೆ ಬಂದ ಹೊಸದರಲ್ಲಿ ಇದ್ದದ್ದು ಜಯನಗರದ ಚಿಕ್ಕಪ್ಪ ನಂಜಣ್ಣಯ್ಯನ ಮನೆಯಲ್ಲಿ. ಹತ್ತಿರವೇ ಯಡಿಯೂರಿನ ಟೆಂಟ್ ಸಿನಿಮಾ. ಸಂಜೆ ಯಾಗುತ್ತಿದ್ದಂತೆ ಘಂಟಸಾಲ ಅವರು ಹಾಡಿದ ವಾತಾಪಿ ಗಣಪತಿಂ ಬಜೆ ಹಂ ..ಮೈಕ್ ನಲ್ಲಿ ಮೊಳಗಿದರೆ ಅದು ಇನ್ನೇನು ಸಿನಿಮಾ ಪ್ರಾರಂಭವಾಗುತ್ತದೆ ಎನ್ನುವ ಸೂಚನೆ. ಪ್ರತಿದಿನ ಕೇಳಿದರೂ ಆ ಕಂಠ ಆ ಗಾಯನ ಅಷ್ಟೇ ಸಂತೋಷ ಕೊಡುತ್ತಿತ್ತು.
ರಾಮೋತ್ಸವ ಕಾರ್ಯಕ್ರಮದಲ್ಲಿ ಬರುತ್ತಿದ್ದ ಸಂಗೀತ ವಿದ್ವಾಂಸರು ತೊಡೆಯ ಮೇಲೆ ಗಟ್ಟಿಯಾಗಿ ತಾಳ ಹಾಕುತ್ತಾ ಹಾಡಿದ ಮಹಾಗಣಪತಿಂ ಮನಸಾ ಸ್ಮರಾಮಿ ವಸಿಷ್ಠ ವಾಮದೇವಾದಿ ವಂದಿತ.... ಕಣ್ಣಿಗೆ ಕಟ್ಟಿದಂತಿದೆ.
ಬಾಲ ಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿ ರೂಪಿಸಿದ ಗಣೇಶನ ಸಾರ್ವಜನಿಕ ಪೂಜಾ ಸಮಾರಂಭ, ಸ್ವಾತಂತ್ರ್ಯದ ನಂತರ ಬಹುಶಃ ಬೇರೆಯ ರೂಪವನ್ನು ಪಡೆದಿರಬಹುದು. ನಾನು ಕಂಡಂತೆ ಪೂಜೆಯ ಜೊತೆಗೆ ಹರಿಕಥೆ, ಸಂಗೀತ, ಭಜನೆಯಂತಹ ದೇವರನ್ನು ಸ್ತುತಿಸುವ ಕಾರ್ಯಕ್ರಮಗಳಿಂದ ಕೂಡಿರುತ್ತಿತ್ತು. ಕ್ರಮೇಣ orchestra ರೂಪದಲ್ಲಿ ಕಿವಿ ಗಡಿಚಿಕ್ಕುವ ಸಿನಿಮಾ ಸಂಗೀತ, ಕುಣಿತ, ಹಾಸ್ಯ ತುಣುಕುಗಳು ಮುಂತಾದವು ಪ್ರಾರಂಭವಾಗಿ, ಗಣೇಶನ ಹಾಡುಗಳಿಗೂ ಆಗಾಗ ಸ್ಥಾನ ಸಿಗುವಂತಾಗಿದೆ.
ಅಸಂಖ್ಯಾತ ದೇವರನಾಮಗಳು, ಭಜನೆಗಳು, ಸಿನಿಮಾ ಸಂಗೀತಗಳು, ರಂಗ ಗೀತೆಗಳು ಹೀಗೆ ಹಲವಾರು ಪ್ರಕಾರಗಳಲ್ಲಿ ಗಣೇಶನ ಸ್ತುತಿಸುವ ಹಾಡುಗಳ ಮಧ್ಯೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ಕೆಲವು ಹಾಡುಗಳನ್ನಷ್ಟೇ ಸ್ಮರಿಸಲು ಸಾಧ್ಯ ವಾಗಿದ್ದು.
ಅನೂಚಾನವಾಗಿ ಬಂದಿರುವ ಸಂಪ್ರದಾಯದ ಪ್ರಕಾರ, ವರಸಿದ್ಧಿ ವಿನಾಯಕ ವ್ರತ ಮಾಡಿದ್ದಾದ ನಂತರ ವಿನಾಯಕನ ವಿಸರ್ಜನೆ ಮಾಡಬೇಕು. ಚಿಕ್ಕವನಿದ್ದಾಗ ನನಗಾಗಿ ಒಂದು ಪುಟ್ಟ ಗಣೇಶನನ್ನು ಪೂಜೆ ಮಾಡಲು ಕೊಟ್ಟಿದ್ದರು. ನನಗೆ ಅದರ ಮೇಲೆ ಅತೀವ ಮೋಹ. ಗಣೇಶನನ್ನು ಕೆರೆಯಲ್ಲಿ ಬಿಡಲು ನನಗೆ ಇಷ್ಟವಿಲ್ಲ. ಬಲವಂತ ಮಾಡಿದಾಗ ಕೋಪ ಅಳು ಬಂದಿದ್ದು. ಆ ಕೋಪದಲ್ಲಿ ಗಣೇಶನಿಗೆ " ಹೋಗೋ ಗಣೇಶ್ಗ್ಯಾ" ಅಂತ ಕೊಟ್ಟಿದ್ದು. ( ನಾನು ನನ್ನಣ್ಣ ಸತ್ತಿ ಸರ್ ಜಗಳ ಆಡುವಾಗ ರಂಗಿಗ್ಯ ಸತ್ತಿಗ್ಯ ಎಂದು ಬೈಯುತ್ತಿದ್ದ ಪ್ರಭಾವ ಇರಬೇಕು) ಗಣೇಶನಿಗೆ ಬೈದಿದ್ದು ತಪ್ಪು ಅಂತ ಮನದಟ್ಟು ಮಾಡಿದಾಗ " ಸ್ವಾಮಿ ಕ್ಷಮಿಸಪ್ಪ ಇನ್ಮೇಲೆ ಹೀಗ್ ಮಾಡಲ್ಲ" ಅಂತ ಕೈಮುಗಿದು ಕೇಳ್ಕೊಂಡಿದ್ದು ಆಯ್ತು.
60/70 ರ ದಶಕದಲ್ಲಿ, ಗಣೇಶನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಗುರುರಾಜುಲು ನಾಯ್ಡು ಅವರ ಹರಿಕಥೆ ಸಾಮಾನ್ಯವಾಗಿ ಇರುತ್ತಿತ್ತು. ಅವರು ಹಾಡು ಹೇಳುವ ಶೈಲಿ ಹಾಗೂ ನಿರರ್ಗಳ ಮಾತು ಎಲ್ಲರನ್ನೂ ಆಕರ್ಷಿಸುತ್ತಿತ್ತು. ರಾವಣ, ಶಿವನ ಆತ್ಮ ಲಿಂಗವನ್ನು ಬ್ರಾಹ್ಮಣ ವಟುವಿನ ರೂಪದಲ್ಲಿದ್ದ ಗಣೇಶನ ಕೈಗೆ ಕೊಡುವ ಪ್ರಸಂಗ. ಬೇಗ ಬರಬೇಕು, ಭಾರ ಜಾಸ್ತಿ ಆದರೆ ಒಂದು ಎರಡು ಮೂರು ಎಂದು ಕೂಗಿ ಕೆಳಗಿಡುವೆ ಎಂದು ಹೇಳಿದ ಗಣೇಶನಿಗೆ, ಸ್ವಲ್ಪ ಹೊತ್ತು ಬಿಟ್ಟು , ಬಿಟ್ಟು ಎಣಿಸಬೇಕು ಎಂದು ರಾವಣನ ಸಲಹೆ. ಗಣೇಶ ಹೇಳಿದ್ದನ್ನು ಗುರುರಾಜುಲು ನಾಯ್ಡು ತಮ್ಮ ಏರಿದ ಧ್ವನಿಯಲ್ಲಿ ನಿರೂಪಿಸಿದ್ದು ಹೀಗೆ.." ಅಯ್ಯಾ ಭಾರ ಆಗ್ತಾ ಇದೆ ... ನಾನು ಎಣಿಸ್ತೀನಿ... ಒಂದು.. ಸ್ವಲ್ಪ ಹೊತ್ತು ಬಿಟ್ಕೊಂಡು ಎರಡು... ಇನ್ನ ಸ್ವಲ್ಪ ಹೊತ್ತು ಬಿಟ್ಕೊಂಡು ಮೂರು .. " ಎಂದು ಹೇಳಿ ಆತ್ಮ ಲಿಂಗವನ್ನು ಭೂಮಿಯ ಮೇಲೆ ಇಟ್ಟಿದ್ದು. ನಾಲ್ಕಾರು ಸಲ ಇದನ್ನು ಕೇಳಿದ್ದರೂ ಹೊಸದೇನೋ ಎನ್ನುವಷ್ಟು ಪ್ರತಿ ಸಲವೂ ಸಂತೋಷಪಟ್ಟಿದ್ದೇನೆ.
ಗೋಕರ್ಣದ ಗಣೇಶ ನಿಂತಿರುವ ಭಂಗಿಯಲ್ಲೇ ಇರುವುದು. ಕಿರೀಟವಿಲ್ಲದ ಗಣೇಶನ ತಲೆ ಚಪ್ಪಟೆಯಾಗಿದೆ.. ಸ್ವಲ್ಪ ಹಳ್ಳವು ಇರುವಂತೆ ಅನಿಸುತ್ತದೆ. ಆತ್ಮಲಿಂಗವನ್ನು ಭೂಮಿಗಿಳಿಸಿದ ವಟುವಿನ ಮೇಲೆ ರಾವಣನಿಗೆ ಕೋಪ ಬಂದು ತಲೆಯ ಮೇಲೆ ಮೊಟಕಿದ ಕಾರಣ ಹೀಗಾಯಿತೆಂದು ಒಂದು ವ್ಯಾಖ್ಯಾನ ಕೇಳಿದ್ದೇನೆ. ಸತ್ಯಾಸತ್ಯತೆ ಆ ಗಣೇಶನಿಗೆ ಗೊತ್ತು.
ಸಣ್ಣ ವಯಸ್ಸಿನಿಂದ ಬಹಳ ಬಾರಿ ನೋಡಿದ್ದು ಬಸವನಗುಡಿಯ ದೊಡ್ಡ ಗಣೇಶ. ಹಳೆಯ ಶೈಲಿಯ ದೇವಸ್ಥಾನದಿಂದ ಮೊದಲುಗೊಂಡು ಈಗಿನ ಆಧುನಿಕ ಶೈಲಿಯವರೆಗೆ ಆದ ಬದಲಾವಣೆಗಳನ್ನು ಗಮನಿಸಿದ್ದೇನೆ.
ನನಗೆ ಬಹಳ ಮೆಚ್ಚುಗೆಯಾದದ್ದು ದಕ್ಷಿಣ ಕನ್ನಡ ಜಿಲ್ಲೆಯ ಸೌತಡ್ಕ ಗಣಪತಿ. ಇಲ್ಲಿ ಗಣಪತಿಗೆ ಸೂರಿಲ್ಲ. ಬಯಲಲ್ಲಿ ವಿರಾಜಸುತ್ತಿರುವ ಗಣೇಶ.
ಸ್ಥಳಪುರಾಣದಂತೆ.. ದೇವಸ್ಥಾನ ಕಟ್ಟಲು ಮಾಡಿದ ಪ್ರಯತ್ನಗಳು ಫಲಿಸದೆ ಹಾಗೆಯೇ ಬಿಟ್ಟದ್ದು. ನಾವು ಹೋದ ದಿನ ವಿಶೇಷವಾಗಿ ರಂಗ ಪೂಜೆ ಸೇವೆಯನ್ನು ಮಾಡಿಸಿದ್ದರು. ಇಲ್ಲಿನ ಅವಲಕ್ಕಿ ಪಂಚಕಜ್ಜಾಯದ ಪ್ರಸಾದದ ರುಚಿ ಸವಿದು ಅನುಭವಿಸಬೇಕು.. ನಾನಂತೂ ಬೊಗಸೆಗಟ್ಟಲೆ ಪಂಚ ಕಜ್ಜಾಯವನ್ನು ಸವಿದೆ.
ಇದೇ ರೀತಿ ಸೂರಿಲ್ಲದ್ದು ಭಂಕೂರ ಗಣೇಶ.ಶಹಾಬಾದಿನ ನಮ್ಮ ಕಾಲೋನಿಯ ಹತ್ತಿರವಿದ್ದ ದೊಡ್ಡ ಗಣಪತಿ. ಈ ಗಣಪತಿಗೆ ಬಣ್ಣದ ಲೇಪನ ಸೇವೆ ಹೆಚ್ಚು ಜನಪ್ರಿಯ. ಸೇವಾಕರ್ತರು ಆಗಾಗ್ಗೆ ಬಣ್ಣದ ಸೇವೆ ಮಾಡಿ ಹೊಸ ಬಣ್ಣವನ್ನು ಲೇಪಿಸುತ್ತಾರೆ. ಸಾಕಷ್ಟು ಸಲ ಬೆಳಗಿನ ವಾಕಿಂಗ್ ಗೆ ಅಲ್ಲಿಗೆ ಹೋಗುತ್ತಿದ್ದೆ.
ಗೂಳೂರು ಗಣೇಶ ಮತ್ತೊಂದು ವಿಶೇಷ. ಗಣೇಶ ಚತುರ್ಥಿಯಂದು ಕೆರೆಯಿಂದ ಮಣ್ಣು ತಂದು, ವಿದ್ಯುಕ್ತವಾಗಿ ಗಣೇಶನನ್ನು ತಯಾರು ಮಾಡಲು ಮೊದಲು ಮಾಡುತ್ತಾರೆ. ಬಲಿಪಾಡ್ಯಮಿಯಂದು, ಗಣೇಶನ ಪ್ರತಿಷ್ಠಾಪನೆ, ಮುಂದೆ ಒಂದು ತಿಂಗಳ ಕಾಲ ಪೂಜೆ. ಚಿಕ್ಕಂದಿನಲ್ಲಿ ನಾವು ಮಾತಾಡಿಕೊಳ್ಳುತ್ತಿದ್ದದ್ದು... ಗೂಳೂರು ಗಣೇಶನ ಹೊಟ್ಟೆಯಲ್ಲಿ ನೂರೊಂದು ತೆಂಗಿನಕಾಯಿಗಳನ್ನು ಹಾಕುತ್ತಾರೆ.. ಅಷ್ಟು ದೊಡ್ಡ ಹೊಟ್ಟೆ... ಈ ಸುದ್ದಿಯ ಮೂಲ ಎಲ್ಲಿಯದು ಇಂದಿಗೂ ತಿಳಿಯದು. ಒಂದು ಬಾರಿ ನೋಡುವ ಅವಕಾಶ ನನಗೂ ಆಯಿತು.
ಹಂಪಿಯ ಕಡಲೆಕಾಳು ಗಣಪನನ್ನು ನೋಡುವ ಮುಂಚೆ ನನ್ನ ಕಲ್ಪನೆ ತುಂಬಾ ಚಿಕ್ಕದಾದ ಗಣಪತಿ ಎಂದಿತ್ತು. ವಾಸ್ತವವಾಗಿ ಅದು ಸುಮಾರು 15 ಅಡಿ ಎತ್ತರದ ದೊಡ್ಡ ಗಣಪತಿ. ಗಣಪತಿಯ ಹೊಟ್ಟೆ ಕಡಲೆಕಾಳಿನ ರೂಪದಲ್ಲಿ ಇದೆ ಎಂದು ಅದಕ್ಕೆ ಆ ಹೆಸರು.
ಹಂಪಿಯ ಸಾಸಿವೆ ಕಾಳು ಗಣಪನದೂ ಇದೇ ಕಥೆ. ಹೆಸರು ಮತ್ತು ಇರುವಿಕೆ ಒಂದಕ್ಕೊಂದು ಹೊಂದಾಣಿಕೆ ಇಲ್ಲ. ಆದರೆ ನೋಡಲು ಚಂದ.
ಇನ್ನೊಂದು ಇಷ್ಟಪಟ್ಟದ್ದು ಕೋಲಾರ ಜಿಲ್ಲೆಯ ಕುರುಡುಮಲೆ ಗಣೇಶ. ದೇವಸ್ಥಾನದ ಪರಿಸರ ವಿಗ್ರಹ ಎಲ್ಲವೂ ಚಂದ.
ಎರಡು ಕೈ ಇರುವ, ನಿಂತಿರುವ ಭಂಗಿಯಲ್ಲಿ ನೋಡಬಹುದಾದ ಗಣೇಶನೇ ಇಡಗುಂಜಿಯ ಗಣೇಶ.
ಗಣೇಶನ ದೇವಸ್ಥಾನಗಳು, ಮನೆಯ ಮುಂದಿನ ಗಣೇಶನ ಚಿತ್ರಗಳು/ ಸಣ್ಣ ವಿಗ್ರಹಗಳು ಎಲ್ಲೆಲ್ಲಿಯೂ ಕಾಣ ಸಿಗುತ್ತವೆ. ಗಣೇಶ ಸರ್ವ ವ್ಯಾಪಿ.
ಸಂಕಷ್ಟ ಹರ ಚತುರ್ಥಿ ಈಗ ಬಹಳಷ್ಟು ಕಡೆ ಆಚರಿಸಲಾಗುತ್ತದೆ. ಅದರಲ್ಲಿಯೂ ಸಂಕಷ್ಟ ಚತುರ್ಥಿ ಮಂಗಳವಾರ ಬಂದರೆ ಅಂಗಾರಕ ಸಂಕಷ್ಟ ಚತುರ್ಥಿ ಎಂಬ ವಿಶೇಷ.
ಹಾಸ್ಯದ ಕಾರ್ಯಕ್ರಮಗಳಲ್ಲಿ ಗಣಪತಿಗೆ ವಿಶೇಷ ಸ್ಥಾನಮಾನ. ಡೊಳ್ಳು ಹೊಟ್ಟೆಯ ಗಣೇಶ ಚಿಕ್ಕ ಇಲಿಯ ಮೇಲೆ ಸವಾರಿ ಮಾಡುವುದು, ಜಾರಿ ಬಿದ್ದು ಹೊಟ್ಟೆಯು ಒಡೆದು, ಕಡುಬು ಆಚೆ ಚೆಲ್ಲುವುದು, ಅದನ್ನು ಆರಿಸಿ ಹೊಟ್ಟೆಗೆ ತುಂಬಿಕೊಳ್ಳುವುದು, ಇದನ್ನು ನೋಡಿ ಚಂದ್ರನಗುವುದು ಎಲ್ಲವೂ ಹಾಸ್ಯಕ್ಕೆ ಸ್ಫೂರ್ತಿ.
ಗಣೇಶನ ಬುದ್ಧಿವಂತಿಕೆ, ಅಪ್ಪ ಅಮ್ಮನ ಮೇಲಿನ ಪ್ರೀತಿಯ ಪ್ರದರ್ಶನ.... ಪ್ರಪಂಚವನ್ನು ಸುತ್ತು ಹಾಕುವ ಪಂದ್ಯದಲ್ಲಿ, ಶಿವ ಪಾರ್ವತಿಯರನ್ನೇ ಸುತ್ತು ಹಾಕಿ ಅವರೇ ಪ್ರಪಂಚ ಎಂದು ಹೇಳಿದ ಜಾಣ.
ಗಣೇಶನ ಬಗ್ಗೆ ಬರೆದ ಲೇಖನಗಳು ವ್ಯಾಸ ಮಹರ್ಷಿಗಳು ಹೇಳಿ ಗಣೇಶ ಬರೆದ ಮಹಾಭಾರತದಷ್ಟೇ ವಿಶಾಲವಾಗಬಹುದು.
ಗಾ(ಕಾ)ಗುಣಿತ ರೂಪದ ಗ ,ಗೀ, ಗು (ಶೀರ್ಷಿಕೆಯನ್ನು ಗಮನಿಸಿ) ಲೇಖನ ನನ್ನದೊಂದು ಅಣುವಿನಷ್ಟು ಕಾಣಿಕೆ.
ಗಣೇಶ.. ಈ ವರ್ಷ ಹೋಗಿ ಬಾ, ಮುಂದಿನ ವರ್ಷ ಓಡೋಡಿ ಬೇಗ ಬಾ ಎಂದು ಹೇಳುತ್ತಾ... ಎಲ್ಲರಿಗೂ ಗಣೇಶನ ಕೃಪಾಕಟಾಕ್ಷ ಇರಲೆಂದು ಪ್ರಾರ್ಥಿಸುತ್ತಾ
ನಮಸ್ಕಾರ.
ಡಿ ಸಿ ರಂಗನಾಥ ರಾವ್
9741128413
ಅರಿಕೆ: ಈ ಲೇಖನವನ್ನು ದಯವಿಟ್ಟು ನಿಮ್ಮ ಪರಿಚಯದವರಿಗೆ ಕಳಿಸಿ...









ತುಂಬಾ ಸ್ವಾರಸ್ಯಕರವಾಗಿದೆ🙏
ReplyDeleteಜೈ ಗಣೇಶ 🙏
ReplyDeleteಕುಳಿತಲ್ಲಿಯೇ ಗಣಪತಿಯ ವಿವಿಧ ರೂಪಗಳ ಅನಾವರಣ ಮಾಡಿಸಿಬಿಟ್ಟರು ಲೇಖಕರು. ಲೇಖನ ಸಚಿತ್ರವಾಗಿರುವುದು ಮತ್ತಷ್ಟು ಮೆರುಗನ್ನು ಹೆಚ್ಚಿಸಿದೆ.
ReplyDeleteಹಿರಿಯರಿಗಿಂತ ಅದೇಕೋ ಗಣಪನು ಮಕ್ಕಳಿಗೆ ಬಹಳ ಪ್ರಿಯವಾಗುತ್ತಾನೆ. ಕಾರಣ ಆತನ ರೂಪ ಇರಬಹುದೇನೋ. ಮಕ್ಕಳು ಗಣೇಶನನ್ನು ದೇವರು ಎನ್ನುವುದಕ್ಕಿಂತ ಸ್ನೇಹಿತ ಎಂಬಂತೆ ನೋಡುತ್ತಾರೆ!
ಮುಂಬೈ ನಗರದ ಸಿದ್ಧಿವಿನಾಯಕನು ಸಹ ಬಹಳ ಪ್ರಸಿದ್ಧನು.
ಒಂದೆಡೆ ಗಣಪತಿಯು ಬ್ರಹ್ಮಚಾರಿ ಎಂದು ಹೇಳುತ್ತಲೇ ಸಿದ್ಧಿಬುದ್ಧಿಯರ ಪತಿ ಎಂದು ಸಹ ಹೇಳಲಾಗುತ್ತದೆ ಇದರಲ್ಲಿ ಏನೋ ಸ್ವಲ್ಪ ಗೊಂದಲವಿದೆ.
ಕೊನೆಹನಿ
ಗುರುಗಳು ಗಜಾನನಂ ಭೂತ ಗಣಾಧಿ ಸೇವಿತಂ ಎಂದು ಹೇಳುವಾಗ ಶಿಷ್ಯನು ಬೂತ ಎಂದು ಅಲ್ಪಪ್ರಾಣವನ್ನು ಉಪಯೋಗಿಸಿದಾಗ ಗುರುಗಳು ದೊಡ್ಡ ಭೂ ಎಂದು ಹೇಳಿಕೊಟ್ಟಾಗ ಶಿಷ್ಯನು *ದೊಡ್ಡಭೂತ ಗಣಾದಿ ಸೇವಿತಂ* ಎಂದನಂತೆ.
ಗುರು ಪ್ರಸನ್ನ
ಚಿಂತಾಮಣಿ