ಶ್ರಧ್ದೆ- ಶ್ರಾಧ್ದ
ಶ್ರಾವಣ ಮಾಸದಿಂದ ಪ್ರಾರಂಭವಾಗುವ ಹಬ್ಬದ ಸಾಲು .. ನವರಾತ್ರಿಯೊಂದಿಗೆ ಮುಕ್ತಾಯ. ಈ ಮಧ್ಯೆ ನಾಗರ ಪಂಚಮಿಯ ಮಾರನೆಯ ದಿನ ನಮ್ಮ ಮನೆಯಲ್ಲಿ ಒಂದು ವಿಶೇಷ ಹಬ್ಬ... ಅದುವೇ ನಮ್ಮ ಅಮ್ಮನನ್ನು ನೆನೆಸಿಕೊಳ್ಳುವ ಹಬ್ಬ. 39 ವರ್ಷಗಳ ಹಿಂದೆ ತೀರಿಕೊಂಡ ನಮ್ಮಮ್ಮನ ಈ ವರ್ಷದ ಶ್ರಾಧ್ದದ ದಿನ. ಶ್ರದ್ಧಯಾ ಕ್ರಿಯತೇ ಇತಿ ಶ್ರಾಧ್ದಃ... ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದಾಗ ಅದು ಶ್ರಾಧ್ದವಾಗುತ್ತದೆ. ಆದರೆ ಆಡು ಭಾಷೆಯಲ್ಲಿ ಶ್ರಾಧ್ದ ಎಂದಾಗ ಹೊಳೆಯುವುದೇ ತಿಥಿ ಎಂಬ ಇನ್ನೊಂದು ಪದ.. ಅದು ಪಿತೃಕಾರ್ಯ, ಪಿತೃಗಳನ್ನು ನೆನೆಯುವ,ಗೌರವಿಸುವ, ಋಣ ತೀರಿಸುವ ಒಂದು ವಿಧಾನ.
ನನ್ನ ಚಿಕ್ಕಂದಿನ ನೆನಪನ್ನು ಕೆದಕಿದರೆ, ತಾತನ ತಿಥಿ ಕಣ್ಮುಂದೆ ಬರುತ್ತದೆ. ದೇವನಹಳ್ಳಿ ಇಂದ ಬರುತ್ತಿದ್ದ ರಾಮಾಶಾಸ್ತ್ರಿಗಳು, ಬೆಂಗಳೂರಿನಿಂದ ಬರುತ್ತಿದ್ದ ಚಿಕ್ಕಪ್ಪ ನಂಜಣ್ಣಯ್ಯ, ಮಡಿ ಮಡಿ ವಾತಾವರಣ, ಹಾಗಾಗಿ ನಮಗೆ ಮನೆಯಲ್ಲಿ ಎಲ್ಲೆಂದರಲ್ಲಿ ಓಡಾಡಲು ಅನುಮತಿ ಇಲ್ಲ. ಶಾಲೆಯ ಊಟದ ಸಮಯದಲ್ಲಿ ಮನೆಗೆ ಬಂದಾಗ, ತಿಥಿಯ ಭಾಗವಾಗಿ ಊಟ ಮಾಡುತ್ತಿದ್ದ ಬ್ರಾಹ್ಮಣರು, ಭಕ್ಷ ಭೋಜ್ಯಗಳ ಘಮ. ಆದರೆ ನಮಗೆ ಊಟವಿಲ್ಲ. ನಮ್ಮ ಊಟ ಸುಮಾರು 3 ಘಂಟೆಗೆ.. ಆಗ ಶಾಲೆಯಿಂದ ಮನೆಗೆ ಊಟಕ್ಕೆ ಬರಲು ವಿಶೇಷ ಅನುಮತಿ.
ಅಂತಹ ಒಂದು ದಿನ, ಶಾಲೆಯ ಊಟದ ಸಮಯದಲ್ಲಿ ಮನೆಗೆ ಬಂದಾಗ, ನನ್ನಮ್ಮ ಊಟ ಮಾಡುತ್ತಾ ಇದ್ದದ್ದು ಕಂಡು ನನಗೆ ಅತೀವ ದುಃಖವಾಯಿತು. ಅಮ್ಮ ನನ್ನನ್ನು ಬಿಟ್ಟು ಊಟ ಮಾಡುತ್ತಿದ್ದಾಳೆ ಎಂದು ನನಗೆ ಅಳು. ಆ ಸಮಯದಲ್ಲಿ ನಮಗೆ ಊಟವಿಲ್ಲ ಎಂದು ತಿಳಿದ ಕಾರಣ ಶಾಲೆಗೆ ವಾಪಸ್ ಹೋಗಿದ್ದು. ನಂತರ ತಿಳಿದ ವಿಚಾರ.... ಅಂದು ನಮ್ಮಪ್ಪನ ತಂಗಿಯ ತಿಥಿ. ಏನು ಕಾರಣವೋ ತಿಳಿಯದು, ಮುತ್ತೈದೆಯ ಸ್ಥಾನದಲ್ಲಿ ನಮ್ಮಮ್ಮ ಕೂರಬೇಕಾಯಿತಂತೆ. ಹಾಗಾಗಿ ನನ್ನನ್ನು ಬಿಟ್ಟು ಊಟ ಮಾಡಬೇಕಾದ ಅನಿವಾರ್ಯತೆ. ನನ್ನ ಅಳುವಿನಿಂದ ಅಮ್ಮ ಊಟ ಮಾಡಲಾಗದೆ ತೊಳಲಾಡಿದ್ದನ್ನು ಕೇಳಿದೆ. ನಂತರ ಊಟದ ಸಮಯದಲ್ಲಿ, ಅಮ್ಮ ಪೇಚಾಡಿಕೊಂಡು ನನ್ನನ್ನು ಮುದ್ದು ಮಾಡಿ ಪಕ್ಕದಲ್ಲಿ ಕೂತು ಊಟ ಮಾಡಿಸಿದ್ದು ನೆನಪಿದೆ.
ತಿಥಿ ಊಟ ಒಳ್ಳೆಯ balanced food. ಸತ್ಯಹರಿಶ್ಚಂದ್ರ ಚಿತ್ರದ " ಶ್ರಾಧ್ದದೂಟ ಸುಮ್ಮನೆ ನೆನೆಸಿಕೊಂಡರೆ ಝುಮ್ಮನೆ ನೀರೂರಿ ನಾಲಗೆ ಕುಣಿವುದಯ್ಯ ತಮ್ಮಗೆ..ಇಂಗು ತೆಂಗು ತಿರುವಿ ಬೆರೆತ ವಡೆ ಗೊಜ್ಜು ಮಜ್ಜಿಗೆ ರಾಯಿತ " ಹಾಡಿನ ಸಾಲುಗಳು ಶ್ರಾಧ್ದದ ಊಟದ ಅನಾವರಣ ಗೊಳಿಸುತ್ತದೆ.
ನಿಮಗಾಗಿ ಆ ಹಾಡಿನ ಲಿಂಕ್... ಕೇಳಿ ಖಂಡಿತ ಇಷ್ಟವಾಗುತ್ತದೆ.
https://drive.google.com/file/d/1VVVjJ_E7V2JTprihlf01tAaCeu4IAobG/view?usp=drivesdk
ಸತ್ತ ಹಿರಿಯರಿಗೆ ಗೌರವ ತೋರಿಸುವುದು ಶ್ರಾದ್ಧದ ಮೂಲ ಉದ್ದೇಶ. ಕೆಲವು ಪಂಗಡಗಳಲ್ಲಿ ಪಿಂಡ ರೂಪದಲ್ಲಿ ಆಹ್ವಾನಿಸಿದ ಹಿರಿಯರನ್ನು ಪೂಜಿಸಿ, ತಿಲತರ್ಪಣ (ಎಳ್ಳು ನೀರು) ಕೊಟ್ಟು, ಆ ನಿಮಿತ್ತ, ಬ್ರಾಹ್ಮಣರನ್ನು ಹಿರಿಯರ, ದೈವದ ರೂಪದಲ್ಲಿ ಕಂಡು ಅವರಿಗೆ ಊಟಕ್ಕೆ ಹಾಕಿ ದಕ್ಷಿಣೆ ಕೊಟ್ಟು ಕಳಿಸುವುದು ಒಂದು ಪದ್ಧತಿ.
ಇದನ್ನು ಕಾಶಿ, ಗಯಾ, ಗೋಕರ್ಣ ಮುಂತಾದ ಪುಣ್ಯ ಸ್ಥಳಗಳಲ್ಲಿ ಮಾಡಿ ಬಂದರೆ ಹಿರಿಯರಿಗೆ ತೋರಿಸಿದ ವಿಶೇಷ ಗೌರವ.
ಅದರಲ್ಲೂ ಗಯಾದ ವಿಷ್ಣು ಪಾದದಲ್ಲಿ ಮಾಡಿದ ಪಿಂಡ ಸಂಚಯನದಿಂದ ಪೂರ್ವಜರಿಗೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ. ನಂತರದ ದಿನಗಳಲ್ಲಿ ತಿಥಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ.
ಮಾತೃ ಗಯಾದಲ್ಲಿ ಶ್ರಾದ್ಧ ಮಾಡಿದರೆ ತಾಯಂದಿರಿಗೆ ವಿಶೇಷವಾಗಿ ಸಲ್ಲುತ್ತದೆ ಎಂಬ ನಂಬಿಕೆ.
ವರ್ಷಕ್ಕೊಂದು ಬಾರಿ, ಹಿರಿಯರು ಸತ್ತ ತಿಥಿಯಂದು ( ಪಂಚಾಂಗದ ಪ್ರಕಾರ ದಿನ), ಹಿರಿಯರು ವಾಸಿಸುತ್ತಿದ್ದ ಮನೆಯಲ್ಲೇ ಶ್ರಾಧ್ದ ಮಾಡಬೇಕಾದದ್ದು ಮಕ್ಕಳ ಕರ್ತವ್ಯ ಎಂದು ನಂಬಿಕೆ. ಕಾಲನ ಹೊಡೆತಕ್ಕೆ ಸಿಕ್ಕಿ, ಸ್ಥಳ ಪಲ್ಲಟ ಗೊಂಡ ಜನರು ತಾವು ಇದ್ದಲ್ಲಿಯೇ ಶ್ರಾಧ್ದ ಮಾಡುವ ಅನಿವಾರ್ಯ ಸೃಷ್ಟಿಯಾಯಿತು. ಹಲವಾರು ಬೇರೆಯ ಕಾರಣಗಳಿಂದ, ಜೊತೆಗೆ ಹಣಕಾಸಿನ ತೊಂದರೆಯಿಂದ ಸಾಂಗೋಪಾಂಗವಾಗಿ ಶ್ರಾಧ್ದ ಮಾಡಲಾಗದವರು, ಅನುಕೂಲಕ್ಕಾಗಿ ಬೇರೆ ದಾರಿಯನ್ನು ಕಂಡುಕೊಂಡರು.
ಒಬ್ಬ ಬ್ರಾಹ್ಮಣನಿಗೆ ಕಾಲು ತೊಳೆದು ಊಟ ಹಾಕಿ, ದಕ್ಷಿಣೆ ಕೊಡುವ ಮಾರ್ಗವೂ ಒಂದು.
ಅದು ಆಗದಿದ್ದಾಗ... ಅಡಿಗೆ ಮಾಡಿಕೊಳ್ಳಲು ಬೇಕಾದ ಎಲ್ಲ ಪದಾರ್ಥಗಳು ( ಸ್ವಯಂಪಾಕ) ಹಾಗೂ ಹಾಲು ಮೊಸರು, ದಕ್ಷಿಣೆ ಕೊಟ್ಟು ಸಮಾಧಾನ ಪಟ್ಟರು.
ಮುಂದೆ ಒಂದು ಹಸುವಿಗೆ ಅಕ್ಕಿ ಬೆಲ್ಲ ಬಾಳೆಹಣ್ಣು ಕೊಟ್ಟು ಶ್ರಾಧ್ದ ಆಯ್ತೆಂದು ಒಪ್ಪಿಕೊಂಡರು.
ಬರೀ ದಕ್ಷಿಣೆ ಕೊಟ್ಟು ಹಿರಣ್ಯ ಶ್ರಾಧ್ದ ಮಾಡುವವರೂ ಇದ್ದಾರೆ.
ಒಂದು ಬಾಳೆ ಎಲೆಯ ಮೇಲೆ ಅಂದು ಮಾಡಿದ ಅಡಿಗೆಯನ್ನು ಬಡಿಸಿ ಮನೆಯ ಮೇಲಿಟ್ಟು, ಅದನ್ನು ಕಾಗೆ, ಬೇರೆ ಪಕ್ಷಿಗಳು, ಅಳಿಲು ತಿಂದಾಗ ಶ್ರಾಧ್ದ ಮಾಡಿದಂತೆ ಎಂದು ಹೇಳುವುದನ್ನು ಕೇಳಿದ್ದೇನೆ.
ನಾನು ಕೇಳಿದ ಒಂದು ಘಟನೆ... ಪ್ರಾಯಶಃ ಹೆಚ್ಚು ಇಷ್ಟವಾದ್ದದ್ದು..
ಏನು ಮಾಡಲೂ ಆಗದ, ಆರೋಗ್ಯವು ಹದಗೆಟ್ಟಿದ್ದ ಒಬ್ಬ ವ್ಯಕ್ತಿ ತನ್ನ ಅಸಹಾಯಕತೆಯನ್ನು ನೆನೆದು, ಅಪ್ಪನ ಶ್ರಾಧ್ದ ಮಾಡಲಾಗದ ಕಾರಣಕ್ಕಾಗಿ ದುಃಖವಾಗಿ, ಎರಡು ಹನಿ ಕಣ್ಣೀರು ಸುರಿಸಿದ್ದನ್ನು ಯಾರೋ ತಿಳಿದವರು ನೋಡಿ, ನೀನು ನಿಮ್ಮಪ್ಪನಿಗೆ ಅಶ್ರು ತರ್ಪಣ ಕೊಟ್ಟಿದ್ದೀಯೇ, ಶ್ರಾಧ್ದ ಆಯಿತು ಎಂದು ಸಮಾಧಾನ ಮಾಡಿದ್ದು.
ಕೆಲವರು ವೃದ್ಧಾಶ್ರಮಗಳಲ್ಲಿ, ಅನಾಥಾಶ್ರಮಗಳಲ್ಲಿ ಇರುವವರಿಗೆ ಊಟವನ್ನು ಹಾಕಿಸಿ, ಶ್ರಾಧ್ದವನ್ನು ಆಚರಿಸುವ ಬಗೆಯೂ ಉಂಟು.
ಅಲ್ಲಿಗೆ ಶ್ರಾಧ್ದವನ್ನು ಹೀಗೇ ಮಾಡಬೇಕೆಂದು ಗೆರೆ ಎಳೆದಿರುವುದು ಎಲ್ಲೂ ಕಾಣುವುದಿಲ್ಲ. ಪ್ರಾಯಶಃ ಪಿಂಡಪ್ರದಾನದ ರೂಪದಲ್ಲಿ ಮಾಡುವುದು ಗಯಾದಲ್ಲಿ ಮಾಡಿದ ಶ್ರಾಧ್ದದಷ್ಟೇ ಉತ್ತಮವಾದದ್ದು ಎಂಬ ನಂಬಿಕೆಯಿಂದ ಅದಕ್ಕೆ ಮೊದಲ ಸ್ಥಾನ ಕೊಟ್ಟಿರಬಹುದು.
ಪಿತೃ ಪಕ್ಷದಲ್ಲಿ.. ಸಾಮಾನ್ಯವಾಗಿ ಬಹಳಷ್ಟು ಹಿಂದುಗಳು, ತಮ್ಮ ಪೂರ್ವಜರನ್ನು ನೆನೆದು ಎಡೆ ಇಡುವ ಸಂಪ್ರದಾಯ ಬಹು ಪ್ರಾಮುಖ್ಯವಾಗಿ ನಡೆದು ಬಂದಿದೆ. ಕೆಲವರು ತಮ್ಮ ಹಿರಿಯರಿಗೆ ಪ್ರಿಯವಾದ ತಿಂಡಿ ತಿನಿಸುಗಳು, ಬೀಡಿ, ಮದ್ಯ, ಹೀಗೆ ಇಡುವುದು ಉಂಟೆಂದು ಕೇಳಿದ್ದೇನೆ.
ಹಿರಿಯರನ್ನು ನೆನೆದು ಗೌರವಿಸುವ ಸಂಪ್ರದಾಯ All souls day ಎಂದು ಕ್ರಿಶ್ಚಿಯನ್ನರು, shab e barat ಎಂದು ಮುಸ್ಲಿಮರು ಆಚರಿಸುತ್ತಾರೆಂದು ತಿಳಿದಿದ್ದೇನೆ.
ನನ್ನದೇ ಅನುಭವ ಹೇಳುವುದಾದರೆ... ಶ್ರದ್ಧೆ ಇದ್ದರೂ....ಕೆಲವು ಕ್ರಿಯೆಗಳನ್ನು ಮಾಡುವಾಗ ಅದರ ಹಿಂದಿರುವ ಕಾರಣ ತಿಳಿಯದು. ಅದನ್ನು ವಿಷದವಾಗಿ ಹೇಳಲಾಗದ..ಆದರೆ ಅದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ ಎಂಬ ಸಮಜಾಯಿಷಿ ಕೊಡುವವರೆ ಜಾಸ್ತಿ. ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ತಿಳಿದು ಕೊಳ್ಳಬೇಕಾದ್ದು ನನ್ನ ಜವಾಬ್ದಾರಿ ಆದರೂ, ಅದನ್ನು ನಿರ್ವಹಿಸದೇ...ವ್ಯವಧಾನವಿಲ್ಲ ಎಂಬ ಸಬೂಬು ಕೊಟ್ಟು ನುಣುಚಿಕೊಂಡಿದ್ದು ನನ್ನ ಸೋಲೇ.
ಶ್ರಾಧ್ದ ಕಾರ್ಯಗಳನ್ನು ಮಾಡುವಾಗ ಬೆಂಗಳೂರಿನಂತಹ ನಗರಗಳಲ್ಲಿ, ಮಡಿ ಯನ್ನು ಸಾಧಿಸುವುದು ಅಷ್ಟು ಸುಲಭವಲ್ಲ., ಜೊತೆಗೆ ಪಿಂಡ ವಿಸರ್ಜನೆ ಒಂದು ಸಮಸ್ಯೆ., ನೀರಿನಲ್ಲಿ ಬಿಡಲು ಸೂಕ್ತ ಜಾಗಗಳಿಲ್ಲ, ಹಸುಗಳಿಗೆ ಕೊಡಲು ಎಲ್ಲರೂ ಒಪ್ಪುವುದಿಲ್ಲ, ತರ್ಪಣ ಬಿಟ್ಟ ಎಳ್ಳು ಮೊಳಕೆಯೊಡೆಯಬಾರದು ಎಂಬ ಅಭಿಪ್ರಾಯವಿದ್ದರೂ, ಮಣ್ಣಲ್ಲಿ ಹೂಳಲು ಸೂಕ್ತ ಜಾಗವಿಲ್ಲ... ಬೇರೆಯ ಜಾಗಗಳಲ್ಲಿ ಮಾಡಿದಾಗ ಅದರ ವಿತರಣೆ ಹೇಗೆ ಆಗುತ್ತದೆ ಎಂಬ ಖಾತ್ರಿ ಇಲ್ಲ.
ಹೀಗಾಗಿ ನಾವು ಅಣ್ಣತಮ್ಮಂದಿರು, ಸಾಕಷ್ಟು ಚರ್ಚೆಗಳು ಚಿಜ್ಞಾಸೆಯ ನಂತರ, ಅಕ್ಕ ತಂಗಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಮಾರ್ಗ ಕಂಡುಕೊಂಡೆವು.
ಮೊದಲ ಹಂತ, ನಾವು ನಾಲ್ಕೂ ಜನ ಅಣ್ಣ ತಮ್ಮಂದಿರು ಗಯಾಗೆ ಹೋಗಿ ಗಯಾಶ್ರಾಧ್ಧ ವನ್ನು ಮಾಡಿ ಬಂದೆವು. ಅಲ್ಲಿಗೆ ಮುಂದೆ ತಿಥಿ ಮಾಡದೇ ಇರಬಹುದು ಎಂಬ ಒಂದು ಕಿರು ದಾರಿ ಕಂಡಿತು. ಆದರೆ ಆ ದಿನದಂದು ಅಪ್ಪ ಅಮ್ಮನನ್ನು ನೆನೆಯಬೇಕು ಎಂಬ ನಿರ್ಧಾರ ಮಾಡಿದೆವು. ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಮಕ್ಕಳು ಮೊಮ್ಮಕ್ಕಳು ಸೇರಬೇಕೆಂಬುದು ನಮ್ಮ ಆಸೆ.
ನಮ್ಮಮ್ಮನ ಶ್ರಾಧ್ದದ ದಿನದಂದು, ಒಂದಷ್ಟು ಮುತ್ತೈದೆಯರು ಬಂದು ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ, ದೇವರ ನಾಮಗಳು ಹೇಳುತ್ತಾರೆ. ಅಮ್ಮನ ಭಾವಚಿತ್ರ ಇಟ್ಟು ಪೂಜೆ ಮಾಡಿ, ದೇವರಿಗೆ ಆರತಿಯನ್ನು ಮಾಡಿ , ಹೂ,ವೀಳ್ಯ ಹಣ್ಣುಗಳನ್ನು ದಕ್ಷಿಣೆ ಸಮೇತ ಕೊಟ್ಟು, ನಮಸ್ಕರಿಸಿ ಊಟ ಹಾಕಿ ಬೀಳ್ಕೊಡುವುದು.
ಅಪ್ಪನ ಶ್ರಾದ್ದದ ದಿನದಂದು, ನಮ್ಮಪ್ಪನಿಗೆ ಪ್ರಿಯವಾದ ನಮ್ಮ ಮನೆ ದೇವರು ಈಶ್ವರನಿಗೆ ರುದ್ರಾಭಿಷೇಕ ಮಾಡಿ, ರುದ್ರ ಹೇಳಲು ಬಂದ ಬ್ರಾಹ್ಮಣರಿಗೆ ತಾಂಬೂಲ ದಕ್ಷಿಣೆಯನ್ನು ಕೊಟ್ಟು, ಊಟ ಹಾಕಿ ಬೀಳ್ಕೊಡುವುದು.
ಎರಡೂ ಸಂದರ್ಭದಲ್ಲಿ ಊಟದ ನಂತರ ಹರಟೆಗೆ ಕೂತಾಗ ಮಕ್ಕಳು ಮೊಮ್ಮಕ್ಕಳು ಅಳಿಯಂದಿರು ಸೊಸೆಯರು ಎಲ್ಲರೂ ನಮ್ಮಪ್ಪ ಅಮ್ಮನ ಜೊತೆ ಕಳೆದ ಹಿಂದಿನ ದಿನಗಳನ್ನು ನೆನೆದು ಸಂತೋಷ ಪಡುವುದೂ ಕಾರ್ಯಕ್ರಮದ ಭಾಗವೇ.
ಇದು ನಾವು ಆಯ್ಕೆ ಮಾಡಿಕೊಂಡ ಶ್ರಾಧ್ದದ ವಿಧಾನ. ನಮ್ಮ ಆಯ್ಕೆಯನ್ನು ಮೆಚ್ಚಿದವರು ಕೆಲವರುಂಟು. ಹೀಯಾಳಿಸಿದವರೂ ಇರಬಹುದು, ಸುದೈವ ನಮ್ಮ ಮುಂದೆ ಯಾರು ಹೇಳಿಲ್ಲ.
ಇನ್ನು ಪಿತೃ ಕಾರ್ಯಗಳಿಗಲ್ಲದೆ, ಬೇರೆಯ ಕಾರಣಕ್ಕೆ ಮಾಡುವ ಶ್ರಾಧ್ದಗಳೂ ಉಂಟು.
ವ್ಯಕ್ತಿ ತನಗೆ ತಾನೇ ಮಾಡಿಕೊಳ್ಳುವುದು ಘಟಶ್ರಾಧ್ಧ.
ಆತ್ಮಹತ್ಯೆ, ಅಪಘಾತದಂತಹ ದುರ್ಮರಣ ಹೊಂದಿದವರಿಗೆ ಮಾಡುವ ಶ್ರಾಧ್ದ.. ನಾರಾಯಣ ಬಲಿ.
ನಮ್ಮ ಭಾಗಕ್ಕೆ ಸತ್ತಂತೆ ಎಂದು ನಂಬಿ, ಬದುಕಿದ್ದವರ ಸಂಬಂಧವನ್ನು ತೊರೆದುಕೊಳ್ಳುವ ಉದ್ದೇಶದಿಂದ ಮಾಡುವುದು ಜೀವಂತ ಶ್ರಾದ್ಧ. ಸಾಮಾನ್ಯವಾಗಿ ಇಂತಹದು, ಮನೆತನದ ಅಭಿಪ್ರಾಯವನ್ನು ಮೀರಿ, ಮದುವೆಯಾದ ಹೆಣ್ಣು ಮಕ್ಕಳು ನಮ್ಮ ಭಾಗಕ್ಕೆ ಸತ್ತರು ಎಂದು ಕೋಪ ಹತಾಶೆ ನಿರಾಶೆಯಿಂದ ಮಾಡಿದಂತಹ ಶ್ರಾಧ್ದ. ಇದನ್ನು ನಾನು ಕಂಡಿಲ್ಲ ಆದರೆ ಕೇಳಿದ್ದೇನೆ. ಈಗಿನ ಕಾಲದಲ್ಲಿ ಸಂಬಂಧ ತೊರೆದುಕೊಳ್ಳಲು ದೂರವಾದರೆ ಸಾಕು, ಶ್ರಾದ್ಧ ಮಾಡುವ ಅವಶ್ಯಕತೆಯೇ ಇಲ್ಲ.
ಮದುವೆ, ಮುಂಜಿ ಮುಂತಾದ ಕಾರ್ಯಕ್ರಮಗಳನ್ನು ಮಾಡುವಾಗ, ನಾಂದಿ ಎಂಬುವ ಒಂದು ಕಾರ್ಯಕ್ರಮವಿದೆ, ಅಲ್ಲೂ ಸಹ ಮನೆಯ ಪೂರ್ವಜರನ್ನು ಪೂಜಿಸಿ, ಕಲಾಪಗಳು ಸುಲಭವಾಗಿ ನಡೆಯಲಿ ಎಂದು ಬೇಡಿಕೊಳ್ಳುವ ಸಂಪ್ರದಾಯ.
ಕೊನೆಯದಾಗಿ, ಶ್ರಾಧ್ದ ಯಾವ ರೀತಿ ಮಾಡಿದರೂ, ಎಷ್ಟೇ ವಿಜೃಂಭಣೆಯಿಂದ ಮಾಡಿದರೂ, ಅಪ್ಪ ಅಮ್ಮ ಬದುಕಿದ್ದಾಗ ಅವರನ್ನು ಸಂತೋಷದಿಂದ, ಪ್ರೀತಿಯಿಂದ ನೋಡಿಕೊಳ್ಳದ ಮಕ್ಕಳು, ಮಾಡುವ ಶ್ರಾಧ್ದ ವ್ಯರ್ಥವೇ ಸರಿ. ಇದ್ದಾಗ ಅವರಿಗೆ ಯಾವುದೇ ಐಭೋಗಗಳನ್ನು ಕೊಡದಿದ್ದರೂ, ನಮ್ಮದೇ ಇತಿಮಿತಿಗಳಲ್ಲಿ, ಅವರೊಂದಿಗೆ ಒಡನಾಡುತ್ತಾ ಸಂತೋಷ ಕೊಟ್ಟರೆ... ಅದನ್ನು ಶ್ರದ್ಧೆಯಿಂದ ಮಾಡಿದರೆ, ಅವರು ಸತ್ತ ನಂತರ ಶ್ರಾಧ್ದ ಮಾಡದಿದ್ದರೂ ಪಿತೃಗಳ ಋಣ ತಕ್ಕಮಟ್ಟಿಗೆ ಸಂದಾಯವಾಗುತ್ತದೆ ಎಂದೇ ನನ್ನ ನಂಬಿಕೆ.
ಮಕ್ಕಳು ಅವರದೇ ಆದ ಜೀವನ ಕಟ್ಟಿಕೊಳ್ಳಲು ದೂರದ ದೇಶಗಳಲ್ಲಿ ಇರುವ ಕಾರಣ, ವೈಯುಕ್ತಿಕ ಕಾರಣಗಳಿಂದ ಅಪ್ಪ ಅಮ್ಮನ ಜೊತೆಯಲ್ಲಿರದೆ ಬೇರೆ ಸಂಸಾರ ಮಾಡುತ್ತಿರುವ ಕಾರಣದಿಂದ ವೃದ್ಧಾಶ್ರಮಗಳು ಬೆಳೆಯುತ್ತಿವೆ, ವೃದ್ಧ ದಂಪತಿಗಳಿಬ್ಬರೇ ಜೀವನ ನಡೆಸುವ ಅನಿವಾರ್ಯ ಸ್ಥಿತಿ ಬಂದಿದೆ.
ಮಕ್ಕಳಾಗಿದ್ದಾಗ ನಮ್ಮನ್ನು, ಕಷ್ಟಪಟ್ಟು ಸಾಕಿದ ತಂದೆ ತಾಯಿಗಳಿಗೆ, ಅವರ ಮುಪ್ಪಿನ ಕಾಲದಲ್ಲಿ ಒಂದಷ್ಟು ಮನಸ್ಸಿನ ನೆಮ್ಮದಿಯನ್ನು ಕೊಡುವುದೇ ನಿಜಾರ್ಥದಲ್ಲಿ ನಾವು ಮಾಡಬೇಕಾದ ಶ್ರದ್ಧಾ ಕಾರ್ಯ. ಆ ಮನಸ್ಸು ಯುವ ಪೀಳಿಗೆಗೆ ಬರಲಿ ಎಂದು ಪ್ರಾರ್ಥಿಸುತ್ತಾ..
ನಮಸ್ಕಾರ...
ಡಿ ಸಿ ರಂಗನಾಥ ರಾವ್
9741128413





ಎಲ್ಲಕ್ಕಿಂತ ಈ ಬರಹದಲ್ಲಿ ನನಗೆ ಇಷ್ಟವಾದದ್ದು ಶ್ರದ್ದೆಯಿಂದ ಮಾಡುವುದೇ ಶ್ರಾದ್ಧ ಎನ್ನುವ ಸಾಲು, idu ಶ್ರಾದ್ಧಕ್ಕೆ ಮಾತ್ರವಲ್ಲ, ಎಲ್ಲಾದಕ್ಕೂ ಸಲ್ಲುವ ನುಡಿ,
ReplyDelete50-60 ರ ದಶಕದ ಪ್ರತಿ ಬ್ರಾಹ್ಮಣ ಕುಟುಂಬ ದ ಶ್ರದ್ಧಾ ಅಲಿಯಾಸ್ ತಿಥಿಯ ಚಿತ್ರಣವನ್ನು
ReplyDeleteಈ ಲೇಖನದ ಮೂಲಕ ಸೊಗಸಾಗಿ ವಿವರಿಸಿದ್ದೀರಿ... ನಿಮ್ಮ ಹೊಸ ರೀತಿಯ ಅಚರಣೆಗೆ ನನ್ನ ಸಂಪೂರ್ಣ ಸಹಮತವಿದೆ
ಮಾತಾ ಪಿತೃಗಳು ಸದಾ ತಮ್ಮ ಮಕ್ಕಳಿಗೆ ಒಳಿತನ್ನೇ ಬಯಸುವಾಗ ಮರಣದ ನಂತರ ಏಕೆ ಅಥವಾ ಹೇಗೆ ಕೋಪಗೊಳ್ಳುತಾರೆ (ಹಲವು ಸಂದರ್ಭಗಳಲ್ಲಿ ಜ್ಯೋತಿಷಿಗಳು ಪಿತೃ ದೋಷ ಎಂದು ಪರಿಹಾರ ಸೂಚಿಸುವುದುಂಟು) ಹಾಗಾಗಿ ನಮ್ಮ ಕೆಲವು ಆಚರಣೆಗಳಲ್ಲಿ ಇತೀಚೆಗೆ ಬದಲಾವಣೆ ಆಗುತಿರುವುದು ನಿಜ
ಬಾಬು
ಸರ್, ನಿಮ್ಮ ಬರಹದ ತಿರುಳಿಗೆ ನನ್ನ ಸಹಮತ ವಿದೆ. ನಾವು ಬದುಕಿವರೆಗೂ ಅಥವಾ ತಂದೆ ತಾಯಿ ಬದುಕಿದವರೆಗೂ ಅವರೊಂದಿಗೆ ಅರ್ಥಪೂರ್ಣ ವಾದ ಜೀವನ ನಡೆಸಿದರೆ ನಾವು ಅವರಿಗೆ ಕೊಡುವ ನೆಮ್ಮದಿ. ತಂದೆ ತಾಯಿ ಕಾಲವಾದ ನಂತರ ಮಾಡುವ ಕಾರ್ಯ /ಕರ್ಮಗಳು ಸ್ವಲ್ಪ ಅರ್ಥಹೀನ. ಆದರೂ ಮಾಡಬೇಕು ಸಮಾಜಕ್ಕೋಸ್ಕರ. ಮಂಜುನಾಥ್
ReplyDeleteShradde yinda maduvude nijavada shradda edu 💯..correct nicely written sir🙏🙏
ReplyDeleteಶ್ರದ್ಧೆಯಿಂದ ಮಾಡುವುದೇ ಶ್ರದ್ಧವೆಂಬುದೇನೋ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಶ್ರದ್ಧೆಗಿಂತ ಅನಿವಾರ್ಯವಾಗಿ ಮಾಡಬೇಕೆಂಬುದೇ ವಾಸ್ತವತೆಯಾಗಿದೆ.
ReplyDeleteಅವರವರ ಭಾವಕ್ಕೆ ಅವರವರ ಪದ್ಧತಿಗೆ ಅವರವರ ಅನುಕೂಲಕ್ಕೆ ತಕ್ಕಂತೆ ಆಚರಣೆ ಬದಲಾಗುತ್ತಿದೆ. ಕಾಲಾಯ ತಸ್ಮೈ ನಮಃ.
ಹಬ್ಬದ ಅಡಿಗೆಗಳನ್ನು ಆಗಾಗ ಮಾಡುತ್ತಿರುತ್ತೇವೆ. ಆದರೆ ತಿಥಿಯ ಅಡಿಗೆ ಅಪರೂಪವಾಗಿರುವುದರಿಂದ ಅದರಲ್ಲೇನೋ ಒಂದು ವಿಶೇಷ ಕಾಣುತ್ತದೆ ರುಚಿಯಾಗಿರುತ್ತದೆ.
ಹಿಂದಿನ ಪೀಳಿಗೆಯವರ ಸಮಸ್ಯೆ ಏನೇ ಇರಲಿ ನಮ್ಮನ್ನು ಸಾಕಿ ಸಲಹೆ ಬೆಳೆಸಿದ ಪಿತೃಗಳಿಗೆ ಒಂದು ದಿನ ಬಿಡು ಮಾಡಿಕೊಂಡು ಅವರ ನೆನಪು ಮಾಡಿಕೊಂಡು ಶ್ರದ್ಧಾ ಭಕ್ತಿ ತೋರಿಸುವುದು ನಮ್ಮ ಕರ್ತವ್ಯವಾಗಿರುತ್ತದೆ.
ಇದನ್ನು ಎಚ್ಚರಿಸಲು ನಮ್ಮ ಪೂರ್ವಜರು ಒಂದು ಉಪಾಯವನ್ನು ಮಾಡಿದ್ದಾರೆ ಅದೇನೆಂದರೆ ನೀವು ಶ್ರಾದ್ದ ಮಾಡಿದರೆ ನಿಮ್ಮ ಮಕ್ಕಳಿಗೆ ಶ್ರೇಷ್ಠ ಎಂಬುದು ಒಂದು ಕೊಕ್ಕಿ ಇಟ್ಟಿರುತ್ತಾರೆ. ಇದರಿಂದಲಾದರೂ ಶ್ರಾದ್ಮ ಮಾಡಲೆಂಬ ಮನೋಭಿಲಾಷೆ ಇರಬಹುದೇನೋ?
ಒಂದು ವಿಷಯವನ್ನು ತೆಗೆದುಕೊಂಡರೆ ಅದನ್ನು ಲೇಖಕರು ನಾನಾ ಆಯಾಮ ಮತ್ತು ಕೋನಗಳಿಂದ ಸ್ವಾರಸ್ಯಕರವಾಗಿ ಚಿತ್ರಿಸುವ ಕಲೆ, ನೈಪುಣ್ಯ ಬಹಳ ಮುಖ್ಯವಾಗುತ್ತದೆ..
ಇನ್ನು ಗಯಾ ಕಾಶಿ, ಮುಂತಾದ ಪುಣ್ಯಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಿ ಬಂದರು ಮನೆಯಲ್ಲಿ ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಜಿಜ್ಞಾಸೆ ಇದ್ದೇ ಇದೆ.
ಕೊನೆಹನಿ
ಹಬ್ಬಗಳನ್ನು ಆಚರಿಸುವಾಗ ನಾವು ಸ್ವಲ್ಪ ಮಡಿ ಆಚರಿಸುತ್ತೇವೆ. ಆದರೆ ಶ್ರಾದ್ಧ ಮಾಡುವಾಗ ಅತಿ ಹೆಚ್ಚಿನ ಬಡಿಗೆ ಆದ್ಯತೆ ನೀಡುತ್ತೇವೆ. ಇದೇ ನಾವು ಹಿರಿಯರಿಗೆ ನೀಡುವ ಪ್ರೀತಿ ಹಾಗೂ ಗೌರವ ಆಗಿರುತ್ತದೆ.