ಕನಕಾಭಿಷೇಕ - ಸಂಭ್ರಮ
ಮೊನ್ನೆ ಗುರುವಾರ, ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನವಿತ್ತು. ಅಪರೂಪದ ಕಾರ್ಯಕ್ರಮವಾದ್ದರಿಂದ, ನರಸಿಂಹರಾಜ ಕಾಲೋನಿಯ ರಾಮದೇವರ ದೇವಸ್ಥಾನದ ಕಡೆಗೆ ಹೊರಟೆ. ಅಲ್ಲಿ ಕಂಡದ್ದು ಸಡಗರ, ಸಂಭ್ರಮದ ವಾತಾವರಣ. ಒಂದು ಕಡೆ ಕಳಸಗಳ ಪೂಜೆ, ಇನ್ನೊಂದೆಡೆ ಹೋಮ ಹವನಗಳು, ಎಲ್ಲದರ ಮಧ್ಯೆ ಕಂಡದ್ದು ಕಾರ್ಯಕ್ರಮದ ಕೇಂದ್ರಬಿಂದು ಆ ಹಿರಿಯ ದಂಪತಿಗಳು( ಶ್ರೀಮತಿ ನಾಗಮ್ಮ ಹಾಗೂ ಶ್ರೀ ನಾಗರಾಜನ್)...
ಪಕ್ಕದಲ್ಲಿ ಚಿಕ್ಕಮ್ಮನ ಕಂಕುಳಲ್ಲಿ ಇದ್ದ ಈ ಕಾರ್ಯಕ್ರಮದ ಕಾರಣ ಪುರುಷ ನಾಲ್ಕನೇ ತಲೆಮಾರಿನ ಮಗು, ಶ್ರೀಪ್ರಮುಖ. ಅಂದು ಆ ಹಿರಿಯ ದಂಪತಿಗಳಿಗೆ 'ಕನಕಾಭಿಷೇಕ' ಕಾರ್ಯಕ್ರಮ.
ಕನಕಾಭಿಷೇಕ ನಡೆಯುವುದು ಒಂದು ಅಪರೂಪದ ಸಂದರ್ಭದಲ್ಲಿ. ಅದು ನಾಲ್ಕು ತಲೆಮಾರಿನಲ್ಲೂ ಮೊದಲ ಮಗು ಗಂಡಾದಾಗ...
ಇಲ್ಲಿನ ಉದಾಹರಣೆ ತೆಗೆದುಕೊಂಡರೆ- ನಾಗಮ್ಮ ಹಾಗೂ ನಾಗರಾಜ್ ದಂಪತಿಯ ಮೊದಲನೆಯ ಮಗ ರಘುರಾಮ್..
ರಘುರಾಮ್ ನಾಗಲಕ್ಷ್ಮಿ ದಂಪತಿಯ ಮೊದಲ ಮಗ ಶ್ರೀಹರ್ಷ..
ಶ್ರೀಹರ್ಷ ಹಾಗೂ ಯಶಸ್ವಿನಿಯ ಮೊದಲ ಮಗ ಶ್ರೀ ಪ್ರಮುಖ... ಹಾಗಾಗಿ ಹಿರಿಯ ದಂಪತಿಗಳಿಗೆ ಕನಕಾಭಿಷೇಕದ ಸಂಭ್ರಮ.
ಯಶಸ್ವಿನಿ ನನ್ನಕ್ಕನ ಮಗನ ಮಗಳು.
ಕನಕಾಭಿಷೇಕ ನಿಜ ಅರ್ಥದಲ್ಲಿ ಚಿನ್ನದ (ನಾಣ್ಯಗಳ) ಅಭಿಷೇಕ. ಹಿಂದೆ ಯಾರು ಮಾಡಿದ್ದರೋ ತಿಳಿಯದು. ವ್ಯಾವಹಾರಿಕವಾಗಿ ಯೋಚನೆ ಮಾಡಿದಾಗ ಚಿನ್ನದ ನಾಣ್ಯಗಳ ಅಭಿಷೇಕ ಸಾಧುವಲ್ಲ. ಸುರಿದ ಮೇಲೆ ಮತ್ತೆ ಮರಳಿ ಸಿಗುವುದು ಅನುಮಾನ, ಹಾಗಾಗಿ ಅಷ್ಟು ಬೆಲೆ ಬಾಳುವ ನಾಣ್ಯಗಳನ್ನು ಜಾಣ ಮನುಷ್ಯ ಸುರಿದು ಕಳೆದುಕೊಳ್ಳಲಾರ. ಅದಕ್ಕೆ ಪರ್ಯಾಯವಾಗಿ ನಾಣ್ಯಗಳನ್ನು ಜರಡಿಯಲ್ಲಿಟ್ಟು ಅದರ ಮೇಲೆ ಪೂಜೆ ಮಾಡಿದ ಕಳಸಗಳಿಂದ ನೀರನ್ನು ಹಾಕಿ ಅದು ಕನಕಾಭಿಷೇಕ ಎಂದು ಬದಲಾಯಿಸಿರಬೇಕು. ಕಾಲಕ್ರಮೇಣ ಚಿನ್ನದ ನಾಣ್ಯಗಳು ಇಲ್ಲವಾಗಿ, ಅದರ ಬದಲಾಗಿ ತಮ್ಮಲ್ಲಿದ್ದ ಚಿನ್ನದ ಒಡವೆಗಳನ್ನು ಇಟ್ಟು ನೀರಿನ ಅಭಿಷೇಕ ಮಾಡಿರಬೇಕು, ಅದೇ ಈಗಲೂ ಮುಂದುವರೆದಿದೆ.
ಕಾಲಕ್ಕೆ ತಕ್ಕಂತೆ, ನಮ್ಮ ಅನುಕೂಲಕ್ಕೆ ಸುಲಭವಾಗಿ ನಿಲುಕುವಂತೆ, ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದು ಜಗದ ನಿಯಮವೇ ಆಗಿದೆ. ಇದು ಯಾವುದಕ್ಕೂ ಹೊರತಲ್ಲ. ವ್ರತ ಪೂಜೆ ಮಾಡುವಾಗ, ದೇವರಿಗೆ ಆಭರಣ ಹಾಕುವ ಸಮಯದಲ್ಲಿ ಅದಿಲ್ಲದಿದ್ದರೆ, ಆಭರಣಾರ್ಥೇ ಅಕ್ಷತಾಂ ಸಮರ್ಪಯಾಮಿ... ಎಂದು ಹೇಳಿ, ಸುಲಭವಾಗಿ ಸಿಗುವ ಅಕ್ಕಿ ಕಾಳಿನಿಂದ ಮಾಡಿದ ಅಕ್ಷತೆಯನ್ನು ಹಾಕಿ ಅದೇ ಆಭರಣವೆಂದು ಅರ್ಪಿಸುವುದು. ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಯ್ಯ ಬಡವ.. ಎನ್ನ ಕಾಲೇ ಕಂಬ.... ದೇಹವೇ ದೇಗುಲ, ತಲೆಯೇ ಹೊನ್ನ ಕಲಶವಯ್ಯ ಎನ್ನುವ ಬಸವಣ್ಣನವರ ವಚನ ಸೂಕ್ತವೇನೋ?
ಕಾರ್ಯಕ್ರಮದ ಬಹು ಮುಖ್ಯ ಭಾಗ ಹಿರಿಯ ದಂಪತಿಗಳಿಗೆ ಮಾಡುವ ಮಾರ್ಜನ... ಅದು ಇಲ್ಲಿ ಕನಕಾಭಿಷೇಕ...
ಪೂಜೆ ಮಾಡಿದ ಕಳಸಗಳಿಂದ ನೀರನ್ನು ಜರಡಿಯಲ್ಲಿಟ್ಟ ಚಿನ್ನದಲ್ಲಿ ಮಾಡಿದ ಹೂಗಳ ಮೇಲೆ ಸುರಿದು ಅದನ್ನು ದಂಪತಿಗಳ ಮೇಲೆ ಬೀಳುವ ಹಾಗೆ ಮಾಡಿದ್ದು. ವಿಶೇಷ ಶುದ್ಧೀಕರಣ. ಇದನ್ನು ಬಂದ ಎಲ್ಲಾ ನೆಂಟರು, ಇಷ್ಟರು ಮಾಡಿದರೂ, ಮೊದಲು ಮಾಡುವುದು ನಾಲ್ಕನೇ ತಲೆಮಾರಿನ ಮಗು... ಅದಕ್ಕೇನೂ ತಿಳಿಯದಿದ್ದರೂ, ಸುತ್ತು ಮುತ್ತಿನ ಜನಕ್ಕೆ ಹಾಗೂ ಆ ಭಾಗ್ಯವನ್ನು ಪಡೆದ ಹಿರಿಯರಿಗೆ ಅವ್ಯಕ್ತ ಸಂತೋಷ. ತಣ್ಣೀರನ್ನು ಸಹಿಸಲಾಗದ ಕಾರಣ ಬಿಸಿ ನೀರು ಬೆರೆಸಿ ಉಪಯೋಗಿಸಿದರೂ ಸಹ... ತುಂಬ ಜನ ಹಾಕುವ ನೀರಿನಿಂದ, ವಯಸ್ಸಾದವರಿಗೆ ಸ್ವಲ್ಪ ಕಷ್ಟವಾದಂತೆ ಕಂಡರೂ, ಅದರಲ್ಲಿ ಧನ್ಯತೆ ಇತ್ತು.
ಹಿರಿಯ ಜೀವಗಳಿಗೆ ನಮಸ್ಕರಿಸಿ, ಮಗುವಿಗೆ ಮುದ್ದು ಮಾಡಿ... ಎಲ್ಲಾ ಕಾರ್ಯಕ್ರಮದ ಅಂತಿಮ ಹೆಜ್ಜೆಯಾದ ಊಟ.... ಭರ್ಜರಿ ಊಟವನ್ನು ಮುಗಿಸಿ ಹಿಂತಿರುಗಿದ್ದು.
ನನ್ನ ಜೀವನದಲ್ಲಿ ಇದು ನಾನು ಭಾಗವಹಿಸಿದ ಎರಡನೇ ಕಾರ್ಯಕ್ರಮ. ಮೊದಲನೆಯದು ನನ್ನ ಅಕ್ಕ ಗಿರಿಜಾಂಬ ಹಾಗೂ ಭಾವ ರಾಮರಾಯರ ಕನಕಾಭಿಷೇಕ. ಅದಕ್ಕೂ ಅದೃಷ್ಟವಿರಬೇಕು, ಕಾರ್ಯಕ್ರಮ ಮಾಡುವ ಮನಸ್ಸು ಕಿರಿಯ ಪೀಳಿಗೆಗೂ ಇರಬೇಕು. ಎಲ್ಲಾ ಕೂಡಿ ಬರುವುದೇ ಯೋಗಾ ಯೋಗ.
ನನ್ನಪ್ಪ ನೂರೆಂಟು ವರ್ಷದ ಹುಟ್ಟುಹಬ್ಬವನ್ನು ಕಂಡರೂ, ಕನಕಾಭಿಷೇಕದ ಭಾಗ್ಯ ಕೂಡಿ ಬರಲಿಲ್ಲ... ಕಾರಣ ನಾಲ್ಕು ತಲೆಮಾರಿನ ಗಂಡು ಮಕ್ಕಳ ನಿಬಂಧನೆ.
ಕುವರನಾದರೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂದೇನು?
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು....
ಹದಿಬದೆಯ ಧರ್ಮದ ಈ ಸಾಲುಗಳನ್ನು ನೆನೆದಾಗ ನನಗನ್ನಿಸುವುದು ಗಂಡಿಗೇಕೆ ಇಷ್ಟು ಪ್ರಾಶಸ್ತ್ಯ? ಹೆಣ್ಣಿಲ್ಲದೆ ಗಂಡಿಗೆ ಈ ಪ್ರಕೃತಿಯಲ್ಲಿ ಸ್ಥಾನವೆಲ್ಲಿದೆ? ಪ್ರಾಯಶಃ ಹೆಣ್ಣು ಬೇರೆಯ ಮನೆಗೆ ಹೋಗುವ ಕಾರಣದಿಂದ ನಮ್ಮದಲ್ಲವೆಂಬ ಭಾವನೆಯೇ ? ಅದೇ , ಬೇರೆಯ ಮನೆಯಂದ ಬಂದ ಹೆಣ್ಣು ನಮ್ಮಲ್ಲಿ ಅಗ್ರಸ್ಥಾನ ಪಡೆಯುತ್ತಾಳಲ್ಲ. ಸೊಸೆ ನಮ್ಮನೆಯ ಭಾಗವಾಗುತ್ತಾಳಲ್ಲ. ಜೀವನದ ಎಲ್ಲ ಸಂಭ್ರಮಗಳಿಗೂ ಕಾರಣಳಾಗುತ್ತಾಳೆ, ಜೊತೆ ಗೂಡುತ್ತಾಳೆ.
ಒಂದಲ್ಲ ಒಂದು ಕಾರಣಕ್ಕೆ ಸಂಭ್ರಮಿಸುವುದು ಮನುಷ್ಯನ ಸಹಜ ಸ್ವಭಾವ, ಅದು ಜೀವಿಸಲು ಸ್ಪೂರ್ತಿದಾಯಕ.
ಮೊದಲ ಹನಿ ಮಳೆ ಬಿದ್ದಾಗ ರೈತನಿಗೆ ಉತ್ತು ಬಿತ್ತುವ ಸಂಭ್ರಮ, ಬಿತ್ತಿದ ಬೀಜ ಮೊಳಕೆ ಕಟ್ಟಿದಾಗ ಅದೊಂದು ಸಂಭ್ರಮ, ಅದು ಬೆಳೆದು ಫಲ ಕೊಟ್ಟಾಗ ಕಣದಲ್ಲಿ ರಾಶಿ ಹಾಕಿ ಪೂಜೆ ಮಾಡುವ ಸಂಭ್ರಮ... ಇದನ್ನೆಲ್ಲಾ ನಾನು ನನ್ನ ಹಳ್ಳಿಯ ಜೀವನದಲ್ಲಿ ಕಣ್ಣಾರೆ ಕಂಡಿದ್ದೇನೆ. ಮದುವೆಯ ಸಂಭ್ರಮ, ಮಗುವಾದಾಗ ಅಪ್ಪ ಅಮ್ಮನಿಗೆ ಸಂಭ್ರಮ, ಅಜ್ಜಿತಾತ ಆದವರಿಗೆ ಇನ್ನೂ ಹೆಚ್ಚಿನ ಸಂಭ್ರಮ. ಇನ್ನು ಮುತ್ತಜ್ಜಿ ಮುತ್ತಾತ ಆದವರ ಸಂಭ್ರಮವಂತೂ ಹೇಳತೀರದು. ಹಬ್ಬದ ದಿನಗಳಂದು ಅದರದೇ ಸಂಭ್ರಮ. ಇವೆಲ್ಲಾ ಸಾಮಾನ್ಯ ಜೀವನದ ಭಾಗವಾಗಿದ್ದದ್ದು.
ಐದಾರು ದಶಕಗಳ ಹಿಂದಿನ ಮಾತು... ಮನುಷ್ಯನ ಜೀವಿತಾವಧಿ ಕಡಿಮೆ ಇತ್ತು. ಈಚೆಗೆ ದೀರ್ಘಾಯುಷಿಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. 60 ವರ್ಷಕ್ಕೆ ವಾನ ಪ್ರಸ್ತಾಶ್ರಮ... ಬದುಕಿದ್ದ ಕೆಲವರಿಗೆ ಷಷ್ಟಿ ಪೂರ್ತಿ ಸಂಭ್ರಮ. ಕಾಶಿಗೆ ತೀರ್ಥಯಾತ್ರೆ ಹೋಗುವವರ ಸಂಖ್ಯೆಯೇ ಕಡಿಮೆ, ಹೋದರೂ ಮರಳಿ ಬರುವುದೇ ಒಂದು ಪುಣ್ಯ... ಹಾಗಾಗಿ ಮರಳಿ ಬಂದ ಬಳಿಕ ಕಾಶಿ ಸಮಾರಾಧನೆ ಮಾಡುವ ಸಂಭ್ರಮ. ಈಗಂತೂ ಕಾಶಿ, ಅಯೋಧ್ಯೆ, ಪ್ರಯಾಗರಾಜ್, ಗಯಾ ಎಲ್ಲವನ್ನೂ ಆರಾಮವಾಗಿ ಒಂದು ವಾರದಲ್ಲಿ ನೋಡಿ ಬರಬಹುದು.
70 ವರ್ಷ ದಾಟಿದಾಗಲೂ ಕೆಲ ಮಕ್ಕಳು ತಮ್ಮ ಹಿರಿಯರನ್ನು ಗೌರವಿಸುವ ಮೂಲಕ ಸಂಭ್ರಮಿಸುತ್ತಾರೆ.
81 ವರ್ಷ ದಾಟಿದ ನಂತರ...' ಸಹಸ್ತ್ರ ಚಂದ್ರ ದರ್ಶನ ಶಾಂತಿ' ಎನ್ನುವ ಒಂದು ಕಾರ್ಯಕ್ರಮದ ಸಂಭ್ರಮ.
ನೂರು ವರ್ಷ ದಾಟಿದರಂತೂ ಸರಿಯೇ ಸರಿ ಶತಮಾನೋತ್ಸವದ ಸಂಭ್ರಮ.
ಮೇಲ್ಕಂಡ ನಾಲ್ಕೂ ಕಾರ್ಯಕ್ರಮಗಳಲ್ಲಿ, ಮಾರ್ಜನ ಎಂಬ ಚಿನ್ನದ ಮೇಲಿನ ನೀರಿನ ಅಭಿಷೇಕ ಮಾಡಿದರೂ, ಅದು ಕನಕಾಭಿಷೇಕ ಎಂದೆನಿಸುವುದಿಲ್ಲ.
ನಾನು ನೋಡಿದ ಸರ್. ಎಂ ವಿಶ್ವೇಶ್ವರಯ್ಯ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳು, ವೇದ ಪಾರಂಗತ ಸುಧಾಕರ ಚತುರ್ವೇದಿಯವರು, ಕನ್ನಡ ನಿಘಂಟು ತಜ್ಞ ಜಿ ವೆಂಕಟಸುಬ್ಬಯ್ಯನವರು ಇವರೆಲ್ಲ ಶತಾಯುಷಿಗಳು. ಕನ್ನಡ ನಾಡಿನ ಬಹುತೇಕ ಜನರು ಈ ಶತಾಯುಷಿಗಳ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಸತ್ಯ.
ಈಚೆಗೆ ಸಂಭ್ರಮಿಸಲು, ಪಾಶ್ಚಿಮಾತ್ಯರ ಸಂಸ್ಕೃತಿಯ ಪ್ರಭಾವದಿಂದ ಬೇರೆ ಬೇರೆ ಕಾರಣಗಳನ್ನು ಹುಡುಕಿಕೊಂಡು, ಅದೇ ರೀತಿ ಅನುಕರಣೆ ಮಾಡಿ ಸಂಭ್ರಮಿಸುವ ಪರಿಪಾಠ ಬೆಳೆದಿದೆ. ಅದು ನಮ್ಮ ಸಂಸ್ಕೃತಿಯ ಹೊರತಾಗಿಯೂ, ನಮ್ಮೆಲ್ಲರ ಮೇಲೆ ಅಧಿಕ ಪ್ರಭಾವ ಬೀರಿದೆ ಎಂದೇ ನನ್ನ ಅನಿಸಿಕೆ.
ಹೊಸ ವಿಷಯಗಳನ್ನು ಬೇರೆಯವರಿಂದ ತಿಳಿಯಲು, ಅವರ ಅನುಕರಣೆ ಸಹಜವಾದರೂ, ಅದನ್ನೇ ವೈಭವೀಕರಿಸಿ( ವ್ಯಾಪಾರಿಕರಣದ ಉದ್ದೇಶದಿಂದ) ಅಂಧಾನುಕರಣೆ ಮಾಡುವುದು ಸಾಧುವಲ್ಲ ಎಂದೇ ನನ್ನ ಸ್ಪಷ್ಟ ಅನಿಸಿಕೆ. ಅದು ಅವರವರ ಮನಸ್ಥಿತಿಗೆ ಬಿಟ್ಟ ವಿಚಾರ.
ಜೀವನದ ಪಯಣದ ಹಾದಿಯಲ್ಲಿ ಕಷ್ಟ ಸುಖಗಳು, ದುಃಖ ದುಮ್ಮಾನಗಳು ಇರುವುದಾದರೂ...ಇದೆಲ್ಲದರ ಮಧ್ಯೆ ಸಿಗುವ ಸಣ್ಣ ಸಣ್ಣ ಸಂತಸದ ಕ್ಷಣಗಳನ್ನು ಸಂಭ್ರಮಿಸಲು ನಮಗೆ ಮನಸ್ಸಾದರೆ ಜೀವನದ ಸುಂದರ ಕ್ಷಣಗಳು ತಾನೇ ತಾನಾಗಿ ವೃದ್ಧಿಯಾಗುತ್ತವೆ.
ಪಿ.ಕಾಳಿಂಗರಾಯರು ಸುಶ್ರಾವ್ಯವಾಗಿ ಹಾಡಿದ ಗೀತೆ ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ಎನ್ನುವ ಗೋಪಾಲಕೃಷ್ಣ ಅಡಿಗರು ಬರೆದ ಕವನದ ಸಾಲು, ನಮಗೆ ಜೀವನದ ಕ್ಷಣಗಳನ್ನು ಸಂಭ್ರಮಿಸಲು ದಾರಿದೀಪವಾಗಲಿ ಎಂದು ಆಶಿಸುತ್ತಾ...
ನಮಸ್ಕಾರ.
ಡಿ ಸಿ ರಂಗನಾಥ ರಾವ್
9741128413




ಜೀವನದ ಪಯಣದ ಹಾದಿಯಲ್ಲಿ ಕಷ್ಟ ಸುಖಗಳು, ದುಃಖ ದುಮ್ಮಾನಗಳು ಇರುವುದಾದರೂ...ಇದೆಲ್ಲದರ ಮಧ್ಯೆ ಸಿಗುವ ಸಣ್ಣ ಸಣ್ಣ ಸಂತಸದ ಕ್ಷಣಗಳನ್ನು ಸಂಭ್ರಮಿಸಲು ನಮಗೆ ಮನಸ್ಸಾದರೆ ಜೀವನದ ಸುಂದರ ಕ್ಷಣಗಳು ತಾನೇ ತಾನಾಗಿ ವೃದ್ಧಿಯಾಗುತ್ತವೆ. ನೀವು ಬರೆದ ಈ ಸಾಲುಗಳು ಮನಸ್ಸಿಗೆ ಹಿತವಾಯಿತು.
ReplyDeleteಆ ಹಿರಿಯ ಮನಸುಗಳಿಗೆ ಸಾಕಷ್ಟು ಸಂತೋಷವಾಗಿರಬಹುದು.
ನನ್ನ ಅಭಿಪ್ರಾಯ ಜೀವನದ ಈ ಸಣ್ಣ ಸಣ್ಣ ಸಂತೋಷ ದೊಂದಿಗೆ ನಮ್ಮ ವಯಸ್ಸು ಸಹಾ ಮರೆತು ಹೋಗುತ್ತದೆ.
👌👌
ReplyDeleteಡಿಸಿರ್ ಸರ್, ಕನಕಾಭಿಷೇಕ ಬಗ್ಗೆ ಬರೆದಂತ ನಿಮ್ಮ ಬರಹ ತುಂಬಾ ಅದ್ಭುತವಾಗಿದೆ. ನಿಮ್ಮ ಲೇಖನ ಓದಿದಾಗ ನನ್ನ ಎಲ್ಲಾ ಹಳೆಯ ಸವಿ ನೆನಪುಗಳು ಜ್ಞಾಪಕ ಬಂತು. ನಮ್ಮ ಅಣ್ಣನ ಮೊದಲ ಮೊಮ್ಮಗ ಅದಿತ್ ಹುಟ್ಟಿದಾಗ ನಮ್ಮ ತಂದೆಯವರಿಗೆ ಕನಕಾಭಿಷೇಕ ನಡೆಯಿತು. ಹಾಗೆ ನಮ್ಮ ಅಜ್ಜಿ ಮೈಸೂರಮ್ಮ ನವರಿಗೆ ಮರಿಮಗ ಅಲೋಕ ಹುಟ್ಟಿದಾಗ ಕನಕಾಭಿಷೇಕ ನಡೆಸಿಕೊಳ್ಳುವ ಯೋಗ ಬಂದಿತ್ತು. ನಮಗೆ ಈ ಯೋಗ ಬರೆದೆ ಇದ್ದರು, ನಮ್ಮ ಮನೆಯಲ್ಲಿ ನಡೆದಂತ ಎರಡು ಕನಕಾಭಿಷೇಕ ನೋಡುವ ಯೋಗ ದೇವರಿಂದ . ನಿಮ್ಮ ಈ ಲೇಖನ ದಿಂದ ಹಳೆಯ ಸವಿ ನೆನಪುಗಳು ಮರುಕಲಿಸಿದುವು. ಧನ್ಯವಾದಗಳು. 🙏🙏
ReplyDeleteThumba channagide nimma baraha ☺️ bahala kushi aythu
ReplyDeleteHello sir this is SRIHARSHA thanks for your blog 😊
ReplyDeleteಅಲ್ಪಾಯುಗಳಾಗಿ ಮರಣಹೊಂದುತ್ತಿರುವ ಈ ವಿಷಮ ಸಮಯದಲ್ಲಿ ಶತಾಯುಷಿಗಳಾಗಿ ಸಂಭ್ರಮ ಪಡುತ್ತಿರುವುದು ಸಂತಸದ ವಿಷಯ. ಮನುಷ್ಯನಿಗೆ ಆಯಸ್ಸು ಆರೋಗ್ಯ ಹೇಗೆ ಕಾಪಾಡಿಕೊಳ್ಳುವುದೆಂದ ಲೇಖನವನ್ನು ದಯವಿಟ್ಟು ಮಾಡಿ
ReplyDeleteನಮ್ಮ ತಾತನ ಕನಕಾಭಿಷೇಕ ನೆನಪಿಗೆ ಬಂತು.
ReplyDeleteಕನಕಾಭಿಷೇಕ ಒಂದು ಸುಂದರ ಪರಿಕಲ್ಪನೆ ಹಿಂದಿನ ಕಾಲದಲ್ಲಿ ಬೇಗ ಮದುವೆ ಮಾಡುತ್ತಿದ್ದು ದಂಪತಿಗಳಿಗೆ ಸುಮಾರು ಎಪ್ಪತ್ತು
ReplyDeleteವರ್ಷಗಳಾಗುವಷ್ಟರಲ್ಲಿ ಕನಕಾಭಿಷೇಕ ಮಾಡಬಹುದಾಗಿತ್ತು ಎಲ್ಲದ್ದಕ್ಕೂ ಯೋಗ ಇರಬೇಕೆನ್ನುವ ನಿಮ್ಮ ಮಾತು ನೂರರಷ್ಟು ಸತ್ಯ
ಇಂದಿನ ದಿನಗಳಲ್ಲಿ ಬಹಳಷ್ಟು ವರ್ಷ ಬದುಕುವುದೇ ಒಂದು ದೊಡ್ಡ ಸಾಧನೆ, ಅದರಲ್ಲೂ ಆರೋಗ್ಯವಿದ್ದರಂತೂ ಜೀವನ ಮತ್ತಷ್ಟು ಸುಖಮಯ.
ReplyDeleteಹೀಗಿರುವ ಸಂಪ್ರದಾಯದಂತೆ ನಾಲ್ಕನೇ ತಲೆಮಾರು ಗಂಡು ಮಕ್ಕಳೇ ಆಗಬೇಕೆಂಬು ದನ್ನು ತಿದ್ದಿಕೊಂಡು ಗಂಡು ಅಥವಾ ಹೆಣ್ಣು ಯಾವುದಾದರೂ ಸರಿ ಎಂದು ಮಾರ್ಪಾಡು ಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ.
ವ್ಯಕ್ತಿಗೇನು 60, 70, 80 ವಯಸ್ಸು ಆಗಬಹುದು ಆದರೆ ಅವರನ್ನು ಪ್ರೀತಿ ವಾತ್ಸಲ್ಯಗಳಿಂದ ಕಾಣುವ ಮಕ್ಕಳು ಇರುವುದು ಇತ್ತೀಚಿನ ದಿನಗಳಲ್ಲಿ ಬಹಳ ವಿರಳ. ಆಗೊಮ್ಮೆ ಇದ್ದರೂ ತಂದೆ ತಾಯಿಗಳಿಗೆ ಸಹಸ್ರಚಂದ್ರ ದರ್ಶನ ಅಥವಾ
60 ವರ್ಷದ ಶಾಂತಿಯನ್ನು ಮಾಡಲು ಮಕ್ಕಳಿಗೆ ಆಸಕ್ತಿ ಹಾಗೂ ಸಮಯದ ಕೊರತೆ ಇದ್ದೇ ಇರುತ್ತದೆ.
ಮುಗಿಸುವ ಮುನ್ನ
ಈ ಕಾರ್ಯಕ್ರಮದಿಂದ ಮಕ್ಕಳಿಗೆ ಅವರವರ ತಂದೆ ತಾಯಿಗಳ ಮದುವೆಯನ್ನು ನೋಡುವ ಒಂದು ಸುಂದರ ಅವಕಾಶ ಏರ್ಪಡುವುದಂತೂ ಸತ್ಯ.
ಗುರು ಪ್ರಸನ್ನ
ಚಿಂತಾಮಣಿ
ಕನಕಾಭಿಷೇಕದ ಬರವಣಿಗೆ ಚೆನ್ನಾಗಿದೆ, ಹಿರಿಯರು ಆರೋಗ್ಯವಂತರಾಗಿ, ದಂಪತಿಗಳು ಅಲಂಕರಿಸಿದ ಮದುವೆಯ ಸಂಭ್ರಮ ಆಕರ್ಷಕವಾಗಿದ್ದು, ತನು ಮನ ತುಂಬಿ ಬರುತ್ತದೆ. ಅದೃಷ್ಟವಂತರಿಗೆ ಭಗವಂತನು ಈ ಅವಕಾಶ ಕೊಟ್ಟಿರುತ್ತಾನೆ.
ReplyDeleteಧನ್ಯವಾದಗಳು🙏
ರತ್ನಪ್ರಭಾ