Walking - ನಡೆದಾಟ




ವಾಕಿಂಗ್ ಎಂದರೆ.. ಈಗ ಅರ್ಥ ಮಾಡಿಕೊಳ್ಳುವುದು... ಬೆಳಿಗ್ಗೆ ಅಥವಾ ಸಂಜೆ ಯಾವುದಾದರೂ ಉದ್ಯಾನವನದಲ್ಲೋ... ಜನ ಸಂದಣಿ ಇಲ್ಲದ ರಸ್ತೆಯಲ್ಲೋ... ಸ್ವಚ್ಛ ಗಾಳಿಯನ್ನು ಕುಡಿದು ನಡೆದಾಡುವ ಕ್ರಿಯೆ ಎಂದು. ಅಷ್ಟರಮಟ್ಟಿಗೆ ಅದು ಕನ್ನಡದ ಪದವಾಗಿ ಬಳಕೆಯಲ್ಲಿದೆ.

2004 ರಿಂದ ಕರೋನಾ ಮಾರಿ ಬಂದು ಕಾಡುವ ತನಕ ನಿರಂತರವಾಗಿ ನಾನು ಹರಿಹರ ಗುಡ್ಡಕ್ಕೆ ವಾಕಿಂಗ್ (ವಾಕಿಂಗ್ ಗೂ ಮಿಕ್ಕಿ talking ಇರುತ್ತಿತ್ತು) ಹೋಗುತ್ತಿದ್ದೆ. ಕರೋನಾ ನನ್ನನ್ನು ಮನೆಯಲ್ಲಿ ಹಿಡಿದಿಟ್ಟಿತ್ತು,  ಹಾಗಾಗಿ ಮನೆಯಲ್ಲಿ ವಾಕಿಂಗ್.... ನಂತರದಲ್ಲಿ ಹರಿಹರ ಗುಡ್ಡಕ್ಕೆ ವಾಕಿಂಗ್ ಶುರುವಾದರೂ... ನಿಯಮಿತವಾಗಿ ಹೋಗುತ್ತಿಲ್ಲ.. ಈಗ ಮನೆಯ ಹತ್ತಿರದ ಉದ್ಯಾನವನದಲ್ಲಿ ವಾಕಿಂಗ್ ಮಾಡುತ್ತೇನೆ.

ಈಗೀಗ ವಾಕಿಂಗ್ ಮಾಡುವ ಜನ ಜಾಸ್ತಿಯಾಗುತ್ತಿದ್ದಾರೆ.... ಕೆಲವರು ಕಾಲ ಕಳೆಯಲು, ಕೆಲವರು ಆರೋಗ್ಯದ ದೃಷ್ಟಿಯಿಂದ, ಯುವಕ ಯುವತಿಯರು ತಮ್ಮ ದೇಹದ fitness ಗಾಗಿ, ಇನ್ನೂ ಕೆಲ ಅಗೋಚರ ಕಾರಣಗಳಿಗಾಗಿಯೂ ಇರಬಹುದು.

ಲೋಕಾರೂಢಿಯಾಗಿ ಮಾತಾಡ್ತಾ... ಯಾವಾಗ ವಾಕಿಂಗ್ ಶುರು ಮಾಡಿದ್ದು ಅಂದಾಗ......" ಸುಮಾರು ನನಗೆ ಒಂದು ವರ್ಷವಾದಾಗಲಿಂದ ವಾಕಿಂಗ್ ಮಾಡುತ್ತಿದ್ದೇನೆ" ಎಂಬ ತಲೆಹರಟೆ / ತಮಾಷೆ ಉತ್ತರ ಕೊಟ್ಟಿದ್ದೇನೆ... ಹೌದಲ್ವಾ walking ನ ನಿಜಾರ್ಥದಲ್ಲಿ ಅದುವೇ ಸರಿ... 



ಮಗುವಿನ ಮೊದಲ ಹೆಜ್ಜೆಯನ್ನು ಇಟ್ಟ ಕ್ಷಣ... ಅಪ್ಪ ಅಮ್ಮನಿಗೆ ಸಂಭ್ರಮ.. ಮಗುವನ್ನು ಅಪ್ಪಿ ಮುದ್ದಾಡುವುದು ಆ ಕ್ಷಣದ ಸೊಗಸು. ಮಗು ಒಂದು ವರ್ಷವಾದರೂ ನಡೆದಾಡುವ ಲಕ್ಷಣಗಳು ಕಾಣದಿದ್ದರೆ... ಅಪ್ಪ ಅಮ್ಮನಿಗೆ ಮಗುವಿನ ಬೆಳವಣಿಗೆಯ ಬಗ್ಗೆ ಚಿಂತೆ... ಆತಂಕ... ಡಾಕ್ಟರ್ ಬಳಿಗೆ ಓಟ. ನಡೆದಾಟಕ್ಕೆ ಅಷ್ಟು ಪ್ರಾಮುಖ್ಯತೆ.

ಬಾಲ್ಯದಲ್ಲಿ ನಮಗೆ ನಡೆಯುವುದು ಒಂದು ಸಾಮಾನ್ಯ ಸಂಗತಿ... ಈಗಿನ ವಾಕಿಂಗ್ ನಂತಲ್ಲ. ಶಾಲೆಗೆ ಹೋಗಲು, ಸೂರ್ಯ ಹುಟ್ಟುವ ಮುನ್ನ ಹೊರಟು ಹೊಲದಿಂದ ಅವರೆಕಾಯಿ ಕಿತ್ತು ತರಲು , ಕಾಡಿಗೆ ಹೋಗಿ ಸೌದೆ ತರಲು ಎಲ್ಲಕ್ಕೂ ನಡೆದಾಟವೇ.. ಅದು ಜೀವನಶೈಲಿ.  3 - 4 ಮೈಲಿ ಹೋಗಿಬರುವುದು ಆಟದಂತೆ. ಅಂಗಡಿಗೆ ಹೋಗಲು.. ಸೋಮಾರಿತನ ಪಟ್ಟರೆ.. ಯಾರಾದರೂ ಉಬ್ಬಿಸಿ.. ಗಾಡಿ ಬಿಟ್ಕೊಂಡು ಬೇಗ ಹೋಗಿ ಬಾ ಅಂತ ಹೇಳಿದ ಕ್ಷಣ ... ಆಗ ಕಂಡಿದ್ದ ಲಾರಿ ಅಥವಾ ಬಸ್... ನಲ್ಲಿ ಹೋದಂತೆ... steering ಮೇಲೆ ಕೈಯಿಟ್ಟು ಆಡಿಸಿ ಮಧ್ಯೆ ಪೊಂ ಪೋಂ, ಎಂದು ಶಬ್ದ ಮಾಡುತ್ತಾ ಓಡಿಹೋಗಿ ಬರುವುದೇ ಒಂದು ಮಜಾ.

ನಮ್ಮೂರ ಪಕ್ಕ ಶೆಟ್ಟಿಗೆರೆ ಎಂಬ ಊರಿನಲ್ಲಿ ಹನುಮಂತರಾಯರು ನಡೆಸುತ್ತಿದ್ದ ಬೆಳಕು ರಾತ್ರಿ ಶಾಲೆಯ ಲೈಬ್ರರಿಯಿಂದ ಪುಸ್ತಕ ತರಲು ನಡೆದೇ ಹೋಗಬೇಕಿತ್ತು... ಆದರೆ ಪುಸ್ತಕಗಳನ್ನು ಓದಿದಾಗ ಸಿಗುತ್ತಿದ್ದ ಸಂತೋಷ ಹೇಳತಿರದು.

ಹನುಮಂತರಾಯರ ಮಗ SH ಸುಬ್ಬರಾವ್ ನಮಗೆ ಮೇಷ್ಟ್ರು. ಅವರು ಶೆಟ್ಟಿಗೆರೆಯಿಂದ ನಮ್ಮೂರ ಮಾರ್ಗವಾಗಿ ವಿದ್ಯಾನಗರಕ್ಕೆ ಹೋಗಬೇಕು.. ಹಾಗಾಗಿ ನಾವು ಅವರಿಗಾಗಿ ಕಾದು ಅವರ ಜೊತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುವಾಗ  ಪಡುತ್ತಿದ್ದದ್ದು ಹೆಮ್ಮೆ. 

ಬೆಂಗಳೂರಿಗೆ ಬಂದಮೇಲೂ.. ಗವಿಪುರದಿಂದ.. ರಾಷ್ಟ್ರೀಯ ವಿದ್ಯಾಲಯಕ್ಕೆ, ನ್ಯಾಷನಲ್ ಕಾಲೇಜಿಗೆ ನಡೆಯುವುದು ಸಾಮಾನ್ಯ ಸಂಗತಿ. ಹನುಮಂತನಗರದಿಂದ.. ಕೆಆರ್ ಸರ್ಕಲ್ ನ ಎಸ್ ಜೆ ಪಾಲಿಟೆಕ್ನಿಕ್ ಗೆ ನಡೆದೇ ಹೋಗುತ್ತಿದ್ದದ್ದು... ಅದರಲ್ಲೂ ಮಿಂಟೋ ಆಸ್ಪತ್ರೆಯಿಂದ ಒಳಹೊಕ್ಕು... ವಾರ್ಡುಗಳ ಮಧ್ಯೆ ನಡೆದು ವಾಣಿವಿಲಾಸ ಆಸ್ಪತ್ರೆಯಿಂದ ಹೊರಬಂದು ಅವಿನ್ಯೂ ರೋಡ್ ಮೂಲಕ ಹೋಗುತ್ತಿದ್ದ ಹತ್ತಿರದ ದಾರಿಯ ನೆನಪಿದೆ.....ಈಗಲೂ ಆ ದಾರಿ ಇದೆಯಾ...ಗೊತ್ತಿಲ್ಲ.

ಬೆಳಿಗ್ಗೆ ಬೇಗ ಏಳುವುದು ನನಗೆ ತುಂಬಾ ಇಷ್ಟ.. ಹಾಗಾಗಿ ಬೆಳಗಿನ ವಾಕಿಂಗ್ ಸಹ ಇಷ್ಟ. ಶಹಾಬಾದ್ ನಲ್ಲಿದ್ದಾಗ, ಭಂಕೂರ ಗಣಪತಿಗೆ ನಡೆದುಹೋಗುತ್ತಿದ್ದದ್ದು ಮಧುರ ಅನುಭವ.

ಕೆಲ ದಿನಗಳ ಹಿಂದೆ.. ವಾಕಿಂಗ್ ಮಾಡುತ್ತಿದ್ದಾಗ ಒಬ್ಬ ಹೆಣ್ಣು ಮಗಳು ವೇಗವಾಗಿ ನನ್ನನ್ನು ದಾಟಿ ಹೋದಳು... ಉದ್ದನೆಯ ಜಡೆ... ಅತ್ತಿಂದಿತ್ತ ಲಾಸ್ಯವಾಡುತ್ತಿತ್ತು... ತಕ್ಷಣ ನನಗೆ ನೆನಪಿಗೆ ಬಂದದ್ದು ವಿದ್ಯಾನಗರದಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯಲ್ಲಿದ್ದ, ಹತ್ತಿಮೇಷ್ಟ್ರ ಮಗಳು ಆ ಮುದ್ದುಮುಖದ ಹುಡುಗಿ... ಉಮಾ... ಪ್ರಾರ್ಥನೆಗೆ ಮುನ್ನ ಮಾಡುವ "ಸಫಾಯಿ"... ಶಾಲೆಯ ಪರಿಸರವನ್ನು ಶುಚಿ ಮಾಡುವ ಕಾಯಕದ ಸಮಯದಲ್ಲಿ... ಮುಖ್ಯಮಂತ್ರಿಯಾದ ನನ್ನನ್ನು ಏನು ಕೆಲಸ ಮಾಡಬೇಕೆಂದು ಕೇಳಿ.. ಮಾಡಲು ಓಡಿದಾಗ ಕಂಡ ಆ ದೃಶ್ಯ.

ವಾಕಿಂಗ್ ಸಮಯದಲ್ಲಿ ಕಂಡ , ಮನಸ್ಸಿನಲ್ಲಿ ಉಳಿದಿರುವ ಕೆಲವು ವ್ಯಕ್ತಿಗಳು....

ಕಿಟ್ಟಿ ಮೇಷ್ಟ್ರು... ಹರಿಹರ ಗುಡ್ಡದಲ್ಲಿ ವಾಕಿಂಗ್ ಮಾಡುತ್ತಿದ್ದ ಹಿರಿಯರು, ಪ್ರತಿ ಸೋಮವಾರ ಭಜನೆಯ ಮುಂದಾಳತ್ವ ವಹಿಸುತ್ತಿದ್ದ ಉತ್ಸಾಹಿ, ಹಾಗೂ ಅವರ ಜೊತೆಯಲ್ಲಿ ಇರುತ್ತಿದ್ದ ಹಿರಿಯರ ಗುಂಪು... ಅದರಲ್ಲೂ ದಾಸ್ ಎಂಬುವ ಹಿರಿಯರ ಕ್ರಿಕೆಟ್ ಪ್ರೇಮ..

ಪ್ರತಿದಿನ ಗುಂಪಾಗಿ ಕೂತು ಹಾಡುಗಳನ್ನು ಹೇಳಿಕೊಳ್ಳುವ ಉಮಾ ಅವರ ತಂಡ.

 ಎಡಗೈಯನ್ನು ಗಂಟೆ ಬಾರಿಸಿದಂತೆ... ಬಲಗೈಯಲ್ಲಿ ಮಂಗಳಾರತಿ ಮಾಡುವಂತೆ, ಕೈಗಳನ್ನು ಆಡಿಸುತ್ತಾ ವಾಕಿಂಗ್ ಮಾಡುತ್ತಿದ್ದ, ನೋಡಿದ ತಕ್ಷಣ ಗೌರವ ಮೂಡುತ್ತಿದ್ದ ಅಜ್ಜಿ.

ಹುಟ್ಟಿನಿಂದಲೇ ಕೈಕಾಲುಗಳು ಊನವಾಗಿದ್ದ.... ಶ್ರೀನಿವಾಸ... ಪ್ರಯಾಸದಿಂದ ನಡೆಯುತ್ತಿದ್ದ ಅವನು.. ಈಗ ಸಾಕಷ್ಟು ಶಕ್ತಿವಂತನಾಗಿ ಓಡಾಡುವುದು... ಕಂಡಾಗ... ಕೈ ಹಿಡಿದು, ಭುಜ ತಟ್ಟಿ ಮಾತನಾಡುವಾಗ ಅವನ ಮುಖದಲ್ಲಿ ಮೂಡುವ ನಗೆಯಿಂದ... ಮನಸ್ಸು ತುಂಬಿ ಬರುತ್ತದೆ.


HN...ಡಾ. H. ನರಸಿಂಹಯ್ಯನವರು, ನ್ಯಾಷನಲ್ ಕಾಲೇಜಿನಲ್ಲಿ ನನ್ನ ಮೇಷ್ಟ್ರು.. ಅವರ ಲಾಲ್ ಬಾಗ್ ವಾಕಿಂಗ್ ಒಂದೆರಡು ಸಲ ನೋಡಿದ್ದೇನೆ, ಅದರ ಬಗ್ಗೆ ಅವರು ಬರೆದದ್ದನ್ನು ಓದಿದ್ದೇನೆ...ಅವರು ನನ್ನ ಪ್ರಿಯರು.

 ನನ್ನ ಎರಡನೆಯ ಭಾವ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ನಂಜುಂಡಯ್ಯನವರು... ಎಲ್ಲಿಗೆ ಹೋಗಬೇಕಾದರೂ ನಡೆದೇ ಹೋಗುವವರು. ಒಂದು ಬಾರಿ ಬೆಂಗಳೂರಿನಿಂದ ದೊಡ್ಡಜಾಲಕ್ಕೆ.. ಸುಮಾರು 29 ಕಿಲೋಮೀಟರ್.. ಅಣ್ಣನನ್ನು ಕರೆದುಕೊಂಡು ನಡೆದೇ ಬಂದರು..." ಹೆಬ್ಬಾಳ, ಯಲಹಂಕ, ಬೆಟ್ಟಹಲಸೂರು, ಚಿಕ್ಕಜಾಲ ಆದ ತಕ್ಷಣ ದೊಡ್ಡಜಾಲ"
ಎಂದು  ಹುರಿದುಂಬಿಸಿದವರು.

" ನಡೆದಾಡುವ ದೇವರು" ಎಂದೇ ಪ್ರಸಿದ್ಧರಾದ ಶಿವಕುಮಾರ ಸ್ವಾಮಿಯವರು ಪ್ರಾತಃ ಸ್ಮರಣೀಯರು.

ಪಾದಯಾತ್ರೆ... ಒಂದು ಉದ್ದೇಶಕ್ಕಾಗಿ ಸಾಮೂಹಿಕವಾಗಿ ನಡೆಯುವ ಕಾಯಕ. Walkathon ಗಳೂ ಪಾದ ಯಾತ್ರೆಗಳೇ.





17.07.2024 ರಂದು  ಪಂಡರಾಪುರದ ವಿಠ್ಠಲನ ಸನ್ನಿಧಿಗೆ ಭಕ್ತಿಯಿಂದ ಹಾಡುತ್ತಾ, ಕುಣಿಯುತ್ತ ಹೊರಟ "ವಾರಕರಿ" ಯಾತ್ರೆಯಲ್ಲಿ ಭಾಗವಹಿಸಿದ್ದ ಜನಸಮೂಹ ಪ್ರಾಯಶಃ ಪ್ರಪಂಚದಲ್ಲಿ ಅತಿ ದೊಡ್ಡದು. ಜಾಲತಾಣದಲ್ಲಿ ಅದರ ವಿಡಿಯೋ ನೋಡಿದಾಗ ಅಬ್ಬಾ ಎನಿಸದಿರದು.



ಗಾಂಧೀಜಿ ಮಾಡಿದ " ದಂಡಿ ಯಾತ್ರೆ" ಅಂದಿಗೆ ಬಹು ಯಶಸ್ವಿ ಕಾರ್ಯಕ್ರಮ... ಅವರ ಹೆಸರು ಹೇಳುವ... ಇಂದಿನ ರಾಜಕಾರಣಿಗಳು ಮಾಡುವ ಪಾದಯಾತ್ರೆಯನ್ನು" ದಂಡದ ಯಾತ್ರೆ" ಎನ್ನಬಹುದೇನೋ...( ದಂಡ= ವ್ಯರ್ಥ,waste)

ದೇವರಿಗೆ ಮಾಡುವ ಪ್ರದಕ್ಷಿಣೆ ನಮಸ್ಕಾರ, ಹರಕೆ ಹೊತ್ತು ಮಾಡುವ ಹೆಜ್ಜೆ ನಮಸ್ಕಾರಗಳು ವಿಶೇಷ ನಡಿಗೆಗಳು.

" ನಡೆ ಮಡಿ" ಅಥವಾ " ನಡೆಮುಡಿ" .. ನಾ ಹಳ್ಳಿಯಲ್ಲಿ ನೋಡಿದಂತೆ.. ದೇವರನ್ನು ಹೊತ್ತ ಮನುಷ್ಯ ನಡೆಯುವ ದಾರಿಯ ಮೇಲೆ ಹಾಕುವ ಶುಚಿ ಮಾಡಿದ ಸೀರೆ... ಈ ಕೆಲಸವನ್ನು ಮಾಡುತ್ತಿದ್ದದ್ದು ಅಗಸರ ಮನೆತನದವರು.. ಅದು ಅವರಿಗೆ ಸಲ್ಲುತ್ತಿದ್ದ ಗೌರವ.

Field marshal Manekshaw ಅವರಿಂದ ವಿಶೇಷವಾಗಿ "ಪಾಗಿ" ಎಂದು ಗುರುತಿಸಿ ಗೌರವಿಸಲ್ಪಟ್ಟ ವ್ಯಕ್ತಿ  ರಣ್ ಚೋರ್ ದಾಸ್ ರಾಬರಿ. ಇವರು ಒಂಟೆಯ ಹೆಜ್ಜೆಯ ಗುರುತುಗಳನ್ನು ನೋಡಿ, ಒಂಟೆಯ ಮೇಲೆ ಎಷ್ಟು ಜನರು ಇದ್ದರು... ಹಾಗೂ ಮನುಷ್ಯರ ಹೆಜ್ಜೆಯಗುರುತುಗಳನ್ನು ನೋಡಿ ಅವರ ತೂಕ, ಎಷ್ಟು ದೂರ ನಡೆದಿದ್ದಾರೆ ಎಂಬ ವಿಷಯಗಳನ್ನು ನಿಖರವಾಗಿ ಹೇಳುತ್ತಿದ್ದರು. ಇವರ ಈ ವಿಶೇಷ ಕೌಶಲ್ಯವನ್ನು, ಹಾಗೂ ಮರಳುಗಾಡಿನಲ್ಲಿ ದಾರಿ ತೋರಿಸುವ ಕಲೆಯನ್ನು... ಭಾರತೀಯ ಸೈನ್ಯ ಪಾಕಿಸ್ತಾನದ ಮೇಲಿನ ಯುದ್ಧದ ಸಮಯದಲ್ಲಿ ಬಳಸಿಕೊಂಡು ಜಯ ಸಾಧಿಸಿದ್ದು ಚರಿತ್ರೆಯ ಭಾಗ.

ಬೆಟ್ಟಗುಡ್ಡಗಳು, ಪ್ರಕೃತಿಯ ಮಧ್ಯೆ ನಡೆದಾಗ ಅದು ಚಾರಣ...fashion ಲೋಕದ ನಡೆ catwalk, ಮಿಲಿಟರಿಯವರ ನಡಿಗೆ  march past, ಗಲಭೆಗಳಾಗುವ ಜಾಗದಲ್ಲಿ ಮುನ್ನೆಚ್ಚರಿಕೆಯಾಗಿ ಸೈನ್ಯದ ಪಡೆಯ ನಡೆ...flag march... ಹೀಗೆ ನಡಿಗೆ ಒಂದೇ  ಆದರೂ ಹೆಸರು ಬೇರೆ ಬೇರೆ.

ನಿಧಾನವಾಗಿ ನಡೆಯುವ ಹೆಣ್ಣನ್ನು ಮಂದಗಮನೆ / ಗಜಗಮನೆ ಎಂದು ಕರೆಯುವುದುಂಟು.

ಏಳು, ಎದ್ದೇಳು ಗುರಿ ಮುಟ್ಟುವವರೆಗೂ ಮುನ್ನುಗ್ಗುತಿರು.. ಹಾಗೂ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ... ಇವು ಸ್ಪೂರ್ತಿದಾಯಕ ಜೀವನದ ನಡಿಗೆಯ ಮಾತುಗಳು.

" ನಡೆವನೆಡವುವನಲ್ಲದೆ....” ಇದು ಸೋತವರಿಗೆ ಹೇಳುವ ಪ್ರೋತ್ಸಾಹದ ನುಡಿ

ಸ್ವಲ್ಪ ಅಹಂಕಾರ ಪಟ್ಟವರಿಗೆ“ನೆಲ ನೋಡಿ ನಡಿಯೋದು ಕಲಿ" ಎಂದು ಹೇಳುವುದುಂಟು.

ಓಡಾಡುವಾಗ.. ಕಾಲಿಗೆ ಗಾಯ ಮಾಡಿಕೊಂಡರೆ, ಅಥವಾ ಯಾವುದಾದರೂ ಸಾಮಾನನ್ನು ಒದ್ದರೆ "ದೇವರು ಕಾಲಿಗೆ ಎರಡು ಕಣ್ಣು ಕೊಡಬೇಕಿತ್ತು" ಎಂದು ಹೇಳುವುದುಂಟು.



ಇನ್ನು ಚದುರಂಗದಾಟದಲ್ಲಿ " ಮುಂದಿನ ನಡೆ" ತುಂಬಾ ಮುಖ್ಯ.

" ನಡತೆ ಸರಿ ಇಲ್ಲ" ಎಂದು ಸಾರಾಸಗಟಾಗಿ ಹೇಳುವುದು ಯಾರಾದರೂ ಅಡ್ಡ ದಾರಿ ಹಿಡಿದಾಗ.

ಚಿಕ್ಕಂದಿನಲ್ಲಿ ಓಡಾಡುವಾಗ ಎಡವಿ ಬಿದ್ದು ಗಾಯಗಳನ್ನು ಮಾಡಿಕೊಂಡಾಗ.. ನಮ್ಮಪ್ಪ.. ಲಾಂಟಾನ ಸೊಪ್ಪು ಜೊತೆಗೆ ಸುಣ್ಣ ಸೇರಿಸಿ ಕೈಯಲ್ಲಿ  ಹೊಸಕಿ... ರಸವನ್ನು ಗಾಯದ ಮೇಲೆ ಸುರಿದಾಗ ಚುರಿಚುರಿ.. ಹೇಳಲು ಭಯ. ಅದೇ ಗಾಯ ಮಾಗುತ್ತಾ ಬಂದಾಗ ಅದನ್ನು ಕೆರೆಯಬೇಕೆನಿಸಿ, ಕೆರೆದಾಗ ಆಗುವ ಹಿತವಾದ ಅನುಭವ... ಇಂದಿಗೂ ಹಿತವಾದ ನೆನಪು.

" ಮಳೆ ಬಂತು ಮಳೆ" ಎಂಬ ಚಿತ್ರಕ್ಕೆ ನಾನು ಮಾಡಿದ ಮೊಸಳೆ... ನಡೆಯದೆ ಕುಂಟಿದಾಗ... ನಾ ಪಟ್ಟ ನಿರಾಶೆ ಏನೆಂದು ಹೇಳಲಿ?

ಒಂಟಿಕಾಲಲ್ಲಿ ಆಡುವುದು ಕುಂಟಬಿಲ್ಲೆ, ಇಬ್ಬರ ಎರಡು ಕಾಲುಗಳನ್ನು ಕಟ್ಟಿ ಓಡಿದಾಗ ಅದು ಮೂರ್ ಕಾಲು ಓಟ.

ಚಿಕ್ಕಂದಿನ ಓದಿನಲ್ಲಿ ಕಂಡ ನಡಿಗೆಯ ಸಾಲು.... ನಳಚರಿತ್ರೆಯ “ಕೇಳು ಕುಂತೀ ತನಯ ನಳ ನೃಪ ಬೀಳುಕೊಂಡನು ಪುರವನಲ್ಲಿಂ, ಮೇಲೆ ನಡೆದರು ಪಯಣ ಗತಿಯಲಿ ಹಲವು ಯೋಜನವ.....”

 ಗುರಿಯನ್ನು ಬೇಗ ತಲುಪಬೇಕಾದರೆ ಒಂಟಿಯಾಗಿ ನಡೆ..... ಸಂತೋಷದಿಂದ ದಾರಿ  ಸಾಗಬೇಕಾದರೆ ಜೊತೆಯಾಗಿ ನಡೆ... ದೂರದ ಹಾಗೂ ಕಷ್ಟದ ಹಾದಿಯನ್ನು ಸವೆಸಬೇಕಾದಾಗ ಗುಂಪಲ್ಲಿ ನಡೆ ಎನ್ನುವುದು ಹಿರಿಯರ ಅನುಭವದ ಮಾತು.

ಜೀವನದ ಪಯಣದಲ್ಲಿ ನಿಲ್ಲದೆ ನಡೆಯುವುದು ಅನಿವಾರ್ಯ... ಹಿಗ್ಗದೆಯೆ, ಕುಗ್ಗದಯೆ ನುಗ್ಗಿ ನಡೆ ಮುಂದೆ ಎಂಬ ಮಾತಿನಂತೆ... ನುಗ್ಗಿ ನಡೆದರೆ.... ಜೀವನ ಸುಖಕರ.... ನಡೆಯದೆ ನಿಂತರೆ ಜೀವನ ದುಸ್ತರ.

ಎಲ್ಲರ ಜೀವನವೂ ಸುಖಕರವಾಗಿರಲೆಂದು ಆಶಿಸುತ್ತಾ.....

ನಾನು ವಾಕಿಂಗಿಗೆ ಹೊರಡಬೇಕು...ಬರಲಾ...?

ನಮಸ್ಕಾರ

_______________________________________

ನಿಮ್ಮ ಅಭಿಪ್ರಾಯಗಳು ಕೆಳ  ಫೋನ್ ಗೆ ಕಳಿಸಿ.

DC Ranganatha Rao 

9741128413 



     

Comments

  1. ನಾಗೇಂದ್ರ ಬಾಬು18 July 2024 at 18:15

    Wah king...ನಡಿಗೆ ಇಂದು ವ್ಯಾಯಾಮಗಳ ರಾಜ ಪ್ರಧಾನವಾಗಿ ಬೆಳಗಿನ ನಡಿಗೆ...ನನ್ನ ಪ್ರತಿನಿತ್ಯದ ವಾಕಿಂಗ್ ಲಾಲ್ಬಾಗ್ನಲ್ಲಿ ...ಹಕ್ಕಿಗಳ ನ್ನು ವೀಕ್ಷಿಸುತ್ತಾ.... (ಅಪಾರ್ಥ ಬೇಡ...ನಮ್ಮ ಸ್ನೇಹಿತರಿಗೆ ಗೂಬೆ ನೋಡುವ ಹವ್ಯಾಸ) ಹಣ ಬರಬಹುದು ಎಂಬ ನಂಬಿಕೆ..ಅಲ್ಲಿಂದ ಷೇರು ಮಾರುಕಟ್ಟೆ ವಿಶ್ಲೇಷಣೆ....ಕ್ರಿಕೆಟ್..
    ರಾಜಕೀಯಕ್ಕೆ ತಿರುಗಿ ವಾಕಿಂಗ್ ಮುಗಿದಿದ್ದೂ
    ತಿಳಿಯದಷ್ಟು ಹರಟೆ.....ಅಲ್ಲಿಗೆ ಮುಗಿಯಿತು ಮುಂದೆ ಕೊತ್ತಂಬರಿ ತರಬೇಕು ಅಂದರು ದ್ವಿಚಕ್ರ ವಾಹನದಲ್ಲಿ ಪಯಣ....ಏಕೆಂದರೆ
    ನಡಿಗೆಗೆ ಇದ್ದ ಪಥ ಈಗ ಅಂಗಡಿ ಮುಂಗಟ್ಟುಗಳು, ವಾಹನ ನಿಲ್ದಾಣಕ್ಕೆ ಮೀಸಲು.... ನುಡಿದಂತೆ ನಡೆ ಎಂಬುದು ಸುಂದರ ನಾಣ್ಣುಡಿ ...ಅದಕ್ಕಿಂತ ಹೆಚ್ಚಾಗಿ ಇಂದು ಎಡವದೆ, ಜಾರದೆ,ಬೀಳದೆ ನಡೆ ಎಂದು ಹೇಳಬೇಕಾದ ಪರಿಸ್ಥಿತಿ
    ನಡಿಗೆಯ ನಿಮ್ಮ ಬರಹ ಎಂದಿನಂತೆ ನೆನಪು ಗಳ ಹಿನೋಟ..
    ಧನ್ಯವಾದಗಳು
    ಬಾಬು

    ReplyDelete
  2. Sir, Real flow of thoughts translated to script. Nice memories on walking. No mention on REGULAR WALKER who made you to walk and talk at Harihareswara Gudda. But still I am a Regular Walker sir. 😀😀

    ReplyDelete
  3. ನೀರಿನಂತೆ ಹರಿದ ವಿಚಾರಧಾರೆ ತುಂಬಾ ಚೆನ್ನಾಗಿ ಬಂದಿದೆ ಸರ್

    ReplyDelete
  4. Article chennagi mudi bandhide

    ReplyDelete
  5. ದಿನೇ ದಿನೇ ನಿಮ್ಮ ಬರಹಬರಹ ಓದುವ ಗೀಳು ಹೆಚ್ಚು ಮಾಡುತಿದ್ದೆ ನಿಮ್ಮ ಬರಹ

    ReplyDelete
  6. ವಾಕಿಂಗ್...ನಡಿಗೆ

    ಎಂದಿನಂತೆ ಹಲವಾರು ಆಯಾಮಗಳಿಂದ ಕೂಡಿ ಮುಂದಕ್ಕೆ ಹೆಜ್ಜೆ ಇಟ್ಟಿದೆ.

    ನಡಿಗೆಯ ವಿವಿಧ ರೂಪುರೇಷೆಗಳ ಚಿತ್ರಣ ಸೊಗಸಾಗಿದೆ.

    ಹೀಗೆ ಮುಂದಕ್ಕೆ ನಡೆಯುತ್ತಿರಿ....ನಾವು ಹಿಂಬಾಲಿಸುತ್ತಿರುತ್ತೇವೆ.

    ವಂದನೆಗಳೊಡನೆ,

    ಗುರುಪ್ರಸನ್ನ,
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ