ಮನೆ...

 


ಆಟ ಪಾಠ ಮನೆ ಕಡೆ ಓಟ... ಚಿಕ್ಕಂದಿನಲ್ಲಿ ಹೇಳುತ್ತಿದ್ದ ಈ ವಾಕ್ಯ... ಆಗ ಪದಗಳ ಗುಂಪು... ಈಗ ಯೋಚಿಸಿದರೆ.. ಮನೆ ಕಡೆ ಓಟ.... ಎಲ್ಲ ಕೆಲಸದ ನಂತರ ಇರುವ ಗುರಿ. ಮನೆ ಸೇರಿದಾಗ ಸಿಗುವ ಒಂದು ತೃಪ್ತಿ... ಪ್ರಾಯಶಃ ಪದಗಳಲ್ಲಿ ವರ್ಣಿಸಲು ನನಗಿರುವ ಮಿತಿಯಲ್ಲಿ ಅಸಾಧ್ಯ.  ಅದನ್ನು ಅನುಭವಿಸಿಯೇ ತೀರಬೇಕು.  ಮೊದಲಿನಿಂದಲೂ ನನಗೆ ಮನೆಯ ವ್ಯಾಮೋಹ. ಕತ್ತಲಾಗುವುದರೊಳಗೆ ಮನಗೆ ಬರಬೇಕು ಎಂಬ ನಿಯಮದ ಕಾರಣ ಬೇಗ ಮನೆ ಸೇರಬೇಕು ಎನ್ನುವ ತವಕ ಹಾಗೂ ಭಯ. ಮೊದಲು ಅಮ್ಮ ಅಜ್ಜಿಯ ಸೆಳೆತ ...ನಂತರ ಮಡದಿ ಮಗಳ ಸೆಳೆತ...

ಮನೆ ಒಂದು ನಾವಿರಲು ಬೇಕಾದ ಕಟ್ಟಡ ಮಾತ್ರವೇ? ಮೊದಲ ಹಂತಕ್ಕೆ... ಅದು ನಮ್ಮನ್ನು ಬಿಸಿಲು ಮಳೆ ಗಾಳಿ ಎಲ್ಲದರಿಂದ ರಕ್ಷಿಸುವ ತಾಣ ಹೌದು. ಇಷ್ಟೇ ಆಗಿದ್ದರೆ... ನಾವು ಉಳಿಯುವ ಹೋಟೆಲ್ ರೂಂ, ಛತ್ರ ಹೀಗೆ ಎಲ್ಲವೂ ಮನೆಯಾದೀತು. ಆದರೆ ಇವೆಲ್ಲವೂ ಮನೆಯಲ್ಲ. ಮನೆ ಎಂದರೆ ದೈಹಿಕ ರಕ್ಷಣೆ ಮಾತ್ರವಲ್ಲ.... ಮಾನಸಿಕ ಸಾಂತ್ವನ ನೆಮ್ಮದಿ ಹಾಗೂ ಮನೆಯವರಿಂದ ಸಿಕ್ಕುವ ಪ್ರೀತಿ, ರಕ್ಷಣೆ... ಮನೆಯ ಕಲ್ಪನೆಯ ಜೊತೆ ಜೊತೆಗೆ ಮನೆಯಲ್ಲಿರುವವರ ಪ್ರೀತಿ ಭಾಂದವ್ಯ ಎದ್ದು ತೋರುತ್ತದೆ( ಕೆಲಸಮಯ ಬೇರೆ ಬೇರೆ ಕಾರಣಗಳಿಂದ ಪ್ರೀತಿ ವಾತ್ಸಲ್ಯದ ತಾತ್ಕಾಲಿಕ ಕೊರತೆಯಾಗಬಹುದು.) ಇದಕ್ಕೇ ಇರಬಹುದು   "ಹಂಗಿನರಮನೆಗಿಂತ ಅಂಗಣದ ಗುಡಿ ಲೇಸು..." ##ಎಂಬ ನುಡಿಗಟ್ಟಿನ  ಪ್ರಯೋಗ.

ನಮ್ ಕೈಲಾಸಂ ಹೇಳಿದಂತೆ... "ಮಕ್ಕಳಿಸ್ಕೂಲ್ ಮನೇಲಲ್ವೇ"... ಹಾಗೇ

 " ಮನೆಯೇ ಮಂತ್ರಾಲಯ"

" ಮನೆಯೇ  ಮಕ್ಕಳ ಮೊದಲ ಪಾಠಶಾಲೆ".... 

ಕಲಿಕೆ ಶುರುವಾಗುವುದು ಮನೆಯಿಂದಲೇ... ಮನೆಯಲ್ಲಿರುವ ಮೌಲ್ಯಗಳು, ಶಿಸ್ತು, ಸಂಯಮ, ಪರಸ್ಪರ ಗೌರವಿಸುವಿಕೆ... ಹೀಗೆ ಬಹಳಷ್ಟು ಗುಣಗಳು ಮಕ್ಕಳಿದ್ದಾಗ ನಮ್ಮ ಮೇಲೆ ಪ್ರಭಾವ ಬೀರುವುದು ಮನೆಯ ಪರಿಸರದಿಂದಲೇ.

ಅಪ್ಪ ಮನೆಯ ಯಜಮಾನನಾದರೂ... ಅಮ್ಮ ಮನೆಯ ಕೇಂದ್ರ ಬಿಂದು.…. ಅಪ್ಪನ ಭಯದ ಅಸ್ತ್ರವನ್ನು ಉಪಯೋಗಿಸಿ... ಅಮ್ಮ ನಮ್ಮನ್ನು ರೂಪಿಸಿದ ಪರಿ.. ಚೆನ್ನಾಗಿ ನೆನಪಿದೆ.

ದೊಡ್ಡಜಾಲದ ನಮ್ಮ ಮನೆಯಲ್ಲಿ ಬಾಗಿಲು  ಇದ್ದದ್ದು ಅಡಿಗೆ / ದೇವರಮನೆ ಹಾಗೂ ಮತ್ತೊಂದು ಕೋಣೆಗೆ.. ಇವೆರಡರ ಮಧ್ಯೆ ಒಂದಷ್ಟು ವಿಶಾಲ ಜಾಗ... ನಮ್ಮ ಮನೆಗೆ ಮುಂಬಾಗಿಲೇ ಇರಲಿಲ್ಲ...ರಾತ್ರಿ ಯಾವುದೇ ಪ್ರಾಣಿಗಳು ಒಳಗೆ ಬರಬಾರದು ಎನ್ನುವ ಕಾರಣಕ್ಕೆ ಮುಂಬಾಗಿಲಿಗೆ ಒಂದು ತಡಿಕೆ ( ಸುಮಾರು ಐದಡಿ ಎತ್ತರದ ಸಪೂರವಾದ, ನೆಟ್ಟಗೆನ ಕಡ್ಡಿಗಳನ್ನು ಎಲೆ ಸಮೇತ ಕತ್ತರಿಸಿ ತಂದು... ಅವುಗಳನ್ನೆಲ್ಲ ವಿಶಿಷ್ಟವಾಗಿ ಜೋಡಿಸಿ, ಸಣ್ಣ ಹುರಿಯಲ್ಲಿ ಬಿಗಿದು ಮಾಡಿದ ಒಂದು ಬಾಗಿಲು ಎನ್ನಲೆ) ಇಟ್ಟು ಹಗ್ಗ ಕಟ್ಟುತ್ತಿದ್ದದ್ದು ಒಂದು ಕ್ರಮ. ಮನೆಯ ನೆಲ ಮಣ್ಣಿನದು.. ವಾರಕ್ಕೊಮ್ಮೆಯಾದರೂ ಸಗಣಿಯನ್ನು ಹಾಕಿ ನೆಲವನ್ನು ಸಾರಿಸಿ ರಂಗೋಲಿ ಇಡುತ್ತಿದ್ದದ್ದು ಹಸಿರಾಗಿದೆ.

ನಮ್ಮ ಮನೆಯಲ್ಲಿ ಇದ್ದದ್ದು... ನೆಲಭಾವಿ... ಎಂದರೆ ಅದಕ್ಕೆ ಕಲ್ಲು ಕಟ್ಟಡವಿಲ್ಲ.... ಸುತ್ತಲೂ ಕಟ್ಟೆಯೂ ಇಲ್ಲ....( ಒಂದು ಹಳ್ಳ ತೋಡಿದಂತೆ) ಅದರಿಂದಲೇ ಬಗ್ಗಿ ನೀರು ಸೇದುವುದು.. ಸುತ್ತಲೂ ಇರುತ್ತಿದ್ದ ಗಿಡಗಳಿಗೆ ನೀರು ಹಾಕುವುದು.  ಮನೆಯ ಮಾಡು (ಸೂರು) ಮಣ್ಣಿನದು... ಹಾಗಾಗಿ ಮಳೆಗಾಲದ  ಸಮಯದಲ್ಲಿ ನೀರು ಸೋರುತ್ತಿದ್ದದ್ದು... ಹಾಗೂ ಅಲ್ಲಿ ಪಾತ್ರೆಯನ್ನು ಇಡುತ್ತಿದ್ದದ್ದು.... ಅದರಲ್ಲೂ ರಾತ್ರಿಯ ಹೊತ್ತು ಮಳೆ ಬಂದಾಗ ಅಮ್ಮ ಪಡುತ್ತಿದ್ದ ಪಾಡು....

" ಮನೆ ಕಟ್ಟಿ ನೋಡು..... ಮದುವೆ ಮಾಡಿ ನೋಡು".. ಎಂಬ ನಾಣ್ಣುಡಿ ಮನೆ ಕಟ್ಟುವ ಹಿಂದಿರುವ ಕಷ್ಟ ಮತ್ತು ಸಾಹಸವನ್ನು (ಆಗಿನ ಕಾಲಕ್ಕೆ) ಎತ್ತಿ ಹಿಡಿಯುತ್ತದೆ.  ಇರಲು ನಮ್ಮದೇ ಆದ ಒಂದು ಸ್ವಂತ ಮನೆ ಬೇಕು ಎನ್ನುವುದು ಬಹುಶಃ ಎಲ್ಲರ ಹಂಬಲ. ಇಲ್ಲಿ ನಮ್ಮಮ್ಮನ ಮಾತುಗಳು ಕಿವಿಯಲ್ಲಿ ರಿಂಗಣಿಸುತ್ತವೆ..... ಹೊಟ್ಟೆಗೆ ಹಿಟ್ಟು ಇಲ್ದೇ ಇದ್ರು ಇರಬಹುದು... ಮಾನವಾಗಿರಕ್ಕೆ ಮನೆ ಬೇಕು ( ಬೆಂಗಳೂರಲ್ಲಿ ತಿಂಗಳು ತಿಂಗಳೂ ಬಾಡಿಗೆ ಕಟ್ಟೋದು ಕಷ್ಟ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದು)

ನನಗೂ ಸ್ವಂತ ಮನೆ ಮಾಡುವ ಕನಸಿತ್ತು... ಕಸುವಿರಲಿಲ್ಲ.... ಜಾಗದ ಬೆಲೆ ಸುಮಾರು 50,000 ರೂಪಾಯಿ ಎಂದು ....ಅದನ್ನು ಹರಸಾಹಸ ಮಾಡಿ ಸೇರಿಸಿಕೊಂಡು ಹೊರಟಾಗ ಬೆಲೆ 50 ಸಾವಿರ ದಾಟಿ ಎಷ್ಟೋ ದಿನವಾಗಿರುತ್ತಿತ್ತು.…. ಹೀಗೆ ಮರೀಚಿಕೆಯ ಹಿಂದೆ ಬಿದ್ದು ಕೊನೆಗೂ ಕೈಗೂಡಿದ್ದು ನಮ್ಮ ಕನಸಿನ ಮನೆ.... 

 ಗೃಹಪ್ರವೇಶದ ತಯಾರಿ ಹಾಗೂ ಸಂಭ್ರಮ .. ಅದರಲ್ಲೂ ಹಸು ಕರುವನ್ನು ಮನೆಯೊಳಗೆ ತರಲು ಪಟ್ಟ ಸಾಹಸ... ಐದು ದಿನಗಳ ಕಾಲ ಇಷ್ಟರೊಂದಿಗೆ ಕಳೆದದ್ದು ಅವಿಸ್ಮರಣೆಯ... ಕೊನೆಯ ದಿನ ಅಳಿದುಳಿದ ತರಕಾರಿ ಎಲ್ಲ ಸೇರಿಸಿ... ಹುಳಿ ಮಾಡಿ ಜೊತೆಗೆ ನನ್ನ ಇಷ್ಟದ ರಾಗಿ ಮುದ್ದೆ ಮಾಡಿ ( ಇದಕ್ಕೆ ಉತ್ಸಾಹದಿಂದ ಕೈಜೋಡಿಸಿದವರು... ಭಾಗಿರಥಮ್ಮನವರು... ಮಣಿ ಅತ್ತೆ) ತಿಂದದ್ದು ವಿಶೇಷವಾಗಿತ್ತು. ಈ ಮನೆಯಲ್ಲಿ ಹಸಿರಿಗೆ ಪ್ರಾಮುಖ್ಯತೆ ಇತ್ತು... ಹಾಗಾಗಿ ಮನೆಯ ಸುತ್ತು ಬೇರೆ ಬೇರೆಯ ಹೂ ಗಿಡಗಳು... ಸಮೃದ್ಧ ಹೂವಿನ ಬೆಳೆ.... ನಮ್ಮಪ್ಪ ಎಲ್ಲ ಹೂಗಳನ್ನು ಕಿತ್ತು ಪೂಜೆ ಮಾಡಿ ಆನಂದಿಸಿದ್ದು ಖುಷಿ ತರುವ ವಿಚಾರ... 14 ವರ್ಷ ವಾಸಿಸಿದ ಕನಸಿನ ಮನೆಯನ್ನು ಬಿಡಬೇಕಾದದ್ದು ವಿಧಿ ನಿಯಮವಾಗಿತ್ತು. 

ಹಾಗೆ  "ಋಣಾನು ಬಂಧಂ ರೂಪೇಣ ಪಶುಪತ್ನಿ ಸುತಾಲಯಃ" ಎಂಬ ಸುಭಾಷಿತದಂತೆ.... ಈಗ ಇರುವ ನಮ್ಮದೇ ಮನೆಗೆ ಬಂದು ಸೇರಿದ್ದು ಮಾರ್ಚ್ ತಿಂಗಳು... ಎನ್ನುವುದು ಸಹ ವಿಧಿವಿಲಾಸವೇ... ಹಾಗಾಗಿ ಮನೆಯ ವಿಷಯ ತಲೆಗೆ ಬಂದದ್ದು.

ನನಗೆ ನೆನಪಿರುವ ಹಾಗೆ ಹಳ್ಳಿಯಿಂದ ಶುರು ಮಾಡಿ ಬೇರೆ ಬೇರೆ ಕಾಲಘಟ್ಟದಲ್ಲಿ ವಾಸ ಮಾಡಿದ್ದು....ಈಗಲೂ  ಇರುವುದನ್ನು ಸೇರಿ 15 ಮನೆಗಳು... ಜೀವನದ ಏರಿಳಿತಗಳನ್ನು ಸಹಜವಾಗಿ ಕಂಡಿದ್ದು ಈ ಮನೆಗಳಲ್ಲಿ..... ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು... ಗವಿಪುರದ ವಠಾರದ ಮನೆ... ಅಲ್ಲಿ ಇದ್ದ ಆರು ಮನೆಗಳ ಮಧ್ಯೆ ಇದ್ದ ಭಾಂದವ್ಯ.... ಹಾಗೂ ಶ್ರೀನಗರದ ಅನಂತ ಸುಬ್ಬರಾಯರ ಮನೆ..... ಸಮೃದ್ಧಿಗೆ ಸೋಪಾನವಾದ.... ಕನಸಿನ ಮನೆಗೆ ದಾರಿ ತೋರಿಸಿದ ಮನೆ.

 ಅಲ್ಲಿದೆ ನಮ್ಮನೆ... ಇಲ್ಲಿ ಬಂದೆ ಸುಮ್ಮನೆ ಎಂದು ಪಾರಮಾರ್ಥಿಕ ದೃಷ್ಟಿಯಿಂದ ಹೇಳಿದ್ದು ಪುರಂದರದಾಸರು.... ಸುಮ್ಮನೆ ಆದರೂ ಈ ನಮ್ಮ ಮನೆಯಲ್ಲಿ ಕಾಲು ಚಾಚಿ ನೆಮ್ಮದಿಯಿಂದ ಮಲಗಲು ಇರುವ ಸ್ವಾತಂತ್ರ್ಯ ಬೇರೆಲ್ಲಿರಲು ಸಾಧ್ಯ.

ಶಿಶುನಾಳ ಶರೀಫರು ಈ ದೇಹವನ್ನು ಮನೆಗೆ ಹೋಲಿಸಿ ಬರೆದ..... ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ ....ಹಾಗೂ ಹುಟ್ಟಿದ ಹೊಲೆ ಮನೆ.. ಬಿಟ್ಟಾಗ ಖಾಲಿ ಮನೆ.. ನನಗೆ ತುಂಬಾ ಪ್ರಿಯವಾದ ಹಾಡುಗಳು.

ನಮ್ಮ ಬೀಚಿಯವರು ಮನೆಯ  ಇಟಾಲಿಯನ್ ಪದ.. ವಿಲ್ಲಾ ಉಪಯೋಗಿಸಿ ಹೆಸರಿಡುವ ಅಭ್ಯಾಸವನ್ನು " ಸುಖ ವಿಲ್ಲಾ" ಎಂದು ಕನ್ನಡದಲ್ಲಿ ಬರೆದು ಹಾಸ್ಯ ಮಾಡಿದ್ದಾರೆ.

ನಮ್ಮೂರಲ್ಲಿ ಇದ್ದ ದೊಡ್ಡ ಮನೆ ಹಾಲ್ ಎಂದು ಹೆಸರಿದ್ದ.....ಊರ ಗೌಡ ಹನುಮಂತರಾಯಪ್ಪನ ಮನೆ.  ಅಲ್ಲೇ ನಮ್ಮ ಅಕ್ಕಂದಿರ ಮದುವೆ ಆದದ್ದು....ಹಾಗೇ ರಾಮಲಿಂಗಣ್ಣಯ್ಯನ ಮನೆ..ಬಿಡದಿ ಮನೆ...ಬೀಗರು ಉಳಿಯಲು.  ಇಬ್ಬರ ಮನೆಯವರೆಲ್ಲ  ನಮಗಾಗಿ 2-3 ದಿನ ಬೇರೆಡೆ ಇರುತ್ತಿದ್ದರು. ಇದು ಭಾವೈಕ್ಯತೆಯ ಉದಾಹರಣೆ. 

ಈಚೀನ ದಿನಗಳಲ್ಲಿ ಮಕ್ಕಳೆಲ್ಲ ತಮ್ಮ ಭವಿಷ್ಯವನ್ನು ಅರಸಿ ಬೇರೆ ಬೇರೆ ಕಡೆ ಹೋಗಿ ನೆಲೆಸಿರುವುದರಿಂದ... ಬಹಳಷ್ಟು ಮನೆಗಳಲ್ಲಿ ಇರುವುದು ವಯಸ್ಸಾದ ಗಂಡ ಹೆಂಡತಿ (ಅಪ್ಪ ಅಮ್ಮ).... ನನ್ನಣ್ಣ ಸತ್ತಿ ಸರ್ ಹೇಳುವಂತೆ.. ಇಂಥ ಮನೆಗಳೆಲ್ಲ ವೃದ್ಧಾಶ್ರಮಗಳು.... ಕಾಲ ಪ್ರವಾಹದಲ್ಲಿ ಸಿಕ್ಕಿ ಒಬ್ಬರು ಕೊಚ್ಚಿ ಹೋದಾಗ.... ಉಳಿದಿರುವವರಿಗೆ ಅದೇ ಅನಾಥಾಶ್ರಮ.

ಇಂಗ್ಲೀಷಿನಲ್ಲಿ house ಹಾಗೂ home ಪದಗಳ ಭಾವಾರ್ಥ ಒಂದೇ ಆದರೂ... ಹೌಸ್ ಕಟ್ಟಡ ಮಾತ್ರ...  home ....ತನ್ನದು ಎನ್ನುವ, ತನ್ನ ಪ್ರೀತಿ ಪಾತ್ರರಿರುವ,  ಅಭಿಮಾನದಿಂದ ಕೂಡಿದ ಜಾಗ..... ಸೂಕ್ಷ್ಮ ವ್ಯತ್ಯಾಸ.

Remand home.... ಇದು ... ನನಗೆ ತಿಳಿದಂತೆ.... ಅಪರಾಧಿ ಹಿನ್ನೆಲೆಯುಳ್ಳ ಮಕ್ಕಳನ್ನು ಅಥವಾ ಪೋಷಕರನ್ನು ಗುರುತಿಸಬೇಕಾಗಿರುವ ತಪ್ಪಿಸಿಕೊಂಡ ಮಕ್ಕಳನ್ನು.. ಕೋರ್ಟ್ ಆದೇಶದಂತೆ ಇಡುವ ಜಾಗ.... ಅಲ್ಲಿ ಮಕ್ಕಳಿಗೆ ಪ್ರೀತಿ ಮತ್ತು ರಕ್ಷಣೆ ಸಿಗಲಿ ಎಂದು home ಎಂದು ಹೆಸರಿಟ್ಟಿರಬಹುದೇ..... ಅದು ಅಲ್ಲಿ ಸಿಗುತ್ತಿರಬಹುದೇ?.... ಅನುಮಾನದ ಹೊಗೆ ಇದೆ.

ಸಾಮಾನ್ಯವಾಗಿ ಮದುವೆಯ ಮನೆಯಲ್ಲಿ, ... " ಮನೆ ತುಂಬಿಸಿಕೊಳ್ಳುವ" ಒಂದು ಶಾಸ್ತ್ರವುಂಟು.... ಇಲ್ಲಿ ಮದುವೆಯ ಹೆಣ್ಣನ್ನು ಗಂಡಿನ ಮನೆಗೆ ಒಪ್ಪಿಸುವುದು... ಹಾಗೂ ಗಂಡಿನ ಮನೆಯವರು... ಮಹಾಲಕ್ಷ್ಮಿ ಅನ್ನುವ ಭಾವದಿಂದ, ಹೆಣ್ಣನ್ನು ತಮ್ಮ ಮನೆಯ ಭಾಗವಾಗಿ ಒಪ್ಪಿಕೊಳ್ಳುವುದು.... ಗಂಡು ಸಹಜ ಸಂತೋಷದಿಂದ ಮನದಲ್ಲೇ ಹೆಣ್ಣನ್ನು ಅಪ್ಪಿಕೊಳ್ಳುವ ಸಮಯ..... ಇದು ಬಹಳಷ್ಟು ಜನಕ್ಕೆ ಒಂದು ಭಾವನಾತ್ಮಕ ಸಮಯ.... ಕಣ್ಣು ತುಂಬಿ ಬರುವ ಸಮಯ... ಈ ಸಮಯದಲ್ಲಿ ವಿ ಸೀ ಅವರು ಬರೆದ (ವಿ ಸೀತಾರಾಮಯ್ಯನವರು) ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು.... ಹಾಡನ್ನು ಮನ ತುಂಬಿ ಹಾಡಿ... ಕಣ್ಣೀರು ಹರಿಸಿರುವ ದೃಶ್ಯವನ್ನು ಸಾಕಷ್ಟು ಸಲ ನೋಡಿದ್ದೇನೆ.... ಈಗೀಗ ಇಂತಹ ಸಂದರ್ಭಗಳು ಕಡಿಮೆಯಾಗುತ್ತಿದೆ... ಕಾಲದ ಮಹಿಮೆ.... ಅಂತಹ ಭಾವನಾತ್ಮಕ ಮನಸ್ಸುಗಳ ಕೊರತೆಯೋ ಅಥವಾ ಹೊರಹಾಕಲು ಇರುವ ಸಂಕೋಚವೋ...

ಇದೇ ಸಮಯದ ಇನ್ನೊಂದು ಮುಖ.... ಓಲಗದವರು ಹೆಣ್ಣು ಗಂಡನ್ನು ಅಡ್ಡಗಟ್ಟಿ.... ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ನುಡಿಸುತ್ತಾ... ತಮ್ಮ ಮನಸ್ಸಿಗೆ ಸಂತೋಷವಾಗುವಷ್ಟು ಹಣ ಸಿಗುವ ತನಕ ಚೌಕಾಸಿ ಮಾಡುವ ಒಂದು ಸನ್ನಿವೇಶ... 

ಅದೊಂದು ಕಾಲವಿತ್ತು.... ಮನೆ ತುಂಬಾ ಮಕ್ಕಳು.. ಒಂದು ಚಾಪೆ ಅಥವಾ ಜಮಖಾನದ ಮೇಲೆ ಸಾಲಾಗಿ ಮಲಗಿ... ಹರಟೆ ಹೊಡೆಯುತ್ತಾ ..ತಮಾಷೆ ಮಾಡುತ್ತಾ ನಿದ್ರೆಗೆ ಜಾರುತ್ತಿದ್ದದ್ದು.... ಮನೆ ಚಿಕ್ಕದಿದ್ದರೂ.... ಮನಸ್ಸು ವಿಶಾಲವಾಗಿದ್ದು ಹೊಂದಾಣಿಕೆ ಇತ್ತು ಸಂತೋಷವಿತ್ತು.... ಕಾಲ ಸರಿದಂತೆ ... ಮಕ್ಕಳೂ ಕಡಿಮೆ... ಮನೆಯೂ ದೊಡ್ಡದಾಗಿದೆ.... ಎಲ್ಲರೂ ಅವರವರ ರೂಮಿನಲ್ಲಿ ಜಾರಿಕೊಂಡು ಅವರದೇ ಲೋಕದಲ್ಲಿ ವಿಹರಿಸುವುದು. ಮನಸ್ಸುಗಳು ಚಿಕ್ಕದಾಗಿದೆಯೇನೋ ಎನ್ನುವ ಅನುಮಾನ ನನ್ನನ್ನು ಕಾಡುತ್ತದೆ.

ಗುಡಿಸಲಿನಿಂದ ಶುರುವಾದ ಮನೆಯ ರೂಪ ಈಗ ಒಂದು ವಿಶಿಷ್ಟವಾದ ಶೈಲಿಯನ್ನೇ ಪಡೆದುಕೊಂಡಿದೆ... ಅವರವರ ಆಸಕ್ತಿ ಹಾಗೂ ಹಣದ ಶಕ್ತಿಯ ಬಲಕ್ಕೆ ಅನುಗುಣವಾಗಿ. ಇನ್ನು apartment ಪರಿಕಲ್ಪನೆ ಮತ್ತೊಂದು ವಿಕಸನ.... ಒಂದು ಸಕಲ ಸೌಲಭ್ಯವಿರುವ ಹಳ್ಳಿಯಂತೆ... ಜನಗಳು ಬೆರೆಯುವ, ಒಟ್ಟಿಗೆ ಕಾಲ ಕಳೆಯುವ ಅವಕಾಶಗಳು, ಅನುಕೂಲಗಳು ಹೆಚ್ಚಿವೆ.... ಬೇಡವೆಂದಾಗ ತಮ್ಮಷ್ಟಕ್ಕಿರುವ ಅವಕಾಶವೂ ಇದೆ.

stay home's ಹಾಗೂ farm house ಅನ್ನುವುದು ಈಗಿನ ಜೀವನಶೈಲಿಯ ಇನ್ನೊಂದು ಆಯಾಮ.

Fools build the house and wise men live in it ಎನ್ನುವ ಇಂಗ್ಲಿಷ್ ನುಡಿಗಟ್ಟನ್ನು... ಅರ್ಥೈಸುತ್ತಾ.... ದಡ್ಡರು ಕಟ್ಟಿದ ಮನೆ.... ಅಂದರೆ ಮನೆ ಕಟ್ಟುವ ಕಾಯಕದಲ್ಲಿ ತೊಡಗಿರುವ architects, engineers ಇನ್ನಿತರ ಕೆಲಸಗಾರರು ದಡ್ಡರು.... ಎನ್ನುವ ವಿತಂಡವಾದದೊಂದಿಗೆ..... ಮನೆಗೆ ಹೋಗುವ ಸಮಯ ಆಯ್ತು.... ಬರಲಾ...

ನಮಸ್ಕಾರ.

 

## "ಹಂಗಿನರಮನೆಗಿಂತ......".ಈ ಸಾಲನ್ನು ನುಡಿಗಟ್ಟು ಎಂದು ತಿಳಿದಿದ್ದ ನನ್ನ ಅಜ್ಞಾನದ ಕಣ್ಣುಗಳನ್ನು ತೆರೆದ ಆ ನನ್ನ ಓದುಗ ಶಿಕ್ಷಕಿಗೆ ನಮನಗಳು. ನಿಮ್ಮ ಮೆಚ್ಚುಗೆ ಖುಷಿ ತಂದಿತು. 

ಸರ್ವಜ್ಞ ವಚನ ಹೀಗಿದೆ:

"ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು

ಭಂಗಬಟ್ಟುಂಬ ಬಿಸಿಯನ್ನಕಿಂತಲೂ

ತಂಗುಳವೆ ಲೇಸು ಸರ್ವಜ್ಞ "

DC Ranganatha Rao

9741128413


    

Comments

  1. ಸುಂದರ. ನನಗೆ 'ಸುಂದರ್ ವಿಲ್ಲಾ' ನೆನಪಾಗುತ್ತದೆ, ಕೆಳಗೆ ಯಾರೋ 'ಪರ್ವಾಗಿಲ್ಲ' ಬರೆದಿದ್ದಾರೆ

    ReplyDelete
  2. ಮನೆಯ ಅಗತ್ಯದ ಜೊತೆ, ಮನೆಯ ಬಗ್ಗೆ ಕನಸು, ಅಲ್ಲಿ ಸಿಗುವ ಆನಂದದ ಚಿತ್ರಗಳು ಮನಸ್ಸಿಗೆ ಮುದ ನೀಡುವಂತಿದೆ. ಉತ್ತಮ ಅಭಿವ್ಯಕ್ತಿ. ರಂಗ.

    ReplyDelete
  3. Sundarakumar roopaka.
    Mane sannadu, Manasu doddadu.
    Eega Mane doodadu aadare manasu sannadagide.
    Very good comparison.

    ReplyDelete
  4. ಮನೆಯ ಬಗ್ಗೆ ಆಮೂಲಾಗ್ರ ಮಾಹಿತಿಯ ಆಗರ (ವಿಕಿಪೀಡಿಯಾ) ಇದ್ದಂತಿದೆ. ಆಡು ಮುಟ್ಟದ ಸೊಪ್ಪಿಲ್ಲ, ನೀವು ಬಿಟ್ಟ ವಿಷಯವಿಲ್ಲ ಎಂಬಂತಾಗಿದೆ.

    ನಿಮ್ಮ ಎಲ್ಲಾ ಬ್ಲಾಗು (ಸಮಗ್ರ ವಿಷಯಗಳನ್ನೊಳಗೊಂಡ ಬ್ಯಾಗು) ಗಳು ಹೀಗೆಯೇ ಇರುತ್ತದೆ.

    ಸಿಮೆಂಟು, ಮರಳು, ಜಲ್ಲಿ ಇತ್ಯಾದಿಗಳ ಸಂಗಮವು ಮನೆಯಲ್ಲ, ಜೀವ, ಜೀವಂತಿಕೆಗಳ ಸೆಲೆ, ನೆಲೆಯೇ ಮನೆ ಎನ್ನಬಹುದೇನೋ?

    ವಿಶ್ವಾಸಿ,

    ಗುರುಪ್ರಸನ್ನ,
    ಚಿಂತಾಮಣಿ

    ReplyDelete
  5. ಮನೆ ಬಗ್ಗೆ ತಾವು ಬರೆದಿರುವ ಶೀರ್ಷಿಕೆಯಲ್ಲಿ ಅನೇಕ ಉತ್ತಮ ಅಂಶಗಳನ್ನು‌ ಕಾಣಬಹುದು.ಧನ್ಯವಾದಗಳು.ತಾವು ಮನೆ,ಹೋಟೆಲ್ಲಿನ ವಸತಿ ಗೃಹಗಳು, ರಿಮ್ಯಾಂಡ್ ಹೋಂ, ಮತ್ತು ವಯಸ್ಸಾದ ಮೇಲೆ ಇಡುವ ಓಲ್ಡ್ ಏಜ್ ಹೋಂ ಗಳ ಬಗ್ಗೆ ವಿವರ ಕಾಣಬಹುದು.ಆದರೆ ಮನೆ ಅದರಲ್ಲೂ ಸ್ವಂತ ಮನೆ ಶ್ರೇಷ್ಠವಾದದ್ದು.ಮನೆಯೇ ಮಕ್ಕಳ ಮೊದಲ ಪಾಠಶಾಲೆ,ಸಂಸ್ಕಾರಗಳನ್ನು ಕಲಿಸುವ ಗೂಡು,ಮನೆಯೇ ಮಂತ್ರಾಲಯ ಹಾಗೂ ಪ್ರೀತಿ, ವಿಶ್ವಾಸ ,ನೆಮ್ಮದಿ ದೊರೆಯುವ ಗೂಡಾಗಿರುತ್ತದೆ.ಬದಲಾದ ಪರಿಸ್ಥಿತಿಯಲ್ಲೂ ಸಹ ಮನೆಯು ಎಲ್ಲರೂ ಆದ್ಯತೆಯಾಗಿರುತ್ತದೆ.ಮತ್ತೊಮ್ಮೆ ತಮಗೆ ಧನ್ಯವಾದಗಳು. ದೇವೇಂದ್ರಪ್ಪ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು