ನಾಗರ ಪಂಚಮಿ

ನಾಗರ ಪಂಚಮಿಯ ಈ ಲೇಖನ ಇಷ್ಟು ತಡವಾಗಿ ಬರಲು ಕಾರಣ ಚಂದ್ರ ಎಂದರೆ ತಪ್ಪಾಗಲಾರದು. ಚಂದ್ರಯಾನ ಮೂರರ ಯಶಸ್ಸಿನ ಪರಿಣಾಮ ಆ ಲೇಖನಕ್ಕೆ ಪ್ರಾಮುಖ್ಯ ಸಿಕ್ಕಿ ಇದು ಹಿಂದೆ ಸರಿದಿತ್ತು. ನೆಲಕ್ಕೆ ಬಿದ್ದ ಬೀಜ ಹೇಗೆ ಮೊಳಕೆ ಒಡೆಯಲು ತವಕಿಸುತ್ತೋ ಹಾಗೆ ಈ ವಿಷಯವೂ ಹೊರಗೆ ಬರಲು ತವಕಿಸುತ್ತಿತ್ತು ( ಪ್ರಸವ ವೇದನೆ ಎನ್ನಲೇ?). ಇದೀಗ.... ನಾಗರ ಪಂಚಮಿ ಹಬ್ಬ ಅಕ್ಕಂದಿರ ಮನೆಗೆ ಹೋಗಿ, ಊಟ ಮಾಡಿ ಬೆನ್ನು ತೊಳಿಸಿಕೊಂಡು, ಹರಟೆ ಹೊಡೆದು ಬರುವುದು ಮಾಮೂಲು. ಈ ವರ್ಷವೂ ಅದೇ ನಡೆಯಿತು . ಆದರೆ ಈ ಬಾರಿ ದೊಡ್ಡಣ್ಣನ ಅನುಪಸ್ಥಿತಿ ಕಾಡಿತು. ಚಿಕ್ಕಂದಿನಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಮಡಿಯನ್ನು ಉಟ್ಟು, ಅಕ್ಕನ ಜೊತೆ ಕೆರೆ ಏರಿಯ ಮೇಲೆ ಇದ್ದ ನಾಗರಕಲ್ಲಿಗೆ ತನಿ ಎರೆದು ಬರುವುದು ಮೊದಲ ಕೆಲಸ. ಸಾಧಾರಣವಾಗಿ ಅಂದು ಜಿಟಿ ಜಿಟಿ ಮಳೆ ಇರುತ್ತಿದ್ದದ್ದು ನೆನಪು. ಅಂದು ಹಬೆಯಲ್ಲಿ ಬೇಯಿಸಿದ ಸಿಹಿ, ಖಾರದ ಕಡುಬು (ಹೊಯ್ಗಡುಬು) ವಿಶೇಷ. ಅಜ್ಜಿ... ಅಪ್ಪನ ಅಮ್ಮ... ಕಡುಬನ್ನು ಮಡಿಸುತ್ತಿದ್ದ ಕೈಚಳಕ ನೆನಪಿದೆ. ಹಾಗೇ.. ಎಣ್ಣೆಯಲ್ಲಿ ಕರಿದ ಯಾವುದೇ ಪದಾರ್ಥವನ್ನು ಮಾಡುವುದು ನಿಷೇಧ. ಕೆಲವರು ಜೀವನಪರ್ಯಂತ ಪಡವಲಕಾಯಿಯನ್ನು ತಿನ್ನುವುದಿಲ್ಲ. (ಹಾವೆಂಬ ಭಾವ). ಈಚಿನ ದಿನಗಳಂತೂ ಮನೆಯಲ್ಲೇ, ಒದ್ದೆ ಬಟ್ಟೆಯಲ್ಲಿ , ನಾಗರ ಪ್ರತಿಮೆಯನ್ನು ಇಟ್ಟು, ಅದಕ್ಕೆ ಭತ್ತದ ಅರಳು, ಕಡಲೆಕಾಳು, ಅಕ್ಕಿ ಹಿಟ್ಟು, ಹ...