ಓದಿನ ವೈಖರಿ..

ಓದಿನ ವೈಖರಿ..

ಮಂಗಳವಾರ ನನ್ನ ಕೊನೆಯ ಅಕ್ಕ ಗಿರಿಜಾಂಬ ಮನೆಗೆ ಹೋಗಿದ್ದೆ. ಲೋಕಾಭಿರಾಮವಾಗಿ ಮಾತುಕತೆ ಇದ್ದರೂ ಸಹ ಹರಟೆಯ ರೂಪದಲ್ಲಿ ಹಳೆಯದನ್ನು ನೆನೆಸಿಕೊಳ್ಳುವುದು ಒಂದು ಮುಖ್ಯವಾದ ಅಂಗ. ನೆನ್ನೆಯ ಈ ಹರಟೆಯಲ್ಲಿ ಚರ್ಚೆ ಆದದ್ದು ನನ್ನ ನಿದ್ದೆ ಮತ್ತು ಓದು... ಈ ಲೇಖನಕ್ಕೆ ಅದೇ ಸ್ಪೂರ್ತಿ.

ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಇದು ವೇದ ವಾಕ್ಯದಷ್ಟೇ ಸತ್ಯ. ಜೀವನಕ್ಕೆ ಬೇಕಾದ ಕೌಶಲಗಳನ್ನು ತಿಳಿಸಲು ಪ್ರಾರಂಭ ಬಾಯಿ ಪಾಠದಿಂದ ಅನ್ನುವುದು ನನ್ನ ಸ್ವಂತ ಅನುಭವ. ಸೋಮವಾರದಿಂದ ಶುರುವಾಗಿ ಭಾನುವಾರದವರೆಗೆ ವಾರಗಳು, ಪ್ರಭವದಿಂದ ಅಕ್ಷಯದವರೆಗೆ ಸಂವತ್ಸರಗಳು, ಚೈತ್ರದಿಂದ.. ಫಾಲ್ಗುಣದ ವರೆಗೆ ತಿಂಗಳುಗಳು, ಪಾಡ್ಯ ದಿಂದ ಅಮಾವಾಸ್ಯೆ ಪೂರ್ಣಿಮೆಯವರೆಗೆ ದಿನಗಳು, ಅಂಕಿಗಳು, ಸಂಡೆ ಮಂಡೆ, ಜನವರಿ ಫೆಬ್ರವರಿ ಹೀಗೆ ಎಲ್ಲವೂ ಬಾಯಿ ಪಾಠದ ಮೂಲಕವೇ ಕಲಿತದ್ದು.  ಅಧಿಕೃತವಾಗಿ ಓದು ಬರಹ ಅಕ್ಷರಭ್ಯಾಸದಿಂದ ಶುರುವಾದರೂ, ಅನಧಿಕೃತವಾಗಿ ಬಾಯಿ ಪಾಠ ಒಂದು ಹಂತಕ್ಕೆ ಬಂದಿರುತ್ತದೆ. ಇದು ಮಕ್ಕಳ ಕಲಿಕೆಯನ್ನು ಬಂದವರ ಮುಂದೆ ಪ್ರದರ್ಶಿಸಲು ಒಂದು ಮಾರ್ಗ.

ಬಾಯಿ ಪಾಠದ ಮುಂದಿನ ಭಾಗ... ಶಾಲೆಯಲ್ಲಿ ಒಂದರಿಂದ ಹತ್ತರ ಮಗ್ಗಿಯನ್ನು ಎಲ್ಲರೂ ಒಟ್ಟಿಗೆ ಹೇಳುವುದು.. ಒಂದರ ಮಗ್ಗಿಯಿಂದ ಶುರುವಾದ ತಾರಕ ಸ್ವರದ ಹೇಳಿಕೆ ಎರಡರ ನಂತರ ಮಂದ್ರಕ್ಕೆ ಹೋಗಿ  ಒಂಬತ್ತಕ್ಕೆ ಬರುವಷ್ಟಲ್ಲಿ... ಸ್ವರ ಉಡುಗಿಯೇ ಹೋಗಿರುತ್ತಿತ್ತು... ಹತ್ತಕ್ಕೆ ಬಂದಾಗ ಹತ್ತೊಂದ್ಲ ಹತ್ತು, ಹತ್ತರೆಡ್ಲ ಇಪ್ಪತ್ತು ಮತ್ತೆ ತಾರಕಕ್ಕೆ ಹೋಗುತ್ತಿತ್ತು.

ಇಲ್ಲಿ ನನಗೆ ನೆನಪಿಗೆ ಬರೋದು ನನ್ನ ಪುಟ್ಟ ಭಾಮೈದ ನರೇನಿ(Dr. H R Narendra, PhD)... ಅವನು ಪುಸ್ತಕ ಹಿಡಿದು ಕೂತು ಪಾಠ ಹೇಳಲು ಶುರು ಮಾಡಿದರೆ ಅವನು ಹೇಳುತ್ತಿದ್ದ ಪಾಠ ಎಲ್ಲೋ ನೋಡುತ್ತಿದ್ದ ಪುಟ ಯಾವುದೋ... ಆದರೆ ಅವನು ತಪ್ಪಿಲ್ಲದೆ ಮೊದಲಿಂದ ಕೊನೆಯ ತನಕ ಹೇಳುತ್ತಿದ್ದ.

ಪ್ರಾಥಮಿಕ ಶಾಲೆಯ ಹಂತದಲ್ಲಿ ಓದಿದ್ದು ಅಪ್ಪನ ಮತ್ತು ಮಾಸ್ತರ ಭಯದಿಂದ. ನಮ್ಮೂರವರೇ ಆದ ವೆಂಕಟಶಾಮಯ್ಯ ಮೇಷ್ಟ್ರು... ನಮಗೆ  terror.   ಶಾಲೆ ಆದಮೇಲೆ ನಾವು ಆಟ ಆಡುತ್ತಿದ್ದಾಗ... ಅವರು ಬಂದರೆ ನಾವು ಅಲ್ಲಿಂದ ಜಾಗ ಖಾಲಿ ಮಾಡ್ತಿದ್ವಿ.  ಇನ್ನು ಸಾಯಂಕಾಲ ದೀಪ ಹಚ್ಚಿದ ತಕ್ಷಣ ಓದಲು ಕುಳಿತುಕೊಳ್ಳಬೇಕೆಂಬುದು ಒಂದು ಕಟ್ಟುಪಾಡು. ಆದರೆ ನಾವು ಆಟದಲ್ಲಿ ಮೈ ಮರೆತಿದ್ದಾಗ ಸಮಯವಾದದ್ದು ತಿಳಿಯುತ್ತಿರಲಿಲ್ಲ.... ಅಪ್ಪ ದೂರದಲ್ಲಿ ಕಂಡರೆ ನಾನು ನನ್ನಣ್ಣ ಸತ್ತಿ ಓಡಿಬಂದು, ಕೈ ಕಾಲು ತೊಳೆದಂತೆ ಮಾಡಿ ಹೊಸ್ತಿಲ ಮೇಲೆ ದೀಪವನ್ನು ಇಟ್ಟು  ಆ ಕಡೆ, ಈ ಕಡೆ ಇಬ್ಬರೂ ಕೂತು ಓದುತ್ತಾ ಇರುವಂತೆ ತೋರಿಸಿಕೊಳ್ಳುತ್ತಿದ್ದದ್ದು ಸಾಮಾನ್ಯ ಘಟನೆಯಾಗಿತ್ತು.

ವಿದ್ಯೆ( ಓದು ಬರಹ) ಕಲಿಯುವಿಕೆ ಎಲ್ಲರ ಜೀವನದಲ್ಲೂ ಇರಲೇಬೇಕಾದ ಒಂದು ಸಂಸ್ಕಾರ.... ಆದರೆ ನಿರಕ್ಷರ ಕುಕ್ಷಿಗಳು - ಒಂದು ಅಕ್ಷರವನ್ನೂ ಓದದವರು- ಅನ್ನುವ ಒಂದು ವರ್ಗ ಸಮಾಜದಲ್ಲಿ ಇದೆ. ನನ್ನ ಯೋಚನೆಯ ಪ್ರಕಾರ ಈ ವರ್ಗ ಇಲ್ಲವೇ ಇಲ್ಲ .ಯಾಕೆಂದರೆ ನಾಣ್ಯ ಮತ್ತು ರೂಪಾಯಿ ನೋಟಿನ ಮೇಲೆ ಬರೆದಿರುವುದನ್ನು ನೋಡಿ ಗುರುತಿಸಬಲ್ಲರು... ಹಾಗಾಗಿ ಇವರು ನಿರಕ್ಷರ ಕುಕ್ಷಿಗಳಲ್ಲ.

ನಮ್ಮ ಪ್ರೀತಿಯ ಎಚ್ ಎನ್ (ಡಾಕ್ಟರ್. ಹೆಚ್. ನರಸಿಂಹಯ್ಯ ನ್ಯಾಷನಲ್ ಕಾಲೇಜ್ ) ವಿದ್ಯೆಯ ಬಗ್ಗೆ ಹೇಳುತ್ತಿದ್ದದು... ಬರೀ ಆನರ್ಸ್ ತಗೊಂಡ್ರೆ ಸಾಲ್ದಪ್ಪ.. ಮ್ಯಾನರ್ಸೂ ಇರ್ಬೇಕು...  ನಾನು ಹೆಚ್ ಎನ್ ಅವರ ಪಾಠವನ್ನು ಕೇಳಿದ್ದೇನೆ ಅನ್ನುವುದೇ ಒಂದು ಹೆಮ್ಮೆಯ ವಿಚಾರ.  ಪಿಯುಸಿಯ ಮೊದಲನೇ ಟೆಸ್ಟ್ ನಲ್ಲಿ ಫಿಸಿಕ್ಸ್  ನಲ್ಲಿ ನಾನು ನೂರಕ್ಕೆ 17 ಅಂಕ ತಗೊಂಡಿದ್ದೆ... ಹಾಗಾಗಿ ನನ್ನನ್ನು ಪೂರ್ ಸ್ಟೂಡೆಂಟ್ ಕ್ಲಾಸ್ ಗೆ ಹಾಕಿದ್ದರು.  ಎರಡನೆಯ ಟೆಸ್ಟ್ ನಲ್ಲಿ ಅದನ್ನು ತೊಡೆದು ಹಾಕಿದ್ದೆನಾದರೂ.... ಪಿಯುಸಿ ರಿಸಲ್ಟ್ ಬಂದಾಗ ಎಚ್ ಎನ್  ಕೇಳಿದ್ದು ನನ್ ಪೂರ್ ಸ್ಟೂಡೆಂಟು ಎಷ್ಟು ಮಾರ್ಕ್ಸ್ ತೊಗೊಂಡಿದ್ದಾನೆ ಅಂತ..77 ಅಂದಾಗ ಭೇಷ್ ಅಂದಿದ್ದರು.  ತುಂಬಾ ತಮಾಷೆಯಾಗಿ ಮಾತಾಡೋರು. ಸಾಮಾನ್ಯವಾಗಿ  hence ಅಂದ್ರೆ ಕೋಳಿಗಳು, since ಪಾಪಗಳು ಅಂತ ಹೇಳೋರು.  ವರ್ಷದ ಕೊನೆಯಲ್ಲಿ ಪಾಠ ಮುಗಿದ ಮೇಲೆ ನಮಗೆಲ್ಲ ಸಿಹಿ ಕೊಡಲು ತಂದಿದ್ದರು.   ನಮ್ಮ ಕಣ್ಣೆಲ್ಲ ಅದರ ಮೇಲೆ.. ಬೇಗ ಮುಗ್ಸಿ ಸರ್ ಅಂತ ಕಾಡಿದ್ದಿದೆ... ಅದನ್ನು ಅವರು ತುಂಬಾ ಸಲೀಸಾಗಿ ತೊಗೊಂಡು 10 ನಿಮಿಷ ಏನೇನೋ ಮಾತಾಡಿ ಕೊನೆಗೆ ಸಿಹಿ ಕೊಟ್ಟಿದ್ದು ಒಳ್ಳೆಯ ನೆನಪು.

ರಾಮಮೂರ್ತಿಯವರು ನಮಗೆ ಫಿಸಿಕ್ಸ್ ತಗೊಳ್ತಿದ್ರು.. ಅವರ ಪಾಠ ಮಾಡುವ ಶೈಲಿಯ ತುಣುಕು ಈ ಕೆಳ ಲಿಂಕಿನಲ್ಲಿದೆ ಕೇಳಿ.

Click here  (open with 'files by google')

ಇನ್ನು ಡಿಪ್ಲೊಮ ಕಾಲದ ನಮ್ಮ  Combined study ಲಾಲ್ ಬಾಗ್ ನಲ್ಲಿ....ಅಲ್ಲಿ  ಓದಿನ ಜೊತೆಗೆ ತಿನ್ನುವುದು, ಆಟ ಹಾಗೂ ವಯೋಸಹಜ ಕುತೂಹಲದ ಹರಟೆಗಳೂ ಸಮ ಸಮವಾಗಿರುತ್ತಿದ್ದವು.

ಶಹಬಾದ್ ಕನ್ನಡ  ಗೆಳೆಯರ ಬಳಗದ ಓದುಗರ ವಿಶಿಷ್ಟ  ಬೇಡಿಕೆ....ಪ್ರಜಾಮತ ಪತ್ರಿಕೆಯ  4 ಕಾಪಿ...ಅದರಲ್ಲಿ  ಬರುತ್ತಿದ್ದ  ಗುಪ್ತ ಸಮಾಲೋಚನೆಗೆ ಬಹಳ ಡಿಮಾಂಡ್. ವೈಯಕ್ತಿಕವಾಗಿ ಶಹಾಬಾದ್ ವಾತಾವರಣ ಓದಲು ಅನುಕೂಲವಾಗಿತ್ತು. AMIE ಯ ಯಶಸ್ಸಿನ ಜೊತೆಗೆ BSc ಯ ಸೋಲೂ ಜೊತೆಯಾಗಿತ್ತು...ಕಾರಣಗಳೇನೇ ಇರಲಿ.

ಸೋಲು ನೆನೆದಾಗ...ನನ್ನ ನೆನಪು ಹಳ್ಳಿಯ ದಿನಗಳಿಗೆ ಜಾರಿತು.   ನಾನು ಪಡೆದ ತುಂಬಾ ಕಷ್ಟದ ಶಿಕ್ಷೆ...ಕುಕ್ಕರ ಕೋಳಿ ಅಥವಾ ಪವನ ಬಗ್ಗೋದು. ಮುಂದಕ್ಕೆ ಬಾಗಿ ಎರಡೂ ಕೈಗಳನ್ನು ಕಾಲಿನಕೆಳಗೆ ತೂರಿಸಿ ಕಿವಿಯನ್ನು ಹಿಡಿದು ಅದೇ ಭಂಗಿಯಲ್ಲಿ ಇರಬೇಕು..ನನ್ನ  ಕಣ್ಣು  ಮೂಗು ಬಾಯಿಯಿಂದ ದ್ರವ ಸಿಂಚನ...ಅವಮಾನ , ದುಃಖ ಹಾಗೂ ಕೋಪದ ಮಿಶ್ರ ಭಾವ. ಕ್ಲಾಸಲ್ಲಿ ಒಂದು ಭಾಗಾಕಾರದ ಲೆಕ್ಕ...256 ಅನ್ನು 12 ರಿಂದ ಭಾಗಿಸಿ, ಅಂತ ಕೊಟ್ಟರೆ ಅದು ಬೇರೆಲ್ಲರಿಗೆ ಮಾತ್ರ...ನಾನು 256 ಅನ್ನು 2 ರಿಂದ ಮೊದಲಾಗಿ 20 ರ ತನಕ ಭಾಗಿಸಿ...ಎಲ್ಲವನ್ನೂ  ಆಗಾಗಲೇ ತೋರಿಸಬೇಕು...ಇದು ನನಗೆ ಕಡ್ಡಾಯ. ತಪ್ಪಿದರೆ ಬೈಗುಳ. 

ತಪ್ಪು ಹೇಳಿದವರಿಗೆ ಸರಿಯಾಗಿ ಹೇಳಿದವರಿಂದ ಶಿಕ್ಷೆ. ಇದು ಮೂಗು ಹಿಡಿದು ಕೆನ್ನೆಗೆ ಹೊಡೆಯುವುದು, ಕಾಲು ಕೆಳಗೆ ತೂರುವುದು.. ಹೀಗೆ. ದಡ್ಡರ ಗುಂಪಲ್ಲಿ ಸ್ವಲ್ಪ  ಜಾಣನಾದ ನನಗೆ ಈ ಅವಕಾಶಗಳು ಸಿಗುತ್ತಿದ್ದವು. ಲಕ್ಷೀಪತಿ ನನಗಿಂತ ಎತ್ತರದವನು...ಶಕ್ತಿವಂತ. ಒಂದು ಸಂದರ್ಭದಲ್ಲಿ ನನಗೆ ಶಿಕ್ಷೆ  ಕೊಡುವ ಅವಕಾಶ. ಅವನು ಹೇಳಿದ " ಯೋ ರಂಗಣ್ಣ ಮೆತ್ತಗೆ ಹೊಡಿ...ಇಲ್ಲಾಂದ್ರೇ...." ನನಗದೊಂದು ಎಚ್ಚರಿಕೆ ಆಗಿತ್ತು.  ನನ್ನ  ಮೊದಲ ಏಟು ಜೋರಾಗಿತ್ತೇನೋ...  ಎರಡನೆಯದಕ್ಕೆ ಕೈ ಬದಲಾಯಿಸಿ ಮೂಗನ್ನು ಹಿಡಿದೆ.... ತಕ್ಷಣ ಅವನು ಮೂಗುಸೀದಿದ.. ನನ್ನ ಕೈಯ್ಯೆಲ್ಲಾ.... ಅಸಹ್ಯ.  ಇನ್ನೊಂದು ಸಂದರ್ಭದಲ್ಲಿ ಅವನು ನನ್ನ ಕಾಲ ಕೆಳಗೆ ತೂರಬೇಕು... ಮಧ್ಯದಲ್ಲಿ ಇದ್ದಕ್ಕಿದ್ದಂತೆ ಎದ್ದುನಿಂತ ನಾನು ಹಿಂದಕ್ಕೆ ಪಲ್ಟಿ ಹೊಡೆದು ಬಿದ್ದೆ. ಎಂಥ ಜಾಣ ಲಕ್ಷ್ಮಿಪತಿ ತನಗೆ ಶಿಕ್ಷೆ ಕೊಟ್ಟವರಿಗೆ ಅಲ್ಲಿಯೇ ಉತ್ತರ ಕೊಟ್ಟಿದ್ದ.

ಕನ್ನಡ ಪದ್ಯದ ಪದ ವಿಭಜನೆಯ ಮೋಜು..... ನಳ ಚರಿತ್ರೆಯ ಪದ್ಯ. ಅದರ ಪದ ವಿಭಜನೆ ಹೀಗಿರುತ್ತಿತ್ತು.. ಕೇಳು- ಕೇಳು, ಕುಂತೀತನಯ- ಕುಂತಿ ತನಯನೇ, ನಳನೃಪ- ನಳಮಹಾರಾಜನು, ಬೀಳುಕೊಂಡನು- ಬಿಳ್ಕೊಂಡನು, ಪುರವನು- ಪಟ್ಟಣವನ್ನು , ಅಲ್ಲಿಂ- ಅಲ್ಲಿಂದ,  ಮೇಲೆ ನಡೆದರು- ಮೇಲಕ್ಕೆ ನಡೆದರು , ಪಯಣ ಗತಿಯಲಿ- ಪಯಣದ ದಿಕ್ಕಿನಲ್ಲಿ,  ಹಲವು- ಕೆಲವು, ಯೋಜನವ - ಯೋಜನೆಗಳ. 

ಇದ್ದಕ್ಕಿದ್ದಂತೆ ರಾಮ ಕೋಟಿ ಬರೆಯುವ ಹುಚ್ಚು ತಲೆಗೇರಿತು... ಕಾರ್ಯತತ್ಪರನಾದ ನಾನು ಕನ್ನಡ, english ಹಾಗೂ ಸಂಸ್ಕೃತದಲ್ಲಿ" ಶ್ರೀರಾಮ ಜಯರಾಮ ಜಯ ಜಯ ರಾಮ"... ಬರೆಯಲು ಪ್ರಾರಂಭಮಾಡಿ.. ಅದರ ಲೆಕ್ಕವನ್ನಿಡಲು " ರಾಮ ಕೋಟಿ ಟೋಟಲ್ ಬುಕ್" ಕೂಡ ಬಂದು ಸೇರಿತು.  ಅದು ಹೇಗೆ ನಿಂತಿತೋ ಅ ರಾಮನೇ ಬಲ್ಲ.

ಸಾಮಾನ್ಯವಾಗಿ ವಿದ್ಯುತ್ ದೀಪಗಳಿಲ್ಲದ ಹಳ್ಳಿಯಲ್ಲಿ ಕತ್ತಲಾದ ನಂತರ ದಿನ ಮುಗಿದಂತೆ. ಹಾಗಾಗಿ ಏಳು ಗಂಟೆಗೆಲ್ಲ ನನಗೆ ರಾತ್ರಿ.  ಬೆಂಗಳೂರಿಗೆ ಬಂದಾದ ಮೇಲು ಅದೇ ಅಭ್ಯಾಸ ಸಹಜವಾಗಿ ಮುಂದುವರಿಯುತ್ತಿತ್ತು . ಇಲ್ಲಿ ನಮ್ಮನೆಯಲ್ಲೂ ಕರೆಂಟ್ ಇಲ್ಲದ ಕಾರಣ ಸೀಮೆ ಎಣ್ಣೆ ದೀಪ.. ದೀಪದ ಪಕ್ಕದಲ್ಲಿ ಓದಲು ಕೂತ ಕೆಲವೇ ನಿಮಿಷಗಳಲ್ಲಿ ನನಗೆ ತೂಕಡಿಕೆ ಪ್ರಾರಂಭ. ಅಲ್ಲಿಗೆ ಓದು? " ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಓ ಮಂಕುತಿಮ್ಮ" ಇದು ನನಗೆ ಹೇಳಿ ಬರೆಸಿದಂತಹ ಹಾಡು.  ಅಣ್ಣಂದಿರು ಮನೆಗೆ ಬರುತ್ತಿದ್ದದ್ದು ಸುಮಾರು 8:00 ಗಂಟೆಗೆ... ಅವರು ಬಂದಾಗ ನಿದ್ದೆ ಮಾಡಬಾರದಲ್ಲ.... ಹಾಗಾಗಿ ನನ್ನಕ್ಕ ಗಿರಿಜಾಂಬಾಗೆ ಒಂದು ಆಗ್ರಪೂರ್ವಕ ಮನವಿ - ಮನೆಯ ಬಾಗಿಲು ಹಾಕಿರಬೇಕು. ಅವರು ಬಂದಾಗ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಆಮೇಲೆ ಬಾಗಿಲು ತೆಗೆಯಬೇಕು... ನಾನು ಪುಸ್ತಕವನ್ನು ಹಿಡಿದು ಓದುವ ನಾಟಕ ಮಾಡಬೇಕು.   

ನಿದ್ದೆ ತಡೆಯುವ ಪ್ರಯತ್ನದಲ್ಲಿ ಡೆಸ್ಕನ್ನು ಕಾಲ ಮೇಲೆ ಇಟ್ಟುಕೊಂಡು- ಭಾರ ಇದ್ದರೆ ನಿದ್ರೆ ಬರಲ್ಲ ಎನ್ನುವ ಭಾವನೆ-  ಓದು.. ಆದರೆ ನಿದ್ದೆ ಮಾತ್ರ ಯಾವಾಗಿನಂತೆ , ಭಾರದ ಪಾಡಿಗೆ ಭಾರ.  ಹೀಗೆ ನಿದ್ದೆ ಮಾಡುತ್ತಿರುವಾಗ ಕಿಟ್ಟಣ್ಣ ಒಂದು ಬೊಗಸೆ ನೀರು ತಂದು ನನ್ನ ಮೇಲೆ ಚುಮುಕಿಸಿದನಂತೆ... ನಾನು " ಮಳೆ ಮಳೆ"  ಎಂದು ಕೂಗುತ್ತಾ ಎಚ್ಚರಗೊಂಡೆ... ಮುಖ ಸಪ್ಪಗಾಯಿತು. ಇನ್ನೊಂದು ಬಾರಿ ಎಚ್ಚರವಾದಾಗ ಕೈಯಲ್ಲಿ ಪುಸ್ತಕವೇ ಇಲ್ಲ... ಅದು ಚೂಡಣ್ಣನ ಪಕ್ಕದಲ್ಲಿತ್ತು. ಹೇಗೋ ಮಾಡಿ ತಂದಿದ್ದಾಯಿತು. ಬಹುಶಃ ನಾನು ಅಂಕಗಳಿಗಾಗಲ್ಲ, ನಿದ್ದೆಗಾಗಿ ಬೈಸಿಕೊಂಡದ್ದೆ ಜಾಸ್ತಿ.  

ಇನ್ನು ಬೆಳಗ್ಗೆ ಬೇಗ ಎದ್ದು.. ವೆಂಕಟೇಶ್ವರ ಸುಪ್ರಭಾತ ಹೇಳಿ ಆಮೇಲೆ ಪಾಠ ಓದಿದರೆ ತುಂಬಾ ಒಳ್ಳೆಯದಾಗುತ್ತೆ ಅಂತ ತಿಳಿಸಿದವರು ನನ್ನ ಸ್ನೇಹಿತ ಟಿ. ಆರ್. ಶ್ರೀನಿವಾಸರಾವ್ ಅವರಪ್ಪ. ಹಾಗಾಗಿ ಬೆಳಿಗ್ಗೆ ಆದಷ್ಟು ಬೇಗ ಎದ್ದು ಬೆಳಗಿನ ಕೆಲಸಗಳನ್ನು ಮುಗಿಸಿ, ವೆಂಕಟೇಶ್ವರ ಸುಪ್ರಭಾತ ಹೇಳಿ ಮುಗಿಸಿ  ಪಾಠ ಓದಿದ್ದು ಕಡಿಮೆಯಾದರೂ.. ಅದು ಚೆನ್ನಾಗಿ ತಲೆಯಲ್ಲಿ ಉಳಿಯುತ್ತಿತ್ತು.  ಇಂಥ ಸಮಯದಲ್ಲೇ... ನನ್ನ ನಿದ್ದೆಯ ವಿಚಾರ ಅಪ್ಪನಿಗೆ ದೂರು ಹೋಯಿತು... ರಾತ್ರಿ ಎಂಟು ಗಂಟೆಯ ತನಕ ಓದಬೇಕು ಎಂಬ ಆಜ್ಞೆ ಆಯ್ತು.  ನಾನು ಈ ಬದಲಾದ ಸಮಯದಲ್ಲಿ ಓದುವುದಕ್ಕಿಂತ ಅರ್ಧ ನಿದ್ದೆ ಅರ್ಧ ಸಮಯ ಗಡಿಯಾರದ ಕಡೆ ನೋಡುವುದರಲ್ಲಿ ಕಳೆಯುತ್ತಿದ್ದೆ. 

ಈ ಮಧ್ಯೆ ನಿದ್ದೆಯ ಪರಿಹಾರಕ್ಕಾಗಿ.. ....ಅದು ಯಾಕೋ ಕಾಣೆ ,  ನಮ್ಮಪ್ಪ ನಮ್ಮ ನೆಂಟರಾದ ನಗರ್ತರ ಪೇಟೆ ವೆಂಕಟರಾಮು ಅವರ Chrono opticals ನಲ್ಲಿ ಕನ್ನಡಕ ಕೊಡಿಸಿದರು. ಹೆಮ್ಮೆಯೇನೋ ಇತ್ತು ಆದರೆ... ಗವಿಪುರದ ಒಬ್ಬ ಹುಡುಗ ಶಿವರಾಮ ನನಗೆ four eyeಸ  ಅಂತ ಕೀಟಲೆ ಮಾಡಿದಾಗ ನೋವಾಗಿತ್ತು.

ಹೈಸ್ಕೂಲಲ್ಲಿ ಓದುವಾಗ ನಮ್ಮದೇ ಒಂದು ಗುಂಪಿಗೆ ನಾನು ಪಾಠ ಹೇಳಿಕೊಡುತ್ತಿದ್ದೆ.. ಹರಿಹರ ಗುಡ್ಡದ ಈಗಿನ ದೇವಸ್ಥಾನ ಆಗ ಪಾಳು ಬಿದ್ದಿತ್ತು... ದೇವಸ್ಥಾನದ ಒಂದು ಗೂಡಿನಲ್ಲಿ ಕೂತು ಗೋಡೆಯ ಮೇಲೆ ಬರೆದು ಪಾಠ ಮಾಡುತ್ತಿದೆ. H V ರಂಗ ಕಣ್ಣು ಬಿಟ್ಟುಕೊಂಡು ನಿದ್ದೆ ಮಾಡುವವ..ಕೇಳಿದರೆ ಪಾಠದ ಕೊನೆಯ ಎರಡು ಶಬ್ದಗಳನ್ನು ಹೇಳಿ ತನಗೆ ಗೊತ್ತು ಎಂದು ವಾದಿಸುತ್ತಿದ್ದ.  

ಚಿಕ್ಕಬಳ್ಳಾಪುರದ ಮಾವನ ಮನೆಯಲ್ಲಿ typewriter ಇತ್ತು ಅದರಲ್ಲಿ ಟೈಪ್ ಮಾಡುವ ಆಸೆ... ಕೊನೆಗೂ ಅದಕ್ಕೆ ಒಪ್ಪಿಗೆ ಸಿಕ್ಕಿ.. ನಾನು ಬಯಾಲಜಿಯ ಕೆಲವು ಹೆಸರುಗಳನ್ನು ಇಂಗ್ಲೀಷನಲ್ಲಿ ಟೈಪ್ ಮಾಡಿ ನನ್ನ ಪುಸ್ತಕದಲ್ಲಿ ಅಂಟಿಸಿದ್ದು ಒಂದು ಸಾಹಸ.

ಇಂದಿಗೂ ಪುಸ್ತಕ ಓದುವುದು ನನ್ನ ಪ್ರಿಯವಾದ ಹವ್ಯಾಸ... ಅದರ ಜೊತೆಗೆ ಯಾವಾಗಲೂ ಓದಲು ಶುರು ಮಾಡಿದ ಕೆಲವೇ ಕ್ಷಣಗಳಲ್ಲಿ ನಿದ್ರಾ ದೇವಿಯ ಆಲಿಂಗನ ಹಾಗೇ ಇದೆ.  ನನ್ನ ಕೆಲ ಪರಿಚಯದವರು.. ರಾತ್ರಿ 8:00 ಆದರೆ ನನ್ನ ಸ್ವಿಚ್ ಆಫ್ ಆಗಿದೆ ಅಂತ ಕೀಟಲೆ ಮಾಡುವವರಿದ್ದಾರೆ.  ಕೆಲವರಂತೂ ರಾತ್ರಿ 8 ಕ್ಕೆ ಫೋನ್ ಮಾಡಿ ಎದ್ದಿದ್ದೀರಾ...ಬರಬಹುದಾ? ಎಂದು ತಮಾಷೆ ಮಾಡುತ್ತಾರೆ.  

ಏನು ಮಾಡಲಿ, ನಿದ್ದೆ ನನಗೆ ಆಪ್ತ ಮಿತ್ರ, ಎಂಟು ಘಂಟೆ ಆಯ್ತು ... ಮಿತ್ರ ಕರೀತಾ ಇದಾನೆ.... ಬರ್ತೀನಿ ನಮಸ್ಕಾರ...

Comments

  1. ಹಳೆ ನೆನಪುಗಳು ಯಾವಾಗಲೂ ಮಧುರ .ಸೂಪರ್ ನಿಮ್ಮ ಕನ್ನಡ ಭಾಷೆ.

    ReplyDelete
  2. ತುಂಬ ತುಂಬ ಓಳ್ಳೆಯ ಅಭಿಪ್ರಾಯ ಸಂಗ್ರಹ. ಸಹಜ ಉತ್ತಮ ಅನುಭವ. ಶಬ್ದ ಜೋಡಣೆ ಶ್ಲಾಘನೀಯ. ಅಭಿಮಾನ ಅಭಿನಂದನೆ

    ReplyDelete
  3. ಅದೆಷ್ಟು ಬಾಲ್ಯದ ನೆನೆಪುಗಳನ್ನ ಅಡಗಿಸಿಟ್ಟಿದ್ದೀರಾ? ಒಂದೊಂದಾಗಿ ಬರಹದ ರೂಪದಲ್ಲಿ ಬರುತ್ತಿರಲಿ

    ReplyDelete
  4. 80-90 ರ ದಶಕದ ಮದ್ಯಮ ವರ್ಗದ ಗಂಡು ಮಕ್ಕಳ ಓದಿನ ವೈಖರಿಯನ್ನು ನಿಮ್ಮ ಅನುಭವದ ಮೂಲಕ ಸರಳವಾಗಿ ಬರೆದು ನಾವು ಕೂಡ ಒಮ್ಮೆ ಹಿಂತಿರುಗಿ ನಮ್ಮ ಬಾಲ್ಯದ ಓದಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದೀರಿ.... ಧನ್ಯವಾದಗಳು
    ಬಾಬು

    ReplyDelete
  5. ಬಾಲ್ಯದ ನೆನಪುಗಳು ಎಂದೆಂದಿಗುಾ ಸವಿ.
    ಚೆನ್ನಾಗಿತ್ತು ನೆನಪಿನ ಬುತ್ತಿ

    ReplyDelete
  6. Superb blog uncle u are nice writer thanks for making me remember school days

    ReplyDelete
  7. ನಿಮ್ಮ ನಿದ್ದೆ ಪುರಾಣ ಪ್ರಸಂಗ ಓದಿದೆ. ಇಷ್ಟೊಂದು ನಿದ್ದೆ ಮಾಡ್ತಿರಾ ಅಂತ ಗೊತ್ತಿರಲಿಲ್ಲ, ನಿಮ್ಮ ಬಾಲ್ಯದ ನಿನಪಿನ ಬುತ್ತಿ ಚೆನ್ನಾಗಿದೆ.

    ಎಸ್.ಜೆ.ರತ್ನಪ್ರಭಾ

    ReplyDelete
  8. ಶ್ರೀನಿವಾಸಮೂರ್ತಿ23 August 2023 at 07:44

    ಅಂದಿನಂದಿನ ಪ್ರಸಂಗಗಳ ಯಥಾವತ್ ಪ್ರಸ್ತುತಿ.

    ReplyDelete
  9. ಬಾಲ್ಯದ ಆಟ-ಪಾಠ, ಶಾಲೆಯ ದಿನಗಳ ಸವಿನೆನಪು (ಆಗ ಕಹಿಯಾಗಿದ್ದರೂ), ಈಗ ನೆನೆಸಿಕೊಂಡಾಗ ಅದು ಸಾಮಾನ್ಯವಾಗಿ ಎಲ್ಲರ ಜೀವನದ ಸುವರ್ಣಯುಗ. ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ.

    ತಂದೆಯ ಶಿಸ್ತು, ಮೇಷ್ಟರಿಂದ ಶಿಕ್ಷೆ,, ನಿದ್ದೆಯ ಬಗ್ಗೆ ಹಾಸ್ಯ ಮಿಶ್ರಿತ ನೈಜಚಿತ್ರಣ...ಹೀಗೆ ಎಲ್ಲವನ್ನೂ ಸೊಗಸಾಗಿ ಮೂಡಿಸಿದ್ದೀರಾ?

    ನೀವು ಹೀಗೆ ಬರೆಯುತ್ತಾ (ರಾತ್ರಿ ೮ ಘಂಟದೆಗೆ ಮೊದಲು) ಬರಿದಾಗಿ,‌ ನಾವುಗಳು ಓದುತ್ತಾ ಬೆರಗಾಗುತ್ತೇವೆ.

    ವಂದನೆಗಳು.

    ನಿಮ್ಮ ಮುಂದಿನ ಬರಹದ ನಿರೀಕ್ಷೆಯಲ್ಲಿ!

    ಗುರುಪ್ರಸನ್ನ,
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ