ಚಂದ್ರಯಾನ - ಮೂರು
ಜಯಭೇರಿ ಬಾರಿಸಿತು ಚಂದ್ರಯಾನ ಮೂರು ಭಾರತಾಂಬೆಯ ಕಿರೀಟದಿ ಗರಿಗಳು ನೂರಾರು
ಕೆಲ ದಿನಗಳಿಂದ ಚಂದ್ರಯಾನ - 3, ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್, ಚಂದ್ರಯಾನ ಯಶಸ್ಸಿಗಾಗಿ ಮಾಡಿದ ಹವನ ಹೋಮಗಳು, ಪೂಜೆ ಪ್ರಾರ್ಥನೆಗಳು ಇವೆಲ್ಲ ಸುದ್ದಿಯ ಭಾಗಗಳಾಗಿದ್ದವು. ಇದರ ಜೊತೆಗೆ, ISRO ದ ಕೆಲವರು ಚಂದ್ರಯಾನ -3 ರ ಯಶಸ್ಸಿಗಾಗಿ ತಿರುಪತಿಯಲ್ಲಿ ಮಾಡಿದ ಪೂಜೆಗಾಗಿ ಅವಹೇಳನಕಾರಿ ಮಾತುಗಳನ್ನು ಆಡಿದ ಬುದ್ಧಿಜೀವಿಗಳ ಸುದ್ದಿಯು ಒಂದು ಭಾಗವಾಗಿತ್ತು. ಇರಲಿ ಬಿಡಿ... ಊರಿಗೊಂದು ದಾರಿಯಾದರೆ ಈ ಎಡವಟ್ಟು ಜೀವಿಗಳಿಗೇ ಒಂದು ದಾರಿ... ಬುದ್ಧಿಜೀವಿಗಳು ವಿಘ್ನ ಸಂತೋಷಿಗಳಾಗುತ್ತಿದ್ದಾರೆ, ಎಲ್ಲದರಲ್ಲೂ ತಪ್ಪು ಕಾಣುವುದು, ಕೊಂಕು ಮಾತನಾಡುವುದು ಅವರ ಜಾಯಮಾನ.
ನಿನ್ನೆ ಬುಧವಾರವಂತೂ ಭಾರತದ ಮೂಲೆ ಮೂಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಬಹು ಜನರ ಹೃದಯದಲ್ಲಿ ಇದ್ದ ಆಶಯ - ಚಂದ್ರಯಾನ-3 ಯಶಸ್ವಿಯಾಗಲಿ ಎಂಬುದು- ಅದು ಪ್ರಾರ್ಥನೆಯೂ ಸಹ. ಆ ಪ್ರಾರ್ಥನೆ ಫಲಿಸಿದ ಕ್ಷಣ ನಿಜಕ್ಕೂ ಅವಿಸ್ಮರಣೀಯ.
TV ಯ ಮುಂದೆ ಕುಳಿತು ನೋಡುತ್ತಿದ್ದ ನನಗೆ, ವಿಕ್ರಮ.. ಚಂದ್ರನ ಮೇಲೆ ತನ್ನ ಕಾಲೂರಿದ ಆ ಕ್ಷಣ ರೋಮಾಂಚನವಾಯಿತು. ಇದು ಕೋಟ್ಯಾಂತರ ಜನರ ಅನುಭವವೂ ಆಗಿರಬಹುದು ಎಂದು ನನ್ನ ನಂಬಿಕೆ. ನನ್ನಂತೆ ಎಲ್ಲರ ಹೃದಯವು ತುಂಬಿ ಬಂದಿರತ್ತೆ.
ISRO ದ ಸಿಬ್ಬಂದಿ ವರ್ಗದವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು.
ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ.. ಚಂದಮಾಮ ದೂರ್ ಕೆ .. ಎಂಬ ಹಾಡಿನ ಇನ್ನೊಂದು ಸಾಲು ಕೆಲವೇ ದಿನಗಳಲ್ಲಿ ಚಂದಮಾಮ ಟೂರ್(tour) ಕೆ ಆಗಲಿದೆ.
ಇಷ್ಟು ದಿನ ಚಂದಮಾಮ ದೂರದವನಾಗಿದ್ದ. ಈಗ ಅವನನ್ನು ತುಂಬ ಹತ್ತಿರದವನಾಗಿ ಮಾಡುವ ದಾರಿ ಸುಗಮವಾಗಿದೆ. ಈ ಯಾನವನ್ನು ಯಶಸ್ಸುಗೊಳಿಸಿದ ಹಾಗೂ ವಿಶ್ವದ ಮೊದಲಿಗರಾಗಿ ಚಂದ್ರನ ದಕ್ಷಿಣ ಧೃವದಲ್ಲಿ ಭಾರತದ ಧ್ವಜ ಹಾರಿಸಿದ, ISRO ಸಿಬ್ಬಂದಿಯ ಎಲ್ಲರಿಗೂ ನನ್ನ ವೈಯುಕ್ತಿಕ ಹಾಗೂ ಸಂತೋಷಪಟ್ಟ ದೇಶದ ಜನತೆಯ ಪರವಾಗಿ ವಂದನೆಗಳು ಹಾಗೂ ಅಭಿನಂದನೆಗಳು.
ಇನ್ನು ನಮ್ಮ ಚಿಕ್ಕಂದಿನ ಜ್ಞಾನದ ಮಿತಿಯಲ್ಲಿ , ಚಂದ್ರ ಭೂಮಿಯ ಸುತ್ತ ತಿರುಗುತ್ತಿರುವ ಉಪಗ್ರಹ. ಸೂರ್ಯನ ಬೆಳಕಿನ ಕಿರಣಗಳ ಪ್ರತಿಫಲನದ ಕಾರಣದಿಂದ ಚಂದ್ರ ನಮಗೆ ಕಾಣುತ್ತಾನೆ... ಈ ನಿಟ್ಟಿನಲ್ಲಿ ಆಗೋದೇ ಅಮಾವಾಸ್ಯೆ ಹಾಗೂ ಪೂರ್ಣಿಮೆ. ಭೂಮಿ ಚಂದ್ರನ ಹಾಗೂ ಸೂರ್ಯನ ಮಧ್ಯ ಒಂದೇ ರೇಖೆಯಲ್ಲಿ ಇದ್ದಾಗ, ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರನ ಚಲನವಲನದ ಮೇಲೆ ರೂಪುಗೊಂಡ ದಿನಗಳ ನಿರ್ಧಾರ ಚಾಂದ್ರಮಾನ ಪಂಚಾಂಗದ ರಚನೆ. ಚಾಂದ್ರಮಾನ ಯುಗಾದಿ ವರ್ಷದ ಮೊದಲ ದಿನ.
ಇನ್ನು ಮಕ್ಕಳಿಗಂತೂ ಚಂದಮಾಮ ಒಂದು ವಿಶೇಷ ಆಕರ್ಷಣೆ. ಚಂದಕ್ಕಿ ಮಾಮನನ್ನು ತೋರಿಸುತ್ತಾ , ಬಾ..ಬಾ..ಎಂದು ಕರೆಯುತ್ತಾ, ಮಕ್ಕಳಿಗೆ ಊಟ ಮಾಡಿಸುವ ತಾಯಂದಿರು ಈಗಲೂ ಇದ್ದಾರೆ. ಚಂದಮಾಮ ಚಕ್ಕುಲಿ ಮಾಮ ಮುತ್ತಿನ ಕುಡಿಕೆ ಕೊಡು ಮಾಮ ಕೊಡು ಮಾಮ, ... ಚಂದಿರನೇತಕೆ ಓಡುವನಮ್ಮ ಮೋಡಕ್ಕೆ ಹೆದರಿದನೆ... ಇವು ನಮ್ಮ ಶಿಶು ಗೀತೆಗಳು. ಚಿಕ್ಕಂದಿನಲ್ಲಿ ಹುಣ್ಣಿಮೆಯ ದಿನ ಓಡುತ್ತಾ ಚಂದ್ರನನ್ನು ನೋಡಿ ನಮ್ಮ ಜೊತೆ ಅವನೂ ಓಡುತ್ತಿದ್ದಾನೆ ಎಂಬ ಖುಷಿ ಆ ವಯಸ್ಸಿಗೆ ಸಹಜ.
ರಾಮಾಯಣದ ಶ್ರೀರಾಮ, ಚಂದಿರನು ತನಗೆ ಬೇಕೆಂದು ಹಠಮಾಡಿದಾಗ, ಚಂದ್ರನ ಬಿಂಬವನ್ನು ತೋರಿಸಿ ಸಮಾಧಾನಪಡಿಸಿದ್ದು, ಹಾಗೂ ಚಂದ್ರನು ತನ್ನನ್ನು ನೋಡಿ ನಕ್ಕನೆಂದು ಕೋಪಗೊಂಡ ಗಣೇಶನ ಶಾಪ... ಇವು ನಾವು ಚಿಕ್ಕಂದಿನಲ್ಲಿ ಕೇಳಿದ ಚಂದ್ರ ಸಂಬಂಧಿ ಕಥೆಗಳು. ಚೌತಿಯ ಚಂದ್ರನನ್ನು ನೋಡಿದರೆ ಅಪವಾದ ಬರುತ್ತದೆ ಎಂಬುದು ಇನ್ನೊಂದು ಕಥೆ... ಗಣೇಶ ಚೌತಿಯ ದಿನ ಚಂದ್ರನನ್ನು ನೋಡಬಾರದು ಎಂದು ನಿರ್ಧಾರ ಮಾಡಿದರೂ, ಅಂದು ಹೇಗೋ ಚಂದ್ರನನ್ನು ನೋಡಿದ ದಿನಗಳು ಬಹಳವಿದೆ.
ತುಂಬಾ ಖುಷಿಪಡುತ್ತಿದ್ದ.. ಬೆಳದಿಂಗಳು ಊಟ.. ಅದರಲ್ಲೂ ಅಮ್ಮನ ಕೈ ತುತ್ತು ಇಂದಿಗೂ ಮನಸ್ಸಿಗೆ ಮುದ ಕೊಡುತ್ತದೆ.
ಇನ್ನು ನಾವು ಚಾರಣಕ್ಕೆ ಹೋದಾಗಿನ ಹುಣ್ಣಿಮೆಯ ಅನುಭವ... ಕಾಡಿನ ಮಧ್ಯದಲ್ಲಿ ಎಲ್ಲೋ ಒಂದು ಜಾಗದಲ್ಲಿ ನಮ್ಮ ವಾಸ್ತವ್ಯ, ಬೆಳ್ಳನ ಬೆಳದಿಂಗಳು, ತಂಗಾಳಿ, ಸುತ್ತಲೂ ಕೀಟಗಳ ಗುಂಯ್ಗುಡುವ ಧ್ವನಿ.... ಅದು ಬಿಟ್ಟರೆ ನೀರವ ಮೌನ.... ಆ ಕ್ಷಣಗಳನ್ನು ನಮ್ಮ ಚಾರಣದ ಗುಂಪು ಅನುಭವಿಸಿದ್ದಿದೆ... ಕೈತುತ್ತಿನ ಊಟವನ್ನು ಸವಿದಿದ್ದಿದೆ.
ಚಾಂದ್ರಮಾನ ಪದ್ಧತಿಯನ್ನು ಅನುಸರಿಸುವ ಜನರಿಗೆ ಎಲ್ಲ ಹಬ್ಬಗಳು ಚಂದ್ರನ ಸ್ಥಾನದ ಅವಲಂಬನೆಗಳು. ಭೀಮನ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ, ಗುರುಪೂರ್ಣಿಮೆ, ಕಾರು ಹುಣ್ಣಿಮೆ, ಹೀಗೆ. ಇನ್ನು ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆ, ಪ್ರಸಾದದ ರುಚಿ.. ಸವಿದವರೇ ಬಲ್ಲರು. ಕಾಮನ ಹುಣ್ಣಿಮೆ ನಮಗೆಲ್ಲ ವಿಶೇಷ ಹಬ್ಬ... ಸುಲಭವಾಗಿ ಬೆಂಕಿ ಹತ್ತಿ ಸುಡುವ ಯಾವ ವಸ್ತುವನ್ನಾದರೂ, ಹೇಗಾದರೂ ಮಾಡಿ ( ಕದ್ದೂ ಸಹ) ತಂದು ಕಾಮನನ್ನು ಸುಟ್ಟು.. ಬಾಯಿ ಬಡೆದುಕೊಂಡು..' ಕಾಮಣ್ಣ ಮಕ್ಕಳು, ಕಳ್ಳ ಸೂಳೇ ಮಕ್ಕಳು' ಎಂದು ಹಾಡಿ ಸಂಭ್ರಮಿಸಿದವರು ನಾವು.
'ಚಂದಮಾಮ' ವರ್ಣರಂಚಿತ ಪತ್ರಿಕೆಯನ್ನು , ಪ್ರತಿ ತಿಂಗಳೂ ಕಾತುರದಿಂದ ಕಾದು...ಅದರ ಚಿತ್ರಗಳು ಹಾಗೂ ಕಥೆಗಳನ್ನು ಓದಿ ಬೆಳೆದವರು. ಇಂದಿಗೂ ಅದರ ಆಕರ್ಷಣೆ ಕಡಿಮೆಯಾಗಿಲ್ಲ ಎಂದು ಹೇಳುವ ನನ್ನಂತಹ ಜನರು ಬಹಳವೇ ಇದ್ದಾರೆ. ಚಂದ್ರನ ಮೇಲೆ ಮೊಲ ಇದೆ, ಎಂದು ನಂಬಿದವರು ನಾವು.
ಕಥೆ ಕಾವ್ಯಗಳಲ್ಲಿ ಚಂದ್ರನ ಪಾತ್ರ ಅತಿ ಮುಖ್ಯವಾದದ್ದು.. ಹೆಣ್ಣನ್ನು ವರ್ಣಿಸುವಾಗ ಚಂದ್ರಮುಖಿ ಎಂದು ಹೇಳಿದರು, ಪೂರ್ಣ ಚಂದ್ರನ ಮೇಲೆ ಕಲೆ ಇದೆ ಎಂದು ತಿಳಿದ ಮೇಲೂ...ನಾನೂ ಮುಖದ ಮೇಲೆ ಜಾಸ್ತಿ ಮೊಡವೆ ಇದ್ದ ಹುಡುಗಿಯನ್ನು ಚಂದ್ರಮುಖಿ ಎಂದು ಸೂಚ್ಯವಾಗಿ ಹೇಳಿದ್ದುಂಟು ( ವಯೋಸಹಜ ಕವಿ ಹೃದಯದಿಂದ ಬಂದದ್ದು).
ಅದರಲ್ಲೂ ಪ್ರೇಮಿಗಳ ಉತ್ಕಟ ಪ್ರೇಮ ಪ್ರದರ್ಶನಕ್ಕೆ ಚಂದ್ರ ಸಾಕ್ಷಿಯಾಗಿರುತ್ತಾನೆ. ಅದೆಷ್ಟು ಭಾಷೆಯ ಅದೆಷ್ಟು ಹಾಡುಗಳು ಚಂದ್ರನ ಮೇಲೆ....
ಜೀವನದ ಏರಿಳಿತಗಳನ್ನು ಸಹ ಚಂದ್ರ ತನ್ನ ಅಮಾವಾಸ್ಯೆಯಿಂದ ಹುಣ್ಣಿಮೆಯ ಮತ್ತು ಅಲ್ಲಿಂದ ಅಮಾವಾಸ್ಯೆಯ ದಿನಗಳಲ್ಲಿ ತನ್ನ ರೂಪದ ಮೂಲಕ ಬಿಂಬಿಸಿದ್ದಾನೆ ಅಲ್ಲವೇ?
TV ಯ ಮೂಲಕ ಚಂದ್ರನ ಮೇಲ್ಮೆಯನ್ನು ಹತ್ತಿರದಿಂದ ನೋಡುವ ಅವಕಾಶ ನಮಗೆ ಸಿಕ್ಕಿದೆ.. ಪ್ರಾಯಶಃ ಮುಂದಿನ ಪೀಳಿಗೆಗೆ ಚಂದ್ರನನ್ನು ಮೆಟ್ಟಿ, ಮುಟ್ಟಿ ನೋಡುವ ಭಾಗ್ಯ ಸಿಗುತ್ತದೆ. ಈ ಸಮಯದಲ್ಲಿ ಚಂದ್ರನನ್ನು ಮೊದಲು ಮೆಟ್ಟಿದ ನೀಲ್ ಆರ್ಮ್ ಸ್ಟ್ರಾಂಗ್ ನೆನಪಾಗುತ್ತಾರೆ.
ಚಂದ್ರಯಾನ ಮೂರರ ವಿಷಯಗಳು ಕಿವಿಗೆ ಬೀಳುತ್ತಿದ್ದರೂ ಅದು ನನ್ನ ಲೇಖನಕ್ಕೆ ಸ್ಫೂರ್ತಿ ಆಗುತ್ತದೆ ಎಂದು ಮನಸ್ಸಿಗೆ ಬಂದಿರಲಿಲ್ಲ.. ವಾಸ್ತವವಾಗಿ ನಾಗರಪಂಚಮಿಯ ವಿಷಯವಾಗಿ ಲೇಖನ ಬರೆಯುವ ಮನಸ್ಸಿತ್ತು... ನೆನ್ನೆಯ ಜಯಭೇರಿಯ ನಂತರ ವಿಷಯ ತಕ್ಷಣವೇ ನಿರ್ಧಾರವಾಯಿತು. ಹಾಗಾಗಿ ಈ ಲೇಖನ ISRO ಸಿಬ್ಬಂದಿ ಹಾಗೂ architect's of indian science and technology ಯ ಎಲ್ಲಾ ಅಧ್ವರ್ಯು ಗಳಿಗೆ ಅರ್ಪಣೆ.
ಕಡೆಯದಾಗಿ ಚಂದ್ರನ ಮೇಲೆ ಇಳಿದ ಕನ್ನಡದ ನಮ್ಮ ಅಚ್ಚುಮೆಚ್ಚಿನ ನರಸಿಂಹರಾಜು ಹಾಗೂ ಉಮೇಶ್ ಅವರಿರುವ ಒಂದು ಚಿತ್ರದ ತುಣುಕು ನಿಮಗಾಗಿ...ನೋಡಿ...
ಇದನ್ನು ನನಗೆ ಕಳಿಸಿದವರು ನನ್ನ ಷಡ್ಡಕ ಮಧುಸೂಧನ್.... ಆನಂದಿಸಿದ್ದೀರಿ ಎಂದು ನಂಬಲೇ..
ನಮಸ್ಕಾರ ...🙏🙏
ವಿನಂತಿ: ಸಾಧ್ಯವಾದರೆ ನಿಮ್ಮಇತರ ಗುಂಪಿನಲ್ಲಿ ಶೇರ್ ಮಾಡಿ ( ಇನ್ನೂ ಬಹಳ ನೋಡುಗರು ಸಿಗಲೀ ಎಂಬ ದುರಾಸೆ?)
ಸಾಂದರ್ಭಿಕ ಲೇಖನ. ಉತ್ತಮ ನಿರೂಪಣೆ.
ReplyDeleteಈ ವಿಜ್ಞಾನ ಯುಗದಲ್ಲಿ ಚಂದ್ರ ನಮಗೆ ಕೈಗೆಟಕುವ ಗ್ರಹ ಆದರೂ ಭಾರತೀಯರಿಗೆ ಚಂದ್ರ ಒಂದು ನಿಗೂಢ, ವಿಸ್ಮಯ, ಸುಂದರ ಹಾಗೂ ಅವಶ್ಯಕ.... ಚಂದಾಮಾಮನ ನೋಡುತ್ತ ತುತ್ತು ಹನಿಮೂನ್ ನಿಂದ ಮುತ್ತು
ReplyDeleteನೂರಾರು ಕಥೆಗಳು, ಸಾವಿರಾರು ಹಾಡುಗಳು
ನೀವು ಪ್ರಸ್ತಾಪಿಸಿದ ಎಲ್ಲ ವಿಷಯಗಳು ವಾಸ್ತವಿಕ ಮತ್ತು ಅರ್ಥ ಪೂರ್ಣ... ಇಂದಿನ ಪ್ರಯೋಗದಿಂದ ಮುಂದಿನ ಪೀಳಿಗೆ ಚಂದ್ರ ನನ್ನು ಕೇವಲ ಒಂದು ಗ್ರಹದಂತೆ ಕಂಡು ಈಗ ಇದ್ದ ಕುತೂಹಲ ಕಳೆದು ಹೋಗ ಬಹುದು..
ಇರಲಿ ಬಿಡಿ, ಇಸ್ರೊ ವಿಜ್ಞಾನಿಗಳ ತಂಡ ಇನ್ನೂ ಹೆಚ್ಚಿನ ಸಾಧನೆ ಮಾಡಲಿ.
ಧನ್ಯವಾದಗಳು
ಬಾಬು
Sooperb chikkappa
ReplyDeleteಸಮಯೋಚಿತ ಲೇಖನ ' ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ ' ಎನ್ನುವ ಗೀತೆಯ ಸಾಲಿನಂತೆ -+ ಚಂದ್ರನ ಬಗ್ಗೆ ಚಂದ್ರಯಾನದ ಲೇಖನ ಸಾಂದರ್ಭಿಕ.
ReplyDeleteನಾವೂ ಸಹ ಕುತೂಹಲದಿಂದ ವೀಕ್ಷಿಸಿದ ಇತ್ತೀಚಿನ ದಿನಗಳಲ್ಲಿ ದೂರದರ್ಶನದ ಒಂದು ಒಳ್ಳೆಯ ಪ್ರಸಾರ ಎಂದು ನನ್ನ ಅನಿಸಿಕೆ.🇮🇳🇮🇳🙏