ಪ್ರತಿಭಾ ಪುರಸ್ಕಾರ

 ಪ್ರತಿಭಾ  ಪುರಸ್ಕಾರ


ಹೋದ ಭಾನುವಾರ, ಗವಿಪುರದ ಹರಿ ಹರೇಶ್ವರನ ಸನ್ನಿಧಿಯಲ್ಲಿ, ತಿಮ್ಮೇಶ ಪ್ರಭು ಉದ್ಯಾನವನದಲ್ಲಿ, ಸ್ನೇಹ ರಂಗದ ಆಶ್ರಯದಲ್ಲಿ 12ನೇ ವರ್ಷದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದೆವು.. ಸುಮಾರು ನೂರು ಜನ ಮಕ್ಕಳಿಗೆ - 10ನೇ ತರಗತಿ ಹಾಗೂ ಪಿಯು ತರಗತಿಯಲ್ಲಿ ಹೆಚ್ಚು ಅಂಕ ತೆಗೆದ, ಜೊತೆಗೆ ಕನ್ನಡ ಮತ್ತು ಸಂಸ್ಕೃತದಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಪುರಸ್ಕರಿಸಲಾಯಿತು. ಮಕ್ಕಳು, ಅವರ ಹೆತ್ತವರು, ಕೆಲ ಉಪಾಧ್ಯಾಯರುಗಳು,ಹಿತೈಷಿಗಳು ಪಟ್ಟ ಸಂಭ್ರಮ ಹೇಳತೀರದು... ಅವರವರ ಮಕ್ಕಳು ಗೌರವಿಸಲ್ಪಟ್ಟಾಗ ಅವರು ಹಿಗ್ಗುತ್ತಿದ್ದದ್ದನ್ನು ನೋಡಲು ಸಂತಸವಾಗುತಿತ್ತು.... ಸಹಜವಲ್ಲವೇ ನಮ್ಮ ಮಕ್ಕಳನ್ನು ಯಾರಾದರೂ ಮೆಚ್ಚಿದರೆ, ಗೌರವಿಸಿದರೆ ನಮಗೆ ಹೆಮ್ಮೆಯೇ.

ಸ್ನೇಹ ರಂಗ ಶುರುವಾಗಿದ್ದು ಒಂದು ಅನೌಪಚಾರಿಕ ಗುಂಪಿನಂತೆ.. ಇದೀಗ ಅದು ಒಂದು ಸಂಸ್ಥೆಯಾಗಿ ರೂಪು ಗೊಳ್ಳುತ್ತಿದೆ.  ಅಂದಿಗೆ ಸಮಾನ ಮನಸ್ಕರು ಒಂದಷ್ಟು ಜನ ಸೇರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶುರುಮಾಡಿದೆವು. ಮಂಜು (ಎ. ಮಂಜುನಾಥ) ಈ ಕಾರ್ಯಕ್ರಮಕ್ಕೆ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡವನು, ಹಾಗೂ ಸಾಕಷ್ಟು ಜನರ ಸಹಕಾರದೊಂದಿಗೆ,  ಇಂದಿನವರೆಗೂ ಅದು ನಡೆದು ಬರುತ್ತಿದೆ. ಸುಮಾರು 15 ಮಕ್ಕಳನ್ನು ಗೌರವಿಸುವ ಗುರಿಯೊಂದಿಗೆ ಶುರುವಾದ ಕಾರ್ಯಕ್ರಮ ಇಂದು ಶತಕವನ್ನು ಮುಟ್ಟಿದೆ ಅನ್ನುವುದೇ ಹೆಗ್ಗಳಿಕೆ.  

ಸ್ನೇಹ ರಂಗದಲ್ಲಿ ದೈನಂದಿನ ಹರಟೆ, ಸೋಮವಾರದ ಭಜನೆ, ತಿಂಗಳ ಎರಡನೆಯ ಮಂಗಳವಾರ ಕಾಫಿ ಡೇ, ವರ್ಷಕ್ಕೊಂದು ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ರಾಜ್ಯೋತ್ಸವ, ಇವು ಅನುಚಾನವಾಗಿ ನಡೆದುಕೊಂಡು ಬರುತ್ತಿದೆ...

ಯಾವುದೇ ಪುರಸ್ಕಾರಗಳು, ಅದನ್ನು ಪಡೆದ ವ್ಯಕ್ತಿಗೆ ಒಂದಷ್ಟು ಉತ್ಸಾಹ ತುಂಬುತ್ತದೆ ಮತ್ತು ಇನ್ನಷ್ಟು ಅದೇ ದಿಕ್ಕಿನಲ್ಲಿ ಮುಂದುವರಿಯಲು ಪ್ರೇರೇಪಿಸುತ್ತದೆ ಎನ್ನುವುದು ನನ್ನ ಅನುಭವ.  ಪುರಸ್ಕಾರದ ಭಾಗವಾಗಿ ಸಿಗುವ ಪುಸ್ತಕಗಳು, ಹಾಗೂ ಸ್ವಲ್ಪ ಹಣ ಕೆಲ ಮಕ್ಕಳಿಗಾದರೂ ಸಹಾಯವಾಗುತ್ತದೆ- ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದುವ ಬಡತನದ ಹಿನ್ನೆಲೆಯಲ್ಲಿದ್ದು ಸಾಧನೆ ಮಾಡಿದ ಮಕ್ಕಳಿಗೆ ಅನುಕೂಲವಾಗುತ್ತದೆ.

ಬಹಳ ಹಿಂದಿನಿಂದಲೂ ಅಂದರೆ ರಾಜ ಮಹಾರಾಜರುಗಳ ಕಾಲದಿಂದಲೂ ಸಾಧಕರನ್ನು ಗುರುತಿಸಿ ಗೌರವಿಸುವುದು - ಪ್ರತಿಭಾ ಪುರಸ್ಕಾರ ಎನ್ನುವ ಹೆಸರಲ್ಲಿ ಅಲ್ಲದಿದ್ದರೂ- ಅನುಚಾನವಾಗಿ ನಡೆದುಕೊಂಡು ಬಂದಿದೆ. ಕೈಗೆ ಚಿನ್ನದ ಕಡಗ, ಬಿರುದು, ಆಸ್ಥಾನದಲ್ಲಿ ಗೌರವಯುತವಾದ ಸ್ಥಾನ ಹೀಗೆ ರಾಜ ಮರ್ಯಾದೆ ಇರುತ್ತಿತ್ತು.

ರಾಜರ ಕಾಲ ಹೋಗಿ ಪ್ರಜಾ ರಾಜರ ಕಾಲ ಬಂದಾಗಲೂ ಇದು ನಿಂತಿಲ್ಲ, ಆದರೆ ಗೌರವಿತರನ್ನು ಗುರುತಿಸುವ ಬಗೆ ಮಾತ್ರ ಬದಲಾಗಿದೆ.. ದುರ್ದೈವ ಎಂದರೆ ಇಲ್ಲಿಯೂ ಸಹ ಜಾತಿ, ರಾಜಕೀಯ ಪ್ರಭಾವ (ಹಣದ ಬಗ್ಗೆ ನನಗೆ ಇನ್ನೂ ಗೊತ್ತಿಲ್ಲ) ಹೀಗೆ ಹಲವಾರು ಮಾನದಂಡಗಳು ಬೇಕಾಗಿದೆ. ಅರ್ಜಿ ಹಾಕಿ ರಾಜ್ಯೋತ್ಸವ ಪುರಸ್ಕಾರ ಪಡೆಯುವ ಮಟ್ಟಕ್ಕೆ ನಾವು ಇಳಿದಿದ್ದೇವೆ.

ಈ ನಡುವೆ ಪದ್ಮ ಪುರಸ್ಕಾರಗಳನ್ನು ಜನಾಭಿಪ್ರಾಯ ಸಂಗ್ರಹಿಸಿ ಕೊಡ ಮಾಡುತ್ತಿರುವುದು ಒಂದು ಸತ್ಸಂಪ್ರದಾಯಕ್ಕೆ ಮುನ್ನುಡಿ ಆಗಲೆಂದು ಆಶಯ.

ಎಲ್ಲದರ ಮಧ್ಯೆ ಒಂದು ಆಶಾಕಿರಣ ಎಂದರೆ ಪೊಲೀಸ್ ಇಲಾಖೆಯ ಕೊಡುಗೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿನ ಇನ್ಸ್ಪೆಕ್ಟರ್ ಶ್ರೀ. ಎಲ್  ವೈ  ರಾಜೇಶ್ ಅವರ ಮುಂದಾಳತ್ವದಲ್ಲಿ, 10ನೇ ತರಗತಿಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಗುರುತಿಸಿ  ಅವರಿಗೆ ಪಾಠ ಹೇಳಿಸಿ, ಪರೀಕ್ಷೆಗೆ ಕಟ್ಟಿಸಿ ಪಾಸು ಮಾಡಲು ಉತ್ತೇಜಿಸಿದ ಪ್ರಕರಣ. ಇದು ನಿಜವಾಗಲೂ ನನ್ನ ದೃಷ್ಟಿಯಲ್ಲಿ ಪ್ರತಿಭಾ ಪುರಸ್ಕಾರ. ಇಲ್ಲಿ ಸೋಲುಂಡವರನ್ನು ಗುರುತಿಸಿ, ಪ್ರತಿಭೆಯನ್ನು ತುಂಬಿ ಅದನ್ನು ಹೊಳಪಾಗಿಸಿ , ಯಶಸ್ಸಿನೆಡೆಗೆ ಅವರನ್ನು ನಡೆಸಿ ಅವರ ಬೆನ್ನು ತಟ್ಟುವುದು ನಿಜಕ್ಕೂ ತುಂಬಾ ಸಮಾಜಮುಖಿ ಕೆಲಸ. ದಾರಿ ತಪ್ಪಲು ತುಂಬಾ  ಅವಕಾಶ ಇದ್ದ ಇಂಥ ಮಕ್ಕಳನ್ನು ಸರಿ ದಾರಿಗೆ ತಂದಿದ್ದು ಸಮಾಜಕ್ಕೆ ಎರಡು ವಿಧದ ಲಾಭ. ಒಂದು ದಾರಿ ತಪ್ಪುವುದನ್ನು ತಡೆದಿದ್ದು ಇನ್ನೊಂದು ಆ ಮಕ್ಕಳ ಭವಿಷ್ಯವನ್ನು ರೂಪಿಸಿದ್ದು.. ಸರ್ ನಿಮಗೊಂದು ನನ್ನ ಪೋಲೀಸ್ ಸಲ್ಯೂಟ್.

ಸ್ವಲ್ಪ ನಿರಾಶೆ ಇದ್ದರೂ, ತಕ್ಕಮಟ್ಟಿಗೆ ಸಮಾಧಾನ ಕೊಡುವ ಇನ್ನೊಂದು ವಿಷಯ... ಅದು ಪ್ರತಿಭಾ ಪುರಸ್ಕಾರ ಮಾಡುವ ವಿವಿಧ ಸಂಘ-ಸಂಸ್ಥೆಗಳು, ಗುಂಪುಗಳದ್ದು.  ಇದು ಅವರವರ ಗುಂಪಿನ ಜನಗಳಿಗೆ ಮಾತ್ರ ಸಲ್ಲುವ ಪುರಸ್ಕಾರ... ಇಲ್ಲಿ ಸಂಕುಚಿತ ಮನೋಭಾವ ಇದೆಯಾ ಎಂಬುವ ಒಂದು ಅನುಮಾನ ನನ್ನದು.... ನಮ್ಮವರಲ್ಲದಿದ್ದರೂ ಕೆಲವು ಪ್ರತಿಭೆಗಳನ್ನಾದರೂ ಗುಂಪಿನಿಂದ ಹೊರಗಿರುವವರನ್ನೂ ಗುರುತಿಸಿ ಗೌರವಿಸಿದರೆ..ಪ್ರತ್ಯೇಕತೆಯಿಂದ ಏಕತೆಯ ಕಡೆಗೆ ನಡೆಯಲು ಸಹಾಯವಾಗಬಹುದು.... ಇದು ನಾನು ಅಂದುಕೊಂಡಷ್ಟು ಸುಲಭವಲ್ಲ... ಆದರೆ ಸಾಧ್ಯ.

ವಿಶ್ವದಲ್ಲೇ ಅತಿಹೆಚ್ಚಿನ ಪ್ರಾಮುಖ್ಯತೆ ಇರುವುದು ನೊಬೆಲ್ ಪುರಸ್ಕಾರಕ್ಕೆ... ಮೂಲಧನ ಯಾವ ಮೂಲಕ  ಸಂಪಾದಿಸಿದ್ದರೂ...‌ ಅದರ ಉಪಯೋಗ ಮಾತ್ರ... ಒಳ್ಳೆಯ ಸಮಾಜಮುಖಿ ಸಂಶೋಧನೆಗಳನ್ನು  / ಕೆಲಸಗಳನ್ನು ಮಾಡಿದವರಿಗೆ ಕೊಡುತ್ತಿರುವುದು.

ಅದರ ಜೊತೆಗೊಂದು ಸಮಾನಾಂತರ ಪ್ರಶಸ್ತಿ ಇಗ್ನೊಬೆಲ್ ಪ್ರಶಸ್ತಿ... ಹೆಸರು ಇಗ್ನೊಬೆಲ್ (Ig Nobel)  ಆದರೂ ಅದು ಅವಮಾನಕರ ಏನಲ್ಲ... ಇದೊಂದು ತಮಾಷೆಯ ಪುರಸ್ಕಾರ  (satirical prize) . ಇದರ ಪುರಸ್ಕೃತರು... ತಾವು ಮಾಡಿದ ಸಂಶೋಧನೆಗಳಿಂದ ಮೊದಲು ನಗೆ ತರಿಸಿ ನಂತರ ಚಿಂತನೆಗೆ ಈಡು ಮಾಡುವಂತಹ ವಿಷಯಗಳು. ನಿಮಗೆ ತಿಳಿದಿರಲಿ ಈ ಪುರಸ್ಕಾರವನ್ನು  ನೊಬೆಲ್ ಪ್ರಶಸ್ತಿ ವಿಜೇತರು ಪ್ರದಾನ ಮಾಡುತ್ತಾರೆ. ಇದರ ಒಂದು ಸಂಶೋಧನೆಯ ವಿಷಯ ಬೆಕ್ಕುಗಳು ಮತ್ತು ಮಾನವನ ನಡುವಿನ ಸಂವಹನೆ. .. ಈ ಸಂಶೋಧನೆಯನ್ನು ಹತ್ತು ವರ್ಷಗಳ ಕಾಲ ಮಾಡಿ ಬೆಕ್ಕು ಮಾಡುವ ವಿವಿಧ ಸಂದರ್ಭಗಳಲ್ಲಿನ " ಮಿಯಾವ್" ಶಬ್ದವನ್ನು ಗುರುತಿಸಿ..( ಹಸಿವು, ಕೋಪ, ದುಃಖ, ಸಂಗಾತಿಯ ಕರೆ, ಪ್ರೇಮಾಲಾಪ, ಮರಿಗಳ ಜೊತೆ ಮಾತು, ಹೆರಿಗೆಯ ನೋವು, ಹೀಗೆ ಸುಮಾರು 13 ವಿಧದ ಶಬ್ದಗಳು)  ಅದನ್ನು ಮನುಷ್ಯನಿಗೆ ಕೇಳಿಸಿ, ಬೆಕ್ಕಿನ ಭಾವನೆಗಳನ್ನು ಅರಿತುಕೊಳ್ಳುವುದು... ಇದು ಬೆಕ್ಕು ಪ್ರಿಯರಿಗೆ ಅನುಕೂಲ ವಾಗುವಂತಹ ಸಂಶೋಧನೆ.

ಈಗೀಗ ಶಾಲು ಹೊದಿಸುವುದು, ಪೇಟ, ಹಾರ ಹಾಕುವುದು, ಸಾಮಾನ್ಯವಾಗಿ ಹೋಗಿದೆ (ಮಾಮೂಲಿಯಾಗಿ ಹೋಗಿದೆ ಎನ್ನಲೇ... ಅದೇನು ಈಗ ವಿಶೇಷವೇ ಅಲ್ಲ). ನಾನು ಕೆಲ ಕಡೆ ಈ ಅನುಭವವನ್ನು ಪಡೆದಿದ್ದೇನೆ( ಮೊನ್ನೆ ಶುಕ್ರವಾರ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ, ಅಲ್ಲಿ ಅನಿರೀಕ್ಷಿತವಾಗಿ ಶಾಲು ಹಾರ ಪದಕ.. ಪುಸ್ತಕ ಎಲ್ಲವೂ ಸಿಕ್ಕಿತು). ಇಲ್ಲಿ ಅರ್ಹತೆಗಿಂತ, ಕೊಡುವವರ ಅಭಿಮಾನ  ಅಥವಾ ಕಾರ್ಯಕ್ರಮದ ಶಿಷ್ಟಾಚಾರದ ಭಾಗವಾಗಿರಬಹುದೇ?  ಈ ಅನುಭವ ಸ್ವಲ್ಪಮಟ್ಟಿಗೆ ಖುಷಿ  / ಕೆಲಸಲ ಮುಜುಗರವೂ ಆಗಿದೆ. 

ಆದರೆ ನಾನು ಚಿಕ್ಕಂದಿನಲ್ಲಿ ಅನುಭವಿಸಿದ ಕೆಲ ಪುರಸ್ಕಾರಗಳ ನೆನಪು ಇಂದಿಗೂ ಪುಳಕವನ್ನುಂಟುಮಾಡುತ್ತದೆ. 

ಹಳ್ಳಿಯಲ್ಲಿ ನಾವು ಮಾಡುತ್ತಿದ್ದ ನಾಟಕಗಳು, ನಾಟಕದ ಸಮಯದಲ್ಲಿ ನನಗೆ ಒಬ್ಬರು ಹಾಕಿದ ತೂತು ಮೂರು ಕಾಸಿನ ಇನಾಮು.  (ಸಾಮಾನ್ಯವಾಗಿ ಒಂದು ರೂಪಾಯಿ ನೋಟನ್ನು ಪಿನ್ನಿಗೆಸಿಕ್ಕಿಸಿ ಹಾಕುತ್ತಿದ್ದದ್ದು)  ನನ್ನ ವಯಸ್ಸಿಗೆ ಆಗಿನ ಕಾಲಕ್ಕೆ ಮೂರು ಕಾಸು ದೊಡ್ಡ ವಿಷಯ.. ಎಷ್ಟೋ ದಿನ ಅದನ್ನು ನಾನು ನನ್ನ ಉಡಿದಾರಕ್ಕೆ ಕಟ್ಟಿಕೊಂಡು ಸಂತಸಪಟ್ಟಿದ್ದಿದೆ.

ಹೋದ ವರ್ಷ ಹೂವಿನ ಕಟ್ಟೆ (ನನ್ನ ಶ್ರೀಮತಿಯ ತವರು) ಪರಿವಾರದೊಡನೆ ಹೋಗಿದ್ದ ಎರಡು ದಿನದ ಕಾರ್ಯಕ್ರಮದಲ್ಲಿ ನಾನು ಮಾಡಿದ ಒಂದು ಏಕಾಭಿನಯಕ್ಕೆ , ನನ್ನ ಅಂಗಿಗೆ ಸಿಕ್ಕಿಸಿದ ನೋಟುಗಳು.. ವಾವ್ ಬಹು ಅಮೂಲ್ಯವಾದದ್ದು. 

ಇನ್ನು ಕ್ಲಾಸಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಾಗ, ಮುಂದೆ ನಿಲ್ಲಿಸಿ ಎಲ್ಲರ ಕೈಲಿ ಚಪ್ಪಾಳೆ ಹೊಡೆಸಿದ್ದು, ಯಾವುದೇ ಅರ್ಜಿ ಹಾಕದೆ ಸಿಕ್ಕಿದ merit cum means ವಿದ್ಯಾರ್ಥಿ ವೇತನ, ಅದೇ ರೀತಿ  ನನ್ನ ಡಿಪ್ಲೋಮಾ ಮುಗಿದ ಕೆಲ ದಿನಗಳಲ್ಲೇ ಸಿಕ್ಕಿದ ಭಾರತ ಸರ್ಕಾರದ apprenticeship ಯೋಜನೆಯಲ್ಲಿ ತಿಂಗಳಿಗೆ 150 ರೂಪಾಯಿ stipend ನ ವರ್ಷದ ಕೆಲಸ, ಸಹ ನನಗೆ ಸಿಕ್ಕ ನಿಜ ಪುರಸ್ಕಾರ ಎಂದು ನನ್ನ ನಂಬಿಕೆ.

ಇನ್ನೊಂದು ತುಂಬಾ ಮುದ ಕೊಡುವ ವಿಷಯ... ರಾಷ್ಟ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಸಮಯ.. ಎಸ್. ಆರ್. ಸುಬ್ಬರಾವ್ ನಮಗೆ ಇಂಗ್ಲೀಷ್ ನ ಮೇಷ್ಟ್ರು. ನಾನು ಮತ್ತು ಟಿ. ಆರ್. ಶ್ರೀನಿವಾಸರಾವ್ ಇಬ್ಬರೂ ಅವರ ಮೆಚ್ಚಿನ ಶಿಷ್ಯರು. ಒಂದು ದಿನ ನಮ್ಮಿಬ್ಬರನ್ನು SRS ಮೇಷ್ಟ್ರು ಹತ್ತನೇ ತರಗತಿಗೆ ಕರೆಸಿ ಅಲ್ಲಿ ಗ್ರಾಮರ್ ಪ್ರಶ್ನೆಗೆ ಉತ್ತರವನ್ನು ಕೇಳಿ.. (ಪ್ರಶ್ನೆ ನೆನಪಿಲ್ಲ..ಆಗಿನ ಖುಷಿಯೇ ಪ್ರಧಾನವಾಗಿದ್ದರಿಂದ ಇರಬಹುದು) ಉತ್ತರ ಕೊಟ್ಟಾಗ ನಮ್ಮಿಬ್ಬರನ್ನು ಅವರು ಕೂತ ಕುರ್ಚಿಯ ಅಕ್ಕ ಪಕ್ಕದಲ್ಲಿ ನಿಲ್ಲಿಸಿಕೊಂಡು ಹೆಗಲ ಮೇಲೆ ಕೈ ಹಾಕಿ ಭೇಷ್ ಅಂತ ಹೇಳಿದ್ದು ಸವಿ ನೆನಪು... ಆ ಚಿತ್ರ ನನ್ನ ಕಣ್ಣ ಮುಂದಿಂದ ಮಾಸಿಯೇ ಇಲ್ಲ...

ಆ ನೆನಪನ್ನು ಇನ್ನು ಕೆಲ ಕ್ಷಣಗಳು  ಸವಿಯುವ ಆಸೆ...ನನ್ನದು....

ನಮಸ್ಕಾರ...




    

Comments

  1. ಸ್ನೇಹ ರಂಗ ದ ಸುಂದರ ಪರಿಚಯ. ಜೀವನದಲ್ಲಿ ಪ್ರೋತ್ಸಾಹ ನುಡಿ, ಒಳ್ಳೆಯ ಮಾತು, ಬೆನ್ನು ತಟ್ಟುವುದು I ಎಲ್ಲವೂ ಒಂದು ರೀತಿಯ ಪುರಸ್ಕಾರಗಳು ಅನ್ನೋದನ್ನು ಚೆನ್ನಾಗಿ ಹೇಳಿದ್ದೀರಿ,ರಂಗ. ಸುಂದರ ಲೇಖನ

    ReplyDelete
  2. ಬಾಲ್ಯದ ನೆನಪುಗಳ ಜೊತೆಗೆ ಹೊಸ ವಿಷಯಗಳನ್ನು ಚೆನ್ನಾಗಿ ವಿವರಿಸಿದ್ದೀರಾ

    ReplyDelete
  3. ಪ್ರತಿಭೆಯನ್ನು ಗುರುತಿಸದಿದ್ದರೆ ಅದು ಕಾಡ ಬೆಳದಿಂಗಳಾಗುವ ಸಾಧ್ಯತೆ ಇರುತ್ತದೆ. ಮೂಲತ: ಮಾನವ ತನ್ನ ಪ್ರತಿಭೆಯು ಗುರುತಿಸಲ್ಪಡಲಿ ಎಂದು ಬಯಸುತ್ತಾನೆ. ಅದೇ ಪೇಟ,ಹಾರ,ಶಾಲು ಇತ್ಯಾದಿಗಳ ಚರ್ವಿತಚರ್ವಣವಾಗದೇ ಹೊಸದೊಂದು ವಿಧಾನ ಅಳವಡಿಕೆಯಾದರೆ ಒಳ್ಳೆಯದೇನೋ.
    ಈಗಿನ ಕೇಂದ್ರ ಸರ್ಕಾರ ಎಲೆಮರೆಯ ಕಾಯಿಗಳನ್ನು ಹೆಕ್ಕಿ ತೆಗೆದು ಗೌರವಿಸುತ್ತಿರುವುದು ಅಭಿನಂದನಾರ್ಹ ಹಾಗೂ ಶ್ಲಾಘನೀಯ.
    ಅರ್ಜಿ ಹಾಕಿಕೊಂಡು, ವಶೀಲಿ ಮಾಡಿ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಾಗ ಮನಸ್ಸಿಗೆ ಅದು ಮುದ ನೀಡಲಾರದೇನೋ ಎಂದೆನಿಸುತ್ತದೆ. ಕಾಲಾಯ ತಸ್ಮಾಯ ನಮ:

    ReplyDelete
  4. ನೀವು ಶಾಲೆಯಲ್ಲಿ ಶಿಕ್ಷಕರಿಂದ ಮೆಚ್ಚುಗೆ ಪಡೆದಾಗ ಸಾಟಿಯಿಲ್ಲದ ಸಂತೋಷ. ಯಾವುದೇ ಪ್ರಶಸ್ತಿ ಅಥವಾ ಗೌರವ ಇದಕ್ಕೆ ಹೊಂದಿಕೆಯಾಗುವುದಿಲ್ಲ. ತುಂಬಾ ಚೆನ್ನಾಗಿದೆ.ನೀವು ಶಾಲೆಯಲ್ಲಿ ಶಿಕ್ಷಕರಿಂದ ಮೆಚ್ಚುಗೆ ಪಡೆದಾಗ ಸಾಟಿಯಿಲ್ಲದ ಸಂತೋಷ. ಯಾವುದೇ ಪ್ರಶಸ್ತಿ ಅಥವಾ ಗೌರವ ಇದಕ್ಕೆ ಹೊಂದಿಕೆಯಾಗುವುದಿಲ್ಲ. ತುಂಬಾ ಚೆನ್ನಾಗಿದೆ.

    ReplyDelete
  5. ಬಾಲ್ಯದ ದಿನಗಳಲ್ಲಿ ಪಡೆದ ಹೃತ್ಪೂರ್ವಕ ಮೆಚ್ಚುಗೆಗಳು ಅದರೊಂದಿಗೇ ನೀವು ಹಮ್ಮಿಕೊಂಡಿರುವ ಮತ್ತು ಭಾಗಿಯಾಗುತ್ತಿರುವ ಕಾರ್ಯಕ್ರಮಗಳು ನಿಮ್ಮ ಸಮಯದ ಸದ್ವಿನಿಯೋಗ ಎಲ್ಲವನ್ನೂ ಬಿಚ್ಚಿಟ್ಟಿರುವ ಶೈಲಿ ಅದ್ಭುತವಾಗಿದೆ.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ