ಸ್ನೇಹ - ಸ್ನೇಹಿತರು
ಸ್ನೇಹ - ಸ್ನೇಹಿತರು
ಹೋದವಾರ ಪತ್ರಿಕೆಗಳು, ಟಿವಿ ಹಾಗೂ ಎಲ್ಲಾ ಮಾಧ್ಯಮಗಳಲ್ಲೂ ಸ್ನೇಹಿತರ ದಿನಾಚರಣೆಯದೇ ಸಾಕು ಸಾಕು ಸಾಕೆನುಸುವಷ್ಟು ಅಬ್ಬರ. ಸ್ವಲ್ಪ ಕಿರಿಕಿರಿ ಆಗಿದ್ದೂ ಉಂಟು. ಆದರೆ ಇನ್ನೊಂದು ದಿಕ್ಕಿನಲ್ಲಿ ಯೋಚಿಸಿದಾಗ... ಅದೂ ಸಹ ನಮ್ಮದೇ ಸಂಪ್ರದಾಯಗಳನ್ನು ಹೋಲುತ್ತದೆ.... ಉದಾಹರಣೆಗೆ ವರ್ಷಕೊಮ್ಮೆ ರಾಮ ನವಮಿಯ ಪಾನಕ, ಸಂಕ್ರಾಂತಿಯ ಎಳ್ಳು ಬೆಲ್ಲ, ನವರಾತ್ರಿಯ ಬನ್ನಿ, ನಾಗರ ಪಂಚಮಿಯಲ್ಲಿ ಬೆನ್ನಲ್ಲಿ ಬಿದ್ದವರಿಗೆ ಬೆನ್ನು ತೊಳೆಯುವ ಸಂಭ್ರಮ, ಭೀಮನ ಅಮಾವಾಸ್ಯೆ ಯಲ್ಲಿ ಅಣ್ಣ ತಮ್ಮಂದಿರು ಭಂಡಾರ ಹೊಡೆಯುವುದು, ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು ಹೀಗೆ... ಸಂಭಂಧಗಳನ್ನು ಬೆಸೆಯುವ ಕಾರ್ಯಕ್ರಮಗಳು... ಹಾಗಾಗಿ ನಿರಂತರವಾದ ಸ್ನೇಹವನ್ನು ಬೆಸೆಯಲು / ಸಂಭ್ರಮಿಸಲು ಒಂದು ದಿನ ಒಳ್ಳೆಯದೇ ಅಲ್ಲವೇ?
ಗೆಳೆಯರು, ಗೆಳೆತನ ಅಂದಾಗ ನನಗೆ ಮೊದಲು ಹೊಳೆಯುವುದು ಮಹಾಭಾರತದ ಎರಡು ಗೆಳೆತನಗಳು.ಒಂದು ಕೃಷ್ಣ ಸುಧಾಮರದು ಇನ್ನೊಂದು ದೃಪದ ದ್ರೋಣರದು. ಮೊದಲನೆಯದು ಹೇಗಿರಬೇಕು ಎಂದು ತೋರಿಸಿದರೆ ಎರಡನೆಯದು ಹೇಗಿರಬಾರದು ಎಂದು ತೋರಿಸುತ್ತೆ. ಕೃಷ್ಣ ತನ್ನ ಬಾಲ್ಯದ ಗೆಳೆಯನನ್ನು ಯಾವುದೇ ಹಂತದಲ್ಲೂ ಮರೆಯಲಿಲ್ಲ, ಕಡೆಗಣಿಸಲಿಲ್ಲ, ಬಹು ಆದರದಿಂದಲೇ ಕಂಡವನು. ಆದರೆ ದೃಪದನ ಮನಃಸ್ಥಿತಿಯೇ ಬೇರೆ. ತಾನು ರಾಜನಾದ ಮೇಲೆ ಸಹಾಯ ಕೇಳಲು ಬಂದ ದ್ರೋಣನನ್ನು ಕೀಳಾಗಿ ಕಂಡಿದ್ದು, ಛೇಡಿಸಿದ್ದು, ಭಿಕ್ಷೆಯನ್ನು ಕೊಡಬಲ್ಲೆ ಎಂಬ ಧೋರಣಿಯ ಮಾತು. ಇಲ್ಲಿ ನೆನಪಾಗುವುದು ಪಂಜೆ ಮಂಗೇಶರಾಯರ ಮೂಡುವನು ರವಿ ಮೂಡುವನು ಪದ್ಯದ ಕೊನೆಯ ಸಾಲು.... ಏರಿದವನು ಚಿಕ್ಕವನಿರಬೇಕಲೇ ಎಂಬಾ ಮಾತನು ಸಾರಿದನು....ಪ್ರಾಯಶಃ ಈ ಪದ್ಯವು ಭಾರದ್ವಾಜರ ಕಾಲದಲ್ಲಿ ಇದ್ದಿದ್ದರೆ, ಅದನ್ನು ದೃಪದನಿಗೆ ತಿಳಿಯಪಡಿಸಿದ್ದರೆ.. ಮಹಾಭಾರತದ ಚಿತ್ರಣವೇ ಬದಲಾಗುತ್ತಿತ್ತೇನೋ... ಪ್ರಾಂಜಲ ಸ್ನೇಹಕ್ಕೆ ಆಸ್ತಿ ಅಂತಸ್ತು ಯಾವುದು ಅಡ್ಡಿಯಾಗಬಾರದು ಅನ್ನುವುದು ನಿಜವಾದರೂ ವಾಸ್ತವದಲ್ಲಿ ಅದು ಬೇರೆಯೇ..
ಇನ್ನು ಗೆಳೆತನ ಶುರುವಾಗೋದು ಚಿಕ್ಕಂದಿನಿಂದ... ಮುಗ್ಧ ಮನಸ್ಸು... ಮುಕ್ತ ಮನಸ್ಸು. ಹಾಗಾಗಿ ಅಲ್ಲಿನ ಭಿನ್ನಾಭಿಪ್ರಾಯಗಳು ಹೇಗೆ ಶುರುವಾಗುತ್ತೋ ಹಾಗೆಯೇ ಮುಕ್ತಾಯವಾಗುತ್ತೆ . ಅದಕ್ಕೇ ಠೂ ಬಿಡೋದು ಸೇ ಮಾಡೋದು ಎಲ್ಲವೂ ಯಾವಾಗ ಬೇಕಾದರೂ ಅನಾಯಾಸವಾಗಿ ಆಗುತ್ತೆ. ಮುಂದೆ ಬೆಳೆದಂತೆ ಓದಿನ ಸಮಯದಲ್ಲಿ, ಕೆಲಸ ಮಾಡುವ ಕಡೆಯಲ್ಲಿ, ಸ್ನೇಹಿತರ ಸ್ನೇಹಿತರು, ಹೀಗೆ ಗೆಳೆತನ ಎಲ್ಲಿ ಬೇಕಾದರೂ ಶುರುವಾಗಬಹುದು.... ಕೆಲ ಗೆಳೆತನಗಳು ವಿಶಿಷ್ಟ ಬಾಂಧವ್ಯಗಳನ್ನು ಹೊಂದಿರುತ್ತವೆ. ಅಂತ ಒಂದು ವಿಶಿಷ್ಟ ಗೆಳೆತನದ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅಂತ ನನ್ನ ಆಸೆ. ನಾನು ಮತ್ತು ಶಿವ ( ಕೆ..ಎನ್. ಶಿವಶಂಕರ್) ತುಂಬಾ ಆತ್ಮೀಯರು... ಗಳಸ್ಯ ಕಂಠಸ್ಯ (ಹಗ್ಗಸ್ಯ ಉರುಳಸ್ಯ ಎಂದರೂ ಸರಿಯೇ). ಒಂದಷ್ಟು ತರ್ಲೆಗಳನ್ನು ಕೂಡಿ ಮಾಡಿದವರು (partner in crime ಎನ್ನಲೇ) ಬೈಸಿಕೊಂಡವರು, ಕೆಲ ಸಮಯ ಮುಜುಗರಕ್ಕೆ ಈಡಾಗಿದ್ದೂ ಉಂಟು. ಇರಲಿ ಬಿಡಿ.. ಅದೆಲ್ಲ ಆ ವಯಸ್ಸಿನ ಸಹಜ ಗಡಿಬಿಡಿ. ಒಂದು ಪ್ರಸಂಗ.... ನಾವಿಬ್ಬರೂ ಅವಿನ್ಯೂ ರಸ್ತೆಯಲ್ಲಿ ಹೋಗುತ್ತಿದ್ದ ಸಮಯ. ದಾರಿಯಲ್ಲಿ ಏನೇನೋ ಸಾಮಾನುಗಳನ್ನು ಹಾಕಿಕೊಂಡು ಮಾರುತ್ತಿದ್ದವ... ಸುತ್ತು ಜನ.. ನಮಗೂ ಕುತೂಹಲ... ಶಿವನಿಗೆ ಏನನ್ನಿಸಿತೋ, ಯಾಕನ್ನಿಸಿತೋ.... ಸಾಹಸವೋ, ಅಲ್ಲಿಂದ ಒಂದು ಸಾಮಾನು ಕದಿಯುವ ಇರಾದೆ... ಕಾರ್ಯೋನ್ಮುಖನಾದ , ಸಫಲನಾದ, ನನ್ನ ಕೈಗೆ ಕೊಟ್ಟ... ಇಬ್ಬರೂ ಅಲ್ಲಿಂದ ಜಾಗ ಖಾಲಿ ಮಾಡಿದೆವು... ಮತ್ತವನು ಅದನ್ನು ಕೇಳಲೇ ಇಲ್ಲ... ನಾನು ಮನೆಗೆ ಬಂದೆ.. ನನ್ನಣ್ಣನ ಸ್ನೇಹಿತರು ಮನೆಯಲ್ಲಿದ್ದರು... ಎಲ್ಲರ ಮುಂದೆ ನಮ್ಮ ಪ್ರತಾಪವನ್ನು (ಪೆದ್ದುತನ) ಕೊಚ್ಚಿಕೊಂಡೆ... ಅಣ್ಣನ ಸ್ನೇಹಿತರು ಒಬ್ಬರು ಕೇಳಿದ್ದು..." ದೇಪ್ಕೊಂಡ್ ಬಂದ್ಯಾ?"... ಅಣ್ಣ ಬೈದ ...ಮುಖ ಸಪ್ಪಗಾಯಿತು... ದೇಪರ್ಸ್ ಎಂಬ ಹೆಸರು ಕೊಟ್ಟರು....( ಕ್ಷಮೆ ಇರಲಿ ಶಿವ... ಎಷ್ಟೋ ದಿನದಿಂದ ಅಂತರಂಗದಲ್ಲೇ ಇದ್ದ ಈ ವಿಷಯವನ್ನು ಹೊರ ಹಾಕಿದ್ದಕ್ಕಾಗಿ.... ) ಉದ್ದೇಶ ಕೆಟ್ಟದಿರಲಿಲ್ಲ ಆದರೆ ಕ್ರಿಯೆ ಮಾತ್ರ ಅದಕ್ಕೆ ಪೂರಕವಾಗಿರಲಿಲ್ಲ... ಬೈಗುಳದ ಶಿಕ್ಷೆ ಸಿಕ್ಕಿತ್ತು.
ಹಳ್ಳಿಯಲ್ಲಿ ಸ್ನೇಹಿತರ ದೊಡ್ಡ ಗುಂಪೇ ಇತ್ತು... ಅದರಲ್ಲೂ ನಾನು ನನ್ನಣ್ಣ ಸತ್ತಿ, ಮುಕುಂದ ಅವನ ತಮ್ಮ ಮೂರ್ತಿ.. ನಾವು ನಾಲ್ಕು ಜನ ಹಬ್ಬಗಳ ಸಮಯದಲ್ಲಿ ಊರಿನ ಸುತ್ತಮುತ್ತ ಓಡಾಡಿ ಹೂಗಳನ್ನು ಕಿತ್ತು ತರುತ್ತಿದ್ದದ್ದು ಸುಂದರ ನೆನಪು. ಇನ್ನು ಹುಡುಗಾಟ, ಕಾರಣ ಗೊತ್ತಿಲ್ಲ ಭಾಸ್ಕರಾಚಾರ್ ಜೊತೆಯಲ್ಲಿ ಠೂ ಬಿಟ್ಟಿದ್ದೆ... ನಂತರ ಬೆಂಗಳೂರಿಗೆ ಓದಲು ಬಂದು, ಹಳ್ಳಿಗೆ ಹಬ್ಬಕ್ಕೆ ಹೋದಾಗ ಆತನನ್ನು ಮಾತಾಡಿಸಿದೆ.." ಠೂ ಬಿಟ್ಟಿದ್ಯಲ್ಲ ಈಗ್ಯಾಕ್ ಬಂದೆ ಮಾತಾಡಕ್ಕೆ" ಅಂದ... ಅದಾದಮೇಲೂ ಸೇ ಮಾಡಿ ಒಂದಾಗಿದ್ದು ಮಾತ್ರ ನಿಜ.
ಪಿಯುಸಿಯಲ್ಲಿ ಇದ್ದಾಗ ಸಂಸ್ಕೃತದ ಪ್ರತಿಜ್ಞಾ ಯೌಗಂಧರಾಯಣ ಪಾಠ ಮಾಡುವಾಗ ಶ್ರೀ ವರದದೇಶಿ ಕಾಚಾರ್ ಅವರು ( ಸಂಸ್ಕೃತ ಪಂಡಿತರಾದರೂ, ಅವರಿಗೆ ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತ ತುಂಬಾ ಚೆನ್ನಾಗಿತ್ತು) ಹೇಳಿದ್ದು circumstances changes a bitter enemy to a bosom friend... ಅಂತ.. ಇದರ ವಿಲೋಮ(inverse) ಸಹ ಸರಿ. ಹಾಗಾದಾಗ ನಾವು ಸ್ನೇಹಿತರಾಗಿದ್ದಾಗ ಹಂಚಿಕೊಂಡ ಅಂತರಂಗದ ಮಾತುಗಳು... ಗೋಪ್ಯವಾಗಿ ಇರಬೇಕಾದ ವಿಷಯಗಳು.. ನಾವು ಸಂದರ್ಭಕ್ಕೆ ಸಿಕ್ಕಿ ಸ್ನೇಹವನ್ನು ಕಳೆದುಕೊಂಡಾಗ ಸಹ ಅದನ್ನು ಉಳಿಸಿಕೊಳ್ಳಬೇಕಾದದ್ದು ಸ್ನೇಹ ಧರ್ಮ ಅಂತ ಧೃಢವಾಗಿ ನಂಬಿದವನು ನಾನು.
ಹಾಗೇ politics makes strange bed fellows ಅನ್ನುವ ಮಾತು.... ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಅಥವಾ ಮಿತ್ರರಲ್ಲ ಎನ್ನುವುದರ ಸಮಾನಾಂತರ...
ಇನ್ನು ನನ್ನ ಸ್ನೇಹಿತರಲ್ಲಿ ರಂಗ ಅನ್ನುವ ಹೆಸರಿನವರು....ಡಿ.ಸಿ.ರಂಗ, ಹೆಚ್.ಪಿ.ರಂಗ, ಹೆಚ್.ಕೆ.ರಂಗ, ಹೆಚ್.ವಿ.ರಂಗ ಹಾಗೂ ಕೆ.ಎಸ್.ರಂಗ....ಇದರಲ್ಲಿ ಕೆ.ಎಸ್. ರಂಗ ನನ್ನ ಡಿಪ್ಲೊಮ ಸಹಪಾಠಿ....ಕೊನೇ ವರ್ಷದ ಪರೀಕ್ಷೆ ಮುಗಿದ ಕೆಲವೇ ದಿನದಲ್ಲಿ ಅವನ ಮದುವೆ....." ಏನೋ ಇನ್ನೂ ಪಾಸ್ ಆಗಿಲ್ಲ, ಕೆಲಸ ಇಲ್ಲ... ಮದುವೆ ಮಾಡ್ಕೋತಿದೀಯ" ಅಂದ್ರೆ ಅವನ ಉತ್ತರ.." ನಮ್ಮಾವಂಗೆ ಕೆಲಸ ಇಲ್ಲ ಅಂತ ಹೇಳ್ದೆ...ಅದಕ್ಕವರು...ಅದಕ್ಕೇ ಮದುವೆ ಮಾಡ್ಕೋ ಅಂದರು"....ಇದು ಸತ್ಯನೋ ಅಥವಾ ಅವನ ತಮಾಷೆಯ ಮಾತೋ ಇಂದಿಗೂ ಗೊತ್ತಿಲ್ಲ. ಮದುವೆಗೆ ಸ್ನೇಹಿತರೆಲ್ಲಾ ದೊಡ್ಡಬಳ್ಳಾಪುರಕ್ಕೆ ಹೋಗಿ, ಮುಂದೆ ರಾಶಿ ಹಾಕಿದ ಸಿಹಿ ಬೂಂದಿ ಹಾಗೂ ಬಾಳೆಹಣ್ಣು ಸಾಧ್ಯವಾದಷ್ಟು ತಿಂದು, ಅಲ್ಲಿದ್ದ ಭಾವಿಯಲ್ಲಿ ಈಜಾಡಿ....ಸ್ನೇಹಿತರ ಪೈಕಿ ಮೊದಲ ಮದುವೆಯ ಅನುಭವ ಸವಿದದ್ದು...
ಎಂಟು ಜನ ಸ್ನೇಹಿತರು ಹೋಟೆಲ್ ಗೆ ಹೋಗಿ ನಮ್ಮಲ್ಲಿರುವ ದುಡ್ಡೆಲ್ಲ ಸೇರಿಸಿದರೂ 50 ಪೈಸೆ ಆದಾಗ, ಐದು ವಡೆ ತೊಗೊಂಡು, ಎಂಟು ಜನ ಹಂಚ್ಕೊಂಡು, ಸಾಂಬಾರ್ ಜಾಸ್ತಿ ಹಾಕ್ಕೊಂಡು ತಿಂದ ಸುಖ , ಇವತ್ತು ಎಷ್ಟು ವಡೆ ತಿಂದರೂ... ಆ ಸುಖಕ್ಕೆ ಎಣೆ ಇಲ್ಲ.
ಬೆಂಗಳೂರಿಗೆ ಬಂದಾಗ ಮೊದಲ ಸ್ನೇಹಿತ ಎಂ.ಕೆ. ಸತ್ಯನಾರಾಯಣ... ಕ್ರಿಕೆಟ್ ಪ್ರೇಮಿ... ನನಗೆ ಆರು ವಿಕೆಟ್ ಅಲ್ಲಿ ನೆಟ್ಟಿರುತ್ತಿದ್ದಿದ್ದು ಮಾತ್ರ ಗೊತ್ತು... ಆದರೆ ಅವನು 7, 8 ವಿಕೆಟ್ ಬಿತ್ತು ಅಂತ ಹೇಳಿದಾಗ ಒಂಚೂರು ಅರ್ಥ ಆಗ್ತಿರಲಿಲ್ಲ... ಅವನು ಎಷ್ಟು ವಿಷದವಾಗಿ ತಿಳಿಸಕ್ಕೆ ಪ್ರಯತ್ನ ಮಾಡಿದರು.. ನನಗಾಗ ಗೊತ್ತಾಗ್ಲಿಲ್ಲ..
ಕೆ. ಸುಂದರೇಶ್.. ನನ್ನ ಪಿಯುಸಿಯ ಸಹಪಾಠಿ.... ಆಗಿನ ಕಾಲಕ್ಕೆ ಅವರು ಉಳ್ಳವರು.... ಯಾವ ವಿಧದಲ್ಲೂ ನಾನು ಸರಿಸಾಟಿ ಅಲ್ಲ... ಆದರೂ ಅವನು ನನ್ನ ಜೊತೆಯಾಗಿರುತ್ತಿದ್ದ. ನನ್ನಲ್ಲಿದ್ದ ಹಳೆಯ ಸೈಕಲ್ ನ ಬ್ರೇಕ್ ತಾನೇ ಸರಿ ಮಾಡಿ ಮಲ್ಲೇಶ್ವರಕ್ಕೆ ಸ್ನೇಹಿತರನ್ನು ನೋಡಲು ಜೊತೆಯಾಗುತ್ತಿದ್ದ. ನನ್ನ ಮೊದಲ ಬೈಕ್ ಸವಾರಿ ಅವನ ಜೊತೆಯಲ್ಲಿ.... ಅವನ ಈ ಬೆಂಬಲ ನನಗೆ ನನ್ನ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದ್ದು ಮಾತ್ರ ಸತ್ಯ.
T.R. ಶ್ರೀನಿವಾಸರಾವ್ ನನ್ನ ಹೈಸ್ಕೂಲ್ ಸಹಪಾಟಿ... ಎಲ್ಲಕ್ಕೂ ಜೊತೆ... ಅವರ ಮನೆಗೆ ಹೋದಾಗ ಅವರಪ್ಪ ಹಾಕಿದ ಕೈತುತ್ತಿನ ಊಟದ ಸವಿ ಮತ್ತು ಅದರ ಹಿಂದಿನ ಪ್ರೀತಿ ಬಹುಸುಂದರ ನೆನಪು.
ಶಹಬಾದಿನಲ್ಲಿದ್ದ ಸಮಯದಲ್ಲಿ ನಮ್ಮದೇ ಆದ ಒಂದು ಬ್ರಹ್ಮಚಾರಿಗಳ ಗುಂಪಿತ್ತು... ವಾವ್... ಅದರ ವಿಚಾರವೇ ಒಂದು ಲೇಖನವಾಗಬಹುದು..
ಸ್ನೇಹಿತರ ಕೊಡುಗೆ ನಮ್ಮ ಜೀವನಕ್ಕೆ ಒಂದು ಆಸರೆ, ಸ್ಪೂರ್ತಿ, ಸುಖ-ದುಃಖ ಹಂಚಿಕೊಳ್ಳಲು , ಹೀಗೆ ಬಹುಮುಖ ಭಾಂದವ್ಯ....
ಕೊನೆಯದಾಗಿ .... ಸುಮಾರು 14 / 15 ವರ್ಷಗಳ ಒಡನಾಟದಲ್ಲಿ ಸ್ನೇಹ ಸಿಂಚನ ಮಾಡಿದ, ಅಣ್ಣ ಎಂದು ಕರೆಯುತ್ತಿದ್ದ, ಪ್ರೀತಿಯ ಜಿ ಎನ್ ಶ್ರೀನಿವಾಸಮೂರ್ತಿಯ ನೆನಪಿನೊಂದಿಗೆ....... ಮುಕ್ತಾಯ
🙏ನಮಸ್ಕಾರ
Very nice ..most of us have such memorable days...reading your blog reminisce those days of ours. Thanks.
ReplyDeleteಬಾಲ್ಯ ಸ್ನೇಹ ಎಂದಿಗೂ ಮರೆಯದ ಸುಂದರ ನೆನಪು... ಮೊನ್ನೆ ನಮ್ಮ ರಸ್ತೆಯ ಹಿಂದಿನ ತಲೆಮಾರಿನ ಹೆಸರು ನೆನಪಿಸಿಕೊಂಡೆ. ಲೀಲಾಮ್ಮ ಮನೆ, ಸುಶೀಲಮ್ಮ ಮನೆ, ರಾಧಾ ಕೃಷ್ಣ ಮನೆ, ಶೆಟ್ಟರ ಮನೆ, ಸಬಾರ ಮನೆ, ಡಾಕ್ಟರ್, ಮನೆ... ಹೀಗೆ... ಯಾರ door ನಂಬರ್ ಕೂಡ ಬೇಕಾಗಿರಲಿಲ್ಲ..
ReplyDeleteಈಗ goggle ಅಮ್ಮ ಇಲ್ಲದೆ ಎಲ್ಲೂ ಹೋಗಕ್ಕೆ ಆಗಲ್ಲ... ನೆನಪುಗಳು ಮಧುರ
ಬಾಬು
*ಸ್ನೇಹದ ವ್ಯಾಖ್ಯೆ*
ReplyDeleteಸ್ನೇಹಕೆ ಏನೆಂದು ನೀಡಲಿ ವ್ಯಾಖ್ಯೆ...
ಅನುಭವಿಸಿ ತಿಳಿಯದ ಹೊರತು ಅರ್ಥವಾಗದ ಈ ಪದಕೆ...
ಒಬ್ಬರಿಗೊಬ್ಬರು ಪರಿಚಯವಾಗಿ
ಎರಡುದಿನ ಹರಟೆಹೊಡೆದು
ಸ್ನೇಹವೆಂದರಾದೀತೇ...
*ಕಾಲದ ಪ್ರಭಾವಕ್ಕೆ ಸೋಲದೆ*
*ದೂರ ಎಂಬ ಕಾರಣಕ್ಕೆ* *ದೂರವಾಗದೆ*
*ಸಂಪರ್ಕಿಸದೇ ಇದ್ದರೂ ಸದಾ ಮರೆಯದೆ*
*ಪ್ರೀತಿಸುವ ಆ ಜೀವದ ಭಾವವೇ ಸ್ನೇಹವಲ್ಲವೇ???*
ವತ್ಸಲಕುಮಾರಿ
ಕುಟುಂಬದಲ್ಲಾಗಲೀ, ನೆರೆಹೊರೆಯವರಲ್ಲಾಗಲೇ, ಬಂಧುಗಳಲ್ಲಾಗಲೀ ಮನಸ್ಸಿಗೆ ಹತ್ತಿರವಾಗುವ ನಂಟು ಬಹಳ ವಿರಳ.
ReplyDeleteಆದರೆ ಬಾಲ್ಯದ ಗೆಳೆಯರ ಒಡನಾಟ ಜೇನು-ಹಲಸಿನ ಸಿಹಿ. ಅದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ ಹಾಗೂ ಆ ಮೂಲಕ ವಾಚಕರು ತಮ್ಮ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದೀರಿ. ಧನ್ಯವಾದಗಳು.
ಅಂದಹಾಗೆ ಉತ್ತಮ ಗೆಳೆತನಕ್ಕೆ ರಾಮ-ಸುಗ್ರೀವರು ಹೇಗೋ, ಅಸಹಜ ಗೆಳೆತನಕ್ಕೆ ದುರ್ಯೋಧನ- ಕರ್ಣರು ದೃಷ್ಟಾಂತರಾಗುತ್ತಾರೆ.
ಗುರುಪ್ರಸನ್ನ,
ಚಿಂತಾಮಣಿ.