ನಾಗರ ಪಂಚಮಿ
ನಾಗರ ಪಂಚಮಿಯ ಈ ಲೇಖನ ಇಷ್ಟು ತಡವಾಗಿ ಬರಲು ಕಾರಣ ಚಂದ್ರ ಎಂದರೆ ತಪ್ಪಾಗಲಾರದು. ಚಂದ್ರಯಾನ ಮೂರರ ಯಶಸ್ಸಿನ ಪರಿಣಾಮ ಆ ಲೇಖನಕ್ಕೆ ಪ್ರಾಮುಖ್ಯ ಸಿಕ್ಕಿ ಇದು ಹಿಂದೆ ಸರಿದಿತ್ತು. ನೆಲಕ್ಕೆ ಬಿದ್ದ ಬೀಜ ಹೇಗೆ ಮೊಳಕೆ ಒಡೆಯಲು ತವಕಿಸುತ್ತೋ ಹಾಗೆ ಈ ವಿಷಯವೂ ಹೊರಗೆ ಬರಲು ತವಕಿಸುತ್ತಿತ್ತು ( ಪ್ರಸವ ವೇದನೆ ಎನ್ನಲೇ?). ಇದೀಗ....
ನಾಗರ ಪಂಚಮಿ ಹಬ್ಬ ಅಕ್ಕಂದಿರ ಮನೆಗೆ ಹೋಗಿ, ಊಟ ಮಾಡಿ ಬೆನ್ನು ತೊಳಿಸಿಕೊಂಡು, ಹರಟೆ ಹೊಡೆದು ಬರುವುದು ಮಾಮೂಲು. ಈ ವರ್ಷವೂ ಅದೇ ನಡೆಯಿತು . ಆದರೆ ಈ ಬಾರಿ ದೊಡ್ಡಣ್ಣನ ಅನುಪಸ್ಥಿತಿ ಕಾಡಿತು.
ಚಿಕ್ಕಂದಿನಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಮಡಿಯನ್ನು ಉಟ್ಟು, ಅಕ್ಕನ ಜೊತೆ ಕೆರೆ ಏರಿಯ ಮೇಲೆ ಇದ್ದ ನಾಗರಕಲ್ಲಿಗೆ ತನಿ ಎರೆದು ಬರುವುದು ಮೊದಲ ಕೆಲಸ. ಸಾಧಾರಣವಾಗಿ ಅಂದು ಜಿಟಿ ಜಿಟಿ ಮಳೆ ಇರುತ್ತಿದ್ದದ್ದು ನೆನಪು. ಅಂದು ಹಬೆಯಲ್ಲಿ ಬೇಯಿಸಿದ ಸಿಹಿ, ಖಾರದ ಕಡುಬು (ಹೊಯ್ಗಡುಬು) ವಿಶೇಷ.
ಅಜ್ಜಿ... ಅಪ್ಪನ ಅಮ್ಮ... ಕಡುಬನ್ನು ಮಡಿಸುತ್ತಿದ್ದ ಕೈಚಳಕ ನೆನಪಿದೆ. ಹಾಗೇ.. ಎಣ್ಣೆಯಲ್ಲಿ ಕರಿದ ಯಾವುದೇ ಪದಾರ್ಥವನ್ನು ಮಾಡುವುದು ನಿಷೇಧ. ಕೆಲವರು ಜೀವನಪರ್ಯಂತ ಪಡವಲಕಾಯಿಯನ್ನು ತಿನ್ನುವುದಿಲ್ಲ. (ಹಾವೆಂಬ ಭಾವ).
ಈಚಿನ ದಿನಗಳಂತೂ ಮನೆಯಲ್ಲೇ, ಒದ್ದೆ ಬಟ್ಟೆಯಲ್ಲಿ , ನಾಗರ ಪ್ರತಿಮೆಯನ್ನು ಇಟ್ಟು, ಅದಕ್ಕೆ ಭತ್ತದ ಅರಳು, ಕಡಲೆಕಾಳು, ಅಕ್ಕಿ ಹಿಟ್ಟು, ಹಾಲು, ಅರಿಶಿನ ಕುಂಕುಮ ಎಲ್ಲಾ ಪೂಜೆ ಮಾಡುವುದು.
ನನ್ನಕ್ಕ ಗಿರಿಜಾಂಬ ಮದುವೆಯಾಗಿ ಕರಲಮಂಗಲಕ್ಕೆ ಹೋದ ನಂತರ ಬಹಳಷ್ಟು ವರ್ಷ ಹಿಂದಿನ ದಿನವೇ ಹೋಗಿ, ಅಲ್ಲಿನ ಅಶ್ವತ್ಥ ಕಟ್ಟೆಯ ಕಲ್ಲಿಗೆ ತನಿಯೆರೆದು ಬರುತ್ತಿದ್ದದ್ದು. ಅವರ ಮನೆಯಲ್ಲಿ ಮಾಡುತ್ತಿದ್ದ ವಿಶೇಷ ಕಡುಬಿನ ರುಚಿ ಬಾಯಲ್ಲಿಯೇ ಇದೆ. ನಮ್ಮ ಭಾವನ ಜೊತೆಯಲ್ಲಿ ಮಾಗಡಿಯಲ್ಲಿದ್ದ ಅವರ ಅಕ್ಕನ ಮನೆಗೆ ಸಹ ಹೋಗಿ ಸಿಹಿ ಕಡಬು ತಿಂದು ಬರುತ್ತಿದ್ದದ್ದೂ ಉಂಟು.
ನಮ್ಮ ಸಂಪ್ರದಾಯದಲ್ಲಿ ಈ ಹಬ್ಬವನ್ನು ಅಣ್ಣ ತಮ್ಮಂದಿರು ಅಕ್ಕತಂಗಿಯರ ಮಧ್ಯದ ಬಾಂಧವ್ಯವನ್ನು ಬೆಸೆಯಲೇ ಮಾಡಿದ್ದೆಂದು ನನ್ನ ಊಹೆ. " ಪಂಚಮಿ ಹಬ್ಬ ಉಳಿದೈತೆ ದಿನ ನಾಕ.. ಅಣ್ಣ ಬರಲಿಲ್ಲ ಯಾಕೋ ಕರಿಲಾಕ" ಇದು ಅಣ್ಣನಿಗಾಗಿ ಕಾಯುತ್ತಿರುವ ತಂಗಿಯ ಮನದ ತಳಮಳ.
ನನ್ನಮ್ಮ ಸತ್ತಿದ್ದು ನಾಗರ ಪಂಚಮಿಯ ಮಾರನೆಯ ದಿನ, ಹಾಗಾಗಿ ಈ ಹಬ್ಬಕ್ಕೂ ನಮ್ಮಮ್ಮನ ನೆನಪಿಗೂ ಕೊಂಡಿ. ನಾಗರಪಂಚಮಿಯೂ ಮಡಿಯ ಹಬ್ಬ... ಅಮ್ಮನ ಶ್ರಾದ್ಧವೂ ಮಡಿಯ ಕಾರ್ಯ ಹಾಗಾಗಿ... ಅಂದು ಮಡಿಯಲ್ಲಿ ಊಟ... ಒಂದು ಹೊತ್ತಿನ ಊಟ.
ಈ ಹಬ್ಬಕ್ಕೆ ನನ್ನ ಮೂರು ಭಾವಂದಿರಿಂದಲೂ ಬರುತ್ತಿದ್ದದ್ದು ವಿಶೇಷ ಆಹ್ವಾನ. ದೊಡ್ಡ ಭಾವ ಅನಂತರಾಮಯ್ಯನವರು ತುಂಬಾ ಮೃದು ಸ್ವಭಾವದವರು... " ಅಲ್ಲಿಗೇ ಬಂದ್ಬಿಡು ಊಟಕ್ಕೆ, ಬೆನ್ ತೊಳಿಸ್ಕೊಳ್ಳಕ್ಕೆ"... ಇಷ್ಟು... ನನ್ನ ಎರಡನೇ ಭಾವ ನಂಜುಂಡಯ್ಯಅವರದು... ಪೊಲೀಸ್ ಗತ್ತು.... ಆದರೆ ಬಲು ಪ್ರೀತಿ... ತೋರಿಸುವ ವೈಖರಿ ಮಾತ್ರ.." ಯಾಕೋ ಬೇಕೂಫಾ, ಇಷ್ಟು ಲೇಟಾಗಾ ಬರೋದು?" ... ಇನ್ನು ಮೂರನೇ ಭಾವ, ರಾಮರಾಯರು, ಊರಲ್ಲಿದ್ದವರು ಎಷ್ಟೋ ಸಲ ಜೊತೆಯಲ್ಲೇ ಹೋಗಿದ್ದೇನೆ.... ನೆನಪು ಸವಿ ಸವಿ.
ಹಾವಿನ ವಿಷಯಕ್ಕೆ ಬಂದರೆ ಮೊದಲ ನೆನಪು ಪಂಜೆ ಮಂಗೇಶರಾಯರ ಪದ್ಯ... ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ ಮುಗಿವೆ ಹಾಲನ್ನೀವೆ ಬಾಬಾ ಬಾಬಾ ಬಾಬಾಬಾ.... ಜೊತೆಗೆ ಪ್ರತಿ ಚರಣದ ಕೊನೆಗೆ ಬಂದ ನೀ ನೀ ನೀ ನೀ, ತಾ ತಾ ತಾ ತಾ , ಪೋ ಪೋ ಪೋ ಪೋ, ಎನ್ನುವ ಪ್ರಾಸ, ಹೇಳಲು ಸೊಗಸು. ಚಿಕ್ಕಂದಿನಲ್ಲಿ ಕಲಿತದ್ದು ನೆನಪಿಂದ ಜಾರದು. ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನ ನಿಜ ಜೀವನಕ್ಕೆ ಹಿಡಿದ ಕನ್ನಡಿ. ಹಾವನ್ನು ಕಂಡರೆ ಕುತೂಹಲ ಜೊತೆಗೆ ಭಯ, ಭುಸ್ಸ್ ಎಂದರೆ ಓಟ. ಹಾವಾಡಿಗ ಬಂದಾಗಲೆಲ್ಲ ಇದೇ ಪರಿಸ್ಥಿತಿ.
ಮುಸ್ಸಂಜೆಯಲ್ಲಿ ತೋಟ ಹೊಲ ಗದ್ದೆ ಕಡೆ ಓಡಾಡುವಾಗ ಕೈಯಲ್ಲಿ ಕೋಲು ಇಟ್ಟುಕೊಂಡು ಶಬ್ದ ಮಾಡಿಕೊಂಡು ಹೋಗಬೇಕು ಎಂಬುದು ಹಳ್ಳಿಯಲ್ಲಿದ್ದ ನಿಯಮ.. ಯಾವುದಾದರೂ ಹುಳಹುಪ್ಪಟೆಗಳು ಇದ್ದರೆ ಅವು ನಮ್ಮಿಂದ ದೂರ ಹೋಗುತ್ತವೆ ಎನ್ನುವ ಜೀವನ ಅನುಭವ. ಹಾವು ರೈತ ಸ್ನೇಹಿ...ಬೆಳೆ ನಾಶಮಾಡುವ ...ಅದರಲ್ಲೂ ಇಲಿ, ಹೆಗ್ಗಣದಂತ ಪ್ರಾಣಿಗಳನ್ನು ತಿಂದು..ಪರಿಸರ ಸಮತೋಲನ ಮಾಡುತ್ತದೆ.
ಹೆಬ್ಬಾವು ಕೇರೆಹಾವು, ಹಸಿರು ಹಾವು , ಕೊಳಕುಮಂಡಲ, ಗಿಲ್ಕಿ ಹಾವು ಗೋಧಿನಾಗರ ಕರಿ ನಾಗರ , ಮಿಡಿ ನಾಗರ , ಅನಕೊಂಡ ಹೀಗೆ ಬಗೆ ಬಗೆಯ ಹಾವುಗಳಿದ್ದರೂ ಸಹ , ಪೂಜೆಗೆ ನಾಗರಹಾವು ಮಾತ್ರ ಶ್ರೇಷ್ಠ., ಅದೂ ಹೆಡೆ ಎತ್ತಿದ ನಾಗನಿಗೆ ಪೂಜೆ.
ನಾಗ ಪೂಜೆಯಲ್ಲಿ ನಾಗರ ಪ್ರತಿಷ್ಠೆಗೆ ವಿಶಿಷ್ಟ ಸ್ಥಾನ. ಹಾಗಾಗಿ ಎಲ್ಲ ಊರಿನ ಅಶ್ವತ್ಥ ಕಟ್ಟೆಯಲ್ಲೂ ನಾಗರ ಕಲ್ಲುಗಳು. ಕುಕ್ಕೆ, ಘಾಟಿಯಂಥ ಸ್ಥಳಗಳಲ್ಲಿ ನಾಗ ಪ್ರತಿಷ್ಠೆಯ ಪೂಜೆ ಜೋರು.
ಇನ್ನು ಆಶ್ಲೇಷ ಬಲಿ ಎನ್ನುವ ಪೂಜೆ, ಅದಕ್ಕೆ ಬಿಡಿಸುವ ರಂಗೋಲಿಯ ಚಿತ್ತಾರ ಕಣ್ಣಿಗೆ ಆನಂದ. ಮಕ್ಕಳಾಗಲು ಹಾಗೂ ಚರ್ಮರೋಗ ನಿವಾರಣೆಗೆ ನಾಗರಪೂಜೆ ಒಂದು ದಾರಿ.
ಲೇಪಾಕ್ಷಿಯಲ್ಲಿ ಇರುವ ಹೆಡೆಯೆತ್ತಿದ ಹಾವಿನ ಬಹುದೊಡ್ಡ ವಿಗ್ರಹ ನನಗೆ ರುದ್ರ ಸುಂದರ. ಹಾವಿಗೂ ಹುತ್ತಕ್ಕೂ ನಂಟು. ಇರುವೆ ಕಟ್ಟಿದ ಹುತ್ತದಲ್ಲಿ ಹಾವಿನವಾಸ. ಹುತ್ತದ ಮಣ್ಣು ತುಂಬ ತಂಪು ಎಂದು ಹೇಳುತ್ತಾರೆ, ಹಾಗಾಗಿ ಮಣ್ಣಿನ ಸ್ನಾನಕ್ಕೆ(mud bath) ಹುತ್ತದ ಮಣ್ಣು ಉಪಯೋಗ. ನನ್ನಮ್ಮನ ಅಂತ್ಯ ಸಂಸ್ಕಾರ, ಹಾಗೂ ನಂತರದ ಹತ್ತು ದಿನಗಳ ಕಾಲ ತಣ್ಣೀರಿನ ಸ್ನಾನ ಮಾಡಿ, ಉಷ್ಣ ಆಗುತ್ತದೆ ಎಂಬ ಕಾರಣಕ್ಕಾಗಿ, ಒಂದು ಹಂತದಲ್ಲಿ ಹುತ್ತದ ಮಣ್ಣನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದ ಕ್ರಮವೂ ಇತ್ತು.
ಹಾವಿನ ದ್ವೇಷ 12 ವರ್ಷ ಎಂಬ ಗಾದೆ ಇದ್ದರೂ, ಹಾವು ಹಾಲು ಕುಡಿಯುತ್ತದೆ ಎಂಬ ನಂಬಿಕೆ ಇದ್ದರೂ, ಹಾವು ಪುಂಗಿಯ ನಾದಕ್ಕೆ ತಲೆ ಆಡಿಸುತ್ತದೆ ಎಂಬ ನಮ್ಮ ತಿಳುವಳಿಕೆ... ಮಿಥ್ಯವಷ್ಟೇ.
ಹಾವಿಗೂ ರಾಮಾಯಣ ಮಹಾಭಾರತಕ್ಕೂ ನಂಟು ಎಂದು ನನ್ನ ವಿಶ್ಲೇಷಣೆ (ತಲೆ ಹರಟೆ?) ರಾಮಾಯಣವನ್ನು ಬರೆದದ್ದು ವಾಲ್ಮೀಕಿ, ಹೆಸರೇ ಸೂಚಿಸುವಂತೆ ಹುತ್ತ.. ಅದು ಹಾವಿನ ವಾಸ ಸ್ಥಾನ, ಅದಲ್ಲದೇ ಕುಮಾರವ್ಯಾಸ ಹೇಳಿದ " ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ".... ಸಾಕು ಸಂಭಂಧವನ್ನು ರೂಪಿಸಲು. ಮಹಾಭಾರತದ ಕಥಾ ನಿರೂಪಣೆಯಲ್ಲಿ , ಕೇಳು ಜನಮೇಜಯ ಮಹಿಪಾಲ ಎಂದು ಅಲ್ಲಲ್ಲಿ ಬರುತ್ತದೆ.... ಈ ಜನಮೇಜಯ ಪರೀಕ್ಷಿತ ರಾಜನ ಮಗ... ಋಷಿ ಶಮಿಕರ ಮಗ ಶೃಂಗಿ ಕೊಟ್ಟ - ತಕ್ಷಕ ಎಂಬ ಹಾವಿನಿಂದ ಸಾವು - ಎನ್ನುವ ಶಾಪದಿಂದ ತಪ್ಪಿಸಿಕೊಳ್ಳಲು ಪರೀಕ್ಷಿತ ರಾಜ , ವಿಶೇಷ ಭದ್ರತೆಯೊಂದಿಗೆ ಏಳು ದಿನಗಳ ಕಾಲ ಭದ್ರಕೋಟೆಯಲ್ಲಿರುತ್ತಾನೆ... ಆದರೆ ತಕ್ಷಕ ಸಣ್ಣ ಹುಳುವಿನ ರೂಪದಲ್ಲಿ ಹಣ್ಣಿನೊಳಗಿದ್ದು , ಪರೀಕ್ಷಿತ ತಿನ್ನುವ ವೇಳೆಯಲ್ಲಿ ತಕ್ಷಕನ ರೂಪ ತಾಳಿ , ಪರೀಕ್ಷಿತನನ್ನು ಕಚ್ಚುತ್ತಾನೆ ಎನ್ನುವುದು ಕಥೆ. ಸಾವು ಯಾವಾಗ, ಎಲ್ಲಿ, ಹೇಗೆ ಹಾಗೂ ನಿಗೂಢ ಎನ್ನುವುದು ವಿಧಿನಿಯಮ ಅಂದರೆ ಹೆಚ್ಚು ಸರಿಯಲ್ಲವೇ?
ಹಾವಿಗೆ ಹಾಲೆರೆದೇನು ಫಲ ಎಂದು ಹಾಡಿದ ದಾಸರು, ಹಾಲೆರೆದರೂ ಹಾವು ವಿಷ ಕಕ್ಕುವುದನ್ನು ಬಿಡದು ಎಂಬ ಅಭಿಪ್ರಾಯ ಉಳ್ಳವರಾಗಿದ್ದರೇ? ನನಗೆ ತಿಳಿಯದು.
ಎಸ್ ಎಲ್ ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ, ವಿಶ್ವನ ತುಂಟಾಟದ, ಹಾವಿಗೆ ಕೊಟ್ಟ ಹಿಂಸೆ, ಅದರಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಲು ನಂಜಮ್ಮ ತನ್ನ ಮಗನನ್ನು, ತಮ್ಮನ ಮನೆಗೆ ಕಳಿಸಿದ ಪ್ರಸಂಗ, ಹಾವಿನ ದ್ವೇಷದ ಬಗ್ಗೆ ಇರುವ ಭಯವನ್ನು ಧೃಡಪಡಿಸುತ್ತದೆ.
ನಾಗರಹಾವು.. ಶ್ರೀಹರಿಯ ಮಂಚ, ಗಣೇಶನಿಗೆ ಬೆಲ್ಟು, ಶಿವನಿಗೆ ತಲೆಯ ಮೇಲಿನ ಆಭರಣ... ನಾಗಾಭರಣ....ಹೀಗೆ ಬಹುರೂಪಿ.
ನಾಗಾಭರಣ ನಿರ್ದೇಶಿಸಿದ ಚಿತ್ರ ನಾಗಮಂಡಲ ಹಾವಿನ ಸುತ್ತ ಸುತ್ತುವ ಕಥೆ.... ಹಾವಿನ ಕಥೆಯನ್ನು ಆಧರಿಸಿದ ಚಲನಚಿತ್ರಗಳು , ಸೀರಿಯಲ್ ಗಳು ಎಲ್ಲ ಭಾಷೆಯ ಎಲ್ಲ ಜನರ ಆಸಕ್ತಿಯನ್ನು ಇಂದಿಗೂ ಹಿಡಿದಿಟ್ಟಿವೆ.
ನಾಗರ ಹಾವು ಪೊರೆಯನ್ನು ಬಿಡುವುದು, ಅದರ ಜೀವನದ ಒಂದು ಹಂತ. ಪೊರೆ ಬಿಟ್ಟ ನಂತರ ಹಾವು ಒಂದಷ್ಟು ಹಳೆಯ ಭಾರವನ್ನು ಕಡಿಮೆ ಮಾಡಿಕೊಂಡು ಉತ್ಸಾಹದಿಂದ ಜೀವನವನ್ನು ಮುಂದುವರಿಸಬಹುದೇನೋ... ಹಾಗೆಯೇ ನಾವು ಸಹ ಹೊತ್ತಿರುವ ದುರಾಲೋಚನಗಳು, ಪಾಪ ಪ್ರಜ್ಞೆಗಳು ಹಾಗೂ ಇನ್ನಿತರ ಭಾರಗಳನ್ನು ಕಳಚಿ ಹಾಕಿ ಹೊಸ ಜೀವನ ಆರಂಭಿಸಿದರೆ, ಅದು ನಾವುಗಳು ಹಾವಿನಿಂದ ಕಲಿಯಬಹುದಾದ ಒಂದು ಪಾಠ ಆಗಬಹುದೇನೋ...
ಕಲಿಕೆ ಜೀವನದ ಯಾವ ಹಂತದಲ್ಲಾದರೂ ಇರಬಹುದು ಬರಬಹುದು... ಕಲಿಯೋಣವೇ?
ಎಲ್ಲರಿಗೂ ನಾಗ ನಮಸ್ಕಾರ.....
ಮತ್ತೊಮ್ಮೆ ಸರಳ ಸುಂದರ ಬರವಣಿಗೆ... ಸುಮ್ಮನೆ ಒಮ್ಮೆ ಯೋಚಿಸಿ ಹಬ್ಬ ಮತ್ತು ದೇವರ ಕಲ್ಪನೆ ಇಲ್ಲದ ಸಮಾಜ ಬಹಳ ನೀರಸ, ಮತ್ತು ಇವು ಕೋಟ್ಯಾಂತರ ಜನರ ಪಾಲಿಗೆ ಆದಾಯದ ಮೂಲ ಕೂಡ ಮುಂದೆ ಹಬ್ಬಗಳ ಸಾಲು ಪ್ರಾರಂಭ ಸ್ವಲ್ಪ ಬದಲಾವಣೆ ಮಾಡಿ ಆದಷ್ಟು ಕಸ ಕಡಿಮೆ ಮಾಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ನಾವು ಮುಂದಿನ ಪೀಳಿಗೆಗೆ ಕೂಡ ಬಹುದಾದ ಕಾಣಿಕೆ... ಮತ್ತಷ್ಟು ನೆನಪುಗಳ ಬರಹಕ್ಕಾಗ
ReplyDeleteನಿರೀಕ್ಷೆ
ಬಾಬು
ಯಾವುದೇ ವಿಷಯವನ್ನು ಲೇಖನದಲ್ಲಿ ಮಿಳಿತಗೊಳಿಸಿಕೊಳ್ಳುವಾಗ ಅದರ ೩೬೦° ಪೂರ್ಣವಾಗಿ ಬಿಂಬಿಸುವುದು ನಿಮಗೆ ಒಲಿದಿರುವ ಕಲೆಯೆಂದರೆ ತಪ್ಪಾಗಲಾರದು .
ReplyDeleteಲೇಖನ ಮತ್ತು ನಾಗರಪಂಚಮಿಯ ಮಧ್ಯೆ ಚಂದ್ರಯಾನ-೩ ಅಡ್ಡ ಬಂದರೆ ಅದಕ್ಕೆ ಯಾವ ಗ್ರಹಣ ಎನ್ನಬೇಕೋ?(ತೆಳುಹಾಸ್ಯಕ್ಕಾಗಿ)
ಲೇಖನ ಸಹಜ ಸುಂದರವಾಗಿ ಮೂಡಿಬಂದಿದೆ.
ಧನ್ಯವಾದಗಳು.
ಗುರುಪ್ರಸನ್ನ,
ಚಿಂತಾಮಣಿ.