ಪ್ರಶ್ನೋತ್ತರ - ಪ್ರಶ್ನಾತೀತ

 



 ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಬಾರಿ ಉತ್ತರಿಸಿದ ಒಂದು ಪ್ರಶ್ನೆ ಯಾವುದು? ಎಂಬ ಪ್ರಶ್ನೆಯನ್ನು ನನಗೆ ಕೇಳಿದರೆ, ನನ್ನ ಉತ್ತರ .... ನಿನ್ನ ಹೆಸರೇನು? ವಯಸ್ಸಿನ ಬೇರೆ ಬೇರೆ ಹಂತದಲ್ಲಿ ಪ್ರಶ್ನೆಯ ರೂಪ ಬೇರೆ ಬೇರೆಯಾದರೂ ಭಾವ ಮಾತ್ರ ಒಂದೇ, ಅದು ಹೆಸರನ್ನು ತಿಳಿಯುವುದು. ಎಷ್ಟೋ ಬಾರಿ ಈ ಪ್ರಶ್ನೆಯು ಇಲ್ಲದೆ ನನ್ನ ಹೆಸರನ್ನು ಹೇಳಿ ನಾನೇ  ಪರಿಚಯಿಸಿಕೊಂಡದ್ದು.  

ಯಾವುದೇ ಮಾತುಕತೆ ಪ್ರಾರಂಭವಾಗುವುದು ಪ್ರಶ್ನೆಯಿಂದಲೇ ಅಥವಾ ಪ್ರಶ್ನಾರ್ಥಕ ರೂಪದ ವಾಕ್ಯದಿಂದಲೇ. ಉದಾಹರಣೆಗೆ ಸೆಖೆ ಶುರುವಾಗಿಹೋಯಿತು ಅಲ್ವಾ... .ಮುಂದುವರಿಯುವುದೂ ಪ್ರಶ್ನೋತ್ತರಗಳಿಂದಲೇ... ಕೇಳುವುದು ಹೇಳುವುದು.

ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳು.. ಕಾಫಿ ಆಯ್ತಾ? ಆರಾಮನಾ? How are you ? ಹೇಗಿದ್ದೀರಾ? ಹೀಗೆ .  ಕಾಫಿ ಆಯ್ತಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.  ಆಯ್ತು ಎಂಬ ಉತ್ತರ ಹಸಿ ಸುಳ್ಳು..  ಯಾಕೆಂದರೆ ನಾನು ಕಾಫಿ ಕುಡಿಯುವವನಲ್ಲ.   ಇದು ಎಂದಾದರೊಮ್ಮೆ ಭೇಟಿಯಾಗುವ ವ್ಯಕ್ತಿಗಳಿಗೆ ಸಂಕೋಚವಿಲ್ಲದೆ ಕೊಡುವ ಉತ್ತರ.  ಆಗಿಲ್ಲ ಎಂಬ ಉತ್ತರಕ್ಕೆ ಮತ್ತೊಂದು ಪ್ರಶ್ನೆ, ಹಾಗಾಗಿ ಉತ್ತರದ ಬದಲು ಒಂದು ಒಣ ನಗೆ. ಸಾಕಷ್ಟು ಪರಿಚಿತ ವ್ಯಕ್ತಿಗಳು, ಈ ಪ್ರಶ್ನೆಯನ್ನು ಕೇಳಿ, ನಂತರ ಅವರೇ ನೀವು ಕುಡಿಯೋದೇ ಇಲ್ವಲ್ಲ ಅನ್ನುವ ಉತ್ತರವನ್ನು ಕೊಡುವುದುಂಟು.

How are you?  ಎಂಬ ಪ್ರಶ್ನೆಗೆ ನನ್ನ ಉತ್ತರ ಬಹಳ ಸಲ as seen ಎಂದು. ಈ ಉತ್ತರ ನಿರೀಕ್ಷಿಸದ ಕೆಲವರು ಸುಮ್ಮನಾಗುತ್ತಾರೆ. ನನ್ನ ಸ್ವಭಾವ ಅರಿತವರು ಮೆಚ್ಚುಗೆಯ ಮಾತನ್ನು ಆಡಿದ್ದಿದೆ.

ನಾನು ಬಹುಮೆಚ್ಚಿದ HN - ನ್ಯಾಷನಲ್ ಕಾಲೇಜಿನ ಹೆಚ್. ನರಸಿಂಹಯ್ಯನವರು ತಮ್ಮ ಆಫೀಸ್ ರೂಮಿನಲ್ಲಿ ಬರೆಸಿದ್ದು ಪ್ರಶ್ನಾರ್ಥಕ ಚಿಹ್ನೆ. ಪ್ರಶ್ನಿಸದೆ ಏನನ್ನು ನಂಬಬೇಡ ಎನ್ನುವ ಸಂದೇಶ. ವೈಜ್ಞಾನಿಕವಾಗಿ ಅದು ಸರಿ ಎನಿಸಿದರೂ.. ನದಿ ಮೂಲ, ಋಷಿ ಮೂಲ ಹುಡುಕಬಾರದು ಎಂಬ ನಾಣ್ಣುಡಿಯನ್ನು ಗೌರವಿಸಿದರೆ... ಕೆಲವನ್ನಾದರೂ ಶ್ರದ್ಧೆ ಭಕ್ತಿಯಿಂದ ನಂಬುವುದು ಒಳ್ಳೆಯದೇ ಎಂದು ನನ್ನ ನಂಬಿಕೆ.

ತರಗತಿಯಲ್ಲಿ ಪಾಠದ ನಂತರ, ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದಾಗ, ಬಹು ಪಾಲು ಮೌನವೇ ಆವರಿಸುತ್ತದೆ. ಅದಕ್ಕೆ ಒಬ್ಬ ಉಪಾಧ್ಯಾಯರು ( ರಾಷ್ಟ್ರೀಯ ವಿದ್ಯಾಲಯದ DVK.... DV ಕೃಷ್ಣಮೂರ್ತಿ ಯವರು ಎಂಬ ಅನುಮಾನ) ಹೇಳಿದ್ದು..

ಎಲ್ಲಾ ಅರ್ಥ ಆಗಿದ್ರೆ ಕೇಳಕ್ಕೆ ಪ್ರಶ್ನೆ ಇಲ್ಲ, ಏನು ಅರ್ಥ ಆಗದೆ ಇದ್ರೆ ಕೇಳೋದು ಏನೂ ಇಲ್ಲ, ಅರ್ಧಂಬರ್ಧ ಅರ್ಥ ಆಗಿದ್ರೆ ಏನೋ ಕೇಳಿ ದಡ್ಡ ಅಂತ ಯಾಕನ್ಸ್ಕೋಬೇಕು.. ಹೀಗೆ ಪ್ರಶ್ನೆಗಳೇ ಇರಲ್ಲ.  ಮೂರನೇ ಕಾರಣ ಬಹಳಷ್ಟು ಸಲ ನನಗೆ ಅನ್ವಯಿಸುತ್ತದೆ.

ಹೈಸ್ಕೂಲಿನ ಸಮಯ, ತರಗತಿಯಿಂದ ಉಪಾಧ್ಯಾಯರು ಹೊರಗೆ ಹೊರಟ ನಂತರ, ಆ ಜಾಗಕ್ಕೆ ಬರುತ್ತಿದ್ದವನು ಚಂದ್ರಶೇಖರ, ಏನಾದರೂ ಒಂದು ತಮಾಷೆಯ ಮಾತನಾಡುತ್ತಾ ಇದ್ದವ. ಅವನ ದಾಷ್ಟೀಕ ನನಗೆ ಮೆಚ್ಚುಗೆ.  ಹಿಂದಿ ತರಗತಿಯಲ್ಲಿ, ಮತಲಬ್ ಕ ಮತಲಬ್ ಕ್ಯಾ ಹೈ ?  ಎಂದು ಕೇಳಿ ಬೈಸಿಕೊಂಡದ್ದು... ಉಪಾಧ್ಯಾಯರು ಹೋದ ನಂತರ, ನಾವೆಲ್ಲ ನಕ್ಕಾಗ ಅವನು ಹೆಮ್ಮೆ ಪಟ್ಟದ್ದು ಒಂದು ತಮಾಷೆಯ ಪ್ರಸಂಗ.

ಕೆಲವರಿಗೆ ಏನಾದರೂ ಪ್ರಶ್ನೆ ಕೇಳಿ ಬುದ್ಧಿವಂತರೆಂದು ಬಿಂಬಿಸಿಕೊಳ್ಳುವ ಚಪಲ. ಎಷ್ಟೋ ಸಲ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ತಲೆ ಹರಟೆ ಎಂದು ಬೈಸಿಕೊಂಡಿದ್ದವರನ್ನು ನೋಡಿದ್ದೇನೆ. ಪತ್ರಿಕಾಗೋಷ್ಠಿಗಳಲ್ಲಿ, ಕೆಲ ರಾಜಕಾರಣಿಗಳಿಗೆ ಮುಜುಗರ ಮಾಡಲು ಇಂತಹ ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು ಉಂಟು, ಅದು ಒಂದು ಬಗೆಯ ಜಾಣತನ.

ಕೆಲವು ಸಂದರ್ಶನಗಳಲ್ಲಿ, it is a good question, ಒಳ್ಳೆಯ ಪ್ರಶ್ನೆ ಕೇಳಿದಿರಿ ಎಂದು ಉತ್ತರ ಹೇಳುವುದುಂಟು. ಈ ಪ್ರಶ್ನೆ ಅವರಿಗೆ ಪ್ರಿಯವಾದ ವಿಷಯದ ಬಗ್ಗೆ ಇರಬಹುದೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.

Quiz - ರಸಪ್ರಶ್ನೆ ಕಾರ್ಯಕ್ರಮವಂತು ಹೆಸರೇ ಹೇಳುವಂತೆ ಪ್ರಶ್ನೆಗಳ ಸರಮಾಲೆ. ಅದರಲ್ಲಿ rapid fire questions- ಸಿಡಿಗುಂಡು ಪ್ರಶ್ನೆಗಳು ಎಂಬ ವಿಭಾಗ... ಅಲ್ಲಿ  ಒಂದಾದ ನಂತರ ಒಂದು ಪ್ರಶ್ನೆಗಳ ಸುರಿಮಳೆ ಅದಕ್ಕೆ ಅಷ್ಟೇ ಬೇಗ ಉತ್ತರ/ ನಿರುತ್ತರ. ಇದು ನನ್ನ ದೃಷ್ಟಿಯಲ್ಲಿ question ಬಾಂಬುಗಳು.

ಆಪ್ತ ಸಮಾಲೋಚನೆಯ ತರಬೇತಿ ಶಿಬಿರಗಳಲ್ಲಿ ಮಾತನಾಡುವ ಕಲೆಯಲ್ಲಿ ... ಪ್ರಶ್ನೆಗಳ ಸ್ವರೂಪವನ್ನು ತಿಳಿಸಿಕೊಡಲಾಗುತ್ತದೆ.  ಪ್ರಶ್ನೆಗಳು ಅವರನ್ನು ಮಾತಾಡಲು  ಪ್ರೇರೇಪಿಸಬೇಕು... ಉತ್ತರಿಸಲು ಮುಜುಗರ ಆಗುವಂತಹ ಪ್ರಶ್ನೆಗಳನ್ನು ಕೇಳಬಾರದು, ಪ್ರಶ್ನೆಗಳ ಬಾಂಬನ್ನು ಹಾಕಬಾರದು...ಮುಂತಾಗಿ.

ಹೆಣ್ಣಿನ ವಯಸ್ಸು, ಗಂಡಿನ ಸಂಬಳ ಬಗ್ಗೆ ಪ್ರಶ್ನೆ  ಕೇಳಬಾರದೆಂಬುದು ರೂಢಿಯಲ್ಲಿರುವ ಒಂದು ನಿಬಂಧನೆ. ಹಾಗಾಗಿ ಅದರ ಬಗ್ಗೆ ಒಂದು ಸ್ಥೂಲ ಕಲ್ಪನೆ ಮಾಡಿಕೊಳ್ಳಲು ಪೂರಕ ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಳ್ಳುವುದು. ಇದನ್ನು ನಾನು ಮೊದಲು ಗ್ರಹಿಸಿದ್ದು ನನ್ನ ಮಗಳನ್ನು ಡಾ. ಕುಮಾರಸ್ವಾಮಿ ಎಂಬುವರ ಬಳಿ ಕರೆದುಕೊಂಡು ಹೋದಾಗ. ಮಗುವಿನೊಡನೆ ಮಾತಾಡುತ್ತಾ, ಯಾವ ಕ್ಲಾಸ್ ಪುಟ್ಟ ಎಂದು ಕೇಳಿ ಬಂದ ಉತ್ತರ 2ಕ್ಕೆ ಐದು ವರ್ಷ ಸೇರಿಸಿ, ವಯಸ್ಸು ಏಳು ವರ್ಷ ಎಂದು ಬರೆದದ್ದು. 

ಸುಧಾ ವಾರಪತ್ರಿಕೆಯಲ್ಲಿ ನೀವು ಕೇಳಿದಿರಿ ಎಂಬ ವಿಭಾಗದಲ್ಲಿ ಓದುಗರ ಪ್ರಶ್ನೆಗಳಿಗೆ ಬೀಚಿಯವರು ಕೊಡುತ್ತಿದ್ದ ಉತ್ತರಗಳು, ಕಚಗುಳಿ ಇಡುತ್ತಿದ್ದವು. ದಡ್ಡ ಪ್ರಶ್ನೆಗಳಿಗೂ ಜಾಣ ಉತ್ತರ ಕೊಡುತ್ತಿದ್ದ ಅವರ ಶೈಲಿ ಮತ್ತು ವಿಷಯ ನನಗೆ ಅಚ್ಚು ಮೆಚ್ಚು. ಆಯ್ದ ಪ್ರಶ್ನೋತ್ತರಗಳ ಸಂಕಲನವೇ ಉತ್ತರ ಭೂಪ ಎಂಬ ಪುಸ್ತಕ.

ಈಗಂತೂ ರಾಜಕಾರಣಿಗಳು ಕಂತೆ ಕಂತೆ ಪ್ರಶ್ನೆಗಳನ್ನು ಪತ್ರಿಕೆಗಳ ಮೂಲಕ ಎದುರಾಳಿಗಳಿಗೆ ಹಾಕುತ್ತಾರೆ... ಅದಕ್ಕೆ ಉತ್ತರ ಬರುವುದಿಲ್ಲವೆಂದು ತಿಳಿದಿದ್ದರೂ. ಇದು ಸಾಮಾನ್ಯ ಜನರ ಮುಂದೆ ತಾವು ನಿಸ್ಪೃಹರೆಂದು ತೋರಿಸಿಕೊಳ್ಳುವ ಚಪಲ.

ರಸ್ತೆಯಲ್ಲಿ ನಡೆಯುವ ಸಣ್ಣಪುಟ್ಟ ಜಗಳಗಳ ಸಮಯದಲ್ಲಿ ನಾನ್ಯಾರು ಗೊತ್ತಾ? ಎಂದು ಕೇಳುವ ಜನ ಹಣ / ಅಧಿಕಾರ ಮದದಿಂದ ಮೆರೆಯುತ್ತಿರುವವರು. ಇಂಥವರಿಗಾಗಿಯೇ ಇರಬಹುದು ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು... ಎಂಬ ಪದ್ಯ. 

ಡಾಕ್ಟರ್ ಭೇಟಿಯಾಗಲು ಹೋದರೆ ಮೊದಲ ಪ್ರಶ್ನೆಯೇ ಏನಾಗ್ತಿದೆ?... ಅದರ ಉತ್ತರಕ್ಕೆ ತಕ್ಕಂತೆ ತಪಾಸಣೆ ಹಾಗೂ ಔಷದ. ಇನ್ನು ಪ್ರಾಣಿಗಳ ಡಾಕ್ಟರ್ ಪ್ರಶ್ನೆ ಮಾಡುವಂತೆಯೇ ಇಲ್ಲ... ಉತ್ತರ ಮಾತ್ರ ಕಂಡುಕೊಳ್ಳುವ ಗುರುತರ ಜವಾಬ್ದಾರಿ ಅವರ ಮೇಲಿದೆ.

ಮಾತು ಬಾರದ, ಪುಟ್ಟ ಮಕ್ಕಳ ಜೊತೆ ಮಾತಾಡುವಾಗ, ಪ್ರಶ್ನೆ ಉತ್ತರ ಎರಡೂ ಮಾತಾಡುವವರ ಜವಾಬ್ದಾರಿ... ಮಗುವಿನದು ನಗು ಅಥವಾ ಅಳುವಿನ ಉತ್ತರ.           ಜಾಣ ಅಜ್ಜಿಯರು ಮಗುವಿನ ಅಳುವಿನ ಧಾಟಿಯಿಂದಲೇ ಅದಕ್ಕೆ ಇರುವ ತೊಂದರೆಯನ್ನು ಗುರುತಿಸಬಲ್ಲರು.

ಯಾಕಳುವೆ ಎಲೆಕಂದ ಬೇಕಾದ್ದು ನಿನಗೀವೆ... ನಾಕೆಮ್ಮೆ ಕರೆದ ನೊರೆ ಹಾಲು... ಜನಪದ ಹಾಡು.

ಪುರಂದರದಾಸರಂತೂ... ಯಾರೇ ರಂಗನ ಯಾರೇ ಕೃಷ್ಣನ ಯಾರೇ ರಂಗಯ್ಯನ ಕರೆಯ ಬಂದವರು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ... ಇದು ದೇವರಿಗೆ ಎಸೆದ ಸವಾಲಿನ ರೂಪದ ಪ್ರಶ್ನೆ.

ಕರಿ ಮಕರಿಗೆ ಸಿಕ್ಕಿ ಮೊರೆ ಇಡುತಿರುವಾಗ ಆದಿ ಮೂಲ ಎಂಬ ನಾಮವೇ.... ಕಾಯ್ತೋ ಎಂಬುದನ್ನು ನಾಮವೇಕಾಯ್ತೋ? ಎಂದು ಅರ್ಥ ಮಾಡಿಕೊಂಡಿದ್ದೆ.. ಅದು ಪ್ರಶ್ನೆಯೇ ತಾನೇ.

ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನಾರಮ್ಮ... ಎಂಬ ಪ್ರಶ್ನೆಯೊಂದಿಗೆ ಆರಂಭ ಮಾಡಿ... ಗಣೇಶನ ವರ್ಣನೆಯನ್ನೇ ಮಾಡುತ್ತಾರೆ, ಕನಕದಾಸರು. 

ಶಿವ ಪಾರ್ವತಿಗೆ, ತವರು ಮನೆಯಿಂದ ಏನು ತಂದಿದ್ದೀಯಾ ಎಂದು ಅಣಕಿಸುವ ಪ್ರಶ್ನೆ ಮಾಡಿದಾಗ .... ತನಗೆ ಕೊಟ್ಟ ವಿವಿಧ ವಸ್ತುಗಳನ್ನು ಪಟ್ಟಿಮಾಡಿ.. ಕೊನೆಗೆ ಇಷ್ಟನೂ ನನಗಿತ್ತು.. ನನ್ನನೇ ನಿಮಗಿತ್ರು... ನಮ್ಮೋರು ಬಡವರು ಇನ್ನೇನನಿಹರು, ಎಂದು ಪ್ರಶ್ನೆಯ ಮೂಲಕವೇ ಉತ್ತರಿಸುವ ಪಾರ್ವತಿಯ ಜಾಣ್ಮೆಯನ್ನು ಎತ್ತಿ ತೋರಿಸುವ  ಹಾಡನ್ನು ನಮ್ಮಮ್ಮ ಹೇಳುತ್ತಿದ್ದದ್ದು.

ಸವಾಲು ಜವಾಬು, ಸಂವಾದ ಎಂಬುದು ಪ್ರಶ್ನೋತ್ತರದ ಇನ್ನೊಂದು ಮುಖ. ಇಲ್ಲಿ ಪ್ರಶ್ನೆ ಸವಾಲು ರೂಪದಲ್ಲಿರುತ್ತದೆ, ಎದುರಾಳಿ ಸರಿಯಾದ ಉತ್ತರ ಹೇಳಿ ಗೆಲ್ಲಬೇಕು, ಉತ್ತರ ತಿಳಿಯದಿದ್ದರೆ ಸೋಲು. 

ಹಿಂದೆ ರಾಜರ ಆಸ್ಥಾನಗಳಲ್ಲಿ, ಬೇರೆಯ ರಾಜ್ಯದಿಂದ ಬಂದ ವಿದ್ವಾಂಸರು, ಪಂಡಿತರು, ಹಾಕುವ ಸವಾಲುಗಳನ್ನು ತಮ್ಮ ರಾಜ್ಯದ ಪಂಡಿತರು ಉತ್ತರಿಸಿದರೆ  ರಾಜನಿಗೆ ಹೆಮ್ಮೆ.

ಶಂಕರಾಚಾರ್ಯರು ಹಾಗೂ ಮಂಡನ ಮಿಶ್ರ ಅವರ ಮಧ್ಯೆ ನಡೆದ ಸಂವಾದ, ಮಂಡನ ಮಿಶ್ರರ ಮಡದಿ ಉಭಯ ಭಾರತಿಯ, ನಿರ್ಣಯದಂತೆ, ಮಂಡನ ಮಿಶ್ರರು ಸೋಲೊಪ್ಪಿಕೊಂಡು ಶಂಕರಾಚಾರ್ಯರ ಶಿಷ್ಯರಾದ ಕಥೆಯನ್ನು, ಹಳ್ಳಿಯಲ್ಲಿ ನಮ್ಮ ಮನೆಗೆ ಬಂದಿದ್ದ ಒಬ್ಬ ಶಾಸ್ತ್ರಿಗಳಿಂದ ಕೇಳಿದ್ದು.

ಸಂವಾದದ ಸ್ವರೂಪವನ್ನು   ತುಂಬಾ ಯಶಸ್ವಿಯಾಗಿ ಬಳಸಿಕೊಂಡದ್ದು , T N ಸೀತಾರಾಮ್. ಅವರ ಧಾರಾವಾಹಿಗಳ ಬಗ್ಗೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಜನಪ್ರಿಯಗೊಳಿಸಿದ್ದು.  T N ಸೀತಾರಾಮ್, ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದುವಾಗ ನನ್ನ ಸಹಪಾಠಿ ಆಗಿದ್ದವರು.

ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ, ಸವಾಲು ಜವಾಬು ಒಂದು ಹಾಡಿನ ರೂಪದಲ್ಲಿದೆ. ಅದರ ಒಂದು ಚರಣದ ದೃಶ್ಯ ನನ್ನ ನೆನಪಿನ ಪುಟದಲ್ಲಿ ಭದ್ರವಾಗಿದೆ.... ಇದೋ ನಿಮಗಾಗಿ  ಆಳು ಅರಸನ ಕಣ್ಣ ಬಾಚಿ ತಬ್ಬುವುದು       ಕಲ್ಲು ಹಾಸಿಗೆ ಒಂದು ಲೆಕ್ಕಕೇ ತರದು,    ಎಚ್ಚರಿಕೆ ತಪ್ಪಲದು ಗೊರಕೆ ಹೊಡೆಯುವುದು, ಸ್ವಚ್ಛ ಮನದವರೊಡನೆ ಸರಸವಾಡುವುದು  ನಿದ್ದೆ ... ನಿದ್ದೆ... ನಿದ್ದೆ... ಎಂದಾಗ ಹಾಸ್ಯ ನಟ ನರಸಿಂಹರಾಜುರವರು ಗೊರಕೆ ಹೊಡೆಯುವುದು ನೋಡಿ ನಕ್ಕಿದ್ದೇ ನಕ್ಕಿದ್ದು.

ಇನ್ನೊಂದು ಮುಖ, ಪ್ರಶ್ನೆಯನ್ನು ಎದುರಿಸುವ ಭಯ. ಕೊನೆಯ  ಮಗನಾಗಿ ನಮ್ಮಪ್ಪನಿಗೆ ನಾನೆಷ್ಟು ಮುದ್ದೋ, ಅದಕ್ಕೂ ಮೀರಿದ ಭಯ ನಮ್ಮಪ್ಪನ ಗಣಿತದ ಪಾಠ.  ಎಷ್ಟಾವರ್ತಿ ಹೋಗುತ್ತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ, ತಿಣುಕುತ್ತಾ ಕೂತಿದ್ದು, ದೇವರ ದಯದಿಂದ  ನಮ್ಮಪ್ಪನನ್ನು ನೋಡಲು ಯಾರೋ ಬಂದು, ನಾನು ಕಕ್ಕ ಮಾಡುವ ನೆಪದಲ್ಲಿ ಆ ಜಾಗದಿಂದ ಜಾರಿದ್ದು... ಕಷ್ಟದಿಂದ ಬಿಡುಗಡೆ.

ಏನಾದರೂ ತರಲೆ / ಚೇಷ್ಟೆ ಮಾಡುವುದು ಚಿಕ್ಕಂದಿನ ಒಂದು ಹವ್ಯಾಸ ಎಂದರೂ ಸರಿಯೇ. ಇಂಥ ಸಂದರ್ಭದಲ್ಲಿ ಏನಾದರೂ ಎಡವಟ್ಟು ಮಾಡಿಕೊಂಡು, ತಪ್ಪು ಎಂದು ತಿಳಿದು, ಅದರಿಂದ ತಪ್ಪಿಸಿ ಕೊಳ್ಳಲು ಇದ್ದ ಒಂದೇ ಮಾರ್ಗ ಸುಳ್ಳು ಉತ್ತರ ಹೇಳುವುದು.

ಸಮಯಕ್ಕೊಂದು ಸುಳ್ಳು ಹೇಳುವುದು, ಎಲ್ಲರ ಜೀವನದಲ್ಲೂ ನಡೆಯುವಂತಹ ಘಟನೆ. ನಾನು ಸುಳ್ಳೇ ಹೇಳಿಲ್ಲ ಎಂದು ಯಾರಾದರೂ ಎದೆ ತಟ್ಟಿ ಹೇಳಿದರೆ ಅದು ಅಪ್ಪಟ ಸುಳ್ಳು ಎಂದು ಖಾತರಿ.

ಅಪರಾಧಿಗಳು ಸುಳ್ಳು ಹೇಳಿದ್ದನ್ನು ಕಂಡುಹಿಡಿಯಲು ಇರುವುದು ಮಂಪರು ಪರೀಕ್ಷೆ. ಸುಳ್ಳು ಹೇಳಲು ಜಾಣತನ ಬೇಕು.

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳು ನಮ್ಮಲ್ಲಿಲ್ಲ ಸುಳ್ಳೇ ನಮ್ಮನೆ ದ್ಯಾವ್ರು ಎಂದು ಪುರಂದರದಾಸರು ಹೇಳಿ, ಸುಳ್ಳು ಹೇಳುವ ಹಕ್ಕನ್ನು ನಮಗೆ ಕೊಟ್ಟಿದ್ದಾರೆ ಎಂದು ಹೇಳುವುದು ಸುಳ್ಳು.

ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ಎಂಬ ಮಹಾ ಕವಿ ಕಾಳಿದಾಸ ಚಿತ್ರದ ಮಾತುಗಳನ್ನು, ವಿಷಯಾಂತರಿಸಲು ಉಪಯೋಗಿಸಿದ್ದಿದೆ.

ತುಂಬಾ ಸಂಕೀರ್ಣವಾದ ಪ್ರಶ್ನೆಯನ್ನು ಯಕ್ಷಪ್ರಶ್ನೆ ಎಂದು ಕರೆಯುವುದಿದೆ. ಆದರೆ ಮಹಾಭಾರತದ ಧರ್ಮರಾಯ ಅಂತಹ ಯಕ್ಷನ ಪ್ರಶ್ನೆಗಳನ್ನು ಸಮಂಜಸವಾಗಿ ಉತ್ತರಿಸಿ ತನ್ನ ತಮ್ಮಂದಿರನ್ನು ಬದುಕಿಸಿಕೊಳ್ಳುವುದು, ಆತನ ಜ್ಞಾನದ ಶಕ್ತಿ.

ಯಮ ಕೊಟ್ಟ ವರವನ್ನು ಕೇಳುವ ನೆಪದಲ್ಲಿ ಜಾಣ ಉತ್ತರಗಳನ್ನು ಕೊಟ್ಟು, ತನ್ನ ಗಂಡ ಸತ್ಯವಾನನ ಜೀವವನ್ನು ಕಾಪಾಡಿಕೊಂಡ ಸಾವಿತ್ರಿಯ ಕಥೆಯು ಜನಜನಿತ.

ನನ್ನನ್ನೇ ನಾನು ಪ್ರಶ್ನಿಸಿಕೊಂಡು ಆತ್ಮವಿಮರ್ಶೆ ಮಾಡುತ್ತಾ ತಕ್ಕ ಉತ್ತರವನ್ನು ಕಂಡುಕೊಳ್ಳುವುದು ನಿಜವಾದ  ಏಳ್ಗೆಯ ಮಾರ್ಗ... ಆತ್ಮಾವಲೋಕನ.

ಚಾರಣಕ್ಕೆ ಹೋದಾಗ, ಒಂದು ಸುಂದರ ರಾತ್ರಿ, ಕಣದಲ್ಲಿ ಕೆಲಸ ಮಾಡುತ್ತಿದ್ದ ಆ ಹಳ್ಳಿಯ ಜನರೊಡನೆ ನಡೆದ ಒಗಟು ಬಿಡಿಸುವ ಸಂದರ್ಭ ಬಲು ಸೊಗಸಾಗಿತ್ತು. ಹಳ್ಳಿಯಲ್ಲಿ ಬೆಳೆದ ನನಗೆ, ಕಣದ ಹುಲ್ಲಿನ ಮೇಲೆ ಕುಣಿದಾಡುತ್ತಾ ಅವರ ಒಗಟಿಗೆ ಉತ್ತರಿಸುತ್ತಾ, ನಮ್ಮ ಒಗಟನ್ನು ಕೇಳುತ್ತಾ ಕಳೆದ ಆ ಸಮಯ ಅವಿಸ್ಮರಣೀಯ.

ಕಂತಿ, ಹಂಪರ ಪ್ರಶ್ನೋತ್ತರ ರೂಪದ ಕವಿತಾ ಚಾತುರ್ಯ ಬಹುಮೆಚ್ಚುಗೆ.  ಇಲಿಗಳಂ ಮುರಿಮುರಿದು ತಿನ್ನುತಿರ್ಪರ್ ಎಂಬುದನ್ನು ಚಕ್ಕುಲಿಗಳಂ ಮುರಿಮುರಿದು ತಿನ್ನುತಿರ್ಪರ್ ಎಂಬುದಾಗಿ ಬದಲಾಯಿಸಿದ ಜಾಣತನ... ಹಿಂದೆ ಓದಿದ ನೆನಪಿನ ಒಂದು ಎಳೆ.

ಎಷ್ಟೇ ತಯಾರಿ ಮಾಡಿಕೊಂಡಿದ್ದರು ಪರೀಕ್ಷೆಗೆ ಹೋಗಿ ಕೂತಾಗ, ಪ್ರಶ್ನೆ ಪತ್ರಿಕೆ ಕೊಡುವ ತನಕ ಒಂದು ಬಗೆಯ ಕಾತುರ ಆತಂಕ ಅನಿಶ್ಚಿತ ಭಾವ. ಒಂದು ಘಟ್ಟದಲ್ಲಿ ಈ ಪ್ರಶ್ನೆ ಪತ್ರಿಕೆಗಳೇ ನಮ್ಮ ಜೀವನದ ತಿರುವನ್ನು ನಿರ್ದೇಶಸುವ ನಿರ್ಜೀವ ಕಾಗದ ಅಂದರೂ ಸರಿಯೇ.

Answer sub divisions upto 100 marks ಎಂಬ ತಲೆಬರಹ ದೊಂದಿಗೆ ಇರುತ್ತಿದ್ದ ಗಣಿತದ ಪ್ರಶ್ನೆ ಪತ್ರಿಕೆ ನನಗೆ ಇಷ್ಟವಾಗುತ್ತಿತ್ತು. ಒಂದು ಅಂಕ ಬರುವ ಯಾವುದೋ ಪ್ರಶ್ನೆಯನ್ನು ಉತ್ತರಿಸುವ ಭಾಗ್ಯ, ಅಂಕ ಗಳಿಸಲು ಸುಲಭ ದಾರಿಯಾಗಿತ್ತು.

ಹಸುವಿನ ಬಗ್ಗೆ ಪ್ರಬಂಧ ಬರೆಯಲು ಸಿದ್ಧಪಡಿಸಿಕೊಂಡಿದ್ದ ವಿದ್ಯಾರ್ಥಿ ಪರೀಕ್ಷೆಗೆ ಹೋದಾಗ ಬಂದ ವಿಷಯ ವಿದ್ಯುತ್ ಕಂಬ. ಗಾಬರಿಯಾದ ವಿದ್ಯಾರ್ಥಿ ಕೆಲಕ್ಷಣ ಯೋಚಿಸಿ, ಬರೆದದ್ದು.... ವಿದ್ಯುತ್ ಕಂಬ ನೆಟ್ಟಗಿರುತ್ತದೆ ಮೇಲೆ ತಂತಿ ಹಾಯಿಸುತ್ತಾರೆ .ಕೆಳಗೆ ಹಸುವನ್ನು ಕಟ್ಟುತ್ತಾರೆ. ಹಸು ಒಂದು ಸಾಧುವಾದ ಪ್ರಾಣಿ....... ಎಂದು ಪ್ರಾರಂಭ ಮಾಡಿ, ಹಸುವಿನ ಬಗ್ಗೆ  ಬರೆಯುತ್ತಾ, ಪುಟ ತುಂಬಿಸಿದ ಜಾಣ.... ಅಸಂಬದ್ಧ ಪ್ರಲಾಪ.

ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಬಂದ ಅಮಾಯಕ ವ್ಯಕ್ತಿಗೆ, ಎದುರಾಳಿ ವಕೀಲ ಕೇಳಿದ ತಿರು ಮುರುವು ಮಾಡಿದ ಪ್ರಶ್ನೆಗಳಿಗೆ,  ಹೇಳಿಕೊಟ್ಟಷ್ಟೇ ಉತ್ತರವನ್ನು ಹೇಳಲು ತಡ ಬಡಾಯಿಸಿ, ಅಸಂಬದ್ಧವಾಗಿ ಹೇಳಿ, ಸಾಕ್ಷ್ಯ ನಾಶಮಾಡಿದ ವ್ಯಕ್ತಿಯನ್ನು ಕಂಡಿದ್ದೇನೆ.  ನ್ಯಾಯಾಲಯದಲ್ಲಿ ಎದುರಾಳಿ ವಕೀಲರು ಕೇಳುವ ಪ್ರಶ್ನೆಗಳಿಗೆ ಸುಳ್ಳು ಸಾಕ್ಷ್ಯ ಹೇಳಲು ಜಾಣತನದ ಜೊತೆಗೆ ಭಂಡತನ ಇರಬೇಕು.

ಶಹಾಬಾದಿಗೆ ಕೆಲಸಕ್ಕೆ ಹೋದ ಹೊಸತು. ನನ್ನ ಮೊದಲ ಬಾಸ್... ಮುತ್ತಾತಿಯವರು. ಅವರು ಯಾಕ್ರೀ ರಂಗನಾಥರಾವ್ ಅಂತ ಕೇಳಿದ ಪ್ರಶ್ನೆಗೆ  ಯಾಕೂ ಇಲ್ಲರೀ ಎಂದು ಉತ್ತರ ಹೇಳಿ, ಅವರು ಮುಖಮುಖ ನೋಡಿದಾಗ ಗಾಬರಿ ಯಾದದ್ದಿದೆ. ನಂತರ ತಿಳಿದದ್ದು ಏನ್ರೀ ಬದಲು ಯಾಕ್ರೀ ಎಂದು ಉಪಯೋಗಿಸುವ ಅಲ್ಲಿನ ಭಾಷಾ ಪ್ರಯೋಗ.

ಕೇಳಿದ ಪ್ರಶ್ನೆಗಳಿಗೆ ಉತ್ತರಗಳು ಹಲವು ಬಗೆಯದು. ಸಂದರ್ಭಕ್ಕೆ, ಹೇಳಿದ ವ್ಯಕ್ತಿಗೆ, ಉತ್ತರ ಹೇಳುವ ವ್ಯಕ್ತಿಯ ಮನಸ್ಥಿತಿಗೆ ತಕ್ಕಂತೆ.... ವ್ಯಂಗ್ಯ ತುಂಬಿದ ಉತ್ತರ, ಹಾರಿಕೆ ಉತ್ತರ, ಪ್ರಶ್ನೆಗಷ್ಟೇ ಉತ್ತರ, ಹೌದು ಅಥವಾ ಇಲ್ಲ, ಅಡ್ಡ ಗೋಡೆಯ  ಮೇಲೆ ದೀಪ ಇಟ್ಟಂತ ಉತ್ತರ. ಕೊನೆಗೆ ಮೌನವೂ ಉತ್ತರವೇ....

ಕೆಲವರು ಪ್ರಶ್ನಾತೀತರು.. ಅವರನ್ನು ಪ್ರಶ್ನೆ ಮಾಡುವ ಹಾಗೇ ಇಲ್ಲ. ಇದರಲ್ಲಿ ನನ್ನ ಅಂದಾಜಿನಂತೆ ಮೊದಲು ನಿಲ್ಲುವವರು ಹೆಂಗಸರು... ಅಲ್ಲ ಅಲ್ಲ ಹೆಂಡತಿಯರು... ಅವರನ್ನು ಪ್ರಶ್ನೆ ಮಾಡುವ ಹಾಗೇ ಇಲ್ಲ... ಅದರಲ್ಲೂ ಹಣಕಾಸಿನ ಲೆಕ್ಕಾಚಾರವನ್ನು ಕೇಳುವಂತೆಯೇ ಇಲ್ಲ.

ಮೊದಲ ಪ್ರಶ್ನಾತೀತ ಹೆಂಡತಿ ಎಂದರೆ ಮಹಾಭಾರತದ ಶಂತನುವಿನ ಹೆಂಡತಿ ಗಂಗೆ. ಪ್ರಶ್ನೆ ಮಾಡಿದ ಗಂಡನನ್ನೇ ಬಿಟ್ಟುಹೋದಾಕೆ.

ಇನ್ನು ಸರ್ವಾಧಿಕಾರಿ ಮನೋಭಾವದವರನ್ನಂತು ಪ್ರಶ್ನಿಸುವ ಹಾಗೆ ಇಲ್ಲ.  ತಮ್ಮಷ್ಟಕ್ಕೆ ತಾವು ಬುದ್ಧಿವಂತರು ಎಂಬುವರನ್ನು ಹಾಗೂ ಹಣ ಅಧಿಕಾರದ ಪ್ರಭಾವವಿರುವವರನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಪುಡಿ ರಾಜಕಾರಣಿಗಳಿಂದ ಹಿಡಿದು ದೊಡ್ಡವರ ತನಕ ಎಲ್ಲರದೂ ವಿವಿಧ ಹಂತದಲ್ಲಿ ಅವರದೇ ಪಟ್ಟು.

ನನ್ನ ಲೇಖನದ ಬಗ್ಗೆ ಪ್ರಶ್ನೆ ಮಾಡುವ ಬದಲು, ಸಲಹೆ ರೂಪದ ಉತ್ತರ ಕೊಡಿ ಅಂತ ಕೇಳುತ್ತಾ...


ನಮಸ್ಕಾರ...

ಡಿ ಸಿ  ರಂಗನಾಥ ರಾವ್

9741128413






    

Comments

  1. ನಾಗೇಂದ್ರ ಬಾಬು9 March 2026 at 11:26

    ವಾರೆವಾಹ್... ಮತ್ತೊಂದು ಸೊಗಸಾದ ಲೇಖನ ಓದಿದ ಮೇಲೆ ನನ್ನಲ್ಲಿ ಮೂಡುವ ಪ್ರಶ್ನೆ
    ನಿಮಗೆ ಇಷ್ಟೊಂದು ವಿಷಯಗಳು ಮತ್ತು ನೆನಪುಗಳು ಹೇಗೆ ಎಂದು? ಹೆಸರೇನು ಹಾಗೂ ಕಾಫಿ ಆಯ್ತಾ ನಮಗೆ ಬರುವ ಅತೀ ಹೆಚ್ಚು ಪ್ರಶ್ನೆ ಗಳಾದರೆ... ಪ್ರತಿದಿನ ತರಕಾರಿಯಿಂದ ಚಿನ್ನದ ವರೆಗೆ ನಾವು ಕೇಳುವ ಪ್ರಶ್ನೆ ಬೆಲೆ ಏಷ್ಟು?... ಟೈಮ್ ಏಷ್ಟು?... ಪ್ರಶ್ನೆ ಗಳಿಗೆ ಉತ್ತರ ಗೊತ್ತಿದ್ದರೆ ಸಾಲದು ಅದು ಸರಿಯಾದ ಸಮಯದಲ್ಲಿ ವ್ಯಕ್ತ ಪಡಿಸುವ ಪ್ರತಿಭೆ ಇರಬೇಕು... (Specially in academics) ಯಾಕೆ? ಹೇಗೆ? ಆಗುತ್ತಾ? ಸರಿನಾ? ತಪ್ಪಾ? ಈ ಎಲ್ಲಾ ಪ್ರಶ್ನೆ ಹಾಕಿಕೊಂಡು ಉತ್ತರ ಹುಡುಕುತ್ತಾ ಸಾಗಿದೆ ಎಲ್ಲರ ಜೀವನ.... ಎನಂತೀರಿ?
    ಧನ್ಯವಾದಗಳು
    ಬಾಬು

    ReplyDelete
  2. ಜೀವನದ ಸಮಸ್ಯೆಗಳಿಗೆ ಪರಿಹಾರ ಪ್ರಶ್ನಿಸಿಕೊಳ್ಳುವುದರಲ್ಲಿದೆ ಎಂಬುದನ್ನು ಸೊಗಸಾಗಿ ಲೇಖನದಲ್ಲಿ ವಿವರಿಸಿದ್ದೀರಿ...

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು