ವಯಸ್ಸು - ಒಂದು ಅಂಕಿ.. ಅಷ್ಟೇ
ಹೋದ ಶನಿವಾರ, ಒಂದು ಹಿರಿಯ ನಾಗರೀಕರ ಗುಂಪಿನೊಡನೆ ಬೆರೆಯುವ ಅವಕಾಶ ಸಿಕ್ಕಿತ್ತು. ಈ ಗುಂಪಿನ ಸಾಮಾನ್ಯ ಅಂಶ... ಎಲ್ಲರೂ Geological Survey of India - ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯ ನಿವೃತ್ತ ನೌಕರರು.
ವರ್ಷಕ್ಕೆ ಎರಡು ಬಾರಿ ಎಲ್ಲರೂ ಸೇರಿ ಸಂತೋಷಪಡುವ / ಹಳೆಯ ನೆನಪುಗಳನ್ನು ನವೀಕರಿಸುವ, ಹಾಗೂ ವಿಚಾರವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಪುಷ್ಕಳ ಭೋಜನದೊಂದಿಗೆ ಕಾರ್ಯಕ್ರಮ ಮುಗಿಸುವ ಪರಿ ಪಾಠ ಇಟ್ಟುಕೊಂಡಿರುವವರು. ನಾನು ಆ ಜಾಗವನ್ನು ಪ್ರವೇಶಿಸಿದಾಗ, ಅವರವರದೇ ಗುಂಪುಗಳಲ್ಲಿ ಮಾತನಾಡುತ್ತಿದ್ದದ್ದು ಕಾಣಿಸಿತು. ಇದು ನಮ್ಮ ಶಹಾಬಾದ್ ಗೆಳೆಯರ ಬಳಗದ ಕಾರ್ಯಕ್ರಮವನ್ನು ನೆನಪಿಸಿತು.
ಅಶಕ್ತ ಪೋಷಕ ಸಭಾದಲ್ಲಿನ ಹಿರಿಯ ನಾಗರೀಕರೊಡನೆ ಒಡನಾಟ ನನಗೆ ಸುಮಾರು ಹತ್ತು ವರ್ಷಗಳಿಂದ, ವಾರಕ್ಕೆ ಎರಡು ಬಾರಿ ದೊರಕಿದೆ. ಯಾವಾಗಲೂ ಭೇಟಿ ಮಾಡುವುದರಿಂದ ಅದರಲ್ಲಿ ವಿಶೇಷತೆ ಎದ್ದು ಕಾಣುವುದಿಲ್ಲ, ಮನೆ ಮಂದಿಯೊಡನೆ ಬೆರೆತು ವಾಡಿಕೆಯಂತೆ ಮಾತನಾಡುವ ಅನುಭವ ಅದು.
ಆದರೆ ಹೊಸ ಗುಂಪುಗಳೊಡನೆ ಮಾತನಾಡುವಾಗ ಅವರ ಆಸಕ್ತಿ, ಅಭಿಲಾಷೆಗಳನ್ನು, ತಕ್ಕಮಟ್ಟಿಗಾದರೂ ಸರಿದೂಗಿಸುವ ಪ್ರಯತ್ನಮಾಡ ಬೇಕಲ್ಲ. ಹಾಗಾಗಿ ಸಾಮಾನ್ಯವಾಗಿ, ಎಲ್ಲಿ ಮಾತಾಡಬೇಕಾದರೂ ಸ್ವಲ್ಪ ಪೂರ್ವ ತಯಾರಿಯನ್ನು, ಅದರಲ್ಲೂ ಪ್ರಾರಂಭದ ಸಾಲುಗಳ ಆಯ್ಕೆಯ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸುತ್ತೇನೆ.
ಆದರೆ ಇಲ್ಲಿಗೆ ಬಂದಾಗ ನಾಮಫಲಕ ದಲ್ಲಿನ ಭಾ ಮತ್ತು ಭೂ ಅಕ್ಷರಗಳು, ಕಂಡಾಗ ನೆನಪಿಗೆ ಬಂದದ್ದು.. ನನ್ನ ನ್ಯಾಷನಲ್ ಕಾಲೇಜಿನ ಓದುವ ಸಮಯದ.. ಹೆಚ್ಎಸ್ ವರದದೇಶಿಕಾಚಾರ್ ( ನಂತರದ ಜೀವನದಲ್ಲಿ ರಂಗಪ್ರಿಯ ಸ್ವಾಮೀಜಿಗಳು) ಅವರ ಮೊದಲನೆಯ ತರಗತಿ. ಗಜಾನನಂ ಭೂತ ಗಣಾಧಿ ಸೇವಿತಂ... ಶ್ಲೋಕದಲ್ಲಿನ ಭೂತ ಪದದ ಉಚ್ಚಾರಣೆಯ ಬಗ್ಗೆ. ಅದನ್ನೇ ನನ್ನ ಮೊದಲನೆಯ ಸಾಲಾಗಿ ರೂಪಿಸಿಕೊಂಡೆ.... ಪೂರ್ಣ ಶ್ಲೋಕವನ್ನು ಹೇಳಿ ಮುಂದುವರಿದೆ... ಅದರ ತುಣುಕು ನಿಮಗಾಗಿ..
ಈ ಶ್ಲೋಕವನ್ನು ಹೇಳಿಕೊಡುತ್ತಿದ್ದಾಗ ಒಬ್ಬ ವಿದ್ಯಾರ್ಥಿ ಭೂತಗಣಾದಿ ... ಎಂಬ ಭಾಗವನ್ನು ಬೂತಗಣಾದಿ.. ಎಂದು ಉಚ್ಚರಿಸುತ್ತಿದ್ದ... ಅದನ್ನು ವಿಷದೀಕರಿಸಲು, ಉಪಾಧ್ಯಾಯರು ಭೂ..ಭೂ...ದೊಡ್ಡ ಭೂ ಹೇಳಬೇಕು ಎಂದಾಗ... ಶಿಶ್ಯೊತ್ತಮ ಗಜಾನನಂ ದೊಡ್ಡ್ ಬೂತಗಣಾದಿ ಸೇವಿತಂ..
ಅಂದಾಗ, ಒಂದಷ್ಟು ಜನರ ನಗೆಯ ಉತ್ತರ ಸಿಕ್ಕಿತು ಎಂಬುದೇ ಸಮಾಧಾನಕರ ಸಂಗತಿ.
ಇಲ್ಲಿ ಒಂದು ವಿಷಯ ಹೇಳಲೇಬೇಕು... ಅದು ಹಿರಿಯ ನಾಗರೀಕರ ಸ್ವಭಾವವಾದ.. ಕೆಲವು ಸಂಗತಿಗಳನ್ನು ಮತ್ತೆ ಮತ್ತೆ ಹೇಳುವ ಚಪಲ. ಅದೂ ಎದುರಿಗಿರುವವರಿಗೆ ಕೇಳಲು ಆಸಕ್ತಿ ಇದೆಯಾ ಇಲ್ಲವಾ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ. ಈ ವಿಷಯಕ್ಕೆ ನನಗೆ ನೆನಪಾಗುವುದು ನಾವುಗಳು ದೊಡ್ಡಪ್ಪ ಎಂದು ಕರೆಯುತ್ತಿದ್ದ, ನನ್ನ ದೊಡ್ಡ ಮಾವ ಎಚ್.ಪಿ. ನರಸಿಂಹಮೂರ್ತಿ ಯವರು. ಅವರು ಕೆಲವು ಪ್ರಸಂಗಗಳನ್ನು, ಮತ್ತೆ ಮತ್ತೆ ಸಾಕಷ್ಟು ಸಲ ಹೇಳಿದರೂ, ಕೆಲವನ್ನಾದರೂ ಕೇಳಲು ಖುಷಿಯಾಗುತ್ತಿದ್ದದ್ದು ಸತ್ಯ. ಅದರಲ್ಲೂ ಅವರು ಹೇಳುತ್ತಿದ್ದ " ನಾನು ಕೆಂಗೇರಿ ಗ್ರಾಜುಯೇಟ್..." ಅನ್ನುವ ಪದಪುಂಜ ನನಗೆ ಅಚ್ಚುಮೆಚ್ಚು. ಅಂದಿನ ಕಾಲದ SSLC ಪರೀಕ್ಷೆಯಲ್ಲಿ EPS ( Eligible for public service ) ಎಂಬ ಹಣೆಪಟ್ಟಿಯೊಡನೆ ಪಾಸಾಗಿದ್ದ ಅವರು, ಕಾಲಕ್ರಮೇಣ ಕರ್ನಾಟಕದ ಹೈಕೋರ್ಟಿನ section officer (gazetted officer) ಆಗಿ ನಿವೃತ್ತಿಯಾದದ್ದು ಬಹು ಹೆಮ್ಮೆಯ ಸಂಗತಿಯಾಗಿತ್ತು... ಸಹಜವೇ.
ಮೇಲೆ ಹೇಳಿದ ಶ್ಲೋಕದ ವಿಚಾರವನ್ನು ಹಿಂದೆಯೇ ಬರೆದಿದ್ದ ನೆನಪು... ಹಾಗಾಗಿ ಪುನರಾವರ್ತನೆಯನ್ನು ಹಿರಿಯ ನಾಗರಿಕನ ಚಪಲದ ಒಂದು ಮುಖ ಎಂದು ಕ್ಷಮಿಸುತ್ತೀರಾ ಎಂಬ ನಂಬಿಕೆ ನನ್ನದು.
Geological Survey of India ಗೂ ನನಗೂ ಹಳೆಯ ಸಂಬಂಧವಿದೆ ( ಬಾದರಾಯಣ ಸಂಬಂಧ ಎನ್ನಲೇ?). ಸುಮಾರು1978-79 ರ ಸಮಯದಲ್ಲಿ, ನಮ್ಮ ಪೀಣ್ಯ ಫ್ಯಾಕ್ಟರಿಯಿಂದ vitreous enamel board ಮಾಡಿಕೊಟ್ಟಿದ್ದು . ಅದನ್ನು ಕಬ್ಬನ್ ಪಾರ್ಕಿನ ಬಾಲ ಭವನದ ಬಳಿ ಇರಿಸಲಾಗಿದ್ದ wood fossils - ಮರದ ಪಳೆಯುಳಿಕೆಗಳ ಬಳಿ ಪ್ರದರ್ಶಿಸಲಾಗಿತ್ತು. ಈ ವಿಷಯವನ್ನು ಅವರೊಡನೆ ಹಂಚಿಕೊಂಡು, ಹಿರಿಯ ನಾಗರೀಕರು ಅಳವಡಿಸಿಕೊಳ್ಳಬೇಕಾದ ಜೀವನಶೈಲಿಯ ಬಗ್ಗೆ ಒಂದಷ್ಟು ವಿಷಯವನ್ನು ಹೇಳಿ, ಕನ್ನಡದ ಬಗ್ಗೆ ಒಂದಷ್ಟು ರಸಪ್ರಶ್ನೆಗಳನ್ನು ಕೇಳಿ, ಅವರ ಉತ್ಸಾಹ ಪೂರ್ಣ ಭಾಗವಹಿಸುವಿಕೆಯನ್ನು ಹೊಗಳಿ, ನನ್ನ ಮಾತನ್ನು ಮುಗಿಸಿದೆ.
ನನ್ನ ಮಾತಿನ ಮಧ್ಯದಲ್ಲಿ.. ಸಮಾಜದ ಋಣ ತೀರಿಸಬೇಕಾದ ನಮ್ಮ ಜವಾಬ್ದಾರಿಯ ಬಗ್ಗೆ ಹೇಳುತ್ತಿದ್ದಾಗ... ಆ ಗುಂಪು ಈಗಾಗಲೇ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಹಂಚುತ್ತಿದ್ದಾರೆ ಎನ್ನುವ ವಿಷಯ ತಿಳಿಯಿತು ... ಜೊತೆಗೆ ಮುಂದಿನ ಹಂತವಾಗಿ, ಹತ್ತಿರದಲ್ಲಿರುವ ವೃದ್ಧಾಶ್ರಮಗಳನ್ನು, ಗುರುತಿಸಿ ಅವರಿಗೆ ಬೇಕಾಗಿರುವ ಸಹಾಯವನ್ನು ಮಾಡುವ ನಿರ್ಧಾರವನ್ನು ಆಗಲೇ ಮಾಡಿದ್ದು ಕಂಡು ನನಗೆ ಬಹಳ ಸಂತೋಷವಾಯಿತು.
ಮುಂದೆ ಇನ್ನೊಂದು ಕಾರ್ಯಕ್ರಮದ ಊಟಕ್ಕೆ ಹೋಗಬೇಕಾಗಿದ್ದರಿಂದ, ಸಿಹಿಯನ್ನು ತಿಂದು ಅಲ್ಲಿಂದ ಹೊರಟೆ.. ಒಂದಷ್ಟು ಸುಂದರ ನೆನಪುಗಳನ್ನು ಹೊತ್ತು.
ಈ ಕಾರ್ಯಕ್ರಮಕ್ಕೆ ನನ್ನನ್ನು ಗುರುತಿಸಿ ಆಹ್ವಾನಿಸಿದ ಶ್ರೀಯುತ ಕೆ ಚಂದ್ರಶೇಖರ್ ಹಾಗೂ ಅವರ ತಂಡದವರು ನನಗೆ ತೋರಿದ ಅಭಿಮಾನ ಹಾಗೂ ಆದರಾತಿಥ್ಯಕ್ಕೆ ನನ್ನದೊಂದು ನಮನ.
ಆ vitreous enamel board ನೋಡುವ ಮನಸ್ಸಾಯಿತು.. ಅಯ್ಯೋ ಯಾರು ಕಬ್ಬನ್ ಪಾರ್ಕ್ ತನಕ ಹೋಗ್ತಾರೆ ಬಿಡು.. ಅಂತ ಇನ್ನೊಂದು ಮನಸ್ಸು ಹೇಳ್ತು.
ಆದರೆ ಸೋಮವಾರ ಬ್ಯಾಂಕಿನ ಕೆಲಸಕ್ಕೆ ಹೊರಗೆ ಹೋಗಿದ್ದವನಿಗೆ, ಕಬ್ಬನ್ ಪಾರ್ಕಿಗೆ ಹೋಗಿ ಬರುವ ಮನಸ್ಸಾಯಿತು... ಮೆಟ್ರೋ ದಲ್ಲಿ ಹೋಗಿ ಬರುವ ನಿರ್ಧಾರ ಮಾಡಿದೆ. ಬಹುಶಃ ಇದು ಮೊದಲ ಬಾರಿ ನಾನೊಬ್ಬನೇ ಮೆಟ್ರೋದಲ್ಲಿ ಹೋಗುತ್ತಿರುವುದು... ಮುಂದಿನ ಸ್ಟೇಷನ್ನಲ್ಲಿ ನನ್ನನ್ನು ಕರೆದೊಯ್ಯಲು ಯಾರೂ ಬರದಿದ್ದಾಗ. ಅದೇ ಒಂದು ಅನುಭವ... ಮೆಜೆಸ್ಟಿಕ್ ನಲ್ಲಿ ಬದಲಾವಣೆ ಮಾಡಲು ಒಂದಷ್ಟು ತಡಕಾಡಿದ್ದು ಸತ್ಯ. ನಂತರದ ಪ್ರಯಾಣದಲ್ಲಿ ಪಕ್ಕದಲ್ಲಿದ್ದ ಮಧ್ಯ ವಯಸ್ಕ ಹೇಳಿದ... "ನಮಗೇ ಕೆಲವು ಸಲ ತಡಕಾಟ ಆಗುತ್ತೆ.. ಇನ್ನು ನಿಮ್ಮ ವಯಸ್ಸಿನವರಿಗೆ.." ಅನ್ನುವ ಮಾತಿನಿಂದ ನನಗೇನೋ ಸಮಾಧಾನ... ನಾನು ತುಂಬಾ ಪೆದ್ದ ಅಲ್ಲವೆಂದು.
ಕಬ್ಬನ್ ಪಾರ್ಕ್ ಸೇರಿ.. ನನ್ನ ಮನಸ್ಸಿನಲ್ಲಿದ್ದ ಅಂದಿನ ಚಿತ್ರಣವನ್ನು ಊಹಿಸಿಕೊಂಡು ಹುಡುಕಿದರೂ ಜಾಗ ಸಿಗಲೇ ಇಲ್ಲ. ಓಡಾಟದ ಮಧ್ಯೆ ಕಂಡದ್ದು ಪುಟಾಣಿ ರೈಲು.. ಮಕ್ಕಳ ಕಲರವ.. ವಾವ್.... ಒಂದು ಮಗು ಖುಷಿಯಿಂದ ಕುಣಿಯುತ್ತಿದೆ, ಜೊತೆಗಿದ್ದ ಅಜ್ಜಿಯನ್ನು ಕುಣಿಸುತ್ತಿದೆ... ಅಜ್ಜಿ ತನಗೆ ತೋಚಿದಂತೆ ಹೆಜ್ಜೆ ಹಾಕುತ್ತಿದ್ದಾರೆ... ಎಂಥ ಸುಂದರ ಸನ್ನಿವೇಶ.. ಹೊಸ ಚಿಗುರು ಹಳೇ ಬೇರಿನ ಮಿಲನ....
ಪ್ರಯತ್ನಗಳು ವಿಫಲವಾಗಿ, ಕೊನೆಗೆ ಬಾಲ ಭವನದ ಕಚೇರಿಯಲ್ಲಿ ವಿಚಾರಿಸಲಾಗಿ... ಅಲ್ಲಿನ ಸಿಬ್ಬಂದಿ ಒಬ್ಬರು, ನನ್ನನ್ನು ಕರೆದೊಯ್ದು ಆ wood fossil ಇರುವ ಜಾಗವನ್ನು ತೋರಿಸಿದರು. ನನ್ನ ಮನಸ್ಸಿನಲ್ಲಿದ್ದ ಚಿತ್ರಣಕ್ಕೂ ವಾಸ್ತವಕ್ಕೂ ಅಜಗಜಾಂತರ.
wood fossils ಇದ್ದ ಸ್ಥಿತಿಯ ಚಿತ್ರವನ್ನು ತೆಗೆದುಕೊಂಡೆ. ಅದೇ ತನ್ನ ಜಾಗದಿಂದ ಕಳಚಿ ಬಿದ್ದಿತ್ತು. ಇನ್ನು board ಸುತ್ತಲೆಲ್ಲೂ ಕಾಣಲಿಲ್ಲ... ನನ್ನ ಜೊತೆ ಬಂದಿದ್ದ ವ್ಯಕ್ತಿಗೂ board ಬಗ್ಗೆ ಏನೇನೂ ತಿಳಿದಿಲ್ಲ. ಪ್ರಾಯಶಃ ಅದು ಪಳೆಯುಳಿಕೆಯಾಗಿಯೂ ಉಳಿದಿಲ್ಲ.. ಹಾಳಾಗಿದೆ ಎನಿಸಿತು. ಸ್ವಲ್ಪ ನಿರಾಶೆಯಾದರೂ..45 ವರ್ಷದ ಹಿಂದಿನ ವಿಷಯ ಎಂದು ಪಕ್ಕಕ್ಕಿಟ್ಟೆ.
ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುಗಿ ನಡೆಯುತ್ತಿದ್ದಾಗ ಕಂಡವರು ಅದೇ ಮಗು ಮತ್ತು ಅಜ್ಜಿ. ಮುಗುಳು ನಗೆ ಬೀರಿ ಮಾತಾಡಿಸಿದೆ. ಮಾತಿನ ಮಧ್ಯೆ ಅಜ್ಜಿಯು ಹೇಳಿದ " ಮೊಮ್ಮಗನ ಕಾರಣದಿಂದ... ನಾನು ಪುಟ್ಟ ರೈಲು ಪ್ರಯಾಣದ ಸುಖ ಅನುಭವಿಸಿದೆ... ಅವನ ಸಮಕ್ಕೂ ವಯಸ್ಸಿಗೆ ಮೀರಿ ಆಟವಾಡಿ ಖುಷಿ ಅನುಭವಿಸಿದೆ...." ಎಂಬ ಮಾತು ಅವರ ಉತ್ಸಾಹವನ್ನು ಎತ್ತಿ ತೋರಿಸುತ್ತಿತ್ತು. ನಾನು ಕಣ್ಣಾರೆ ಕಂಡಿದ್ದನ್ನು ಪುಷ್ಟಿಕರಿಸುತ್ತಿತ್ತು.
ಆಗ ಅನಿಸಿದ್ದೇ ವಯಸ್ಸು ಒಂದು ಅಂಕೆ... ಮನಸ್ಸಿದ್ದರೆ, ಏನು ಮಾಡಲೂ ವಯಸ್ಸು ಅಡ್ಡಿಯಾಗದು, ಮಗುವಾಗಿ ನಲಿಯಬಹುದೂ ಸಹ.
ಮನಸ್ಸಿನದು... ನಾಗಾಲೋಟ... ಜೊತೆಗೆ ಚಂಚಲತೆ... ಎಲ್ಲಿಂದ ಎಲ್ಲಿಗೋ ಅದರ ಓಟ. ನೆನಪುಗಳ ಕಲಸು ಮೇಲೋಗರ. ಅದರ ಹಿಂದೆ ಬಿದ್ದವನು ನಾನು, ಅದರ ವೀಕ್ಷಕ ವಿವರಣೆಯೇ ಈ ಲೇಖನ.
ಮತ್ತದೇ ಹಿರಿಯ ನಾಗರಿಕನ ಚಪಲ.
ಒಂದು ಹಂತದಲ್ಲಿ ಮಗುವಿನ ಮನಸ್ಸನ್ನು ನಾವು ತಂದುಕೊಳ್ಳಬಹುದಾದರೇ.. ಯಾವ ಜಂಜಾಟವು ಪರಿಣಾಮಮ ಬೀರದೆ... ನೆಮ್ಮದಿಯಾಗಿ ಜೀವಿಸಲು ಸಾಧ್ಯವಾಗಬಹುದಲ್ಲವೇ...? ಪ್ರಯತ್ನಿಸೋಣ..
ನಮಸ್ಕಾರ....
ಡಿ ಸಿ ರಂಗನಾಥ ರಾವ್
9741128413




ಬಹಳ ಸುಂದರ ನೆನಪಿನ ಬರಹ
ReplyDeleteನಿಮ್ಮ ಅಕ್ಷರ ಜ್ಞಾನಕ್ಕೆ ನನ್ನ ದೊಡ್ಡ ನಮನ 🙏
ಬಹಳ ಸುಂದರ ಸರ್. ನಾವು ಚಿಕ್ಕ ಮಕ್ಕಳಾಗಿದ್ದಾಗ ಕಬ್ಬನ್ ಪಾರ್ಕ್ ಗೆ ಬಂದಾಗ ಎಲ್ಲ ಪುಟಾಣಿ ರೈಲ್ ಹತ್ತಿದ್ದ ಅನುಭವ. ನೀವು ನಮ್ಮನ್ನು ೩೫-೪೦ ವರ್ಷ ಹಿಂದಿಗೆ ಕರೆದೊಯ್ದೀರ. ಅಭಿನಂದನಗಳು
ReplyDeleteTumbha chennagide chikkappa
ReplyDeleteನಮ್ಮ ಮಗಳ ಎರಡನೇ ವರ್ಷದ ಹುಟ್ಟುಹಬ್ಬ
ReplyDeleteವನ್ನು ಕಬ್ಬನ್ ಪಾರ್ಕ್ ನಲ್ಲಿ 1998ನೇ ಇಸವಿ ಯಲ್ಲಿ ಆಚರಣೆ ಮಾಡ್ದಿದ್ದು ಕಿರಿಯರಿಂದ ಹಿರಿಯರ ತನಕ ಎಲ್ಲರೂ ಪುಟಾಣಿ ರೈಲ್ ನಲ್ಲಿ
ಕುಳಿತು ಸಂಭ್ರಮ ಪಟ್ಟಿದ್ದು ನೆನಪಿಗೆ ಬಂತು
ಗತಕಾಲದ ಸುಂದರ ನೆನಪುಗಳು ಸ್ನೇಹಿತರ ಜೊತೆ ಹಂಚಿಕೊಳ್ಳುವುದೇ ಅದ್ಭುತ ಅನುಭವ.
ನವಿರಾದ ಉತ್ತಮ ಲೇಖನ
ಬಾಬು