ಸೋದರ ಮಾವ - ಊರ ಹಬ್ಬ


ನಮ್ಮ ಸಮಾಜದ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ಸೋದರ ಮಾವನಿಗೆ ವಿಶಿಷ್ಟ ಸ್ಥಾನವಿತ್ತು. ಅಮ್ಮನ ನಂತರದ ಪ್ರೀತಿ ಪಾತ್ರ ವ್ಯಕ್ತಿ ಸೋದರ ಮಾವ ಎಂಬುದು ಪ್ರತೀತಿ.  ಈಗಲೂ ಮದುವೆಯ ಸಮಯದಲ್ಲಿ.... ವಧುವನ್ನು ಕರೆ ತರಲು / ಹೊತ್ತು ತರಲು ಸೋದರ ಮಾವ / ಮಾವಂದಿರೇ  ಬೇಕು... ಇದು ಶಾಸ್ತ್ರದ ರೂಪ ತಳೆದಿದೆ.

ಬಾಣಂತನಕ್ಕಾಗಿ ಹೆಣ್ಣು ಮಕ್ಕಳು,  ತವರು ಮನೆಗೆ ಹೋಗುವುದು ಸಾಮಾನ್ಯ, ಜೊತೆಗೆ ಈಗಾಗಲೇ ಇರುವ ಚಿಕ್ಕ ಮಕ್ಕಳು. ಇಷ್ಟೆಲ್ಲವನ್ನು ಸಂಭಾಳಿಸಲು ತವರು ಮನೆಯಲ್ಲಿನ ಅಣ್ಣ ತಮ್ಮಂದಿರು ಹಾಗೂ ಮದುವೆಯಾಗದ ತಂಗಿಯರು ಸದಾ ಸಿದ್ಧ.  ಮಕ್ಕಳಿಗೆ ಇವರೊಡನೆ ಸಲಿಗೆ ಜಾಸ್ತಿ... ಹಾಗಾಗಿ ಅವರ ಜೊತೆ ಆಟ, ಊಟ, ನಿದ್ದೆ ಎಲ್ಲವೂ.

ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿಗೇ ಮದುವೆ ಮಾಡುತ್ತಿದ್ದದ್ದು.... ಮದುವೆಯ ಹೆಣ್ಣು... ಎಲ್ಲೋ ಇರುತ್ತಿದ್ದದ್ದು ಸೋದರ ಮಾವಂದಿರ ಜೊತೆ, ಬಹುಶಃ ಆಟವಾಡುತ್ತಾ. ಹಾಗಾಗಿ ಮುಹೂರ್ತದ ಸಮಯಕ್ಕೆ... ಸೋದರ ಮಾವ ಮಗುವನ್ನು ಕರೆ ತರುವುದು / ಎತ್ತಿಕೊಂಡು ಬರುವುದು... ಅನಿವಾರ್ಯವಾಗಿತ್ತು... ಅದೇ ಸಂಪ್ರದಾಯವಾಗಿರಬೇಕು... ಶಾಸ್ತ್ರದ ರೂಪ ತಳೆದಿರಬೇಕು...

ಸೋದರ ಮಾವನನ್ನೇ ಮದುವೆಯಾಗುತ್ತಿದ್ದ ಸಂಗತಿಗಳು ನಡೆಯುತ್ತಿದ್ದವು... ಆಗೊಂದು ತೆಲುಗಿನ ಮಾತು " ಮಾಮಾ ಮಾಮಾ... ಮಗುಡಾಯ" ಚಾಲ್ತಿಯಲ್ಲಿತ್ತು.

ಸೋದರ ಮಾವಂದಿರು ಅಂದಾಗ ನನಗಿದ್ದದ್ದು ಭಯ ಮಿಶ್ರಿತ ಗೌರವ. ಅಮ್ಮ ಕೊಟ್ಟ ಚಿತ್ರಣದಂತೆ.. ಅವರು 'ಉಳ್ಳವರು' ಹಾಗೂ ದೊಡ್ಡವರಾದ ಕಾರಣ ಗೌರವ ಕೊಡಬೇಕಾದವರು. 

ಹಳ್ಳಿಯನ್ನು ಬಿಟ್ಟು  ಇನ್ನೂ ಒಂದು ವರ್ಷವೂ ಆಗಿರಲಿಲ್ಲ... ನಾವು ಗಾಂಧಿಬಜಾರಿನ ಒಂದು ಮನೆಯಲ್ಲಿ ವಾಸವಾಗಿದ್ದೆವು. ಅಲ್ಲಿಗೆ ನಮ್ಮ ಸೋದರ ಮಾವ 'ವಿಶ್ವೇಶ್ವರಣ್ಣಯ್ಯ' ಬರುತ್ತಾರೆಂದು, ಅಮ್ಮ ಮತ್ತು ನಾನು ಅವರ ಜೊತೆಯಲ್ಲಿ ಅವರ ಊರಿಗೆ ಹೋಗಬೇಕೆಂದು ತಿಳಿದಾಗ ಖುಷಿಯೋ ಖುಷಿ. ಆ ಕ್ಷಣವೂ ಬಂದೇ ಬಿಟ್ಟಿತ್ತು, ಅಮ್ಮನಿಗೆ, ತನ್ನ ಮಕ್ಕಳು ಬೆಂಗಳೂರಿನಲ್ಲಿ ಮನೆಯನ್ನು ಮಾಡಿದ್ದಾರೆ, ಅಲ್ಲಿಗೆ ತಮ್ಮ ಬರುತ್ತಿದ್ದಾನೆ ಎಂಬ ಖುಷಿ. ಅಕ್ಕ ತಮ್ಮನ ಮಾತುಕತೆಗಳು ಒಂದೇ ಸಮನೆ ನಡೆಯುತ್ತಿತ್ತು.. ಆಗ ತಿಳಿದ ವಿಷಯವೇ ನಾವು ಊರಿಗೆ ಹೋಗುವುದು ವಿಶ್ವೇಶ್ವರಣ್ಣಯ್ಯನ ದೊಡ್ಡ ಮಗ ಗೋವಿಂದನ ಮುಂಜಿಗೆಂದು (ಉಪನಯನ).  ಗೋವಿಂದ ಮುಂದೆ ಬೆಳೆದು... R V ಗೋವಿಂದ ರಾವ್ ಆಗಿ ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದಲ್ಲಿ ಕೆಲಸ ಮಾಡಿ ನಿವೃತ್ತರಾದವರು.     ನಾನು ದೊಡ್ಡಜಾಲದ ನಮ್ಮ ಮನೆಯಲ್ಲಿ ನೋಡಿದ್ದ ವಿಶ್ವೇಶ್ವರಣ್ಣಯ್ಯನ ಚಿತ್ರವನ್ನು ವಿವರಿಸಿದಾಗ, ಆ ಚಿತ್ರವನ್ನು ಹೆಕ್ಕಿ, ನನಗಾಗಿ ತೆಗೆದುಕೊಟ್ಟ ಗೋವಿಂದಣ್ಣ.  ಗೋವಿಂದನ ಮೊದಲ ಭೇಟಿ ಬೆಂಗಳೂರಿನ ಅರಸೋಜಿರಾವ್ ಛತ್ರದಲ್ಲಿ... ಚಿಕ್ಕಮ್ಮನ ಮಗಳು 'ಅನ್ನಪೂರ್ಣ' ಅವರ ಮದುವೆಯ ಸಂದರ್ಭ. ಜಾರೋ ಬಂಡೆ ಆಟ ಆಡಿ, ಚೆಡ್ಡಿಯನ್ನು ಹರಿದುಕೊಂಡಿದ್ದ ನನ್ನನ್ನು ಹುಡುಗಾಟಕ್ಕೆ ಕೆಣಕಿದ್ದು ನೆನಪಿದೆ. ಯೌವ್ವನದ ಕಾಲದಲ್ಲಿ ಸಾಕಷ್ಟು ಒಡನಾಟ ನಮ್ಮ ಮಧ್ಯೆ ಇತ್ತು... ಈಗಲೂ ತಕ್ಕಮಟ್ಟಿಗೆ ಇದೆ )

ವಿಶ್ವೇಶ್ವರಣ್ಣಯ್ಯ.. ಏನೋ ಕೆಲಸದ ಮೇಲೆ ಹೊರಗೆ ಹೋಗಬೇಕಿತ್ತು... ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟರು. ನನಗೆ ಸ್ವಲ್ಪ ಹಿಂಜರಿಕೆ ಇದ್ದದ್ದು ಸತ್ಯ. ಗಾಂಧಿ ಬಜಾರ್ ಟಾಗೋರ್  ಸರ್ಕಲ್ ಹತ್ತಿರ ಇದ್ದ ಇಂಡಿಯನ್ ಬ್ಯಾಂಕ್  ನಲ್ಲಿ   (ಎಂದು ಮಸುಕಾದ ನೆನಪು) ಅವರ ಕೆಲಸ ಮುಗಿಸಿ  ಬರುವ  ತನಕ ಕುತೂಹಲದಿಂದ ಎಲ್ಲವನ್ನು ನೋಡುತ್ತಾ  ಕುಳಿತಿದ್ದದ್ದು.    ಅವರು ಹೋದಲ್ಲೆಲ್ಲ ಹೋಗುವುದು, ದಾರಿಯಲ್ಲಿ ಅವರು ಹೇಳುತ್ತಿದ್ದ ವಿಷಯಗಳು... ಮಧ್ಯೆ ಮಧ್ಯೆ ಪ್ರಶ್ನೆ ಮಾಡುತ್ತಿದ್ದ ಯಾವುದೇಳು, ಯಾಕೆ ಹೇಳು, ಏನು ಹೇಳು ಎಂಬುದಕ್ಕೆ  ಉತ್ತರ ಕೊಡಲಾಗದ ನಾನು, ಸುಮ್ಮನಾಗುತ್ತಿದ್ದದ್ದು.



ಗಾಂಧಿಬಜಾರ್ ನಿಂದ 11ನೆ ನಂಬರ್ ಬಸ್ಸು ಹತ್ತಿ ಮಲ್ಲೇಶ್ವರಕ್ಕೆ ಹೋದ ಆ ಪಯಣ ಇನ್ನೂ ಹಸಿರು. ಮಲ್ಲೇಶ್ವರದಲ್ಲಿ ಒಂದು ಬೆಳ್ಳಿಯ ಅಂಗಡಿಗೆ ನಾವು ಹೋಗಿದ್ದು. ಅಲ್ಲಿ ಜೋಡಿಸಿದ್ದ ಬೇರೆ ಬೇರೆ ಬೆಳ್ಳಿಯ ಸಾಮಾನುಗಳನ್ನು ನಾನು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ್ದುಂಟು. ಅಲ್ಲಿಯವರೆಗೆ ಚಿನ್ನ ಬೆಳ್ಳಿ ಎಂದರೆ ನಮ್ಮೂರ ಸಕಲಕಲಾವಲ್ಲಭ ಸುಬ್ಬಣ್ಣಯ್ಯ... ಸುಬ್ಬರಾಯಾಚಾರ್ ಮಾಡುತ್ತಿದ್ದ  ಬೆಳ್ಳಿ ಕೆಲಸಗಳನ್ನು ಮಾತ್ರ ನೋಡಿದ್ದದ್ದು. 

ಕೆಲಸಗಳು ಮುಗಿದಾದ ನಂತರ ವಿಶ್ವೇಶ್ವರಣ್ಣಯ್ಯ ನನ್ನನ್ನು ಒಂದು ಹೋಟೆಲ್ ಗೆ ಕರೆದುಕೊಂಡು ಹೋದರು. ಬೇರೇನು ತಿಂದೆನೋ ಗೊತ್ತಿಲ್ಲ... ಆದರೆ ವಿಶ್ವೇಶ್ವರಣ್ಣಯ್ಯನ ಜೊತೆ ಹಂಚಿಕೊಂಡು ಒಂದೇ ತಟ್ಟೆಯಲ್ಲಿ, ಜೀವನದಲ್ಲಿ ಮೊದಲ ಬಾರಿ ತಿಂದ ಪೂರಿ ಸಾಗುವಿನ ರುಚಿ ... ಹಸಿರು. ಇಂದಿಗೂ ನಾನು ತುಂಬಾ ಇಷ್ಟ ಪಡುವ ತಿಂಡಿ, ಪೂರಿ ಸಾಗು... ಅದರ ಪ್ರೇರಣೆ / ಕಾರಣ ವಿಶ್ವೇಶ್ವರಣ್ಣಯ್ಯನೇ ಸರಿ. ಇಷ್ಟೊಂದು ಸಲಿಗೆಯಿಂದ ಇದ್ದ ವಿಶ್ವೇಶ್ವರಣ್ಣಯ್ಯನ ಚಿತ್ರಣ ನನ್ನ ಮನಸ್ಸಿನಲ್ಲಿ ಬೇರೆಯೇ ಇತ್ತು. ಅಲ್ಲಲ್ಲಿ ಕಿವಿಯ ಮೇಲೆ ಬಿದ್ದಿದ್ದ ಮಾತುಗಳಿಂದ ಹಾಗೂ ನಮ್ಮ ಮನೆಯಲ್ಲಿದ್ದ ಅವರ ಗಂಭೀರ ಚಿತ್ರವನ್ನು ನೋಡಿ ತಿಳಿದಿದ್ದದ್ದು..  ವಿಶ್ವೇಶ್ವರಣ್ಣಯ್ಯ ಬ್ರಿಟಿಷರ ಕಾಲದ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದವರು... ಅದೂ ದೂರದ ಬೊಂಬಾಯಿಯಲ್ಲಿ. ಕೋಪಿಷ್ಟ,  ಯಾವುದೋ ಕಾರಣಕ್ಕಾಗಿ, ಅಸಮಾಧಾನಗೊಂಡು ಬ್ಯಾಂಕಿನ ಕೆಲಸಕ್ಕೆ ರಾಜೀನಾಮೆ ಕೊಟ್ಟು ತಮ್ಮ ಹಳ್ಳಿ 'ರಾಮಚಂದ್ರ ಹೊಸೂರು' ಸೇರಿ ವ್ಯವಸಾಯಕ್ಕೆ ತೊಡಗಿಸಿಕೊಂಡವರು.

ಆದರೆ ನಾ ಅಂದು ಕಂಡಿದ್ದು, ಒಡನಾಡಿದ್ದು.... ಹಣೆಯಲ್ಲಿ ಗಂಧಾಕ್ಷತೆ ರಾರಾಜಿಸುತ್ತಿದ್ದ, ನಗುಮುಖದ ವಿಶ್ವೇಶ್ವರಣ್ಣಯ್ಯನ ಜೊತೆ.

ಮನೆಗೆ ಬಂದಾದ ಮೇಲೆ... ಯಾಕೋ ವಿಶ್ವೇಶ್ವರಣ್ಣಯ್ಯನ ಮುಖದ ಮೇಲಿನ ನಗೆ ಮಾಯವಾಗಿತ್ತು... ಆತಂಕ ಮನೆ ಮಾಡಿತ್ತು. ಅಮ್ಮ ಮತ್ತು ಮಾವನೊಡನೆ ನಡೆದ ಸಂಭಾಷಣೆಯಿಂದ ನನಗೆ ತಿಳಿದದ್ದು... ಬ್ಯಾಂಕಿನಿಂದ ತೆಗೆದುಕೊಂಡ  ಹಣವು ಜೇಬಿನಿಂದ ನಾಪತ್ತೆಯಾದದ್ದು - ಜೇಬುಗಳ್ಳತನ. 

" ಅಚ್ಚ, ಬಸ್ಸಲ್ಲಿ ಅವನ್ಯಾರೋ ಹೇಳಿದ... ಇಷ್ಟೊಂದು ದುಡ್ಡು ಇಟ್ಕೊಂಡಿದ್ದೀರಾ ಹುಷಾರು ಅಂತ... ನನ್ನ ಹುಷಾರು ಏನುಕ್ಕೂ ಪ್ರಯೋಜನ ಬರ್ಲಿಲ್ಲ , ಯಾರೋ ಎಗರಿಸ್ಬಿಟ್ರು " ಈ ಮಾತುಗಳು ನನಗೆ ನೆನಪಿದೆ. ( ನಮ್ಮಮ್ಮನನ್ನು ಅವರುಗಳೆಲ್ಲ ಕರೆಯುತ್ತಿದ್ದದ್ದು ಅಚ್ಚ ಅಥವಾ ಅಚ್ಚಿ ಎಂದು... ಲಕ್ಷ್ಮೀದೇವಿಯ ಹ್ರಸ್ವರೂಪ ). ಅವರಿಬ್ಬರ ಮಧ್ಯೆ ಏನೇನೋ ಚರ್ಚೆಗಳು, ಇಬ್ಬರದು ಸಪ್ಪೆ ಮುಖ... ಏನೋ ಚಿಂತೆ.   

" ರಂಗ ಅಂತ ಹೆಂಡತಿ..( ಅತ್ತೆಯ ಹೆಸರು ರಂಗಮ್ಮ), ರಂಗ ಅಂತ ತಮ್ಮ ( ಸೋದರ ಮಾವ ಆರ್.ರಂಗರಾವ್) ರಂಗ ಅಂತ ಅಳಿಯ (ನಾನು)..." ಮುಂದೇನೋ ಅಸಮಾಧಾನದ ಮಾತುಗಳಿದ್ದವು ಅಂತ ನನ್ನ ಭಾವನೆ. ಜೀವನದ ತಲ್ಲಣಗಳ ನೆನಪಾಗಿರಬಹುದೇನೋ ನನಗೇನೂ ತಿಳಿಯದು.

" ದೇವರಿಟ್ಟಂಗೆ ಆಗುತ್ತೆ ಬಾ.." ಎಂದು ಹೇಳಿದ ಮಾವ, ಅಮ್ಮ ಮತ್ತು ನನ್ನನ್ನು ಕರೆದುಕೊಂಡು ಊರಿಗೆ ಹೊರಟರು.

ಚಿಕ್ಕಬಳ್ಳಾಪುರ ಸೇರುವ ವೇಳೆಗೆ ಕತ್ತಲಾಗಿತ್ತು... ರಾಮಚಂದ್ರ ಹೊಸೂರಿಗೆ ಹೋಗುವ ಬಸ್ಸು(??) ಹೊರಟು ಹೋಗಿತ್ತು... ಬೇರೆ ಯಾವ ಅನುಕೂಲಗಳು ಇರಲಿಲ್ಲ. ಬಸ್ ನಿಲ್ದಾಣದಲ್ಲಿ ಅಮ್ಮ ಮತ್ತು ಮಾವನ ಮಧ್ಯದ, ನನಗೆ ಅರ್ಥವಾಗದ, ದೀರ್ಘ ಮಾತುಕತೆ... ಒಂದು ಹಂತದಲ್ಲಿ ಮಾವನಿಗೆ ತುಂಬ ಕೋಪ ಬಂದು ಅಮ್ಮನನ್ನು ಬೈದದ್ದು. (ಅದೇ ಮೊದಲು.. ಅದೇ ಕೊನೆ ನಾನು ವಿಶ್ವೇಶ್ವರಣ್ಣಯ್ಯನ ಕೋಪದ ಮುಖವನ್ನು ಕಂಡದ್ದು.)



ರಾತ್ರಿ ಚಿಕ್ಕಬಳ್ಳಾಪುರದಲ್ಲಿ, ಅಜ್ಜಿಯ ಮನೆಯಲ್ಲಿ ಉಳಿದಿದ್ದು ಮಾರನೆಯ ದಿನ ಟ್ರೈನ್ ನಲ್ಲಿ... ಹೋಗಿ ಗಿಡ್ನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಇಳಿದು... ಹೊಸೂರಿಗೆ ಹೊಲ ತೋಟದ ಮಧ್ಯೆ ನಡೆದುಕೊಂಡು ಹೋದದ್ದು ತಕ್ಕಮಟ್ಟಿಗೆ ನೆನಪಿದೆ. ಮುಂಜಿಯ ಯಾವ ಕಾರ್ಯಕ್ರಮದ್ದೂ ಒಂದೆಳೆಯೂ ನೆನಪಿಲ್ಲ.. ಯಾಕೋ ಗೊತ್ತಿಲ್ಲ...

ಆದರೆ ಇನ್ನೂ ಚಿಕ್ಕಂದಿನಲ್ಲಿ, ಊರ ಹಬ್ಬಕ್ಕೆ ಹೋಗಿದ್ದು ಮಾತ್ರ ಅಚ್ಚಳಿಯದೆ ನೆನಪಿದೆ...

ಊರ ದ್ಯಾವರು ಮಾಡಬೇಕು

ಮಾರಿಗೇ ಬಲಿ ಕೊಡಲು ಬೇಕು..

ಎಂಬುದು ದಾಸರ ಪದ, ಅದರ ಅನುಭವ. ಆಗಿದ್ದು...ಹೊಸೂರಿನ  ಮಾವನ ಮನೆಗೆ ಹೋದಾಗ. 

ಹೊಸೂರಿನಲ್ಲಿ ಮಾವನ ಮನೆ, ನಮ್ಮ ದೊಡ್ಡಜಾಲದ ಮನೆಗಿಂತ ದೊಡ್ಡದಾಗಿತ್ತು. ಮನೆಯಲ್ಲಿದ್ದ ಎರಡು ಕಂಬಗಳು, ಅದರ ಸುತ್ತ ಸುತ್ತಿದ್ದು, ಬೈಸಿಕೊಂಡಿದ್ದು ನೆನಪಿದೆ.

ಊರು ದೇವರಿಗೆ ತಂಬಿಟ್ಟಿನ ಆರತಿ... ತಲೆಯ ಮೇಲೆ ಹೊತ್ತ ಆರತಿ ತಟ್ಟೆ, ದೇವಸ್ಥಾನ ಸುತ್ತಿ ಬಂದಿದ್ದು, ತಂಬಿಟ್ಟಿನ ಮೇಲಿದ್ದ ತುಪ್ಪದ ಬತ್ತಿಯನ್ನು ಹಚ್ಚಿ ಆರತಿ ಬೆಳಗಿದ ನಂತರ ಮನೆಗೆ ಬಂದು ತಂಬಿಟ್ಟು ತಿಂದದ್ದು. ತಂಬಿಟ್ಟಿನ ರುಚಿ ಇಷ್ಟವಾದರೂ... ಬತ್ತಿ ಹಚ್ಚಿ ಸ್ವಲ್ಪ ಕಪ್ಪಾಗಿದ್ದ ಭಾಗದ ತಂಬಿಟ್ಟಿನ ರುಚಿ ಇಷ್ಟ ಆಗಲಿಲ್ಲ, ಆದರೆ ಅದು ದೇವರ ಪ್ರಸಾದ... ಉಗಿಯುವ ಹಾಗಿಲ್ಲ.

ಬೆಳಿಗ್ಗೆ ದೇವಸ್ಥಾನಕ್ಕೆ ಹೋದಾಗ, ಅಲ್ಲಿ ಕಟ್ಟಿದ್ದ ದೇವರ ಕೋಣ... ಕರುವಿಗಿಂತ ಸ್ವಲ್ಪ ದೊಡ್ಡದಾಗಿತ್ತು...  ಪಾಪ ಎನಿಸಿತು. ದೇವರಕೋಣ ಎಂದು ಹೆಸರಿಟ್ಟು ಬಿಟ್ಟಾಗ, ಅದು ಯಾರ ಹೊಲದಲ್ಲಿ, ತೋಟದಲ್ಲಿ ಬೇಕಾದರೂ ಮೇಯಬಹುದು... ಅದಕ್ಕೆ ಅಡ್ಡಿ ಇಲ್ಲ, ಅದನ್ನು ಯಾರೂ ಕಟ್ಟುವುದಿಲ್ಲ. ಅದನ್ನು ಕಟ್ಟುವುದು ಊರ ಹಬ್ಬದ  ಬಲಿ ಕೊಡುವ ದಿನ. ಕಡಿದ ನಂತರ ಅದರ ತಲೆಯ ಮೇಲೆ ಉರಿಯುವ ಹಣತೆಯನ್ನು ಇಡುತ್ತಾರೆಂದು ತಿಳಿಯಿತು. 

ಗಾಢ ನಿದ್ರೆಯಲ್ಲಿದ್ದ ನನಗೆ ಎಚ್ಚರವಾಗಿದ್ದು ತಮಟೆ ಹಾಗೂ ಡೋಲುಗಳ ಶಬ್ದ. ಮನೆಯ ಮುಂದೆ ನಿಂತು ನೋಡಿದ ದೃಶ್ಯ... ಸ್ವಲ್ಪ ಭಯ ಮೂಡಿಸಿದ್ದು ನಿಜ. ಆಸಾದಿಯ ( ಮಾರಮ್ಮನ ಪೂಜೆ ಮಾಡುವವರು) ಹಣೆಯಲ್ಲಿ ಇದ್ದ ಢಾಳ ಕುಂಕುಮದ ಬಣ್ಣ, ಹಾಕಿಕೊಂಡ ಹಾರ, ತಲೆಗೆ ಕಟ್ಟಿದ ಪೇಟ, ಕೈಯಲ್ಲಿದ್ದ ಹಣತೆ, ಜೊತೆಗೆ ತಮಟೆಯ ಸದ್ದಿಗೆ ಹಾಕುತ್ತಿದ್ದ ಹೆಜ್ಜೆ... ಪಂಜಿನ ಬೆಳಕಿನಲ್ಲಿ ನೋಡಿದ್ದು.

ಇದಾದ ಎಷ್ಟೋ ಹೊತ್ತಿನ ನಂತರ, ತಮಟೆ ಡೋಲುಗಳ ಅತಿ ವೇಗದ ಹಾಗೂ ಅತಿ ಹೆಚ್ಚು ಶಬ್ದದ, ಲಯಬದ್ಧವಾದ ಬಡಿತ ಉತ್ತುಂಗಕ್ಕೆ ಏರಿ ನಿಂತಿದ್ದು.. ಆಗ ಮನೆಯಲ್ಲಿ ಮಾತಾಡಿದ್ದು.. ಕೋಣನ್ನ ಕಡಿದಾಯಿತು ಎಂದು.

ಅದನ್ನು ನೋಡುವ ಕುತೂಹಲ ನನಗೆ... ಬೆಳಿಗ್ಗೆ ಆ ಜಾಗಕ್ಕೆ ಹೋಗುತ್ತಿದ್ದಾಗ... ಯಾರೋ ಹಿರಿಯ.. ನನ್ನನ್ನು ತಡೆದು." ನೀವೆಲ್ಲಾ ಅಲ್ಲಿಗೆ ಹೋಗಬಾರದು.. ನಡಿ ಮನೆಗೆ" ಎಂದು ಕಳಿಸಿದ್ದು ಬೇಜಾರಾಯಿತು. 

ಕೋಣನನ್ನು ಮಾರಿಗೆ ಬಲಿ ಕೊಡುವ ಸಂಪ್ರದಾಯದ ಹಿಂದೆ ಒಂದು ಕಥೆ ಇದೆ. ಅಸಾದಿ ಹೇಳಿದ ಹಾಡುಗಳು ಜೊತೆಗೆ ಅರ್ಥೈಸಿದ ಆ ಕಥೆಯ ಸಾರಾಂಶ.. ನನಗಿರುವ ನೆನಪಿನಂತೆ ಹೀಗಿದೆ.

ಒಬ್ಬ ಕೀಳು ಜಾತಿಯ ಯುವಕ ತನ್ನ ಜಾತಿಯನ್ನು ಮರೆ ಮಾಚಿ, ಬ್ರಾಹ್ಮಣ ಯುವತಿಯನ್ನು ಮದುವೆಯಾಗಿ ಬ್ರಾಹ್ಮಣನಂತೆ ನಟಿಸುತ್ತಾ ಇರುತ್ತಾನೆ.

ಹಬ್ಬದ ದಿನ ಮನೆಯಲ್ಲಿ ಹೋಳಿಗೆ ಊಟ. ಹಾಲುತುಪ್ಪ ಹಾಕಿ ನೆನಸಿಟ್ಟಿದ್ದ ಹೋಳಿಗೆಯನ್ನು ಸವಿದ ಯುವಕ, ಊಟದ ನಂತರ ಮಲಗಿರುತ್ತಾನೆ. ಅಲ್ಲಿಗೆ ಬಂದ ಹೆಂಡತಿ, ಅರೆ ನಿದ್ದೆಯಲ್ಲಿದ್ದ   ಗಂಡನನ್ನು, ಹೋಳಿಗೆ ಹೇಗಿತ್ತು ಎಂದು ಕೇಳುತ್ತಾಳೆ. ಅದಕ್ಕೆ        " ......ಕೋಣನ ನಾಲಿಗೆಗೆ ಸಮವಲ್ಲ...." ಎಂಬ ಉತ್ತರ ಕೇಳಿ ಗಾಬರಿಯಾಗುತ್ತಾಳೆ, ಅನುಮಾನ ಬಂದು ಘಟ್ಟಿಸಿ ಕೇಳಿದಾಗ ಅವನು ಕೀಳು ಜಾತಿಯವನೆಂದು, ಮಾಂಸ ತಿನ್ನುತ್ತಾನೆಂದೂ, ಸುಳ್ಳು ಹೇಳಿ, ಮೋಸ ಮಾಡಿ ಮದುವೆಯಾದನೆಂದು ತಿಳಿದು ಅವನಿಗೆ ಕೋಣನಾಗಿ ಹುಟ್ಟು ಎಂದು ಶಾಪ ಕೊಟ್ಟು, ಮುಂದಿನ ಜನ್ಮದಲ್ಲಿ ತಾನು ಮಾರಿಯಾಗಿ .. ಕೋಣನಾಗಿ ಹುಟ್ಟಿದ ಆ ಯುವಕನನ್ನು ಬಲಿ ತೆಗೆದುಕೊಳ್ಳುತ್ತಾಳೆ... ಅದರ ಮುಂದುವರಿದ ಭಾಗವೇ ಮಾರಿ ಪೂಜೆ ಹಾಗೂ ಮಾರಿಗೆ ಕೋಣನ ಬಲಿ ಕೊಡುವ ಸಂಪ್ರದಾಯ ಬೆಳೆದದ್ದು, ಎನ್ನುವ ಕಥೆ.

ಸುಳ್ಳು ಹೇಳಿದ ಕಾರಣಕ್ಕೆ ಬಲಿ ಕೊಟ್ಟ ನಂತರ ಕೋಣನ ಬಲಗಾಲನ್ನು ಕತ್ತರಿಸಿ ಅದರ ಬಾಯಿಯಲ್ಲಿ ಇಡುವುದು ಹಾಗೂ ತಲೆಯ ಮೇಲೆ ಉರಿಯುವ ಹಣತೆಯನ್ನು  ಇಡುವ ರಿವಾಜು ಉಂಟು.

ಆಸಾದಿಯು ಏಕನಾದ, ಚಿಟಿಕೆ ಹೊಡೆಯುತ್ತಾ  ಹಾಡು ಹೇಳುವ ಶೈಲಿ, ತೆಲುಗು ಮಿಶ್ರಿತ ಕನ್ನಡದಲ್ಲಿ ಅರ್ಥೈಸುವ ವಾಗ್ಝರಿ, ಮಧ್ಯೆ ಮಧ್ಯೆ ಹೇಳುವ ತಮಾಷೆಯ ಮಾತುಗಳು ಕೇಳಲು ಬಲು  ಚೆನ್ನ. 

ಸೋದರ ಮಾವನೂರಿನ ಈ ಹಬ್ಬದ ಅನುಭವ, ಜೀವನದಲ್ಲಿ ಮತ್ತೆ ನನಗೆ ಸಿಕ್ಕಿಲ್ಲ...

ಸೋದರ ಮಾವಂದಿರೊಡನೆ ಅಷ್ಟು ಸಲಿಗೆ ಇಲ್ಲದಿದ್ದರೂ, ಅವರುಗಳ ಅಭಿಮಾನ ವಿಶ್ವಾಸಗಳನ್ನು ಸವಿದಿದ್ದೇನೆ.  

ಸೋದರತ್ತೆಯರ ಪ್ರೀತಿ ವಿಶ್ವಾಸವನ್ನು ಕಾಣದೆ ಇದ್ದವ ನಾನು... ನಾನು ಹುಟ್ಟುವಷ್ಟರಲ್ಲಿ ಸೋದರತ್ತೆಯರೆಲ್ಲ ಈ ಲೋಕ ಬಿಟ್ಟಿದ್ದರು.

ಸೋದರ ಮಾವನಾಗಿ, ನಾನು ಸಾಕಷ್ಟು ಅದೃಷ್ಟವಂತ. ನನಗೆ ಆರು ಸೋದರಳಿಯಂದಿರು, ಆರು ಸೋದರ ಸೊಸೆಯರು. ಹಸುಗೂಸಿನಿಂದ ಕೆಲವರನ್ನು ಮುದ್ದಿಸಿ ಆಟವಾಡಿ, ಸುಖಿಸಿದ್ದೇನೆ. ಈಗಲೂ ಕೆಲವರು ತಮ್ಮ ಮನದಾಳದ ಭಾವನೆಗಳನ್ನು ನನ್ನೊಡನೆ ಹಂಚಿಕೊಂಡಾಗ ಹೆಮ್ಮೆ ಎನಿಸುತ್ತದೆ. 

ಈ ಸಂಬಂಧಗಳು ಉಳಿದು ಮುಂದುವರಿಯಬೇಕಾದರೆ, ಕನಿಷ್ಠಪಕ್ಷ ಮನೆಯಲ್ಲಿ ಒಂದಕ್ಕಿನ್ನ ಹೆಚ್ಚು ಮಕ್ಕಳಿರಬೇಕು... ಅದರಲ್ಲೂ ಹೆಣ್ಣು ಮಕ್ಕಳು ಇರಲೇಬೇಕು. ಈಗಿನ ಪೀಳಿಗೆ ಈ ವಿಷಯದಲ್ಲಿ ಬಲವಾದ ನಿರ್ಧಾರ ತೆಗೆದುಕೊಂಡು ಸಂಬಂಧಗಳನ್ನು ಉಳಿಸುವ ಜವಾಬ್ದಾರಿಯನ್ನು ಹೊರಲೇಬೇಕೆಂದು ಆಗ್ರಹಿಸುತ್ತಾ.. ಆಶಿಸುತ್ತಾ... 

ನಮಸ್ಕಾರ.


D C Ranganatha Rao

9741128413






    

    

Comments

  1. ನನ್ನ ಸೋದರಮಾವ ದೇವರಂತಹವರು.
    ಅವರಿಗೆ ತನ್ನ odahuttidavarendare ಪ್ರಾಣ. ಅವರಿಗೆಲ್ಲ
    ಬಹಳ ಉಪಕಾರ ಮಾಡಿದ್ದಾರೆ. ನನ್ನ ಅಮ್ಮ ಅವರಿಗೆ ಬಹಳ ಅಚ್ಚುಮೆಚ್ಚು. ಅಮ್ಮನಿಗೂ ಹಾಗೆ. ಒಳ್ಳೆಯ ನಿಲುವು ಹಾಲು ಬೆಳ್ಳಗೆ ಆಕರ್ಷಕ ಮೈಕಟ್ಟು ಹಾಗು ವ್ಯಕ್ತಿತ್ವ. ಕಚ್ಚೆ ಪಂಚೆ ಜುಬ್ಬ ಧರಿಸಿ ಬರುತ್ತಿದ್ದರು. ನಿಮ್ಮ ಮಾವನ ಬಗ್ಗೆ ಬರೆದಾಗ ನನ್ನ ದೊಡ್ಡ ಮಾವ ಬಹಳ ನೆನಪಾದರು. ಅಂತಹವರ ಸಂತತಿ ಸಾವಿರ ವಾಗಲಿ. ಚೆನ್ನಾಗಿ ಬರೆದಿದ್ದೀರಿ.ಸರ್

    ReplyDelete
  2. ನಾಗೇಂದ್ರ ಬಾಬು21 May 2025 at 12:40

    ನನ್ನ ಮೂವರು ವಿಭಿನ್ನ ವ್ಯಕ್ತಿತ್ವದ ಸೋದರಮಾವಂದಿರ ಜೊತೆಗಿನ ಒಡನಾಟ
    ನೆನಪಿಗೆ ಬಂತು...ಸಹೋದರ ಸಹೋದರಿಯರ ನಡುವಿನ ಸಂಬಂಧ ಕೂಡ
    ವ್ಯಾವಹಾರಿಕವಾಗಿ ಬರೀ WhatsUp ನಲ್ಲಿ
    Touch up ನಲ್ಲಿರುವ ಇತ್ತಿಚಿನ ಸಂಬಂಧ ಗಳಿಗಿಂತ ಅಂದಿನ ಅಂದಿನ ಸೋದರಮಾವ
    ಚಿಕ್ಕಪ್ಪ...ದೊಡ್ಡಪ್ಪ ಹಾಗೂ ಬಂಧುಗಳ ಒಡನಾಟ ನೆನಪಿಸಿ ಕೊಳ್ಳುವುದು ಒಂದು ಸುಂದರ ಅನುಭವ...ಮತ್ತೊಮ್ಮೆ ನಿಮ್ಮ ನೆನಪಿನ ಬುತ್ತಿಯಿಂದ ಓದುಗರ ನೆನಪುಗಳನ್ನು ಕೆದಕಿದ ಉತ್ತಮ ಪ್ರಯತ್ನಕ್ಕೆ
    ಧನ್ಯವಾದಗಳು
    ಬಾಬು

    ReplyDelete
  3. ನನ್ನ ಸೋದರಮಾವನ ಜೊತೆ ನನ್ನ ಒಡನಾಟ ನೆನಪಾಯ್ತು ಚಿಕ್ಕಪ್ಪ 😁

    ReplyDelete
  4. ಸೋದರಮಾವ, ಗಾಂಧಿ ಬಜಾರ್, ಬಸ್ ನಂ ೧೧, ನನ್ನ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವಂತೆ ಮಾಡಿತು. ಧನ್ಯವಾದಗಳು🙏🙏

    ReplyDelete
  5. ಸೋದರ ಮಾವನಿಗೆ ಯಾರು ಸಾಟಿ ಇಲ್ಲ ಸರ್. ಅವರ ಸಂಬಂಧ ಮತ್ತು ಅವರ ಪ್ರೀತಿ ಇಂದಿಗೂ ಮಾಸುವುದಿಲ್ಲ ಅದನ್ನು ನೆನಪು ಮಾಡಿಕೊಂಡಿದ್ದೇನೆ ನಿಮಗೆ ಧನ್ಯವಾದಗಳು

    ReplyDelete
  6. Shakunthala Narendra

    ReplyDelete
  7. Guru Prasanna K28 May 2025 at 11:09

    ಸೋದರ ಮಾವ ಎಂದುೊಡನೆ ನನಗಿದ್ದ 5 ಸೋದರ ಮಾವಂದಿರನ್ನು ನನ್ನ ಅಮ್ಮ ಪಂಚಪಾಂಡವರೆಂದು ಕರೆಯುತ್ತಿದ್ದು ಈಗಲೂ ನನಗೆ ನೆನಪಿದೆ.
    ಸೋದರ ಮಾವ ಎಂದಾಗ ಕೆಟ್ಟ ಸೋದರ ಮಾವನಾದ ಕಂಸನು ಲೇಖನದಲ್ಲಿ ಹೇಗೋ ಮರೆಯಾಗಿ ಬಿಟ್ಟಿದ್ದಾನೆ.
    ಪ್ರಸ್ತುತ ಲೇಖನದಿಂದ ಮಾರಿ ಹಾಗೂ ಕೋಣಕ್ಕೆ ಸಂಬಂಧಿಸಿದ ಕಥೆಯನ್ನು ತಿಳಿದಂತಾಯಿತು.
    ಲೇಖಕರ ನೆನಪಿನ ದೋಣಿ ಹೀಗೆ ಸಾಗುತಲ್ಲಿರಲಿ ದೂರ ತೀರವ ಸೇರಲಿ.

    ಗುರು ಪ್ರಸನ್ನ
    ಚಿಂತಾಮಣಿ

    ReplyDelete
  8. Sodara sambandada nenapu tharisiddakke thanks sir.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ