ಅಬಲೆ - ಅಮ್ಮ - ದುರ್ಗೆ
ಪಹಲ್ಗಾಮ್ ಘಟನೆಯ, ಸುದ್ದಿ ಚಿತ್ರಗಳು ಹೊರ ಬರುತ್ತಿದ್ದಂತೆ, ಮನಸ್ಸು ವ್ಯಗ್ರಗೊಂಡಿತು. ಹಿಂದುಗಳೆಂದು ಖಚಿತಪಡಿಸಿಕೊಂಡು, ಅಸಹಾಯಕ ಹೆಣ್ಣು ಮಕ್ಕಳ ಮುಂದೆ ಗಂಡ, ಅಪ್ಪ, ಅಣ್ಣ, ತಮ್ಮ ಎಂದು ನೋಡದೆ, ಗುಂಡಿಟ್ಟು ಕೊಂದ ಆ ಕ್ರೂರ ಮನಸ್ಸಿನ ಪಾತಕಿಗಳನ್ನು ಸದೆ ಬಡಿಯಲೇ ಬೇಕು... ಎಂಬುದು ಆಶಯವಾಗಿತ್ತು.
ಅದರಲ್ಲೂ " ಮೋದಿಗೆ ಹೋಗಿ ಹೇಳಿ" ಎಂಬ ಉದ್ಧಟತನದ ಮಾತು ರಕ್ತ ಕುದಿಯುವಂತೆ ಮಾಡಿತ್ತು.
ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಎಂದು ಅನಿಸಿದ್ದು ಸಹಜವಾದರೂ... ಜವಾಬ್ದಾರಿ ಸ್ಥಾನದಲ್ಲಿ ಕುಳಿತವರು, ಎಲ್ಲ ದೃಷ್ಟಿಯಿಂದಲೂ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ, ಆಗಬಹುದಾದ ಪರಿಣಾಮಗಳು ಅದಕ್ಕೆ ಬೇಕಾದ ತಯಾರಿಗಳು ಎಲ್ಲವನ್ನೂ ಮಾಡಿಕೊಂಡು "ಆಪರೇಷನ್ ಸಿಂಧೂರ" ಹೆಸರಿನ ಕಾರ್ಯಾಚರಣೆ ಮಾಡಿ, ಅದರಿಂದ ಸಾಕಷ್ಟು ಉಗ್ರಗಾಮಿಗಳನ್ನು ಹತಗೊಳಿಸಿದ ವಿಷಯ ಮನಸ್ಸಿಗೆ ಒಂದಷ್ಟು ನೆಮ್ಮದಿಯನ್ನು ಕೊಟ್ಟಿತು.
ಅದಕ್ಕೂ ಹೆಚ್ಚು ಸಂತೋಷ ಕೊಟ್ಟಿದ್ದು, ಈ ವಿಚಾರವಾಗಿ ನಡೆದ ಪತ್ರಿಕಾಗೋಷ್ಠಿ. ಅದರಲ್ಲಿ ವಿವರಗಳನ್ನು ಕೊಡಲು, ಮಿಲಿಟರಿ ಉಡುಗೆ ತೊಟ್ಟು, ಟೋಪಿಯೊಂದಿಗೆ ಕಂಗೊಳಿಸುತ್ತಿದ್ದ ಧೀರ ಮಹಿಳೆಯರು... colonel ಸೋಫಿಯಾ ಖುರೇಶಿ ಹಾಗೂ wing commander ವ್ಯೋಮಿಕಾ ಸಿಂಗ್.
ಅಸಹಾಯಕ ಮಹಿಳೆಗೆ ಹೇಳಿದ "ಮೋದಿಗೆ ಹೇಳು" ಎಂಬ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಮಾಡಿದ ಆಪರೇಷನ್ ಸಿಂಧೂರದ ವಿವರಣೆಯನ್ನು ಉಗ್ರಗಾಮಿ ಸಂಘಟನೆಗಳಿಗೆ ನರೇಂದ್ರ ಮೋದಿಯವರ ಮರು ಸಂದೇಶ ಕಳಿಸಿದ್ದು ಧೀರ ಮಹಿಳೆಯರ ಮೂಲಕ. ಎಷ್ಟು ಸಮಂಜಸವಾಗಿತ್ತು ಅಲ್ಲವೇ?
ಹೆಣ್ಣು ಅಬಲೆ ಎಂದರು... ಹೌದು ನೈಸರ್ಗಿಕ ಕಾರಣಗಳಿಗಾಗಿ ಕೆಲ ಸಮಯದಲ್ಲಿ ಹೆಣ್ಣು ಅಬಲೆಯಾಗುತ್ತಾಳೆ.... ಆದರೆ ಅದೊಂದೇ ಅವಳ ಗುರುತಲ್ಲ.. ಅವಳು ಸಬಲೆ ಎಂದು ಸಾಕಷ್ಟು ಸಲ ತೋರಿಸಿದ್ದಾಳೆ.
ಸಂಚಿ ಹೊನ್ನಮ್ಮ ತನ್ನ ಹದಿಬದೆಯ ಧರ್ಮದಲ್ಲಿ
ಪೆಣ್ಣಲ್ಲವೇ ನಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೇ ನಮ್ಮನ್ನು ಪೊರೆದವಳು
ಪೆಣ್ಣು ಪೆಣ್ಣೇಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು
ಎಂದು ಹೇಳಿ ಹೆಣ್ಣಿನ ಇನ್ನೊಂದು ಮುಖವನ್ನು ತೋರಿದವರು.
ಹೆಣ್ಣು ತಾಯಿಯಾಗಿ, ಅಕ್ಕತಂಗಿಯಾಗಿ, ಮಡದಿಯಾಗಿ, ಮಗಳಾಗಿ, ಗೆಳತಿಯಾಗಿ ತೋರಿಸುವ ಆದರ, ಅಭಿಮಾನ, ಪ್ರೀತಿ, ವಾತ್ಸಲ್ಯ, ರಕ್ಷಣೆ, ಮಾರ್ಗದರ್ಶನ ಹೀಗೆ ... ಬಹು ಪಾತ್ರ ನಿರ್ವಹಣೆ, ಅದಕ್ಕೆ ತಕ್ಕನಾದ ಬಹುವಿಧದ ಮುಖಗಳು, ಬೇರೆ ಬೇರೆ ಭಾವಾಭಿವ್ಯಕ್ತಿಯನ್ನು ಅನುಭವಿಸಿಯೇ ತಿಳಿಯಬೇಕು.
ತಂಗಿ ಇಲ್ಲದ ನನಗೆ.. ನನ್ನ ಜೀವನ ಪಯಣದಲ್ಲಿ, ಸಾಕಷ್ಟು ಹೆಣ್ಣು ಮಕ್ಕಳು ನನಗೆ ತಂಗಿಯ ಪ್ರೀತಿಯನ್ನು ಕೊಟ್ಟು ಅಣ್ಣನನ್ನಾಗಿ ಮಾಡಿದ್ದಾರೆ.. ಆ ತಂಗಿಯರಿಗೆಲ್ಲ ನನ್ನ ಮನಸಾ ವಂದನೆಗಳು.
ಇನ್ನು ಅಕ್ಕಂದಿರಂತೂ ಅಮ್ಮನಷ್ಟೇ ಪ್ರೀತಿಯನ್ನು ನನ್ನ ಮೇಲೆ ಹರಿಸಿದ್ದಾರೆ, ಹರಸುತ್ತಿದ್ದಾರೆ... ಇದಕ್ಕೆ ಕೃತಜ್ಞತೆ ಅನ್ನುವ ಪದ ಯಾವ ರೀತಿಯಲ್ಲೂ ಸಾಟಿಯಲ್ಲ... ಮೌನವೇ ಉತ್ತರ.
ಮಡದಿಯದು ಇನ್ನೊಂದು ವಿಶೇಷತೆ... ಅವಳು ಎಲ್ಲ ಪಾತ್ರವನ್ನು ಒಂದೊಂದು ಹಂತದಲ್ಲಿ ನಿರ್ವಹಿಸುತ್ತಾಳೆ.. "ಕಾರ್ಯೇಷು ದಾಸಿ... ಕರಣೇಶು ಮಂತ್ರಿ...." ಎಂಬಂತೆ. ನನ್ನ ಮಡದಿ ವಿಜಯ ಇದೆಲ್ಲದರ ಜೊತೆ ಕೆಲ ಸಮಯ ದುರ್ಗಿಯೂ ಆಗುತ್ತಾಳೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಮಗಳ ಒಡನಾಟ ಏನೆಂದು ಹೇಳಲಿ.. ಅವಳು ನಮ್ಮ ಜೀವನದ ಚೈತ್ರ ಮಾಸ. ಅವಳದು ಹುಲಿ ಮುದ್ದು... ಕೆಲವು ಸಲ ಆ ಕ್ಷಣಕ್ಕೆ ಕಷ್ಟವೇ ಆದರೂ .. ಇಷ್ಟವೂ ಆಗುತ್ತದೆ. ಅವಳ ಮನದಾಳದ ತುಡಿತಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ಸಮಯ ಅಪ್ಪನಾಗಿ ನನ್ನ ಜವಾಬ್ದಾರಿಯನ್ನು ಗುರುತಿಸಿಕೊಳ್ಳುವಂತೆ ಮಾಡುತ್ತದೆ.
ಇನ್ನು ಅತ್ತಿಗೆ ನಾದಿನಿಯರ ಪ್ರೀತಿಯನ್ನು ನಿರಂತರವಾಗಿ ಪಡೆಯುತ್ತಿರುವ ಅದೃಷ್ಟವಂತ ನಾನು.
ಅದರಲ್ಲೂ ನನ್ನ ಹೆಂಡತಿಯ ಸ್ನೇಹಿತರ ಒಂದು ಗುಂಪು ನನ್ನನ್ನು ಭಾವ ಎಂದು ಕರೆದು ಆತ್ಮೀಯತೆಯಿಂದ ಮಾತನಾಡಿದಾಗ ಹೆಮ್ಮೆಯಾಗುತ್ತದೆ.
ನನ್ನಮ್ಮನನ್ನು ನೆನೆದಾಕ್ಷಣ, ಅವಳ ಮುಂದಾಳತ್ವದ ಗುಣ, ಜೀವನದ ಕಷ್ಟಗಳನ್ನು ನಿಭಾಯಿಸುವ ಚಾಕಚಕ್ಯತೆ ನನಗೆ ಅಚ್ಚುಮೆಚ್ಚು. ಅವಳೇ ಬಹಳಷ್ಟು ಚಿಂತನೆಗಳಲ್ಲಿ ನನಗೆ ಸ್ಫೂರ್ತಿದಾಯಿನಿ.
ಚಿಕ್ಕಂದಿನಲ್ಲಿ ಓದಿದ ಝಾನ್ಸಿರಾಣಿ ಲಕ್ಷ್ಮೀಬಾಯಿ... ಅದರಲ್ಲೂ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು , ಕುದುರೆಯ ಮೇಲೆ ಕೂತು, ಕತ್ತಿಯನ್ನು ಝಳಪಿಸುತ್ತಿದ್ದ ಆ ಚಿತ್ರ ಹಾಗೆ ಒನಕೆ ಓಬವ್ವ ಸೀರೆಯ ಸೆರಗನ್ನು ಸಿಕ್ಕಿಸಿಕೊಂಡು, ಒನಕೆ ಎತ್ತಿ ಬಡಿಯಲು ಸಿದ್ಧವಾಗಿರುವ ಚಿತ್ರ ನೆನಪಿನಲ್ಲಿದೆ.
ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ... "ನಿಮಗೇಕೆ ಕೊಡಬೇಕು ಕಪ್ಪ...." ಮಾತುಗಳಂತೂ ರಿಂಗಣಿಸುತ್ತವೆ.
ಹೆಣ್ಣು ಮಕ್ಕಳ ಓದಿಗೆ ಬುನಾದಿ ಹಾಕಿದ ಸಾವಿತ್ರಿಬಾಯಿ ಫುಲೆ, ದೇವಸ್ಥಾನಗಳ ರಕ್ಷಣೆಗೆ ಮುಂದಿದ್ದ ಅಹಲ್ಯಾಬಾಯಿ ಹೋಳ್ಕರ್ ಸ್ಮರಣೀಯರು. ನಮ್ಮ ಸಮಾಜಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ ಅನೇಕ ಮಹಿಳೆಯರು ವಂದನಾರ್ಹರು.
ಅಕ್ಕಮಹಾದೇವಿಯ ವಚನಗಳು, ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮ ಹಾಗೂ ಹಂಪನ ಸಮಸ್ಯೆಗೆ ಕಂತಿಯ ಉತ್ತರಗಳು ನನ್ನ ಚಿಕ್ಕಂದಿನ ಓದುಗಳು... ಇಂದಿಗೂ ಇಷ್ಟವಾಗುವಂತಹ ಸಾಲುಗಳು.
ಕಾದಂಬರಿ ಓದುವ ಹಂತಕ್ಕೆ ಬಂದಾಗ ಮೊದಲ ಪ್ರಭಾವ ತ್ರಿವೇಣಿಯವರ ಕಾದಂಬರಿಗಳು. ಎಂ ಕೆ ಇಂದಿರಾ ಹಾಗೂ ಅನುಪಮಾ ನಿರಂಜನ ಅವರ ಕಾದಂಬರಿಗಳು ಹಾಗೂ ಲೇಖನಗಳು ಇಷ್ಟವಾದವುಗಳು. ಕೊರವಂಜಿಯಲ್ಲಿ ಬರುತ್ತಿದ್ದ ಟಿ ಸುನಂದಮ್ಮ ಅವರ ಹಾಸ್ಯಲೇಖನಗಳನ್ನು ಆಸೆಯಿಂದ ಓದುತ್ತಿದ್ದೆ.
ಕನ್ನಡ ಸಾಹಿತ್ಯದಲ್ಲಂತೂ ಹೆಣ್ಣು ರಾರಾಜಿಸುತ್ತಾಳೆ. ಭೈರಪ್ಪನವರ ಗೃಹಭಂಗ ಕಾದಂಬರಿಯ ನಂಜಮ್ಮನ ಪಾತ್ರ ನನಗೆ ಬಹು ಹತ್ತಿರ... ನಂಜಮ್ಮನಲ್ಲಿ.. ನನ್ನಮ್ಮನನ್ನು ಕಾಣುತ್ತೇನೆ. ಇನ್ನು ಗಂಗಮ್ಮನ ಪಾತ್ರವಂತೂ ರಂಜನೀಯ.
ಚಲನಚಿತ್ರದ ಮೂಲಕ ಕಂಡ ತ್ರಿವೇಣಿಯವರ ಶರಪಂಜರದ ಕಾವೇರಿ ಹಾಗೂ ಎಂ ಕೆ ಇಂದಿರಾ ರವರ ಗೆಜ್ಜೆ ಪೂಜೆಯ ಅಪರ್ಣ ಪಾತ್ರ ಮನ ಕಲಕುವಂಥದ್ದು.
ಜನಪದದಲ್ಲಂತೂ ಹೆಣ್ಣಿನ ಎಲ್ಲ ಮುಖಗಳನ್ನು ಅನಾವರಣ ಮಾಡಿದ್ದಾರೆಂದು ನನ್ನ ನಂಬಿಕೆ. ಬಾಲ್ಯದಲ್ಲಿ ಕೇಳಿದ, ಹಾಡಿದ ಜನಪದ ಗೀತೆಗಳಲ್ಲಿ ಬರುವ ಭಾಂದವ್ಯದ ಅಭಿವ್ಯಕ್ತಿ... ಅದರಲ್ಲೂ ಅಣ್ಣ ತಂಗಿಯರ ಬಾಂಧವ್ಯ ನನಗೆ ಅಚ್ಚು ಮೆಚ್ಚು
ಪಂಚಮಿ ಹಬ್ಬ ಉಳಿದೈತ ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಲಾಕ
ಬಾ ತಂಗಿ ಮದುವೆಗೆ ಬರದೇ ಗಿರದೇ ಇರಬೇಡ ದೇವರನ್ನ ತರೋರು ಯಾರು ಇಲ್ಲ
ಅತ್ತಿಯ ಮರವ ಕಿತ್ತು ನೆಡುವರುಂಟೆ ಅತ್ತಿಲ್ಲದ ಮನೆಗೆ ಗೌರಿಯ... ಅತ್ತೆಯು ನಾನೇಯ ಮಾವನು ನಾನೇಯ ಮತ್ತೆ ಸೋದರಿಕೆ ಗೌರಿಗೆ...
ಎನ್ನುವ ಸಾಲುಗಳಲ್ಲಿ ಸೋದರ ಸಂಬಂಧ ಎಷ್ಟು ಗಟ್ಟಿ ಎಂದು ಸಾರುತ್ತದೆ.
ಚಿಂತೇಯ ಬೇಗೆಯು ಸುಡುತೀದೆ ಜೀವವಾ ಆವ ಜನ್ಮದ ಪಾಪ ಕಪ್ಪಾಗಿ ... ಆವ ಜನ್ಮದ ಪಾಪ ಕಪ್ಪಾಗಿ ಅಮರಿತೋ ಬಾಳೆಲ್ಲ ಕಣ್ಣೀರ ಹೊಳೆಯಾಯ್ತೋ...
ಕಪ್ಪಾದ ಹೆಣ್ಣು ಎಂಬ ಶೀರ್ಷಿಕೆಯ ಈ ಪದ್ಯ ಕಾವೇರಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದು.... ಕಪ್ಪಾಗಿದ್ದ ಕಾವೇರಪ್ಪ ಮೇಷ್ಟ್ರ ಮಗಳನ್ನೇ ಕುರಿತಾಗಿ ಹೇಳಿದ್ದೆಂದು ಆಗ ಅನಿಸಿದ್ದು.
ಭಾವಗೀತೆಯ ವಿಭಾಗಕ್ಕೆ ಬಂದರೆ ಕೆಎಸ್ ನರಸಿಂಹಸ್ವಾಮಿಯವರ
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರ ವಿಲ್ಲದ ಬೆರಳು....ತಗ್ಗಿದಾ ಕೊರಳಿನಾ ಸುತ್ತ ಕರಿಮಣಿಯೊಂದೇ ಸಿಂಗಾರವಿಲ್ಲದಾ ಹೆರಳು...
ಸಿ ಎಸ್ ಅಶ್ವತ್ಥ್ ಅವರ ಕಂಠದಲ್ಲಿ ಕೇಳುತ್ತಿದ್ದಾಗ ಆ ಚಿತ್ರಣ ಕಣ್ಣ ಮುಂದೆ ಕಟ್ಟುತ್ತಿತ್ತು.
ಜಿಎಸ್ ಶಿವರುದ್ರಪ್ಪನವರು ಪ್ರಕೃತಿಗೆ ಹೋಲಿಸಿ ಬರೆದ
ನಿನಗೆ ಬೇರೆ ಹೆಸರು ಬೇಕೆ.. ಸ್ತ್ರೀ ಎಂದರೆ ಅಷ್ಟೇ ಸಾಕೆ
ಬಿ ಆರ್ ಲಕ್ಷ್ಮಣ್ ರಾವ್ ಅವರ
ಬಣ್ಣಿಸಲೇ ಹೆಣ್ಣೇ ನಿನ್ನ ಏನೆಂದು ಬಣ್ಣಿಸಲೇ,
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು... ಹಾಡುಗಳು ಮತ್ತೆ ಮತ್ತೆ ಕೇಳಿದರು, ಕೇಳುವಂತಹವು.
ಸಿನಿಮಾ ಹಾಡುಗಳ ಪೈಕಿ ಹೈಸ್ಕೂಲ್ ಮಟ್ಟದಲ್ಲಿ ನೋಡಿದ / ಕೇಳಿದ ಕಿತ್ತೂರು ಚೆನ್ನಮ್ಮ ಚಿತ್ರದ ತಾಯಿದೇವಿಯನು ಕಾಣೆ ಹಂಬಲಿಸಿ ಕಾಯುತಿಹೇ ಭ್ರಮೆಯಾವರಿಸಿ ಕಾಣುವೆನಾ ಕರುಣಾಮಯಳ ಇಹ ಜೀವನದೇ ಮರೆಯಾದವಳಾ...
ಹಾಡು ನನ್ನ ಕಣ್ಣಲ್ಲಿ ನೀರು ತುಂಬಿಸುತ್ತಿತ್ತು.
ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬಬೇಕು ಕಣ್ಣಲ್ಲಿ ಕಣ್ಣಿಡಬೇಕು ಛಲಬೇಕು ಹೆಣ್ಣಾಸೆ ಏನದು ಎಂದು ತಿಳಿಬೇಕು.... ಹಾಡು ನನಗಿಷ್ಟವಾಗುತ್ತಿತ್ತು.
ಹೆಣ್ಣನ್ನು ಬಣ್ಣಿಸುವ, ಹೊಗಳುವ, ತೆಗಳುವ ಹಾಡುಗಳು ಸಾಕಷ್ಟಿವೆ.
ಲಗ್ನ ಪತ್ರಿಕೆ ಚಿತ್ರದ ಥಳಕು ಮೋರೆ ಹೆಣ್ಣಿಗೆ ಹೆದರಬೇಡಿ ಸೋತು... ಹಾಡು ಚಂದ.
ಕನ್ನಡಿಯಲಿ ಕಾಣುತಿಹ ಕನ್ನಿಕೆ ನಿನ್ನ ಕೆನ್ನೆಯಲಿ ಕೆಂಪಡರಿಹುದೇತಕೆ...
ನನ್ಯಾಕೆ ನೀ ಹಾಗೆ ನೋಡುವಿ ಮಾತಾಡಬಾಯಿಲ್ಲವೆ... ಮಾತಾಡದಾ ಗೊಂಬೆ....
ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ... ಹೀಗೆ ಹಾಡುಗಳ ಮೆರವಣಿಗೆಯು ಸಾಗುತ್ತದೆ.
ಹೆಣ್ಣಿನಲ್ಲಿ ಸಹಜವಾಗಿ ಇರುವ ತಾಳ್ಮೆ, ಸ್ಥಿರತೆ, ಅನಿಶ್ಚಿತ ಸಮಯಗಳನ್ನು ಎದುರಿಸುವ ಶಕ್ತಿ...ಅವಳ ವೈಶಿಷ್ಟ್ಯ.
ತಾರುಣ್ಯದ ತನಕ ತವರು ಮನೆಯಲ್ಲಿ ತನ್ನದೇ ವಾತಾವರಣದಲ್ಲಿ, ಸ್ವತಂತ್ರ ಚಿಂತನೆಯಲ್ಲಿ ಬೆಳೆದ ತರುಣಿ ಎಂಬ ಗಿಡ, ಬೇರು ಸಮೇತ ಅಲ್ಲಿಂದ ಕಿತ್ತು ಬಂದು... ಬೇರೊಂದು ಮನೆಯಲ್ಲಿ, ಬೇರೆಯದೇ ವಾತಾವರಣದಲ್ಲಿ, ಬೇರೆಯ ಜನರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ತನ್ನ ಬೇರುಗಳನ್ನು ಭದ್ರಪಡಿಸಿಕೊಂಡು, ಅಲ್ಲಿಯೇ ಬೆಳೆದು, ಮರವಾಗಿ, ಫಲ ಕೊಟ್ಟು, ನೆರಳಾಗುವ ರೀತಿ ಅಚ್ಚರಿಯನ್ನು ಮೂಡಿಸುತ್ತದೆ.
ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ... ಸಾಮಾನ್ಯವಾಗಿ ಅತ್ತೆ ಸೊಸೆಯರ ಮಧ್ಯೆ ಇರುವ ಎಣ್ಣೆ ಸೀಗೆಕಾಯಿಯ ಸಂಬಂಧ ಸರಿ ಉದಾಹರಣೆಯೇನೋ?
ನೂರು ಜುಟ್ಟು ಒಂದು ಕಡೆ ಬಾಳಬಹುದು ಆದರೆ ಮೂರು ಜಡೆ ಒಂದೆಡೆ ಇರುವುದು ಕಷ್ಟ... ಇದು ಹೆಂಗಸರ ಮಧ್ಯೆ ಇರಬಹುದಾದ ಹೊಂದಾಣಿಕೆಯನ್ನು (?) ಎತ್ತಿ ತೋರಿಸುತ್ತದೆ.
jeolosy thy name is woman... ಹೆಣ್ಣು ಹೊಟ್ಟೆಕಿಚ್ಚಿನ ಮೂರ್ತಿವೆತ್ತಂತೆ ಎಂಬುದು... ಇನ್ನೊಂದು ಹೆಣ್ಣಿನ ವಿಚಾರದಲ್ಲಿ ಸತ್ಯ ಎಂದು ಬಹಳ ಸಲ ಸಾಬೀತಾಗಿದೆ.
ಒಲಿದರೆ ನಾರಿ ಮುನಿದರೆ ಮಾರಿ... ಎಂಬ ನಾಣ್ಣುಡಿ ಅನುಭವದ ಮೂಸೆಯಿಂದ ಬಂದಿರುವುದು... ಹಾಗಾಗಿ ಅದರ ಬಗ್ಗೆ ವಿಶ್ಲೇಷಣೆ ಮಾಡಿ ಹೆಣ್ಣು ಮುನಿಯುವಂತೆ ಮಾಡುವ ಉಸಾಬರಿ ಬೇಡ. ಆದರೆ ಮಾರಿದರೆ (ಕ್ರಿಯಾಪದ) ತೊಗೊಳ್ಳೋರು ಯಾರ್ರೀ? ಎನ್ನುವ ವಿಶ್ಲೇಷಣೆಯಂತೂ ಕಟು ಸತ್ಯ.
ತಾಯಿ ಸತ್ತರೆ ತಂದೆ ಚಿಕ್ಕಪ್ಪ ಆಗುತ್ತಾನೆ ಎನ್ನುವುದೊಂದು ಮಾತು... ಆದರೆ ತಂದೆ ಸತ್ತರೆ ತಾಯಿ ತಂದೆಯೂ ಆಗುತ್ತಾಳೆ. ಅದು ತಾಯಿಯ ವಿಶೇಷ. ನಾಲ್ಕು ಮನೆಯ ಬಚ್ಚಲನ್ನು ತೊಳೆದಾದರೂ ಮಕ್ಕಳನ್ನು ಸಾಕುತ್ತೇನೆ ಎನ್ನುವ ಛಲ ತಾಯಿಯ ರೂಪದ ಹೆಣ್ಣಿನದು.
ಹೆಣ್ಣು ಪೂಜನೀಯಳು ಗೌರವಾರ್ಹಳು ಎಂಬ ಮಾತು ಜನಜನಿತವಾಗಿದೆಯಾದರೂ... ಅಂತಹ ಮನೋಭಾವವನ್ನು ಗಂಡು ಮಕ್ಕಳಲ್ಲಿ ಬೆಳೆಸಲು ನಮ್ಮ ಸಮಾಜ ವಿಫಲವಾಗಿದೆಯೇನೋ ಎನಿಸುತ್ತದೆ.
ಇಲ್ಲಿ ನೆನಪಾಗುವುದು ನನ್ನ ಪ್ರೈಮರಿ ಶಾಲೆಯ ವಾತಾವರಣ. ಹೆಣ್ಣು ಮಕ್ಕಳ ಹೆಸರನ್ನು ಕರೆಯುವಾಗ ಅಮ್ಮ ಎಂದು ಸೇರಿಸಿ.. ಪರಿಮಳಮ್ಮ, ಗಿರಿಜಮ್ಮ ಎಂದು ಸಂಭೋಧಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕಾಗಿತ್ತು.
ವಾಸ್ತವಿಕವಾಗಿ ಹೆಣ್ಣನ್ನು ಭೋಗ ವಸ್ತುವಾಗಿ ನೋಡುವ ಗಂಡುಗಳು.. ಹೆಣ್ಣನ್ನೇ ವ್ಯಾಪಾರಿ ವಸ್ತುವಾಗಿ ಉಪಯೋಗಿಸುವ ಮತ್ತೊಂದು ಹೆಣ್ಣು ಎಲ್ಲವೂ ಸಮಾಜದ ಭಾಗವೇ.
ಹೆಣ್ಣಿನ ಮೇಲಿನ ಅತ್ಯಾಚಾರ ಅನೂಚಾನವಾಗಿ ನಡೆದು ಬಂದಿದೆ. ಇದಕ್ಕೆ ಹೆಣ್ಣಿನ ಆಕರ್ಷಿಸುವ ಶಕ್ತಿಯೋ ಅಥವಾ ಗಂಡಿನ ವಿಕೃತ ಕಾಮುಕ ಮನಸ್ಸೋ ಅಥವಾ ಎರಡೂ ಭಾಗಶಃ ಕಾರಣಗಳೋ ನಿರ್ಧರಿಸುವುದು ಕಷ್ಟ. ಎಲ್ಲ ಗಂಡಸರು ಹಾಗೂ ಹೆಂಗಸರಿಗೆ ಅಂತ ಮನೋಭಾವ ಇಲ್ಲದಿರಬಹುದು... ಆದರೆ ಅಲ್ಲಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ.
every herd has a black sheep... ಪ್ರತಿ ಮಂದೆಯಲ್ಲೂ ಕಪ್ಪು ಕುರಿ ಇರುತ್ತದೆ ಎಂಬ ಮಾತು ನಿಜ ಅಲ್ಲವೇ?
ಅನಾದಿಕಾಲದಿಂದಲೂ ಶೂರ್ಪನಖಿ, ದೇವದಾಸಿ, ಬೆಲೆವೆಣ್ಣು, ವಿಷಕನ್ಯೆಯರು ಇದ್ದರು... ಈಗಲೂ ಇದ್ದಾರೆ ... ಹೊರ ರೂಪ ಮಾತ್ರ ಬೇರೆಯದಿರಬಹುದು.
ಹೆಣ್ಣು ಸಂಸಾರದ ಕಣ್ಣು ಎಂಬ ಮಾತು ಈಗೀಗ ಬದಲಾಗುತ್ತಿದೆ ಎಂಬ ಅನುಮಾನ ನನ್ನನ್ನು ಕಾಡುತ್ತಿರುವುದು ನನ್ನ ಆಪ್ತ ಸಮಾಲೋಚನಾ ಸಮಯದ ಅನುಭವದಿಂದ. ಹೆಚ್ಚು ಓದಿ ಲಕ್ಷಗಟ್ಟಲೆ ಸಂಪಾದನೆ ಮಾಡುವ ಹೆಣ್ಣು ಮಕ್ಕಳು... ಹೆಚ್ಚು ಸ್ವಾತಂತ್ರ್ಯ ಬಯಸಿ... ಸ್ವಾತಂತ್ರದ ಚೌಕಟ್ಟನ್ನು ಅತಿಯಾಗಿ ಹಿಗ್ಗಿಸಿ... ತಮ್ಮ ಇಷ್ಟ ಬಂದಂತೆ ನಡೆದುಕೊಂಡು (ಸ್ವೇಚ್ಛೆ ಎಂದರೆ ಸರಿಯೇನೋ)... ಅದರಿಂದ ಗಂಡ ಹೆಂಡಿರ ಮಧ್ಯೆ ಅಹಮಿಕೆ ಅಡ್ಡ ಬಂದು ಮನೆಗಳು, ಮನಸ್ಸುಗಳು ಛಿದ್ರವಾಗಿರುವುದನ್ನು ಕಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ಹೆಣ್ಣಿನ ತಂದೆ ತಾಯಿಯರ ಕುಮ್ಮಕ್ಕು ಇರುವುದನ್ನು ಕಂಡಿದ್ದೇನೆ.
ಒಂದು ಕಾಲವಿತ್ತು... ಅಮ್ಮಂದಿರು ಹೆಣ್ಣು ಮಕ್ಕಳಿಗೆ ಅತ್ತೆ / ಗಂಡನ ಮನೆಗೆ ಹೋಗುವಾಗ, ಜನಪದ ಗೀತೆಯಲ್ಲಿ ಇರುವಂತೆ
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು ಹೊತ್ತಾಗಿ ನೀಡಿದರು ಉಣಬೇಕು, ಹೆತ್ತವರಿಗೆ ಹೆಸರಾ ತರಬೇಕು
ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ ಮತ್ತೆ ಆಳುವ ದೊರೆಗಂಜಿ, ಅತ್ತೆಯ ಮನೆಯಾಗೆ ಬಾಳವ್ವ
ಎಂದು ಹೇಳುತ್ತಿದ್ದದ್ದು. ಅದು ಈಗ ವಿರುದ್ಧ ದಿಕ್ಕಿನಲ್ಲಿ ಇದೆ ಎಂದು ಹೇಳಬಹುದು.
ಇಷ್ಟೆಲ್ಲಾ ಅಪಭ್ರಂಶಗಳ ಮಧ್ಯೆಯೂ ಒಂದಷ್ಟು ಆಶಾ ಕಿರಣವು ಇದೆ. ಮನೆಯ ಕೆಲಸ ಹಾಗೂ ಹೊರಗಿನ ಕೆಲಸ ಎರಡನ್ನು ಸಂಭಾಳಿಸಿಕೊಂಡು ಮಕ್ಕಳನ್ನು ಮುಂದಕ್ಕೆ ತರುತ್ತಿರುವ ಹೆಣ್ಣು ಮಕ್ಕಳನ್ನು ಕಂಡಿದ್ದೇನೆ. ದೊಡ್ಡ ದೊಡ್ಡ ಜವಾಬ್ದಾರಿ ಇರುವ ಸ್ಥಾನಗಳನ್ನು ಏರಿದ್ದರೂ... ಮನೆಯ ಸಾಮರಸ್ಯವನ್ನು ಕಾಪಾಡಿಕೊಂಡ ಮಹಿಳೆಯರು ಇದ್ದಾರೆ.
ಭಾರತದ ಪ್ರಥಮ ಪ್ರಜೆಯೂ ಹೆಣ್ಣು , ವಿತ್ತ ಸಚಿವೆಯೂ ಹೆಣ್ಣು ಎಂಬುದು ಇಂದಿನ ವಸ್ತು ಸ್ಥಿತಿ.
ಹೆಣ್ಮಕ್ಳೇ strongಉ ಗುರು.... ಎಂಬ ಮಾತು ಸತ್ಯವೇ.
ಈ ಮಧ್ಯೆ ಅಮ್ಮಂದಿರ ದಿನಾಚರಣೆಯೂ ಬಂದು ಹೋಯಿತು... ತಾಯಿಗಿಂತ ಮಿಗಿಲಾದ ದೇವರಿಲ್ಲ.... ತಾಯಿಯೇ ಮೊದಲ ಗುರು... ತಾಯಿ ಎಂಬ ದೈವಕೆ ಬೇರಾರು ಸಾಟಿಯೇ....
ಭಾರತ ಮಾತೆಗೆ ಜೈಕಾರ ಹೇಳುತ್ತಾ... ಆಕೆಯ ಸೇವೆಯನ್ನು.. ನಮ್ಮ ಮಿತಿಯಲ್ಲಿ, ನಿಷ್ಠೆಯಿಂದ ಮಾಡುತ್ತಾ ಇರುವ ಬುದ್ಧಿಯನ್ನು, ಮನಸ್ಸನ್ನು ಭಾರತದ ಎಲ್ಲ ಪ್ರಜೆಗಳಿಗೂ ಕೊಡಲಿ ಎಂದು ಆ ದೇವರನ್ನು ಬೇಡುತ್ತಾ....
ಕೊನೆಯದಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ. ..ಖಂಡಿತ ಸಂತೋಷವಾಗತ್ತೆ
https://drive.google.com/file/d/18CZ8bg_CW5NJjYyIW75FHrhVaciCgJMN/view?usp=drivesdk
ನಮಸ್ಕಾರ
D C Ranganatha Rao
9741128413
ಹೆಣ್ಣಿನ ಹಲವಾರು ಮಜಲುಗಳನ್ನು ವಿವರವಾಗಿ ಬಣ್ಣಿಸಿದ್ದೀರಿ. ಹೀಗೆ ಬರೆಯುತ್ತಿರಿ ಸರ್
ReplyDeleteWomen role in various phases of life, her strength n weakness well explained sir.
ReplyDeleteJyoti gulbarga
ಪೀಠಿಕೆ ನೋಡಿ ಯುದ್ಧದ ವಿಷಯ ಕುರಿತು ಲೇಖನ ನಿರೀಕ್ಷೆ ಮಾಡಿದ್ದೆ...ಅದರೆ ಪುರಾಣ ಕಾಲದಿಂದ ಇಂದಿನ ಸ್ತ್ರೀ ಶಕ್ತಿ, ಯುಕ್ತಿ ಬಗ್ಗೆ ಸುಂದರವಾದ ವಿವರಣೆ ಮೂಡಿ ಬಂದಿದೆ.
ReplyDeleteಪ್ರೇಮ ಯುದ್ಧ, ಮಾತಿನ ಯುದ್ಧ, ಮೌನ ಯುದ್ಧ ಹೀಗೆ ದಿನ ನಿತ್ಯ ಸ್ತ್ರೀ ಪುರುಷರ ನಡುವೆ ನಡೆಯುವ ಯುದ್ಧ ಬೇಗ ಕದನ ವಿರಾಮ ಪಡೆಯದೆ ಇದ್ದಲ್ಲಿ ವಿಚ್ಛೇದನ, ಕೊಲೆ
ಮುಂತಾದ ಅನಾಹುತ ಸಂಭವಿಸುವ ಸಾಧ್ಯತೆ
ಇರುತ್ತದೆ...ತಾಳ್ಮೆ ಹಾಗೂ ದೂರ ದೃಷ್ಟಿಯಿಂದ
ಮಾತ್ರ ಯುದ್ಧ ರಹಿತ ಸುಂದರ ಬದುಕು ಸಾಧ್ಯ...ನಮ್ಮ ಸೈನ್ಯ ಹಾಗೂ ನಾಯಕತ್ವ ಈ ನಿಟ್ಟಿನಲ್ಲಿ ಜಯ ಗಳಿಸಿದೆ
ಬಾಬು
ಹಿಂದೂ ಸಮಾಜದ ಒಬ್ಬ ಸ್ತ್ರೀಯನ್ನು ವಿವಿಧ ಆಯಾಮಗಳಲ್ಲಿ ಚಿತ್ರಿಸಿರುವುದು ಸೊಗಸಾಗಿದೆ.
ReplyDeleteಲೇಖನದಲ್ಲಿ ಒಂದು ವಿಷಯವನ್ನು ಮಂಡಿಸುವಾಗ ಅಮೂಲ್ ಆಗ್ರವಾಗಿ ವಿಷಯವನ್ನು ಸಂಗ್ರಹಿಸಿ ಪೋಣಿಸುವುದು ನಿಮಗೆ ಒಲಿದು ಬಂದ ದೈವದತ್ತ ಕಲೆ ಎಂದೇ ನನ್ನ ಭಾವನೆ.
ನಿಮ್ಮ ಉತ್ತಮವಾದ ಅಡಿಗೆಗೆ ನನ್ನ ಒಗ್ಗರಣೆ
* ಎಲ್ಲಿ ನಾರಿಯು ಪೂಜಿಸಲ್ಪಡವಳ ಅಲ್ಲಿ ದೇವರು ನೆಲೆಸಿರುತ್ತಾನೆ
* ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲವೆಂದು ದೇವರು ತಾಯಂದಿರನ್ನು ಸೃಷ್ಟಿಸುತ್ತಾನೆ
* ಒಂದು ಮನೆಯ ಅಳಿವು ಹಾಗೂ ಉಳಿವು ಆ ಮನೆಯ ಗೃಹಿಣಿಯ ಕೈನಲ್ಲಿ ಇರುತ್ತದೆ
ಗುರುಪ್ರಸನ್ನ
ಚಿಂತಾಮಣಿ
Hi sir, wonderful writing. Sorry for delayed reply. Realistic protray of women in different situations. Very refreshing article for the present scenario. 🙏🙏🙏🙏
ReplyDelete