ಸೋಲು - ಸವಾಲು
“ದೇವರೇ ನನ್ನ ಮಗನ ಕಷ್ಟ ಪರಿಹಾರ ಮಾಡಪ್ಪ” ಅನ್ನುವ ಒಂದು ಪ್ರಾರ್ಥನೆಯೇ ಲಕ್ಷಮ್ಮನ ದೈನಂದಿನ ಕೆಲಸದ ದೊಡ್ಡ ಭಾಗವಾಗಿತ್ತು. ಈಚಿನ ದಿನಗಳಲ್ಲಿ ಮಗನ ಚಿಂತೆಯಲ್ಲೇ ದಿನ ಕಳೆಯುವುದಾಗಿತ್ತು. ಏನು ಮಾಡಲೂ ದಿಕ್ಕು ತೋಚದು... ಸುಮ್ಮನಿರಲೂ ಆಗದು.
ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಮೂರು ಮಕ್ಕಳ ತಾಯಿ ಲಕ್ಷಮ್ಮ, ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಹೇಗೋ ಜೀವನವನ್ನು ಸಾಗಿಸುತ್ತಾ ಮಕ್ಕಳನ್ನು ದೊಡ್ಡದು ಮಾಡಿದವರು. ಎಲ್ಲರನ್ನೂ ಒಂದು ಹಂತಕ್ಕೆ ತಂದು, ಎಲ್ಲ ಮಕ್ಕಳಿಗೂ ಮದುವೆ ಮಾಡಿ, ಜವಾಬ್ದಾರಿಗಳನ್ನು ಮುಗಿಸಿದವರು. ಮಕ್ಕಳ ಸಲಹೆಯಂತೆ, ಸಂಪಾದನೆ ಮಾಡುವ ಎಲ್ಲ ಕೆಲಸಗಳನ್ನು ಬಿಟ್ಟು, ನಿರಾಳವಾಗಿ ಕಾಲ ಕಳೆಯಬೇಕು ಎಂಬ ನಿರ್ಧಾರ ಮಾಡಿ, ಚಿಕ್ಕ ಮಗ ಮಾಧವನ ಹೊಸ ಸಂಸಾರದೊಂದಿಗೆ ಜೀವನ ಶೈಲಿಯನ್ನು ಹೊಂದಿಸಿಕೊಂಡು, ಕೆಲಸಕ್ಕೆ ಹೋಗುವ ಸೊಸೆಗೂ ಬೇಕಾದ ಊಟ ತಿಂಡಿಗಳನ್ನು ಮಾಡಿಕೊಡುತ್ತಾ ಹೆಜ್ಜೆ ಹಾಕುತ್ತಿದ್ದರು. ಹೊಸ ದಂಪತಿಗಳು ಜೊತೆ ಜೊತೆಯಲ್ಲಿ ಓಡಾಡುವುದನ್ನು ನೋಡಿ ಸಂತೋಷಕ್ಕೆ ಪಾರವೇ ಇಲ್ಲದಂತೆ ಸಂಭ್ರಮಿಸುತ್ತಿದ್ದರು. ಕಾಲ ಸರಿದಂತೆ ಮಗ ಸೊಸೆ ಮಧ್ಯೆ ಎಲ್ಲವೂ ಚೆನ್ನಾಗಿಲ್ಲವೇನೋ ಅನ್ನಿಸತೊಡಗಿತು. ಮುಂದುವರಿದಂತೆ ಅದು ಪ್ರಕಟಗೊಳ್ಳಲು ಶುರುವಾಯಿತು... ಅದರ ಪರಿಣಾಮ ಲಕ್ಷಮ್ಮನ ಮನಸ್ಸಿನಲ್ಲಿ ಆತಂಕ ಮೂಡಿತು. ಸೊಸೆ ತನ್ನ ಬಗ್ಗೆ ಗೌರವದಿಂದ ನಡೆದುಕೊಂಡರೂ.... ಮಗನ ಜೊತೆ ಎಲ್ಲವೂ ಸರಿ ಇಲ್ಲದಿದ್ದಂತೆ ಕಂಡಾಗ, ಸೊಸೆಯದೆ ತಪ್ಪು ಎಂಬ ನಿರ್ಧಾರಕ್ಕೆ - ಸಾಮಾನ್ಯವಾಗಿ ಅತ್ತೆಯರು ಬರುವಂತೆ - ಬಂದೇ ಬಿಟ್ಟರು. ಜೀರ್ಣಿಸಿಕೊಳ್ಳಲಾಗದ ಈ ವಿಷಯವನ್ನು, ಯಾರೊಂದಿಗೂ ಹಂಚಿಕೊಳ್ಳಲಾಗದೆ ಒಳಗೊಳಗೆ ಕೊರಗಿ, ಕೊನೆಗೆ ತಮ್ಮ ಮಗಳೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿದರು. ಮಾತುಕತೆಯ ನಂತರ - ಅವರಿಬ್ಬರನ್ನೇ ಅವರ ಪಾಡಿಗೆ ಬಿಟ್ಟರೆ ಸರಿ ಹೋಗಬಹುದೆಂಬ ತರ್ಕದೊಂದಿಗೆ... ಮಗಳ ಮನೆಯಲ್ಲಿನ ಕಾರ್ಯಕ್ರಮಕ್ಕೆ ಹೋಗುವ ನೆಪದೊಂದಿಗೆ.. ಅಲ್ಲಿಗೆ ಸ್ಥಳಾಂತರಗೊಂಡರು. ಕಾರ್ಯಕ್ರಮಕ್ಕೆ ಬಂದ ಮಗ ಸೊಸೆ ಮಧ್ಯದ ಬಾಂಧವ್ಯದಲ್ಲಿ ಇರುವ ಕೊರತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಲಕ್ಷಮ್ಮ, ಅದನ್ನು ತಮ್ಮ ಮಗಳ ಗಮನಕ್ಕೂ ತಂದರು.
ಮೊದಲೇ ಕಡಿಮೆ ಮಾತಿನ ಮಾಧವ, ಅಮ್ಮನನ್ನು ನೋಡಲು, ಅಕ್ಕನ ಮನೆಗೆ ಬಂದಾಗ ಸಪ್ಪಗೆ ಕುಳಿತಿರುತ್ತಿದ್ದ, ಕೇಳಿದ ಪ್ರಶ್ನೆಗೆ ಚುಟುಕು ಉತ್ತರ ಅಥವಾ ತಲೆಯಲ್ಲಾಡಿಸುವುದು. ಅಮ್ಮನನ್ನು ಮನೆಗೆ ಬರಲು ಒತ್ತಾಯಿಸುವುದು ನಡೆದೇ ಇತ್ತು.
ಮಗನ ಮನೆಗೆ ಮರಳಿದ ಲಕ್ಷಮ್ಮನವರಿಗೆ, ಅಲ್ಲಿನ ಲಕ್ಷಣಗಳು ಯಾವುದೇ ಸಂಸಾರ ವಂದಿಗರ ಮನೆಯಂತೆ ಕಾಣಲೇ ಇಲ್ಲ.... ಎಲ್ಲವೂ ಅಸ್ತವ್ಯಸ್ತ... ಅಡುಗೆ ಮನೆಯಂತೂ ನಾರುತ್ತಿತ್ತು.
ಕೆಲಸದಿಂದ ತಡವಾಗಿ ಬಂದ ಸೊಸೆ ತನ್ನ ಇರವನ್ನು ಗಮನಿಸದಿದ್ದಾಗ ಲಕ್ಷಮ್ಮನವರಿಗೆ ಬೇಜಾರಾಗಿದ್ದು ಸಹಜವಾಗಿತ್ತೇನೋ. ಬೇಜಾರನ್ನು ಪಕ್ಕಕ್ಕೆ ಸರಿಸಿ ಸೊಸೆಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಬಂದ ಉತ್ತರಗಳಲ್ಲಿ ಅಸಹನೆ ಹೊಗೆಯಾಡುತ್ತಿತ್ತು. ಮನೆಯಲ್ಲಿನ ಉಸಿರು ಗಟ್ಟುವ ವಾತಾವರಣದಲ್ಲೇ ಕೆಲದಿನ ಕಳೆದ ಲಕ್ಷಮ್ಮನಿಗೆ... ಒಂದು ಸಂಜೆ ದೇವಸ್ಥಾನಕ್ಕೆ ಹೋಗಿ ವಾಪಸ್ಸು ಬರುವ ಹೊತ್ತಿಗೆ ಆಘಾತ ಕಾದಿತ್ತು... ಸೊಸೆ ತನ್ನೆಲ್ಲ ಸಾಮಾನುಗಳನ್ನು ತೆಗೆದುಕೊಂಡು ಹೊರಡಲು ಸನ್ನದ್ಧಳಾಗಿದ್ದಳು. ಏನು ಮಾತನಾಡಲೂ ತೋಚದ ಲಕ್ಷಮ್ಮ ಸೊಸೆಗೆ ಕೇಳಿದ್ದು " ಯಾಕಮ್ಮ ಎಲ್ಲಿ ಹೊರಟಿದ್ದೀಯ ?" ..." ನರಕಕ್ಕೆ ಹೋಗ್ತೀನಿ... ಈ ಮನೆಯಲ್ಲಿ ನರಕಕ್ಕಿಂತ ಹಿಂಸೆ ಜಾಸ್ತಿ."
" ಏನಾಯ್ತ ಅಂತಾದರೂ ಹೇಳಬಾರದೆ" ಎಂದು ಕೇಳಿದ ಲಕ್ಷಮ್ಮನಿಗೆ ಸಿಕ್ಕ ಉತ್ತರ " ಹೇಳೋದು ಕೇಳೋದು ಎಲ್ಲ ಮುಗಿದು ಹೋಯಿತು.. ನನ್ ದಾರಿ ನಾನ್ ನೋಡ್ಕೊಳ್ತೀನಿ... ಈ ಸಹವಾಸನೆ ಬೇಡ... ಉಪವಾಸ ಇದ್ರೂ ಪರವಾಗಿಲ್ಲ... ಈ ಚಿತ್ರ ಹಿಂಸೆ ಬೇಡ"
ಇಷ್ಟು ಹೇಳಿದ ಸೊಸೆ ತನ್ನ ಸಾಮಾನುಗಳನ್ನು ತೆಗೆದುಕೊಂಡು ಹೊರಟೇ ಹೋದಳು. ದಿಕ್ಕು ತೋಚದ ಲಕ್ಷಮ್ಮ ತಲೆಗೆ ಕೈ ಕೊಟ್ಟು ಕೂತರು.
ಮನೆಗೆ ಬಂದ ಮಾಧವ " ಯಾಕಮ್ಮ ಕತ್ತಲೆಯಲ್ಲಿ ಹೀಗೆ ಕೂತಿದ್ದೀ" ಎನ್ನುತ್ತಾ ಲೈಟ್ ಹಾಕಿದಾಗ, ಅಮ್ಮನ ಮುಖ ಬಾಡಿದ್ದು ಕಂಡಿತು... ಮನೆ ಗಮನಿಸಿದ ಮಾಧವನ ಬಾಯಲ್ಲಿ ಬಂದ ಉದ್ಗಾರ "ಓ... ಅವಳು ಹೇಳಿದಂತೆಯೇ ಮಾಡಿದ್ದಾಳೆ."
ಕೆಲ ಕಾಲದ ಮೌನವನ್ನು ಮುರಿದ ಲಕ್ಷಮ್ಮ ಯಾಕೆ ಹೀಗಾಯಿತು ಎಂದು ಮಗನನ್ನು ಕೇಳಿದಾಗ... ಮೌನವೇ ಉತ್ತರ.
ಸೊಸೆ ಮತ್ತು ಅವರ ಮನೆಯ ಕಡೆಯವರನ್ನು ಭೇಟಿ ಮಾಡಿ ಮಾತಾಡುವ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ... ಕೆಲವೇ ದಿವಸದಲ್ಲಿ ಬಂದದ್ದು ಲಾಯರ್ ಮೂಲಕ ವಿಚ್ಛೇದನಕ್ಕಾಗಿ ಸೂಚನೆ.
ದಿನೇ ದಿನೇ ಮಗನ ಮನಸ್ಥಿತಿ ಹಾಗೂ ಆರೋಗ್ಯ ಹದಗೆಡುತ್ತಿರುವುದನ್ನು ನೋಡಲಾಗದೆ, ಅವರಿವರನ್ನು ವಿಚಾರಿಸಿ ಮಾನಸಿಕ ತಜ್ಞರನ್ನು ನೋಡಲು ಬಂದದ್ದು ಆಪ್ತ ಸಲಹಾ ಕೇಂದ್ರಕ್ಕೆ.
ಮಾಧವನ ಮನಸ್ಸಿನ ಓಟ:
ಯಾಕೆ ನನಗೆ ಹೀಗೆ ಆಗುತ್ತಿದೆ? ಯಾವುದೇ ವಿಷಯದಲ್ಲೂ ನಿರ್ಧಾರ ಮಾಡಲು ಆಗುತ್ತಿಲ್ಲ? ನಿರ್ಧಾರ ಮಾಡಿದರು ಅದನ್ನು ಹೇಳಿ ಒಪ್ಪಿಸುವ/ ಅಥವಾ ಅಳವಡಿಸಿಕೊಳ್ಳುವ ಶಕ್ತಿ ಇಲ್ಲವೇ? ಎಲ್ಲ ವಿಷಯದಲ್ಲೂ ಸೋಲನ್ನು ಅನುಭವಿಸುವ ಭಾವ ಯಾಕೆ? ಎಲ್ಲವೂ ನನ್ನದೇ ತಪ್ಪೇ? ಆಕೆಯ ಅಭಿಪ್ರಾಯಗಳು ಭಾವನೆಗಳೇ ಸರಿಯೇ? ಎಲ್ಲವನ್ನೂ ನಾನೇ ಬದಲಾಯಿಸಿಕೊಳ್ಳಬೇಕೆ? ಇದನ್ನು ಘಟ್ಟಿಸಿ ಕೇಳುವ ಶಕ್ತಿಯನ್ನೇ ನಾನು ಕಳೆದುಕೊಂಡಿದ್ದೇನೆಯೇ? ನಾವಿಬ್ಬರೂ ಒಟ್ಟಿಗೆ ಬಾಳಲು ಆಗದಷ್ಟು ಅಂತರ ನಮ್ಮಲ್ಲಿದೆಯೇ? ಬಿಟ್ಟು ಹೋಗುವಷ್ಟು ಹಠಮಾರಿತನ ಬೇಕಿತ್ತೇ? ಅದನ್ನು ತಪ್ಪಿಸಲು ನನ್ನ ಪ್ರಯತ್ನಗಳು ಕಡಿಮೆಯಾಯಿತೇ? ಅಮ್ಮನಿಗೆ ಏನೆಲ್ಲ ಹೇಳಲೀ... ಹೇಗೆ ಹೇಳಲಿ..?
ಹೋದರೆ ಹೋಗಲಿ ಇನ್ನೇನ್ ಮಾಡಕ್ಕಾಗುತ್ತೆ.... ನಾನೇ ಎಷ್ಟು ಸೋಲಲಿ?
ಬರೀ ಗೊಂದಲ....
ಕಾಲೇಜಿನಲ್ಲಿ ಪಾಠ ಮಾಡುವಾಗ ಮನಸ್ಸು ಎಲ್ಲೋ ಹೋಗಿ... ಪಾಠವನ್ನು ಮುಂದುವರಿಸಲು ಕಷ್ಟ ಆಗ್ತಿದೆ. ಇದನ್ನು ಗಮನಿಸಿದ ಕಂಪ್ಯೂಟರ್ ವಿಭಾಗದ HOD ..." ಯಾಕ್ರೀ.. ಮಾಧವ್ , ತುಂಬಾ ಸಪ್ಪಗಿದ್ದೀರಾ? ಏನಾದ್ರು ಸಮಸ್ಯೆನಾ..." ಅಂತ ಕೇಳಿದ್ರಲ್ಲ. staff room ನಲ್ಲೂ ಕೆಲವರು ಗಮನಿಸಿ... ವಿಚಾರಿಸಿದ್ರಲ್ಲ.
ಹೇಗೆ ಇದನ್ನು ನಿಭಾಯಿಸೋದು...
ನಾನು ಮಾಡಿರೋ MCA ಒಂದೇ ಸಾಲದು...UGC-NET ಮಾಡಲೇಬೇಕು ನನ್ ಕೆಲಸ ಮುಂದುವರಿಯಕ್ಕೆ. ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡೋದ್ರಿಂದ ಸ್ವಲ್ಪ ಸಮಯ ಕೊಟ್ಟಿದ್ದಾರೆ.. ಅಷ್ಟರಲ್ಲೇ ಮುಗಿಸಬೇಕು ಹೇಗಪ್ಪಾ ದೇವರೇ...
ಅಮ್ಮನ ತೊಳಲಾಟ ನೋಡಕ್ಕೆ ಆಗಲ್ಲ.. ನಾನು ಏನು ಮಾಡ್ಲಿ... ಅಮ್ಮನನ್ನ ಸುಖವಾಗಿ ಇಟ್ಕೊಂಡಿರೋಕೂ ಆಗ್ತಿಲ್ಲವಲ್ಲ...
ಅಮ್ಮ ಒತ್ತಾಯ ಮಾಡುತ್ತಿರುವ ಹಾಗೆ, psychiatrist ನ ನೋಡೋದ? "ನಿಮ್ಮಂತೋರ ಜೊತೆ ಜೀವನ ಮಾಡಕ್ಕೆ ನಂಗೇನ್ ಹುಚ್ಚ" ಅಂದಳಲ್ಲ.. ಆದರೆ ಹೋಗ್ತಾ ಇರೋದು ... psychiatrist ಬಳಿ..ನಾನು, ನಂಗೇ ಹುಚ್ಚಾ?
ಯಾಕೋ ಹಿಂಜರಿಕೆ...ಏನು ಕೇಳ್ತಾರೋ...ಏನು ಹೇಳ್ಬೇಕೋ..ಗೊಂದಲ.
ಅಮ್ಮನ ಮನಸ್ಸಿನ ಸಮಾಧಾನಕ್ಕಾದರೂ ಒಂದ್ಸಲ ಹೋಗಬೇಕು.
ಅಮ್ಮನ ಧೈರ್ಯ ಮೆಚ್ಚಬೇಕು...ಆಪ್ತ ಸಲಹಾ ಕೇಂದ್ರದಲ್ಲಿ, ತಾನೆಲ್ಲ ವಿಚಾರಿಸಿ ಡಾಕ್ಟರ ಮುಂದೆ ಕೂಡಿಸೇ ಬಿಟ್ಲಲ್ಲ. "ನಾನು ಡಾಕ್ಟರ್ ಅಲ್ಲ ಒಬ್ಬ ಆಪ್ತ ಸಲಹೆಗಾರ.. ಕೌನ್ಸೆಲರ್ " ಅಂತ ಅವರು ಹೇಳಿದಾಗ... ನನಗೆ ನಿರಾಳ ಅನ್ನುಸ್ತು... ಮತ್ತೆ ಅಮ್ಮ ನನ್ನ ಪರವಾಗಿ ಒಂದಷ್ಟು ವಿಷಯಗಳನ್ನು ಅವರಿಗೆ ಹೇಳಿದ್ಮೇಲೆ... ಇನ್ನೊಂದು ಚೂರು ಮುಜುಗರ ಕಡಿಮೆ ಆಯ್ತು.
" ನೋಡಿ ಮಾಧವ್... ವಿಚ್ಛೇದನದ ಹಂತಕ್ಕೆ ವಿಷಯ ಬಂದಿರುವುದರಿಂದ... ನಿಮ್ಮಿಬ್ಬರ ಸಂಬಂಧದ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ... ಹೇಗಿದ್ದರೂ ಅದನ್ನು ಕೋರ್ಟ್ ಮೂಲಕ ಮಾಡ್ತಾರೆ.... ಈಗ ನಿಮ್ಮ ಸದ್ಯದ ಮನಸ್ಥಿತಿಯನ್ನು ಸುಧಾರಿಸಕ್ಕೆ ಏನು ಮಾಡಬಹುದು ಅಂತ ಯೋಚನೆ ಮಾಡೋಣ" ಅಂದಾಗ.... ಅಬ್ಬಾ ಇನ್ನೊಂದು ಕಷ್ಟ ತಪ್ಪಿತು.... ಅನ್ನಿಸಿತಲ್ಲ.
ಅಮ್ಮ ಹೇಳಿದ್ದ... ಹೆಂಡತಿ ಬಿಟ್ಟು ಹೋದಳು ಅದು ಅವಮಾನ ಅಂತ ಮನಸ್ಸಿಗೆ ಹಚ್ಕೋ ಬೇಡ.. ಅನ್ನೋ ವಿಚಾರನೆ ಅವ್ರು "ಡೈವೋರ್ಸ್ ಆಗಬಾರದು ಅನ್ನೋದು ಒಳ್ಳೆಯದೇ ಆದರೂ... ಈಗೀಗ ಸಾಮಾನ್ಯ ಆಗಿದೆ...ಅದನ್ನು ಧೈರ್ಯವಾಗಿ ಎದುರಿಸಬೇಕು.. ಅದಕ್ಕೆ ತಪ್ಪುಗಳು/ ಕಾರಣಗಳು ಏನೇ ಆಗಿದ್ದರೂ ಯಾರದೇ ಆಗಿದ್ದರೂ" ಅಂತ ಹೇಳಿದ್ದು ಸರಿಯಲ್ವಾ?
ಅವರೇ ಹೇಳಿದಂಗೆ ನಾನು ಮಾಡಬೇಕಾಗಿರೋ ಮೊದಲ ಕೆಲಸ.. ಹೆಂಡತಿ ಬಿಟ್ಟು ಹೋಗಿದ್ದಾಳೆ ಅನ್ನೋ ವಿಷಯನಾ ಒಪ್ಪಿಕೊಳ್ಳೋದು.. ಅವಮಾನ, ತಪ್ಪಿತಸ್ಥ ಭಾವ ಅನ್ನುವ ಯಾವ ವಿಶ್ಲೇಷಣೆಯನ್ನು ಮಾಡದೆ ಇರೋದು ಹಾಗೂ ಮನಸ್ಸನ್ನ ಬೇರೆ ವಿಷಯದಲ್ಲಿ ತೊಡಗಿಸುವುದು. ಎರಡನೇದು ನಾನು ಪಾಸ್ ಮಾಡಬೇಕಾಗಿರೋ ಆ ಪರೀಕ್ಷೆ ಬಗ್ಗೆ ಗಮನಹರಿಸುವುದು... ಕೆಲಸ ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು.
" ಯಾಕೆ ಮಾಧವ್.. ಕೈ ಬೆರಳು ಹಾಗೆ ಆಡಿಸ್ತಾ ಇದ್ದೀರಾ?" ಅಂತ ಆ ಕೌನ್ಸಿಲರ್ ಕೇಳಿದಾಗ, ನನ್ನ ಗಮನ ಆ ಕಡೆ ಹೋಯಿತು... ತಕ್ಷಣ ಅಮ್ಮ ಹೇಳಿದ್ದು... ಅವನು ಕೊಳಲು ಬಾರಿಸ್ತಾನೆ, ಹಾಗಾಗಿ ಬೆರಳುಗಳು ಹಾಗೆ ಆಡುತ್ತವೆ. ಸಂಗೀತದ ಬಗ್ಗೆ ಎಷ್ಟೊಂದ್ ಮಾತಾಡಿದ್ರು... ಸಂಗೀತ ಒಂದು ತೆರಪಿ.. ಅದು ಮನಸ್ಸಿಗೆ ಹಿತ ಕೊಡುವ ಗುಣಾನ ಹೊಂದಿದೆ.. ನಿಜವಾಗಲೂ ನೀವು ಅದೃಷ್ಟವಂತರು... ಅಂತ ಹೇಳಿದಾಗ ನನಗೆ ನನ್ ಬಗ್ಗೆ ಎಷ್ಟೋ ದಿನದ ನಂತರ ಹೆಮ್ಮೆ ಅನ್ನುಸ್ತು. ಅವರು ಹೇಳಿದಂಗೆ... ಸಂಗೀತನ ಪ್ರತಿ ದಿನಾನು ಅಭ್ಯಾಸ ಮಾಡಬೇಕು... ಮನಸಿನ ಮೇಲೆ ಹತೋಟಿ ಸಾಧಿಸಬೇಕು.. ಎಲ್ಲ ಎದುರಿಸಬೇಕು.
ಮನೆಗೆ ಬಂದ ಮೇಲೆ ಒಂದಷ್ಟು ಸಮಾಧಾನವಾಗಿದ್ದೆ.. ಆಗಾಗ್ಗೆ ಮನಸ್ಸು ಯೋಚನೆಗೆ ಜಾರಿದಾಗ, ಅದನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡ್ತಾನೆ ಇದ್ದೆ. ಅವರು ಹೇಳಿದಂಗೆ ವಾರಕ್ಕೊಮ್ಮೆ ಅವರತ್ರ ಹೋಗಿ ಒಂದಷ್ಟು ಮಾತಾಡಿದ್ರೆ ಸ್ವಲ್ಪ ಧೈರ್ಯ ಬರುತ್ತಿತ್ತು. ಎಷ್ಟೊಂದು ನನ್ನ ಯೋಚನೆಗಳು, ಕೆಲಸ ಮಾಡುವ ವಿಧಾನಗಳನ್ನ ಬದಲಾಯಿಸಿ ಕೊಳ್ಳಲೇಬೇಕು ಅಂತ ಸೂಚನೆಗಳನ್ನು ಕೊಟ್ಟು, ಡಾಕ್ಟರನ್ನ ಭೇಟಿ ಮಾಡ್ಸಿ... ಔಷಧಿ ಕೊಡಿಸಿ... ಸರಿಯಾಗಿ ತಗೊಳ್ಳಿ, ನಿಮ್ಮ ಪ್ರಯತ್ನ ಮುಂದುವರಿಸಿ ಖಂಡಿತ ಸರಿ ಹೋಗುತ್ತೆ, ಸೋಲುಗಳು ಜೀವನದಲ್ಲಿ ಸಹಜ , ಅದನ್ನು ಸವಾಲಾಗಿ ಸ್ವೀಕರಿಸಿ... ಮೆಟ್ಟಿನಿಂತು.. ಗೆಲುವಿನ ಕಡೆಗೆ ಹೋಗುವುದೇ ಸರಿಯಾದ ಜೀವನಶೈಲಿ... ಅಂತ ಅವರು ಹೇಳಿದ್ದು... ನಾನು ಮಾಡಬಲ್ಲೆ ಅನ್ನೋ ವಿಶ್ವಾಸನ ಜಾಸ್ತಿ ಮಾಡ್ತು.
ಹೀಗೊಂದು ದಿನ.." ಇಷ್ಟು ದಿನದ ಮೇಲೆ ನನ್ ಮಗನ ಮುಖದಲ್ಲಿ ನಗೆ ಕಾಣಿಸ್ತು" ಅಂತ ಅಮ್ಮ ಹೇಳಿ ಇದ್ದಲ್ಲಿಂದಲೇ ದೇವರಿಗೆ ಕೈ ಮುಗಿದಾಗ ನನಗೆ ಆಶ್ಚರ್ಯ ಆಯ್ತು.. ನಾನು ನಕ್ಕೆನಾ? ಯಾಕೆ ಅಂತ ಯೋಚಿಸಿದಾಗ... ಹೌದು ನನ್ನ ತಲೆಯನ್ನು ನಾನೇ ಕುಟ್ಕೊಂಡು ನಕ್ಕಿದ್ದು ಹೌದು. ಕೌನ್ಸೆಲರ್ ಹೇಳಿದ್ರಲ್ಲ ನಿಮ್ಮ ಮನಸ್ಸು ಹಳೇ ವಿಷಯಗಳನ್ನೇ ಯೋಚನೆ ಮಾಡ್ತಿದೆ ಅಂತ ಗೊತ್ತಾದಾಗ ನಿಮ್ ತಲೆ ಮೇಲೆ ನೀವೇ ಕುಟ್ಕೊಳ್ಳಿ... ನಂತರ ಯೋಚನೆ ಬದಲಾಯಿಸಿ ಅಂತ.. ಹಾಗೆ ಮಾಡಿದಾಗಲೇ ಅಲ್ವಾ ನನ್ನಷ್ಟಕ್ಕೆ ನಾನು ನಕ್ಕಿದ್ದು... ನಮ್ ಟೀಚರು ನನ್ ತಲೆ ಮೇಲೆ ಮೊಟಕಿದ್ದನ್ನ ನೆನೆಸಿಕೊಂಡು.
ಎಷ್ಟೇ ಮನಸ್ಸಿಗೆ ಸಮಾಧಾನ ಮಾಡ್ಕೊಂಡ್ರು.... ಕೋರ್ಟಿಗೆ ಹೋದಾಗ ಮನಸ್ಸು ಕುಗ್ಗುತ್ತೆ....ಯಾರು ಗಮನಿಸ್ತಾರೋ ಅನ್ಸುತ್ತೆ.... ಆರು ತಿಂಗಳು ಸಮಯ ಮುಗಿದು... ಕೋರ್ಟಿನಲ್ಲಿ .. "ನನಗೆ ಡೈವೋರ್ಸ್ ಬೇಕು... ಅವರ ಜೊತೆ ಜೀವನ ಮಾಡಕ್ಕಾಗಲ್ಲ... ಜೀವನಾಂಶ ಕೊಡಿಸಿ" ಅಂತ ಸ್ಪಷ್ಟ ಮಾತುಗಳಲ್ಲಿ ಹೇಳ್ಬಿಟ್ಲಲ್ಲ. ಈ ಕೋರ್ಟಿನ ಕೆಲಸಗಳೇ ಹೀಗೆ ಬೇಗ ಮುಗಿಯಲ್ಲ.
ಈಗೀಗ ಸಂಗೀತದ ಮೇಲೆ ಗಮನಹರಿಸಕ್ಕೆ ಸಾಧ್ಯ ಆಗ್ತಾ ಇದೆ... ಮೊದಲಿನಂತೆ ಬೆಳಿಗ್ಗೆ ಬೇಗ ಗುಡ್ಡದ ಮೇಲೆ ಹೋಗಿ ಸಾಧನೆ ಮಾಡಕ್ಕೆ ಪ್ರಾರಂಭಿಸಿದೀನಿ.
ಕೌನ್ಸಿಲರ್ ನ ಭೇಟಿ ಮಾಡಬೇಕು ಅವರಿಗೆ ನಾನು ಪಾಸ್ ಮಾಡಿದ್ದು ತಿಳಿಸಬೇಕು ಅಂತ ಮನಸ್ಸಿಗೆ ಬಂತು... ಗುಡ್ಡದ ಮೇಲೆ ಕೊಳಲು ನುಡಿಸುತ್ತಾ ಕೂತಿದ್ದಾಗ ಎದುರಿಗೆ ಬಂದು ನಿಂತರಲ್ಲ... ಅವರೂ ನಮ್ ಏರಿಯಾದವ್ರೆ ಅಂತೆ... ಬೆಳಿಗ್ಗೆ ವಾಕಿಂಗ್ ಬರ್ತಾರಂತೆ.... ನಿಮ್ಮತ್ರ ಬರ್ಬೇಕು ಅನ್ಕೊಳ್ತಿದ್ದೆ....UGC-NET ಪರೀಕ್ಷೆ ಪಾಸ್ ಮಾಡಿದೆ ಅಂತ ಹೇಳಕ್ಕೆ.... ಅಂದಾಗ ಪರೀಕ್ಷೆ ಪಾಸ್ ಮಾಡಿದ್ದಕ್ಕೆ ಹಾಗೂ ಸಂಗೀತದ ಸಾಧನೆಗೆ ಅವರ ಮೆಚ್ಚುಗೆಯ ಮಾತುಗಳು ಖುಷಿಕೊಟ್ಟವು.
ವಾಸ್ತವವನ್ನು ಅಮ್ಮ ನಾನು ಇಬ್ಬರೂ ಒಪ್ಪಿಕೊಂಡಿರುವುದರಿಂದ... ಮನಸ್ಸು ಒಂದಷ್ಟು ಶಾಂತವಾಗಿದೆ... ಅಮ್ಮನು ಮಾಡುವ ಅಡುಗೆಯ ರುಚಿ ಮೊದಲಿನಂತಾಗಿದೆ.
ಕೊನೆಗೂ ಡೈವೋರ್ಸ್ ಆಯಿತು... ಕೋರ್ಟಿಗೆ ಅಲೆಯುವುದು ತಪ್ಪಿತು.. ಆದರೆ 5 ಲಕ್ಷ ರೂಪಾಯಿ ಜೀವನಾಂಶ ಕೊಡಲು, ಅಕ್ಕ ಭಾವನಿಂದ ಪಡೆದ ಸಹಾಯದ ರೂಪದ ಸಾಲದ ಹಣದ ಋಣ ತಲೆಯ ಮೇಲಿದೆ.
ಅಮ್ಮ ನಾನು ಹೋಗಿ ಕೌನ್ಸಿಲರ್ ಗೆ ಈ ವಿಷಯ ತಿಳಿಸಿದಾಗ... " ಮುಗಿತಲ್ಲ... ಬಿಡಿ... ಸಾಲ ಹೇಗೋ ತೀರಿಸಬಹುದು"
ಅಮ್ಮನಿಗೆ ಏನೋ ಆತುರ. ಇನ್ನೊಂದು ಮದುವೆ ಬಗ್ಗೆ ಮಾತಾಡಿದಾಗ.. ಕೌನ್ಸಲರ್ ಹೇಳಿದ್ದು "ಋಣಾನುಬಂಧಂ ರೂಪೇಣ....." ಹೆಣ್ಣು , ಹೊನ್ನು, ಮಣ್ಣು, ಅನ್ನ, ಎಲ್ಲಾ ಋಣ ಇದ್ದಷ್ಟು ಮಾತ್ರ ನಮಗೆ ದಕ್ಕೋದು. ಹಾಗೆ ನೋಡಿದರೆ ನಮ್ಮ ಜೀವನದ ಎಲ್ಲ ಘಟನೆಗಳು ಪೂರ್ವ ನಿರ್ಧಾರಿತ ಏನೋ ಅನ್ಸುತ್ತೆ. ಮಾಧವ್ ಗೆ ಸ್ವಲ್ಪ ಸಮಯ ಕೊಡಿ... ಅವರು ತಯಾರಾಗಲಿ ಆಮೇಲೆ ಮುಂದಿನ ಪ್ರಯತ್ನ. ದೇವರು ಒಳ್ಳೇದ್ ಮಾಡ್ಲಿ..."
ಮನಸ್ಸು ಶಾಂತವಾಗಿದೆ... ಅಮ್ಮ ಮೌನಿಯಾಗಿದ್ದಾಳೆ.... ದೇವರು ಯಾವ ದಾರಿ ತೋರಿಸ್ತಾನೋ ನೋಡೋಣ.
ಸೂಚನೆ: ಗೌಪ್ಯತೆ ಕಾಪಾಡುವ ಸಲುವಾಗಿ ಹೆಸರುಗಳನ್ನು ಬದಲಾಯಿಸಿದೆ.
ಕೊನೆ ಹನಿ:
ಸಂಚಾರಿ ಪೋಲೀಸರ ಉದ್ದೇಶ ಒಳ್ಳೆಯದೇ ಆದರೂ ನಿಮಗೆ ಹೇಗೆ ಬೇಕಾದರೂ ಅರ್ಥೈಸ ಬಹುದು.
ಅರ್ಧವಿರಾಮ ಅಥವಾ ಪೂರ್ಣ ವಿರಾಮದ ಚಿಹ್ನೆಯ ಅಭಾವದಿಂದ. ..ಭಾವವೇ ಬದಲಾಗಿದೆ.
ನಮಸ್ಕಾರ. ..
D C Ranganatha Rao
9741128413
ಚೆನ್ನಾಗಿದೆ, ಇತ್ತೀಚೆಗೆ ಎಲ್ಲರ ಮನೆಗಳಲ್ಲಿ ನಡೆಯುತ್ತಿರುವ ವಾಸ್ತವ ಪರಿಸ್ಥಿತಿ ಮನೆ ಮನೆ ಕತೆಯಾಗಿದೆ
ReplyDeleteಮಾಧವನ ಬದುಕಿನ ಬದಲಾವಣೆಗೆ ಆಪ್ತ ಸಲಹೆ ಬಹುತೇಕ ಸಹಾಯ ಮಾಡಿದೆ. ಬರವಣಿಗೆ ಕೂಡ ಸಹಜವಾಗಿದೆ. ಇದರಲ್ಲಿ ಇಂದಿನ ಬದುಕಿನ ಒಂದು ಮುಖ ಪರಿಚಯ ಆಗುತ್ತದೆ.
ReplyDelete