ಅಂತ್ಯ- ನಿರಂತರ - ಯುಗಾದಿ

 

ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೈವ 

ಎರಡು ಸಮಸಮ ಎನ್ನುವುದೊಂದು ಭಾವ.

ಇಹಲೋಕದ ವ್ಯಾಪಾರ ಮುಗಿಸಿ ಹೊರಟಿತು ಆ ಜೀವ..

ಆತ್ಮಕ್ಕೆ ಸದ್ಗತಿಯನ್ನು ತಕ್ಷಣವೇ ಕರುಣಿಸೋ ಓ ದೇವ.

ಮಾರ್ಚ್ 27ರಂದು,  ನಮ್ಮನ್ನು ಅಗಲಿದ ನನ್ನ ಮಾವ 97 ವರ್ಷದ ಹಿರಿಯ ಚೇತನ H P ಕೃಷ್ಣಮೂರ್ತಿಯವರ ಸಾವಿನ ಕ್ಷಣದಲ್ಲಿ ನನ್ನೊಳಗೆ ಮೂಡಿದ್ದು, ಮೇಲಿನ  ಸಾಲುಗಳು. 

ಮೂರು ಘಂಟೆಯ ಅವಧಿಯಲ್ಲಿ ಅವರ ಆರೋಗ್ಯದಲ್ಲಿ  ತುಂಬಾ ವೇಗದಿಂದ ಆದ ಬದಲಾವಣೆಗಳು, ನಮ್ಮನ್ನೆಲ್ಲ ಸ್ವಲ್ಪ ಆತಂಕಕ್ಕೆ ದೂಡಿದ್ದು ಸಹಜ ಸತ್ಯ.   

ಸುಮಾರು 1967 ರಿಂದ,  ನನಗೆ ಅವರ ಪರಿಚಯ. ಮಾವನಾದದ್ದು 1979ರಲ್ಲಿ.  ಅವರ ಅಣ್ಣನ  (ದೊಡ್ಡಪ್ಪ ಎಂದು ಕರೆಯುತ್ತಿದ್ದ ಎಚ್ ಪಿ ನರಸಿಂಹಮೂರ್ತಿಯವರು.. ) ಜೊತೆಯಲ್ಲಿದ್ದ ಬಾಂಧವ್ಯ, ಒಟ್ಟಾಗಿ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ರೀತಿ, ತಂಗಿಯರು, ತಮ್ಮ ಹಾಗೂ ಮಕ್ಕಳ ಓದು, ಮದುವೆ, ಬಾಣಂತನ.. ಹೀಗೆ ಎಲ್ಲವನ್ನು ತಮಗಿದ್ದ ಸಂಪಾದನೆಯಲ್ಲಿ ನಿಭಾಯಿಸಿದ ರೀತಿ, ನಾನು ತುಂಬಾ ಅಭಿಮಾನದಿಂದ ಹಾಗೂ ಮೆಚ್ಚುಗೆಯಿಂದ ನೆನೆಯುತ್ತೇನೆ. ಅದರಲ್ಲೂ ಇಬ್ಬರು ಅಣ್ಣ ತಮ್ಮಂದಿರಲ್ಲಿದ್ದ ಪರಸ್ಪರ ಗೌರವ ನಂಬಿಕೆ ಹಾಗೂ ಒಮ್ಮ ಸಮ್ಮತ ಈಗಿನ ಕಾಲಕ್ಕೆ ಒಂದು ಉದಾಹರಣೆಯೇ ಸರಿ.  

ತಮ್ಮ 48ನೆಯ ವಯಸ್ಸಿನಲ್ಲೇ ಮಡದಿಯನ್ನು ಕಳೆದುಕೊಂಡ ಅವರು ನಂತರದ ಇಡೀ ಜೀವನವನ್ನು ಮಕ್ಕಳ ಹಾಗೂ ಸಂಸಾರದ ಏಳ್ಗೆಗಾಗಿ ಮುಡುಪಿಟ್ಟವರು.

ನನಗೆ ನೆನಪಿರುವಂತೆ, ಯಾರೋ ಇನ್ನೊಂದು ಮದುವೆಗೆ ಸಲಹೆ ಕೊಟ್ಟಾಗ ಹೇಳಿದ ಮಾತು  "ಮದುವೆಗೆ  ಬಂದಿರುವ ಮಗಳು ಇರುವಾಗ ನನ್ನ ಮದುವೆಯ ಯೋಚನೆಯೇ? ಸಾಧ್ಯವಿಲ್ಲ... ಮಗಳ ಬಗ್ಗೆ ಯೋಚನೆ ಮಾಡೋಣ" ....ಹಾಗೆಯೇ ಜೀವನ ನಡೆಸಿದ ಮಹನೀಯರು. 

ನನ್ನ ಮದುವೆಯ ಸಂದರ್ಭದಲ್ಲಿ ಅವರ ಶಾಂತ ಮತ್ತು ಸಮತೋಲಿತ ನಡವಳಿಕೆ, ತಾಯಿ ಇಲ್ಲದ ತನ್ನ ಮಗಳ ಶ್ರೇಯೋಭಿಲಾಷೆಗಾಗಿ, ಒಬ್ಬ ಆದರ್ಶ ಅಪ್ಪನಿಗೆ ಇರಬೇಕಾದ ಮನಃಸ್ಥಿತಿಯನ್ನು ಎತ್ತಿ ತೋರಿಸಿತು.

ನನ್ನ ಜೊತೆ ಪೂರ್ತಿ ಸಲಿಗೆ ಇಲ್ಲದಿದ್ದರೂ, ಸ್ನೇಹಪೂರ್ವ ಮಾತುಕತೆ, ಜೊತೆಯಲ್ಲಿ ಚೌಕಾಬಾರ, ಇಸ್ಪೀಟ್ ಆಟ ಆಡಿದವರು. 

ನಾನು ಪ್ರತ್ಯಕ್ಷವಾಗಿ ಕಾಣದೇ ಇದ್ದರೂ...ಕೂಡು ಕುಟುಂಬದ ಮಕ್ಕಳು ಹಾಗೂ ಮೊಮ್ಮಕ್ಕಳು ಹೇಳಿದಂತೆ, ಕಥೆ ಹೇಳುವುದರಲ್ಲಿ ನಿಪುಣರು. ಕೆಲ ಕಡೆ ರಾಗವಾಗಿ ಹಾಡುತ್ತಾ ಅಭಿನಯದೊಂದಿಗೆ ಕಥೆ ಹೇಳುವ ಶೈಲಿ ಎಲ್ಲರನ್ನೂ ಆಕರ್ಷಿಸುತ್ತಿತ್ತು. 

pension ಬಾಕಿ ಬಂದಾಗ ಅದನ್ನು ಮಕ್ಕಳು,  ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳಿಗೆ ಹಂಚುತ್ತಿದ್ದ ರೀತಿಯೇ ಒಂದು ವಿಶೇಷ. ಅಂತಹ ಸಮಯದ ಒಂದು ಘಟನೆ. ದೀಪಾವಳಿಗೆ ಅಳಿಯಂದಿರಿಗೆ ಗಂಡು ಮಕ್ಕಳಿಗೆ ಹಣ ಕೊಡಬೇಕು. ನನ್ನನ್ನು ಬಿಟ್ಟು  ಬೇರೆಲ್ಲರಿಗೂ ಕೊಟ್ಟು ಆಗಿದೆ. ಹತ್ತಿರವೇ ಇರುವ ನಮ್ಮ ಮನೆಗೆ ನಾಲ್ಕಾರು ಸಲ ಬಂದಿದ್ದರೂ ಕೊಡುವುದು ಮರೆತಿದ್ದಾರೆ. ಹಬ್ಬದ ಹಿಂದಿನ ದಿನ ಸಂಜೆ ನೆನಪಾಗಿ, ಅವರು ಧಾವಂತ ಪಟ್ಟು ಕೊಂಡು ಬಂದ ರೀತಿ, ಮರೆತಿದ್ದಕ್ಕೆ ಪೇಚಾಡಿದ ರೀತಿ..ನೋಡಿ ಬೇಜಾರಾದರೂ, ಜೊತೆ ಜೊತೆಗೆ ನನ್ನ ಮೇಲಿನ ಅಭಿಮಾನ ನೆನೆದು ಖುಷಿ ಹೆಮ್ಮೆ ಒಟ್ಟಿಗೇ ಆಯಿತು. 

ಜೀವನದ ಮೇಲೆ ಅತಿಯಾದ ಪ್ರೀತಿಯಿದ್ದ ಕಾರಣವೋ ಏನೋ... ಆರೋಗ್ಯದ ಬಗ್ಗೆ ಅತಿ ಕಾಳಜಿ. ಸ್ವಲ್ಪ ವ್ಯತ್ಯಾಸವಾದರೂ ಡಾಕ್ಟರ್ ಬಳಿ ಹೋಗುವುದು ಕಡ್ಡಾಯ.  


ಶಿಸ್ತುಗಾರ.. ಯಾವಾಗಲೂ ಶುಭ್ರ ಇಸ್ತ್ರಿ ಮಾಡಿದ ಬಟ್ಟೆ, ಕೈಗಡಿಯಾರ.. ಎಲ್ಲವೂ ಅಚ್ಚುಕಟ್ಟು. 

ಬೆಳೆದು ಬಂದ    ಬಡತನದ ಹಿನ್ನೆಲೆಯ ಕಾರಣ ಇರಬಹುದು... ಹಣ ಖರ್ಚು ಮಾಡುವಾಗ ಕೃಪಣತನ ಎದ್ದು ಕಂಡರೂ....( ಆಟೋರಿಕ್ಷಾ ಹತ್ತಲು ಮೀನಾ ಮೇಷ ಎಣಿಸಿದವರು... ಆದಷ್ಟು ಬಸ್ಸಿನಲ್ಲಿ ಪ್ರಯಾಣ ಮಾಡಿದವರು) ಮಕ್ಕಳಿಗೆ ತಿಂಡಿ, ಸಿಹಿ, ಹಣ್ಣುಗಳನ್ನು ಧಾರಾಳವಾಗಿ ತರುತ್ತಿದ್ದವರು.

ಕಾಲನ ಕರೆಗೆ ಓಗೊಡಲೇ ಬೇಕಾದದ್ದು ಅನಿವಾರ್ಯ ಸಹ... ಬೇರೆ ಆಯ್ಕೆಗಳೇ ಇಲ್ಲ. ಒಂದು ಹಂತದಲ್ಲಿ ಅವರಿಗೆ ಬೇಗ ಮುಕ್ತಿ ಕೊಡು ಎಂದು ದೇವರಲ್ಲಿ ಬೇಡಿದ್ದಿದೆ, ಆದರೂ ಚಿತೆಗೆ ಅಗ್ನಿಸ್ಪರ್ಶ ಮಾಡಿದಾಗ ಒಂದು ಕ್ಷಣ ಮನಸ್ಸು ವಿಚಲಿತವಾದದ್ದು ನಿಜ. 

ಸ್ಮಶಾನದ ವಾತಾವರಣ ಎಂಥವರನ್ನು ಒಂದು ಕ್ಷಣವಾದರೂ ಅಧೀರಗೊಳಿಸುತ್ತದೆ. ಒಂದರ ಹಿಂದೆ ಬರುವ ಹೆಣಗಳು, ಗೋಳಾಡುವ ಕೆಲ ಜನಗಳು, ಧಗ ಧಗ ಉರಿಯುತ್ತಿರುವ ಚಿತೆಗಳು, ಸುಟ್ಟು ಬೂದಿಯಾಗಿ ನೆಲಮುಟ್ಟಿದ ಹೆಣ ಸುಟ್ಟ ಜಾಗಗಳು, ಅಲ್ಲಿ ಬಿದ್ದ ಹೂವಿನ ರಾಶಿಗಳು, ಹೆಣಕ್ಕೆ ಉಪಯೋಗಿಸಿದ್ದ ಹಾಸಿಗೆ ಬಟ್ಟೆ ಮುಂತಾದ ವಸ್ತುಗಳು , ವಿಧೇಯ ವಿದ್ಯಾರ್ಥಿಗಳಂತೆ ಶಾಸ್ತ್ರಿಗಳು ಹೇಳಿದ್ದನ್ನು ಮಾಡುವ ಕರ್ತೃಗಳು, ಬೂದಿಯನ್ನು ಸರಿಸಿ ಅಳಿದುಳಿದ ಮೂಳೆಗಳನ್ನು ಹುಡುಕಿ ಮಡಕೆಗೆ ತುಂಬುತ್ತಿರುವವರು, ಇವೆಲ್ಲದರ ಮಧ್ಯೆ ಏನೂ ಸಂಬಂಧವಿಲ್ಲದ ನಿರ್ಲಿಪ್ತ ಮನೋ ಭಾವದಿಂದ ಕೆಲಸ ಮಾಡುವ ಸ್ಮಶಾನದ  ಕೆಲಸಗಾರರು (ವೀರಬಾಹುಗಳು) . ಅದೇ ಒಂದು ಲೋಕ.

ಮಣ್ಣಿನಿಂದಲೇ ಬಂದಂತ ದೇಹ ಮಣ್ಣಾಗುವುದು ಸಹಜ. ಇದನ್ನೇ ಭೌತಿಕ ಶರೀರವು ಪಂಚಭೂತಗಳಲ್ಲಿ ಲೀನ ಆಗುವುದು  ಎನ್ನುವುದು.  ಶವವನ್ನು ಸುಟ್ಟಾಗ ಅಳಿದುಳಿದ ಮೂಳೆಗಳನ್ನು ನೀರಿನಲ್ಲಿ ಬಿಡುವುದೇ ಅಸ್ತಿ ಸಂಚಯನ / ವಿಸರ್ಜನೆ  ಕಾರ್ಯಕ್ರಮ.  ಅಲ್ಲಿಗೆ ಮೃತ ವ್ಯಕ್ತಿಯ ಭೌತಿಕ ಅವಶೇಷಗಳು ಪಂಚಭೂತಗಳಲ್ಲಿ ಲೀನವಾದಂತೆ. ಈ ಘಟ್ಟದವರೆಗಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು, ಪೂರಕ ಕೆಲಸಗಳನ್ನು ಮಾಡಲು, ಮೃತರ ಮಕ್ಕಳಿಗೆ ಬೇಕಾದ ಸಹಾಯ ಹಾಗೂ ಮಾನಸಿಕ ಬೆಂಬಲ ಕೊಡುವಲ್ಲಿ ನನಗೆ ಬಹಳ ಶ್ರದ್ದೆ. 

ನನ್ನ ಅನುಭವದಂತೆ.... ಶವವನ್ನು ಸುಟ್ಟ ನಂತರ ಬಹುತೇಕ ದುಃಖ ಮರೆಯಾಗುತ್ತದೆ.... ಅಸ್ತಿ ವಿಸರ್ಜನೆಯ ನಂತರವಂತೂ ಮನಸ್ಥಿತಿ ಸಹಜತೆಗೆ ಮರಳುತ್ತದೆ. ಇದರ ದ್ಯೋತಕವೇನೋ ಎನ್ನುವಂತೆ ನಾವುಗಳು ತಿರುಮಕೂಡಲು ನರಸೀಪುರದಲ್ಲಿ ಮಾವನವರ ಆಸ್ತಿ ವಿಸರ್ಜನೆ ಕಾರ್ಯ ಮಾಡಲು ತೆಪ್ಪದಲ್ಲಿ ಹೋಗುವಾಗಿನ ಸಂದರ್ಭ ಹಾಗೂ ನೀರಿಗಿಳಿದು ಸ್ನಾನ ಮಾಡುವಾಗ  ಒಂದಷ್ಟು ತಮಾಷೆಯ ಮಾತುಗಳು ಮೂಡಿಬಂದಿದ್ದು, ನಂತರ ಅಲ್ಲಿನ ಒಂದು ಮನೆಯಲ್ಲಿ ಏರ್ಪಾಡು ಮಾಡಿದ್ದ ಊಟವನ್ನು ಸವಿದದ್ದು... ಜೀವನ  ನಿಂತ ನೀರಲ್ಲ ಅದು ಹರಿಯುವ ನದಿ ಎನ್ನುವ ಮಾತು  ಸತ್ಯ ಎಂದು ಸಾಬೀತಾಯಿತು.  

ಜುಳು ಜುಳು ಹರಿಯುವ ನೀರು, ಧಭ ಧಭ ಬೀಳುವ ಜಲಪಾತ, ಬೇಸಿಗೆಯಲ್ಲಿ ಸೊರಗಿದ ನದಿ, ಕಲುಷಿತಗೊಂಡ ನದಿ ನೀರು..ಹೀಗೆ ಜೀವನ ಪಯಣದಲ್ಲಿಯೂ ಸುಖ, ಸಂತೋಷ, ಅನಾರೋಗ್ಯ, ಸಾವು-ನೋವು ಅವಿಭಾಜ್ಯ ಅಂಗ. ಅದು ನಿರಂತರ.

ಹಿರಿಯ ಜೀವದ ಶ್ರಾದ್ಧ ಕಾರ್ಯಗಳು ನಡೆಯುತ್ತಿವೆ. ಆಗಾಗ್ಗೆ ಅವರೊಂದಿಗಿನ  ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ರಾತ್ರಿ ಊಟ ಮಾಡಬಾರದು ಎಂಬ ಕಾರಣ ವಿಧ ವಿಧ ತಿಂಡಿಗಳ ಸಮಾರಾಧನೆ ನಡೆಯುತ್ತಿದೆ. ಯಾರೆಲ್ಲ ಅಂತ್ಯ- ದರ್ಶನಕ್ಕೆ ಬಂದಿದ್ದರು, ಅವರನ್ನೆಲ್ಲಾ ಕರೆಯಬೇಕು, ಅವರಲ್ಲದೆ ಬೇರೆ ಯಾರಿಗೆ ಸುದ್ದಿ ತಿಳಿಸಬೇಕು, ಅಡಿಗೆ ಏನು ಮಾಡಿಸಬೇಕು ಹೀಗೆ ತಯಾರಿಯ ಮಾತುಗಳು...ಮಧ್ಯದಲ್ಲಿ ತಮಾಷೆಯ ಮಾತುಗಳು, ಕೆಲ ಸಲ ಚರ್ಚೆಗಳು... ನಡೆಯುತ್ತವೆ...ಅಂದರೆ ಜೀವನದ ಬಂಡಿ ತನ್ನ ಹಳಿಯ ಮೇಲೆ ಸಾಗುತ್ತಿದೆ....ನಿರಂತರ ಪಯಣ.

ಜೀವನ ಮುಂದೆ ಸಾಗಲೇಬೇಕು ಅದು ಅನಿವಾರ್ಯ ಸಹ. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು... ಹೆಚ್ಚು ಪ್ರಸ್ತುತವೆನಿಸುತ್ತವೆ:

ಹಾಗೆಯೋ ಹೀಗೆಯೂ ಹೇಗೆ ಹೇಗೆಯೋ ಜನುಮ 

ಸಾಗಿ ಮುಗಿಯುವುದು ಮುಗಿದು ಮರೆವುದೆ ಸುಕೃತ 

ಈಗಲೂ ಆಗಲೋ ಎಂದು ಮುಗಿವುಂಟೆಂಬ 

ಭಾಗ್ಯವನು ನೆನೆದು ನಲಿ - ಮಂಕುತಿಮ್ಮ.  

ಜೀವನಕ್ಕೊಂದು ಕೊನೆ ಇದ್ದೇ ಇದೆ ಎಂದು ನೆನೆದು ಬಂದುದನ್ನೆಲ್ಲ ಸಮಚಿತ್ತದಿಂದ ಸ್ವೀಕರಿಸುತ್ತಾ... ಆದಷ್ಟು ಸಂತೋಷದಿಂದ ಜೀವನವನ್ನು ನಡೆಸುವುದು ಸರಿಯಾದ ಮಾರ್ಗ.... ಕಷ್ಟವೇ... ಆದರೂ ಸಾಧ್ಯ ಮಾಡಲು ಪ್ರಯತ್ನ ನಿರಂತರವಾಗಿರಬೇಕು.

ಈ ಮಧ್ಯೆ ಯುಗಾದಿ ಹಬ್ಬ ಬಂದು..ನಮ್ಮ ಮನೆಯಲ್ಲಿ ಆಚರಿಸಲಿಲ್ಲ...ಹಿರಿಯ ಜೀವದ ಸಾವಿನ ಛಾಯೆಯಿಂದ ಹೊರಬಂದು ಹಬ್ಬವನ್ನು ಸಂಭ್ರಮಿಸುವ ಮನಃಸ್ಥಿತಿಗೆ ಬರಲಾಗದ್ದರಿಂದ ಹಾಗೂ ತಯಾರಿಗೆ ಸಮಯದ ಅಭಾವದಿಂದ.

ನಾವು ಹಬ್ಬ ಆಚರಿಸದಿದ್ದರೂ ವಿಶ್ವಾವಸು ನಾಮ ಸಂವತ್ಸರದ ಆಗಮನ ಆಯಿತು..ದಿನಗಳೂ ಉರುಳುತ್ತಿವೆ. 

ಆದಿ... ನಿರಂತರಜೀವನ.. ಅಂತ್ಯ...ನಂತರ ಮತ್ತೊಂದು ಆದಿ...ಕಾಲಚಕ್ರದ ಜೊತೆಗೆ ಮನುಷ್ಯನ ಜೀವನಚಕ್ರವೂ ಉರುಳುತ್ತಾ ಅನವರತ ಚಲನೆ. ಜೀವನ ಬೇವು ಬೆಲ್ಲದ ಮಿಶ್ರಣ. ಅದೇ ಯುಗಾದಿ ಹಬ್ಬದ ಸಂದೇಶ.

ವಿಶ್ವಾವಸು ಸಂವತ್ಸರದಲ್ಲಿ ಎಲ್ಲರೂ ಆರೋಗ್ಯ, ಸಂತೋಷ ಹಾಗೂ ನೆಮ್ಮದಿಯಿಂದ ಇರಲು ಆಶೀರ್ವದಿಸು ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ...

ನಮಸ್ಕಾರ 


D C Ranganatha Rao

9741128413






    

    



Comments

  1. ದೇವರು ಅವರ ಆತ್ಮಕ್ಕೆ ಶಾಂತಿ ಮತ್ತೆ ಸದ್ಗತಿ ಕೊಡಲಿ ಎಂದು ಪ್ರಾಥಿಸುತ್ತೇನೆ.

    ReplyDelete
  2. Our heartfelt condolences to you and your family on the sad demise of your fatheriinlaw. Please also convey our condolences to.HPRanga.
    So nicely explained by you about your f.in law.

    ReplyDelete
  3. ನಾಗೇಂದ್ರ ಬಾಬು3 April 2025 at 11:10

    108 ವರ್ಷದ ತಂದೆ,97 ವರ್ಷದ ಮಾವ
    ಇಂತಹ ಹಿರಿಯ ಜೀವಿಗಳ ಒಡನಾಟ ಮತ್ತು
    ಅದನ್ನು ಉತ್ತಮವಾಗಿ ನಿರೂಪಿಸಿದ ನೀವು ಕೂಡ ಶಾತಯುಷಿಗಳಾಗಿ ಇಂತಹ ನೂರೊಂದು ನೆನಪುಗಳ ಲೇಖನ ಸಾವಿರದ
    ನೆನಪುಗಳಾಗಿ ಮೂಡಿಬರಲಿ
    ಧನ್ಯವಾದಗಳು
    ಬಾಬು

    ReplyDelete
  4. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ.. .ನಮಗೆ ನೀವು ಹೇಳುತ್ತಿರುವ ಜೀವನದ ಪ್ರತಿ ಕಥೆಯೂ ನಮ್ಮ ಕಣ್ಮುಂದೆ ನಡೆದಂತೆ ಅನಿಸುತ್ತೆ. ನಿಮ್ಮಲ್ಲಿರುವ ಕಥೆಗಾರನಿಗೆ ಸಾಷ್ಟಾಂಗ ಪ್ರಣಾಮಗಳು..

    ReplyDelete
  5. ಕಿಟ್ಟಣ್ಣ (ನಂಭಾವ) ನವರ ದೀರ್ಘ ಜೀವನವನ್ನು ಸಂಕ್ಷೇಪವಾಗಿ ಬರೆದು ಸಕಲರಿಗೂ ಅವರನ್ನು ಚೆನ್ನಾಗಿ ಪರಿಚಯಿಸಿರುವಿರಿ. ಲೇಖಕರೇ ಧನ್ಯವಾದಗಳು.

    ReplyDelete
  6. ಜೀವನ ಪ್ರಯಾಣದಲ್ಲಿ ಎಲ್ಲರೂ ತಮ್ಮ ತಮ್ಮ ಸ್ಟೇಷನ್ ಬಂದಾಗ ಇಳಿದು ಹೋಗಲೇ ಬೇಕಾಗಿರುವುದು ಅನಿವಾರ್ಯ.ಮೃತರ ನೆನಪು, ದುಃಖ ಸ್ವಲ್ಪ ದಿಸಗಳು ಕಾಲ ಇರುತ್ತದೆ. ನಂತರ ಕ್ರಮೇಣ ಮರೆಯಾಗಿ ಅಲ್ಪಾಂಶ ಮಾತ್ರ ಉಳಿದೆ ಇರುತ್ತದೆ

    ಜಾತಸ್ಯ ಮರಣ ದ್ರುವಂ

    ಮೃತರಿಗೆ ಸದ್ಗತಿ ದೊರೆಯಲಿ 🙏

    ಗುರು ಪ್ರಸನ್ನ
    ಚಿಂತಾಮಣಿ

    ReplyDelete
    Replies
    1. ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ 🙏. ಬದುಕಿನ ವಾಸ್ತವವನ್ನು ಬಹಳ ಚೆನ್ನಾಗಿ ತಿಳಿಸಿರುವಿರಿ 👌👌👌🙏

      Delete
  7. ಹಿರಿಯ ಚೇತನಕ್ಕೆ ಸದ್ಗತಿ ದೊರೆತಿದೆ ಎಂಬುದು ನನ್ನ ನಂಬಿಕೆ. ಅವರು ಎಂದಿಗೂ ಎಲ್ಲರಿಗೂ ಮಾರ್ಗದರ್ಶಿಗಳು. ಅವರನ್ನು ಹತ್ತಿರದಿಂದ ಕಂಡು ಅನುಭವಿಸಿದ ನೀವುಗಳು ಪುಣ್ಯ ವಂತರು. ತಮ್ಮ ಹೃದಯಸ್ಪರ್ಶಿ ಲೇಖನ ಓದಿದ ತಮ್ಮ ಬಂಧುವಲ್ಲದ ನನಗೆ ತಮ್ಮ ಮಾವನವರಗುಣ, ನಡತೆ ಇಷ್ಟ ವಾಯಿತು.🙏🙏

    ReplyDelete
  8. Om shanthi🙏🙏

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ