ಭಿತ್ತಿಪತ್ರ-ಗೋಡೆ ಬರಹ
ಕೂಗುಮಾರಿ ಬಂದು ಬಾಗಿಲು ಬಡಿತಾಳೆ, ತಕ್ಷಣ ಬಾಗಿಲು ತೆಗೆದು ಅವಳನ್ನು ನೋಡಿದರೆ, ರಕ್ತಕಾರಿ ಸಾಯೋದು ಖಚಿತ. ಅದನ್ನ ತಪ್ಸೋಕೇ ಬಾಗಿಲ ಮೇಲೆ ಮೂರು ನಾಮ ಬರೆದು ನಾಳೆ ಬಾ ಎಂದು ಜೊತೆಗೆ ಸೇರಿಸಿದರೆ.. ಕೂಗು ಮಾರಿ ಅದನ್ನು ಓದಿ ನಾಳೆ ಬರೋಣ ಅಂತ ಹೋಗ್ತಾಳೆ, ನಾಳೆ ಮತ್ತದೇ, ಹಾಗಾಗಿ ಸಾಯೋದು ತಪ್ಪುತ್ತೆ.
ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಸುದ್ದಿ . ಹಾಗಾಗಿ ಎಲ್ಲರ ಮನೆಯ ಬಾಗಿಲ ಮೇಲೆ ಇದು ಬರೆದದ್ದನ್ನು ನೋಡಿದ್ದೇನೆ... ನಮ್ಮ ಮನೆಯ ಬಾಗಿಲ ಮೇಲೂ ಬರೆದದ್ದನ್ನು ಈಗ ನೆನೆದು ನಕ್ಕಿದ್ದೇನೆ.
ಇದು ನೆನಪಾಗಲು ಕಾರಣವೇನೋ ಗೊತ್ತಿಲ್ಲ.. ಹಾಗೇ ಮನಸ್ಸಿಗೆ ಬಂತು... ಅದರ ಹಿಂದೆಯೇ ನೆನಪಿನ ಸರಮಾಲೆ.
ಬಹಳ ಜನಕ್ಕೆ ವಿಷಯವನ್ನು ತಿಳಿಸಬೇಕಾದಾಗ ಅದನ್ನು ಗೋಡೆಯ ಮೇಲಿನ ಬರಹ ಅಥವಾ ಗೋಡೆಗೆ ಅಂಟಿಸಿದ ಚೀಟಿಯ ಮೂಲಕ ಮಾಡುತ್ತಿದ್ದದ್ದು ರೂಢಿಗತ. ಅದಕ್ಕೂ ಮೊದಲು, ಓದು ಬರಹ ಬರದ ಜನ ಜಾಸ್ತಿ ಇದ್ದಾಗ, ಈ ವಿಚಾರಗಳನ್ನು ಡಂಗುರದ ಮೂಲಕ ಸಾರುತ್ತಿದ್ದರು.
ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು ಭೂ-ಮಂಡಲಕ್ಕೆ ಪಾಂಡುರಂಗವಿಠ್ಠಲ ಪರದೈವವೆಂದು.. ಪುರಂದರದಾಸರು ಆಗಿನ ಕಾಲಕ್ಕೆ ಹೇಳಿದ್ದು.
ಚಿಕ್ಕಂದಿನಲ್ಲಿ ನನ್ನೂರು ದೊಡ್ಡಜಾಲದಲ್ಲಿ ಕಂಡಂತಹ ಮೊದಲ ಭಿತ್ತಿ ಪತ್ರಗಳು.. ಚಿಕ್ಕಜಾಲದ ಸಿನಿಮಾ ಟೆಂಟ್ ನಲ್ಲಿ ಬರುತ್ತಿದ್ದ ಚಲನ ಚಿತ್ರಗಳ ವಿಚಾರ ತಿಳಿಸುವ ಪೋಸ್ಟರ್ ಗಳು. ನಂತರ ತುಂಬಾ ಕಣ್ಣಿಗೆ ಬಿದ್ದಂತಹ ಗೋಡೆ ಬರಹ.."DDT 4.5.53” . ಆಗ ಮಲೇರಿಯಾ ಕಾಡುತ್ತಿದ್ದ ಸಮಯ, ನಿರ್ಮೂಲನೆಗಾಗಿ ನಮ್ಮ ಹಳ್ಳಿಯ ಮನೆ ಮನೆಗೂ ಡಿ ಡಿ ಟಿ ಯನ್ನು ಸಿಂಪಡಿಸಿದ್ದರು. ಸಿಂಪಡಿಸಿದ ಮನೆಯ ಮುಂಭಾಗದಲ್ಲಿ ಕಾಣುವಂತೆ... ಸಿಂಪಡಿಸಿದ ತಾರೀಕನ್ನು, ಕಪ್ಪು ಬಣ್ಣದಲ್ಲಿ ಬರೆದಿದ್ದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅದನ್ನು ಓದಿ ಓದಿ ತಾರೀಕು ಸಹ ನೆನಪಿನಲ್ಲಿದೆ.
“ಸರಾಯಿ ಅಗಂಡಿ ಚಿಕಜಲ” ( "ಸಾರಾಯಿ ಅಂಗಡಿ ಚಿಕ್ಕಜಾಲ" ದ ಅಪಭ್ರಂಶ) ವೂ ಕಣ್ಣಿಗೆ ಕಟ್ಟಿದೆ.
ಹಾರಿದನು (ಆ) ಹನುಮಂತ ಲಂಕೆಗೆ ತೂರಿದನು (ಈ ಹನುಮಂತ) ಚಿಕ್ಕಜಾಲದ ಹೆಂಡದಂಗಡಿಗೆ... ಇದು ನಾ ಕೇಳಿದ ನಮ್ಮೂರ ಜಾಣನೊಬ್ಬನ ತಮಾಷೆಯ ಆಶು ಕವಿತೆ, ಜೊತೆಗಾರ ಹನುಮಂತನನ್ನು ಕೀಟಲೆ ಮಾಡುವ ಸಮಯದಲ್ಲಿ ಹೇಳಿದ್ದು. ಆ ಹನುಮಂತ ರಾಮಾಯಣದವನು, ಈ ಹನುಮಂತ ದೊಡ್ಡಜಾಲದವನು. ಕಲ್ಪನೆಗೆ ಮಿತಿಯೆಲ್ಲಿ?
ನಮ್ಮ ಗವಿಪುರದ ಮನೆಗೆ ಬರುತ್ತಿದ್ದ ಮೊಸರಮ್ಮ ನಮ್ಮ ಮನೆಯ ಗೋಡೆಯ ಮೇಲೆ ಗೀರುಗಳನ್ನ ಹಾಕಿ ಇಡುತ್ತಿದ್ದ ಲೆಕ್ಕ.. ಜಾಣತನದಿಂದ ಕೂಡಿತ್ತು.
ಈಗಲೂ ಮನೆಯ ಗೋಡೆಯ ಮೇಲೆ, ಪತ್ರಿಕೆ ಹಾಕುವವರು, ಕೇಬಲ್ ನವರು, ಸೆನ್ಸಸ್ ನವರು ಗುರುತು ಹಾಕುವ ಅಭ್ಯಾಸವು ಮುಂದುವರೆದಿರುವುದನ್ನು ಕಾಣಬಹುದು.
ಈಗಂತೂ ಮನೆಯ ಮುಂದಿನ ಗೇಟಿಗೆ, sump cleaning ಮಾಡುವವರ ಫಲಕಗಳು ಕಟ್ಟಿರುವುದು ಸರ್ವೇಸಾಮಾನ್ಯ.
ಗೋಡೆ ಬರಹ ಅಂದಾಗ, ಕಣ್ಣಿಗೆ ಕಾಣುವುದೇ ಮನೆಯ ಗೋಡೆಯ ಮೇಲೆ ಮಕ್ಕಳು ಬರೆದ ಪಾಠಗಳು, ಮಗ್ಗಿ ಹಾಗೂ ಬಿಡಿಸಿದ ವಿಧವಿಧದ ಚಿತ್ತಾರ. ಮೇಜು ಕಟ್ಟು ಎಂದು ಕರೆಯುತ್ತಿದ್ದ, ಗಾರೆ ಮಾಡಿದ್ದ ಗೋಡೆಯ ಕೆಳಭಾಗ... ಮಕ್ಕಳಾದ ನಮ್ಮ ಕೈಗೆ ಸುಲಭವಾಗಿ ಸಿಗುತ್ತಿತ್ತು... ಬಳಪ, ಸೀಮೆ ಸುಣ್ಣ, ಇದ್ದಿಲು ಹೀಗೆ ಯಾವುದರಲ್ಲಾದರೂ ಸರಿ ಬರೆಯಬೇಕೆನಿಸಿದ್ದನ್ನು ಬರದದ್ದೆ.
ಏನೂ ಬರೆಯಲು ಬರದ ಮಕ್ಕಳು ತಮಗಿಷ್ಟ ಬಂದಂತೆ ಗೀಚಿರುವುದನ್ನು ನೋಡಿ, ಮೊದಲು ಗೋಡೆ ಹಾಳಾಯಿತೆಂದು ಕೋಪಗೊಂಡು ಬೈದು, ನಂತರ ಮಗು ಬರೆಯಿತಲ್ಲ ಎಂಬ ಸಂತೋಷದಿಂದ ಮುದ್ದು ಮಾಡಿರುವುದೂ ಉಂಟು.
ನನ್ನ ಮೊಮ್ಮಗಳು ವಿಸ್ಮಯ, ಮೂರು ವರ್ಷದವಳಿದ್ದಾಗ, ಒಂದು ಮೂಲೆಯಲ್ಲಿ ಗೋಡೆಯ ಮೇಲೆ ಬರೆದ ಚಿತ್ರ ಇದು, ಈಗಲೂ ಇದೆ.
ಇನ್ನು ಮಕ್ಕಳು ತಮ್ಮ ಎತ್ತರವನ್ನು ಗೋಡೆಯ ಮೇಲೆ ಗುರುತು ಹಾಕುವುದು ಸರ್ವೇಸಾಮಾನ್ಯ.
ಕ್ರಿಕೆಟ್ ಆಡಲು, ವಿಕೆಟ್ ಇಲ್ಲದ ಸಮಯದಲ್ಲಿ ಗೋಡೆಯ ಮೇಲೆ ವಿಕೆಟ್ಟಿನ ಚಿತ್ರ ಬರೆದು ಆಟ ಆಡಿದ ಖುಷಿ ಮರೆಯಲಾಗದು.
ಇನ್ನು ನಮ್ಮ ಹಳ್ಳಿಯ ಶಾಲೆಯಲ್ಲಿದ್ದ ಕಪ್ಪು ಹಲಗೆ- ಮರದಿಂದ ಮಾಡಿದ್ದು. ಇದು ಮಾಸಲು ಬಣ್ಣಕ್ಕೆ ತಿರುಗಿದಾಗ, ಚೌಡಂಗಿ ಸೊಪ್ಪು, ಇದ್ದಿಲು ಎರಡನ್ನು ಸ್ವಲ್ಪ ನೀರು ಬೆರೆಸಿ, ಚೆನ್ನಾಗಿ ಕುಟ್ಟಿ, ಅದರ ರಸವನ್ನು ಹಲಗೆಯ ಮೇಲೆ ಸವರಿದಾಗ... ಮಾಸಲು ಬಣ್ಣ ಕಪ್ಪಾಗಿ ಬದಲಾಗುತ್ತಿತ್ತು. ಅದರ ಮೇಲೆ ಬರೆದ ಬರಹ ಎದ್ದು ಕಾಣುತ್ತಿತ್ತು. ಈ ಕಾಯಕ ಮಾಡಿ, ಮೈ ಕೈಯೆಲ್ಲ ಕಪ್ಪು ಬಣ್ಣವನ್ನು ಮಾಡಿಕೊಂಡು ಬೈಸಿಕೊಂಡದ್ದು ಮರೆಯಲು ಸಾಧ್ಯವೇ?
ನಾಯಿಗಳಿವೆ ಎಚ್ಚರಿಕೆ ಎಂದು ಬರೆದಿದ್ದ ಫಲಕದ ಬಳಿ ನಿಂತಿದ್ದರು ಒಬ್ಬ ಮಹನೀಯರು. ಆಟವಾಡುತ್ತಾ ನಾವುಗಳು ಹೊಡೆದ ಚೆಂಡು ಅವರ ಮನೆಯ ಕಿಟಕಿಗೆ ಬಿದ್ದಾಗ, ಆ ಮಹನೀಯರು ಬೈದ ಬೈಗುಳ, ಬೇಜಾರಾದರೂ, ಆ ಬೇಜಾರನ್ನು ಮುಚ್ಚಿಕೊಳ್ಳಲು ನಮ್ಮೊಳಗೆ ನಾವು ಮಾತಾಡಿಕೊಂಡದ್ದು “ನಾಯಿ ಇದೆಯೋ ಇಲ್ಲವೋ... ಬೋರ್ಡ್ ಮಾತ್ರ ಇದೆ.... ಆದರೆ ಅವರ ಬೈಗುಳ ಯಾವ ನಾಯಿಯ ಬೊಗಳುವಿಕೆಗೂ ಕಡಿಮೆ ಇಲ್ಲ” ಎಂದು. ನಮ್ಮ ಜಾಣ್ಮೆಗೆ ನಾವೇ ಬೆನ್ನು ತಟ್ಟಿಕೊಂಡದ್ದು ಉಂಟು.
ಶಾಲೆಗಳ ಬಳಿ ಗೋಡೆಯಮೇಲೆ ಬರೆಯುವ, ಈ ಸೂಚನೆಯಂತೂ, ನಮ್ಮ ಸಾರ್ವಜನಿಕ ಜೀವನದ ನೈತಿಕತೆಯ ಮಟ್ಟವನ್ನು... ಅದು ಮಕ್ಕಳ ಮೇಲೆ ಬೀರುವ ಪರಿಣಾಮವನ್ನು ಹೇಳುತ್ತದೆ. ಕಾನೂನು ಏನೇ ಹೇಳಲಿ... ವಾಸ್ತವದ ಚಿತ್ರಣವೇ ಬೇರೆ...100 ಅಡಿ ಯಾವ ಮಾನದಂಡವೋ ಆ ದೇವರಿಗೇ ಗೊತ್ತು.
it's a writing on the wall ಎಂಬ ಇಂಗ್ಲೀಷ್ ನುಡಿಗಟ್ಟು.. ಮುಂದೆ ಹೀಗೆ ಆಗುತ್ತದೆ ಎನ್ನುವ ಸೂಚನೆ. foregone conclusion.
ಪುರಾತನ ಗೋಡೆ ಬರಹಗಳು ಎಂದರೆ ಕಲ್ಲಿನ ಮೇಲೆ ಕೆತ್ತಿದ ಶಾಸನಗಳು ಹಾಗೂ ಮಾಸ್ತಿ( ಮಹಾಸತಿ) ಕಲ್ಲುಗಳು. ಸಮಾಧಿಯ ಮೇಲೆ ಬರೆಯುತ್ತಿದ್ದ " ....... ಅವರು ದೈವಾಧೀನರಾದರು" ಎಂಬುದು ಅಲ್ಲಲ್ಲಿ ಕಾಣುತ್ತಿದ್ದ ಬರಹ.
ಹಾಸನ ಜಿಲ್ಲೆಯ ಹಲ್ಮಿಡಿಯ ಶಾಸನ ಕನ್ನಡದ ಮೊದಲ ಶಾಸನ ಎಂದು ಇತ್ತೀಚಿನವರೆಗೂ ತಿಳಿದಿದ್ದ ಸಂಗತಿ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಶಾಸನ ಇನ್ನೂ ಹಳೆಯದೆಂದು ಗುರುತಿಸಲಾಗಿದೆ.
ರೈಲ್ವೆ ಸ್ಟೇಷನ್ ಹಾಗೂ ಬೋಗಿಗಳಲ್ಲಿ ಬರೆದಿರುತ್ತಿದ್ದ ಈ ಎರಡು ಬರಹಗಳು ನನ್ನ ಗಮನವನ್ನು ಸೆಳೆದವುಗಳು:
* less luggage more comfort makes travel a pleasure.
* pull the chain to stop train.
ಹಾಗೆ ಗೋಡೆಯ ಮೇಲೆ ಬರೆದಿದ್ದ, ನನಗೆ ಚೆನ್ನಾಗಿ ನೆನಪಿರುವ ಕೆಲವು ವಾಕ್ಯಗಳು:
* Stick no bills ಚೀಟಿಗಳನ್ನು ಅಂಟಿಸಬಾರದು
* ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು
* ಜಾಲಿಮ ಲೋಶನ ಗಜಕರ್ಣ ಔಷಧ
* ಇಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುತ್ತದೆ.
ಚುನಾವಣೆಯ ಸಮಯದಲ್ಲಿ, ಗೋಡೆಗಳ ಮೇಲೆಲ್ಲಾ ಅಭ್ಯರ್ಥಿಗಳ ಹಾಗೂ ದಳಗಳ ಹೆಸರುಗಳು ರಾರಾಜಿಸುತ್ತಿದ್ದವು... ಈಚೆಗೆ ಕಡಿಮೆಯಾಗಿದೆ.
ರಸ್ತೆಯಲ್ಲಿ ಓಡಾಡುವಾಗ ಕಾಣುವ ಇನ್ನೊಂದು ಗೋಡೆಯಲ್ಲದ ಗೋಡೆ... ಆಟೋರಿಕ್ಷಾ ಹಿಂದೆ ಹಾಗೂ ಲಾರಿಯ ಹಿಂದೆ ಬರೆದ ಬರಹಗಳು. ಕೆಲ ಬರಹಗಳು ಜೀವನಾನುಭವ, ಕೆಲವು ಬೇರೆ ಅರ್ಥವನ್ನು ಕೊಡುವಂತಹವು, ಇನ್ನು ವ್ಯಾಕರಣದ, ಕಾಗುಣಿತದ ತಪ್ಪುಗಳು ಆ ಕ್ಷಣಕ್ಕೆ ನಗೆಯನ್ನು ತರಿಸುವುದಂತು ಸತ್ಯ. ಅದರ ಕೆಲ ಮಾದರಿಗಳು:
* ಕೈ ಮುಗಿದು ಏರು, ಇದು ಕನ್ನಡದ ತೇರು
* ತಂದೆ ತಾಯಿಯ ಆಶೀರ್ವಾದ
* ಆಟೋ ಓಡಿಸೋನು ಆದರೆ ಏನು ...ನಿನ್ನ ರಾಣಿ ಹಂಗೆ ಸಾಕ್ತೀನಿ ನಾನು
* ಗುದ್ದಬೇಡ ಅಣ್ಣ, ನಾನು ಬಡವ
* ನೊಂದ ಜೀವ, ನೋಯಿಸಬೇಡ
* ಹೆಣ್ಣು ಬಾಳಿನ ಕಣ್ಣು
* ಹೆಣ್ಣಿಗೆ ಮನಸ್ಸು ಕೊಡಬೇಡ ಕಣಣ್ಣ ಮಾಸಿಹೋದೀತು ಬಾಳಿನ ಬಣ್ಣ
* ಡ್ರೈವರ್ ಗಳು ಬೇಕಾಗಿದ್ದಾರೆ.... ಸಂಪರ್ಕಿಸಿ
* ಬುರಿ ನಜರ್ ವಾಲೆ ತೇರ ಮೂಹ್ ಕಾಲ ( ಕೆಟ್ಟ ದೃಷ್ಟಿಯವನೇ ನಿನ್ನ ಮುಖವೇ ಕಪ್ಪು..ನೇರ ಭಾಷಾಂತರ)
* for rash driving contact...(rash driving ಯಾರಿಗೆ ಬೇಕು?)
Sound Horn. OK
ಕನ್ನಡ ಹೋರಾಟಗಾರರ ತಂಡದಲ್ಲಿರುವವರು ಹೆಮ್ಮೆಯಿಂದ ಹಾಕಿಕೊಳ್ಳುವ " ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ" ಹೇಳಿಕೆಯಂತೂ ಮೆಚ್ಚತಕ್ಕದ್ದು.
ದೇವಸ್ಥಾನದಲ್ಲಿ ಕಾಣುವ ಬರಹಗಳು:
* ಮುಂದಿನ ಪೂರ್ಣಿಮೆ ... ತಾರೀಕು
* ಸಂಕಷ್ಟ ಚತುರ್ಥಿ .. ತಾರೀಕು
* ಸೇವೆಗಳ ವಿವರ ಹಾಗೂ ದರ.
ತಮಾಷೆ ಎಂದರೆ ಕೊಟ್ಟ ವಿವಿಧ ಉಪಕರಣಗಳ ಮೇಲೆ ದಾನಿಗಳ ಹೆಸರು ಬರೆಸುವ ಪರಿ. ಒಂದು ಟ್ಯೂಬ್ ಲೈಟ್ ದಾನ ಮಾಡಿದ್ದವರ ಹೆಸರು ಟ್ಯೂಬ್ ಲೈಟ್ ನ ಉದ್ದಕ್ಕೂ ಇತ್ತು... ಆ ದೀಪದ ಬೆಳಕು ಬರೆದ ಹೆಸರಿನಿಂದ ಅರ್ಧ ಮುಚ್ಚಿತ್ತು.
ಬಸವನಗುಡಿ ರಸ್ತೆಯಲ್ಲಿದ್ದ ದ್ವಾರಕಾ ಹೋಟೆಲ್ ನಲ್ಲಿ ಹಾಕಿದ್ದ ಬರಹ "ಒಂದು ಖಾಲಿ ದೋಸೆಗೆ ಮೂರನೇ ಬಾರಿ ಚಟ್ನಿ ಕೊಡಲಾಗುವುದಿಲ್ಲ". ಇದು ಆ ಚಟ್ನಿಯ ರುಚಿಗೆ ಮಾರುಹೋದ ಗಿರಾಕಿಯ ದುರಾಸೆಯೋ ಅಥವಾ ಹೋಟೆಲ್ ಮಾಲೀಕರ ಜಿಪುಣತನವೋ ಇಂದಿಗೂ ಅರ್ಥವಾಗಿಲ್ಲ.
ದಾಸರಹಳ್ಳಿಯ ಒಂದು ಹೋಟೆಲ್ ನಲ್ಲಿ ಹಾಕಿದ್ದ ಬರಹ " ಚಿಲ್ಲರೆಯೊಂದಿಗೆ ಸಹಕರಿಸಿ". ನನ್ನ ಪ್ರಶ್ನೆ ಅವರಿಗೆ.. ಯಾರು ಸ್ವಾಮಿ ಈ ಚಿಲ್ಲರೆ?... ಪಾಪ ಆತ ಕಕ್ಕಾಬಿಕ್ಕಿ... ಹೇಳಿದ್ದು... ಚಿಲ್ಲರೆಗೆ ಬಹಳ ಕಷ್ಟ ಸರ್ ಈಗ.
ಹಾಸ್ಯ ಸಂಜೆಯಲ್ಲಿ ಹೇಳುತ್ತಿದ್ದ ಒಂದು ಬರಹದ ವಿಚಾರ.." ವರದ ರಾಜ - ಬಾಣವರ"... ಅದು "ವಾರದ ರಜ- ಭಾನುವಾರ...." ಎಂಬ ವಾಕ್ಯವು ಓದು ಬರಹ ಸರಿಯಾಗಿ ಬರದ ವ್ಯಕ್ತಿಯ ಕುಂಚದಿಂದ ರೂಪುಗೊಂಡದ್ದು.
ಹೋದ ಶನಿವಾರ, CMCA ( childrens movement for civic awareness) ಎಂಬ ಸಂಸ್ಥೆಯ 25 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡೆ. ಈ ಸಂಸ್ಥೆ ಶಾಲಾ ಮಕ್ಕಳಲ್ಲಿ ನಾಗರೀಕ ಜವಾಬ್ದಾರಿಗಳನ್ನು, ಹಾಗೂ ಹಕ್ಕುಗಳನ್ನು ತಿಳಿಸಿಕೊಡುವ ಕಾರ್ಯವನ್ನು ವಿಶಿಷ್ಟ ರೀತಿಯಲ್ಲಿ ಮಾಡುತ್ತಿದೆ. ಅದರ ಭಾಗವಾಗಿ ನಾನು ಸುಮಾರು ಏಳು ವರ್ಷ ಕೆಲಸ ಮಾಡಿದ್ದೇನೆ. ಮಕ್ಕಳೊಡನೆ ಒಡನಾಡುವ ಸುಂದರ ಅನುಭವ.. ಹಾಗೂ ಅವರಲ್ಲಿ ಹುದುಗಿರುವ ಕರ್ತೃತ್ವ ಶಕ್ತಿಯನ್ನು ಹೊರಗೆ ತರಲು ಮಾಡುವ ಪ್ರಯತ್ನ.
ಬಹಳಷ್ಟು ಹಳೆಯ ಪರಿಚಯದ ಮುಖಗಳನ್ನು ನೋಡಿ, ಒಡನಾಡಿ, ಹರಟೆ ಹೊಡೆದು, ಊಟ ಮಾಡಿ, ಚಿತ್ರ ತೆಗೆಸಿಕೊಂಡು ಬಂದದ್ದು ಸವಿನೆನಪು... ಅದರ ಒಂದು ಭಿತ್ತಿ ಚಿತ್ರ...
ಕಸ ಹಾಕುವವರ ಮೇಲೆ ಬಂದ ಕೋಪವನ್ನು ಹೊರ ಹಾಕಿದ ಭಾಷೆಯನ್ನು ಓದಿ...ಅವರ ಅಸಹನೆ ಯಾವ ಮಟ್ಟದಲ್ಲಿದೆ ಎಂದು ತಿಳಿಯುತ್ತದೆ. ಇಷ್ಟಾದರೂ ನಮ್ಮ ಕೆಲ ಜನ ಬದಲಾಗುವುದೇ ಇಲ್ಲ. ಎಮ್ಮೆ ಚರ್ಮದವರು
ಈ ಡಿಜಿಟಲ್ ಯುಗದಲ್ಲಿ...facebook wall ಎನ್ನುವ ಗೋಡೆ ಎಷ್ಟು ಜನಾನುರಾಗಿ ಆಗಿದೆ ಎಂದರೆ... ಅಲ್ಲಿ ಬರೆಯುವ ವಿಷಯ ಹಾಗೂ ಚಿತ್ರಗಳಿಗೆ ಯಾವುದೇ ಚೌಕಟ್ಟಿಲ್ಲ. ಅವರವರ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಇರುವ ಗೋಡೆ ಎಂದರೆ ಸರಿಯೇನೋ.
ಮುಗಿಸುವ ಮುನ್ನ... ಈಚೆಗೆ ನಾನಂತೂ face book ಗೋಡೆಯ ಮೇಲೆ ಬರೆಯುವುದು... ನನ್ನ ಲೇಖನಗಳ ಲಿಂಕ್ ಗಳನ್ನು.. ಹಾಗೆ ಅದನ್ನು ಓದಿ ಎಂಬ ಅರಿಕೆಯನ್ನು... ಹೀಗಾಗಿ ನಾನೂ ಗೋಡೆಯ ಮೇಲೆ ಬರೆದವ ಹಾಗೂ ಬರೆಯುತ್ತಿರುವವನಾಗಿದ್ದೇನೆ.
ಬರೆಯುವವರು ಏನು ಬೇಕಾದರೂ ಬರೀ ಬಹುದು, ಹೇಗೆ ಬೇಕಾದರೂ ಬರೀ ಬಹುದು... ಆದರೆ ಅದನ್ನು ಓದಿ ಹಿಂಸೆ ಪಟ್ಟುಕೊಳ್ಳೋದು, ನಗೋದು ಅಥವಾ ಸಂತೋಷ ಪಡೋದು ಓದುವವರ ಹಣೆಬರಹ ಅಲ್ಲವೇ?
ನಿಮ್ಮ ಅನಿಸಿಕೆ ಸಲಹೆಗಳನ್ನು comment ಮಾಡುವಾಗ ನಿಮ್ಮ ಹೆಸರನ್ನು ತಪ್ಪದೇ ಬರೆಯಿರಿ.
ನಮಸ್ಕಾರ....
D C Ranganatha Rao
9741128413
ಗೋಡೆ ಬರಹ ಲೇಖನ ಚೆನ್ನಾಗಿದೆ ಇನ್ನೂ ಒಂದೆರಡು ಸಂದರ್ಭಗಳು ...ಬಂಡೆ,ಮರ ಹಾಗೂ ಐತಿಹಾಸಿಕ ಸ್ಥಳದಲ್ಲಿ ಮೂಡಿ ಬರುವ
ReplyDeleteಪ್ರೇಮ ವಿರಹ ಹಾಗೂ ಕೆಲವೊಮ್ಮೆ ಅಶ್ಲೀಲ ಬರಹಗಳನ್ನು ಬರೆಯುವ ವಿದ್ಯಾವಂತ ಅನಾಗರಿಕರು ....ಶೌಚಾಲಯ ಕವಿಗಳು
ನಿಷ್ಶಕ್ತಿ, ಚರ್ಮವ್ಯಾದಿ, ಫೈಲ್ಸ್ ಗಳಿಗೆ ಚಿಕಿತ್ಸೆ ಗಾಗಿ ಬರಹ ಹಾಕುವ ಡಾಕ್ಟರ್ ಗಳು...ಇಂತಹ
ಹಲವಾರು ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ಗೋಡೆ ಬರಹಕ್ಕೆ ನನ್ನ ಕಿರು ಬರಹ
ಬಾಬು
Hi DCR Sir, on the small topic, what a wonderful elongation of the topic on different matter. At the same time there are wonderful slogans behind many autorickshaws. Many of them on love/love dejection. Anyhow hats off to your thinking translated to inking. Dhanyavadagalu sir 🙏🙏🙏
ReplyDeleteಮಾನ್ಯರೆ
ReplyDeleteಗೋಡೆ ಬರಹಗಳು ಬಹಳಷ್ಟಿವೆ, ಆದರೂ ಲೇಖಕರು ಸಾಕಷ್ಟು ಗೋಡೆ ಬರಹಗಳನ್ನು ತಮ್ಮ ಲೇಖನದಲ್ಲಿ ಅಳವಡಿಸಿಕೊಂಡಿದ್ದಾರೆ.
ಲೇಖನದ ಪ್ರಸ್ತುತಿಯನ್ನು ಹಾಸ್ಯ ಮಿಶ್ರಿತವಾಗಿ ಮಾಡಿರುವುದು ಅಭಿನಂದನಾರ್ಹ, ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
ನಿಧನರಾದ ವ್ಯಕ್ತಿಗಳ ಭಾವಚಿತ್ರಗಳನ್ನು ರಸ್ತೆಗಳಲ್ಲಿ ಅಲ್ಲಲ್ಲಿ ನೇತಾಕುವುದು ಇತ್ತೀಚಿನ ಹೊಸ ಗೋಡೆ ಬರಹದ ಉದಾಹರಣೆ.
ಕೊನೆ ಹನಿ:
ಬ್ರಹ್ಮ ಬರೆದಿದ್ದರು ಕಾಣದ ಗೋಡೆ ಬರಹ ಹಣೆಯಬರಹ ಇರಬಹುದೇ?
ವಂದನೆಗಳೊಂದಿಗೆ,
ಗುರು ಪ್ರಸನ್ನ
ಚಿಂತಾಮಣಿ
👌👌👌🙏
ReplyDeleteಗೋಡೆ ಬರಹ ಲೇಖನವನ್ನು ನಗೆ ಬರಹವಾಗಿ ಮೂಡಿಸಿದ ನಿಮಗೆ ಅನೇಕ ಧನ್ಯವಾದಗಳು.
ReplyDeleteನಮ್ಮಲ್ಲಿ ಚಿಕ್ಕದಿರುವಾಗ ಕೂಗುಮಾರಿಯನ್ನು ಮೋಸಗೊಳಿಸಲು *ಆಸ್ತಿಕ, ನಾಳೆ ಬಾ* ಅಂತ ನಾನೇ ನಮ್ಮಮುಂಬಾಗಿಲ ಮೇಲೆ ಬರೆದಿದ್ದೆ.
ಊರಿನಿಂದ ಬಂದ ನಮ್ಮಣ್ಣ, ಅಲ್ಲಯ್ಯಾ, ಕೂಗು ಮಾರಿ ಹಿಂಬಾಗಲಿಗೆ ಬಂದು ಕರೆದರೆ ಏನು ಮಾಡುತ್ತಿ" ಎಂದು ಕೇಳಿದಾಗ ತಬ್ಬಿಬ್ಬಾದ ಸಂದರ್ಭ ಜ್ಞಾಪಕಕ್ಕೆ ಬಂತು ನಿಮ್ಮ ಈ ಬರಹದಿಂದ.
ನನ್ನನ್ನು ಸ್ವಲ್ಪ ಸಮಯ ನನ್ನ ಬಾಲ್ಯಕ್ಕೆ ಕೊಂಡು ಹೋಗಿದ್ದಕ್ಕೆ ಧನ್ಯವಾದಗಳು.
ಶ್ರೀಕಾಂತ ರಾವ್