ಮುದ ನೀಡಿದ ಮನಸ್ಸುಗಳು

ಮುದ ನೀಡಿದ ಮನಸ್ಸುಗಳು

ಶನಿವಾರ ಬೆಳಿಗ್ಗೆ ವಾಕಿಂಗ್ ಮಾಡುವಾಗ, ಯಾವಾಗಲಾದರೂ ಒಮ್ಮೆ ಸಿಗುವ  ಹೇಮಾ  (ನನ್ನ ಭಾವ ಮೈದುನನ ಹೆಂಡತಿ), ಒಬ್ಬ ಸ್ನೇಹಜೀವಿ. ವಾಕಿಂಗ್ ಮಾಡುತ್ತಾ ಟಾಕಿಂಗ್ ಮಾಡುವುದು ಸಾಮಾನ್ಯ... ವಿಷಯ ಇಂತದೇ ಆಗಿರಬೇಕೆಂದೇನೂ ಇಲ್ಲ. ಇಂದು ಮಾತನಾಡುವಾಗ ಬಂದ ವಿಷಯ- ಚಿಕ್ಕಂದಿನಲ್ಲಿ ರಜೆಯ ಕಾಲದಲ್ಲಿ ಬೇರೆಯವರ ಮನೆಗೆ ಹೋಗಿ ಇರುತ್ತಿದ್ದ ವಿಷಯ. ಆಗ ನೆನಪಿಗೆ ಬಂದಿದ್ದೆ ನಾನು ಕುಣಿಗಲ್ ಗೆ ಹೋಗಿದ್ದದ್ದು.  ನೆಂಟರಲ್ಲದ, ಹೆಚ್ಚು ಪರಿಚಯವಿಲ್ಲದವರಾದರೂ, ಪ್ರತಿಫಲಾಪೇಕ್ಷೆ ಇಲ್ಲದ ಪ್ರೀತಿ ತೋರಿಸಿದವರ ನೆನಪು ಮನಸ್ಸಿಗೆ ಬಂತು. ಅಂತ ಮನಸ್ಸುಳ್ಳ ವ್ಯಕ್ತಿಗಳ ಜೊತೆ ನನ್ನ ಒಡನಾಟದ ನೆನಪುಗಳ ಚಿತ್ರಣವೇ ಈ ಲೇಖನದ ವಿಷಯ.

ಕುಣಿಗಲ್ ಭಾವ - ಹನುಮಂತ ರಾಯಪ್ಪನವರು:




ನಾನು ಹೈಸ್ಕೂಲ್ ನಲ್ಲಿ ಓದುತ್ತಿದ್ದ ಹುಡುಗ, ಗವಿಪುರದ ನಮ್ಮ ವಠಾರದಲ್ಲಿ ಇದ್ದ ಎಂ ಎನ್ ಸುಮಿತ್ರ,  ( ಈಗ ಅವರು ನನಗೆ ಸುಮಿತ್ರ ಅತ್ತಿಗೆ)ಅವರ ಜೊತೆ ಸಲಿಗೆ... ನನ್ನಕ್ಕ ಗಿರಿಜಾಂಬನ ಮದುವೆಯಲ್ಲಿ ಅವರ ಜೊತೆ ಸೇರಿ ಹಾಡುಗಳನ್ನು ಹಾಡಿದ್ದೆ. ಅವರ ಅಕ್ಕ ಶಾಂತಾ ..ಅವರನ್ನು ಒಂದು ಸಲ ನೋಡಿದ್ದೆ. ಮಾಗಡಿ ಜಾತ್ರೆಗೆ ಹೋಗಿದ್ದಾಗ... ಈ ಶಾಂತ ಅಕ್ಕ ಸಿಕ್ಕರು.. ಹಾಗೆ ಕುಣಿಗಲ್ಲಿಗೆ ಹೋಗೋಣ ಬಾ ಅಂತ ಕರೆದರು... ಸ್ವಲ್ಪ ಸಂಕೋಚವಾದರೂ ಹೋಗುವ ಆಸೆ ಇತ್ತು.. ಅವರ ಗಂಡ ಸಹ (ನಾನು ಮೊದಲು ಬಾರಿ ನೋಡಿದ ಆದರೆ ಕೇಳಿದ್ದ "ಕುಣುಗುಲು ಭಾವ"), ನಡಿ ಹೋಗೋಣ ಅಂತ ಜೊತೆಯಲ್ಲಿ ಕರ್ಕೊಂಡು ನಡೆದೇ ಬಿಟ್ರು, ನಾನು ಕೂಡ ಅವರ ಜೊತೆ ಹೆಜ್ಜೆ ಹಾಕ್ದೆ.

ಅವರ ಮನೆಯಲ್ಲಿ ಕಳೆದ ಎರಡು ದಿನ ತುಂಬಾ ಖುಷಿ ಕೊಟ್ಟಿತ್ತು. ಹನುಮಂತರಾಯಪ್ಪನವರ ವ್ಯಕ್ತಿತ್ವ...ಸ್ಥೂಲಕಾಯ, ಮಿತಭಾಷಿ (ನನ್ನ ಅನುಭವ). ಮಾತು ಮೇಲ್ನೋಟಕ್ಕೆ ಒರಟು ಎನ್ನಿಸಿದರೂ.. ಭಾವನಾತ್ಮಕ ಜೀವಿ. 

" ಏನಪ್ಪಾ ರಂಗಣ್ಣ ಚೆನ್ನಾಗಿದ್ದೀಯಾ?" ಎನ್ನುವುದು ಸಾಮಾನ್ಯ ಮಾತು.. ನಾನು ಮೊದಲ ಬಾರಿ ಮದರಾಸಿಗೆ ಹೋದಾಗ ಅಲ್ಲಿದ್ದ  ಅವರ ಅಣ್ಣನ ವಿಳಾಸ ಕೊಟ್ಟು, "ಹೋಗಿ ಮಾತಾಡಿಸಿ ಬಾ, ಗುರುತು ಪರಿಚಯ ಇರುವವರು ಬೇಕಾಗುತ್ತೆ" ಎಂದು ಹೇಳಿದವರು.

ಅವರ ಜೀವನದ ಬೆಳವಣಿಗೆಯ ಕೆಲ ಹಂತಗಳನ್ನು ಬೇರೆಯವರಿಂದ ಕೇಳಿ ತಿಳಿದು.. ಕೆಲ ಹಂತಗಳನ್ನು ಕಣ್ಣಾರೆ ಕಂಡು ಮೆಚ್ಚಿದವನು ನಾನು. ಅವರು ಮಾಡುತ್ತಿದ್ದ ಜಾಮೂನಿನ ( ಅವು ಗುಂಡಾಗಿರದೆ ಉದ್ದುದ್ದ ಇರುತ್ತಿದ್ದವು) ರುಚಿ ಅದ್ಭುತ.  

ಕುಣಿಗಲ್ಲಿನಲ್ಲಿ ಅವರ ಸಿಹಿ ಖಾರದ ಅಂಗಡಿ ಖ್ಯಾತಿ ಪಡೆದಿತ್ತು. ಸಂಜೆಯ ವೇಳೆಗೆ ತೆಗೆಯುತ್ತಿದ್ದ ಅಂಗಡಿಯ ಎಲ್ಲ ಖಾದ್ಯಗಳು ಬಹುಬೇಗ ಬಿಕರಿಯಾಗುತ್ತಿದ್ದವು ಎನ್ನುವುದು ವಿಶೇಷ.

ಈರುಳ್ಳಿಯ ಸಿಪ್ಪೆಯನ್ನು  ತೆಗೆಯುವಾಗ, ಇಂದಿಗೂ ಕುಣಿಗಲ್ ಭಾವನನ್ನು ನೆನೆಯುತ್ತೇನೆ. ಅವರು ಸಿಪ್ಪೆಯನ್ನು ಚಾಕು ಉಪಯೋಗಿಸಿ ತೆಗೆಯುತ್ತಿದ್ದ ರೀತಿಯನ್ನು ತಕ್ಕಮಟ್ಟಿಗೆ ಅಳವಡಿಸಿಕೊಂಡಿದ್ದೇನೆ. 

ಯಾವ ಮಕ್ಕಳಾದರು ಸರಿ,  ಅವರ ಪ್ರೀತಿ ಅನನ್ಯ...  ಹಾಗಾಗಿ ಮಕ್ಕಳಿಗೆ ಅವರ ಮನೆಯಲ್ಲಿ ವಿಶೇಷ ಸ್ವಾತಂತ್ರ್ಯ. 

 ಅವರ ಮನೆಯಲ್ಲಿದ್ದು, ಓದನ್ನು ಮುಂದುವರಿಸಿ, ಜೀವನವನ್ನು ರೂಪಿಸಿಕೊಂಡ ಸಾಕಷ್ಟು ಮಕ್ಕಳು ಇದ್ದಾರೆ. ಇಂತಹ ಸಹಾಯಗಳನ್ನು ಮಾಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ ಎನ್ನುವ ವಿಷಯವನ್ನು ಕೇಳಿ ತಿಳಿದಿದ್ದೇನೆ. 

ಈಗ ನಮ್ಮ ಜೊತೆಯಲ್ಲಿಲ್ಲದ ಹನುಮಂತರಾಯಪ್ಪನವರಿಗೆ, ಶಾಂತ ಅಕ್ಕನಿಗೆ ನನ್ನ ಮನಃಪೂರ್ವಕ ನಮಸ್ಕಾರಗಳು.

ನರಸಿಂಗ ರಾಯರು:

ನರಸಿಂಗರಾಯರು ( ನರಸಿಂಗಣ್ಣಯ್ಯ)  ವೃತ್ತಿಯಲ್ಲಿ ಉಪಾಧ್ಯಾಯರು. ಇವರು ನಮ್ಮ ಸುಮಿತ್ರ ಅತ್ತಿಗೆಯ ಅಪ್ಪ. ತುಮಕೂರು ಜಿಲ್ಲೆಯ ನಾಗವಲ್ಲಿ ಎಂಬ ಹಳ್ಳಿಯಲ್ಲಿ ಕೆಲಸ. 

ಇನ್ನೂ ಅತ್ತಿಗೆಯಾಗಿರದಿದ್ದ ಸುಮಿತ್ರ ಅವರ ಜೊತೆ, ನಾಗವಲ್ಲಿಗೆ ಹೋಗಿದ್ದೆ. (ಪ್ರೀತಿಯಿಂದ ಕರೆದವರ ಜೊತೆ ನಿರ್ಭಿಡೆಯಿಂದ ಹೋಗುತ್ತಿದ್ದ ಆ ಕಾಲದ ಮನಸ್ಥಿತಿಯೇ ಚೆನ್ನ ಎಂದು ಈಗಲೂ ನನ್ನ ಅನಿಸಿಕೆ). ಅವರಿದ್ದದ್ದು ಒಂದು ವಿಶಾಲವಾದ ಮನೆ, ಹಿಂದೆ ರಾಟೆ ಬಾವಿ, ಆಟ ಆಡಲು ವಿಶಾಲವಾದ ಜಾಗ. ಹತ್ತಿರದಲ್ಲೇ ಇದ್ದ ನಮ್ಮತ್ತಿಗೆಯ ತವರೂರು ಮುಳುಕುಂಟೆಗೂ  ಹೋಗಿದ್ದು ಉಂಟು.    ನರಸಿಂಗರಾಯರಂತೂ, ನಾನಲ್ಲಿ ಇದ್ದಷ್ಟು ದಿನ, ಅವರು ಬಿಡುವಾಗಿದ್ದಾಗಲೆಲ್ಲಾ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಓಡಾಡುತ್ತಿದ್ದರು.

ಮನೆಯಲ್ಲಿದ್ದ ಕೆಲವು ಪುಸ್ತಕಗಳನ್ನು ಕೊಟ್ಟು ಓದಲು ಹೇಳುತ್ತಿದ್ದರು.ಆಗ ಓದಿದ ಒಂದು ಪದ್ಯ ಈಗಲೂ ಹಸಿರಾಗಿದೆ.

ಅಣ್ಣನ ಹೆಂಡತಿ ಅತ್ತಿಗೆ,

ಎತ್ತಿನಾ ಕೊರಳೊಳು ಜತ್ತಿಗೆ

ಎತ್ತಿನ ಕೊರಳೊಳು ಜತ್ತಿಗೆ ..

ನಮ್ ಕೆಂಚವ್ವಗೆ ಚಿನ್ನದ ಸತ್ತಿಗೆ

ಆ ಮನೆ ಈ ಮನೆ ಸಂಧಿ              

ಕರುವ ಕಟ್ಟೋದೊಂದು ಗೊಂದಿ

ಕರುವ ಕಟ್ಟೋದೊಂದು ಗೊಂದಿ 

ನಮ್ ಕೆಂಚವ್ವಗೆ ಚಿನ್ನದ ಬಂದಿ

ಕೆರೆಯಲ್ಲಿರುವುದು ಜೋಕು 

ಅದು ನಮ್ಮ ಕುದುರೆಗೆ ಬೇಕು                

 ಅದು ನಮ್ಮ ಕುದುರೆಗೆ ಬೇಕು       

ನಮ್ ಕೆಂಚವ್ವಗೆ ಚಿನ್ನದ ಬಾಕು

ಇದನ್ನು ಅವರ ಮುಂದೆ ಹೇಳಿದಾಗ ಭೇಷ್ ಎಂದು ದೊಡ್ಡ ನಗೆಯೊಂದಿಗೆ ಮೆಚ್ಚುಗೆ ಸೂಚಿಸಿದವರು.

ಈ ಸಮಯದಲ್ಲಿ, ಯಾವುದೋ ಕೆಲಸಕ್ಕಾಗಿ ತುಮಕೂರಿಗೆ ಹೋಗಬೇಕಾದ ಆಗ, ಅಲ್ಲಿ  ಇದ್ದ ಬಳಪ ಮಾಡುವ ಕಾರ್ಖಾನೆಗೆ ನನ್ನನ್ನು ಕರೆದುಕೊಂಡು ಹೋಗಿ, ಬಳಪ ಮಾಡುವ ವಿಧಾನವನ್ನು ಎಲ್ಲಾ ವಿವರಗಳೊಂದಿಗೆ ತೋರಿಸಿದ ಮಹಾನುಭಾವ. ನನ್ನ ಜೀವನದ ಮೊದಲನೆಯ ಕಾರ್ಖಾನೆಯ ಸಂಪರ್ಕ. ಆ ನಂಟನ್ನು ಬೆಸೆದವರು ನರಸಿಂಗರಾಯರು. ನಂತರ ಹೋಟೆಲ್ ನಲ್ಲಿ ತಿಂಡಿಯನ್ನು ಕೊಡಿಸಿ, ಜೊತೆಗೆ ಕಡಲೆಕಾಳಿನ ಗಿಡದ ಕಟ್ಟನ್ನು ಕೈಗೆ ಕೊಟ್ಟು, (ದಾರಿಯಲ್ಲೂ ತಿನ್ನಲು) ಕೈ ಹಿಡಿದು ಕರೆ ತಂದವರು.

ಏನಾದರೂ ಹೊಸ ವಿಷಯವನ್ನು ಹೇಳುತ್ತಿದ್ದರು. ಅವರ ಮುಗ್ಧ ನಗುವಂತೂ ನನಗೆ ತುಂಬಾ ಇಷ್ಟ.

ಒಳ್ಳೆಯತನವೇ ಮೂರ್ತಿವೆತ್ತಂತ ವ್ಯಕ್ತಿತ್ವ.              ನನ್ನ ಮಗಳನ್ನು ನೋಡಲು ಆಗಾಗ್ಗೆ ಬರುತ್ತಿದ್ದರು.

ತಮಾಷೆಯ ವಿಷಯ ಎಂದರೆ ಮೂರು ತಿಂಗಳ ಮಗುವಿಗೆ, ಚಾಕಲೇಟ್ ತಂದು ಕೊಡುತ್ತಿದ್ದದ್ದು... ತಿಂದದ್ದು ನಾನೇ.

ನಮಸ್ಕಾರ..... ನರಸಿಂಗಣ್ಣಯ್ಯ. 

ವೆಂಕಟರಾಮು - ಗಿರಿಜಮ್ಮ ದಂಪತಿ:


ಶಹಾಬಾದಿಗೆ interview ಕೊಡಲು ಹೊರಟಿದ್ದೆ. ನನ್ನ ಸ್ನೇಹಿತ HP ರಂಗನಾಥ್ ಈಗಾಗಲೇ ಅಲ್ಲಿ ಕೆಲಸದಲ್ಲಿದ್ದ. ಮೊದಲು ಗುಲ್ಬರ್ಗ ಬಸ್ ನಲ್ಲಿ ಹೋಗುವುದೆಂದು ನಿರ್ಧಾರಮಾಡಿ ತಿಳಿಸಿದ್ದೆ . ನಂತರ ತಿಳಿದದ್ದು ಬಸ್ ಶಹಾಬಾದ್ ಮೂಲಕ  ಹೋಗುವುದಿಲ್ಲ ಎಂದು.   ಕೊನೆ ಘಳಿಗೆಯಲ್ಲಿ  train  ಮೂಲಕ ಹೊರಟು, ವಿಷಯ  ಟೆಲಿಗ್ರಾಂ ಮೂಲಕ ತಿಳಿಸಿದೆ. ಅದು ಸೇರುವ ಮೊದಲೇ  ನನ್ನ ಸ್ನೇಹಿತ ಗುಲ್ಬರ್ಗಕ್ಕೆ ಹೋಗಿದ್ದ..ನನ್ನನ್ನು ಕರೆತರಲು. ಈಗ ಗಿರಿಜಮ್ಮ ಕಾರ್ಯಪ್ರವೃತ್ತರಾದರು. ನನ್ನ ಗುರುತು ಹಿಡಿಯಲು ನನ್ನ ಸ್ನೇಹಿತನ ಅಮ್ಮನನ್ನು      (ನಾನು ಅಮ್ಮ ಎಂದೇ ಕರೆಯುತ್ತಿದ್ದೆ... ಅವರು ಕೆಲಕಾಲ ನಮ್ಮ ಜೊತೆಯಲ್ಲೇ ಇದ್ದು.. ಊಟ ಹಾಕಿದ ಅನ್ನಪೂರ್ಣೆ)  ಜೊತೆಯಲ್ಲಿ ಕರೆತಂದು ಶಹಾಬಾದ್ ರೈಲು ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದವರು. ಇದು ಅವರೊಡನೆ ನನ್ನ  ಮೊದಲ ಭೇಟಿ...ಮರೆಯಲಾಗದ ಅನುಭವ.

MS ವೆಂಕಟರಾಮು ಅವರ ಮೊದಲ ಭೇಟಿ, ಅಂದೇ ಸಾಯಂಕಾಲ, ಅವರು ಆಫೀಸಿನಿಂದ ಬಂದ ತಕ್ಷಣ. ಅವರ ಆತ್ಮೀಯ ಮಾತು, ನನ್ನನ್ನು ಎಷ್ಟೋ ದಿನದಿಂದ ತಿಳಿದವರೇನೋ ಎಂಬಂತೆ ಇತ್ತು. ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಸಂತೋಷಪಟ್ಟು.."dont worry..guarantee ಕೆಲಸ ಆಗತ್ತೆ " ಅಂತ ಭರವಸೆ ಕೊಟ್ಟವರು.

ಶಹಾಬಾದಿನಲ್ಲಿ ಇದ್ದಷ್ಟು ದಿನ ವೆಂಕಟರಾಮು ಗಿರಿಜಮ್ಮ ದಂಪತಿ ನಮಗೆ (ನಾನು ಮತ್ತು HP ರಂಗನಾಥ ಒಂದೇ ಮನೆಯಲ್ಲಿ ಇರುತ್ತಿದ್ದೆವು ) ಮರದ ನೆರಳಿನಂತೆ ಇದ್ದರು. ಅವರ ಮನೆಯಲ್ಲಿ ಊಟ ಮಾಡಿದ, ವಿಶೇಷ ತಿಂಡಿಗಳನ್ನು ತಿಂದ ದಿನಗಳ ಲೆಕ್ಕವೇ ಇಲ್ಲ. ಮಧ್ಯಾಹ್ನ ಊಟಕ್ಕೆ ಹೋದರೆ ರಾತ್ರಿಯೂ ಅಲ್ಲೇ ಬರಬೇಕೆಂದು ಗಿರಿಜಮ್ಮನ ಆಜ್ಞೆ ಅಂತಲೇ ಹೇಳಬಹುದು. ನಮಗೆ ಸಂಕೋಚವಾಗಿ ಹೋಗದಿದ್ದರೆ ಅದಕ್ಕೂ ಅವರಿಂದ ಬೈಸಿಕೊಳ್ಳಬೇಕಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. 

ವೆಂಕಟರಾಮು ಅವರ ಶಿಸ್ತು, ಅವರ ವೈಶಿಷ್ಟ್ಯ.  ಅವರು ಬಟ್ಟೆ ಹಾಕಿಕೊಳ್ಳುವ ರೀತಿ, ತಮ್ಮ ಸೈಕಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿದ್ದದ್ದು, ಮನೆಗೆ ಬಂದ ತಕ್ಷಣ, ಮಕ್ಕಳು ಅಸ್ತವ್ಯಸ್ತವಾಗಿ ಇಟ್ಟಿದ್ದ ವಸ್ತುಗಳನ್ನು ಸರಿ ಮಾಡುತ್ತಾ... ಜೊತೆ ಜೊತೆಗೆ ಮಕ್ಕಳನ್ನು ಬೈಯ್ಯುತ್ತಾ  (ಈ ಹುಡುಗರು **ಮಕ್ಕಳು ಇಟ್ಟ ಸಾಮಾನು ಇಟ್ಟ ಕಡೆ ಇಡಲ್ಲ) ಸರಿ ಮಾಡುತ್ತಿದ್ದ ರೀತಿ ಮೊದಮೊದಲು ಮುಜುಗರ ಎನಿಸಿದರೂ, ನಂತರದ ದಿನಗಳಲ್ಲಿ ತಮಾಷೆಯಾಗಿ ತೆಗೆದು ಕೊಳ್ಳುತ್ತಿದ್ದೆವು. ಸಂಬಳ ಬಂದೊಡನೆ ಅವರಮ್ಮನಿಗೆ ಹಣ ಕಳಿಸುತ್ತಿದ್ದ ಅವರ ಶಿಸ್ತು ನನಗೆ ಬಲು ಅಚ್ಚು ಮೆಚ್ಚು. 

ಕೆಲ ಕಾಲ ನಾವು canteen ನಲ್ಲಿ ಊಟ ಮಾಡುತ್ತಿದ್ದೆವು. ಆ ದಿನಗಳಲ್ಲಿ ವೆಂಕಟರಾಮು ಅವರು ನಮ್ಮ ಆಫೀಸಿಗೆ ಬಂದು, ಪಕ್ಕದಲ್ಲಿ ನಿಂತು      "ರಂಗನಾಥ್, ಮಧ್ಯಾಹ್ನ ಊಟಕ್ಕೆ ಕ್ಯಾಂಟೀನ್ ಗೆ ಹೋಗ್ಬೇಡಿ, ಆ ರಂಗನನ್ನೂ ಕರಕೊಂಡು ನಮ್ಮನೆಗೆ ಬಂದ್ಬಿಡಿ.. ಮರಿ ಬೇಡಿ ಮತ್ತೆ" .... ಅಲ್ಲಿಗೆ ಮಧ್ಯಾಹ್ನದ ಊಟ ಅವರ ಮನೆಯಲ್ಲಿ ..ಎರಡು ಮಾತಿಲ್ಲ. ಅವರ ಮಾತಿನಲ್ಲಿ ತುಂಬಿರುತ್ತಿದ್ದ ಅಭಿಮಾನ ಮತ್ತು ಪ್ರೀತಿಗೆ ಎಣೆಯಿಲ್ಲ. ನಾವಿಬ್ಬರೂ ಅವರ ಮನೆಗೆ ಊಟಕ್ಕೆ ಹಾಜರು.

ಇನ್ನು ನಾವೇ ಅಡಿಗೆ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ... ಬೆಳಿಗ್ಗೆ ಬೇಗನೆ ಅವರ ಮಕ್ಕಳು ಪುಟ್ಟು (MV ಶ್ರೀನಿವಾಸ್) ಹಾಗೂ ಸುಬ್ಬು (Dr. M V ಸುಬ್ರಹ್ಮಣ್ಯ) ಇಬ್ಬರೂ ಬಂದರೆಂದರೆ ನಮಗೆ ಊಟದ ಚೀಟಿ ಬಂತೆಂದೇ ಅರ್ಥ. "Dear ranga and ranga..Please come to our house for lunch without fail" ಅದರ ಕೆಳಗೆ ಅವರ ಸಹಿ. ಮಕ್ಕಳು ಚೀಟಿ ಕೊಟ್ಟು" ಮಾಮಾ ನಮ್ಮನೆಗೆ ಊಟಕ್ ಬರ್ಬೇಕು... ಅಡುಗೆ ಮಾಡ್ಕೊಬಾರ್ದಂತೆ.. ಅಮ್ಮ ಹೇಳಿದರು".   ಇದು ಗಿರಿಜಮ್ಮನ ಕಡೆಯಿಂದ ಮೆಸೇಜ್.

ಅವರು ತೋರಿಸಿದ ಈ ಪ್ರೀತಿ ಹಾಗೂ ಹಾಕಿದ ಊಟದ ಋಣ ಈ ಜನ್ಮದಲ್ಲಿ ತೀರಿಸಲಾಗದು. ಮನಸಾ ನೆನೆಯುವುದು ಹಾಗೂ ಮನದಲ್ಲೇ ನಮಸ್ಕರಿಸುವುದು ಮಾತ್ರ ಸಾಧ್ಯ.

ಕೊನೆ ಹನಿ:

ರಾತ್ರಿ ಒಂದು ಹೊತ್ತಿನಲ್ಲಿ ಎಚ್ಚರ ಆಯ್ತು. ಕಣ್ಣು ಬಿಟ್ಟ ತಕ್ಷಣ ಕಂಡದ್ದು ಚಂದ್ರ.. ಕಿಟಕಿಯ ಮೂಲಕ. ಇದೇ ಮೊದಲು ಇಂತಹ ದೃಶ್ಯ ನನ್ನ ಕಣ್ಣಿಗೆ ಬಿದ್ದದ್ದು. ಒಂತರ ಖುಷಿ... ಮನಸ್ಸು ತನ್ನಷ್ಟಕ್ಕೆ ತಾನೇ ಚಂದಕ್ಕಿ ಮಾಮ ಚಕ್ಕುಲಿ ಮಾಮ ಮುತ್ತಿನ ಕುಡಿಕೆ ಕೊಡು ಮಾಮ.. ಕೊಡು ಮಾಮ ಅಂತ ಹೇಳ್ತು... ಚಂದಿರನೇತಕೆ ಓಡುವನಮ್ಮ ಮೋಡಕೆ ಬೆದರಿಹನೇ? ಎಂಬ ಪದ್ಯವೂ ಜ್ಞಾಪಕಕ್ಕೆ ಬಂತು. ಚಂದ್ರ ಚಿಕ್ಕಂದಿನಿಂದಲೂ ಕುತೂಹಲ ಮೂಡಿಸಿದವನು... ಹಳ್ಳಿಯಲ್ಲಿ ಬೆಳದಿಂಗಳ ಸಮಯದ ಆಟಗಳು, ಬೆಳದಿಂಗಳ ಕೈತುತ್ತು ಊಟ ಎಲ್ಲವೂ ಒಂದರ ಹಿಂದೆ ಒಂದು ನೆನಪಿನ ಅಂಗಳದಲ್ಲಿ ನಲಿದಾಡಿದವು. 

ಇದೇ ಚಂದ್ರ ಗಣೇಶನ ಹಬ್ಬದ ದಿನ (ಚತುರ್ಥಿಯ ಚಂದಿರ) ಕಣ್ಣಿಗೆ ಬಿದ್ದಿದ್ದರೆ? ವೃಥಾಪವಾದ ಬರಬೇಕಾದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು, ಗಣೇಶನ ಕಥೆಯನ್ನು ಓದಬೇಕಿತ್ತು, ಮಂತ್ರಾಕ್ಷತೆಯನ್ನು ಚಂದಿರನ ಕಡೆಗೆ ಎಸೆದು, ಗಣೇಶನಿಗೆ 21 ನಮಸ್ಕಾರ ಮಾಡಬೇಕಿತ್ತು. ಆಗೆಲ್ಲ ಚಂದಿರನನ್ನು ನೋಡಬಾರದೆಂದು ಎಷ್ಟೇ ಮನಸು ಮಾಡಿದರು, ಹೇಗೋ ನೋಡುತ್ತಿದ್ದದ್ದು ಮಾತ್ರ ಸತ್ಯ. ಈಗ ಆ ಮನಸ್ಥಿತಿ ಇಲ್ಲ ಹಾಗಾಗಿ ಚಂದಿರನ ನೆನಪೇ ಹಬ್ಬದ ದಿನ ಬರುವುದಿಲ್ಲ. ಕಾಲಕಳೆದಂತೆ, ಬುದ್ಧಿ ಬೆಳೆದಂತೆ... ಚಿಂತನೆಗಳು ಬದಲಾಗುತ್ತವೆ ಎನ್ನುವುದು ಎಷ್ಟು ಸತ್ಯ ಅಲ್ಲವೇ?

ನಾ ಕಂಡ ಚಂದಮಾಮನ ಚಿತ್ರ. . ಇಗೋ ನಿಮಗಾಗಿ


ನಮಸ್ಕಾರ....


D C Ranganatha Rao

9741128413



    

    

Comments

  1. ತಮ್ಮ ಮುದನೀಡಿದ ಮನಸ್ಸುಗಳು ಶೀರ್ಷಿಕೆ ಉತ್ತಮವಾಗಿ ಮೂಡಿ ಬಂದಿದೆ.ತಮಗೆ ಧನ್ಯವಾದಗಳು.ಕುಣಿಗಲ್ ಹನುಮಂತರಾಯಪ್ಪ, ನಾಗವಲ್ಲಿ ನರಸಿಂಗರಾಯರು ಮತ್ತು ಶಹಾಬಾದಿನ ವೆಂಕಟರಾಮು ಮತ್ತು ಗಿರಿಜಮ್ಮ ಇವರುಗಳ ಪ್ರೀತಿ ಮತ್ತು ಅಕ್ಕರೆಯಿಂದ ತಮ್ಮಮನಸ್ಸಿಗೆ ಮುದ ನೀಡಿದ ಬಗ್ಗೆ ವಿವರಣೆ ಚೆನ್ನಾಗಿ ಮೂಡಿ ಬಂದಿದೆ.ಧನ್ಯವಾದಗಳು ಮತ್ತು ಎಲ್ಲಾ ಒಳ್ಳೆಯದಾಗಲಿ.... ದೇವೇಂದ್ರಪ್ಪ

    ReplyDelete
  2. ನೆನಪುಗಳು ಮಧುರ

    ReplyDelete
  3. 👌👌👌ಬದುಕಿನಲ್ಲಿ ಬಂದು ಹೋದ ಎಷ್ಟು ಜನ ನಮ್ಮ ಮೇಲೆ ಪರಿಣಾಮ ಬೀರುತ್ತಾರೆ ಅಲ್ಲವಾ? ಇಂದು ನಾವೇನಾಗಿದ್ದೇವೋ ಒಳ್ಳೆಯವರೋ ಕೆಟ್ಟವರೋ ಪರೋಪಕಾರಿಗಳೋ ಅದಕ್ಕೆ ಇಂತಹವರ ಕೊಡುಗೆಯಂತೂ ಇದ್ದೇ ಇರುತ್ತದೆ

    ReplyDelete
  4. ನಾಗೇಂದ್ರ ಬಾಬು13 March 2025 at 15:24

    ನಿಮಗೆ ಸಿಕ್ಕ ನಿಷ್ಕಲ್ಮಶ ಹಿರಿಯ ಜೀವಗಳು ಅದನ್ನು ಮರೆಯದ ಹಾಗೂ ಬರವಣಿಗೆಯ ಮೂಲಕ ಆ ಕಾಲದ ಸನ್ನಿವೇಶವನ್ನು ಚಿತ್ರಿಸಿದ
    ನಿಮ್ಮ ನೆನಪಿನ ಶಕ್ತಿ ಓದುಗರ ಮನಸಿಗೂ ಮುದ ನೀಡುವಲ್ಲಿ ಯಶಸ್ವಿಯಾಗಿದೆ
    ನಿಜಕ್ಕೂ ಈಗಿನ PG ಯುಗ ಹಾಗೂ ಅಂದಿನ
    ಪ್ರೀತಿ ಯುಗಕ್ಕೂ ಅಜಗಜಾಂತರ
    ವ್ಯತ್ಯಾಸವಿದೆ
    ಬಾಬು

    ReplyDelete
  5. 👏👏👏👏👏

    ReplyDelete
  6. ಈಗಿನ ತಲೆಮಾರಿಗೆ ಸಂಬಂಧಗಳ ಪ್ರೀತಿ ಆತ್ಮೀಯತೆ ಮಹತ್ವವೇ ಗೊತ್ತಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಯಾರಿಗೂ ಬಿಡುವಿಲ್ಲ ಕಾಲದ ಜೊತೆ ಓಡುವವರು ಎಲ್ಲಾ.

    ಇತರರ ಮನೆ ಮದುವೆಗೆ ಹೋಗಿ ಒಂದೆರಡು ದಿವಸಗಳ ಕಾಲ ಇರುವುದಿಲ್ಲ. ಒಂದೆರಡು ದಿವಸ ಯಾಕೆ ಒಂದೆರಡು ಗಂಟೆಗಳ ಕಾಲ ಕೂಡ ಕಳೆಯಲು ಯಾರಿಗೂ ಬಿಡುವಿಲ್ಲ ಆಸಕ್ತಿ ಇಲ್ಲ. ಇದು ಉತ್ತಮ ಬೆಳವಣಿಗೆಯು ಸಹ ಅಲ್ಲ.

    ಲೇಖನದಲ್ಲಿ ಕಂಡು ಬಂದ ಪ್ಯಾರಿಸ್ ಚಾಕ್ಲೇಟ್ ನ ಚಿತ್ರ ಮನಸ್ಸಿಗೆ ಮುದನೀಡಿ ನನ್ನನ್ನು ಹಿಂದಿನ ದಿನಗಳಿಗೆ ಕೊಂಡೊಯಿತು
    ಹೊಸ ಮನ್ವಂತರದ ಉದಯವಾಗಿ ಎಲ್ಲರ ಹೃದಯದಲ್ಲಿ ಸ್ನೇಹ ಸಂಬಂಧ ಪ್ರೀತಿ ಅಪ್ಯಾ ಯತೆಗೆ ಅವಕಾಶ ಉಂಟಾಗಲಿ ಎಂಬ ಹಾರೈಕೆಯೊಡನೆ.

    ಗುರು ಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ