ಸವಿ ನೆನಪುಗಳು ಬೇಕು-ಸವಿಯಲೀ ಬದುಕು
ಫೆಬ್ರವರಿ 3ನೇ ವಾರ ನನ್ನಣ್ಣನ ಮಗಳು ವಾಣಿ ಮತ್ತು ಶಶಿಧರ್ ದಂಪತಿಗಳ ಮಗ ಆಕಾಶನ ಮದುವೆ... ಚೆನ್ನೈಯಲ್ಲಿ.
ಮದುವೆ ಆಧುನಿಕತೆ ಹಾಗೂ ಪರಂಪರೆ ಎರಡರ ಮಿಳಿತವಾಗಿತ್ತು. ಸಂತೋಷದಿಂದ ಕೂಡಿತ್ತು.. ಹಾಗೇ ಒಂದಷ್ಟು ನೆನಪುಗಳನ್ನು ಮೇಲುಕುಹಾಕುವಂತೆ ಮಾಡಿತು.
ಚೆನ್ನೈ ( ಅಂದಿನ ಮದರಾಸು) ನನ್ನ ಓದು ಮುಗಿದ ನಂತರ(1967) ಮೊದಲ ಬಾರಿಗೆ ನನ್ನ ಕಾರ್ಯಕ್ಷೇತ್ರವಾದ ಕಾರ್ಖಾನೆಯ ಸಂಪರ್ಕ ಕೊಟ್ಟ ಊರು. ಪೆರಂಬೂರಿನಲ್ಲಿರುವ ದಕ್ಷಿಣ ರೈಲ್ವೆಯ ಕಾರ್ಖಾನೆಯಲ್ಲಿ ಭಾರತ ಸರ್ಕಾರ ಪ್ರಾಯೋಜಿತ apprentice ಯೋಜನೆಯಲ್ಲಿ ಕೆಲಸ, ಯಾವ ಅರ್ಜಿಯೂ ಸಲ್ಲಿಸದೆ, ಸಂದರ್ಶನವೂ ಇಲ್ಲದೆ, ಕೇವಲ ಅರ್ಹತೆಯ ಆಧಾರದ ಮೇಲೆ ಸಿಕ್ಕ ಅವಕಾಶ. ತಿಂಗಳಿಗೆ 150 ರೂಪಾಯಿ ವೇತನ ಪಡೆದು, ಒಂದಷ್ಟು ಹೊಸದನ್ನು ಕಲಿತು, ಒಂದಷ್ಟು ಕಾಲಹರಣವನ್ನು ಮಾಡಿ ವರ್ಷ ಪೂರೈಸಿದ್ದು. ಆಗ ಪರಿಚಯವಾಗಿ ಈಗಲೂ ಉಳಿದಿರುವ ಸ್ನೇಹ ಅಂದರೆ ಅದು S ರಾಮನ್ ನದು.
ವಾಣಿ ಲಗ್ನ ಪತ್ರಿಕೆ ಕೊಟ್ಟಿದ್ದು ಪ್ರಾಯಶಃ ಡಿಸೆಂಬರ್ ಮೊದಲ ವಾರದಲ್ಲಿ... ಆಗಲೇ ರಾಮನಿಗೆ ವಿಷಯ ತಿಳಿಸಿದ್ದೆ. ಆಗ ಅವನು ಆಸ್ಟ್ರೇಲಿಯಾದಲ್ಲಿದ್ದ... ಮದುವೆಯ ಹೊತ್ತಿಗೆ ವಾಪಸ್ ಬರುವನೆಂದೂ ಖಂಡಿತವಾಗಿಯೂ ಭೇಟಿಯಾಗುವುದೆಂದು ನಿರ್ಧಾರ ಮಾಡಿದೆವು. ನಮ್ಮ ಭೇಟಿಯು ನಿಯಮಿತವಾಗಿಲ್ಲದಿದ್ದರೂ, ಸಂಪರ್ಕ ಮಾತ್ರ ತಕ್ಕಮಟ್ಟಿಗೆ ಇತ್ತು.
ಚೆನ್ನೈಗೆ ಮೊದಲ ಮದುವೆಗೆ ಹೋದದ್ದು ರಾಮನ್ ದಂಪತಿಗಳ ಮಗಳ ಮದುವೆಗೆ. ಆಗ ಮಾತುಕತೆಗೆ ಅಷ್ಟಾಗಿ ಅವಕಾಶವಿರಲಿಲ್ಲ...
ಎರಡನೆಯ ಸಲ ಮದುವೆಗೆ ಅಂತ ಹೋದದ್ದು ನನ್ನ ಪುಟ್ಟ ಭಾವಮೈದುನ ನರೇನಿಯ ( Dr. HR ನರೇಂದ್ರ) ಮದುವೆಗೆ. ನರೇನಿ ಮದುವೆಯ ವಿಶೇಷತೆ ಎಂದರೆ.... ಕುವೆಂಪು ಪ್ರಣೀತ ಮಂತ್ರ ಮಾಂಗಲ್ಯದ ರೀತಿಯಲ್ಲಿ ಸರಳ ಮದುವೆಯಾದದ್ದು.
ಪ್ರತಿಜ್ಞಾ ವಿಧಿಯ ಒಂದು ಭಾಗವನ್ನು ಭೋದಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದು ತುಂಬಾ ಖುಷಿ ಎನಿಸಿತ್ತು.
ನಾನು ಸರಳ ಮದುವೆಯ ಪ್ರತಿಪಾದಕನಾದರೂ, ನನ್ನ ಮದುವೆಯನ್ನು ಮೂರು ದಿನಗಳ ಬದಲಿಗೆ ಒಂದು ದಿನಕ್ಕೆ ಇಳಿಸಿದ್ದು.. ಮತ್ತು reception ನಲ್ಲಿ ಒಂದು ಕಡೆ ಕೂಡದೆ ಎಲ್ಲರ ಜೊತೆ ಮಾತನಾಡುತ್ತಾ ಬೆರೆತದ್ದು ಮಾತ್ರ ನಾನು ಮಾಡಲು ಸಾಧ್ಯವಾದ ಬದಲಾವಣೆ.
ನನ್ನ ಜೊತೆಯಲ್ಲಿ ನನ್ನ ಹೆಂಡತಿ ಇರಲಿಲ್ಲ ಎಂಬ ನಿರಾಸೆ ಕೊಂಚ ಕಾಡಿದರೂ... ಸಂಭ್ರಮಕ್ಕೇನೂ ಕೊರತೆಯಾಗಲಿಲ್ಲ. ಆ ಮದುವೆಗೂ ನನ್ನ ಸ್ನೇಹಿತ ರಾಮನ್ ಬಂದು ನನ್ನನ್ನು ಹಾಗೂ ನವದಂಪತಿಗಳನ್ನು ಭೇಟಿ ಮಾಡಿ ಹೋದದ್ದು ಸವಿ ನೆನಪು.
ಈ ಬಾರಿ ನಾವೇ ರಾಮನ್ ನ ಮನೆಗೆ ಹೋಗುವುದೆಂದು ನಿರ್ಧಾರವಾಯಿತು.
ನಾವಿಬ್ಬರೂ ಅವರ ಮನೆ ತಲುಪುವಷ್ಟರಲ್ಲಿ ಎರಡು ಸಲ ಫೋನ್ ಮಾಡಿ, ನಮಗಾಗಿ ಬಾಗಿಲ ಬಳಿ ಕಾಯುತ್ತಿದ್ದ.
ಅಲ್ಲಿಂದ ಶುರುವಾದ ಮಾತು...ನಮ್ಮನ್ನು ಬೀಳ್ಕೊಡಲು ಅದೇ ಜಾಗಕ್ಕೆ ಬರುವ ತನಕ ಮುಂದುವರಿದಿತ್ತು. ಸ್ವಲ್ಪವೇ ಸಮಯ ಉಭಯಕುಶಲೋಪರಿ ಆದ ನಂತರ ಜಾರಿದ್ದು ಹಳೆಯ ಕಾಲಕ್ಕೆ... ನೆನಪುಗಳ ಸರಮಾಲೆ ಕೋಸುತ್ತಾ.
ಮದರಾಸಿನ, ವಿಲ್ಲಿವಕ್ಕಂ ಎಂಬ ಭಾಗದಲ್ಲಿ ನಾವಿದ್ದ ಮನೆ, 5 ಜನ ಸಹವಾಸಿಗಳು, ಸಂಜೆ 6ಕ್ಕೇ ಊಟಕ್ಕೆ ಹೊರಡುತ್ತಿದ್ದದ್ದು, ಶಕ್ತಿ ಭವನದ ಊಟ, ನೀರು ಮಜ್ಜಿಗೆ. ದಾರಿಯಲ್ಲಿ ಹೋಗುತ್ತಾ ತಮಿಳು ಬರಹದ ಬೋರ್ಡುಗಳನ್ನು ಕಷ್ಟಪಟ್ಟು ಓದುತ್ತಾ... ತಮಿಳು ಕಲಿತವನು ನಾನು... ಗುರು ರಾಮನ್.
ಕಾರ್ಖಾನೆಯಲ್ಲಿ ನಮ್ಮ ಉಸ್ತುವಾರಿ ಮಾಡುತ್ತಿದ್ದವರು ಫೋರ್ ಮನ್ ..ಫೆರೀರೋ... ಒಬ್ಬ ಆಂಗ್ಲೋ ಇಂಡಿಯನ್. ಅವರ ಎರಡು ಹೆಣ್ಣು ಮಕ್ಕಳಿಗೆ ಹಿಂದಿ ಪಾಠವನ್ನು ಹೇಳಿಕೊಡಲು ಪುಸಲಾಯಿಸಿ, ಒಪ್ಪಿಸಿದವರು. ಕಾರ್ಖಾನೆ ನೋಡಲು ಬರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು, ಕಾರ್ಖಾನೆಯ ಸುತ್ತು ಹಾಕಿಸಿ ಅಲ್ಲಿನ ವಿಶೇಷತೆಗಳನ್ನು ತಿಳಿಸುವ ಜವಾಬ್ದಾರಿ ಕೊಟ್ಟು ಪ್ರೋತ್ಸಾಹಿಸಿದವರು. ಕೇವಲ 20 ತಿಂಗಳ ಹಿಂದೆ ವಿದ್ಯಾರ್ಥಿಯಾಗಿ.. ಎಜುಕೇಶನ್ ಟೂರ್ ಮಾಡಿದಾಗ ಕುತೂಹಲದಿಂದ (ಕಣ್ಣು ಬಾಯಿ ಬಿಟ್ಕೊಂಡು) ಎಲ್ಲವನ್ನು ನೋಡುತ್ತಿದ್ದ ನನಗೆ... ಸ್ಥಾನ ಬದಲಾವಣೆ, ಹೆಮ್ಮೆ ಎನಿಸುತ್ತಿತ್ತು.
ಅಲ್ಲಿನ ಟೂಲ್ ರೂಮಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹನೀಯರು ನನಗಾಗಿ ನನ್ನ ಹೆಸರು engrave ಮಾಡಿಕೊಟ್ಟ stainless steel ನ ಒಂದು ಪಟ್ಟಿ ಈಗಲೂ ನನ್ನ ಬಳಿ ಇದೆ.. ಅದು ನನಗೆ ಅಮೂಲ್ಯ.
ನಮ್ಮ ಮದುವೆಯಾದದ್ದು 28.02.1979 (ಪಾಲ್ಗುಣ ಮಾಸ ಶುಕ್ಲ ಪಕ್ಷ ಬಿದಿಗೆ ....ನಾವು ಆಚರಿಸುವ ದಿನ), ಅಂದರೆ ನಮ್ಮ ದಾಂಪತ್ಯ ಜೀವನ ಯಾನ 46 ವರ್ಷಗಳು ಮುಗಿದವು. ಸಂಸಾರ, ಸಾಗರ ಎನ್ನುವುದು ಎಷ್ಟು ನಿಜ ಅಲ್ಲವೇ? ಈ ಸಾಗರ ಯಾನದಲ್ಲಿ ಅಲೆಗಳ ಏರಿಳಿತಗಳು, ಶಾಂತ ಸಮುದ್ರ ಹಾಗೂ ಬಿರುಗಾಳಿಯನ್ನೂ ಎದುರಿಸಿ, ಜೀವನವನ್ನು ಅನುಭವಿಸಿದ್ದೇವೆ. ಎಷ್ಟೋ ಮೌನ ಯುದ್ಧಗಳು, ಕೆಲ ಸಲ ವಾಗ್ಯುದ್ಧಗಳೂ ನಡೆದಿವೆ, ಆದರೆ ಇದ್ಯಾವುದೂ ಜೀವನ ಮುಂದುವರಿಸಲು ಅಡ್ಡಿಯಾಗಿಲ್ಲ, ಎನ್ನುವುದು ಹೆಮ್ಮೆಯ ಹಾಗೂ ಸಮಾಧಾನದ ಸಂಗತಿ.
ನನ್ನ ಮದುವೆಯ ಸಮಯದಲ್ಲಿ ಆರ್ಥಿಕ ಮುಗ್ಗಟ್ಟು ಇದ್ದದ್ದು ಸತ್ಯ. ಮದುವೆಗೆ ದೊಡ್ಡ ಸೀರೆ ಎಂದು ಕೊಡಿಸಿದ್ದು 250 ರೂಪಾಯಿ ಬೆಲೆಯದ್ದು..( ಅದೂ ಕಂತಿನ ಮೇಲೆ ಕೊಂಡದ್ದು). ಇಷ್ಟಪಟ್ಟು ಮದುವೆಯಾದದ್ದಾದರೂ... ಇಷ್ಟದ ಸಿಂಹ ಪಾಲು ವಿಜಯಳದು. ಅವಳೇ ಹೇಳಿದಂತೆ ಆ ಇಷ್ಟದ ಬೀಜವನ್ನು ಅವಳ ಮನದಲ್ಲಿ ನೆಟ್ಟವರು, ಅವಳ ಅಮ್ಮ... ಅದನ್ನು ಅನುಮೋದಿಸಿದವರು ಸೋದರ ಮಾವ ಸುಬ್ಬರಾಯರು ಹಾಗೂ ಅಜ್ಜಿ ಸೀತಮ್ಮ. ಆ ಬೀಜ ಮೊಳೆತು ಗಿಡವಾದ ಸಂದರ್ಭದಲ್ಲಿ, ನಾನು ಭೇಟಿಯಾದದ್ದು. ಅವಳ ಆಳವಾದ ಪ್ರೀತಿ, ಅದನ್ನು ಸಾಕಾರಗೊಳಿಸಲು ಮಾಡುತ್ತಿದ್ದ ಪೂಜೆಗಳನ್ನು ಕಂಡು ಮಾರು ಹೋದವನು ನಾನು. ಎಷ್ಟೋ ಸಲ ಅನಿಸಿದ್ದಿದೆ ಅವಳ ಆ ಮಟ್ಟದ ಪ್ರೀತಿ ಅಭಿಮಾನಕ್ಕೆ ನಾನು ಅರ್ಹನೆ ಎಂದು?
Marriages are made in heaven..
ಮದುವೆ ನಿಶ್ಚಯ ಆಗುವುದು ಸ್ವರ್ಗದಲ್ಲಿ ಎಂದಾದರೂ, ಅದು ಮೂರ್ತಗೊಳ್ಳುವುದು ಮಾತ್ರ ಇಲ್ಲೇ ಈ ಭೂಮಿಯಲ್ಲೇ. ಎಲ್ಲ ಕಾಲಕ್ಕೂ ಸಲ್ಲುವ ಈ ಮಾತು, ಈ ಕಾಲಕ್ಕಂತೂ ಇನ್ನೂ ಹೆಚ್ಚು ಪ್ರಸ್ತುತ. ಈಗಂತೂ ದೇಶ ವಿದೇಶಗಳ... ಸಪ್ತಸಾಗರಗಳ ಆಚೆಯ ಹೆಣ್ಣು ಗಂಡು ಒಂದಾಗಿ ಮದುವೆಯಾಗಿ ಬಾಳುವುದನ್ನು ನೋಡಿದ್ದೇನೆ. ಬೆಟ್ಟದ ಮೇಲಿನ ನೆಲ್ಲಿ ಕಾಯಿ.. ಸಮುದ್ರದೊಳಗಿನ ಉಪ್ಪು.. ಎತ್ತಣಿಂದೆತ್ತ ಸಂಬಂಧವಯ್ಯ...
70 ವರ್ಷಗಳ ದೀರ್ಘಕಾಲ ದಾಂಪತ್ಯ ಜೀವನವನ್ನು ನಡೆಸಿದ ತುಮಕೂರಿನ ಸುಬ್ಬರಾಯರು ಮತ್ತು ಕಮಲಮ್ಮ ದಂಪತಿಗಳ ಸಂಭ್ರಮದ ಕಾರ್ಯಕ್ರಮ, ನಡೆಯಿತು..
ಅದರಲ್ಲಿ ಪಾಲ್ಗೊಳ್ಳುವ ಯೋಗ ನನ್ನದಾಗದಿದ್ದರೂ, ಎಲ್ಲ ವಿಷಯಗಳನ್ನು ತಿಳಿದು ಸಂಭ್ರಮಿಸಿದವರು ನಾವು. ಎಂಥಾ ಅದ್ಭುತ ಜೋಡಿ...
ಚಿಕ್ಕಂದಿನಲ್ಲಿ ನನ್ನ ಹಳ್ಳಿಯಲ್ಲಿ ನೋಡುತ್ತಿದ್ದ ಮದುವೆಯ ಮೆರವಣಿಗೆಯ ಚಿತ್ರ ಹಸಿರಾಗಿದೆ.
ಅದರಲ್ಲೂ ಮದುವೆ ಗಂಡಿಗೆ ಹಾಕಿದ ಪೇಟ ಅದರ ಮೇಲೆ ಕಟ್ಟಿರುವ ಬಾಸಿಂಗ, ಹಾಗೆ ಹುಡುಗಿಗೆ ತಲೆ ತುಂಬಾ ಹೂವು ಮುಡಿಸಿ ತಗ್ಗಿಸಿದ ತಲೆಗೆ ಕಟ್ಟಿದ ಬಾಸಿಂಗದ ಚಿತ್ರಣವು ನೆನಪಿದೆ.
ನನ್ನಕ್ಕ ಗಿರಿಜಾಂಬ ಮದುವೆಯಾದದ್ದು ಹಳ್ಳಿಯಲ್ಲಿ... ಆಗಷ್ಟೇ ಹಳ್ಳಿಗೆ ಕರೆಂಟ್ ಬಂದಿತ್ತು... ಮದುವೆ ಮಂಟಪದ ಬಳಿ ಒಂದೇ ಒಂದು ವಿದ್ಯುತ್ ದೀಪ ಇಳಿ ಬಿಟ್ಟಿದ್ದು.... ತೆಗೆದ ಫೋಟೋದಲ್ಲಿ ಬೇರೇನೂ ಕಾಣಿಸದೆ... ಬರೀ ಒಂದು ದೀಪವೇ ಇದ್ದದ್ದು.... ಇಂದಿಗೂ ಕಚಗುಳಿ ಕೊಡುವ ನೆನಪು.
ನನ್ನಣ್ಣ ಚೂಡಣ್ಣನ ಮದುವೆಯಲ್ಲಿ, tie ಕಟ್ಟಿಕೊಂಡು ಸಂಭ್ರಮಿಸಿದ ಕ್ಷಣಗಳು ನೆನಪಿದೆ.
ಶಹಾಬಾದಿನ ನಮ್ಮ ಬ್ರಹ್ಮಚಾರಿಗಳ ಗುಂಪಿನಲ್ಲಿ ಮೊದಲ ಮದುವೆಯಾದದ್ದು... ರಘು(KS ರಘುನಾಥ್) ಮೈಸೂರಿನಲ್ಲಿ. ನಮ್ಮ ಒಂದು ಗುಂಪು, ಆ ಮದುವೆಯಲ್ಲಿ ಪಡೆದ ವಿಶೇಷ ಆತಿಥ್ಯ... ಅದರಲ್ಲೂ ರಘುವಿನ ಭಾವ.. ಅತ್ತಂಬಿ.... ಅವರ ತಮಾಷೆಯ ಮಾತುಗಳು ಹಾಗೂ ಊಟದ ಸಮಯದಲ್ಲಿ ಕೊಡುತ್ತಿದ್ದ ಸಲಹೆಗಳು... ವಾವ್. ಆಗಿನ ಒಂದು ಪ್ರಸಂಗ... ನನ್ನ ಸ್ನೇಹಿತ ಸತ್ತಿ ( KR ಸತ್ಯನಾರಾಯಣ) ಯಾವುದೋ ಮಾತ್ರೆಯನ್ನು ನುಂಗಲು ಅಣಿಯಾಗುತ್ತಿದ್ದ... ಆಗ ಬಂದ ಅತ್ತಂಬಿ ಏನದು ಎಂದು ಕೇಳಿದ್ದಕ್ಕೆ... ಸತ್ತಿಯ ತರಲೆ ಉತ್ತರ.. ವಿಷ ತೆಗೆದುಕೊಳ್ಳುತ್ತಿದ್ದೇನೆ... ಅತ್ತಂಬಿಯ ತಕ್ಷಣದ ತಮಾಷೆಯ ಪ್ರತಿಕ್ರಿಯೆ positively take it.... ನಾವೆಲ್ಲ ನಕ್ಕಿದ್ದೇ...ನಕ್ಕಿದ್ದು.
ಮದುವೆಗೆ ಬೇಕಾದ ಸಾಮಾನುಗಳನ್ನು ತರೋದು, ಸಂಬಂಧಿತ ಕೆಲಸಗಳೆಲ್ಲವನ್ನು ಮಾಡುವುದು... ಊಟಕ್ಕೆ ಬಡಿಸುವುದನ್ನೊಳಗೊಂಡು ಎಲ್ಲ ಕೆಲಸವನ್ನು ನಿಭಾಯಿಸುತ್ತಿದ್ದ ಕಾಲದಿಂದ ಮೊದಲ್ಗೊಂಡು ಈಗ ಹೋಗಿ ಊಟ ಮಾಡಿ ಬರುವುದಷ್ಟೇ ಆಗಿರುವವರೆಗೆ ಬದಲಾವಣೆಯನ್ನು ಕಂಡಾಗಿದೆ. ಕಾಲಕ್ಕೆ ತಕ್ಕಂತೆ ಕುಣಿತ.
ಮದುವೆ ಬೇರೆ ಬೇರೆ ಚಿಂತನೆಗಳಿಂದ ಕೂಡಿರುವ ಮನಸ್ಸುಗಳ ವಿಚಿತ್ರ ಸಂತೆ ಎಂದೇ ನನ್ನ ನಂಬಿಕೆ. ಗಂಡು ಹೆಣ್ಣಿಗೆ ಅವರ ಮಧುರ ಕ್ಷಣಗಳ ಸಂಭ್ರಮ, ಹಾಗೆ ವಿಧವಿಧ ಭಂಗಿಗಳಲ್ಲಿ ಚಿತ್ರಣ ಮಾಡಿಸಿಕೊಳ್ಳುವ ಆಸೆ. ಕನ್ಯಾ ಪಿತೃಗಳಿಗೆ ಮದುವೆ ಕಾರ್ಯವನ್ನು ನಿಭಾಯಿಸುವ ಜವಾಬ್ದಾರಿ. ಅದರಲ್ಲೂ ಹಣಕಾಸಿನ ಮುಗ್ಗಟ್ಟಿದ್ದರಂತೂ ಅದರದೇ ಒಂದು ದೊಡ್ಡ ಚಿಂತೆ. ಹೆಂಗಸರಿಗೆ ತಮ್ಮ ರೇಷ್ಮೆ ಸೀರೆ, ಆಭರಣಗಳ ಪ್ರದರ್ಶನದ ಸಂಭ್ರಮ. ಬೀಗರ ಕಡೆಯವರಿಗೆ ತಮ್ಮ ಘನತೆಯ ಚಿಂತೆ. ಹರೆಯದ ಹುಡುಗ ಹುಡುಗಿಯರಿಗೆ, ತಮ್ಮನ್ನು ಪ್ರದರ್ಶಿಸಿಕೊಂಡು ಮಿಂಚುವ ಮಹದಾಸೆ, ಸಾಧ್ಯವಾದರೆ ಸಂಗಾತಿಯನ್ನು ಹುಡುಕುವ ಆಸೆ. ಅಡಿಗೆ ಮಾಡುವವರಿಗೆ, ರುಚಿ ಅಡಿಗೆ ಮಾಡುವ ಹಾಗೂ ಬಂದ ಜನಗಳನ್ನು ನಿಭಾಯಿಸುವ ಜವಾಬ್ದಾರಿ, ಓಲಗದವರಿಗೆ ಹೆಚ್ಚು ಬಕ್ಷಿಸು ಪಡೆಯುವ ಗುರಿ... ಫೋಟೋಗ್ರಾಫರ್ ಗಂತೂ ವಿಶಿಷ್ಟ ಸ್ಥಾನ, ಇನ್ನು ಬಂದ ನೆಂಟರಿಷ್ಟರಿಗೆ, ಸ್ನೇಹಿತರಿಗೆ ಊಟದ ಬಗ್ಗೆ ಚಿಂತೆ. ಇದರ ಮಧ್ಯೆ ಮದುವೆ ಮಾಡಿಸುವ ಶಾಸ್ತ್ರಿಗಳಿಗೆ.. ಇಟ್ಟ ಮುಹೂರ್ತವನ್ನು ಸಾಧಿಸುವ ಗುರುತರ ಜವಾಬ್ದಾರಿ.
ಸಾಮಾನ್ಯವಾಗಿ ಮದುವೆಗಳು ಸಂತೋಷ ಸಂಭ್ರಮದಿಂದ ಕೂಡಿದ್ದರೂ, ಕೆಲವು ಮದುವೆಗಳಲ್ಲಿ ನೋವಿನ ಘಟನೆಗಳು ನಡೆಯುವುದುಂಟು. ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪಗಳು, ಕೊಡುಕೊಳ್ಳುವಿಕೆಯಲ್ಲಿ ಆದ ವ್ಯತ್ಯಾಸ, ಧುತ್ತೆಂದು ಮೇಲೆ ಏಳುವ ಮಾನಾಪಮಾನದ, ಘನತೆಯ ಪ್ರಶ್ನೆಗಳು. ಈಗಂತೂ ಇವೆಲ್ಲ ಸಾಕಷ್ಟು ಕಡಿಮೆಯಾಗಿವೆ.
ನಮ್ಮ ಪರಿಚಯದ ಒಂದು ಮದುವೆ, ಸಾಕಷ್ಟು ಮುತುವರ್ಜಿಯಿಂದ ಎಲ್ಲಾ ತಯಾರಿಗಳು ನಡೆದಿದ್ದವು. ದೇವರ ಪೂಜೆಗೆ ಇಟ್ಟಿದ್ದ ಮಾಂಗಲ್ಯವೇ ಕಾಣೆಯಾಗಿತ್ತು. ಹುಡುಕುವ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಮನೆಯವರ ಮನಸ್ಥಿತಿ ಹೇಗಿರಬೇಡ, ಗುಸುಗುಸು ಮಾತುಗಳು, ಆತಂಕ, ಅಸಹಾಯಕತೆ, ತಕ್ಷಣಕ್ಕೆ ಮಾಂಗಲ್ಯ ಹೊಂದಿಸುವ ಜವಾಬ್ದಾರಿ, ಜೊತೆಗೆ ಅಪಶಕುನ ಎಂದು ಹೇಳುವ ಕೆಲ ಜನರ ಮಾತುಗಳು. ಪಾಪ ಅವರ ಮನಸ್ಥಿತಿ.. ಅದರಲ್ಲೂ ಮದುವೆ ಹುಡುಗಿಯ ಮನಸ್ಸಿನ ತಲ್ಲಣ ಹೇಗಿರಬೇಡ. ಆ ಸಮಯದಲ್ಲಿ ಮಲ್ಲೇಶ್ವರದ ನಾಲ್ಕಾರು ಅಂಗಡಿಗಳಿಗೆ ಎಡತಾಕಿ... ಅವರ ಸಂಪ್ರದಾಯಕ್ಕೆ ಬೇಕಾದಂತಹ ವಿಶಿಷ್ಟ ಮಾಂಗಲ್ಯವನ್ನು ಹುಡುಕಿ ತಂದದ್ದು ಸಾಹಸವೇ ಸರಿ. ಹೇಗೋ ಆತಂಕದ ಕ್ಷಣಗಳು ಮುಗಿದವು.
“ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು..” ವಿ. ಸೀತಾರಾಮಯ್ಯನವರು ಬರೆದ ಈ ಹಾಡನ್ನು ಬಹಳಷ್ಟು ಕಾಲ ಮದುವೆಗಳಲ್ಲಿ ಹೆಣ್ಣು ಒಪ್ಪಿಸುವ ಸಮಯದಲ್ಲಿ ಹಾಡಿ.. ಭಾವನಾತ್ಮಕ ಕ್ಷಣಗಳನ್ನು ಉಂಟುಮಾಡಿದ್ದಿದೆ. ಇನ್ನು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಬರೆದಿರುವ ಗಂಡ ಹೆಂಡಿರ ಮಧ್ಯದ ವಿವಿಧ ಆಯಾಮಗಳ ಭಾವನೆಗಳ ಕವನಗಳಂತೂ ಅತಿ ಸುಂದರ. ಅಶ್ವಥ್ ಅವರ ರಾಗ ಸಂಯೋಜನೆಯ ಆ ಹಾಡುಗಳನ್ನು ಕೇಳುತ್ತಾ ಎಷ್ಟೋ ಸಲ ಕಲ್ಪನಾ ಲೋಕದಲ್ಲಿ ಮುಳುಗಿದ್ದಿದೆ.
ಸವಿ ನೆನಪುಗಳು ಬೇಕು ಸವಿಯಲೀ ಬದುಕು (ಬದುಕನ್ನು ಸವೆಸಲು ಎಂದು ಹೇಳಿದರೂ ಅತಿಶಯೋಕ್ತಿ ಆಗಲಾರದೆಂದು ನನ್ನ ಭಾವನೆ)
ಜೀವನದ ಸಂಧ್ಯಾಕಾಲದಲ್ಲಿ... ಸಮಕಾಲೀನ ವ್ಯಕ್ತಿಗಳ ಅನುಪಸ್ಥಿತಿಯಲ್ಲಿ.... ಕಳೆದ ಕಾಲದ ಸವಿನೆನಪುಗಳನ್ನು... ಮೆಲುಕು ಹಾಕುತ್ತಾ ಸಂತೋಷಪಡುವುದೇ.. ಒಂಟಿತನವನ್ನು ಕಳೆಯಲು ಇರಬಹುದಾದ ಒಂದು ಅಪ್ಯಾಯಮಾನ ಮಾರ್ಗ ಎಂದು ಇತ್ತೀಚಿಗೆ ಓದಿದೆ. ಎಷ್ಟು ಸತ್ಯ ಅಲ್ಲವೇ? ನನ್ನ ಲೇಖನಗಳಿಗೆ ಸ್ಫೂರ್ತಿ ನೆನಪುಗಳೇ - ಅದು ಸಿಹಿ ಇರಲಿ, ಕಹಿ ಇರಲಿ.
ಅಂತಹ ನೆನಪುಗಳು ನಮಗೆಲ್ಲ ಯಥೇಚ್ಛವಾಗಿ ಸಿಗಲೆಂದು ಆಶಿಸುತ್ತಾ..
ನಮಸ್ಕಾರ
D C Ranganatha Rao
9741128413
I well remember my visit to the then Madras when u was working as an apprentice. U took me and my friend your namesake to world trade exhibition. Along with your 4 or 5 friends we enjoyed your hospitality.
ReplyDeleteಜೀವನದ ಸಂಧ್ಯಾ ಕಾಲದಲ್ಲಿ ನೆನಪಿರುವುದೇ ಕಷ್ಟ. ಅಂಥದ್ದರಲ್ಲಿ ನಿನ್ನ ನೆನಪಿನ ಶಕ್ತಿ ಅಗಾಧ.ಹೀಗೆ ನಿನ್ನ ನೆನಪಿನ ಚಿಲುಮೆಯಿಂದ ಸಿಹಿ ನೀರು ಉಕ್ಕುತ್ತಲೇ ಇರಲಿ ಅಣ್ಣ
ReplyDeleteಉಳಿಯುವುದು ನೆನಪುಗಳು ಮಾತ್ರ
ReplyDeleteನಿಮ್ಮ ನೆನಪುಗಳೇ
ReplyDeleteಅಚ್ಚರಿಗಳ ಬುತ್ತಿ
ಮುಗ್ದ ಮನಸ್ಸಿನ
ಭಾವಗಳ ಗುತ್ತಿ
ನಮಸ್ಕಾರ
ReplyDeleteನೆನೆದಷ್ಟು ಮನದಲ್ಲಿ ಉಕ್ಕುವುದು
ಆಲೋಚನೆಗಳ ಸಸಿ ಚಿಗುರುವುದು
ಸಿಹಿ ಕಹಿಗಳ ಸಾರ ಮೂಡುವುದು
ಮನದಾಳದ ಹೂವು ಅರಳುವುದು
ತುಂಬಾ ಚೆನ್ನಾಗಿದೆ ಅಂದು-ಇಂದಿನ ಹೋಲಿಕೆಯ ಚಿಂತನ-ಮಂತನದ
ಲಹರಿ
ರತ್ನಪ್ರಭಾ
ತುಂಬಾ ಚೆನ್ನಾಗಿದೆ
Nice memories sir
ReplyDeleteಮಾನ್ಯರೆ
ReplyDeleteಇಂದಿನ ಕಾಲದ ಮದುವೆಗಳ ಸಡಗರ ಸೊಬಗು ಸಂಭ್ರಮವನ್ನು ರಸವತ್ತಾಗಿ ಚಿತ್ರಿಸಿ ಕೊಟ್ಟಿದ್ದೀರಿ, ಧನ್ಯವಾದಗಳು.
ಈಗ ಕಾಲ ಬದಲಾದಂತೆಲ್ಲ ಮದುವೆಗಳಲ್ಲಿ ಎಲ್ಲರಿಗೂ ಅವಸರ ಗಡಿಬಿಡಿ ಗೊಂದಲಗಳು. ಈ ಮಧ್ಯೆ ಮದುವೆಯ ಸೊಬಗೇ ಸೊರಗಿ ಹೋದಂತಾಗಿದೆ. ಬರಿ ಆಡಂಬರ ಅದ್ದೂರಿತನ ಅಷ್ಟೇ.
ಪ್ರಿವೆಡ್ಡಿಂಗ್ ಶೂಟಿಂಗ್, ವಿವಾಹ ವಿಚ್ಛೇದನೆಗಳು ಲಿವಿಂಗ್ ರಿಲೇಶನ್ಶಿಪ್ ಮದುವೆಯ ಸೊಗಡನ್ನೇ ನುಂಗಿ ಹಾಕಿ ಬಿಟ್ಟಿವೆ.
ಇಂದಿನ ಯುವ ಪೀಳಿಗೆ ಅಂದಿನ ದಿನಗಳಷ್ಟು ಆಚರಣೆ, ಅನುಬಂಧಗಳಿಗೆ ಎಡೆ ಮಾಡಿಕೊಡದಿದ್ದರೂ ಸಾಕಷ್ಟು ಉಳಿಸಿ ಬೆಳೆಸಿಕೊಳ್ಳಲೆಂದು ಹಾರೈಸೋಣ.
ಕಾಲಾಯ ತಸ್ಮೈ ನಮಃ
ವಂದನೆಗಳೊಂದಿಗೆ
ಗುರುಪ್ರಸನ್ನ
ಚಿಂತಾಮಣಿ