ಜೀವನ- ಉತ್ಸಾಹ- ಉತ್ಸವ
ಜೀವನ- ಉತ್ಸಾಹ- ಉತ್ಸವ
ಹೋದ ಲೇಖನದಲ್ಲಿ ಹೇಳಿದಂತೆ... ಜೀವನದ ವಿಷಯಗಳ ಬಗ್ಗೆ ಬರೆಯಲು ಯೋಚಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದೆ, ನನ್ನ ಯುವ ಸ್ನೇಹಿತ ಮಣಿಕಂಠ facebook ನಲ್ಲಿ ಬರೆದಿದ್ದ ಒಂದು ಲೇಖನ. ಮಣಿಕಂಠನಿಗೆ ಮದುವೆಯಾಗಿ ಒಂದು ವರ್ಷ ಆದ ಸಂದರ್ಭದಲ್ಲಿ ತನ್ನ ಮಡದಿಗೆ ಬರೆದ ಪತ್ರರೂಪದ ಲೇಖನ. ಅದು ತನ್ನ ಮಡದಿಗೆ ಬರೆದದ್ದಾದರೂ.. ಪತ್ರವು ಬಹಿರಂಗ ರೂಪದಲ್ಲಿ ಇತ್ತು. ಪತ್ರವೂ ಭಾವುಕತೆಯಿಂದ ಕೂಡಿತ್ತು... ಅಲ್ಲಿ ಮದುವೆಯ ಮುಂಚಿನ ಮತ್ತು ನಂತರದ ಸುಂದರ ಕ್ಷಣಗಳು, ಮದುವೆಯ ಸಂಭ್ರಮ, ಕಾರ್ಯನಿಮಿತ್ತ ದೂರವಿರಬೇಕಾದಂತ ಸಮಯದ ಅಗಲಿಕೆ (ವಿರಹ ಎನ್ನಲೇ) ಇದರ ಮಧ್ಯೆ ಮುದ್ದು ಕಂದನ ಆಗಮನದ ಮುನ್ಸೂಚನೆಯ ಸಿಹಿ ಸುದ್ದಿ.... ಅದರ ಜೊತೆ ಜೊತೆಗೆ ಮಗುವನ್ನು ಪಡೆಯಲು ತಾಯಿ ಪಡಬೇಕಾದಂತಹ ನೋವು, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ ಹೀಗೆ ಸಾಕಷ್ಟು ವಿಷಯಗಳ ಚಿಂತನ ಮಂಥನ. ಜೀವನವನ್ನು ಉತ್ಸಾಹದಿಂದ ನೋಡಿದ, ಸಂಭ್ರಮದಿಂದ ಅನುಭವಿಸಿದ ಮನದಾಳದ ಮಾತುಗಳು. ಅದರಲ್ಲೂ ಮಗನ ಆಗಮನ ಸಂಭ್ರಮವನ್ನು ಇಮ್ಮಡಿಸಿತ್ತು ಎಂದು ನನ್ನ ಅನಿಸಿಕೆ.
ಓದಿದ ನಂತರ... ಜೀವನವನ್ನು ಉತ್ಸಾಹದಿಂದ..ಉತ್ಸವದಂತೆ ಆಚರಿಸುವ, ಸಂಭ್ರಮಿಸುವ ಕ್ಷಣಗಳನ್ನು, ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು ನೆನಪಿನಿಂದ ಹೆಕ್ಕಿ ತೆಗೆಯುವ ಮನಸಾಯಿತು... ಇದೋ ನಿಮ್ಮ ಮುಂದೆ ಆ ಮಧುರ ನೆನಪುಗಳು.
ಉತ್ಸವ ಎಂದ ಕ್ಷಣ ನನ್ನ ನೆನಪಿಗೆ ಬರುವುದೇ ನನ್ನೂರು ದೊಡ್ಡ ಜಾಲದಲ್ಲಿ ನಡೆಯುತ್ತಿದ್ದ ದೇವರ ಉತ್ಸವಗಳು. ಅದರ ತಯಾರಿಯಲ್ಲಿ ನಾವುಗಳು ಭಾಗವಹಿಸುವಾಗಿನ ಉತ್ಸಾಹ. ದೇವರ ಹಿತ್ತಾಳೆಯ / ಕಂಚಿನ ವಿಗ್ರಹಗಳನ್ನು ಹುಣಸೆ ಹಣ್ಣು ಹಾಕಿ ತಿಕ್ಕಿ ತೊಳೆಯುವುದು, ನೀರು ಸೇದಿ ಹುಯ್ಯುವುದು, ಅದಕ್ಕೆ ಅಲಂಕಾರ ಮಾಡಲು ಸಹಾಯ ಮಾಡುವುದು, ಉತ್ಸವ ಹೊರಟಾಗ, ಆಸರೆಗಾಗಿ ಉಪಯೋಗಿಸುತ್ತಿದ್ದ ಕವಣೆಕೋಲು ಹಿಡಿದು ನಡೆಯುವುದು. ತಮಟೆ, ರಂಡೋಲುಗಳ ಲಯಬದ್ಧ ಶಬ್ದಕ್ಕೆ ಸಂಕೋಚದಿಂದ ಹೆಜ್ಜೆ ಹಾಕುವುದು... ಮನಸ್ಸಿನಲ್ಲೇ ಕುಣಿದದ್ದು ನೆನೆದಾಗ ಮೈನವಿರೇಳುತ್ತದೆ. ಯಾವ ನೋವುಗಳೂ ಕಾಡದ, ದುಃಖವಾದರೂ ಕ್ಷಣಿಕ ಸಮಯದ, ಚಿಕ್ಕಂದಿನ ಜೀವನವೇ ಸೊಗಸು. ಅಲ್ಲಿ ಉತ್ಸಾಹಕ್ಕೆ ಕೊರತೆಯೇ ಇಲ್ಲ.
ನನ್ನ ದೃಷ್ಟಿಯಲ್ಲಿ, ಜೀವನೋತ್ಸಾಹವನ್ನು ಬಣ್ಣಿಸುವುದಾದರೆ... ( ಜೀವನದ ಕ್ಷಣಗಳನ್ನು ಒಂದು ಉತ್ಸವದಂತೆ ಸಂಭ್ರಮಿಸುವುದು) ಮಾಡುವ ಯಾವುದೇ ಕೆಲಸವನ್ನು... ಆಸ್ಥೆ ಅಕ್ಕರೆಯಿಂದ ಮಾಡಿದಾಗ... ಆ ಕೆಲಸದಲ್ಲಿ ಭಾಗವಹಿಸುವಿಕೆ... ಅದಕ್ಕೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವಾಗ ಇರುವ ಲವಲವಿಕೆಯೇ ಜೀವನೋತ್ಸಾಹ ಎನ್ನಲೇ?
ನಾ ಮೆಚ್ಚಿದ ಇರುವೆ:
ನನ್ನ ಚಿಕ್ಕಂದಿನಿಂದಲೂ ತುಂಬ ಕುತೂಹಲದಿಂದ ನೋಡಿಕೊಂಡು ಬಂದಿರುವ ಲವಲವಿಕೆಯ ಜೀವಿ ಎಂದರೆ ಅದು ಇರುವೆ. ಸಾಲು ಸಾಲುಗಳಲ್ಲಿ ಶಿಸ್ತಿನಿಂದ ಓಡಾಡುವ... ತಮಗಿಂತ ಸಾವಿರ ಪಾಲು ಭಾರವಿರುವ ಆಹಾರವನ್ನು ಗುಂಪಾಗಿ ಸಮನ್ವಯದೊಂದಿಗೆ ಸಾಗಿಸುವ, ಮಾರ್ಗ ಮಧ್ಯದಲ್ಲಿ ಎದುರಿನಿಂದ ಬರುವ ಗುಂಪಿನ ಸದಸ್ಯನೊಡನೆ ನಿಂತು ಮಾತನಾಡುವಂತೆ ತೋರುವ, ಅವುಗಳ ವ್ಯವಹಾರ ಚತುರತೆಯೇ ನನಗೆ ಇಷ್ಟ.
ಅದರಲ್ಲೂ ಮಳೆಗಾಲ ಶುರುವಾಗುವ ಮುಂಚೆ ಕೂಡಿಟ್ಟ ಆಹಾರವನ್ನು ಹಾಗೂ ತಮ್ಮ ಮರಿಗಳನ್ನು ಸ್ಥಳಾಂತರಿಸುವ ಕಾರ್ಯವೈಖರಿ ಮೆಚ್ಚುವಂಥದ್ದು. ಅದಕ್ಕಾಗಿಯೇ ಇರಬೇಕು " ಇರುವೆಯ ಶಕ್ತಿ ಕೊಡು" ಎಂದು ದೇವರನ್ನು ಕೇಳಬೇಕು ಎಂಬ ಸಲಹೆ.
ರಾಯ ಬಂದ ಬಾನ ಇಳೀಬೇಕು:
ಮೇಲಿನ ಮಾತುಗಳು ನಮ್ಮಪ್ಪನ ಅಮ್ಮ ಪುಟ್ಟಮ್ಮಜ್ಜಿ ಬಾಯಲ್ಲಿ ಸಾಕಷ್ಟು ಬಾರಿ ಕೇಳಿದ ಸ್ವಗತದ ಮಾತುಗಳು. ನಮ್ಮ ದೊಡ್ಡ ಭಾವ (ಅನಂತ ರಾಮಯ್ಯನವರು) ನಮ್ಮ ಹಳ್ಳಿಗೆ ಬೆಂಗಳೂರಿನಿಂದ ಬರುತ್ತಿದ್ದ ಕಾಲ. ಮನೆಯ ದೊಡ್ಡ ಅಳಿಯ... ಅಜ್ಜಿಗೆ ಮೊಮ್ಮಗಳ ಗಂಡ... ಬರುತ್ತಾನೆಂದರೆ ಏನೋ ಸಂಭ್ರಮ. ಭಾವ ಶನಿವಾರ ರಾತ್ರಿ ಸೈಕಲ್ಲಿನಲ್ಲಿ ಬಂದು, ಭಾನುವಾರ ಬೆಳಿಗ್ಗೆ ಅವರ ಊರು ದೇವಗಾನಹಳ್ಳಿಗೆ ಹೋಗಿ ಬರುತ್ತಿದ್ದದ್ದು. ಭಾನುವಾರ ಬೆಳಿಗ್ಗೆ ಅವರು ಹೊರಡುವ ಮೊದಲು ತಿನ್ನಲು ಕೊಡಬೇಕು. ಅದಕ್ಕಾಗಿ ಅಜ್ಜಿಗೆ ಸಡಗರ... ಆಗಲೇ ಸ್ವಗತ ಮಾತು “ರಾಯಬಂದ ಬಾನ (ಬೋನ = ಅಡುಗೆ, ನೈವೇದ್ಯ) ಇಳೀಬೇಕು ” . ಸಾಮಾನ್ಯವಾಗಿ ಮಾಡುತ್ತಿದ್ದದ್ದು ಅನ್ನ ಹಾಗೂ ಹುಣಿಸೆ ಸಾರೇ ಆದರೂ... ಅದಕ್ಕೆ ತಯಾರಿ, ಅದರ ಹಿಂದಿನ ಪ್ರೀತಿ, ಜವಾಬ್ದಾರಿ ಹಾಗೂ ಸಡಗರ.. ಅದು ಅಜ್ಜಿಯ ಜೀವನೋತ್ಸಹ.
ಕಿಟ್ಟಿ ಮೇಷ್ಟ್ರು:
ಸುಮಾರು 20 ವರ್ಷಗಳ ಕಾಲ.. ಬೆಳಗಿನ ವಾಕಿಂಗ್ ಸಮಯದಲ್ಲಿ ಭೇಟಿಯಾಗುತ್ತಿದ್ದ ಕಿಟ್ಟಿ ಮೇಷ್ಟ್ರು ಒಂದು ವಿಶಿಷ್ಟ ವ್ಯಕ್ತಿತ್ವ. ಅವರ ಸಮಯ ಪ್ರಜ್ಞೆ, ಸೋಮವಾರದ ಭಜನೆ, ನಮ್ಮಗಳೊಡನೆ ಮಾತನಾಡುವಾಗ ಹೇಳುತ್ತಿದ್ದ ಕಥೆಗಳು/ ಘಟನೆಗಳು, ಎಲ್ಲರೊಂದಿಗೂ ಅವರದೇ ಮಿತಿಯಲ್ಲಿ ಬೆರೆಯುತ್ತಿದ್ದ ರೀತಿ, ಹೊಸದನ್ನು ಕಲಿಯಲು ಅವರಿಗಿದ್ದ ಆಸಕ್ತಿ ಇವೆಲ್ಲ ಅನುಕರಣೀಯ. ಜೀವನೋತ್ಸಾಹ ಶೀರ್ಷಿಕೆಯಲ್ಲಿ ಅವರ ಬಗ್ಗೆ ಬರೆದ ಲೇಖನದ ಕೊಂಡಿ ನಿಮಗಾಗಿ... ಓದಿ
https://sihikahinenapugalu.blogspot.com/2017/09/blog-post_12.html
ಕೆ. ಪರಾಶರನ್:
ತಮ್ಮ 92 ನೆಯ ವಯಸ್ಸಿನಲ್ಲಿ, ಅಯೋಧ್ಯೆಯ ರಾಮಜನ್ಮಭೂಮಿಯ ವಾದವಿವಾದದಲ್ಲಿ ರಾಮಲಲ್ಲಾನ ಪರವಾಗಿ ನ್ಯಾಯಾಲಯದಲ್ಲಿ , ಬರಿಗಾಲಲ್ಲಿ ನಿಂತು ವಾದ ಮಂಡಿಸಿದವರು. ನ್ಯಾಯಾಧೀಶರು ಕುಳಿತೇ ಮಾತಾಡಲು ಸೂಚಿಸಿದಾಗ ನಯವಾಗಿ ನಿರಾಕರಿಸಿ, ಶ್ರೀ ರಾಮನ ಸೇವೆಯನ್ನು ಮಾಡುವಾಗ ಸಲ್ಲಿಸಬೇಕಾದ ಸಮರ್ಪಣಾ ಮನೋಭಾವ ಎಂದ ಪೂಜನೀಯರು. ಶ್ರದ್ಧೆಯ ಪರಾ(ಶರ)ಕಾಷ್ಟೆ.
ಹಿರಿಯ ನಾಗರಿಕರು:
ಹಿರಿಯ ನಾಗರಿಕ ವೇದಿಕೆಗಳೊಡನೆ ನನ್ನ ಒಡನಾಟವಿದೆ. ಅಲ್ಲಿ ಮಾತುಕತೆಯ ನಡುವೆ ಏನಾದರೂ ಸಮಾಜಮುಖಿ ಕೆಲಸ ಗಳಲ್ಲಿ ತೊಡಗಿಸಿಕೊಂಡರೆ ಜೀವನ ಸೊಗಸಾಗಿರುತ್ತದೆ ಎಂಬ ಸಲಹೆ. ಎಲ್ಲರಿಗೂ ಅಂತಹ ಕೆಲಸ ಮಾಡಲು ಬೇಕಾದ ಕೌಶಲ್ಯ, ಇರಲಾರದೆಂಬ ಒಂದು ಅನುಮಾನ.
ಅದಕ್ಕೆ ಡಾ.ಬಿ ಎಂ ಹೆಗ್ಗಡೆಯವರು ಹೇಳಿದ್ದ... ಶಾಲೆಯು ಪ್ರಾರಂಭವಾಗುವ ಹಾಗೂ ಮುಗಿಯುವ ವೇಳೆ, ಶಾಲೆಯ ಬಳಿ ಹೋಗಿ, ಮಕ್ಕಳು ರಸ್ತೆಯನ್ನು ದಾಟಲು ಸಹಾಯ ಮಾಡಿದರೆ, ದಿನಕ್ಕೆ ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಉಪಯೋಗಕ್ಕೆ ಬರುತ್ತದೆ. ಇದಕ್ಕೆ ಯಾವ ವಿಶೇಷ ತರಬೇತಿಯೂ ಬೇಕಾಗಿಲ್ಲ... ಮಾಡುವ ಮನಸ್ಸೊಂದಿದ್ದರೆ ಸಾಕು ಎಂದು ಹೇಳಿದ ವಿಷಯವನ್ನು ಕೇಳಿದ ಗುಲ್ಬರ್ಗ ಮೂಲದ ಒಬ್ಬ ಹಿರಿಯರು ತಾವು ಒಂದು ಕೈ ಫಲಕ ಬರೆದು, ಶಾಲೆಯ ಬಳಿ ಮಕ್ಕಳಿಗೆ ಸಹಾಯ ಮಾಡಿ ಸಂತೋಷ ಪಡೆಯುತ್ತಿದ್ದಾರೆಂದೂ, ಅದಕ್ಕೂ ಹೆಚ್ಚಿನ ವಿಚಾರವೆಂದರೆ ಬೇರೆಲ್ಲೋ ಹೋದಾಗ, ಮಕ್ಕಳು ಗುರುತಿಸಿ ಅವರ ಅಮ್ಮಂದಿರಿಗೆ ಪರಿಚಯಿಸಿದಾಗ ಆದ ಹೆಮ್ಮೆ ಮತ್ತಷ್ಟು ಹಿಗ್ಗು ತಂದಿತೆಂದು ತಿಳಿಸಿದ್ದು ಅವರ ಜೀವನೋತ್ಸಾಹದ ಒಂದು ಸುಂದರ ಮುಖ.
ಜೆ ಕೆ ರಾಜು ಎಂಬ ಹಿರಿಯ ನಾಗರಿಕರು ಸರಿಗಮಪ ಹಾಡಿನ ಕಾರ್ಯಕ್ರಮದಲ್ಲಿ ಭಾಗವಹಿಸುವಲ್ಲಿನ ಉತ್ಸುಕತೆ ಶ್ಲಾಘನೀಯ.
ಹಿರಿಯ ನಾಗರಿಕರಂತೂ, ತಮ್ಮ ಬಾಳ ಮುಸ್ಸಂಜೆಯಲ್ಲಿ, ತಮಗಿಷ್ಟವಾದ, ಸಂತಸ ಕೊಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹು ಮುಖ್ಯ. ಈ ಚಟುವಟಿಕೆಗಳಿಂದ, ಮನೋಲ್ಲಾಸದೊಂದಿಗೆ, ದೈಹಿಕವಾಗೂ ಉತ್ಸಾಹದಿಂದಿರುವಲ್ಲಿ ಸಹಾಯ ಮಾಡುತ್ತವೆ.
ನಮ್ಮ ಸುತ್ತಮುತ್ತ:
ಬೆಳಗಿನಜಾವದ ಹಕ್ಕಿಗಳ ಕಲರವ, ನಮ್ಮ ಮನೆಯ ಅಂಗಳದಲ್ಲಿ ನಾವಿಡುವ ಆಹಾರ ತಿನ್ನಲು ಹಾಗೂ ನೀರನ್ನು ಕುಡಿಯಲು ಬರುವ ವಿವಿಧ ಹಕ್ಕಿಗಳು ಹಾಗೂ ಅಳಿಲುಗಳು , ಅವುಗಳ ಆಟೋಟಗಳನ್ನು ನೋಡುವುದೇ ಒಂದು ಚಂದ.... ಅವುಗಳ ಉತ್ಸಾಹ ಕಣ್ಣಿಗೆ ಆನಂದ.
ಅದರಲ್ಲೂ ಆಹಾರ ಹಾಕುವ ಸಮಯದಲ್ಲಿ ಕಾಗೆ ಕಂಡರಂತೂ.... ತನ್ನ ಬಳಗದವರನ್ನು ಕರೆಯುವ ಆ ಪರಿ, ಸಂಘ ಜೀವನವನ್ನು ಅದು ಸಂಭ್ರಮಿಸುವುದನ್ನು... ನೋಡಿ ನಾವುಗಳು ಕಲಿಯಲೇಬೇಕಾದದ್ದು.
ಮೂಕಪಶುಗಳಿಗೆ ನೀರುಣಿಸುವುದು:
ಚಿಕ್ಕಂದಿನಲ್ಲಿ ನನಗೆ ಪ್ರಭಾವ ಬೀರಿದವರು- ಊರ ಮುಂದಿನ ಆಂಜನೇಯ ದೇವಸ್ಥಾನದ ಸುಬ್ಬರಾಯಪ್ಪ. ಅವರ ದಿನಚರಿಯಲ್ಲಿ ದೇವಸ್ಥಾನದ ಏತದ ಭಾವಿಯಿಂದ ನೀರು ಸೇದಿ, ಆವರಣದ ಹೊರಗಡೆ ಇದ್ದ ಒಂದು ಕಲ್ಲುತೊಟ್ಟಿಗೆ ನೀರು ತುಂಬಿಸುವುದು, ಮುಖ್ಯ ಕೆಲಸವಾಗಿತ್ತು. ಮೇಯಲು ಹೊರಗೆ ಹೋದ ದನಕರುಗಳು, ಹಾಗೆ ಊರೊಳಗಿರುವ ದನಕರುಗಳು ಸಹ ಅಲ್ಲಿಗೆ ಬಂದು ನೀರು ಕುಡಿದು ಹೋಗುತ್ತಿದ್ದದ್ದು ಕಣ್ಣಿಗೆ ಕಟ್ಟಿದೆ. ನನಗೆ ಕಂಡಂತೆ ಈ ಕಾಯಕವನ್ನು ಅವರು ತಪ್ಪಿಸಿದ್ದೇ ಇಲ್ಲ... ಎಷ್ಟು ಉತ್ಸಾಹ ತುಂಬಿರಬೇಕು ಅಲ್ಲವೇ?
ನನ್ನಪ್ಪ ಶಾಮಣ್ಣ:
ನನ್ನ ಚಿಕ್ಕ ವಯಸ್ಸಿನ ನಮ್ಮಪ್ಪನ ಮುಖ ಮುಂಗೋಪಿಯದ್ದಾದರೂ... ಒಂದು ವಯಸ್ಸಿನ ನಂತರ... ಅದರಲ್ಲೂ ನಮ್ಮಮ್ಮ ಅಗಲಿ ಒಂಟಿಯಾದ ನಂತರ ಅವರ ಜೀವನಶೈಲಿಯೇ ಬದಲಾಯಿತೇನೋ ಎಂದು ನನಗೆ ಬಹಳ ಸಲ ಅನ್ನಿಸಿದ್ದಿದೆ. ಮೊದಲಿ ನಿಂದಲೂ, ದೇವರ ಪೂಜೆಯನ್ನು ತಪ್ಪದೇ ಮಾಡುತ್ತಿದ್ದ ನಮ್ಮಪ್ಪ... ಅಮ್ಮನ ಕಾಲಾನಂತರ ಅದು ಎರಡು ಹೊತ್ತಿಗೂ ವಿಸ್ತರಿಸಿತು. ಪೂಜೆಯಲ್ಲಿ ವಿಶೇಷವಾಗಿ ತಲ್ಲೀನರಾಗಿದ್ದಾರೇನೋ ಎಂದೆನಿಸುತ್ತದೆ. ಪ್ರಾಯಶಃ ಅಮ್ಮನಿಲ್ಲದ ಜಾಗವನ್ನು ಮೌನದಲ್ಲಿ ತುಂಬುತ್ತಿದ್ದರೇನೋ.. ಮಾಡುತ್ತಿದ್ದ ಜಪ, ಅಭಿಷೇಕ, ಸ್ತೋತ್ರಗಳನ್ನು ಹೇಳುವುದರಲ್ಲಿ ಸಮಯವನ್ನು ತೊಡಗಿಸಿ ಕೊಳ್ಳುತ್ತಿದ್ದರು.
ಇನ್ನು ಸಂಜೆಯಾದರೆ ಅಚ್ಚುಕಟ್ಟಾಗಿ ಕಚ್ಚೆ ಪಂಚೆಯನ್ನುಟ್ಟು, ಶರಟು, ಮೇಲೊಂದು ಶಲ್ಯ.. ಹಣೆಯಲ್ಲಿ ಇರುತ್ತಿದ್ದ ಗಂಧಾಕ್ಷತೆಯೊಂದಿಗೆ... ಚಪ್ಪಲಿ ಏರಿಸಿ ತಯಾರಾದರೆಂದರೆ ( ಅಷ್ಟಲ್ಲದೇ ನಮ್ಮಪ್ಪನನ್ನು ಅಲಂಕಾರ ಪುಟ್ಟಶ್ಯಾಮಿ ಎಂದು ನಮ್ಮಜ್ಜಿ ಕರೆಯುತ್ತಿದ್ದರಾ ?) ಸಂಜೆಯ ವಾಯುಹಾರಕ್ಕೆ ಹೊರಟರೆಂದೇ.... ಹಲ್ಲಿಲ್ಲದ ಬೊಚ್ಚು ಬಾಯಿಯಲ್ಲಿ ನಗುತ್ತಾ, ಎದುರಿಗೆ ಸಿಕ್ಕವರನ್ನು ಮಾತನಾಡಿಸುತ್ತಾ ಹೊರಡುವ ಉತ್ಸಾಹ ಅನುಕರಣೀಯ.
ಇನ್ನು ಮಕ್ಕಳು ಮೊಮ್ಮಕ್ಕಳೊಂದಿಗೆ ಕೂತು ಊಟ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದದ್ದು, ಸಂಭ್ರಮಿಸುತ್ತಿದ್ದದ್ದು ನೆನಪಿದೆ. ನನಗಾಗಿ ಮಧ್ಯಾಹ್ನದ ಊಟಕ್ಕಾಗಿ ಕಾಯುತ್ತಿದ್ದ ನನ್ನಪ್ಪನ ಜೊತೆ ಊಟ ಮಾಡುತ್ತಿದ್ದದ್ದು ಖುಷಿ ಕೊಡುತ್ತಿತ್ತು.
ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು:
ಜೀವನೋತ್ಸಾಹಕ್ಕೆ ಮಾದರಿಯಾಗಬಲ್ಲವರು ಈ ಗುರು ಶಿಷ್ಯರು. ತಮ್ಮ ಅಂಧತ್ವವನ್ನು ಮೀರಿ ಅಪಾರ ಸಾಧನೆ ಮಾಡಿ, ತಮ್ಮಂತೆ ವೈಕಲ್ಯವಿದ್ದ ಮಕ್ಕಳನ್ನು ಗುರುತಿಸಿ, ತಮ್ಮ ಆಶ್ರಮದಲ್ಲಿ ಆಶ್ರಯ ಕೊಟ್ಟು, ಎಲ್ಲ ಸೌಕರ್ಯಗಳೊಂದಿಗೆ ವಿದ್ಯೆ ಕಲಿಸಿ, ಅವರ ಜೀವನ ಹಸನಾಗಲು ಬೇಕಾದ ಸಂಪನ್ಮೂಲಗಳನ್ನು ಕೊಟ್ಟು, ಶಿಷ್ಯ ಸಮೂಹವನ್ನೇ ತಯಾರು ಮಾಡಿದವರು. ಇನ್ನೆಂತಹ ಜೀವನ ಪ್ರೀತಿ, ಉತ್ಸಾಹ.
ತಮ್ಮ ನ್ಯೂನತೆಗಳನ್ನು ಮೆಟ್ಟಿ ನಿಂತು, ತಮ್ಮ ಜೀವನವನ್ನೇ ಮುಡುಪಿಟ್ಟು, ಸಮಾಜಮುಖಿಯಾಗಿ ದುಡಿದ ಇಂತಹ ಉತ್ಸಾಹದ ಚಿಲುಮೆಗಳು ಸಾವಿರಾರು ನಮ್ಮ ಸುತ್ತಮುತ್ತ ಇದ್ದವು...ಈಗಲೂ ಇವೆ.
ಅವರುಗಳಿಂದ ಸ್ಫೂರ್ತಿ ಪಡೆದು, ನಮ್ಮ ಜೀವನದ ಕೆಲ ಕ್ಷಣಗಳನ್ನಾದರೂ ಉತ್ಸಾಹದಿಂದ ಕಳೆಯುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಶಕ್ತಿ ನಮ್ಮೆಲ್ಲರಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ...
ನಮಸ್ಕಾರ. ..
D C Ranganatha Rao
9741128413
👌👌👌👌👌
ReplyDeleteNillisade munde hodabeku ennisuva hagide e salada baraha.
ReplyDeleteVery very beautiful article sir . My father in-law started learning Sanskrit when he was 74 . He wanted to study philosophy in its original script . He completed 3 exams .
ReplyDeleteMy mother who is 94 is learning music and writes songs .loves to learn mobile usage.
And sir it's very motivating to see you doing social service and writting this article .
ಕಳೆದ 15-20 ದಿನದಿಂದ ನಮ್ಮ ಮನೆಯ ಮುಂದೆ ಇರುವ ಮರವನ್ನು ಗಮನಿಸಿದಾಗ
ReplyDeleteಬಾರಿ ಮಳೆ ಬಂದಾಗಲೂ ಉದರದ ಎಲೆಗಳು ಈಗ ಒಂದು ಸಣ್ಣ ಗಾಳಿಗೆ ಉದುರುವ ಹಾಗೂ 3-4 ದಿನಗಳಲ್ಲಿ ಮತ್ತೆ ಹಸಿರು ಚಿಗುರುವ ದೃಶ್ಯ ಪ್ರಕೃತಿಯ...ಮರಗಳ ಜೀವನ ಉತ್ಸಾಹಕ್ಕೆ ಸುಂದರ ಉದಾಹರಣೆ...ಅದರಂತೆ ನಾವು ಕೂಡ ಕೆಟ್ಟ ಗಳಿಗೆ...ಘಟನೆ...ಕೊಡವಿಕೊಂಡು ಹೊಸತನ್ನು ನಿರೀಕ್ಷೆ ಮಾಡುತ್ತಾ ಸರಳ ಸುಂದರ ಬದುಕನ್ನು ಸವಿಯೋಣ
ಮತ್ತೊಂದು ಉತ್ತಮ ಲೇಖನದ ಮೂಲಕ ಸಂದೇಶ ನೀಡಿದ ನಿಮಗೆ ಧನ್ಯವಾದಗಳು
ಬಾಬು
ಮಾನ್ಯರೆ,
ReplyDeleteಬದುಕಿನಲ್ಲಿ ಜೀವನೋತ್ಸಾಹ ಬಹು ಮುಖ್ಯ ಅಥವಾ ಉತ್ಸಾಹವೇ ಜೀವನವೆನ್ನುಬಹುದೇನೋ.
ಉತ್ಸಾಹದ ವಿವಿಧ ಬಗೆಗಳನ್ನು ಲೇಖನದಲ್ಲಿ ರಸವತ್ತಾಗಿ ಚಿತ್ರಿಸಿರುವುದು ಗಮನಾರ್ಹ. ಸಂಬಂಧಿತ ಚಿತ್ರಗಳು ಹಾಗೂ ಸಂದೇಶ ಲೇಖನಕ್ಕೆ ಮೆರುಗು ತಂದು ಕೊಟ್ಟಿದೆ.
ಹಿರಿಯ ನಾಗರಿಕರು ಮೊಬೈಲ್ ಬಳಸಲೇ ಕಷ್ಟಪಡುವ ಈ ಕಾಲದಲ್ಲಿ ಲೇಖಕರು ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಬ್ಲಾಗ್ ಗಳನ್ನು
ರಚಿಸುತ್ತಿರುವುದೇ ಅವರ ಜೀವನೋತ್ಸವಕ್ಕೆ ಹಿಡಿದ ಕನ್ನಡಿಯಾಗಿರುತ್ತದೆ.
ವಂದನಾಪೂರ್ವಕವಾಗಿ,
ಗುರು ಪ್ರಸನ್ನ
ಚಿಂತಾಮಣಿ
Respected DCR Sir, This is a wonderful article on SPIRIT OF LIVING. When it comes to SPIRIT OF LIVING with respect to human beings, I remember my father who carried spirit of living till his death. Generally, people who retire from service, general tendency will be diminishing spirit of life. But for my dad spirit of life exponentially increased. After retirement he served RK mutt for nearly 25 years with full spirit and later after 80 years of age, served many religious organisations. He learnt sancrut, upanishad, vedas at 80 years. Even at 90+ age, he was enjoying my village (farm) life. Thanks for your article which made me to introspect my father life style. Dhanyavadagalu sir 🙏🙏🙏🙏
ReplyDeleteಜೀವನೋತ್ಸಹದ ಬುಗ್ಗೆಯಂತಿರುವ ನಿಮ್ಮಂತ ಹಿರಿಯರ ಲೇಖನಗಳನ್ನು ಓದುತ್ತಿದ್ದರೇ ಜೀವನದ ಉತ್ಸಹ ಇಮ್ಮಡಿಯಾಗುತ್ತದೆ. ಈಸಬೇಕು ಇದ್ದು ಜಯಿಸಬೇಕು ಎಂಬ ಹಿರಿಯರ ನಾಣ್ಣುಡಿ ನೆನಪಿಸುತ್ತೆ ಈ ಲೇಖನ
ReplyDeleteಜೀವನೋ ತ್ಸಾಹ ದ ಬಗ್ಗೆ ತಮ್ಮ ಅನುಭವ ವನ್ನು 👏🙏
ReplyDeleteಹೌದು ಸರ್ ತುಂಬಾ ಅರ್ಥಪೂರ್ಣ baraha🙏👍👌💐
ReplyDeleteಜೀವನೋತ್ಸಾಹ ದ ಬರಹ ಎಲ್ಲರಿಗೂ ಮಾದರಿ ಸರ್
ReplyDelete👌👌👌. Motivating article. 🙏
ReplyDeleteಅರ್ಥ ಪೂರ್ಣ ಬರಹ
ReplyDeleteತುಂಬು ಹೃದಯದ ನಮಸ್ಕಾರ ಸರ್.. ನಿಮ್ಮ ಉತ್ಸಾಹ ಭರಿತ ವಿಚಾರದಲ್ಲಿ ನಮ್ಮನ್ನು(ನನ್ನ ಮಡದಿ ಮತ್ತು ಮಗುವಿನ) ವಿಚಾರ ಉಲ್ಲೇಖಿಸಿರುವುದು ದಂಪತಿಗೆ ಖುಷಿಯ ಸಂಗತಿ. ಅದರಲ್ನಿಲೂ ನಿಮ್ಮ ಅನುಭವದ ಸಾಲುಗಳನ್ನು ಓದುವಾಗ ಸಂತೋಷ ನೂರ್ಮಡಿ ಹೆಚ್ಚಾಗಿರುವುದಂತು ಸತ್ಯ.... ಮತ್ತೊಮ್ಮೆ ಧನ್ಯವಾದಗಳು 🙏
ReplyDelete