ದಯಾ ಮರಣ - ಇಚ್ಛಾ ಮರಣ

ದಯಾ ಮರಣ - ಇಚ್ಛಾ ಮರಣ

ಜಾತಸ್ಯ ಮರಣಂ ಧ್ರುವಂ... ಹುಟ್ಟಿದವರೆಲ್ಲ ಸಾಯಲೇಬೇಕು... ಸಾವು ಖಚಿತ ... ಆದರೆ ಸಾಯಲು ಇಚ್ಚಿಸುವವರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಎಂದು ಹೇಳಬಹುದು. "ನಾನು ಸಾಯಕ್ಕೆ ರೆಡಿ" ಎಂದು ಹೇಳುವ ಬಹಳಷ್ಟು ಮಂದಿಯನ್ನು ನೋಡಿದ್ದೇನೆ... ಆದರೆ ಅವರ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಾದರೂ ಡಾಕ್ಟರ್ ಬಳಿ ಓಡಿ ಹೋಗುವುದನ್ನೂ ನಾನು ನೋಡಿದ್ದೇನೆ. 

ಕೆಲವರ ಆರೋಗ್ಯ ಹದಗೆಟ್ಟು... ಯಾವ ರೀತಿಯ ಸುಧಾರಣೆಯೂ ಸಾಧ್ಯವಿಲ್ಲವೆಂದು ತಿಳಿದಿದ್ದರೂ... ಅವರು ಪಡುತ್ತಿರುವ ಕಷ್ಟ, ನೋವು ಸಹಿಸಲು ಅಸಾಧ್ಯ ವಾದರೂ... ಅವರ ಕ್ಷಣ ಕ್ಷಣದ ಬೇಡಿಕೆ ಸಾವೇ ಆದರೂ... ಆ ಭಾಗ್ಯ ಅವರಿಗಿಲ್ಲ.

ಇದರ ಇನ್ನೊಂದು ಮುಖ... ನರಳುವವರದು ಒಂದು ಪಾಡಾದರೆ ಅವರನ್ನು ನೋಡಿಕೊಳ್ಳುವ  ಮನೆಯ ಜನರ ಕಷ್ಟ ಹೇಳತೀರದು. ಈ ಸ್ಥಿತಿ ಬಹಳ ಕಾಲ ಎಳೆದಷ್ಟು... ಮನೆ ಮಂದಿಯ ಸಹನಾ ಶಕ್ತಿಗೆ ಸವಾಲೇ ಸರಿ. ಇದು ಮನೆಯವರ ದೈಹಿಕ ಶ್ರಮ, ಮಾನಸಿಕ ಒತ್ತಡ, ಹಣಕಾಸಿನ ತೊಂದರೆ ಎಲ್ಲವೂ ಒಟ್ಟಿಗೆ ತೊಡರಿಕೊಂಡು ಹಣ್ಣು ಮಾಡುವುದನ್ನು ಕಂಡಿದ್ದೇನೆ. "ಎಷ್ಟು ದಿನ ಈ ಜಂಜಾಟ.. ಇದಕ್ಕೆ ಕೊನೆಯೇ ಇಲ್ಲವೇ... ಸಾಕಾಗಿದೆ" ಎಂದು  ಹೇಳಿದುದನ್ನು ಕೇಳಿದ್ದೇನೆ.

ಅಷ್ಟೇಕೆ, ನನ್ನಪ್ಪ 109ನೆಯ ವಯಸ್ಸಿನ ತನಕ ಇದ್ದವರು, ಆರೋಗ್ಯವಾದ ಸುಖ ಜೀವನವನ್ನು ನಡೆಸಿದವರು... ಕೊನೆಯ ದಿನಗಳ ಅವರ ಕಣ್ಣೋಟದಲ್ಲಿದ್ದ ದೈನ್ಯತೆಯನ್ನು ಕಂಡ ನಾನು ಎಷ್ಟೋ ಸಲ ದೇವರಲ್ಲಿ  "ನಮ್ಮಪ್ಪನಿಗೆ ಮುಕ್ತಿಯನ್ನು ಕೊಡು ದೇವರೇ" ಎಂದು ಬೇಡಿಕೊಂಡದ್ದಿದೆ.

ಏನಾದರೂ ಅಂತಕನ ದೂತನಿಗೆ ಕಿಂಚಿತ್ತು  ದಯವಿಲ್ಲ ಎನ್ನುವ ಮಾತು ಸಾಮಾನ್ಯವಾಗಿ... ಚಿಕ್ಕವಯಸ್ಸಿನಲ್ಲಿ ಸಾಯುವವರಿಗೆ ಹೇಳುವುದು ಉಂಟು... ಆದರೆ ನರಳುತ್ತಿರುವವರ ನೋವನ್ನು ಕಡಿಮೆ ಮಾಡಿ ಅವರಿಗೆ ಸಾವನ್ನು ಕೊಡುವ ಕರುಣೆಯೂ ಇಲ್ಲ ಆ ಅಂತಕನಿಗೆ. ಬದುಕಿನ ಕೊನೆಯ ಆ ಸಮಯಕ್ಕಾಗಿ ಕಾಯಲೇಬೇಕು.

ಈ ಯೋಚನಾಲಹರಿಗೆ ಕಾರಣ ಇಂದು ಬೆಳಗಿನ ಪತ್ರಿಕೆಯಲ್ಲಿ ಕಂಡ  “ದಯಾಮರಣಕ್ಕೆ ರಾಜ್ಯ ಸರ್ಕಾರ ಸಮ್ಮತಿ” ಎಂಬ ಸುದ್ದಿ. ಸ್ವಲ್ಪ ಮಟ್ಟಿಗೆ ಖುಷಿಯನ್ನು ಕೊಟ್ಟ ವಿಚಾರ.



ಗಲ್ಲು ಶಿಕ್ಷೆಗೆ ಒಳಗಾಗಿರುವ ಖೈದಿ ರಾಷ್ಟ್ರಪತಿಯವರಿಗೆ ಕ್ಷಮಾದಾನದ ಅರ್ಜಿ ಸಲ್ಲಿಸುವಂತೆ... ಬದುಕಲೇ ಕಷ್ಟವಾಗಿರುವ ಜೀವಗಳು ಸಾಯಲು ಅನುಮತಿ ಕೇಳುವುದೇ ದಯಾ ಮರಣ. ದಯಾಮರಣದಲ್ಲಿ ಎರಡು ವಿಧ ಮೊದಲನೆಯದು.. ಮಾರಣಾಂತಿಕ ಇಂಜೆಕ್ಷನ್ ಕೊಟ್ಟು ಸಾಯಿಸುವುದು.. ಈ ಕಾನೂನು ಭಾರತದಲ್ಲಿ ಜಾರಿಯಲ್ಲಿಲ್ಲ. ಆದರೆ ಎರಡನೆಯದು ವಾಸಿಯಾಗುವ ಹಂತದಲ್ಲಿಲ್ಲದ ಕಾಯಿಲೆಯಿಂದ ಬಳಲುತ್ತಿರುವವರು.. ಹಾಗೂ ಆಕ್ಸಿಜನ್ ಅಥವಾ ವೆಂಟಿಲೇಟರ್ ಸಹಾಯದಿಂದ ಬದುಕಿರುವ ಜೀವಿಗಳನ್ನು... ಅವೆಲ್ಲವುಗಳಿಂದ ಮುಕ್ತಗೊಳಿಸಿ ಸಾಯಲು ಬಿಡುವುದೇ ದಯಾಮರಣದ ಎರಡನೆಯ ಮುಖ. ಇದಕ್ಕೂ ಅದರದೇ ಆದ ಕಾನೂನಾತ್ಮಕ ಪ್ರಕ್ರಿಯೆಗಳಿವೆ... ಕಷ್ಟವಾದರೂ ಸಾಧ್ಯ. ಇಷ್ಟಾದರೂ ಆಯ್ತಲ್ಲ ಎನ್ನುವುದೇ ನನಗೆ ಸಿಕ್ಕ ಸಮಾಧಾನ. 

ಇದಕ್ಕೊಂದು ಉದಾಹರಣೆ...42 ವರ್ಷಗಳ ಕಾಲ ಕೋಮಾದಲ್ಲಿದ್ದ ಅರುಣ ಶಾನ್ಭಾಗ್ ಎಂಬ ನರ್ಸಿನ ಪ್ರಕರಣ.  ಮುಂಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈಕೆಯ ಮೇಲೆ ಒಬ್ಬ ದುರುಳ ಅತ್ಯಾಚಾರ ಮಾಡಿ ಕೊಲ್ಲಲು ಮಾಡಿದ ಪ್ರಯತ್ನದಿಂದಾಗಿ ಆಕೆ ಕೋಮಾಗೆ ಹೋಗಿದ್ದರು. 37 ವರ್ಷಗಳ ಕಾಲ ಜೀವಚ್ಛವಾಗಿದ್ದರೂ, ಆಕೆಯ ದಯಾ ಮರಣದ ಅರ್ಜಿಯನ್ನು 2011ರಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತು...2015ರಲ್ಲಿ ಆಕೆ ನ್ಯುಮೋನಿಯಾ ಕಾರಣದಿಂದ ಮರಣ ಹೊಂದಿದ್ದು. 42 ವರ್ಷಗಳ ದೀರ್ಘಕಾಲದ ಬದುಕು ಸಾವಿನ ಹೋರಾಟ ಬೇಕಾಗಿರಲಿಲ್ಲವೇನೋ?? ಆದರೆ ಕಾನೂನೇ ಹಾಗೆ. ಅದಕ್ಕೆ ಕಣ್ಣಿಲ್ಲ ಕನಿಕರವಿಲ್ಲ.

ಬಹುಜನ ಒಪ್ಪಿಕೊಳ್ಳದ ನನ್ನದೊಂದು ಚಿಂತನೆ ಇದೆ. ತೀವ್ರ ಕಾಯಿಲೆಗೆ ಒಳಗಾಗಿ ನರಳುತ್ತಿರುವವರನ್ನು, ಹೇಗಾದರೂ ಮಾಡಿ ಬದುಕಿಸಿಕೊಳ್ಳುವ  ಪರಿ ಸರಿ ಇಲ್ಲ ಎಂದು ನನ್ನ ಸ್ಪಷ್ಟ ಅಭಿಮತ. ಅದರಲ್ಲೂ ಹಣಕಾಸಿನ ಚೈತನ್ಯ ಕಡಿಮೆ ಇರುವವರು, ಇರುವ ಹಣವನ್ನು ಕರಗಿಸಿ, ಸಾಲ ಸೋಲ ಮಾಡಿ, ಕಷ್ಟಪಟ್ಟು ಕೊನೆಗೆ ಅವರನ್ನು ಉಳಿಸಿಕೊಳ್ಳಲಾಗದೆ ಸಂಕಟಪಡುವುದು. ಎಲ್ಲವೂ ವ್ಯರ್ಥ.

 ಹೇಗೋ ಜೀವ ಉಳಿದುಕೊಂಡರೆ, ಮುಂದಿನ ಅವರ ಜೀವನ ಎಷ್ಟು ಸಂಕಷ್ಟಕ್ಕೆ ಸಿಲುಕ ಬಹುದು ಎಂದರೆ ಅದು... ಸತ್ತ ಸಾವಲ್ಲ- ಬದುಕಿದ ಬಾಳಲ್ಲ ಎಂಬ ಪರಿಸ್ಥಿತಿ.  

ಏನಾದರೂ ಮಾಡಿ ಬದುಕಿಸಿಕೊಳ್ಳುವ ಇಚ್ಛೆಯನ್ನು ಪೂರೈಸಲು ಈಗಿನ ನಮ್ಮ ಆಸ್ಪತ್ರೆಗಳು/ ವೈದ್ಯರುಗಳು ತುದಿಗಾಲದಲ್ಲಿ ನಿಂತಿರುತ್ತಾರೆ. ಎಷ್ಟೋ ಸಲ ಭಯ/ ಆತಂಕ ಸೃಷ್ಟಿಸುವ ಹೇಳಿಕೆಗಳನ್ನು ನೀಡಿ ನಮ್ಮಗಳ ಮನಸ್ಸಿನಲ್ಲಿ ಆ ಭಾವನೆಯನ್ನು ತುಂಬಿಬಿಡುತ್ತಾರೆ. ಅದರಲ್ಲೂ ದೊಡ್ಡ ಮೊತ್ತದ ಇನ್ಸೂರೆನ್ಸ್ ಮಾಡಿದ್ದರೆ ಅವರಿಗೆ ಸುಗ್ಗಿ. ಈಗೀಗ ಆಸ್ಪತ್ರೆಗೆ ಹೋದರೆ ಮೊದಲ ಪ್ರಶ್ನೆ ಇನ್ಶೂರೆನ್ಸ್ ಇದೆಯಾ... ಅದರಲ್ಲೂ cashless ಇನ್ಸೂರೆನ್ಸ್ ಇದೆಯಾ ಎಂಬುದೇ ಅವರ ವಿಚಾರಣೆ. ರೋಗಿಯ ಶುಶ್ರೂಷೆ ನಂತರದ ಹಂತ.

ಇದಕ್ಕೊಂದು ನಾ ಕಂಡ ತಾಜಾ ಉದಾಹರಣೆ.. ಆತ್ಮೀಯ ಸ್ನೇಹಿತ  "ಅಣ್ಣ" ಎಂದು ನಾ ಕರೆಯುತ್ತಿದ್ದ ಶ್ರೀನಿವಾಸ ಮೂರ್ತಿಯದು. ಒಂದು ಬೆಳಗಿನ ವಾಕಿಂಗ್ ಸಮಯ... ಅಣ್ಣನಿಗೆ ಎದೆ ನೋವು, ಮೈ ಬೆವರಲು ಕಾಣಿಸಿಕೊಂಡಿದ್ದು... ತಕ್ಷಣ ನಾವು  ಅವನನ್ನು ಆಸ್ಪತ್ರೆಗೆ ಸೇರಿಸಿ, ಅವರ ಮನೆಯವರಿಗೆ ತಿಳಿಸಿದೆವು. ಒಂದಷ್ಟು test ಗಳು ಮುಗಿದು angiogram ಮಾಡಿ ಎಲ್ಲೆಲ್ಲಿ ರಕ್ತ ನಾಳಗಳು ಮುಚ್ಚಿವೆ, ಎಷ್ಟು ಭಾಗ ಮುಚ್ಚಿವೆ ಎಂದು ನಮಗೆ ಕಂಪ್ಯೂಟರ್ ಪರದೆಯ ಮೇಲೆ ತೋರಿಸಿ, ಮುಂದಾಗಬಹುದಾದ ಅನಾಹುತವನ್ನು ಬಣ್ಣಿಸಿ  (ಭಯಪಡಿಸಿ ಎನ್ನಲೇ) ತಕ್ಷಣವೇ stunt ಹಾಕಬೇಕು ಎಂಬ ಸಲಹೆ. ಈಗಲೇ ಹಾಕಬೇಕಾ ಎಂಬ ಸಣ್ಣ ಕೋರಿಕೆಗೆ ಬಂದ ಉತ್ತರ...OT ಯಲ್ಲಿ ಇರುವುದರಿಂದ.. ಈಗಾಗಲೇ ಅರ್ಧ ಕೆಲಸ ಆಗಿರುವುದರಿಂದ.. ಈಗ ಮಾಡಿರುವುದೆಲ್ಲ ಪುನಃ ಮಾಡಬೇಕಾದುದನ್ನು ತಪ್ಪಿಸಬಹುದು... ಬೇಗ ನಿರ್ಧಾರ ಮಾಡಿ ಹೇಳಿ... ಎಂತಹ  ಸಂಧಿಗ್ದ. ಸಹಜವಾಗಿ ಮನಸ್ಸು ಯೋಚನೆ ಮಾಡುವುದು ಕೆಟ್ಟದ್ದನ್ನೇ... ಆ ಕೆಟ್ಟದ್ದನ್ನು ತಪ್ಪಿಸಲೇಬೇಕು... ಹಾಗಾದರೆ ಡಾಕ್ಟರ್ ಹೇಗೆ ಹೇಳಿದ್ದಾರೋ... ಹಾಗೆ ಮಾಡಬೇಕು.. ಬೇರೆಯ ಆಯ್ಕೆ ಇಲ್ಲ, ಎಲ್ಲವೂ ಗೌಣವಾಗುತ್ತದೆ. 

ಈ ಸಂದರ್ಭದಲ್ಲಿ ಸುತ್ತ ಮುತ್ತಿನವರು ಕೊಡುವ ಸಲಹೆಗಳು.. ಸೂಚನೆಗಳನ್ನು ಗಮನಿಸಿದರೆ... ಮಾಡಲೇಬೇಕು ಮಾಡದಿದ್ದರೆ ನಂತರದ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ , ಜೊತೆಗೆ ಜನಗಳು ಏನೆಂದುಕೊಳ್ಳುತ್ತಾರೋ ಎಂಬ ಚಿಂತೆಗೆ ಒಳಗಾಗಿ  ನಿರ್ಧಾರ ಮಾಡಬೇಕಾಗುತ್ತದೆ.

ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ, ಯಮಸ್ತು ಹರತಿ ಪ್ರಾಣಾನ್, ವೈದ್ಯೋ ಪ್ರಾಣಾನ್  ಧನಾನಿ ಚ.. ( ಡಾಕ್ಟರ್.. ಯಮ ಸಹೋದರರು.. ಯಮ ಪ್ರಾಣವನ್ನಷ್ಟೇ ಸೆಳೆದರೆ ಡಾಕ್ಟರ್ ಪ್ರಾಣದ  ಜೊತೆಗೆ ಹಣವನ್ನು ಸಹ ಸೆಳೆಯುತ್ತಾನೆ) 

ಈ ಸಂಸ್ಕೃತ ಶ್ಲೋಕವು ನೈಜತೆಗೆ ಹತ್ತಿರವಾಗಿದೆ. ಬಹು ಪಾಲು ಡಾಕ್ಟರ್ ಗಳು... ಕಾರಣಗಳು ಏನೇ ಇರಲಿ.... ತಮ್ಮ ವೃತ್ತಿ ಜೀವನದಲ್ಲಿ ಈಗ ಸೇವೆಗೆ ಮೊದಲ ಸ್ಥಾನ ಕೊಡುತ್ತಿಲ್ಲ.. ಹಣ ಮೊದಲ ಸ್ಥಾನ ಪಡೆದಿದ್ದರಿಂದ.. ಎಲ್ಲವೂ ಎಲ್ಲರೂ... ರೋಗಿಗಳನ್ನು ಹಣಗಳಿಸಲು ಬೇಕಾದ ಒಂದು ಮೂಲ ಎಂದೇ ಪರಿಗಣಿಸುತ್ತಾರೆ. ದೊಡ್ಡ ಆಸ್ಪತ್ರೆಗಳಲ್ಲಿ.. ಪ್ರತಿಯೊಬ್ಬ ಡಾಕ್ಟರಿಗೂ ಅವರು ಆಸ್ಪತ್ರೆಗೆ ಗಳಿಸಿಕೊಡಬೇಕಾದ ಹಣವನ್ನು ನಿಗದಿ ಮಾಡುತ್ತಾರೆ ಎಂದು ಕೇಳಿದ್ದೇನೆ... ಹಾಗಾಗಿ ಬೇಕಾಗಲಿ ಬೇಡವಾಗಲಿ ಒಂದಷ್ಟು test, procedure ಕಡ್ಡಾಯವಾಗಿ ಮಾಡಿಸುತ್ತಾರೆ... ನಂತರ ರೋಗವನ್ನು ವಾಸಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತದೆ.ಇಲ್ಲಿ ರೋಗಿಯ ಮನಸ್ಥಿತಿ ಹಾಗೂ ದೇಹ ಸ್ಥಿತಿ ಗಣನೆಗೆ ಬರುವುದಿಲ್ಲ.



ಇದಕ್ಕಿರುವ ಪರಿಹಾರ ಮಾರ್ಗವೇ LIVING WILL. ನಮ್ಮ ದೇಶದಲ್ಲಿ ಇದು ಜನಪ್ರಿಯ ವಾಗಿಲ್ಲದಿದ್ದರೂ, ಈ ಕಾನೂನು ನಮ್ಮಲ್ಲಿದೆ. ನಾವುಗಳು ಸಾವಿನ ಬಗ್ಗೆ ಮಾತಾಡುವುದೇ ಅಪಶಕುನ ಎಂದು ನಂಬಿದ ಜನಾಂಗ.

ಸಾವು ನಮ್ಮ ಬದುಕಿನ ಕೊನೆಯ ಮೆಟ್ಟಿಲು ಎಂದು ಒಪ್ಪಿಕೊಂಡಾಗ, ನಮ್ಮ ಬದುಕು ಹೇಗಿರಬೇಕೆಂದು ನಾವು ನಿಶ್ಚಯ ಮಾಡುವಾಗ ನಮ್ಮ ಸಾವು ಹೇಗಿರಬೇಕೆಂದು ನಿಶ್ಚಯ ಮಾಡಬಹುದಲ್ಲವೇ? ನಮ್ಮ ಬದುಕಿನ ಕೊನೆಯ ಮೆಟ್ಟಿಲಿನಲ್ಲಿ ನಮ್ಮ ಔಷಧೋಪಚಾರಗಳು ಹೇಗಿರಬೇಕೆಂದು ನಿರ್ಧರಿಸಿ ಅದನ್ನು ಕಾನೂನಾತ್ಮಕವಾಗಿ ಬರೆದಿಡುವುದೇ LIVING WILL. ಇದನ್ನು ಇಚ್ಛಾ ಮರಣ ಎಂದು ಕರೆಯಲೆ?

ನನಗೆ ತಿಳಿದಂತೆ ಮೊದಲ ಇಚ್ಛಾಮರಣಿ ಭೀಷ್ಮ ಪಿತಾಮಹ. ತನ್ನ ಇಷ್ಟದಂತೆ ತನಗೆ ಬೇಕಾದ ಉತ್ತರಾಯಣ ಪುಣ್ಯಕಾಲದ ದಿನ ಸಾವನ್ನು ಪಡೆದ ಧೀರ.

ಗಂಭೀರ ವಿಷಯವನ್ನು ಹಾಸ್ಯ ಲೇಪಿಸಿ ಹೇಳುವುದಾದರೆ ಆತ್ಮಹತ್ಯೆಯೂ ಇಚ್ಛಾ ಮರಣವೇ... ಒಂದೇ ವ್ಯತ್ಯಾಸ.. ಪ್ರಯತ್ನದಲ್ಲಿ ಫಲ ಸಿಕ್ಕರೆ ಇಚ್ಛಾ ಮರಣ , ವಿಫಲವಾದರೆ ಕಾನೂನಿನ ಕುಣಿಕೆಗೆ ಸಿಕ್ಕಿ ಸ್ವಾತಂತ್ರ್ಯ ಹರಣ.

ಜೈನ ಮುನಿಗಳು ಕೈಗೊಳ್ಳುವ ಸಲ್ಲೇಖನ ವ್ರತ ಸಹ ಇಚ್ಛಾ ಮರಣವೇ ಅಲ್ಲವೇ?

ಇನ್ನು ಅಮರಣಾಂತ ಉಪವಾಸ ಮಾಡುವವರು ಇಚ್ಛಾ ಮರಣದ ಅಸ್ತ್ರವನ್ನು ಬೆದರಿಕೆಗಾಗಿ ಉಪಯೋಗಿಸುವವರು... ಉದ್ದೇಶ ಈಡೇರಿದರೆ ಮರಣದ ಸಂಕಲ್ಪ ಹಿಂಪಡೆಯುತ್ತಾರೆ. ಅದು ಆಗದೇ ಇದ್ದರೆ ತಮ್ಮವರು ಯಾರೋ ಬಲವಂತ ಮಾಡಿದರೆಂದು, ಅದಕ್ಕೆ ಮಣಿದರೆಂದು ತೋರಿಸಿಕೊಳ್ಳುತ್ತಾ, ಅವರು ಕೊಟ್ಟ ಹಣ್ಣಿನ ರಸವನ್ನು ಕುಡಿದು  ಸಂಕಲ್ಪ ಹಿಂಪಡೆಯುತ್ತಾರೆ.  ಇನ್ನೊಂದು ಮುಖವಿದೆ... ಈ ಉಪವಾಸದಿಂದ ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂದಾಗ... ಆತ್ಮಹತ್ಯೆಗೆ ಸಂಬಂಧಿಸಿದ ಕಾನೂನನ್ನು ಚಲಾಯಿಸಿ ಉಪವಾಸವನ್ನು ಕೊನೆಗಾಣಿಸಿದ ಸಂದರ್ಭಗಳು ಉಂಟು.

 ಕಾಕತಾಳಿಯವೋ ಆಕಸ್ಮಿಕವೋ ತಿಳಿಯದು, ಈ ವಿಷಯದ ಚಿಂತನೆಯಲ್ಲಿದ್ದಾಗಲೇ ನನ್ನ ಆರೋಗ್ಯ ಹದ ತಪ್ಪಿ ಡಾಕ್ಟರನ್ನು ನೋಡಬೇಕಾಯಿತು. ಸುದೈವದಿಂದ ಅಂತಹ ಮಾರಕ ಕಾಯಿಲೆ ಯಾವುದು ಇಲ್ಲ. ಹಾಗಾದರೂ ನನ್ನ ಇಚ್ಛಾ ಮರಣ/LIVING WILL ಬರೆದಿಡಲು ನಿರ್ಧರಿಸಿದ್ದೇನೆ. ಅದರ ಸಾರಾಂಶ ಹೀಗಿರಬೇಕೆಂದು ಯೋಚಿಸಿದ್ದೇನೆ...

ನನಗೀಗ 77ನೇ ವರ್ಷ, ಜೀವನದ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಯಾವುದೇ ಅನಾರೋಗ್ಯದ ಕಾರಣಕ್ಕಾಗಿ ನನಗೆ ಆಕ್ಸಿಜನ್ ಕೊಟ್ಟು ಉಳಿಸುವುದಾಗಲಿ, ವೆಂಟಿಲೇಟರ್ ಮೇಲಿಟ್ಟು ಜೀವನವನ್ನು ಮುಂದುವರಿಸುವುದಾಗಲಿ, ಕ್ಯಾನ್ಸರ್ ನಂತಹ ಕಾಯಿಲೆಗೆ ಕಿಮೋ ತೆರಪಿ/ ಆಪರೇಷನ್ ಮಾಡುವುದಾಗಲಿ ನನಗೆ ಒಪ್ಪಿಗೆ ಇಲ್ಲ... ಅದು ಮಾಡಬಾರದು. ಆದರೆ ಕಾಯಿಲೆಯಿಂದ ಬರುವ ನೋವನ್ನು ಆದಷ್ಟು ಕಡಿಮೆ ಮಾಡಲು ಬೇಕಾದ ಔಷದೋಪಚಾರವನ್ನು ಮಾತ್ರ ಕೊಡಬೇಕು. ಯಾವುದೇ ಕಾರಣಕ್ಕೂ ಬದುಕುಳಿಸುವ ಪ್ರಯತ್ನ ಮಾಡಬಾರದು.  ಆ ಹಂತದಲ್ಲಿ ನಾನು ಪ್ರಜ್ಞಾವಸ್ಥೆಯಲ್ಲಿ ಇಲ್ಲದಿದ್ದರೆ.. ನನ್ನ ಈ ನಿರ್ಧಾರವನ್ನು ಸಂಬಂಧ ಪಟ್ಟವರು ಕಾರ್ಯಗತ ಗೊಳಿಸಬೇಕು.

ಕ್ಷಮಿಸಿ... ಈಚಿನ ಕೆಲ ಲೇಖನಗಳು ಸಾವಿನ ಸುತ್ತಲೇ ಸುತ್ತಿವೆ. ಸಾಕಿನ್ನು ಸಾವಿನ ಬಗ್ಗೆ ಚಿಂತನೆ, ಇನ್ನೇನಿದ್ದರೂ ಜೀವನದ ಸಿಹಿ ಕಹಿಗಳ ಬಗ್ಗೆ ಮಾತ್ರ.

ನಮಸ್ಕಾರ..

D C Ranganatha Rao

9741128413









    

Comments

  1. Sir
    Hats off👌🏼🙏🏼
    I too would prefer death in place of suffering for self and dear ones.
    I also have already informed that I will not be put on ventilator in case my health detiorates. I am a cancer patient. I am not afraid to move on.
    What is to be frightened to go to SHIVAPADA.

    ReplyDelete
    Replies
    1. Thank you Sir. I will be happy to know You. Please let me know your name and contact

      Delete
    2. Respected DCR Sir, Wonderful/realistic and perhaps most agreeable article relating to last stages of human living/life. As you have narrated your father's end stages, I too had same feeling of my mother's last stages and recent end stage experience of father's. In both cases, I prayed gods intervention to bless OM SHANTHI to both great souls. Though I endorse your KIVING WILL, but nothing will be in our hand at our end stage and everything left to next generation. Your article reminded me of my mother's misery at her last stages and unforgettable recent end stage of my dad. Anyhow, let me end my misery note. 🙏🙏🙏🙏

      Delete
  2. ನಾಗೇಂದ್ರ ಬಾಬು9 February 2025 at 16:32

    ವೈದ್ಯಯೋ ನಾರಾಯಣ ಹರಿ...ಹೋಗಿ
    ಈಗ ವೈದ್ಯ ನರನ ಹಣ ಪಿರಿ..(ಕೀಳು) ಆಗಿದೆ
    ಆದ್ದರಿಂದ ಕಡೆ ಗಳಿಗೆಯಲ್ಲಿ ಹಾಗೂ ಕೆಲ ಸಂದರ್ಭಗಳಲ್ಲಿ ಪ್ರಾಣ ಹೋದರೂ ಸಹ
    ICU ಗಳಲ್ಲಿ ಇರಿಸಿದ ಉದಾಹರಣೆ ಇದೆ
    ನಮ್ಮ ದೇಶದಲ್ಲಿ ಕಾನೂನು ಬಹಳ ಇದೆ ಆದರೆ ಅನುಷ್ಠಾನ ಕಡಿಮೆ ಹಾಗಾಗಿ ಮರಣ ದ ವಿಷಯವನ್ನು ಆ ರಮಣನಿಗೆ ಬಿಟ್ಟು
    ಇರುವಷ್ಟು ಕಾಲ ಆದಷ್ಟೂ ಸುಂದರ ಬದುಕನ್ನು ಸವಿಯೋಣ
    ಬಾಬು

    ReplyDelete
  3. Daya maranave sari ecchu varsha narali satuvudakintha. baraha chennage

    ReplyDelete
  4. Tumba chennagide lekhana. Living Will anthu tumba chennagide.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ