ಕೊನೆಯ ಆಸೆ - Last wish
ಕೊನೆಯ ಆಸೆ - Last wish (will)
ನನ್ನ ಬ್ಲಾಗ್ ಲೇಖನ “ನನಸಾಗದ ಕನಸುಗಳು.. ಕೈಗೂಡದ ಆಸೆಗಳು” ಓದಿದ ಶ್ರೀಮಾನ್ ಗುಂಡೂರಾಯರ ಪ್ರತಿಕ್ರಿಯೆ ಕೆಳಗಿನಂತಿತ್ತು:
ಕೆಲ ದಿನಗಳ ನಂತರ ಮತ್ತೊಮ್ಮೆ ನಾ ಬರೆದ ಲೇಖನವನ್ನು... ನಾನೇ ಓದಿದೆ..
ಅಮ್ಮನ ಬಗ್ಗೆ ಬರೆದದ್ದನ್ನು ಬಿಟ್ಟರೆ... ಭಾವವನ್ನು ಪ್ರಚೋದಿಸುವ ಯಾವ ಅಂಶವು ಬೇರೆಲ್ಲೂ ನನಗೆ ಕಾಣಲಿಲ್ಲ.. ಅಂದಿನ ಕಾಲಕ್ಕೆ ಕೆಲವು ವಿಚಾರದಲ್ಲಿ ನಿರಾಶೆಯಾಗಿದ್ದರೂ... ಕಾಲಕ್ರಮೇಣ ವಸ್ತು ಸ್ಥಿತಿಯನ್ನು ಒಪ್ಪಿಕೊಂಡದ್ದರಿಂದ ನಿರ್ಲಿಪ್ತ ಭಾವನೆ ಇತ್ತು. ಇನ್ನು ಕೆಲವೊಂದು ತಿಕ್ಕಲುತನಗಳು.. ಯಾವ ಭಾವ ಹೊಮ್ಮಲು ಸಾಧ್ಯ ಇತ್ತು? ಲೇಖನ ಬರೆದ ಆಗಿನ ಭಾವನೆಗಳು ಮಾತ್ರ ಅಲ್ಲಿ ಹೊರ ಹೊಮ್ಮಿದೆ.
ಗುಂಡೂರಾಯರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಗೌರವವಿದೆ.. ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ಕೊಡಬಲ್ಲೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು ಸರ್.
ಇನ್ನು ಎರಡನೆಯ ಭಾಗಕ್ಕೆ ಬಂದಾಗ.. ಇದೇ ಶೀರ್ಷಿಕೆಯಲ್ಲಿ ಎರಡನೇ ಪ್ರಬಂಧ ಬರೆಯುವ ಸಲಹೆ. ಇದು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು.
“once more ಎಂದರೆ ಹಾಡುವುದು ಪಾತ್ರದಾರನ ಮರ್ಜಿ" ಎಂದು ಪ್ರಕಟಿಸಿದ್ದ ನಾಟಕದ ಕರಪತ್ರ... ಶಹಾಬಾದಿನಲ್ಲಿ ಓದಿದ್ದು ನೆನಪಿಗೆ ಬಂದು.. ಆ ಸಾಲನ್ನೇ ಉಪಯೋಗಿಸಿ ಎರಡನೇ ಪ್ರಬಂಧವನ್ನು ಬರೆಯಲು ತಪ್ಪಿಸಿಕೊಳ್ಳೋಣವೇ ಎಂದು ಯೋಚಿಸಿದ್ದು ಉಂಟು. ಹಾಗೆ ಮಾಡಲು ಮನಸ್ಸು ಒಪ್ಪಲಿಲ್ಲ.
ಇನ್ನೇನು ಆಸೆಗಳಿವೆ ನನ್ನೊಳಗೆ ಎಂದು ಯೋಚನೆ ಮಾಡಿದಾಗ ಹೊಳೆದದ್ದು
" ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ" ಎಂಬ ಹೇಳಿಕೆ.. ಅದು ಆಸೆಯಾದರೂ.. ಅದು ನನ್ನ ಹತೋಟಿಯಲ್ಲಿ ಇಲ್ಲದ್ದು. ನನಗಿರುವ ಆಯ್ಕೆ ದೇವರಲ್ಲಿ ಪ್ರಾರ್ಥನೆ ಅಷ್ಟೇ...
ನನ್ನ ವಯೋಮಾನದ ಸ್ಥಿತಿಯಿಂದಲೋ... ಅಥವಾ ಜೀವನಾನುಭವದ ಕಾರಣದಿಂದಲೋ ಆಸೆಗಳು / ಕನಸುಗಳು ಎಲ್ಲವೂ ಮಾಯವಾಗಿವೆ ಎನ್ನಲೇ?
ಈಗಿನ ನನ್ನ ಮುಂದಿನ ಆಯ್ಕೆ... ನಾನೀಗ ನಿರ್ವಹಿಸಬೇಕಾಗಿರುವ ಜವಾಬ್ದಾರಿ.. ಹಾಗೂ ಮುಂದಿನ ದಿನಗಳ ಜೀವನದ ಆಗು ಹೋಗುಗಳ ಬಗ್ಗೆ... ಜೀವಿಸಬೇಕಾದ ರೀತಿಯ ಬಗ್ಗೆ ಯೋಜನೆ ಮಾತ್ರ...... ಅಯ್ಯೋ ಇದೂ ಸುಪ್ತವಾದ ಆಸೆ ಅಲ್ವಾ?
ಈ ಹಂತದಲ್ಲಿ ನೆನಪಿಗೆ ಬಂದಿದ್ದು ಸಿನಿಮಾದಲ್ಲಿ ನೋಡಿದ ದೃಶ್ಯ... ಖೈದಿಯನ್ನು ನೇಣುಗಂಬಕ್ಕೆ ಏರಿಸುವ ಮೊದಲು ಕೇಳುವ ಪ್ರಶ್ನೆ "ನಿನ್ನ ಕೊನೆಯ ಆಸೆ ಏನು....?"
ಜೊತೆ ಜೊತೆಗೆ ಚಿಕ್ಕಂದಿನಲ್ಲಿ ನೋಡಿದ ಇನ್ನೊಂದು ಸಿನಿಮಾದ ದೃಶ್ಯ ದೇವರು ಪ್ರತ್ಯಕ್ಷನಾಗಿ ವರ ಕೊಡಲು ಸಿದ್ದನಾಗಿ "ನರುಡ ನೀ ಕೋರಿಕ ಏಮಿ” ಎಂದು ಕೇಳಿದ್ದು.
ಹಾಗಾದ್ರೆ ನನ್ನ ಕೊನೆ ಆಸೆ ಏನು ಅಂತ ಯೋಚನೆ ಮಾಡಿದಾಗ ಹೊಳೆದದ್ದೇ Last will.
ವಿಲ್ ಮಾಡದಿದ್ದರೆ, ಮುಂದೆ ಮಗಳಿಗೆ ಆಸ್ತಿ ಪಡೆಯಲು ಕಷ್ಟವಾಗಬಹುದು ಹಾಗಾಗಿ ಮಾಡಲೇಬೇಕು... ಇದು ಮಗಳ ಮೇಲಿನ ವ್ಯಾಮೋಹವೇ ಅಲ್ಲವೇ?
ವಿಲ್ ಮಾಡಬೇಕು ಅನ್ನುವ ಭಾವನೆ ಬಂದು ಕೆಲ ವರ್ಷಗಳಾದರೂ... ಅದನ್ನು ಕಾರ್ಯಗತಗೊಳಿಸಲು ಇಂಥದೇ ಕಾರಣ ಎಂದು ಗೊತ್ತಿಲ್ಲದೆ ಮುಂದೂಡುತ್ತಿದ್ದೆ... ಈಗ ಅನ್ನಿಸಿತು ಇದನ್ನು ಮಾಡಲೇಬೇಕು ಎಂದು... ಅದನ್ನು ಮಾಡಿ ಈಗಷ್ಟೇ ಮುಗಿಸಿ ಆಯ್ತು. ಅದೇನಿದ್ದರೂ ನನ್ನಲ್ಲಿರುವ ಆಸ್ತಿ / ಹಣದ ವಿಲೇವಾರಿ ..ನಾನು ಸತ್ತ ನಂತರ ಜಾರಿಗೆ ಬರುವಂತದ್ದು. ಅಂದರೆ ನಾನಿರುವ ತನಕ ಅದರ ಮೇಲಿನ ವ್ಯಾಮೋಹ ಅಥವಾ ಅಂಟು ಇದ್ದದ್ದೆ.
ದೇಹ ದಾನ ಮಾಡಿರುವ ಕಾಗದ ಪತ್ರಗಳನ್ನು, ಕಾಣುವಹಾಗೆ ಅಂಟಿಸಿ, ಮಗಳಿಗೆ ತೋರಿಸಿ, ಯಾವ ಅಂತ್ಯಕ್ರಿಯೆಗಳೂ ಬೇಡ, ಆಸ್ಪತ್ರೆಯ ನಂಬರಿಗೆ ಫೋನ್ ಮಾಡಿ, ದೇಹವನ್ನು ಅವರಿಗೆ ಕೊಡಬೇಕು ಎಂದು ಹೇಳಿದೆ... ಮನಸಾ ಒಪ್ಪಿದಳಾ? .... ಅನುಮಾನ ನನ್ನಲ್ಲಿದೆ. ಮತ್ತೊಂದು ಯೋಚನೆ ಬಂದದ್ದು... ನಾನೇ ಇಲ್ಲದಿರುವಾಗ ಏನಾದರೇನು... ನನಗೆ ಸಂಬಂಧ ಇಲ್ಲದುದಲ್ಲವೇ? ನಗೆ ಬಂತು.
60 ದಾಟಿದ ಮೇಲೆ... ವಾನಪ್ರಸ್ಥಾಶ್ರಮದಲ್ಲಿ ಐಹಿಕ ವಸ್ತುಗಳು ಹಾಗೂ ಸಂಬಂಧಗಳನ್ನು ದೂರ ಮಾಡಿಕೊಳ್ಳುವ ಕಾಲ. ವ್ಯಾಮೋಹವನ್ನು ಕಡಿಮೆ ಮಾಡಿಕೊಳ್ಳುವ ಕಾಲ. ಸಾಮಾನ್ಯವಾಗಿ ಈ ಸಮಯದಲ್ಲೇ ತೀರ್ಥ ಯಾತ್ರೆಗಳನ್ನು ಮಾಡುವುದು... ಹಾಗಾಗಿ ಕಾಶಿ ಗಯಾಗೆ ಹೋದವರು... ತಮಗಿಷ್ಟವಾದ ಹಣ್ಣು ತರಕಾರಿ ಹಾಗೂ ಸಿಹಿಯನ್ನು ವರ್ಜಿಸಬೇಕು ಎನ್ನುವ ಒಂದು ಪದ್ಧತಿ ರೂಡಿಯಲ್ಲಿದೆ. (ಇಷ್ಟವಾದದ್ದನ್ನು ಬಿಡುವುದು ಎಂದಾಗ.. ನನಗೆ ಇಷ್ಟ ನನ್ನ ಹೆಂಡತಿ... ಬಿಡಬಹುದಲ್ಲ ಎಂಬ ನನ್ನ ಮಾತಿಗೆ ಚಪ್ಪಾಳೆ ತಟ್ಟಿ ಖುಷಿ ಪಟ್ಟವರು ಕೆಲವರು, ಅತಿಯಾಯ್ತು ಎಂದು ಟೀಕಿಸಿದವರು ಕೆಲವರು , ವ್ಯಂಗ್ಯ ತುಂಬಿದ ಒಪ್ಪಿಗೆ ವ್ಯಕ್ತಪಡಿಸಿದ್ದು ನನ್ನ ಹೆಂಡತಿ.. ಇನ್ನು ಬಿಡುವುದೆಲ್ಲಿ ಬಂತು)
ಬಹುಶಃ ಮೊದಲನೇ ಆಸೆ ತಿನ್ನುವುದೇ ಆಗಿರುತ್ತದೆ.. ಹಾಗಾಗಿ ಅಲ್ಲಿಂದ ಮೊದಲು ಮಾಡುವ ಪ್ರಯೋಗವಿರಬೇಕು. ನಾನು ಪಡವಲಕಾಯಿ, ನೇರಳೆ ಹಣ್ಣು ಹಾಗೂ ಜಾಮೂನು ತಿನ್ನುವುದನ್ನು ಬಿಟ್ಟಿದ್ದೇನೆ. ಇಲ್ಲೊಂದು ಮಾತು... ಈ ಕ್ರಿಯೆಯಲ್ಲಿಯೂ ಒಂದಷ್ಟು ಸ್ವಾರ್ಥ ತುಂಬಿದ ಮೋಹ ಇದ್ದೇ ಇದೆ... ಪಡವಲಕಾಯಿ ತಿನ್ನಬಾರದೆಂದು ನಾನು ನನ್ನ ಹೆಂಡತಿ ನಾಗರ ಪ್ರತಿಷ್ಠೆ ಮಾಡಿದಾಗ ನಿರ್ಧಾರ ಮಾಡಿದ್ದೆವು, ನೇರಳೆ ಹಣ್ಣು ಎಲ್ಲ ಕಾಲವೂ ಸಿಗುವುದಿಲ್ಲ ಆದ್ದರಿಂದ ಅದು ಸುಲಭ ಸಾಧ್ಯ. ನಿಜವಾಗಿಯೂ ಬಿಟ್ಟದ್ದೆಂದರೆ ಜಾಮೂನ್ ಮಾತ್ರ... ಜಾಮೂನು ನನಗಿಷ್ಟವಾದ ಸಿಹಿ.
ವ್ಯಾಮೋಹ ಬಿಡಲಾಗದು... ಆದಷ್ಟು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸುವವನು ನಾನು. ಹಿಂದಿನವರು ಹೇಳಿದಂತೆ... ತಾವರೆ ಎಲೆಯ ಮೇಲಿನ ನೀರ ಹನಿಯಾಗಿ ಅಥವಾ ವಿಜ್ಞಾನದ ಮಾತಿನಲ್ಲಿ ಹೇಳುವುದಾದರೆ..
ಗಾಜಿನ ಮೇಲೆ ಬಿದ್ದ ಪಾದರಸವಾಗಿ .. ಅದಕ್ಕೆ ಅಂಟದಂತೆ ಅದರ ಮೇಲೆ ಸರಿದಾಡಿಕೊಂಡು ಇರುವುದು.. ಈ ಮಾತು ನಮ್ಮ ನೆಲೆಗೆ ಬಂದಾಗ ... ಅದನ್ನು ಅಳವಡಿಸಿಕೊಳ್ಳುವುದು ಸುಲಭವಲ್ಲ ಅಲ್ಲವೇ?
ವ್ಯಾಮೋಹ ಎಷ್ಟು ಕಡಿಮೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಉತ್ತರ ಬಹು ಕ್ಲಿಷ್ಟ. ಆಸೆಯ ತೀವ್ರತೆಯೇ ವ್ಯಾಮೋಹ ಅಂತ ಈಗ ಅನಿಸಿದೆ. ಜೀವನ ಸಾಗಿಸಲು ನಾಳೆಯ ಬಗೆಗಿನ ಆಸೆಯೇ ಮೂಲ ಸ್ರೋತ. ಆಸೆ ಇರಲೇ ಬೇಕು.... ದುರಾಸೆ ಬೇಡ.. ದುರಾಸೆಯೇ ದುಃಖಕ್ಕೆ ಕಾರಣ.
ಆಸೆ ದುರಾಸೆಯ ಮಧ್ಯದ ಗೆರೆ ಎಷ್ಟು ತೆಳು ಎಂದರೆ.. ಅದರ ಇರುವಿಕೆಯೇ ಗಮನಕ್ಕೆ ಬರದಷ್ಟು.
ನನ್ನೊಳಗೆ ಇಣುಕಿದಾಗ ಕಂಡ ದ್ವಂದ್ವಗಳು ಇದಕ್ಕೆ ಉದಾಹರಣೆ.
ಹಣ ಸಂಪಾದನೆ ಮಾಡಿದ್ದು ಸಾಕು... ಇನ್ನು ಇರುವುದರಲ್ಲೇ ನೆಮ್ಮದಿಯಾಗಿ ಇರೋಣ ಎಂದು ನಿರ್ಧಾರ ಮಾಡಿ ನನ್ನ ವ್ಯಾಪಾರ ವಹಿವಾಟನ್ನು ನಿಲ್ಲಿಸಿದವನು ನಾನು. ಆದರೆ ನಾನು ಕೊಡುವ technical consultation ಗೆ ಬರುವ ಗೌರವಧನದ ಆದಾಯವನ್ನು ಬೇಡ ಎನ್ನದವನೂ ಸಹ. ಹಣದ ಮೇಲಿನ ಆಸೆ ಇದ್ದೇ ಇದೆ.
ನನ್ನ ಬರಹಗಳು ನನ್ನ ವೈಯಕ್ತಿಕ ಸಂತೋಷಕ್ಕಾಗಿ ಎಂದು ಮೊದಲು ಮಾಡಿದ್ದು ನಿಜವಾದರೂ ಸಹ... ನಂತರದ ದಿನಗಳಲ್ಲಿ ಜಾಸ್ತಿ ಜನ ಓದಲಿ... ಹಾಗೂ ಪ್ರತಿಕ್ರಿಯಿಸಲಿ ಎಂಬ ಇಚ್ಛೆ ಇದ್ದೇ ಇದೆ.
ಶಿಶುಮೋಹ ಸತಿಮೋಹ ಜನನಿಜನಕರ ಮೋಹ
ರಸಿಕಭ್ರಾತರ ಮೋಹ ರಾಜಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ......
ಇದು ಪುರಂದರದಾಸರು ಹೇಳಿದ ಬಹುಮುಖದ ಮೋಹಗಳು... ಅಂತಹ ದಾಸರಿಂದಲೇ ಕಳೆಯಲಾಗದ ಈ ಮೋಹ .. ನನ್ನಂತಹ ಸಾಮಾನ್ಯ ಮನುಷ್ಯನದು ಯಾವ ಲೆಕ್ಕ ಎಂದು ಸಮಾಧಾನ ಮಾಡಿಕೊಳ್ಳಬಹುದು ಅಷ್ಟೇ.
ವ್ಯಾಮೋಹದಿಂದ ಸಂಪೂರ್ಣವಾಗಿ ಹೊರಬರುವುದು, ಸನ್ಯಾಸಾಶ್ರಮ ಸೇರಿದಾಗ ಮಾತ್ರ ಎಂಬ ನಂಬಿಕೆ ಇದೆ. ಸನ್ಯಾಸಿಗೂ ಜೀವನ್ಮುಕ್ತಿಯ ಆಸೆ ಇರುವುದರಿಂದ ಆತನೂ ವ್ಯಾಮೋಹದಿಂದ ಮುಕ್ತನಲ್ಲ. ಈಗಂತೂ ಕಾವಿಯ ಧರಿಸಿದ ಕಪಟ ಸನ್ಯಾಸಿಗಳ ಉಪಟಳ ಜಾಸ್ತಿಯೇ ಆಗಿದೆ. ಅದರಲ್ಲೂ ಮಠ ಮಾನ್ಯಗಳಲ್ಲಿ ... ಅಧಿಕಾರಕ್ಕಾಗಿ, ಮಠದ ಆಸ್ತಿಗಾಗಿ, ಪೂಜಾ ವಿಧಾನಕ್ಕಾಗಿ ನಡೆಯುತ್ತಿರುವ ಹೋರಾಟಗಳು, ಮಠಾಧೀಶರುಗಳ ಮೇಲೆ ಬರುತ್ತಿರುವ ವಿಧ ವಿಧದ ಆರೋಪಗಳು, ನ್ಯಾಯಾಲಯದಲ್ಲಿ ಹೋರಾಟಗಳು, ಕಾವಿಗೆ ಕಪ್ಪು ಮಸಿ ಬಳಿಯುವಂತಾಗಿದೆ.
ಈಗಂತೂ ಪ್ರಯಾಗದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸುವ ಕೆಲ ಸನ್ಯಾಸಿಗಳನ್ನು ನೋಡಿದಾಗ ಇವರೆಲ್ಲ ನಿಜವಾಗಿಯೂ ವಿರಕ್ತರೇ ಎಂಬ ಅನುಮಾನ ಬರುವುದು ಸಹಜ. (ತರಂಗದಲ್ಲಿ ಮಹಾಕುಂಭಮೇಳದ ವಿಷಯವಾಗಿ ಬಂದ ಲೇಖನವನ್ನು ಓದುತ್ತಾ, ಚಿತ್ರಗಳನ್ನು ನೋಡುತ್ತಾ ಬಂದ ಅಭಿಪ್ರಾಯ)
ಸಂಸಾರದಲ್ಲಿದ್ದು ಸನ್ಯಾಸಿಯಂತಿರುವ ಒಂದು ಕಲ್ಪನೆ ನಮ್ಮಲ್ಲಿದೆ. ಕಲ್ಪನೆಯೇನೋ ತುಂಬಾ ಚೆನ್ನಾಗಿದೆ. ಪ್ರಾಯಶಃ ನಮ್ಮ ಪೂರ್ವಜರು ಇದನ್ನು ಸಾಧಿಸಿದ್ದಿರಬಹುದು. ನನಗೇನೋ ಅದು ಸಾಧ್ಯವೇ ಇಲ್ಲ ಅನ್ನುವ ಭಾವ... ಸಣ್ಣಪುಟ್ಟ ವಿಚಾರದಲ್ಲೂ ಮನೆಯ ಆಗು ಹೋಗುಗಳ ಬಗ್ಗೆ ಮೂಗು ತೂರಿಸುವ ಸ್ವಭಾವ ಇದನ್ನು ಎತ್ತಿ ತೋರಿಸುತ್ತದೆ.
ಕೊನೆಯ ಆಸೆ ಎಂದು ಬರೆಯಲು ಶುರು ಮಾಡಿದ ಪಟ್ಟಿ ಕೊನೆಯೇ ಇಲ್ಲದಂತೆ ಮುಂದುವರಿಯುತ್ತಿದೆ... ಅಯ್ಯೋ ಆಸೆಯೇ.. ನಿನ್ನದು ರಕ್ತ ಬಿಜಾಸುರನ ವಂಶ...
ಈ ರಕ್ತಬೀಜಾಸುರನ ಸಂಹಾರ ಮಾಡಲು ಬೇಕಾದ ಶಕ್ತಿಯನ್ನು ಆ ದೇವರ ವರದ ಮೂಲಕವೇ ಪಡೆಯಬೇಕೇನೋ....
ಆ ದೇವರೇನಾದರೂ ಪ್ರತ್ಯಕ್ಷನಾಗಿ ನನಗೆ ಏನು ವರ ಬೇಕೆಂದು ಕೇಳಿದರೆ... ಇನ್ನು ಮುಂದೆ.. ಮನಸ್ಸಿನಲ್ಲಿ ಆಸೆಗಳೇ ಹುಟ್ಟದಿರಲಿ ಎಂದು ಕೇಳಿದರೆ ಸರಿ ಅಂತ ನನ್ನ ಅನಿಸಿಕೆ.
ವರ ಕೇಳುವುದರಲ್ಲೂ ಜಾಣತನ ಇರಬೇಕು... ಅಂತಹ ಜಾಣತನ ಕಂಡದ್ದು ನಾನು ಸತಿ ಸಾವಿತ್ರಿಯಲ್ಲಿ. ತನ್ನ ಗಂಡನ ಪ್ರಾಣವನ್ನು ಕೇಳಿದಾಗ ಯಮ ನಿರಾಕರಿಸಿದ್ದು, ಅದರ ಬದಲು ವರದ ಆಮಿಷ ಒಡ್ಡಿದ್ದು... ಯಮನೇ ಕೊಡಲು ತಯಾರಾದ ವರವನ್ನೇ ಅಸ್ತ್ರವನ್ನಾಗಿಸಿಕೊಂಡು... ತನ್ನ ಗಂಡ ಸತ್ಯವಾನನಿಂದ ತನಗೆ 100 ಬಲಶಾಲಿ ಮಕ್ಕಳಾಗಲಿ ಎಂದು ಕೇಳಿ ಅಸ್ತು ಅನಿಸಿಕೊಂಡು, ಅವನ ವರದಿಂದಲೇ ಯಮನನ್ನು ಕಟ್ಟಿ ಹಾಕಿದ ಜಾಣೆ.
ನಾನು ತುಂಬಾ ಮೆಚ್ಚಿದ ಸಾಹಿತಿ ಬೀಚಿಯವರು. ಸುಧಾ ವಾರಪತ್ರಿಕೆಯಲ್ಲಿ ಬರುತ್ತಿದ್ದ ಅವರ ನೀವು ಕೇಳಿದಿರಿ ವಿಭಾಗ ತುಂಬಾ ಅರ್ಥಪೂರ್ಣ ಹಾಗೂ ಹಾಸ್ಯಮಯವಾಗಿರುತ್ತಿತ್ತು.
ಓದುಗರ ಒಂದು ಪ್ರಶ್ನೆ “ನಿಮಗೆ ದೇವರು ಪ್ರತ್ಯಕ್ಷವಾದರೆ ಏನೆಂದು ವರವನ್ನ ಕೇಳುತ್ತೀರಿ?" ಎಂದು. ಅದಕ್ಕೆ ಅವರ ಉತ್ತರ "ಬುಡುಬುಡಿಕೆಯವರಂತೆ ಕೇಳಿ ಕಾಡಿ ವರ ಪಡೆಯುವ ಮೂರನೇ ದರ್ಜೆಯ ಭಕ್ತ ನಾನಲ್ಲ. ನನಗೆ ಸಲ್ಲಬೇಕಾದುದನ್ನು ಕೊಡಲಿ ಮುಂದು ನಡೆಯಲಿ ಅವನ ಕೆಲಸಕ್ಕವನು." ಎಷ್ಟು ಅರ್ಥಪೂರ್ಣ "ನನಗೆ ಸಲ್ಲಬೇಕಾದುದು" ಎಂದಾಗ.. ನಮ್ಮ ಭಾಗ್ಯದಲ್ಲಿರುವಷ್ಟು.. ಕೇಳಿದರೂ ಕೊಡುತ್ತಾನೆ ಕೇಳದಿದ್ದರೂ ಕೊಡುತ್ತಾನೆ, ಹಾಗಾಗಿ ವರಕ್ಕೆ ಏನೂ ಕಿಮ್ಮತ್ತಿಲ್ಲ.
ಒಂದು ಕವನ... ದೇವರಲ್ಲಿ ಪ್ರಾರ್ಥಿಸುವ ಶೈಲಿ.. ನನಗೆ ತುಂಬಾ ಇಷ್ಟವಾದದ್ದು..." ನಿನ್ನ ನಾನೇನ ಬೇಡಲಿ ದೇವಾ... ಕೊಡಲೆನಗೆ ನಿನ್ನಲೇನುಂಟು ಅದೆಲ್ಲವ ...(ಕೊಡು)"
ಇಷ್ಟೆಲ್ಲಾ ಆದಮೇಲೆ.. ಅತ್ಯುತ್ತಮ ಆಯ್ಕೆ ಎಂದರೆ.. ಭಗವದ್ಗೀತೆಯ ಕೃಷ್ಣನ ಹೇಳಿಕೆ..." ಕರ್ಮಣ್ಯೇ ವಾಧಿಕಾರಸ್ತೇ, ಮಾಫಲೇಷು ಕದಾಚನಃ". ನಮ್ಮ ಅಧಿಕಾರ ಕೆಲಸ ಮಾಡುವುದಕ್ಕಷ್ಟೇ.. ಫಲಾಫಲಗಳು ದೈವೇಚ್ಛೆ.
ಹಾಗಾದರೆ ಕೊನೆಯ ಆಸೆ?
ಯಾವ ಜಿಜ್ಞಾಸೆಯೂ ಇಲ್ಲದೆ... ಮೊದಲನೆಯದಾಗಿ ನನ್ನ ಮನಸ್ಸಿಗೆ ನೆಮ್ಮದಿ ಸಂತೋಷ ಕೊಡುವ... ಜೊತೆ ಜೊತೆಗೆ ನಮ್ಮ ಸುತ್ತ ಮುತ್ತಿನವರಿಗೂ ಸಂತೋಷ ಹಂಚುವ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡು... ನಿಸ್ಪೃಹತೆಯಿಂದ ಮುಂದಿನ ಜೀವನವನ್ನು ಬಂದಂತೆ ಜೀವಿಸುತ್ತಾ...
ಜೀವನದ ಅಲೆಗಳ ಮೇಲೆ ತೇಲಿಕೊಂಡು.. ಅವು ಒಯ್ದಲ್ಲಿಗೆ ಹೋಗುವುದೇ ಕೊನೆಯ ಆಸೆಯಾದರೆ ಚೆನ್ನ ಎಂದು ನನ್ನ ನಿರ್ಧಾರ.
ಅಹುದಾದರಹುದೆನ್ನಿ... ಇಲ್ಲವಾದರಿಲ್ಲವೆನ್ನಿ.
ನಮಸ್ಕಾರ....
D C Ranganatha Rao
9741128413
Sooper chikkappa
ReplyDeleteಆಸೆಯೆ ದುಃಖಕ್ಕೆ ಮೂಲ ಅಂದರು ಸಹ
ReplyDeleteಜನಿಸಿದ ಮೇಲೆ ಒಂದು ಸುಂದರ ಜೀವನ ನಡೆಸಲು ಸಹ ಆಸೆ ಬಹಳ ಮುಖ್ಯ....ಆಸೆ ಇಲ್ಲದ ಜೀವನ ನೀರಸ....(ದುರಾಸೆ ಬೇಡ)
ನಿಮ್ಮ ಲೇಖನದ ಮೂಲಕ ತಿಳಿಸಿರುವ ಎಲ್ಲಾ ಆಸೆಗಳು ಸಾಮಾನ್ಯ ಮಾನವರ ಸಹಜ ಬಯಕೆಗಳಾದರೆ ...ದಾರ್ಶನಿಕರ ವಿಜ್ಞಾನಿಗಳ
ಆಸೆಗಳು ನಮ್ಮನ್ನು Artificial intelligence
ಒರೆಗೆ ತಂದಿದೆ...ಮುಂದೇನೊ?
ಇಷ್ಟೆಲ್ಲಾ ಆಗಿರುವಾಗ ನನ್ನನ್ನು ಕಾಡುವ ಕಟ್ಟ
ಕಡೆಯ ಪ್ರಶ್ನೆ ಆಸೆಗೆ ಕೊನೆಯುಂಟೆ ಅಥಾವ
ಕೊನೆ ಆಸೆ ಉಂಟೆ?
ಧನ್ಯವಾದಗಳು
ಬಾಬು
ನಮಸ್ಕಾರ......
ReplyDeleteಹೌದು, ನಿಮ್ಮ ನುಡಿಗಳ ಸರಮಾಲೆ ಎಲ್ಲವೂ ಸರಿಯಾಗಿದೆ, ನಮ್ಮದೇನಿದೆ, ಬಂದದ್ದನ್ನು ಸ್ವೀಕರಿಸಿ ಒಪ್ಪಿಕೊಳ್ಳುವುದುಷ್ಟೇ ನಮ್ಮ ಕೆಲಸ. ಲೇಖನ ಚೆನ್ನಾಗಿದೆ ಧನ್ಯವಾದಗಳು🙏
ಆಸೆಯೇ ಜೀವನಕ್ಕೆ ಪ್ರೇರಕ.ಆದರೆ ಅತಿಯಾದ ಆಸೆ ಇರುವುದು ಬೇಡ.
ReplyDeleteನಮಗೆ 60ರ ನಂತರ ಬರುವ ನಿರ್ಲಿಪ್ತತೆ 30ರ ಆಸುಪಾಸಿನಲ್ಲಿ ಬಂದರೆ ಜೀವನ ಸುಖದಾಯಕವಾಗಿರಬಹುದೇನೋ?
ನಮ್ಮಲ್ಲಿ ಏನಿದೆಯೋ ಅದರಿಂದ ತೃಪ್ತಿ,ಸಂತೋಷ ಕಾಣಬೇಕು. ನಮ್ಮ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡುತ್ತಾ ಹೋದರೆ ನಮಗೆ ಏನು ಲಭ್ಯ ಇದೆಯೋ ಅದು ದೊರಕೆ ದೊರಕುತ್ತದೆ.
ಲೇಖಕರು ಆಸೆಯ ಬಗ್ಗೆ ಹೇಳುತ್ತಾ ನಮ್ಮನ್ನು ಹಲೋ ಗೀತಾ ಲೋಕಕ್ಕೆ ಕರೆದೊಯ್ಯುತ್ತಾರೆ ಇದು ಅವರ ಕಲೆ.
ವಿಷ್ಣುವಿಗೆ ಅಲಂಕಾರದ ಆಸೆ, ಶಿವನಿಗೆ ಅಭಿಷೇಕದ ಆಸೆ.... ಇನ್ನು ಹುಲು ಮಾನವರಾದ ನಮಗೆ ಆಸೆಯ ಪಾಶ ಬಿಟ್ಟೇತೆ?
ಕೊನೆ ಹನಿ
ದೇವರಲ್ಲಿ ನಮ್ಮ ಆಸೆ ಏನಿದೆಯೋ ಅದನ್ನು ಕೇಳುವುದನ್ನು ಬಿಟ್ಟು ನಮಗೆ ಯಾವುದು ಸೂಕ್ತವೋ ಅದನ್ನು ಕರುಣಿಸು ಎಂದು ಕೇಳುವುದು ಜಾಣತನ.
ವಂದನೆಗಳು
ಗುರು ಪ್ರಸನ್ನ
ಚಿಂತಾಮಣಿ
ಹಲೋ geetha❌
ReplyDeleteಆಲೌಕಿಕ ✅