ಜೀವನದ ಸಹ ಪ್ರಯಾಣಿಕರು




ಸಾವಿನ ಚಿಂತನೆಯ ಬಳಿಕ ಜೀವನದ ಬಗ್ಗೆ ಮುಖ ಮಾಡುವುದು ಅನಿವಾರ್ಯ... ಅಪೇಕ್ಷಣೀಯ  ಸಹ.

ಆ ಗುಂಗಿನಲ್ಲಿ.. ಸತ್ತ ಹಿರಿಯರು ಹಾಗೂ ಸಮಕಾಲೀನರ ನೆನಪುಗಳೇ ಒಂದರ ಹಿಂದೆ ಒಂದು ಓಡುತ್ತಿದ್ದವು.. ಅದನ್ನು ಹತೋಟಿಗೆ ತರಲು ಹೆಣಗಾಡುತ್ತಿದ್ದಾಗ, ಪ್ರಯತ್ನಪೂರ್ವಕವಾಗಿ ನೆನೆಸಿಕೊಂಡದ್ದು ಬದುಕಿರುವ ವ್ಯಕ್ತಿಗಳನ್ನು... ಜೊತೆ ಜೊತೆಗೆ ಬಂದದ್ದು ನನ್ನ ಜೀವನದ ಪಯಣದಲ್ಲಿ ಇಣುಕಿ ಹೋದ ಕೆಲ ವ್ಯಕ್ತಿಗಳ ನೆನಪು. ಅವರ ಜೊತೆ ಕಳೆದ ಕ್ಷಣಗಳು ಕೆಲವೇ ಆದರೂ.. ನನ್ನ ಮನಸಿನಲ್ಲಿ  ಅಚ್ಚಳಿಯದೆ ಉಳಿದಿರುವ  ಅವರುಗಳ ನೆನಪು ಬಂತು. ಇಲ್ಲಿದೆ ಅಪರೂಪದ ವ್ಯಕ್ತಿಗಳ ಪರಿಚಯ... .

ಚನ್ನಬಸಪ್ಪ:

ನನ್ನೂರು ದೊಡ್ಡಜಾಲ ಬಿಟ್ಟು ಬೆಂಗಳೂರಿಗೆ ಬಂದು... ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿಗೆ ಸೇರಿದ ಹೊಸದು. ವಾತಾವರಣವೂ ಹೊಸದು, ಜನಗಳೂ ಹೊಸಬರು.  "ಢಣ ಢಣ ಢಣಾ" ಎಂದು ಶಬ್ದ ಬರುತ್ತಿದ್ದ ಶಾಲೆಯ ಗಂಟೆಯ ಪರಿಚಯವಿದ್ದ ನನಗೆ  "ಡುಂಟ ಢಾಂಠು ಢಾಣ್  ಢಾಣ್...ಡುಂಟ ಢಾಂಠು ಢಾಣ್  ಢಾಣ್" ಎಂದು ಲಯಬದ್ಧವಾಗಿ ಹೊಡೆಯುವ ಗಂಟೆಯ ಸದ್ದು ಸಹ ಹೊಸದೇ. ಈ ಘಂಟೆಯ ಬಗ್ಗೆ ನನಗೆ ಕುತೂಹಲ... ಇನ್ನೂ ಸರಿಯಾಗಿ ಪರಿಚಯವಾಗದವರನ್ನು ಕೇಳಲು ಮಖೇಡಿತನ.

ಒಂದು ದಿನ ಇದ್ದಕ್ಕಿದ್ದಂತೆ ಕಣ್ಣಿಗೆ ಬಿದ್ದದ್ದು ....ಹಿಡಿ ಇರುವ ಗಂಟೆಯನ್ನು ಕೈಯಲ್ಲಿ ಹಿಡಿದು, ಕೈಯನ್ನು ಮೇಲೆ ಕೆಳಗೆ ಆಡಿಸುತ್ತಾ, ಸ್ವಲ್ಪ ಮುಂಗೈಯನ್ನು ತಿರುಗಿಸುತ್ತಾ... ಲಯಬದ್ಧವಾಗಿ... "ಡುಂಟ ಢಾಂಠು ಢಾಣ್  ಢಾಣ್...ಡುಂಟ ಢಾಂಠು ಢಾಣ್  ಢಾಣ್" ಶಬ್ದವನ್ನು ಹೊರಡಿಸುತ್ತಿದ್ದ  ವ್ಯಕ್ತಿ.   ಬಿಳಿಯ ಪೈಜಾಮ, ಕೈತುಂಬ ತೋಳಿನ ಬಣ್ಣದ ಚೆಕ್ಕಿನ ಶರಟು, ಹಣೆಗೆ ವಿಭೂತಿ, ಕಣ್ಣಿಗೆ ಕನ್ನಡಕ, ಕಾಲಿಗೆ ಚಪ್ಪಲಿ, ದುಂಡನೆಯ ಮುಖ.. ತಲೆ ತುಂಬಾ ಕಪ್ಪು ಬಿಳುಪು ಕೂದಲಿನ, ಮಧ್ಯಕ್ಕೆ ಬೈತಲೆ ತೆಗೆದು ತಲೆ ಬಾಚಿದ್ದ, ನಗುಮುಖದ ಆ ಚಿತ್ರ ನನ್ನ ಕಣ್ಣ ಮುಂದೆ ಈಗಲೂ ಇದೆ. ನಂತರ ತಿಳಿದದ್ದು ಅವರ ಹೆಸರು... ಚನ್ನಬಸಪ್ಪ ಎಂದು.. ಅವರು ಶಾಲೆಯ  peon / attender ಎಂದು , ಈ ಪದಗಳೂ ನನಗೆ ಹೊಸವೇ. ಗೃಹಮಂತ್ರಿಯಾಗಿ ನಾನೇ ಶಾಲೆಯ ಘಂಟೆಯನ್ನು ಬಾರಿಸುತ್ತಿದ್ದವನಿಗೆ... ಗಂಟೆ ಬಾರಿಸಲೋಸುಗ ಒಬ್ಬ ವ್ಯಕ್ತಿ ಇದ್ದಾರೆ ಎಂದು ತಿಳಿದಾಗ ಆಶ್ಚರ್ಯವಾಯಿತು...

ಪ್ರತಿ ಪಿರಿಯಡ್ ನ ನಂತರವೂ ಗಂಟೆ ಬಾರಿಸುತ್ತಿದ್ದ ಚನ್ನಬಸಪ್ಪ ನಮಗೆ ಪ್ರಿಯ. ಅದಕ್ಕೂ ಹೆಚ್ಚು ಪ್ರಿಯವಾಗುತ್ತಿದ್ದದ್ದು... ಚನ್ನಬಸಪ್ಪ ತರುತ್ತಿದ್ದ anouncement ಪುಸ್ತಕ. ತರಗತಿಯಲ್ಲಿದ್ದ ಉಪಾಧ್ಯಾಯರು ಆ ಪುಸ್ತಕವನ್ನು ತೆಗೆದು ಓದುವ ತನಕ ನಮಗೆ ಕುತೂಹಲ. ಬೇರೆಲ್ಲಕ್ಕಿಂತ .. ಶಾಲೆಗೆ ರಜಾ ಇರುವ ಸುದ್ದಿ ಮಾತ್ರ ತುಂಬಾ ಖುಷಿ ಕೊಡುತ್ತಿದ್ದದ್ದು... ನಾವೆಲ್ಲಾ ಚಪ್ಪಾಳೆಯೊಂದಿಗೆ ಸಂಭ್ರಮಿಸುತ್ತಿದ್ದೆವು.  ಕಡಲೆಕಾಯಿ ಪರಿಷೆ, ಸಜ್ಜನ್ ರಾವ್ ಸರ್ಕಲ್ ಬೆಳ್ಳಿ ರಥ, ಹರೋಹರ, ಪ್ರಮುಖ ವ್ಯಕ್ತಿಗಳ ಸಾವು... ಹೀಗೆ ರಜಕ್ಕೆ ಕಾರಣ ಯಾವುದಾದರೂ ಸರಿ... ಚನ್ನಬಸಪ್ಪ  ಪುಸ್ತಕ ತಂದ ತಕ್ಷಣ ನಮಗೆ ಖುಷಿ.  ನಾ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಚನ್ನಬಸಪ್ಪ ಒಬ್ಬರು.    

ಅವರಿಗೊಂದು ನನ್ನ ಭಾವನಾತ್ಮಕ ನಮನ.


Postman ಇಸ್ಮಾಯಿಲ್

ಶಹಾಬಾದ್ ನಲ್ಲಿ ಇದ್ದ ಸಮಯ. ಮನೆಯವರೊಂದಿಗೆ ಸಂವಹನಕ್ಕೆ ಇದ್ದದ್ದು ಒಂದೇ ಮಾರ್ಗ. ಅದು ಅಂಚೆ. ಮನೆಗೆ ಹಣ ಕಳುಹಿಸಲೂ ಮನಿ ಆರ್ಡರ್ ಸುಲಭದ ಮಾರ್ಗ. ಇನ್ನೂ ಬ್ಯಾಂಕ್ ನಲ್ಲಿ ಖಾತೆ ತೆರೆಯದ ಸಮಯ. ಅಲ್ಲಿನ ಆಫೀಸಿನಲ್ಲಿ ವಿಶೇಷ ಎಂದರೆ ಅಂಚೆ ಕಛೇರಿಗೆ ಸಂಬಂಧ ಪಟ್ಟ ಕೆಲಸಗಳು, ನಮ್ಮ ಮೇಜಿನ ಬಳಿಯೇ ನಡೆಯುತ್ತಿದ್ದದ್ದು. ಅದು ಅಂಚೆ ಇಲಾಖೆ ಕೊಟ್ಟ ಸೌಲಭ್ಯ ಅಲ್ಲ. ಬದಲಿಗೆ ಅಲ್ಲಿನ ಪೋಸ್ಟ್ ಮ್ಯಾನ್ ನಮಗಾಗಿ ಕೊಡುತ್ತಿದ್ದ ವಿಶೇಷ ಸವಲತ್ತು. ಅವರೇ ಇಸ್ಮಾಯಿಲ್. ಸಣ್ಣ ಮೈಕಟ್ಟು, ನೀಳ ಗಡ್ಡ, ಖಾಕಿ ಬಟ್ಟೆ, ಹೆಗಲಲ್ಲಿ  ಒಂದು ಚೀಲ, ಸೈಕಲ್ ತುಳಿದು ಬಂದು... ನಮ್ಮ ಆಫೀಸಿನ ಒಳಗೆ ಬಂದರೆ...ಎಲ್ಲರ ಹೆಸರೂ ಗೊತ್ತು. ನಾ ಕೆಲಸಕ್ಕೆ  ಸೇರಿದ ದಿನವೇ ಇಸ್ಮಾಯಿಲ್.. ನನ್ನ ಹತ್ರ  "ಹೊಸ ಸಾಹೇಬ್ರು ಬಂದಾರ" ಅಂತ ಹೇಳಿಕೊಂಡು ಬಂದು..ನಗುತ್ತಾ ನನ್ನ ಹೆಸರು ಕೇಳಿ...ರಂಗನಾಥ್ ಸಾಬ್ ಅಂತ ಒಮ್ಮೆ ಹೇಳಿಕೊಂಡು ಹೋಗಿದ್ದು. 8/ 10 ದಿನದ ನಂತರ...ರಂಗನಾಥ ಸಾಬ್ರಿಗೆ ಪತ್ರ ಬಂದಿದೆ... ತೊಗೋಳಿ ಅಂತ ನನ್ನ ಕೈಗಿಟ್ಟು ಸಂತೋಷ ಕೊಟ್ಟ ಪುಣ್ಯಾತ್ಮ. 

ಜೇಬುಗಳಲ್ಲಿ ಪೋಸ್ಟ್ ಕಾರ್ಡ್, ಇನ್ಲ್ಯಾಂಡ್ ಲೆಟರ್, ಕವರ್, ಸ್ಟ್ಯಾಂಪ್ ಹೀಗೆ ಎಲ್ಲವನ್ನು ಹೊತ್ತು ತಂದು ಬೇಕಾದವರಿಗೆ ಅವರವರ ಸ್ಥಳದಲ್ಲೇ ಕೊಟ್ಟು ಹೋಗುತ್ತಿದ್ದ ಇಸ್ಮಾಯಿಲ್. ಮನಿ ಆರ್ಡರ್ ಮಾಡಬೇಕಾದರೆ ಸ್ಥಳದಲ್ಲೇ ಫಾರಂ ಕೊಟ್ಟು ತುಂಬಿಸಿಕೊಂಡು ಹಣ ತೆಗೆದುಕೊಂಡು... ಮಾರನೆಯ ದಿನ ರಸೀದಿ ತಂದುಕೊಡುತ್ತಿದ್ದ ನಂಬಿಕೆಯ ಮನುಷ್ಯ. ವರ್ಷಕ್ಕೊಂದು ಬಾರಿ ದೀಪಾವಳಿಗೆ.... ಭಕ್ಷೀಸು ಕೊಡುವ ಒಂದು ಸಂಪ್ರದಾಯವೇ ಇತ್ತು... ನಾನು ಅದರಲ್ಲಿ ಭಾಗಿಯಾಗಿದ್ದೆ. ಅದು ಬಿಟ್ಟು ಬೇರೇನೂ ಬಯಸದ ಸ್ನೇಹಜೀವಿ.

ನಾನು ಬೇರೆ ಕಡೆ ಕೆಲಸಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾಗ.... ಅಲ್ಲಿಂದ ಬಂದ ಕಾಗದಗಳು.. ಕೊನೆಗೆ ಅಪಾಯಿಂಟ್ಮೆಂಟ್ ಆರ್ಡರ್ ಸಹ ಗುಟ್ಟಾಗಿ ತಂದು ಕೊಟ್ಟ ಇಸ್ಮಾಯಿಲ್... ಈ ವಿಚಾರವನ್ನು ಹೊರಗೆ ಹಾಕಲು ನನಗೇ ಬಿಟ್ಟಿದ್ದು ತುಂಬಾ ಗೌರವಪೂರ್ವಕವಾದ ನಡೆಯೆಂದು ನನ್ನ ಭಾವನೆ. 

ಇನ್ನೊಂದು ತಮಾಷೆ ಪ್ರಸಂಗ ನಿಮಗೆ ಹೇಳಬೇಕೆಂದು ನನ್ನೊಳಗೆ ತುಡಿತ ...  ನನ್ನ ಗೆಳೆಯ ಎವಿ ಶ್ರೀನಿವಾಸನಿಗೆ ಮದುವೆ ನಿಶ್ಚಯವಾಗಿತ್ತು... ಅವನ ಮತ್ತು ಪ್ರಿಯತಮೆಯ ನಡುವಿನ ಪತ್ರ ವ್ಯವಹಾರ ಜೋರಿತ್ತು.. ವಾರಕ್ಕೆ ಮೂರಾದರೂ ಪತ್ರ ಬರುತ್ತಿತ್ತು. ಕನ್ನಡ ಬರದ ಜೀವನ್ ಜೋಶಿ ಎವಿ ಸೀನನನ್ನು ಸತಾಯಿಸಲು ನನ್ನ ಜೊತೆಗಾರ.  ಶ್ರೀನಿವಾಸ ಪತ್ರವನ್ನು ಓದುತ್ತಿದ್ದಾಗ ಜೋಶಿ ಹಿಂದೆ ಹೋಗಿ ನಿಲ್ಲುವುದು ಸಾಮಾನ್ಯವಾಗಿತ್ತು. ಎವಿ ಸೀನನಿಗೊಂದು ನಂಬಿಕೆ.. ಜೋಶಿಗೆ ಕನ್ನಡ ಬರುವುದಿಲ್ಲ ಎಂದು... ಜೋಶಿ ನನ್ನ ಸಲಹೆಯಂತೆ ಹಿಂದೆ ನಿಂತು ಪತ್ರದಲ್ಲಿ ಬರೆದಿರುವುದನ್ನೇ ಕಾಪಿ ಮಾಡಿ ತರುವಂತೆ ಹೇಳಿದೆ.. ದುರದೃಷ್ಟವಶಾತ್...” ಪ್ರೀತಿಯ ನ“ ಎಂಬಷ್ಟು ಬರೆಯುವುದರಲ್ಲಿ ಸೀನನಿಗೆ ತಿಳಿದು..ಜೋಶಿ ಓಡಿ ಬಂದು ನನ್ನ ಕೈಗೆ ಬರೆದುದನ್ನು ಕೊಟ್ಟ.. ನಾನು ಜೋರಾಗಿ “ಪ್ರೀತಿಯ ನನ್ನ ಮನದನ್ನಾ... ಎಂದು ಓದಿದೆ... ಈ ಸಮಯಕ್ಕೆ ಬಂದ ಇಸ್ಮಾಯಿಲ್ ವಿಷಯ ತಿಳಿದು... ಮುಂದಿನ ಬಾರಿ.. ಲಕ್ಷ್ಮಿ ಬರೆದ ಪತ್ರವನ್ನು ನನ್ನ ಕೈಗೆ ಕೊಟ್ಟು... ಎವಿ  ಸೀನನಿಗೆ ಹೇಳಿ ನಕ್ಕು ಹೊರಟುಹೋದದ್ದು.... ಮುಂದಿನದು ತಮಾಷೆಯಾದ ಕಥೆ.... 

ಇಲ್ಲಿ ನಾನು ಕಂಡದ್ದು ಇಸ್ಮಾಯಿಲ್ ನ ಸರಸ ಸ್ವಭಾವ ಹಾಗೂ ಸಮಯ ಸ್ಪೂರ್ತಿ.

ಇಸ್ಮಾಯಿಲ್ ನಿನಗೊಂದು ಸಲಾಂ.

ದತ್ತಾತ್ರೇಯ ವಿನಾಯಕ್ ಲೇಲೆ.

ಮತ್ತದೇ ಶಹಾಬಾದ್... ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದವರು DV ಲೇಲೆ. ಐವತ್ತು ವರ್ಷ ಸುಮಾರಿನ ಹಿರಿಯ. ಮರಾಠಿ ಮಾತೃಭಾಷೆ... ಕನ್ನಡ ತಿಳಿಯಲೊಲ್ಲದು... ಕಲಿಯುವ ಮನಸ್ಸು ಕಾಣೆ. ಮಿತ ಭಾಷಿ... ಸ್ನೇಹಜೀವಿ. ಅವರು ಪಟ ಪಟ ಮಾತನಾಡುವ ಹಿಂದಿ ನನಗೆ ಅರ್ಥವೇ ಆಗುತ್ತಿರಲಿಲ್ಲ. ಇಂಗ್ಲೀಷಿನಲ್ಲಿ ಮಾತನಾಡಲು ಶುರು ಮಾಡಿದಾಗ ಸ್ವಲ್ಪ ಅನುಕೂಲವಾಯಿತು. ಲೇಲಿಯವರ ಬಹಳ ಸಲದ ಮಾತು... ಅವರು ಪ್ರತಿಪಾದಿಸುತ್ತಿದ್ದ ಬೆಂಗಳೂರು ಮತ್ತು ನವದೆಹಲಿಯ ಮಧ್ಯೆ ನೇರ ರೈಲು ಸಂಪರ್ಕದ ಬಗ್ಗೆ. ಆಗಿನ ಕಾಲಕ್ಕೆ ಬೆಂಗಳೂರಿನಿಂದ ದೆಹಲಿಗೆ ಹೋಗಬೇಕಾದರೆ... ಮದ್ರಾಸ್ ಮೂಲಕ ಹೋಗಬೇಕಿತ್ತು. ಲೇಲೆಯವರು ರೈಲು ಮಾರ್ಗವನ್ನು ಮ್ಯಾಪ್ ನಲ್ಲಿ ಅಳವಡಿಸಿ... ಎಲ್ಲಾ ದಿನಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಅದನ್ನು ನನಗೆ ಹೆಮ್ಮೆಯಿಂದ ತೋರಿಸಿದ್ದರು. ಜೊತೆಗೆ ಅವರು ರೈಲ್ವೆ ಮಂತ್ರಿ, ಕರ್ನಾಟಕ ಮುಖ್ಯಮಂತ್ರಿ ಹಾಗೂ ಇನ್ನಿತರ ರಾಜಕಾರಣಿಗಳಿಗೆ ತಮ್ಮ ಅಹವಾಲನ್ನು  ಕೊಟ್ಟು ತಮ್ಮ ಪ್ರಯತ್ನ ಮುಂದುವರಿಸಿದ್ದರು. ಅವರ ಈ ಪ್ರಯತ್ನಕ್ಕೆ 1976 ರಲ್ಲಿ ಪ್ರತಿಫಲ ಸಿಕ್ಕಿ ಬೆಂಗಳೂರಿನಿಂದ ನವದೆಹಲಿಗೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಸಂಚಾರ ಮೊದಲಾಯಿತು. 

ಲೇಲೆಯವರು ಶಿಸ್ತುಬದ್ಧವಾಗಿ ದಿನಕ್ಕೆ ಎರಡು ಸಿಗರೇಟ್ ಸೇದುತ್ತಿದ್ದದ್ದನ್ನು ನಾನು ಗಮನಿಸಿದ್ದೆ. ಅವರ ಸಿಗರೇಟ್ ಸೇದುವ ಹವ್ಯಾಸ ಮತ್ತು ಶೈಲಿ ನನಗೆ ಇಷ್ಟವಾಯಿತು. ಪ್ರತಿದಿನದ ಮೊದಲರ್ಧದ ಭಾಗದಲ್ಲಿ 10.30 ರ ಸುಮಾರಿಗೆ ಒಂದು, ಮಧ್ಯಾಹ್ನ 3.30 ರ ಸುಮಾರಿಗೆ ಮತ್ತೊಂದು ಸಿಗರೇಟ್ ಸೇದುತ್ತಿದ್ದರು. ಅವರು ಘಾಡವಾಗಿ ಮತ್ತು ನಿಧಾನವಾಗಿ ಸಿಗರೇಟಿನ ಹೊಗೆಯನ್ನು ಎಳೆದು... ನಂತರ ಎರಡು ಚಿಟಿಕೆ ಹೊಡೆದು... ನಿಧಾನವಾಗಿ ಹೊಗೆಯನ್ನು ಹೊರಕ್ಕೆ ಬಿಡುವುದು ಅವರ ಅಭ್ಯಾಸ... 



ಕೆಲವು ಸಲ ಹೊಗೆಯ ಉಂಗುರಗಳನ್ನು ಬಿಡುತ್ತಿದ್ದದ್ದೂ ಉಂಟು. ಅವರು ಸಿಗರೇಟ್ ಹಿಡಿಯುತ್ತಿದ್ದ ಶೈಲಿಯೂ ವಿಶೇಷ. 

ಸಿಗರೇಟ್ ಅನ್ನು ಮಧ್ಯ ಮತ್ತು ಉಂಗುರದ ಬೆರಳುಗಳ ನಡುವೆ ಸಿಕ್ಕಿಸಿ... ಮುಷ್ಟಿಯನ್ನು ಹಿಡಿದು ಹೆಬ್ಬೆರಳಿನ ಸಂಧಿಯಿಂದ ಹೊಗೆಯನ್ನು ಎಳೆಯುತ್ತಿದ್ದ   ಮಹಾಶಯ. ಆ ಕೆಲವೊಂದು ನಿಮಿಷಗಳನ್ನು ಅವರು ಸಂಭ್ರಮಿಸುತ್ತಿದ್ದ ಹಾಗೂ ಸಂತೋಷಪಡುತ್ತಿದ್ದ ರೀತಿ ನನಗಿಷ್ಟ. 

ಶಹಾಬಾದ್ ಬಿಟ್ಟ ಎಷ್ಟೋ  ದಿನಗಳ ನಂತರ ಅವರ ವಿಳಾಸ ಸಿಕ್ಕಿ ಕಾಗದ ಬರೆದೆ... ಆದರೆ ನನ್ನ ಗುರುತು ಅವರಿಗೆ ಸಿಗಲಿಲ್ಲ ಎಂಬುದೇ ವಿಷಾದ.      ಲೇಲೆಯವರ ನೆನಪು ಆಗಾಗ ಬರುತ್ತದೆ.

ರಾಮಕೃಷ್ಣ ಬೆಹಾನಿ ದಂಪತಿ

ಕೆಲಸದ ಮೇಲೆ ಒರಿಸ್ಸಾದ ಕಟಕ್ ಗೆ  ಹೋಗಬೇಕಾಗಿತ್ತು. ಆಗಿನ Madras central station ಇಂದ ಕಲ್ಕತ್ತಾ ಗೆ ಹೋಗುವ ಕೋರಮಂಡಲ್ ಎಕ್ಸ್ಪ್ರೆಸ್ ಹತ್ತಿದೆ. ಆಗ ಬೆಳಿಗ್ಗೆ ಸುಮಾರು 6 ಘಂಟೆ ಇರಬಹುದು. ಆಗಲೇ ಅಲ್ಲಿ ಇಬ್ಬರು ಪ್ರಯಾಣಿಕರು ಎದುರು ಬದುರು ಸೀಟಿನಲ್ಲಿ ಕುಳಿತಿದ್ದರು. ನಾನು ಕೂತು ನನ್ನ ಬ್ಯಾಗನ್ನು ಸೀಟಿನ ಕೆಳಗಿರಿಸಿ... ಗಮನಿಸಿದಾಗ.. ಅಲ್ಲಿ ಕೂತವರು ಗಂಡ ಹೆಂಡತಿ ಎಂದು ತಿಳಿಯಿತು( ಅವರ ಮಾತುಗಳ/ ಹಾವಭಾವಗಳ ಮೂಲಕ. ಅವರು ಮಾತಾಡುತ್ತಿದ್ದದ್ದು ಅಸ್ಸಾಮಿ ಭಾಷೆ ಎಂದು ನಂತರ ತಿಳಿಯಿತು). ಗಂಡಸು ಬ್ಯಾಗಿನಿಂದ ಒಂದು ಫೋಟೋ ತೆಗೆದು ಅದಕ್ಕೆ ಭಕ್ತಿಯಿಂದ ನಮಿಸಿ, ಕೆಲ ನಿಮಿಷ ಕಣ್ಣು ಮುಚ್ಚಿ ಧ್ಯಾನವನ್ನು ಮಾಡಿ.... ಆ ಫೋಟೋವನ್ನು ತನ್ನ ಮಡದಿಗೆ ತೋರಿಸಿದರು.. ಆಕೆ ಯಾಂತ್ರಿಕವಾಗಿ ಎರಡು ಕೈಜೋಡಿಸಿ ನಮಸ್ಕರಿಸಿದರು.... ಫೋಟೋ ಬ್ಯಾಗಿನೊಳಗೆ ಹೋಯಿತು... ಒಂದಷ್ಟು ಡಬ್ಬಿಗಳು ಹೊರಗೆ ಬಂದವು.... ಮುಖವನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ, ಹಣೆಗೆ ಚಂದನವನ್ನು ಇಟ್ಟುಕೊಂಡು, ಕಣ್ಣಿಗೆ ಒಂದು ಅಂಜನವನ್ನು ಸಣ್ಣ ಕಡ್ಡಿಯ ಮೂಲಕ ಹಚ್ಚಿಕೊಂಡು ಕಣ್ಣನ್ನು ನಾಲ್ಕಾರು ಸಲ ಮುಚ್ಚಿ ತೆಗೆದು ಮಾಡಿದ್ದನ್ನು ನಾನು ಗಮನಿಸುತ್ತಿದ್ದೆ.... ಆತ ಒಂದು ನಗೆ ಬೀರಿದರು... ನನಗೆ ಮಾತಾಡಲು ರಹದಾರಿ ಸಿಕ್ಕಿತು. ಹರುಕು ಮುರುಕು ಇಂಗ್ಲೀಷ್ ಭಾಷೆಯಲ್ಲಿ ನಮ್ಮ ಮಾತು ಮುಂದುವರೆಯಿತು...   ಸುಮಾರು 30 ಗಂಟೆಯ ಪಯಣ... ಸಮಯ ಕಳೆಯಲು ನನಗೂ ಜೊತೆ ಆಯಿತು ಎಂಬ ಸಮಾಧಾನವೂ ಸಹ. ಮುಂದುವರಿದ ಮಾತಿನಿಂದ ತಿಳಿದದ್ದು ಆತನ ಹೆಸರು ರಾಮಕೃಷ್ಣ ಬೆಹಾನಿ ಎಂದು.. ಅಸ್ಸಾಂನ ದಿಬ್ರುಗಡದವರು, ಚಹಾ ವ್ಯಾಪಾರದ ಮನೆತನದವರು, ಮೂರು ಗಂಡು ಮಕ್ಕಳು... ಎಲ್ಲರೂ ವ್ಯಾಪಾರದಲ್ಲಿ ತೊಡಗಿದ್ದಾರೆ. ಮದರಾಸಿನಲ್ಲಿ ನೆಂಟರ ಮನೆಗೆ ಬಂದು ಒಂದು ವಾರವಿದ್ದು... ವ್ಯಾಪಾರ ವಹಿವಾಟನ್ನು ಮುಗಿಸಿ ತಮ್ಮೂರಿಗೆ ಹಿಂತಿರುಗುತ್ತಿದ್ದರು...

ಸುಮಾರು 9:00 ಸಮಯ... ಸೀಟಿನಡಿಯಿಂದ ಒಂದು ಡಬ್ಬಿಯನ್ನು ತೆಗೆದು ಅದರಿಂದ  ಸಣ್ಣ ಸಣ್ಣ ಪೂರಿ ಅಂತಹ ತಿನಿಸು, ಜೊತೆಗೆ ನಂಚಿಕೊಳ್ಳಲು ಒಂದು ಪುಡಿಯನ್ನು ಡಬ್ಬಿಯ ಭಾಗದಂತಿದ್ದ ಎರಡು ತಟ್ಟೆಗಳಲ್ಲಿ ಹಾಕಿ... ಒಂದನ್ನು ಹೆಂಡತಿಗೆ ಬಲವಂತ ಮಾಡಿ ಕೊಟ್ಟು... ತನ್ನ ತಟ್ಟೆಯಿಂದ ತೆಗೆದ ಒಂದು ಪೂರಿಯ ಮೇಲೆ ಪುಡಿಯನ್ನು ಹಾಕಿ ನನ್ನ ಕಡೆಗೆ ಕೈ ತೋರಿದರು... ಸಂಕೋಚದಿಂದ ನಾನು ಬೇಡವೆಂದಾಗ, ಬಲವಂತ ಮಾಡಿ ತಿನ್ನಲು ಕೊಟ್ಟು.... "ಕೊಟ್ಟು ತಿನ್ನಬೇಕು" ಎನ್ನುವ ತತ್ವದ ಬಗ್ಗೆ  ಹೇಳಿದರು. ಭಾಷೆಯ ತೊಡರಿದ್ದರೂ ಭಾವ ಮಾತ್ರ ಸ್ಪಷ್ಟವಾಗಿತ್ತು. 

ಮಧ್ಯ ದಾರಿಯಲ್ಲಿ ಕಂಡ ಗುಡಿ ಗೋಪುರಗಳಿಗೆ ಭಕ್ತಿಯಿಂದ ನಮಸ್ಕರಿಸುವುದು, ರಾಮಕೃಷ್ಣ ಬೆಹಾನಿಯವರಿಗೆ ಇಷ್ಟದ ಕೆಲಸ ಅನಿಸಿತು. ಹೆಂಡತಿಗೆ ಅದರ ಕಡೆ ಕೈ ತೋರಿಸುವುದು...ಆಕೆ ಯಾಂತ್ರಿಕವಾಗಿ ಕೈಯ್ಯೆತ್ತಿ ಮುಗಿದಂತೆ ಮಾಡುವುದು.. ನಡೆದೇ ಇತ್ತು.

ಮಾತಿನ ಮಧ್ಯೆ ಅವರು ಪುರಿಯಲ್ಲಿ ಇಳಿದು ಸಮುದ್ರ ಸ್ನಾನ ಮಾಡಿ, ಜಗನ್ನಾಥನ ದರ್ಶನ ಮಾಡುವ ವಿಷಯ ತಿಳಿಸಿದರು. ಅದೊಂದು ವಿಶೇಷ ದಿನವೆಂದೂ... ಪುಣ್ಯಕ್ಷೇತ್ರದಲ್ಲಿ ಸಮುದ್ರ ಸ್ನಾನ ಮಾಡಿದರೆ ಒಳ್ಳೆಯದಾಗುವುದೆಂದೂ... ಹಾಗಾಗಿ ನನಗೂ ಬರಲು ಆಹ್ವಾನ ನೀಡಿದರು... ಕೆಲಸ ಇದೆ ಆಗುವುದಿಲ್ಲ ಎಂದಾಗ... ದಿನದ ಮಹತ್ವವನ್ನು( ಯಾವ ದಿನ ಎಂದು ನೆನಪಿಗೆ ಬರುತ್ತಿಲ್ಲ) ಒತ್ತಿ ಹೇಳಿ, ಇಂತಹ ಅವಕಾಶಗಳು ಸುಲಭವಾಗಿ ಸಿಗುವುದಿಲ್ಲ... ನಿಮಗೆ ಅನಾಯಾಸವಾಗಿ ಸಿಕ್ಕಿದೆ ..ಬನ್ನಿ ನಮ್ಮ ಜೊತೆ ಎಂದು ಪ್ರೀತಿಪೂರ್ವಕ ಒತ್ತಾಯ ಮಾಡಿದರು. ಟಿಕೆಟ್ ಕಟಕ್ ವರೆಗೆ ಆಗಿದೆ ಅಂದಾಗ...200 ಕಿಲೋ ಮೀಟರ್ ದಾಟಿ ಬಂದಿರುವುದರಿಂದ ಬ್ರೇಕ್ ಜರ್ನಿ ತೆಗೆದುಕೊಳ್ಳಬಹುದೆಂದೂ.... ಅದೇ ಟಿಕೆಟ್ ನಲ್ಲೇ ಮುಂದುವರಿಯ ಬಹುದೆಂದೂ, ಅವರೂ ಅದನ್ನೇ ಮಾಡುತ್ತಿದ್ದಾರೆಂದು ಹೇಳಿ ನನಗೆ ಒಪ್ಪಿಸಿ... ಬೆಳಗಿನ ಜಾವ ಬಂದ ಪುರಿಗೆ ಹತ್ತಿರವಾದ ಸ್ಟೇಷನ್ನಲ್ಲಿ ಇಳಿದು T T ಯ ಹತ್ತಿರ ಮಾತನಾಡಿ... ಸ್ಟೇಷನ್ ಮಾಸ್ಟರ್ ಕಡೆಯಿಂದ,  ಬ್ರೇಕ್ ಜರ್ನಿಯ ಬಗ್ಗೆ ಬರೆಸಿಕೊಂಡು   ಪುರಿಯ ಕಡೆಗೆ ಒಂದು ವಾಹನ ಮಾಡಿಕೊಂಡು ಹೊರಟೆವು. ಅವರಿಗೆ ಪರಿಚಿತವಾದ ಒಂದು ಛತ್ರದಲ್ಲಿ ಇಳಿದುಕೊಳ್ಳಲು ಜಾಗ ಮಾಡಿದರು... ಕೆಲ ಕಾಲ ನಿದ್ದೆ ಮಾಡಿ.... 



ಅವರ ಮಾರ್ಗದರ್ಶನದಂತೆ ಪೂರ್ವ ದಿಕ್ಕಿಗೆ ಮುಖ ಮಾಡಿ, ಮುಳುಗು ಹಾಕಿ, 3 ಬಾರಿ ಅರ್ಘ್ಯ ಕೊಟ್ಟು   ಸಮುದ್ರ ಸ್ನಾನ ಮುಗಿಸಿ ಬಂದು, ದೇವರ ದರ್ಶನ ಮಾಡಿ... ಮಧ್ಯಾಹ್ನದ ಊಟವನ್ನು... ಪ್ರಸಾದದಂತೆ ಉಂಡು.... ಛತ್ರಕ್ಕೆ ವಾಪಸು ಬಂದಾಯ್ತು. 

ಒಂದು ಹಗಲಿನ ಪರಿಚಯ ಆದರೂ ಸಹ ಅವರ ಆತ್ಮೀಯತೆ, ವಿಶ್ವಾಸ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಅವರ ವಿಶ್ವಾಸದ ಋಣ ತೀರಿಸಲಾಗದ್ದು. ಹೊರಡುವ ಮುನ್ನ ಆಕೆಗೆ ಕೈಮುಗಿದು... ಬರುತ್ತೇನೆ ಎಂದು ಹೇಳಿದಾಗ ಆಕೆ ತನ್ನ ಚೀಲದಿಂದ ಒಂದಿಷ್ಟು ಅಡಿಕೆ ಪುಡಿಯನ್ನು ನನ್ನ ಕೈಗೆ ಹಾಕಿ ಒಳ್ಳೆಯದಾಗಲಿ ಎಂದು ಅವರದೇ ಭಾಷೆಯಲ್ಲಿ ಹಾರೈಸಿ ಕಳಿಸಿದ ಆ ಕ್ಷಣ.... ನಾನೆಂಥ ಧನ್ಯ. 

ನಂತರ ರಾಮಕೃಷ್ಣ ಬೆಹಾನಿಯವರು ಸ್ಟೇಷನ್ ಗೆ ಬಂದು ನನ್ನನ್ನು ಒಂದು ರೈಲಿಗೆ ಹತ್ತಿಸಿ... ಅವರು ವಾಪಸ್ ಹೋದರು. ಇನ್ನೂ ಒಂದು ದಿವಸ ಇದ್ದು, ಪ್ರಯಾಣ ಮುಂದುವರಿಸುವ ಯೋಜನೆ ಅವರದು. ನಮ್ಮಿಬ್ಬರ ಮಧ್ಯೆ ಅಂಚೆಯ ವಿನಿಮಯ ಸುಮಾರು ಎರಡು ವರ್ಷಗಳವರೆಗೂ ನಡೆದಿತ್ತು.... ವಿನಾಕಾರಣ ನಿಂತೇ ಹೋಯಿತು. 

ಎಂಥಾ ಸಹೃದಯ ತುಂಬಿದ ವ್ಯಕ್ತಿತ್ವ ರಾಮಕೃಷ್ಣ ಬೆಹಾನಿಯವರದು... ನನ್ನನ್ನು ಮಗನಂತೆಯೋ ತಮ್ಮನಂತೆಯೋ  ಪ್ರೀತಿಯಿಂದ ಕಂಡು... ಒಂದಷ್ಟು ಆಗ್ರಹದಿಂದ ನನಗಾಗಿ ಪುಣ್ಯಗಳಿಸಿಕೊಟ್ಟ ಅವರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು.

ಜೀವನ ಎನ್ನುವುದು ರೈಲಿನ ಪ್ರಯಾಣದಂತೆ ಎಂದು ಹೇಳಿದ್ದನ್ನು ಕೇಳಿದ್ದೇನೆ.. ಈ ಪ್ರಯಾಣದಲ್ಲಿ ಹತ್ತುವವರು ಎಷ್ಟೋ ಮಂದಿ ಇಳಿಯುವವರು ಎಷ್ಟೋ ಮಂದಿ... ಮಧ್ಯೆ ಜೊತೆಯಲ್ಲಿದ್ದು ಸ್ಪಂದಿಸುವವರು ಕೆಲವೇ ಮಂದಿ.... ಹಿತವನ್ನು ಬಯಸುವಂಥ ಜನರಂತೆಯೇ... ಅಹಿತವನ್ನು ಕೊಡುವವರೂ ಬರಬಹುದು... ಅದು ನಮ್ಮ ಭಾಗ್ಯದಲ್ಲಿದ್ದಂತೆ... ವಿಧಿ ನಿಯಮ ಸಹ..

ಬಾಳ ಪಯಣ ಮುಂದುವರಿಯುತ್ತಲೇ ಇರುತ್ತದೆ.... ಬಂದದ್ದನ್ನು ಬಂದಂತೆ ಸ್ವೀಕರಿಸಿ... ಇದ್ದುದರಲ್ಲೇ ಆನಂದ ಪಡುವ ಮನೋಭಾವವನ್ನು ರೂಡಿಸಿಕೊಳ್ಳೋಣ...

ನಮಸ್ಕಾರ. ..


D C Ranganatha Rao

9741128413

    

Comments

  1. ನಾಗೇಂದ್ರ ಬಾಬು22 January 2025 at 11:42

    ಹೌದು ಹಿಂದಿನ ಘಟನೆಗಳನ್ನು, ವ್ಯಕ್ತಿಗಳನ್ನು
    ನೆನಪಿಸಿ ಕೊಂಡಗಾ ಅದು ಸಿಹಿ ಇರಲಿ ಕಹಿ ಇರಲಿ, ಮನಸ್ಸಿಗೆ ಒಂದು ಅಹ್ಲದಕರ ಅನುಭವ ಆಗುತ್ತದೆ....ನಿಮ್ಮ ಈ ಲೇಖನ ನನ್ನನ್ನು ಶಾಲೆ ಇಂದ ನಿವೃತ್ತಿ ತನಕ ಒಂದು
    ಫ್ಲಾಷ್ ಬ್ಯಾಕ್ ಗೆ ಕೊಂಡೊಯ್ದು ಅನೇಕ ಸಹ ಪ್ರಯಾಣಿಕರು ಕಣ್ಣ ಮುಂದೆ ಬಂದ ಹಾಗೆ ಆಯಿತು...ವಾಸ್ತವಕ್ಕಿಂತ ಹಲವಾರು ವರ್ಷಗಳ ನಂತರ ಘಟನೆ ಅಥವ ವ್ಯಕ್ತಿಗಳ
    ನೆನಪು ಬಹುತೇಕ ಖುಷಿ ತರುವಂತೆ ಇರುತ್ತದೆ
    ಧನ್ಯವಾದಗಳು
    ಬಾಬು

    ReplyDelete
  2. ಮಾನ್ಯರೇ

    ನಮ್ಮ ಮನಸ್ಸಿಗೆ ಇಷ್ಟವಾಗುವವರು ದೊಡ್ಡ ದೊಡ್ಡ ವ್ಯಕ್ತಿಗಳೇ ಆಗಬೇಕೆಂದೇನಿಲ್ಲ.
    ನಮ್ಮ ಅಜ್ಜಿಯ ಮನೆಯ ಬಳಿ ಚಾಕಲೇಟ್, ಹಾಲುಕೋವ, ಪೆಪ್ಪರ್ಮೆಂಟ್ ಅಂಗಡಿ ಇಟ್ಟುಕೊಂಡಿದ್ದ ರುದ್ರಮ್ಮ, ಈಗಲೂ ನನಗೆ ಕಣ್ಣ ಮುಂದೆ ಇದ್ದಂತಿದೆ.. ನಾನು ಓದಿದ ಬೆಂಗಳೂರ್ ಹೈಸ್ಕೂಲಿನ ಪ್ಯೂನ್ ಚೆಲುವಯ್ಯ, ತುಮಕೂರಿನಲ್ಲಿ ನಾವು ದಿನಸಿ ಪದಾರ್ಥ ತರುತ್ತಿದ್ದ ಅಂಗಡಿಯ ಮಾಲೀಕ ವಿಜಯ್ ಕುಮಾರ್, ಹೊಸಕೋಟೆಯಲ್ಲಿ ತರಕಾರಿ ಅಂಗಡಿ ಮಾಲೀಕನಾದ ಮುಸಲ್ಮಾನ ಹುಡುಗ (ಹೆಸರು ಗೊತ್ತಿಲ್ಲ ), ತುಮಕೂರಿನಲ್ಲಿ 13 ವರ್ಷ ನನ್ನ ಸಹೋದ್ಯೋಗಿಯಾಗಿದ್ದ ಶಂಕರಪ್ಪ ಹೀಗೆ ಪಟ್ಟಿ ಬೆಳೆಯುತ್ತದೆ.

    ಇವರೆಲ್ಲ ಸಾಮಾನ್ಯರು ಅಷ್ಟೇ. ಆದರೆ ನನಗೆ ಏಕೋ, ಅಪ್ಯಾಯಮಾನವಾಗುತ್ತಾರೆ. ಕಾರಣ ಗೊತ್ತಿಲ್ಲ. ಜೀವನವೇ ಹೀಗೆಯೋ ಏನೋ ಒಂದು ರೀತಿಯ ವಿಸ್ಮಯ.

    ಬಹುಶಃ ಎಲ್ಲರ ಜೀವದಲ್ಲೂ ಇಂತಹ ವ್ಯಕ್ತಿಗಳು ಇದ್ದೇ ಇರುತ್ತಾರೆಂದು ನನ್ನ ಅನಿಸಿಕೆ. ಲೇಖಕರು ಇದನ್ನು ಸೊಗಸಾಗಿ, ಅವರು ಹೇಳುವ ವ್ಯಕ್ತಿಗಳು ಕಣ್ಣ ಮುಂದೆ ಬಂದು ನಿಲ್ಲುವಂತೆ ಚಿತ್ರಿಸುವ ಶೈಲಿಯೇ ಸೊಗಸು.

    ವಂದನೆಗಳೊಂದಿಗೆ

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  3. Nenapugalu chennagi mudi baruttide nimma barahadalli good.

    ReplyDelete
  4. ಜೀವನ ಪ್ರಯಾಣದಲ್ಲಿ ಬಂದು ಹೋದ ವ್ಯಕ್ತಿಗಳನ್ನ ತಮ್ಮದೇ ಶೈಲಿಯಲ್ಲಿ ತುಂಬ ಸೊಗಸಾಗಿ ತಮ್ಮ ಬರಹದ ಮೂಲಕ ಚಿತ್ರಿಸಿದ್ದೀರಿ ತಮ್ಮ ಬರಹದ ಮೂಲಕ ಚಿಕ್ವಿಸಿದ್ದೀರಿ ಸೊಗಸಾದ ಬರಹ ನಿಮ್ಮದು

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ